samachara
www.samachara.com
ಅಮ್ಮ, ತಲೈವರ್ ಇಲ್ಲದ ತಮಿಳುನಾಡು ಚುನಾವಣೆ; ಎನ್‌ಡಿಎಗೆ  ಆಡಳಿತ ವಿರೋಧಿ ಅಲೆಯೇ ಸವಾಲು
ದೇಶ

ಅಮ್ಮ, ತಲೈವರ್ ಇಲ್ಲದ ತಮಿಳುನಾಡು ಚುನಾವಣೆ; ಎನ್‌ಡಿಎಗೆ ಆಡಳಿತ ವಿರೋಧಿ ಅಲೆಯೇ ಸವಾಲು

ಪ್ರತಿ 5 ವರ್ಷಕ್ಕೊಮ್ಮೆ ಆಡಳಿತವನ್ನು ಬದಲಾಯಿಸುವ ಮತ್ತು ಎಲ್ಲಾ ಸಮೀಕ್ಷೆಗಳನ್ನು ಸುಳ್ಳು ಮಾಡುವಂತೆಯೇ ಮತ ಚಲಾಯಿಸುವ ತಮಿಳುನಾಡಿನ ಮತದಾರನ ನಾಡಿ ಮಿಡಿತವನ್ನು ಅರಿಯುವುದು ಯಾವ ರಾಜಕೀಯ ತಜ್ಞರಿಗೂ ಅಷ್ಟು ಸುಲಭವಲ್ಲ. 

ದಕ್ಷಿಣ ಭಾರತದಲ್ಲೇ ಅತ್ಯಂತ ವರ್ಣ ರಂಜಿತ ಹಾಗೂ ಊಹಿಸಲು ಅಸಾಧ್ಯವಾದ ರೀತಿಯ ಚುನಾವಣಾ ಫಲಿತಾಂಶವನ್ನು ನೀಡುವ ಏಕೈಕ ರಾಜ್ಯ ತಮಿಳುನಾಡು. ದ್ರಾವಿಡ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳುನಾಡು ‘ಅಮ್ಮ’ ಜಯಲಲಿತಾ ಹಾಗೂ‘ ತಲೈವರ್’ ಕರುಣಾನಿಧಿ ಇಲ್ಲದೆ ಚುನಾವಣೆ ಎದುರಿಸುತ್ತಿದೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಮೋದಿ ಅಲೆ ಭರ್ಜರಿಯಾಗಿಯೇ ಇತ್ತು. ಆದರೂ ಊಹೆಗೂ ಮೀರಿ ಪುದುಚೇರಿ ಸೇರಿದಂತೆ ತಮಿಳುನಾಡಿನ 40 ಲೋಕಸಭಾ ಕ್ಷೇತ್ರಗಳ ಪೈಕಿ 37 ಕ್ಷೇತ್ರದಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಗೆಲುವು ಸಾಧಿಸಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಕರುಣಾನಿಧಿ ನೇತೃತ್ವದ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) 2ಜಿ ಹಗರಣದ ಪರಿಣಾಮ ಎಲ್ಲಾ ಕ್ಷೇತ್ರದಲ್ಲೂ ಸೋತು ಮಕಾಡೆ ಮಲಗಿತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಐಎಡಿಎಂಕೆ ಅಧಿನಾಯಕಿ ಪುರಚ್ಚಿ ತಲೈವಿ ಜಯಲಲಿತಾ ಅಕಾಲಿಕ ಮರಣದ ನಂತರ ಪಕ್ಷ ಒಡೆದು ಇಬ್ಬಾಗವಾಗಿದೆ. ಅಮ್ಮ ಸಾವಿನ ನಂತರ ಅನೇಕ ರಾಜಕೀಯ ನಾಟಕಗಳಿಗೆ ಸಾಕ್ಷಿಯಾದ ಕೆ. ಎಡಪ್ಪಾಡಿ ಪಳನಿಸ್ವಾಮಿ ಸರಕಾರದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.

ಮತ್ತೊಂದೆಡೆ ಕರುಣಾನಿಧಿಯ ಸಾವಿನ ನಂತರವೂ ತಲೈವರ್ ಎಂ. ಕೆ. ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಪ್ರಬಲವಾಗುವ ಸೂಚನೆ ನೀಡಿದೆ. ಯಾವ ಚುನಾವಣೆಯಲ್ಲಿಯೂ ನಿರಂತರವಾಗಿ ಒಂದೇ ಪಕ್ಷಕ್ಕೆ ಮತ ಚಲಾಯಿಸದ ತಮಿಳರ ನಾಡಿ ಮಿಡಿತ ಅರಿತಿರುವ ರಾಜಕೀಯ ತಜ್ಞರು ಈ ಬಾರಿ ಬೇರೆಯದೇ ಭವಿಷ್ಯ ನುಡಿಯುತ್ತಿದ್ದಾರೆ.

