samachara
www.samachara.com
ರಾಮ ಕೋರ್ಟ್‌ ಪಾಲಾದಾಗ ನೆನಪಾದ ಸೈನಿಕರು: ಪ್ರಧಾನಿ ಮೋದಿ 9 ಭಾಷಣಗಳ ಸುತ್ತ...
ದೇಶ

ರಾಮ ಕೋರ್ಟ್‌ ಪಾಲಾದಾಗ ನೆನಪಾದ ಸೈನಿಕರು: ಪ್ರಧಾನಿ ಮೋದಿ 9 ಭಾಷಣಗಳ ಸುತ್ತ...

ಬಿಜೆಪಿ ಬಾಲಕೋಟ್ ದಾಳಿಯನ್ನು ಪ್ರಚಾರಕ್ಕೆ ಬೇಕಾದಷ್ಟು ಬಳಸಿ ಮುಗಿದ ನಂತರ ‘ಸೇನೆಯನ್ನು ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ’ ಎಂದು ಚುನಾವಣಾ ಆಯೋಗ ಶನಿವಾರ ಸಂಜೆ ಪ್ರಕಟಣೆ ಹೊರಡಿಸಿದೆ.

ಮಂಗಳೂರಿನಲ್ಲಿ ಕಳೆದ ವಾರಾಂತ್ಯದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ನಮ್ಮ ಸೈನಿಕರು ನಡೆಸಿದ ವಾಯುದಾಳಿಯನ್ನು ವಿಪಕ್ಷಗಳು ಅನುಮಾನಿಸುತ್ತಿವೆ ಎಂದು ಆರೋಪ ಹೊರಿಸುತ್ತಿದ್ದರು. ಅದೇ ಸಂದರ್ಭದಲ್ಲಿ ದೆಹಲಿಯ ನೋಯ್ಡಾದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ದಾಳಿಯ ಸಾಕ್ಷ್ಯ ಕೇಳಿದವರ ರಕ್ತ ಪರೀಕ್ಷೆಗೆ ಮುಂದಾಗಿದ್ದರು.

“ಭಾರತೀಯ ರಕ್ತ ಹೊಂದಿರುವ ಯಾರೂ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮೇಲೆ ನಡೆಸಿದ ಭಾರತೀಯ ವಾಯುದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ” ಎಂದು ಅವರು ಗುಡುಗಿದ್ದರು.

ಕಳೆದ ಎರಡು ವಾರದಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು ಹೋದಲ್ಲಿ ಬಂದಲ್ಲೆಲ್ಲಾ ಬಾಲಾಕೋಟ್‌ ದಾಳಿಯನ್ನೇ ಉಲ್ಲೇಖಿಸಿ ಮಾತನಾಡುತ್ತಿದ್ದಾರೆ. ಇವರ ಭಾಷಣಗಳಲ್ಲಿ ಬೇರೆ ವಿಚಾರಗಳು ಇಣುಕಿದ್ದು ಅತೀ ವಿರಳ ಎನ್ನಬಹುದು.

ಅಸಲಿಗೆ ಯಾವ ಪಕ್ಷಗಳೂ ವಾಯುಸೇನೆಯ ಸಾಮರ್ಥ್ಯವನ್ನಾಗಲಿ ಅಥವಾ ಬಾಲಾಕೋಟ್‌ನಲ್ಲಿ ನಡೆದ ವಾಯುದಾಳಿಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿಲ್ಲ. ಬದಲಿಗೆ ಆಗಿರುವ ಹಾನಿಗೆ ಸಾಕ್ಷ್ಯಗಳನ್ನಷ್ಟೇ ಕೇಳಿ ಸುಮ್ಮನಾಗಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಸುಮ್ಮನಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.

ಇದಕ್ಕೆ ಬಾಲಾಕೋಟ್ ದಾಳಿಯ ನಂತರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣಗಳೇ ಸಾಕ್ಷಿ.

