samachara
www.samachara.com
ರಾಜ ರಹಸ್ಯ, ಫೈಲ್‌ ಕಳ್ಳತನ & ಅಂಬಾನಿ: ಬೋಫೋರ್ಸ್ ಮತ್ತು ರಫೇಲ್‌ ನಡುವೆ ಅದೆಷ್ಟು ಸಾಮ್ಯತೆ?
ದೇಶ

ರಾಜ ರಹಸ್ಯ, ಫೈಲ್‌ ಕಳ್ಳತನ & ಅಂಬಾನಿ: ಬೋಫೋರ್ಸ್ ಮತ್ತು ರಫೇಲ್‌ ನಡುವೆ ಅದೆಷ್ಟು ಸಾಮ್ಯತೆ?

ಅಂದಹಾಗೆ ಇದು ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ‘ಪಾಲಿಸ್ಟರ್ ಪ್ರಿನ್ಸ್‌’ ಎಂಬ ಪುಸ್ತಕದ ಒಂದು ಅಧ್ಯಾಯ. ನಿಮ್ಮ ಓದಿಗಾಗಿ ‘ಸಮಾಚಾರ’ ಇಲ್ಲಿ ನೀಡುತ್ತಿದೆ.

ಇವತ್ತು ಭಾರತದ ರಾಜಕಾರಣದ ನಟ್ಟ ನಡುವೆ ರಫೇಲ್ ಡೀಲ್ ಸದ್ದು ಮಾಡುತ್ತಿದೆ. ಮಾಧ್ಯಮವೊಂದರ ತನಿಖಾ ವರದಿ, ಫೈಲ್ ಕಳ್ಳತನ, ಉದ್ಯಮಿಪತಿಗಳ ಪಾಖಂಡಿ ಆಟಗಳಿಗೆ ದೇಶ ಸಾಕ್ಷಿಯಾಗುತ್ತಿದೆ. ರಫೇಲ್ ಡೀಲ್ ಸುತ್ತ ನಡೆಯುತ್ತಿರುವ ವಿದ್ಯಮಾನಗಳ ಪಡಿಯಚ್ಚಿನಂತಹ ಘಟನಾವಳಿಗಳನ್ನು ಈ ದೇಶ ಹಿಂದೆಯೂ ನೋಡಿತ್ತು. ವ್ಯತ್ಯಾಸ ಇಷ್ಟೆ, ಅವತ್ತು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಯಮಿಪತಿಗಳ ಜಾಗದಲ್ಲಿ ಸೀನಿಯರ್ ಅಂಬಾನಿ ಇದ್ದರು. ‘ದಿ ಹಿಂದೂ’ ಜಾಗದಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಇತ್ತು.

ಭಾರತದ ಭವಿಷ್ಯದ ಕುರಿತು ಪ್ರಾಮಾಣಿಕ ಕಾಳಜಿ ಇರುವುದೇ ಆದರೆ ಮೊದಲು ಇತಿಹಾಸ ದಾಖಲಿಸಿದ ಈ ಕಹಿ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅಂದಹಾಗೆ ಇದು ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ‘ಪಾಲಿಸ್ಟರ್ ಪ್ರಿನ್ಸ್‌’ ಎಂಬ ಪುಸ್ತಕದ ಒಂದು ಅಧ್ಯಾಯ. ನಿಮ್ಮ ಓದಿಗಾಗಿ ‘ಸಮಾಚಾರ’ ಇಲ್ಲಿ ನೀಡುತ್ತಿದೆ.

ಹಮೀಶ್‌ ಮೆಕ್‌ಡೊನಾಲ್ಡ್‌ ಬರೆದ ಪುಸ್ತಕ ‘ಪಾಲಿಸ್ಟರ್‌ ಪ್ರಿನ್ಸ್‌’.
ಹಮೀಶ್‌ ಮೆಕ್‌ಡೊನಾಲ್ಡ್‌ ಬರೆದ ಪುಸ್ತಕ ‘ಪಾಲಿಸ್ಟರ್‌ ಪ್ರಿನ್ಸ್‌’.

1985ರಲ್ಲಿ ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ಬಹುಮತದೊಂದಿಗೆ ನವದೆಹಲಿಯಲ್ಲಿ ರಾಜೀವ್‌ ಗಾಂಧಿ ಸರಕಾರ ಸ್ಥಾಪನೆಯಾಯಿತು. ಅಂದಿನಿಂದ ದೆಹಲಿಯ ಬಾಗಿಲು ಧೀರೂಭಾಯಿ ಅಂಬಾನಿ ಎಂಬ ಮುಂಬೈನ ಉದ್ಯಮಿ ಪಾಲಿಗೆ ಮುಚ್ಚಿಕೊಂಡಿತು.