ನಾವಿಕನಿಲ್ಲದ ದೋಣಿಯಂತಾಗಿರುವ ಎಐಎಡಿಎಂಕೆ:

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ. ಜೆ.ಜಯಲಲಿತ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ. ಜೆ.ಜಯಲಲಿತ
/ಕಳಿಂಗಾ ಟಿವಿ

ಇತರೆ ರಾಜ್ಯಗಳಿಗೆ ಹೋಲಿಸಿದರೆ ದ್ರಾವಿಡ ರಾಜಕಾರಣ ಕೊಂಚ ಭಿನ್ನ. ದ್ರಾವಿಡ ಚಳುವಳಿಯ ಜೊತೆಗೆ ಸಿನಿಮಾ ವರ್ಚಸ್ಸು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ ಎಂಬುದನ್ನು 1967 ರಿಂದ 2016 ರ ವಿಧಾನಸಭಾ ಚುನಾವಣೆಯವರೆಗೆ ಎಲ್ಲಾ ಚುನಾವಣೆಗಳು ಸಾರಿ ಹೇಳಿವೆ.

ಸಿನಿಮಾ ಹಿನ್ನೆಲೆಯಿಂದ ಬಂದು, ತಮಿಳರ ಹೃದಯ ದೈವ ಎಂಬ ಹೆಸರು ಪಡೆದವರು ದಿವಂಗತ ಮುಖ್ಯಮಂತ್ರಿ ಎಂ. ಜಿ. ರಾಮಚಂದ್ರನ್. ಇವರ ಮೂಲಕ ಪರಿಚಯವಾಗಿ ನಂತರ ಎಐಎಡಿಎಂಕೆ ಪಕ್ಷದ ಅಧಿನಾಯಕಿಯಾಗಿ ಮುಖ್ಯಮಂತ್ರಿ ಗಾದಿಗೆ ಏರಿದ ಜೆ. ಜಯಲಲಿತಾ ಅವರಿಗೂ ಇದೇ ಸಿನಿಮಾ ಹಿನ್ನೆಲೆಯೇ ಜೀವಾಳವಾಗಿತ್ತು.

ಎಂ.ಜಿ.ಆರ್ ನಂತರ ಕಳೆದ ನಾಲ್ಕು ದಶಕಗಳಿಂದ ಪಕ್ಷಕ್ಕೆ ದೊಡ್ಡ ವರ್ಚಸ್ಸು ತಂದು ಕೊಟ್ಟಿರುವುದು ಜಯಲಲಿತಾ ಅವರ ನಾಯಕತ್ವ. ಈಕೆಯ ವರ್ಚಸ್ಸು ಹಾಗೂ ಜಾತಿ ಸಮೀಕರಣ ಕಳೆದ ಎಲ್ಲಾ ಚುನಾವಣೆಯಲ್ಲೂ ಪಕ್ಷದ ಕೈ ಹಿಡಿದಿದೆ. ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟಿತ್ತು. 40 ಲೋಕಸಭಾ ಕ್ಷೇತ್ರಗಳ ಪೈಕಿ ಎಐಎಡಿಎಂಕೆ 37 ಸ್ಥಾನಗಳಲ್ಲಿ ಜಯಭೇರಿ ಭಾರಿಸಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.

ತಮಿಳುನಾಡು ರಾಜಕೀಯ ವಿಶ್ಲೇಷಕರು ವಿವರಿಸುವಂತೆ, ಜಯಲಲಿತಾ ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ತಮ್ಮ ಹೊರತು ಬೇರೆ ಯಾವುದೇ ನಾಯಕರನ್ನು ಬೆಳೆಸುವ ಮನಸ್ಸು ಮಾಡಿದವರಲ್ಲ. ರಾಜಕೀಯ ಸಭೆಯಲ್ಲಿ ಹಿರಿಯ ಶಾಸಕ, ಸಂಸದರು ಸಹ ವಯಸ್ಸಿನ ವ್ಯತ್ಯಾಸವಿಲ್ಲದೆ ನಾಯಕಿಯ ಕಾಲಿಗೆ ಬೀಳುವ ಕೆಟ್ಟ ಸಂಪ್ರದಾಯವನ್ನು ತಮಿಳುನಾಡು ರಾಜಕೀಯದಲ್ಲಿ ಆರಂಭಿಸಿದ್ದೇ ಜಯಲಲಿತಾ.