ಕನ್ಯಾಕುಮಾರಿಯಿಂದ ನೋಯ್ಡಾವರೆಗೆ:

ಬಾಲಾಕೋಟ್ ದಾಳಿ ಮುಗಿಯುತ್ತಿದ್ದಂತೆ ಬಾಯಿ ಬಿಟ್ಟ ಯಡಿಯೂರಪ್ಪ, ಇದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲಿದೆ ಎಂಬ ಮುನ್ಸೂಚನೆ ನೀಡಿದ್ದರು. ‘ಬಾಲಾಕೋಟ್ ದಾಳಿ ರಾಜ್ಯದಲ್ಲಿ ಬಿಜೆಪಿಗೆ 22 ಸೀಟು ಗೆಲ್ಲಿಸಿಕೊಡಲಿದೆ’ ಎಂಬರ್ಥದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಭಾರಿ ಮುಜುಗರಕ್ಕೀಡು ಮಾಡಿತ್ತು.

ಆದರೆ ಇದರಿಂದ ಪಾಠ ಕಲಿತುಕೊಳ್ಳುವ ಬದಲು ದಾಳಿಯನ್ನು ಮೋದಿ ಮತ್ತವರ ಗ್ಯಾಂಗ್‌ ಮತ್ತಷ್ಟು ಪ್ರಚಾರಕ್ಕೆ ಬಳಸಿಕೊಳ್ಳಲು ಹೊರಟಿತು. ಪರಿಣಾಮ ಕಳೆದ 10 ದಿನಗಳಿಂದ ಹೋದಲ್ಲಿ ಬಂದಲ್ಲೆಲ್ಲ ಬಾಲಾಕೋಟ್‌ನ ಸದ್ದು ಬಿಜೆಪಿ ವೇದಿಕೆಗಳಿಂದ ಮೊಳಗುತ್ತಿದೆ.

ಕನ್ಯಾಕುಮಾರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ.
ಕನ್ಯಾಕುಮಾರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ.
/ಎಎನ್‌ಐ.

ದಾಳಿಯ ಬಗ್ಗೆ ಸಾಕ್ಷ್ಯ ಕೇಳಿದ ವಿರೋಧ ಪಕ್ಷಗಳ ವಿರುದ್ಧ ಮೋದಿ ಮೊದಲು ಕೆಂಡ ಕಾರಿದ್ದು ದ್ರಾವಿಡರ ನಾಡಿನಲ್ಲಿ. ಮಾರ್ಚ್ 1 ರಂದು ತಮಿಳುನಾಡು ಪ್ರವಾಸದ ವೇಳೆ ಕನ್ಯಾಕುಮಾರಿಯಲ್ಲಿ ಅವರು ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಗೊಂಡಿದ್ದರು.

“ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಕೆಲವು ರಾಜಕೀಯ ಪಕ್ಷಗಳು ಅನುಮಾನದಿಂದ ನೋಡುತ್ತಿವೆ. ಇವರುಗಳು ಪಾಕಿಸ್ತಾನದ ಪರವಾದ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಪಾಕಿಸ್ತಾನದ ಟಿವಿ ರೇಡಿಯೋದಲ್ಲಿ ಪ್ರಸಾರವಾಗುತ್ತಿದೆ,” ಎಂದು ಗುಡುಗಿದ್ದರು. “ನೀವು ನಮ್ಮ ಸೇನಾ ಪಡೆಗಳನ್ನು ಅನುಮಾನದಿಂದ ನೋಡುತ್ತಿರುವಿರೋ? ಅಥವಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವಿರೋ?” ಎಂದು ಪ್ರಶ್ನಿಸುವ ಮೂಲಕ ಪ್ರಶ್ನೆ ಮಾಡುವ ಎಲ್ಲರಿಗೂ ಮೋದಿ ದೇಶದ್ರೋಹದ ಪಟ್ಟ ಹೊರಿಸಿದ್ದರು.

