samachara
www.samachara.com
ಚುನಾವಣಾ ಆಯೋಗದ ‘ಹಂತಗಳ’ ಲೆಕ್ಕಾಚಾರ; ಬಿಜೆಪಿ ಪಾಲಿಗೆ ಲಾಭ ಮಾಡಿಕೊಡುತ್ತಾ? 
ದೇಶ

ಚುನಾವಣಾ ಆಯೋಗದ ‘ಹಂತಗಳ’ ಲೆಕ್ಕಾಚಾರ; ಬಿಜೆಪಿ ಪಾಲಿಗೆ ಲಾಭ ಮಾಡಿಕೊಡುತ್ತಾ? 

2014ರಲ್ಲಿ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು, ಹೀಗಿರುವಾಗ ಈ ಬಾರಿ ಎರಡು ಹಂತ ಯಾಕೆ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಶ್ನಿಸಿದಾಗ ಮತ್ತದೇ ‘ಭದ್ರತಾ ಪಡೆಗಳ ಚಲನೆ’ಯ ಕಾರಣವನ್ನು ಸುನಿಲ್‌ ಅರೋರಾ ನೀಡಿದ್ದಾರೆ.

ಬಹುನಿರೀಕ್ಷಿತ 2019ರ ಲೋಕಸಭೆ ಚುನಾವಣೆಗೆ ದಿನ ನಿಗದಿಯಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಭದ್ರತಾ ಪಡೆಗಳ ಚಲನೆಯನ್ನು ಆಧರಿಸಿ ಮತದಾನದ ದಿನವನ್ನು ನಿಗದಿ ಮಾಡಲಾಗಿದೆ ಎಂಬುದಾಗಿ ಚುನಾವಣಾ ಆಯೋಗ ಹೇಳಿದೆ. ಆದರೆ ಮತದಾನದ ದಿನಗಳ ನಡುವಿನ ಅಂತರವನ್ನು ಬಿಜೆಪಿ ಸಂಭ್ರಮದಿಂದ ಬರಮಾಡಿಕೊಂಡಿರುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ.

ಒಟ್ಟು 7 ಹಂತಗಳಲ್ಲಿ ನಡೆಯಲಿರುವ ಚುನಾವಣೆಯನ್ನು ಬಿಡಿಸಿ ನೋಡಿದಾಗ ಬಿಜೆಪಿಯ ರಣತಂತ್ರಗಳಿಗೆ ಜಾಗವಿರುವಲ್ಲಿ ಹೆಚ್ಚಿನ ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದನ್ನು ಗಮನಿಸಬಹುದು. ಉದಾಹರಣೆಗೆ ಈ ಬಾರಿ ಬಿಜೆಪಿಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ಅತೀ ಮುಖ್ಯ ರಾಜ್ಯಗಳಾಗಿವೆ. ಭದ್ರ ನೆಲೆಗಳಲ್ಲಿ ಕಳೆದುಕೊಳ್ಳುವ ಸ್ಥಾನಗಳನ್ನು ಇಲ್ಲಿ ಭರ್ತಿ ಮಾಡಲು ಬಿಜೆಪಿ ತಂತ್ರ ಹೆಣೆದಿದೆ.

ಇದಕ್ಕೆ ಸಹಾಯಕವಾಗುವಂತೆ ಇಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಕೇವಲ 21 ಸ್ಥಾನಗಳಿರುವ ಒಡಿಶಾದಲ್ಲಿ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 2014ರಲ್ಲಿ ಇಲ್ಲಿ ಎರಡೇ ಹಂತಗಳಲ್ಲಿ ಚುನಾವಣೆ ಮುಗಿದು ಹೋಗಿತ್ತು. ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದು ಬಿಜೆಪಿ ಲಾಭವಾಗಲಿದೆ ಎಂಬುದಾಗಿ ಕಮಲ ಪಕ್ಷದ ನಾಯಕರು ಹೇಳಿದ್ದಾಗಿ ‘ದಿ ಟೆಲಿಗ್ರಾಫ್‌’ ವರದಿ ಮಾಡಿದೆ. "ಸಮಯದ ಅಂತರದಿಂದಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಮ್ಮ ಕಾರ್ಯಕರ್ತರನ್ನು ಕಳುಹಿಸಲು ಸಾಧ್ಯವಾಗುತ್ತದೆ. ಪ್ರಮುಖ ಪ್ರಚಾರಕ ನರೇಂದ್ರ ಮೋದಿಯಿಂದ ಹೆಚ್ಚಿನ ಪ್ರಚಾರ ಮಾಡಿಸಬಹುದು,” ಎಂಬುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಎಲ್ಲಾ ಪ್ರಶ್ನೆಗೂ ಒಂದೇ ಉತ್ತರ ಭದ್ರತಾ ಪಡೆಗಳ ಚಲನೆ!