ಆದರೆ ಅಂಬಾನಿ ಮಹತ್ವಾಕಾಂಕ್ಷಿ. ಆತನಿಗೆ ತನ್ನ ಉದ್ಯಮ ಸಾಮ್ರಾಜ್ಯದ ವಿಸ್ತರಣೆಗೆ ಆದಷ್ಟು ಬೇಗ ಈ ಬಾಗಿಲು ತೆರೆಯಲೇಬೇಕಿತ್ತು. ಹೀಗಾಗಿ ಕೀಲಿ ಕೈಗೆ ಹುಡುಕಾಡುತ್ತಿದ್ದರು. ಅತೀ ದೊಡ್ಡ ಕೀಲಿ ಕೈ ರಾಜೀವ್‌ ಗಾಂಧಿ ಎಂಬುದೂ ಅವರಿಗೆ ಗೊತ್ತಿತ್ತು. ಹಾಗಂತ ಆಪ್ತ ವಲಯಕ್ಕೆ ಲಗ್ಗೆ ಇಡುವ ದಾರಿಗಳು ಕಾಣಿಸುತ್ತಿರಲಿಲ್ಲ. ಜತೆಗೆ ರಾಜೀವ್‌ ಗಾಂಧಿಗೆ, ಲೈಸನ್ಸ್‌ ರಾಜ್‌ ಮತ್ತು ಕಾಂಗ್ರೆಸ್‌ನ ತಪ್ಪುಗಳಿಗೆ ಇದೇ ಅಂಬಾನಿ ಕಾರಣ ಎಂಬ ಪೂರ್ವಾಗ್ರಹಗಳಿದ್ದವು.

ಇದೇ ಹೊತ್ತಿನಲ್ಲಿ ದೆಹಲಿ ರಾಜಕಾರಣದಲ್ಲಿ ಮಿಂಚಿನ ಬೆಳವಣಿಗೆಗಳು ನಡೆದವು. ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ವಿ. ಪಿ. ಸಿಂಗ್‌ 1985ರ ಏಪ್ರಿಲ್‌ನಲ್ಲಿ ದೊಡ್ಡ ದೊಡ್ಡ ಉದ್ಯಮಗಳ ಮೇಲೆ ದಾಳಿ ನಡೆಸಿದರು. ಇದಾದ ಬಳಿಕ ಏಪ್ರಿಲ್‌ 1986ರ ಹೊತ್ತಿಗೆ ಕಾಂಗ್ರೆಸ್‌ ಪಕ್ಷದಲ್ಲೊಂದು ಆಂತರಿಕ ಬಂಡಾಯ ಆರಂಭವಾಗಿತ್ತು. ಈ ಬಂಡಾಯದ ಫಲವಾಗಿ ಅಂಬಾನಿಗೆ ಆಪ್ತರಾಗಿದ್ದ ಪ್ರಣಬ್‌ ಮುಖರ್ಜಿಯನ್ನು ಪಕ್ಷದಿಂದ ಹೊರ ಹಾಕಲಾಯಿತು. ಇನ್ನೋರ್ವ ಆಪ್ತ ರಾಜೀವ್‌ ಸಂಬಂಧಿ ಅರುಣ್‌ ನೆಹರೂವನ್ನು ಸಂಪುಟದಿಂದ ಕೈ ಬಿಡಲಾಯಿತು. ಈಗ ಅಂಬಾನಿ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡರು.

ಕೊನೆಗೆ ಸೆಪ್ಟೆಂಬರ್‌ ಆರಂಭದ ಅದೊಂದು ದಿನ ಧೀರೂಭಾಯಿ ಅಂಬಾನಿ-ರಾಜೀವ್‌ ಗಾಂಧಿ ಭೇಟಿಯಾದರು. ಅದು ಅವರಿಬ್ಬರ ಮೊದಲ ಭೇಟಿಯಾಗಿತ್ತು. ಮೂಲಗಳ ಪ್ರಕಾರ, ‘ತಮ್ಮ ತಾಯಿ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವಿದೆ. ಅದನ್ನು ಏನು ಮಾಡುವುದೆಂದು ಅರ್ಥವಾಗುತ್ತಿಲ್ಲ,’ ಎಂಬ ತಮ್ಮ ಎಂದಿನ ದಾಟಿಯಲ್ಲಿ ಮಾತು ಆರಂಭಿಸಿದರು ಅಂಬಾನಿ. ಹೀಗೊಂದು ಮಾತಿನ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಹಣ ನೀಡುವ ಪರೋಕ್ಷ ಪ್ರಸ್ತಾವನೆಯನ್ನು ಅವರು ಅಂದು ತೇಲಿ ಬಿಟ್ಟಿದ್ದರು. ಈ ಭೇಟಿ ಆಯೋಜಿಸಿದವರು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌.

