samachara
www.samachara.com
‘ದೊಡ್ಡಗೌಡರ ಆಶೀರ್ವಾದ’: ಮೊನ್ನೆ ಸೀಟು ಹಂಚಿ ಇಂದು ಬಿಎಸ್‌ಪಿಗೆ ಜಿಗಿದ ಡ್ಯಾನಿಷ್ ಅಲಿ
ದೇಶ

‘ದೊಡ್ಡಗೌಡರ ಆಶೀರ್ವಾದ’: ಮೊನ್ನೆ ಸೀಟು ಹಂಚಿ ಇಂದು ಬಿಎಸ್‌ಪಿಗೆ ಜಿಗಿದ ಡ್ಯಾನಿಷ್ ಅಲಿ

ಕೇವಲ ಎರಡು ದಿನಗಳ ಹಿಂದೆ ಡ್ಯಾನಿಷ್ ಅಲಿ ಕೊಚ್ಚಿಗೆ ತೆರಳಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರ ಜತೆ ಮಾತುಕತೆ ನಡೆಸಿ ಜೆಡಿಎಸ್-ಕಾಂಗ್ರೆಸ್‌ ಕ್ಷೇತ್ರ ಹಂಚಿಕೆ ಸೂತ್ರವನ್ನು ಕಂಡುಕೊಂಡಿದ್ದರು.

ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸದಸ್ಯ, ಜೆಡಿಎಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಇಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್‍ಪಿ)ಕ್ಕೆ ಸೇರ್ಪಡೆಯಾಗಿದ್ದಾರೆ.

ಲಕ್ನೋದ ಕಚೇರಿಯಲ್ಲಿ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಸತೀಶ್‌ ಚಂದ್ರ ಮಿಶ್ರಾ ಸಮ್ಮುಖದಲ್ಲಿ ಬಿಎಸ್‌ಪಿಗೆ ಸೇರ್ಪಡೆಯಾಗಿರುವ ಅಲಿ, "ದೇವೇಗೌಡರ ಆಶೀರ್ವಾದ ಮತ್ತು ಅನುಮತಿಯೊಂದಿಗೆ," ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

"ಜೆಡಿಎಸ್ ಉತ್ತರ ಪ್ರದೇಶದಲ್ಲಿ ದೊಡ್ಡಮಟ್ಟದ ಸಂಘಟನೆ ಹೊಂದಿಲ್ಲ. ಹೀಗಾಗಿ ನನ್ನ ಕಠಿಣ ಪರಿಶ್ರಮ ನನ್ನ ಜನ್ಮ ಭೂಮಿಯಲ್ಲಿ ಯಾವುದೇ ಫಲ ನೀಡಲಿಲ್ಲ. ನನ್ನ ಕರ್ಮಭೂಮಿಯಲ್ಲಿ ನಾನು ರಾಜಕೀಯ ನೆಲೆ ಕಂಡುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಲಿದ್ದು, ಅದನ್ನು ಎದುರಿಸಲು ಬಲವಾದ ನಾಯಕತ್ವದ ಅಗತ್ಯವಿದೆ. ನಾವೂ ಕೂಡ ಪ್ರಬಲವಾಗಿ ಬೆಳೆಯಬೇಕಿದೆ. ಹೀಗಾಗಿ ಬಿಎಸ್‍ಪಿ ಸೇರುತ್ತಿರುವುದಾಗಿ," ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಕುನ್ವರ್ ಡ್ಯಾನಿಷ್ ಅಲಿ ಬಿಚ್ಚಿಟ್ಟಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದಾಗ ಸಮನ್ವಯ ಸಮಿತಿಗೆ ಜೆಡಿಎಸ್‍ನಿಂದ ಡ್ಯಾನಿಷ್ ಅಲಿ ಸದಸ್ಯರಾಗಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹೊರತುಪಡಿಸಿ ಜೆಡಿಎಸ್‍ನಿಂದ ಡ್ಯಾನಿಷ್ ಅಲಿ ಸದಸ್ಯರಾಗಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಮಾಪ್ತರಾಗಿದ್ದ ಅಲಿ, ಪಕ್ಷದ ರಾಷ್ಟ್ರ ಮಟ್ಟದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಲೋಕಸಭೆ ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ನಡೆದ ಮಾತುಕತೆಯಲ್ಲಿ ಡ್ಯಾನಿಷ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕೇವಲ ಎರಡು ದಿನಗಳ ಹಿಂದೆ ಕೊಚ್ಚಿಗೆ ತೆರಳಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರ ಜತೆ ಮಾತುಕತೆ ನಡೆಸಿ ಕ್ಷೇತ್ರ ಹಂಚಿಕೆ ಸೂತ್ರವನ್ನು ಕಂಡುಕೊಂಡಿದ್ದರು.