ನಟ ದಿವಂಗತ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಮರಣದ ನಂತರ ತಮ್ಮ ನಾಯಕತ್ವವನ್ನು ಪಕ್ಷದೊಳಗೆ ಗಟ್ಟಿಗೊಳಿಸಿಕೊಳ್ಳಲು ಜಯಲಲಿತ ಅನುಸರಿಸಿದ ಮಾರ್ಗವಿದು. 1988 ರಿಂದ 1991ರವರೆಗೆ ಪಕ್ಷದೊಳಗಿದ್ದ ಎಲ್ಲಾ ಒಳ ಬೇಗುದಿಯನ್ನು ತಣಿಸಿ ಕೊನೆಗೂ ಪಕ್ಷದ ಅಧಿನಾಯಕಿಯಾಗಿದ್ದ ಜಯಾ 1991 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಪಕ್ಷದೊಳಗೆ ತನಗೆ ಎದುರಾಗಿ ಮತ್ತೊಬ್ಬ ನಾಯಕನಿಲ್ಲದಂತೆ ನೋಡಿಕೊಂಡಿದ್ದರು. ಜಯಲಲಿತ ಅವರ ಇದೇ ನಿಲುವು ಇಂದು ಆ ಪಕ್ಷಕ್ಕೆ ಮುಳುವಾಗಿದೆ.

ಜಯಾ ಸಾವಿನ ನಂತರ ಇಂದು ಪಕ್ಷವನ್ನು ಗೆಲ್ಲಿಸಿಕೊಳ್ಳುವ ನಾಯಕತ್ವವಿಲ್ಲದೆ ಎಐಎಡಿಎಂಕೆ ಅಕ್ಷರಶಃ ಹೈರಾಣಾಗಿದೆ. ಪರಿಣಾಮ ಪಕ್ಷ ಪ್ರಬಲ ನಾಯಕತ್ವದ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಅವರ ಕೈಹಿಡಿಯಲು ಮುಂದಾದವರೆ ಬಿಜೆಪಿ ಫೈರ್‌ಬ್ರ್ಯಾಂಡ್ ಪ್ರಧಾನಿ ನರೇಂದ್ರ ಮೋದಿ.

ಸರಕಾರದ ವಿರೋಧಿ ಅಲೆ ಮತ್ತು ನಾಯಕತ್ವದ ಹುಡುಕಾಟ:

ಪ್ರಧಾನಿ ನರೇಂದ್ರ ಮೋದಿಯ ಜೊತೆ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್‌ ಸೆಲ್ವಂ.
ಪ್ರಧಾನಿ ನರೇಂದ್ರ ಮೋದಿಯ ಜೊತೆ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್‌ ಸೆಲ್ವಂ.
/ಝಿ ನ್ಯೂಸ್

ಜೆ. ಜಯಲಲಿತಾ ಅವರು ವರ್ಚಸ್ಸು ಈವರೆಗಿನ ಎಲ್ಲಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಅಧಿಕ ಮತಗಳನ್ನು ಗಳಿಸಿಕೊಟ್ಟಿತ್ತು. ಆದರೆ, ಜಯಾ ಸಾವಿನ ನಂತರ ಎಐಎಡಿಎಂಕೆ ಪಕ್ಷ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಟಿಟಿವಿ ದಿನಕರನ್ ನೇತೃತ್ವದಲ್ಲಿ ಎಐಎಡಿಎಂಕೆ ಪಕ್ಷ ಒಡೆದು ಇಬ್ಬಾಗವಾಗಿದ್ದು, ಮಾತೃ ಪಕ್ಷಕ್ಕೆ ಮತ ಸೆಳೆದುಕೊಡುವ ಯಾವುದೇ ಮತ್ತೊಬ್ಬ ನಾಯಕ ಇಲ್ಲದಂತಾಗಿದೆ. ಇನ್ನೂ ರಾಜ್ಯದ ಮುಖ್ಯಮಂತ್ರಿ ಕೆ.ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಓ.ಪನ್ನೀರ್‌ ಸೆಲ್ವಂ ಅವರನ್ನು ತಮಿಳರು ಯಾವ ಕಾಲಕ್ಕೂ ತಮ್ಮ ನಾಯಕರು ಎಂದು ಒಪ್ಪಿಕೊಳ್ಳುವ ಸಾಧ್ಯತೆಗಳೇ ಇಲ್ಲ.