ಆಪ್ತ ಗೆಳೆಯರು; ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌ ಮತ್ತು ರಾಜೀವ್‌ ಗಾಂಧಿ.
ಆಪ್ತ ಗೆಳೆಯರು; ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌ ಮತ್ತು ರಾಜೀವ್‌ ಗಾಂಧಿ.
/ಅಮರ್‌ ಉಜಾಲ

ಗೋಯೆಂಕಾ-ಅಂಬಾನಿ ವೈಷಮ್ಯ:

ಇದರ ನಡುವೆ ಒಂದು ಘಟನೆ ನಡೆಯಿತು. ‘ಇಂಡಿಯನ್‌ ಎಕ್ಸ್‌ಪ್ರೆಸ್’ ಪತ್ರಿಕೆಯ ಮಾಲಿಕ ರಾಮನಾಥ್‌ ಗೊಯೆಂಕಾ ವಾಡಿಯಾ ಗ್ರೂಪ್‌ನ ನುಸ್ಲಿ ವಾಡಿಯಾ ಜತೆಗೆ ಚೆನ್ನಾಗಿದ್ದರು. ಅದೇ ಕಾರಣಕ್ಕೆ ರಿಲಯನ್ಸ್‌ ಸಂಸ್ಥೆಯನ್ನು ಎದುರು ಹಾಕಿಕೊಂಡಿದ್ದರು. ಅದೇನೇನೋ ಘಟನೆಗಳು ನಡೆದು ಅಗಾಧ ಸಿಟ್ಟಿನಲ್ಲಿ ಅವರು ರಿಲಯನ್ಸ್‌ ವಿರುದ್ಧ ಮುಗಿಬೀಳಲೇಬೇಕು ಎಂದು ತೀರ್ಮಾನಿಸಿದ್ದರು. ಅದಕ್ಕಾಗಿ ರಿಲಯನ್ಸ್‌ ವಿರುದ್ಧ ತನಿಖಾ ವರದಿಯನ್ನು ಬರೆಸುವುದು ಎಂಬ ನಿರ್ಧಾರಕ್ಕೆ ಬಂದರು.

ಸಾಮಾನ್ಯವಾಗಿ ತನಿಖಾ ವರದಿಗಳನ್ನು ಬರೆಸಲು ಸಂಪಾದಕರು, ಹಿರಿಯ ವರದಿಗಾರರನ್ನು ನೆಚ್ಚಿಕೊಂಡರೆ ಗೋಯೆಂಕಾ ಚೆನ್ನೈ ಮೂಲದ 36 ವರ್ಷ ವಯಸ್ಸಿನ ಲೆಕ್ಕ ಪರಿಶೋಧಕ ಎಸ್‌. ಗುರುಮೂರ್ತಿ (ಚಿನ್ನದ ರಸ್ತೆ ಖ್ಯಾತಿಯ ಹಾಲಿ ಆರ್‌ಬಿಐ ನಿರ್ದೇಶಕರು) ಯವರನ್ನು ಆಯ್ಕೆ ಮಾಡಿಕೊಂಡರು. ಅವರ ಕೈಯಲ್ಲಿ ಸರಣಿ ಲೇಖನಗಳನ್ನು ತಮ್ಮ ಪತ್ರಿಕೆಯಲ್ಲಿ ಬರೆಸಿದ್ದರು.

1986ರ ಡಿಸೆಂಬರ್‌ 2ರಂದು ರಾಜ್ಯಸಭೆಯಲ್ಲಿ ಗುರುಮೂರ್ತಿ ಲೇಖನಗಳು ಪ್ರಸ್ತಾಪವಾದವು.

ಗುರುಮೂರ್ತಿ ಬರೆದಿದ್ದ ಲೇಖನಗಳು ಸ್ಫೋಟಕ ಮಾಹಿತಿಗಳನ್ನೂ, ಕರಾರುವಕ್ಕಾದ ಅಂಶಗಳನ್ನು ಒಳಗೊಂಡಿದ್ದರಿಂದ, ಅವರಿಗೆ ಸರಕಾರದ ಗೌಪ್ಯ ದಾಖಲೆಗಳ ಮೇಲೆ ಕಣ್ಣಾಡಿಸಲು ಅವಕಾಶ ನೀಡಲಾಗಿದೆಯೇ ಎಂಬ ಬಗ್ಗೆ ಸಿಬಿಐ ಪರಿಶೀಲನೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಕಿರಿಯ ಸಚಿವರೊಬ್ಬರು ನೀಡಿದರು.

ಗುರುಮೂರ್ತಿ ಬಂಧನ:

ಮುಂದೆ ಡಿಸೆಂಬರ್‌ 11ರಂದು ತಾಂತ್ರಿಕ ಇಲಾಖೆಯ ಮಹಾ ನಿರ್ದೇಶಕರು (ಡಿಜಿಟಿಡಿ) ಅಧಿಕೃತ ದೂರು ದಾಖಲಿಸಿದ ನಂತರ ಸಿಬಿಐ ಪೂರ್ಣ ಪ್ರಮಾಣದಲ್ಲಿ ಇದರ ತನಿಖೆಗೆ ಇಳಿಯಿತು. ಸರಿಯಾಗಿ 10 ದಿನದ ನಂತರ ಅಂದರೆ ಡಿಸೆಂಬರ್‌ 21ರಂದು ಮದ್ರಾಸ್‌ನಲ್ಲಿದ್ದ ಗುರುಮೂರ್ತಿ ಮನೆ, ಕಚೇರಿಗಳ ಮೇಲೆ ದಾಳಿ ನಡೆಯಿತು. ದಾಳಿ ಮುಗಿಸಿ ಹೊರ ಬಂದಾಗ ರಾಶಿ ರಾಶಿ ದಾಖಲೆಗಳು ಸಿಬಿಐ ಕೈಯಲ್ಲಿದ್ದವು.