ದೇವೇಗೌಡರ ರಾಜಕೀಯ ಜೀವನದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಡ್ಯಾನಿಷ್‌ ಅಲಿ.
ದೇವೇಗೌಡರ ರಾಜಕೀಯ ಜೀವನದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಡ್ಯಾನಿಷ್‌ ಅಲಿ.
/ದಿ ಹಿಂದೂ

ಇದಾಗಿ ಎರಡೇ ದಿನಕ್ಕೆ ಪರಿಸ್ಥಿತಿ ಬದಲಾಗಿದ್ದು ಅಲಿ ಪಕ್ಷ ತೊರೆದಿದ್ದಾರೆ. ಮೂಲಗಳ ಪ್ರಕಾರ, ಬಿಎಸ್‌ಪಿ ಮತ್ತು ಜೆಡಿಎಸ್‌ ನಡುವೆ ಹೊಂದಾಣಿಕೆ ಚೆನ್ನಾಗಿದ್ದು ಇದು ಕೊಡು ಕೊಳ್ಳುವಿಕೆ ತಂತ್ರ ಎನ್ನಲಾಗುತ್ತಿದೆ. ಈ ಸಂಬಂಧ ಟ್ಟೀಟ್‌ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ, ಇದು ಮತ್ತೊಂದು ಹಂತದ ಮೈತ್ರಿ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಡ್ಯಾನಿಷ್ ಅಲಿ ಅವರಿಗಾಗಿ ಒಂದು ಸೀಟು ಬಿಟ್ಟುಕೊಡುವಂತೆ ಜೆಡಿಎಸ್‌ ಕಡೆಯಿಂದ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಮಾಯಾವತಿ ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಅವರು ಬಿಎಸ್‍ಪಿ ಸೇರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಗೊತ್ತಾಗಿದೆ. ಈ ಬೆಳವಣಿಗೆಯಿಂದ ರಾಜ್ಯ ಸಮನ್ವಯ ಸಮಿತಿಯ ಸದಸ್ಯರೊಬ್ಬರನ್ನು ಜೆಡಿಎಸ್‍ ಕಳೆದುಕೊಂಡಿದೆ. ಜತೆಗೆ ಜಾತ್ಯಾತೀತ ಜನತಾದಳಕ್ಕೆ ರಾಷ್ಟ್ರಮಟ್ಟದಲ್ಲಿ ಸರಿಯಾದ ವಕ್ತಾರರಿಲ್ಲದಂತಾಗಿದೆ.

ಸ್ಥಾನಮಾನದ ಕೊರತೆ:

ಡ್ಯಾನಿಷ್‌ ಅಲಿ ಬಿಎಸ್‌ಪಿ ಸೇರಲು ಸ್ಥಾನಮಾನದ ಕೊರತೆಯೂ ಮುಖ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಅವರಲ್ಲಿತ್ತು. ಹಲವು ಬಾರಿ ರಾಜ್ಯಸಭೆ ಪ್ರವೇಶಿಸಲು ಅವರು ಯತ್ನಿಸಿದ್ದರು. ಆದರೆ ಕುಬೇರರಿಗೆ ಜೆಡಿಎಸ್‌ ಮಣೆ ಹಾಕುತ್ತಾ ಬಂದಿದ್ದರಿಂದ ಇದು ಸಾಧ್ಯವಾಗಿರಲಿಲ್ಲ.

ಇದೀಗ ಅವರು ಬಿಎಸ್‌ಪಿ ಮೂಲಕ ಚುನಾವಣಾ ಕಣಕ್ಕಿಳಿಯುವ ತೀರ್ಮಾನಕ್ಕೆ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಬಿಎಸ್‌ಪಿ ಮತ್ತು ಅಖಿಲೇಶ್‌ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಸೀಟು ಹೊಂದಾಣಿಕೆ ಮಾಡಿಕೊಂಡಿವೆ. ಇದರಲ್ಲಿ ಬಿಎಸ್‌ಪಿ ತನ್ನ ಕೋಟಾದಲ್ಲಿ ಡ್ಯಾನಿಷ್‌ ಅಲಿಗೆ ಒಂದು ಸೀಟು ಬಿಟ್ಟು ಕೊಡುವ ಸಾಧ್ಯತೆ ಇದೆ.