ಲಂಚ ಪ್ರಕರಣದಲ್ಲಿ ಸಿಲುಕಿದ್ದ ಜಯಲಲಿತಾ ಆಗಾಗ್ಗೆ ಜೈಲು ಪಾಲಾಗುವಾಗ ಓ.ಪನ್ನೀರ್‌ ಸೆಲ್ವಂ ಅವರನ್ನು ರಬ್ಬರ್ ಸ್ಟಾಂಪ್ ಸಿಎಂ ರೀತಿ ಬಳಸುತ್ತಿದ್ದರು. ಇನ್ನು ಇಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಶಶಿಕಲಾ ಅವರ ರಬ್ಬರ್ ಸ್ಟಾಂಪ್ ಎಂಬ ಕುಖ್ಯಾತಿ ಗಳಿಸಿದವರು. ಇವರಿಬ್ಬರು ಅದೃಷ್ಟದಿಂದ ಅಧಿಕಾರಕ್ಕೆ ಏರಿದವರೇ ಹೊರತು ಹೋರಾಟದ ಹಿನ್ನೆಲೆ ಉಳ್ಳವರಲ್ಲ.

ಇವರ ನಾಯಕತ್ವವನ್ನು ಸ್ವತಃ ಪಕ್ಷದವರೇ ಒಪ್ಪಿಕೊಳ್ಳದ ಸ್ಥಿತಿ ಇರುವಾಗ ಇನ್ನು ತಮಿಳುನಾಡಿನ ಜನತೆ ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುವುದು ಅತ್ಯಂತ ದೊಡ್ಡ ಮೂರ್ಖತನವಾದೀತು.

ಈ ಅರಿವು ಅಲ್ಲಿನ ಮುಖ್ಯಮಂತ್ರಿ ಹಾಗೂ ಪಕ್ಷಕ್ಕೂ ಇದೆ. ಇದೇ ಕಾರಣಕ್ಕೆ ಇಡೀ ತಮಿಳುನಾಡು ಸರಕಾರವೇ ಇಂದು ಕೇಂದ್ರ ಸರಕಾರದ ಮುಂದೆ ತಲೆ ಬಾಗಿ ನಿಂತಿದೆ. ಮೋದಿ ನಾಯಕತ್ವಕ್ಕೆ ಮೊರೆ ಹೋಗಿದೆ. ತಮಿಳುನಾಡಿನ ಓರ್ವ ಸಚಿವ ಮಾಧ್ಯಮದ ಎದುರು “ಮೋಡಿ ನಮಗೆ ಡ್ಯಾಡಿ” ಎಂದು ಮೊನ್ನೆ ಮೊನ್ನೆ ಹೇಳಿಕೆ ನೀಡಿ ಸುದ್ದಿಯಾಗಿದ್ದು ಎಐಎಡಿಎಂಕೆ ಪಕ್ಷ ಮೋದಿ ನಾಯಕತ್ವದ ಎದುರು ಯಾವ ಮಟ್ಟಕ್ಕೆ ಮಂಡಿಯೂರಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷಗಳ ಜೊತೆಗೂ ಮೈತ್ರಿ ಮಾಡಿಕೊಳ್ಳದೆ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಡಿಎಂ ಈ ಪೈಕಿ 37 ರಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಮೈತ್ರಿಗಾಗಿ ಬೇರೆ ಬೇರೆ ಸ್ಥಳೀಯ ಪಕ್ಷಗಳ ಎದುರು ಅಂಗಲಾಚುವ ಸ್ಥಿತಿಗೆ ಮುಂದಾಗಿದೆ. ಅಲ್ಲದೆ ಕಳೆದ ಬಾರಿ ತಾನು ಗೆದ್ದ ಸಾಕಷ್ಟು ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟು ಕೊಡುತ್ತಿದೆ.

ಅನ್ಬುಮಣಿ ರಾಮದಾಸ್ ನೇತೃತ್ವದ ಪಿಎಂಕೆ (ಪಾಟ್ಟಾಳಿ ಮಕ್ಕಳ್ ಕಚ್ಚಿ) ಪಕ್ಷಕ್ಕೆ 7, ಬಿಜೆಪಿಗೆ 5 ಹಾಗೂ ನಟ ವಿಜಯಕಾಂತ್ ನೇತೃತ್ವದ ಡಿಎಂಡಿಕೆ (ದೇಸಿಯ ಮುರ್ಪೋಕ್ಕು ದ್ರಾವಿಡ ಕಳಗಂ) ಪಕ್ಷಕ್ಕೆ 4 ಸ್ಥಾನವನ್ನು ನೀಡಿ, ಕೇವಲ 23 ಸ್ಥಾನಗಳಲ್ಲಿ ಮಾತ್ರ ಆ ಪಕ್ಷ ಸ್ಫರ್ಧಿಸುತ್ತಿದೆ ಎಂದರೆ ಎಐಎಡಿಎಂಕೆ ಪಕ್ಷದ ಇಂದಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಬಹುದು.