ಮಾರ್ಚ್ 3 ಉತ್ತರಪ್ರದೇಶ ಮತ್ತು ಬಿಹಾರ:

ಕನ್ಯಾಕುಮಾರಿಯ ಬಳಿಕ ಮಾರ್ಚ್‌ 3ರಂದು ಉತ್ತರ ಪ್ರದೇಶದ ಅಮೇಠಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಬಾಲಾಕೋಟ್ ವಿಚಾರವಾಗಿ ಸಾಕ್ಷ್ಯ ಕೇಳಿದ್ದ ವಿರೋಧ ಪಕ್ಷಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಕೇಂದ್ರ ಸರಕಾರ ಅಮೇಠಿಯಲ್ಲಿ ಶಸ್ತ್ರಾಸ್ತ್ರಗಳ ಕಾರ್ಖಾನೆ ನಿರ್ಮಿಸಿದ್ದು, ಇಲ್ಲಿ ನಿರ್ಮಾಣವಾಗಲಿರುವ ಎಕೆ-203 ರೈಫಲ್‌ಗಳನ್ನು ನಮ್ಮ ಯೋಧರು ಬಳಸಲಿದ್ದಾರೆ ಎಂದು ಘೋಷಿಸಿದ್ದರು.

ಮಾರ್ಚ್.3 ರಂದು ಬಿಹಾರದಲ್ಲಿ ಆಯೋಜಿಸಲಾಗಿದ್ದ ಸಂಕಲ್ಪ ಯಾತ್ರೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ.
ಮಾರ್ಚ್.3 ರಂದು ಬಿಹಾರದಲ್ಲಿ ಆಯೋಜಿಸಲಾಗಿದ್ದ ಸಂಕಲ್ಪ ಯಾತ್ರೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ.
/ಪ್ರಜಾವಾಣಿ.

ಉತ್ತರಪ್ರದೇಶದಲ್ಲಿ ಚುನಾವಣಾ ರ್ಯಾಲಿ ಮುಗಿಸಿ ಅದೇ ದಿನ ಬಿಹಾರಕ್ಕೆ ತೆರಳಿದ್ದ ಮೋದಿ ರಾಜಧಾನಿ ಪಾಟ್ನಾದ ಗಾಂಧಿ ಮೈಧಾನದಲ್ಲಿ ಎನ್‌ಡಿಎ ಮೈತ್ರಿ ಕೂಟ ಹಮ್ಮಿಕೊಂಡಿದ್ದ ಸಂಕಲ್ಪ ಯಾತ್ರೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು.

ಸಂಕಲ್ಪ ಯಾತ್ರೆಯ ಈ ವೇದಿಕೆಯಿಂದ ಮಾತನಾಡಿದ ಅವರು, “ವೈಮಾನಿಕ ದಾಳಿಯ ಸಾಕ್ಷ್ಯಗಳನ್ನು ಕೇಳುವ ಮೂಲಕ ವಿರೋಧ ಪಕ್ಷಗಳು ದೇಶಕ್ಕೆ ದ್ರೋಹ ಬಗೆಯುತ್ತಿವೆ. ಒಂದೆಡೆ ಸೈನಿಕರು ಉಗ್ರರ ವಿರುದ್ಧ ಹೋರಾಡುತ್ತಿದ್ದರೆ, ಇಡೀ ದೇಶ ಒಗ್ಗಟ್ಟಿನಿಂದ ನಿಲ್ಲಬೇಕು. ಆದರೆ 21 ವಿರೋಧ ಪಕ್ಷಗಳು ದೆಹಲಿಯಲ್ಲಿ ಗುಂಪುಗೂಡಿ ನಮ್ಮ ಕ್ರಮಗಳನ್ನು ಖಂಡಿಸುತ್ತಿವೆ. ಸೇನಾ ಕಾರ್ಯಾಚರಣೆಯ ಸಾಕ್ಷ್ಯ ಕೇಳುತ್ತಿವೆ” ಎಂದು ಹರಿಹಾಯ್ದಿದ್ದರು.

ಮಾರ್ಚ್5, ಗುಜರಾತ್ ಮತ್ತು ಮಧ್ಯಪ್ರದೇಶ:

ಮಾರ್ಚ್ 5 ರಂದು ಗುಜರಾತ್‌ನ ಜಾಮನಗರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಮೋದಿ ಈ ರ್ಯಾಲಿಯಲ್ಲೂ ಬಾಲಾಕೋಟ್ ವಾಯುದಾಳಿಯನ್ನು ಉಲ್ಲೇಖಿಸಿದ್ದರು.