ಈ ಘಟನೆ ಒಂದು ಕಡೆಯಾದರೆ ನಂತರದಲ್ಲಿ ಇನ್ನೊಂದು ಘಟನೆ ನಡೆಯಿತು. ಅದು ಮಾರ್ಚ್‌ 10 ಅಥವಾ 11 ಇರಬೇಕು. ರಾಜೀವ್‌ ಗಾಂಧಿಗೆ ಅಕ್ಷರಶಃ ಎರಡು ಸ್ಫೋಟಕ ಪತ್ರಗಳನ್ನು ತೋರಿಸಲಾಯಿತು. ತೋರಿಸಿದವರು ಹಿರಿಯ ಅಧಿಕಾರಿ ಗೋಪಿ ಅರೋರ. ಎರಡೂ ಪತ್ರಗಳು ‘ಫೇರ್‌ಫ್ಯಾಕ್ಸ್‌ ಗ್ರೂಪ್‌’ ಲೆಟರ್‌ ಹೆಡ್‌ನಲ್ಲಿದ್ದವು. ಒಂದು ಪತ್ರವನ್ನು 1986ರ ನವೆಂಬರ್‌ 26ರಂದು ಬರೆಯಲಾಗಿತ್ತು. ಆ ಪತ್ರದಲ್ಲಿ ಇಡಿ ನಿರ್ದೇಶಕ ಭುರೆ ಲಾಲ್‌, ಗೋಯೆಂಕಾ, ವಾಡಿಯಾ, ಸಂಪುಟ ಕಾರ್ಯದರ್ಶಿ ವಿನೋದ್‌ ಪಾಂಡೆ ಮತ್ತು ಗುರುಮೂರ್ತಿ ನಡುವಿನ ಸಭೆಯ ಉಲ್ಲೇಖವಿತ್ತು. ಒಂದಷ್ಟು ಹಣದ ವಹಿವಾಟು, ಅಮಿತಾಬ್‌ ಬಚ್ಚನ್‌ ಸಹೋದರನ ವಿದೇಶಿ ಉದ್ಯಮಗಳ ಬಗ್ಗೆ ಉಲ್ಲೇಖವಿತ್ತು.

ರಾಜೀವ್‌ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ. ಸಿಂಗ್.
ರಾಜೀವ್‌ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ. ಸಿಂಗ್.
/ವೆಬ್‌ ಇಂಡಿಯಾ

ಒಟ್ಟಾರೆ ವಿ. ಪಿ. ಸಿಂಗ್‌ ನೇತೃತ್ವದಲ್ಲಿ ರಾಜೀವ್‌ ಗಾಂಧಿ ಸರಕಾರ ಉರುಳಿಸಲು ಸಂಚೊಂದು ಸಿದ್ಧವಾಗಿತ್ತು. ಗಾಂಧಿಗೂ ಬಚ್ಚನ್‌ಗೂ ಇದ್ದ ಸಂಬಂಧದ ಎಳೆಯೊಂದನ್ನು ಇದಕ್ಕೆ ಬಳಸಿಕೊಳ್ಳಲು ಈ ಗ್ಯಾಂಗ್‌ ಹೊರಟಿತ್ತು ಎಂಬುದನ್ನು ಈ ಪತ್ರ ಹೇಳುತ್ತಿತ್ತು. ಅದಕ್ಕಾಗಿ ತಮ್ಮ ಸಚಿವಾಲಯದ ಅಧಿಕಾರಿಗಳನ್ನೇ ಅವರು ಬಳಸಿಕೊಂಡಿದ್ದರು. ವಿಚಿತ್ರವೆಂದರೆ ಇವರ ಮೇಲೆ ಅಂಬಾನಿಯ ಹುಡುಗರು ಕಣ್ಣಿಟ್ಟಿದ್ದರು. ಪರಿಣಾಮ ಈ ಪತ್ರ ಸೃಷ್ಟಿಯಾಯಿತು.

ಪತ್ರ ಕಂಡು ಬೆಚ್ಚಿ ಬಿದ್ದ ರಾಜೀವ್‌ ಗಾಂಧಿ ಅದನ್ನು ಸಿಬಿಐ ಅಧಿಕಾರಿಗಳ ಕೈಗೆ ಹಸ್ತಾಂತರಿಸಿದರು. ಈ ಹಿಂದಿನ ಪ್ರಕರಣದ ಜತೆ ಸಿಬಿಐ ಇದನ್ನೂ ಸೇರಿಸಿಕೊಂಡು ತನಿಖೆಗೆ ಇಳಿಯಿತು. ಈ ಹಿಂದೆ ಡಿಜಿಟಿಡಿ ಸಲ್ಲಿಸಿದ್ದ ದೂರಿನಲ್ಲಿ ಒಂದು ವಿಶೇಷ ವಿಚಾರವನ್ನು ಪ್ರಸ್ತಾಪಿಸಿತ್ತು.