ಆದರೆ, ತಮಿಳುನಾಡಿನಲ್ಲಿ ಮೋದಿ ನಾಯಕತ್ವ ಹಾಗೂ ಎನ್‌ಡಿಎ ಮೈತ್ರಿಕೂಟ ಎಲ್ಲವನ್ನೂ ಬದಲಿಸಿಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ತಮಿಳುನಾಡಿನಲ್ಲಿ ಹಿಂದೆಂದೂ ಕಾಣದಷ್ಟು ಆಡಳಿತ ವಿರೋಧಿ ಅಲೆ ಭುಗಿಲೆದ್ದಿದೆ. ಇತ್ತೀಚೆಗೆ ಭ್ರಷ್ಟಾಚಾರದ ಕುರಿತು ಸ್ಥಳೀಯ ಸುದ್ದಿವಾಹಿನಿ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.97 ಜನ ರಾಜ್ಯದಲ್ಲಿ ಭ್ರಷ್ಟಾಚಾರ ಹಿಂದೆಂದಿಗಿಂತಲೂ ಹೆಚ್ಚು ತಾಂಡವವಾಡುತ್ತಿದೆ ಎಂದು ಮತ ಹಾಕಿ, ರಾಜ್ಯ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಅಲ್ಲದೆ ಜಯಾ ಸಾವಿನ ನಂತರ ಕಳೆದ ಎರಡು ವರ್ಷಗಳಿಂದ ತಮಿಳುನಾಡು ಸತತ ಹೋರಾಟದ ಕಣವಾಗಿ ಬದಲಾಗಿದೆ. ಜಲ್ಲಿಕಟ್ಟು ಹೋರಾಟ, ನೀಟ್ (ಎನ್‌ಇಇಟಿ) ಪರೀಕ್ಷೆ ವಿರುದ್ಧದ ಹೋರಾಟ, ಸ್ಟೆರ್ಲೈಟ್ ಕಂಪೆನಿ ವಿರುದ್ಧದ ಹೋರಾಟ, ಕಾವೇರಿ ಹೋರಾಟ ಹೀಗೆ ಸಾಲು ಸಾಲು ಜನ ಹೋರಾಟದಿಂದ ಆಡಳಿತ ಪಕ್ಷ ಹೈರಾಣಾಗಿದೆ. ಕಳೆದ ಎರಡು ದಶಕದಲ್ಲಿ ಇಷ್ಟೊಂದು ವ್ಯಾಪಕವಾದ ಹೋರಾಟಗಳಿಗೆ ತಮಿಳುನಾಡು ಸಾಕ್ಷಿಯಾಗುತ್ತಿರುವುದು ಇದೇ ಮೊದಲು.

ಈ ನಡುವೆ ನರೇಂದ್ರ ಮೋದಿ ವಿರುದ್ಧದ ಅಲೆಯೂ ತಮಿಳುನಾಡಿನಲ್ಲಿ ವ್ಯಾಪಕವಾಗಿದೆ. ದ್ರಾವಿಡ ರಾಜಕಾರಣದಲ್ಲಿ ಮೊದಲೇ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಈ ನಡುವೆ ಮೋದಿ ಕಳೆದ ಒಂದು ವರ್ಷದಲ್ಲಿ ಐದು ಬಾರಿ ತಮಿಳುನಾಡಿಗೆ ಹೋಗಿ ಬಂದಿದ್ದಾರೆ. ಆದರೆ, ಅವರು ದ್ರಾವಿಡ ನಾಡಿಗೆ ಭೇಟಿ ಕೊಟ್ಟಾಗಲೆಲ್ಲಾ #GoBackModi ಹ್ಯಾಷ್ ಟ್ಯಾಗ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು ಎಂದರೆ ತಮಿಳುನಾಡಿನಲ್ಲಿ ಮೋದಿ ಅಲೆ ಮಾಡಬಹುದಾದ ಕೆಲಸವನ್ನು ಊಹಿಸಬಹುದು.