ಎಂದಿನಂತೆ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಫೆ. 27 ರಂದು ಪಾಕಿಸ್ತಾನ ವಾಯುಪಡೆ ಭಾರತದ ಮೇಲೆ ದಾಳಿ ನಡೆಸಲು ಬಂದಾಗ ನಮ್ಮಲ್ಲಿ ರಫೇಲ್ ಯುದ್ಧ ವಿಮಾನಗಳಿದ್ದಿದ್ದರೆ ಸೇನೆಯ ಯಾವುದೇ ಯುದ್ಧ ವಿಮಾನಗಳು ನಷ್ಟವಾಗುತ್ತಿರಲಿಲ್ಲ. ಪಾಕ್ ವಾಯುಪಡೆ ವಿಮಾನಗಳು ಭಾರತದ ಗಡಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ,” ಎಂದು ಹೇಳಿಕೆ ನೀಡಿದ್ದರು.

ಮೋದಿಯ ಈ ಹೇಳಿಕೆಗೆ ತಿರುಗೇಟು ನೀಡಿದ್ದ ರಾಹುಲ್ ಗಾಂಧಿ, “ರಫೇಲ್ ಯುದ್ಧ ವಿಮಾನಗಳು ಭಾರತದ ವಾಯುಪಡೆಗೆ ಪೂರೈಕೆಯಾಗಲು ವಿಳಂಬವಾಗುತ್ತಿರುವುದೇಕೆ?. ಸೇನೆಯ 30,000 ಕೋಟಿಯನ್ನು ಅನಿಲ್ ಅಂಬಾನಿಗೆ ನೀಡಿ ಮೋದಿ ನಾಚಿಕೆ ಇಲ್ಲದೆ ಮಾತನಾಡುತ್ತಿದ್ದಾರೆ,” ಎಂದು ಕಟುವಾಗಿ ಟೀಕಿಸಿದ್ದರು.

ಇದೇ ದಿನ ಗುಜರಾತ್‌ನ ರ್ಯಾಲಿ ಮುಗಿಸಿ ಮಧ್ಯಪ್ರದೇಶಕ್ಕೆ ತೆರಳಿ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಮೋದಿ, “ಇಂದು ವಾಯು ದಾಳಿಯ ಕುರಿತು ಸಾಕ್ಷ್ಯ ಕೇಳುವ ಇದೇ ಪಕ್ಷ ದಶಕಗಳ ಕಾಲ ದೇಶವನ್ನು ಆಳ್ವಿಕೆ ನಡೆಸಿತ್ತು. ತಮ್ಮ ಆಳ್ವಿಕೆ ಕಾಲದಲ್ಲಿ ಪ್ರಶ್ನೆ ಮಾಡುವ ಗುಣವನ್ನೇ ಕಳೆದುಕೊಂಡಿದ್ದ ಇವರು ಇಂದು ಬಾಲಾಕೋಟ್ ದಾಳಿಯನ್ನು ಪ್ರಶ್ನಿಸುತ್ತಿದ್ದಾರೆ. 26/11 ರ ಘಟನೆಯಲ್ಲಿ ಇದೇ ಜನ ಪಾಕಿಸ್ತಾನಕ್ಕೆ ಕ್ಲೀನ್ ಚೀಟ್ ನೀಡಿದ್ದರು. ಇಂತಹ ವರ್ತನೆಯಿಂದಲೇ ಇವರ ಮನಸ್ಥಿತಿ ಅರ್ಥವಾಗುತ್ತದೆ,” ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಕಾರವನ್ನೇ ನಡೆಸಿದ್ದರು.

ಮಾರ್ಚ್ 6, ಕರ್ನಾಟಕ ಮತ್ತು ತಮಿಳುನಾಡು:

ಮಾರ್ಚ್ 6 ರಂದು ವಿವಿಧ ಕಾಮಗಾರಿಗಳ ಚಾಲನೆ ನೆರವೇರಿಸುವ ಸಲುವಾಗಿ ಕರ್ನಾಟಕದ ಕಲಬುರಗಿಗೆ ಆಗಮಿಸಿದ್ದ ಮೋದಿ ಒಂದು ವಾರದ ಬಾಲಾಕೋಟ್ ಭಾಷಣದಿಂದ ತಣ್ಣಗಾದಂತಿದ್ದರು.