1986ರ ಜುಲೈನಲ್ಲಿ ಎರಡು ವಾರಗಳ ಕಾಲ ರಿಲಯನ್ಸ್‌ಗೆ ಸಂಬಂಧಿಸಿದ ದಾಖಲೆಗಳು ನಾಪತ್ತೆಯಾಗಿದ್ದವು, ನಂತರ ಯಾವುದೋ ಟೇಬಲ್‌ ಮೇಲೆ ಜುಲೈ 25ರಂದು ಇವು ಮತ್ತೆ ಪ್ರತ್ಯಕ್ಷವಾಗಿದ್ದವು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅರ್ಥಾತ್‌ ಈ ಅವಧಿಯಲ್ಲಿ ಗುರುಮೂರ್ತಿ ಲೇಖನ ಬರೆದಿದ್ದರು, ಮತ್ತು ಅದನ್ನು ಆಗಸ್ಟ್‌ನಲ್ಲಿ ಪ್ರಕಟಿಸಿದ್ದರು ಎಂಬುದನ್ನು ಇದು ಹೇಳುತ್ತಿತ್ತು.

ಪ್ರಕರಣದಲ್ಲಿ ‘ಅಧಿಕೃತ ಗೌಪ್ಯತಾ ಕಾಯ್ದೆ (ರಾಜ ರಹಸ್ಯ ಕಾಯಿದೆ)’ಯನ್ನು ಜಾರಿಗೊಳಿಸಿ ಗುರುಮೂರ್ತಿ ಬೆಂಡೆತ್ತಲು ತನಿಖಾಧಿಕಾರಿಗಳಾಗಿದ್ದ ಯಶ್ವಂತ್‌ ಮಲ್ಹೋತ್ರಾ ಮತ್ತು ರಾಧಾಕೃಷ್ಣ ನಾಯರ್‌ ಸಿದ್ಧವಾಗಿದ್ದರು.

ಆದರೆ ಇಲ್ಲೊಂದು ಗೊಂದಲ ಸೃಷ್ಟಿಯಾಯಿತು. ಯಾವುದೋ ಉದ್ಯಮದ ಕರಾಳ ಕಥೆಯನ್ನು ಪತ್ರಿಕೆಯೊಂದರಲ್ಲಿ ಬೆತ್ತಲು ಮಾಡಿದವರ ಮೇಲೆ ದೂರು ದಾಖಲಿಸುವುದಾದರೂ ಹೇಗೆ? ಆಗ ಸಹಾಯಕ್ಕೆ ಬಂದಿದ್ದೇ ಫೇರ್‌ಫ್ಯಾಕ್ಸ್‌ನ ಪತ್ರ.

ವೈರಿಗೆ ಸರಕಾರದ ಮಾಹಿತಿಗಳನ್ನು ನೀಡಿದ ಗಂಭೀರ ಆರೋಪವನ್ನು ಗುರುಮೂರ್ತಿ ಮೇಲೆ ಹೊರಿಸಲಾಯಿತು. ಆಗ ಗುರುಮೂರ್ತಿ ವಿರುದ್ಧ ತನಿಖೆ ಇಳಿದವರಿಗೆ, ಅಕ್ರಮ ನಡೆಸಿದ ರಿಲಯನ್ಸ್‌ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಎದುರಾಯಿತು. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಸಿಬಿಐ ನಿರ್ದೇಶಕ ಮೋಹನ್‌ ಕತ್ರೆ, ತಮ್ಮ ತಂಡವನ್ನು ಸಜ್ಜುಗೊಳಿಸಿದರು.

ರಿಲಯನ್ಸ್‌ಗೆ ಸಂಬಂಧಿಸಿದ ತನಿಖೆಯ ಎಲ್ಲಾ ಕಡತಗಳನ್ನು ಜಾರಿ ನಿರ್ದೇಶನಾಲಯದಿಂದ ತರಿಸಿಕೊಂಡರು. ಮಾರ್ಚ್‌ 11ರಂದು ಭುರೆ ಲಾಲ್‌ರನ್ನು ಇಡಿಯಿಂದ ವರ್ಗ ಮಾಡಲಾಯಿತು. ವಿನೋದ್‌ ಪಾಂಡೆಗಿದ್ದ ಕಂದಾಯ ಕಾರ್ಯದರ್ಶಿ ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳಲಾಯಿತು. ಹೀಗೆ ವಿ.ಪಿ. ಸಿಂಗ್‌ ಜತೆ ಚೆನ್ನಾಗಿದ್ದ, ಅಂಬಾನಿಗೆ ಖೆಡ್ಡಾ ತೋಡಲು ಹೊರಟಿದ್ದ ಅಧಿಕಾರಿಗಳನ್ನೆಲ್ಲಾ ಕೆಲಸಕ್ಕೆ ಬರದ ಜಾಗಗಳಿಗೆ ವರ್ಗ ಮಾಡಿ ದೊಡ್ಡದೊಂದು ಕಾರ್ಯಾಚರಣೆಗೆ ರಾಜೀವ್‌ ಗಾಂಧಿ ಸರಕಾರ ಸಿದ್ದವಾಯಿತು.