ಚೇತರಿಕೆ ಕಂಡಿರುವ ಡಿಎಂಕೆ:

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ. ಎಂ.ಕರುಣಾನಿಧಿ ಹಾಗೂ ಅವರ ಮಗ ಇಂದಿನ ಡಿಎಂಕೆ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ. ಎಂ.ಕರುಣಾನಿಧಿ ಹಾಗೂ ಅವರ ಮಗ ಇಂದಿನ ಡಿಎಂಕೆ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್.
/ಟೈಮ್ಸ್ ಆಫ್ ಇಂಡಿಯಾ.

ತಮಿಳುನಾಡಿನ ರಾಜಕೀಯ ಕಂಡ ಮುತ್ಸದ್ಧಿ ನಾಯಕ ಕರುಣಾನಿಧಿ. 1967 ರಲ್ಲಿ ಕಾಂಗ್ರೆಸ್ ಹೊರತಾದ ಮೊದಲ ಸ್ಥಳೀಯ ಪಕ್ಷ ಡಿಎಂಕೆ ತಮಿಳುನಾಡಿನ ಅಧಿಕಾರ ಹಿಡಿಯುವಲ್ಲಿ ಅವರ ಪಾತ್ರ ಮಹತ್ವವಾದದ್ದು. ಅವರು ಬದುಕಿರುವವರೆಗೆ ಪಕ್ಷದ ಹಿಡಿತ ತಮ್ಮ ಕೈಬಿಟ್ಟು ಹೋಗದಂತೆ ಜಾಗರೂಕರಾಗಿ ನೋಡಿಕೊಂಡಿದ್ದರು. ಇಂದು ಅವರ ಸ್ಥಾನಕ್ಕೆ ಅವರ ಮೂರನೇ ಮಗ ಎಂ.ಕೆ. ಸ್ಟಾಲಿನ್ ಬಂದು ಕುಳಿತಿದ್ದಾರೆ.

ಕರುಣಾನಿಧಿ ನೇತೃತ್ವದಲ್ಲಿ 2009ರ ಲೋಕಸಭಾ ಚುನಾವಣೆ ಎದುರಿಸಿದ್ದ ಡಿಎಂಕೆ ಮಿತ್ರಪಕ್ಷಗಳು 27 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಡಿಎಂಕೆ 18 ಸ್ಥಾನಗಳಲ್ಲಿ ಜಯಿಸಿದ್ದರೆ, ಕಾಂಗ್ರೆಸ್ 8 ಸ್ಥಾನ ಗಳಿಸಿತ್ತು. ಆದರೆ 2ಜಿ ಹಗರಣದ ಕಾರಣ 2014 ರಲ್ಲಿ ಡಿಎಂಕೆ ಹಾಗೂ ಮಿತ್ರ ಪಕ್ಷಗಳು ಹೇಳ ಹೆಸರಿಲ್ಲದಂತಾಗಿತ್ತು. ಕೇವಲ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಅವರಿಂದ ಸಾಧ್ಯವಾಗಿರಲಿಲ್ಲ. ಕಳೆದ 6 ದಶಕದಲ್ಲಿ ಮೊದಲ ಬಾರಿಗೆ ಡಿಎಂಕೆ ಪಕ್ಷವು ತನ್ನ ಒಬ್ಬ ಸದಸ್ಯನನ್ನೂ ಸಂಸತ್‌ಗೆ ಕಳುಹಿಸಲಾಗದ ಸ್ಥಿತಿಗೆ ತಲುಪಿತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಂ.ಕೆ, ಸ್ಟಾಲಿನ್ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮುತ್ತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಿಂಚಿನ ವೇಗದಲ್ಲಿ ಸಭೆ ನಡೆಸುತ್ತಿದ್ದು ಭೂತ್ ಮಟ್ಟದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಿದೆ ಎನ್ನುತ್ತಿದ್ದಾರೆ ತಮಿಳುನಾಡಿನ ರಾಜಕೀಯ ವಿಶ್ಲೇಷಕರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಆಡಳಿತ ವಿರುದ್ಧ ತಮಿಳುನಾಡಿನಲ್ಲಿ ಬಹುದೊಡ್ಡ ಆಡಳಿತ ವಿರೋಧಿ ಅಲೆ ಎದ್ದಿರುವುದು ಡಿಎಂಕೆ ಪಾಲಿಗೆ ವರದಾನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೋಕಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗುವ ಎರಡು ವಾರಕ್ಕೆ ಮುನ್ನವೇ ಮಿತ್ರ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಎಂ.ಕೆ. ಸ್ಟಾಲಿನ್ ಈಗಾಗಲೇ ರಾಜ್ಯಾದ್ಯಂತ ಮಿಂಚಿನ ವೇಗದಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ಈಗಾಗಲೇ ಯುಪಿಎ ಮೈತ್ರಿ ಕೂಟದಲ್ಲಿ ರಾಹುಲ್ ಗಾಂಧಿ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಘೋಷಣೆ ಮಾಡಿರುವ ಸ್ಟಾಲಿನ್, ಪಾಂಡಿಚೇರಿ ಸೇರಿದಂತೆ 40 ಕ್ಷೇತ್ರಗಳ ಪೈಕಿ ಮಿತ್ರಪಕ್ಷಗಳಲ್ಲಿ ಪ್ರಮುಖವಾದ ಕಾಂಗ್ರೆಸ್ ಗೆ 10 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದಲ್ಲದೆ ಸಿಪಿಐ 2, ಸಿಪಿಎಂ 2, ವಿಸಿಕೆ 2 (ವಿಡುದಲೈ ಚಿರುತೈ ಪಕ್ಷ) , ಐಯುಎಂಎಲ್ 1 (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್), ಕೆಎಂಎಡಿಕೆ 1 (ಕೊಂಗು ಮಕ್ಕಳ್ ದೇಸಿಯ ಕಚ್ಚಿ) ಹಾಗೂ ಐಜೆಕೆ ಪಕ್ಷಕ್ಕೆ 1 (ಇಂಡಿಯಾ ಜನನಾಯಗ ಕಚ್ಚಿ) ಸ್ಥಾನವನ್ನು ಬಿಟ್ಟುಕೊಟ್ಟಿದೆ.