ಕಲಬುರಗಿಯಲ್ಲಿ ಮಾಡಿದ 40 ನಿಮಿಷದ ಭಾಷಣದಲ್ಲಿ ಮೋದಿ ಅಪ್ಪಿತಪ್ಪಿಯೂ ಬಾಲಾಕೋಟ್ ದಾಳಿಯ ಕುರಿತಾಗಲಿ, ವಾಯುಸೇನೆಯ ಕುರಿತಾಗಲಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿರಲಿಲ್ಲ. ಬದಲಿಗೆ ಇಡೀ ಭಾಷಣದುದ್ದಕ್ಕೂ ರಾಜ್ಯದ ಮೈತ್ರಿ ಸರಕಾರದ ವಿರುದ್ಧವೇ ಹರಿಹಾಯ್ದಿದ್ದರು. ಅಲ್ಲದೆ ಕರ್ನಾಟಕದಿಂದ ತಮಿಳುನಾಡಿನ ಕಾಂಚೀಪುರಂಗೆ ತೆರಳಿದ್ದ ಮೋದಿ ಅಲ್ಲೂ ಸಹ ಬಾಲಾಕೋಟ್ ಹೆಸರನ್ನು ಪ್ರಸ್ತಾಪಿಸದೆ ಅಚ್ಚರಿ ಮೂಡಿಸಿದ್ದರು.

ಕರ್ನಾಟಕದ ಕಲಬುರ್ಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ.
ಕರ್ನಾಟಕದ ಕಲಬುರ್ಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ.
/ನ್ಯೂಸ್ 18.

ಮಾರ್ಚ್ 8, ಉತ್ತರಪ್ರದೇಶ:

ಅಮೇಠಿಯ ನಂತರ ಮಾರ್ಚ್ 8 ರಂದು ಮತ್ತೆ ಉತ್ತರಪ್ರದೇಶದ ಘಾಜಿಯಾಬಾದ್‌ ಹಾಗೂ ಕಾನ್ಪುರ್‌ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ನೆರವೇರಿಸಿ ಎರಡು ಪ್ರತ್ಯೇಕ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ ಮೋದಿ ಮತ್ತೊಮ್ಮೆ ಯುಪಿಎ ಸರಕಾರವನ್ನು ನೇರಾ ನೇರ ಟೀಕೆಗೆ ಒಳಪಡಿಸಿದ್ದರು, “26/11ರ ಮುಂಬೈ ದಾಳಿ ನಂತರ ಅಂದಿನ ಯುಪಿಎ ಸರಕಾರ ಗಟ್ಟಿ ನಿರ್ಧಾರ ತೆಗೆದುಕೊಂಡು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯನ್ನು ನಿರ್ನಾಮ ಮಾಡಿದ್ದರೆ ಇಂದು ನಾವು ವಾಯುದಾಳಿ ನಡೆಸುವ ಅಗತ್ಯವೇ ಎದುರಾಗುತ್ತಿರಲಿಲ್ಲ,” ಎಂಬುದಾಗಿ ದೂರಿದ್ದರು.

ಅಲ್ಲದೆ, “ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದ್ದರೆ, ಕೆಲವು ಭಾರತೀಯರೆ ಪಾಕಿಸ್ತಾನದ ಪರ ಕೆಲಸ ಮಾಡುತ್ತಿದ್ದಾರೆ,” ಎಂದು ವಿರೋಧ ಪಕ್ಷಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿದ್ದರು.