ಅವತ್ತು ಮಾರ್ಚ್‌ 12. ವಿಮಾನದ ಮೂಲಕ ಮದ್ರಾಸ್‌ ಮತ್ತು ಬಾಂಬೆಗೆ ಬಂಧನ ಮತ್ತು ಸರ್ಚ್‌ ವಾರಂಟ್‌ಗಳು ತಲುಪಿದವು. ಮಧ್ಯ ರಾತ್ರಿ ಕಳೆಯುತ್ತಿದ್ದಂತೆ ಸಿಬಿಐ ತಂಡ ಗುರುಮೂರ್ತಿ ಮನೆ ಬಾಗಿಲು ಬಡಿಯಲು ಆರಂಭಿಸಿತು. ಆಗ ಗಂಟೆ 1.30.

ಕ್ರಿಮಿನಲ್‌ ಸಂಚು, ಅಧಿಕೃತ ಗೌಪ್ಯತಾ ಕಾಯ್ದೆಯ ಉಲ್ಲಂಘನೆ ಪ್ರಕರಣಗಳನ್ನು ಜಡಿದು ಗುರುಮೂರ್ತಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋದರು. ಒಂದು ಕಾರ್‌ ಪೂರ್ತಿ ತುಂಬುವಷ್ಟು ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು. ಬಾಂಬೆಯಲ್ಲಿ ಗುರುಮೂರ್ತಿ ಸಹಾಯಕ ಎ. ಎನ್‌. ಜಾನಕಿರಾಮನ್‌ ಕೂಡ ಬಂಧಿತರಾಗಿದ್ದರು.

1987ರ ಮಾರ್ಚ್‌ನಲ್ಲಿ ಬಂಧಿತರಾಗಿದ್ದ ಲೆಕ್ಕ ಪರಿಶೋಧಕ ಎಸ್‌. ಗುರುಮೂರ್ತಿ.
1987ರ ಮಾರ್ಚ್‌ನಲ್ಲಿ ಬಂಧಿತರಾಗಿದ್ದ ಲೆಕ್ಕ ಪರಿಶೋಧಕ ಎಸ್‌. ಗುರುಮೂರ್ತಿ.
/ಇಂಡಿಯಾ ಟುಡೇ

ಮರು ದಿನ ಮತ್ತೊಂದು ದಾಳಿ ನಡೆಯಿತು. ಈ ಬಾರಿ ಗುರುಮೂರ್ತಿ ಬಾಸ್‌ ಗೋಯೆಂಕಾ ದಾಳಿಗೆ ಗುರಿಯಾಗಿದ್ದರು. ಅವರು ಉಳಿದುಕೊಳ್ಳುತ್ತಿದ್ದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಗೆಸ್ಟ್‌ಹೌಸ್‌ಗೆ ನುಗ್ಗಿದ ಸಿಬಿಐ ಅಧಿಕಾರಿಗಳು ಇಡೀ ವಾತಾವರಣವನ್ನೇ ಚೆಲ್ಲಾಪಿಲ್ಲಿ ಮಾಡಿ ಹಾಕಿದರು. ಅಲ್ಲಿ ವಾಡಿಯಾ ಮತ್ತು ವಿವಾದಿತ ದೇವಮಾನವ ಚಂದ್ರಸ್ವಾಮಿ ಗೋಯೆಂಕಾ ಭೇಟಿಗಾಗಿ ನಿಂತಿದ್ದರು. ಇಬ್ಬರನ್ನೂ ಪರಿಶೀಲಿಸಿ ಹೊರಗೆ ಕಳುಹಿಸಲಾಯಿತು.

ಸಿಬಿಐ ಅಧಿಕಾರಿಗಳು ಹುಡುಕಾಟದಲ್ಲಿದ್ದರೆ, ಮಜಾ ತೆಗೆದುಕೊಳ್ಳಲು ಅತ್ತಲಿಂದ ಧೀರೂಭಾಯಿ ಅಂಬಾನಿ ಗೋಯೆಂಕಾಗೆ ಫೋನಾಯಿಸಿದ್ದರು. ರಿಸೀವರ್‌ ಎತ್ತಿಕೊಂಡ ಗೋಯೆಂಕಾಗೆ ‘ಏನಾದರೂ ಸಹಾಯಬೇಕಿತ್ತಾ ಹೇಳಿ. ಮಾಡಲು ನಾನು ಸಿದ್ಧವಾಗಿದ್ದದೇನೆ’ ಎಂದು ತಣ್ಣಗೆ ಉಸುರಿದ್ದರು ಅಂಬಾನಿ. ಸಿಟ್ಟಿನಲ್ಲಿ ಕುದ್ದು ಹೋದ ಗೋಯೆಂಕಾ ರೀಸಿವರ್‌ ಕುಕ್ಕಿ ಫೋನಿಟ್ಟರು.