ಒಡಿಶಾದಲ್ಲಿ ನಾಲ್ಕು ಹಂತಗಳಲ್ಲಿ ಚುನಾವಣೆ ಯಾಕೆ ಎಂಬ ಪ್ರಶ್ನೆ ಭಾನುವಾರ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಅವರಿಗೆ ಕೇಳಲಾಯಿತು. ಅದಕ್ಕವರು, "ಎಲ್ಲವೂ ಭದ್ರತಾ ಪಡೆಗಳ ಚಲನೆಯನ್ನು ಅವಲಂಬಿಸಿದೆ. ಇದಕ್ಕೆ ತಕ್ಕಂತೆ ಹಂತಗಳನ್ನು ನಿರ್ಧರಿಸಲಾಗಿದೆ," ಎಂದು ಉತ್ತರಿಸಿದರು.

ಇದೇ ವೇಳೆ 42 ರಲ್ಲಿ 23 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಘೋಷಿಸಿರುವ ಪಶ್ಚಿಮ ಬಂಗಾಳದಲ್ಲಿಯೂ ಬರೋಬ್ಬರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ವಿಚಿತ್ರವೆಂದರೆ ಕಳೆದ ಬಾರಿ 9 ಹಂತಗಳಲ್ಲಿ ಚುನಾವಣೆ ನಡೆದಾಗಲೂ ಬಂಗಾಳದಲ್ಲಿ ಐದೇ ಹಂತಗಳಲ್ಲಿ ಮತದಾನ ಮುಗಿದಿತ್ತು.

"ಬಂಗಾಳದಲ್ಲಿ ಈ ಬಾರಿ ಮೋದಿ ಅತೀ ಹೆಚ್ಚಿನ ರ್ಯಾಲಿಗಳನ್ನು ನಡೆಸಲಿದ್ದಾರೆ. ಪಕ್ಷಕ್ಕೆ ರಾಜ್ಯದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಮೋದಿ ರ್ಯಾಲಿಗಳು ರಾಜ್ಯದಲ್ಲಿ ಅಲೆಯನ್ನು ಸೃಷ್ಟಿಸಲಿದೆ," ಎಂಬುದಾಗಿ ಬಿಜೆಪಿ ನಾಯಕರೊಬ್ಬರು ‘ದಿ ಟೆಲಿಗ್ರಾಫ್‌’ಗೆ ತಿಳಿಸಿದ್ದಾರೆ.

ಇದೇ ವೇಳೆ ಕರ್ನಾಟಕದಲ್ಲಿಯೂ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದು ಎಲ್ಲರ ಹುಬ್ಬೇರಿಸಿದೆ. ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ, ಅದರಲ್ಲೂ 39 ಸ್ಥಾನಗಳಿರುವ ತಮಿಳುನಾಡಿನಲ್ಲಿಯೂ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವಾಗ ಕರ್ನಾಟಕದಲ್ಲಿ ಮಾತ್ರ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

2014ರಲ್ಲಿ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು, ಹೀಗಿರುವಾಗ ಈ ಬಾರಿ ಎರಡು ಹಂತ ಯಾಕೆ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಶ್ನಿಸಿದಾಗ ಮತ್ತದೇ ‘ಭದ್ರತಾ ಪಡೆಗಳ ಚಲನೆ’ಯ ಕಾರಣವನ್ನು ಸುನಿಲ್‌ ಅರೋರಾ ನೀಡಿದ್ದಾರೆ.

ಅಂದಹಾಗೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವ ಏಕೈಕ ರಾಜ್ಯ ಕರ್ನಾಟಕ ಮಾತ್ರ. ಕರ್ನಾಟಕದಲ್ಲಿ ನರೇಂದ್ರ ಮೋದಿ ಹೆಚ್ಚಿನ ರ್ಯಾಲಿಗಳನ್ನು ನಡೆಸಿದರೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂಬುದು ಇಲ್ಲಿನ ಸ್ಥಳೀಯ ಬಿಜೆಪಿಗರ ಲೆಕ್ಕಾಚಾರವಾಗಿದೆ. ಅದಕ್ಕೆ ಪೂರಕವಾಗಿ ಚುನಾವಣೆಯ ದಿನಾಂಕಗಳೂ ಘೋಷಣೆಯಾಗಿವೆ.