ಮಾರ್ಚ್ 9, ನೋಯ್ಡಾ:

ಕೊನೆಯದಾಗಿ ಲೋಕಸಭಾ ಚುನಾವಣೆ ಘೋಷಣೆಯ ಮುನ್ನಾ ದಿನ ನೋಯ್ಡಾದಲ್ಲಿ ಮಾತನಾಡಿದ್ದ ಶನಿವಾರ ಮಾತನಾಡಿದ ಪ್ರಧಾನಿ ಮೋದಿ ಮತ್ತೊಮ್ಮೆ ಸಾಕ್ಷ್ಯಾಧಾರ ಕೇಳಿದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

“2008 ರ ಮುಂಬೈ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಅಂದು ಸೇನೆ ಸಿದ್ದವಾಗಿತ್ತು. ಅದರೆ ಅಂದಿನ ಯುಪಿಎ ಸರಕಾರಕ್ಕೆ ಧೈರ್ಯವಿರಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಬದಲಾಗಿದೆ. 2016 ರ ಉರಿ ದಾಳಿಗೆ ಪ್ರತೀಕಾರವಾಗಿ ನಿರ್ಧಿಷ್ಟ ದಾಳಿ ನಡೆಸಿ ಉಗ್ರಗಾಮಿಗಳ ಹುಟ್ಟಡಗಿಸಲಾಗಿದೆ,” ಎಂದಿದ್ದರು.

“ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ. ಆದರೆ 2016 ರ ಉರಿ ದಾಳಿಗೆ ಸಾಕ್ಷಿ ಕೇಳಿದವರು ಬಾಲಾಕೋಟ್‌ ದಾಳಿಯ ಸಾಕ್ಷಿಯನ್ನೂ ಕೇಳುತ್ತಿದ್ದಾರೆ. ಭಾರತೀಯ ರಕ್ತ ಹೊಂದಿರುವವರು ವೈಮಾನಿಕ ದಾಳಿಯನ್ನು ಅನುಮಾನಿಸುವುದಿಲ್ಲ,” ಎನ್ನುವ ಮೂಲಕ ಮೋದಿ ಪ್ರಶ್ನೆ ಮಾಡುವವರ ರಕ್ತದ ಪರೀಕ್ಷೆಗೆ ಇಳಿದಿದ್ದರು.

ಒಂದೆಡೆ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶದಾದ್ಯಂತ ಸುತ್ತುತ್ತಾ ಬಾಲಾಕೋಟ್‌ ದಾಳಿಗೆ ಸಾಕ್ಷ್ಯ ಕೇಳಿದವರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಸೇರಿದಂತೆ ಬಹುತೇಕ ಎಲ್ಲಾ ಬಿಜೆಪಿ ನಾಯಕರು ಕಳೆದ ಎರಡು ವಾರಗಳಿಂದ ಎಲ್ಲೇ ಹೋದರು ಬಾಲಾಕೋಟ್ ದಾಳಿಯ ಕುರಿತು ಮಾತನಾಡುತ್ತಿದ್ದಾರೆ.

ಇವರ ಭಾಷಣಗಳಲ್ಲಿ ಬೇರೆ ಯಾವ ವಿಚಾರಗಳೂ ಅಪ್ಪಿತಪ್ಪಿಯೂ ಚರ್ಚೆಗೆ ಬರುತ್ತಿಲ್ಲ. ವಿರೋಧ ಪಕ್ಷಗಳು ಒಮ್ಮೆ ಸಾಕ್ಷಿ ಕೇಳಿ ಸುಮ್ಮನಾಗಿದ್ದರೆ, ಬಿಜೆಪಿ ಪಕ್ಷದ ನಾಯಕರು ಮಾತ್ರ ಹೋದಲ್ಲಿ ಬಂದಲ್ಲೆಲ್ಲಾ ಇದೇ ವಿಚಾರವನ್ನು ಪ್ರಸ್ತಾಪಿಸುತ್ತಾ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ಇದೀಗ ‘ಕೋಟೆ ಸೂರೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎನ್ನುವಂತೆ ಬಿಜೆಪಿ ದಾಳಿಯನ್ನು ಪ್ರಚಾರಕ್ಕೆ ಬೇಕಾದಷ್ಟು ಬಳಸಿ ಮುಗಿದ ನಂತರ ‘ಸೇನೆಯನ್ನು ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ’ ಎಂದು ಚುನಾವಣಾ ಆಯೋಗ ಶನಿವಾರ ಸಂಜೆ ಪ್ರಕಟಣೆ ಹೊರಡಿಸಿದೆ.