ಪಕ್ಕಾ ಜಾತಿ ಲೆಕ್ಕಾಚಾರದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡಿರುವ ಡಿಎಂಕೆ ಮಿತ್ರ ಪಕ್ಷಗಳಿಗೆ 19 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಉಳಿದ 21 ಸ್ಥಾನಗಳಲ್ಲಿ ತಾನು ಸ್ಪರ್ಧಿಸಲು ವೇದಿಕೆ ಸಿದ್ದಪಡಿಸುತ್ತಿದೆ.

ಏನ್ ಹೇಳುತ್ತೆ ಸಮೀಕ್ಷೆ?

ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ನಟ,ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲಹಾಸನ್
ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ನಟ,ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲಹಾಸನ್
/ಸ್ಕ್ರಾಲ್ ಡಾಟ್ ಇನ್

ಈ ನಡುವೆ ತಮಿಳುನಾಡಿನಲ್ಲಿ ಖ್ಯಾತ ನಟರಾದ ರಜನೀಕಾಂತ್ ಹಾಗೂ ಕಮಲ ಹಾಸನ್ ರಾಜಕೀಯ ಪಕ್ಷ ಸ್ಥಾಪಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ರಜನಿಕಾಂತ್ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ಈಗ ಎಲ್ಲರ ಚಿತ್ತ ಕಮಲಹಾಸನ್ ಮೇಲಿದೆ.

ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಕಮಲಹಾಸನ್ ಅವರ ಪಕ್ಷಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಭಾರತೀಯ ಚುನಾವಣಾ ಆಯೋಗ ನಿನ್ನೆ ಕಮಲ್ ಅವರ ‘ಮಕ್ಕಳ್ ನೀಧಿ ಮಯ್ಯಂ’ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಅನ್ನು ಚಿಹ್ನೆಯಾಗಿ ನೀಡಿದೆ. ಆದರೆ, ಡಿಎಂಕೆ ಎಐಎಡಿಎಂ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಾಗಲಿ ಅಥವಾ ರಾಜಕೀಯ ತಜ್ಞರಾಗಲಿ ಕಮಲ್ ಅವರ ರಾಜಕೀಯ ಪ್ರವೇಶವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ.

ಕಮಲ್ ಅವರ ರಾಜಕೀಯ ಪ್ರವೇಶ ನಿರೀಕ್ಷೆ ಮಾಡಿದಷ್ಟು ಫಲಿತಾಂಶದ ಮೇಲೆ ಪರಿಣಾಮ ಬೀರದು ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಈ ನಡುವೆ ತಮಿಳುನಾಡು ಚುನಾವಣೆ ಕುರಿತು ಸಾಕಷ್ಟು ಸಮೀಕ್ಷೆಗಳು ಬಿಡುಗಡೆಯಾಗಿದೆ.