ಇದಿಷ್ಟೇ ಅಲ್ಲ: ಬಿಜೆಪಿಗೆ ಅಪಾರ ನಿರೀಕ್ಷೆ ಇರುವ ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಮೂರು ಹಂತದಲ್ಲಿ ಮತದಾನ ನಡೆದಿತ್ತು. ಇಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿಕೂಟವನ್ನು ಎದುರಿಸಲು ರಾಜ್ಯದಾದ್ಯಂತ ಓಡಾಡುವ ಸವಾಲು ಪ್ರಧಾನಿ ನರೇಂದ್ರ ಮೋದಿ ಮುಂದಿದೆ.

ಇದೇ ವೇಳೆ ಬಿಜೆಪಿಯ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಾಕ್ಷಿಯಾಗಲಿರುವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿಯೂ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. 2014ರಲ್ಲಿ ಈ ಎರಡೂ ರಾಜ್ಯಗಳಲ್ಲಿ 6 ಹಂತಗಳಲ್ಲಿ ಚುನಾವಣೆ ಮುಗಿದಿತ್ತು.

ಆಯೋಗದ ಇಂತಹದ್ದೊಂದು ಅಚ್ಚರಿಯ ತೀರ್ಮಾನವನ್ನು ರಾಜಕಾರಣಿ ಯೋಗೇಂದ್ರ ಯಾದವ್‌ ಪ್ರಶ್ನಿಸಿದ್ದು, ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಿದ್ದಾರೆ.

“ಚುನಾವಣಾ ಆಯೋಗಕ್ಕೆ ಕೆಲವು ಪ್ರಶ್ನೆ (ಆರೋಪಗಳಲ್ಲ) ಗಳನ್ನು ಕೇಳಬೇಕಾಗಿದೆ: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಒಂದು ಹಂತವಿರುವಾಗ ಒಡಿಶಾದಲ್ಲಿ ಯಾಕೆ 4 ಹಂತ? ಪಶ್ಚಿಮ ಬಂಗಾಳದಲ್ಲಿ 7 ಹಂತಕ್ಕೆ ಚುನಾವಣೆಯನ್ನು ವಿಸ್ತರಿಸಿದ್ದು ಯಾಕೆ? ಮಧ್ಯ ಪ್ರದೇಶದಲ್ಲಿ ರಾಜ್ಯ ಚುನಾವಣೆ ಒಂದು ದಿನದಲ್ಲಿ ಮುಗಿಯುವಾಗ ಲೋಕಸಭೆ ಚುನಾವಣೆಗೆ ಯಾಕೆ ನಾಲ್ಕು ಹಂತ? ಹಿಮ ಬೀಳುವ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಬೇರೆ ಬೇರೆ ಹಂತದಲ್ಲಿ ಚುನಾವಣೆ ಯಾಕೆ? ಮಹರಾಷ್ಟ್ರ ಚುನಾವಣೆಯನ್ನು ಯಾಕೆ ನಾಲ್ಕು ಹಂತಗಳಿಗೆ ವಿಸ್ತರಿಸಲಾಯಿತು? ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಯಾಕೆ ಬೇರೆ ಬೇರೆ?” ಎಂದವರು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗವೇ ಉತ್ತರ ನೀಡಬೇಕಿದೆ. ಎಂದಿನಂತೆ ಎಲ್ಲಾ ಪ್ರಶ್ನೆಗಳಿಗೂ ಭದ್ರತಾ ಪಡೆಗಳ ಚಲನೆಯ ಕಾರಣವನ್ನು ಮುಂದಿಟ್ಟರೆ ಸಾಲುವುದಿಲ್ಲ. ಕಾರಣ, ಕರ್ನಾಟಕದಂತ ರಾಜ್ಯದಲ್ಲಿ ಹಿಂಸಾತ್ಮಕ ಚುನಾವಣೆ ನಡೆದ ಇತಿಹಾಸವೇ ಇಲ್ಲ. ಹೀಗಿರುವಾಗ ಎರಡು ಹಂತಗಳನ್ನು ಭದ್ರತಾ ಕಾರಣಗಳಿಗೆ ಸಮರ್ಥಿಸಿಕೊಳ್ಳುವುದು ಕನಿಷ್ಟ ನಮ್ಮ ರಾಜ್ಯದಲ್ಲಿ ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ.

ಚಿತ್ರ ಕೃಪೆ: ದಿ ಪ್ರಿಂಟ್‌