ಇಷ್ಟೆಲ್ಲಾ ನಡೆದರೂ ಈ ವಿದೇಶಿ ಸಂಸ್ಥೆಯ ಪತ್ರಗಳ ವಿಚಾರವೆಲ್ಲಾ ಜನ ಸಾಮಾನ್ಯರಿಗೆ ತಿಳಿದಿರಲಿಲ್ಲ. ಆದರೆ ರಾಷ್ಟ್ರಪತಿ ಗ್ಯಾನಿ ಜೇಲ್‌ ಸಿಂಗ್‌ ಪ್ರಧಾನಿಗೆ ಕಟು ಶಬ್ದಗಳಲ್ಲಿ ಬರೆದ ಪತ್ರ ಅಂದೇ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಸ್ಫೋಟಕ ಸುದ್ದಿಯಾಗಿ ಪ್ರಕಟವಾಗಿತ್ತು. ಅಂಚೆ ಇಲಾಖೆಗೆ ಸಂಬಂಧಿಸಿದ ಒಂದು ಮಸೂದೆಗೆ ವಿರೋಧ ವ್ಯಕ್ತಪಡಿಸಿ ರಾಷ್ಟ್ರಪತಿಗಳು ಈ ಪತ್ರ ಬರೆದಿದ್ದರು. ‘ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದ ಪಂಜಾಬ್‌ ವಿಚಾರವಾಗಿ ಪ್ರಧಾನಿ ನನ್ನನ್ನು ಸಂಪರ್ಕಿಸಿಲ್ಲ. ರಾಷ್ಟ್ರಪತಿ ಕಚೇರಿಯನ್ನೇ ಅವರು ಪರಿಗಣಿಸುತ್ತಿಲ್ಲ’ ಎಂಬುದು ಜೇಲ್‌ ಸಿಂಗ್‌ ದೂರಾಗಿತ್ತು.

ಪತ್ರಿಕೆಗೆ ಆ ಪತ್ರ ಸಿಕ್ಕಿದ್ದರಲ್ಲೇನೂ ಆಶ್ಚರ್ಯವಿರಲಿಲ್ಲ. ಕಾರಣ ಇದರ ಕರಡನ್ನು ಗುರುಮೂರ್ತಿ ಬರೆದಿದ್ದರೆ, ಗೋಯೆಂಕಾ ಆಪ್ತ ಸಲಹೆಗಾರ ಎಸ್‌. ಮುಲ್ಗಾಂವ್ಕರ್‌ ಇಂಗ್ಲೀಷ್‌ ಭಾಷೆಯನ್ನು ತಿದ್ದಿ ಕಳುಹಿಸಿದ್ದರು. ಗೋಯೆಂಕಾ ಗೆಸ್ಟ್‌ಹೌಸ್‌ನಲ್ಲಿ ಸಿಬಿಐಗೆ ಕರಡು ಪತ್ರ ತಿದ್ದುಪಡಿ ಸಮೇತ ಸಿಕ್ಕಿತ್ತು.

ಅಷ್ಟೊತ್ತಿಗೆ ಗುರುಮೂರ್ತಿಯನ್ನು ಚೆನ್ನೈನಿಂದ ನವದೆಹಲಿಗೆ ಕರೆ ತರಲಾಗಿತ್ತು. 48 ಗಂಟೆಗಳ ಕಾಲ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ರುಬ್ಬಿ ಹಾಕಿದರು. ಅದೇ ವೇಳೆಗೆ ಇನ್ನೊಂದು ಬೆಳವಣಿಗೆ ನಡೆದು ಹೋಯಿತು. “ವಿದೇಶಿ ತನಿಖಾ ಸಂಸ್ಥೆಗಳ ಜತೆ ಗುರುಮೂರ್ತಿ ಮತ್ತವರ ಗ್ಯಾಂಗ್‌ ಸಂಪರ್ಕ ಹೊಂದಿದ್ದ ಖಚಿತ ಮಾಹಿತಿ ಮಾರ್ಚ್ 11ರಂದು ಸಿಕ್ಕಿತ್ತು. ಈ ಮೇರೆಗೆ ದಾಳಿ ನಡೆಸಿದೆವು,” ಎಂಬ ಪತ್ರಿಕಾ ಹೇಳಿಕೆಯನ್ನು ಸಿಬಿಐ ಬಿಡುಗಡೆ ಮಾಡಿತು.

ಅಲ್ಲಿವರೆಗೂ ಏನಾಗುತ್ತಿದೆ ಎಂಬುದರ ಸರಿಯಾದ ಚಿತ್ರಣ ಗೋಯೆಂಕಾಗೆ ಸಿಕ್ಕಿರಲಿಲ್ಲ. ಕೊನೆಗೆ ತಮಗೆ ಅನ್ನ ಮತ್ತು ಬಟ್ಟೆ ತಂದುಕೊಡುವವರ ಮೂಲಕ, ‘ಸರಕಾರಕ್ಕೆ ಕೆಲವು ಪ್ರಮುಖ ಪತ್ರಗಳು ಸಿಕ್ಕಿವೆ’ ಎಂಬ ಮಾಹಿತಿಯನ್ನು ಗುರುಮೂರ್ತಿ ಗೋಯೆಂಕಾಗೆ ತಲುಪಿಸಿದರು. ಅಷ್ಟೊತ್ತಿಗೆ ಗುರುಮೂರ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಫೇರ್‌ಫ್ಯಾಕ್ಸ್‌ಗೆ ಹಣ ನೀಡಿದ ಆರೋಪದ ಮೇಲೆ ಜೈಲಿಗೆ ತಳ್ಳಲಾಯಿತು.