ಈಗಾಗಲೇ ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಸಮೀಕ್ಷೆಗಳನ್ನು ಹೊರಹಾಕಿದ್ದು, ಇದರಲ್ಲಿ ಎಲ್ಲಾ ಪ್ರಮುಖ ಸ್ಥಳೀಯ ಮಾಧ್ಯಮಗಳು ಡಿಎಂಕೆ ಮೈತ್ರಿಕೂಟಕ್ಕೆ ಪುದುಚೇರಿ ಸೇರಿದಂತೆ 35 ರಿಂದ 37 ಸ್ಥಾನ ಲಭ್ಯವಾಗಲಿದ್ದು, ಎಐಎಡಿಎಂಕೆ ಕೇವಲ 3 ರಿಂದ 5 ಸ್ಥಾನಗಳಿಗೆ ತೃಪ್ತಿ ಪಡಲಿದೆ ಎಂದು ಹೇಳಿವೆ.

ಇನ್ನು ಇಂಡಿಯಾ ಟಿವಿ ಹಾಗೂ ಇಂಡಿಯಾ ಟುಡೇ ಸಮೀಕ್ಷೆ ಡಿಎಂಕೆ ಪಕ್ಷವು 25 ರಿಂದ 29 ಸ್ಥಾನಗಳನ್ನು ಗೆಲ್ಲಲಿದ್ದು, ಎಐಎಡಿಎಂಕೆ ಕೇವಲ 10 ರಿಂದ 15 ಸ್ಥಾನಕ್ಕೆ ತೃಪ್ತಿ ಪಡಲಿದೆ ಎಂದು ಅಭಿಪ್ರಾಯ ಪಟ್ಟಿವೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಅಂದರೆ 40 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ತಮಿಳುನಾಡಿ ಮತ್ತು ಪುದುಚೆರಿ ಮೇಲೆ ಯುಪಿಎ ಹಾಗೂ ಎನ್‌ಡಿಎ ಎರಡೂ ಪಕ್ಷಗಳೂ ಕಣ್ಣಿಟ್ಟಿದ್ದು, ಗಂಭೀರವಾಗಿ ಪರಿಗಣಿಸಿವೆ.

ಕಳೆದ ಒಂದು ವರ್ಷದಲ್ಲಿ ಮೋದಿ 5 ಬಾರಿ ತಮಿಳುನಾಡಿಗೆ ಹೋಗಿ ಬಂದದ್ದನ್ನು ಕಂಡರೆ ಬಿಜೆಪಿ ತಮಿಳುನಾಡನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ತಿಳಿಯುತ್ತದೆ. ಇದಕ್ಕೆ ಪೂರಕವಾಗಿ ಆಡಳಿತ ಪಕ್ಷದ ಜೊತೆಗೆ ಮೈತ್ರಿ ಸಾಧಿಸುವಲ್ಲೂ ಬಿಜೆಪಿ ಯಶಸ್ವಿಯಾಗಿದೆ.

ಆದರೆ, ಯಾವಾಗಲೂ ಪ್ರತಿ 5 ವರ್ಷಕ್ಕೊಮ್ಮೆ ಆಡಳಿತವನ್ನು ಬದಲಾಯಿಸುವ ಮತ್ತು ಎಲ್ಲಾ ಸಮೀಕ್ಷೆಗಳನ್ನು ಸುಳ್ಳು ಮಾಡುವಂತೆಯೇ ಮತ ಚಲಾಯಿಸುವ ತಮಿಳುನಾಡಿನ ಮತದಾರನ ನಾಡಿ ಮಿಡಿತವನ್ನು ಅರಿಯುವುದು ಯಾವ ತಜ್ಞರಿಗೂ ಅಷ್ಟು ಸುಲಭವಲ್ಲ. ಹೀಗಿದ್ದೂ ಈ ಬಾರಿ ರಾಜ್ಯದಲ್ಲಿನ ಎಲ್ಲಾ ಬೆಳವಣಿಗೆ ಡಿಎಂಕೆ ಪಕ್ಷಕ್ಕೆ ಪೂರಕವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಿರುವಾಗ ಸಮೀಕ್ಷೆಗಳು ನಿಜವಾಗುತ್ತದೆಯೇ? ಎಂಬುದನ್ನು ತಿಳಿದುಕೊಳ್ಳಲು ಚುನಾವಣಾ ಫಲಿತಾಂಶದವರೆಗೆ ಕಾಯಲೇಬೇಕು.