ವಿಚಾರಣೆ ವೇಳೆ ಗುರುಮೂರ್ತಿ ಪರ ಅರುಣ್‌ ಜೇಟ್ಲಿ, ರಾಮ್‌ಜೇಠ್ಮಲಾನಿ ಹಾಜರಾದರು. ಫೇರ್‌ಫ್ಯಾಕ್ಸ್‌ ಜತೆ ಸಂಬಂಧ ಇರುವುದು ನಿಜ, ಆದರೆ ಪತ್ರಕರ್ತನಾಗಿ ಮಾಹಿತಿ ಮೂಲ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಬಿಟ್ಟರು ಗುರುಮೂರ್ತಿ. ಸಿಬಿಐಗೂ ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುವುದೇನೂ ಬೇಕಿರಲಿಲ್ಲ. ಒಟ್ಟಾರೆ ಹೆದರಿಸಿ ಎಕ್ಸ್‌ಪ್ರೆಸ್‌ ಬಾಯಿ ಮುಚ್ಚಿಸಬೇಕಿತ್ತು ಅಷ್ಟೇ.

ಕಿಡಿ ಹಚ್ಚಿದ ಸ್ಟೇಟ್ಸ್‌ಮನ್‌:

ಇದಾಗಿ ಮಾರ್ಚ್‌ 20ರಂದು ಫೇರ್‌ಫ್ಯಾಕ್‌ ಬರೆದಿದ್ದ ಪತ್ರ ಬೆಂಗಾಲಿ ಮೂಲದ ‘ದಿ ಸ್ಟೇಟ್ಸ್‌ಮನ್‌’ನಲ್ಲಿ ಪ್ರಕಟವಾಯಿತು. ಇದು ಗೋಯೆಂಕಾ ಮತ್ತು ಅವರ ಸಹಚರರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಹಾಕಿತು.

ಮಾಧ್ಯಮ ದಿಗ್ಗಜ ರಾಮನಾಥ್‌ ಗೋಯೆಂಕಾ.
ಮಾಧ್ಯಮ ದಿಗ್ಗಜ ರಾಮನಾಥ್‌ ಗೋಯೆಂಕಾ.
/ಕ್ಯಾರವಾನ್

ಕೊನೆಗೆ ಪತ್ರದಲ್ಲಿ ಉಲ್ಲೇಖವಾದ ದಿನಾಂಕದಂದು ನಾನು ಭಾರತದಲ್ಲಿ ಇರಲೇ ಇಲ್ಲ. ಅಂದು ಸಭೆ ನಡೆದೇ ಇಲ್ಲ ಎಂದು ಬಿಟ್ಟರು ಗೋಯೆಂಕಾ. ಪತ್ರವನ್ನು ನೋಡಿದರೆ ಅದನ್ನು ಫೇರ್‌ಫ್ಯಾಕ್ಸ್‌ ಮುಖ್ಯಸ್ಥರಾದ ಮೈಖಲ್‌ ಹರ್ಷಮನ್‌, ಉಪ ಮುಖ್ಯಸ್ಥ ಮೆಕ್‌ಕೇ ಬರೆದಂತೆ ಇರಲಿಲ್ಲ. ಅದು ಅಪ್ಪಟ ಭಾರತೀಯ ಆಂಗ್ಲಭಾಷೆಯಲ್ಲಿತ್ತು. ಹೀಗಾಗಿ ಇದು ತಮ್ಮ ಲೆಟರ್‌ ಹೆಡ್‌ ಕದ್ದು ಸೃಷ್ಟಿಸಿದ ನಕಲಿ ಪತ್ರ ಎಂದು ಅವರುಗಳು ಹೇಳಿದರು.

ಸಿಬಿಐ ದಾಖಲಿಸಿದ್ದ ಪ್ರಕರಣದ ತಳ ಅಲುಗಾಡಲು ಆರಂಭಿಸಿತು. ಹೀಗಾಗಿ ಮಾರ್ಚ್‌ 23ರಂದು ಗುರುಮೂರ್ತಿಗೆ ಜಾಮೀನು ಸಿಕ್ಕಿತು. ಜೈಲಿನಿಂದ ಬಿಡುಗಡೆಯೂ ನಡೆಯಿತು.

ಈ ಪ್ರಕರಣಗಳು ಕಾಂಗ್ರೆಸ್‌ ಪಕ್ಷದಲ್ಲಿ ಅಂತರಿಕ ಕ್ಷೋಭೆಯನ್ನು ಹುಟ್ಟುಹಾಕಿತು. ಹಿರಿ-ಕಿರಿ ನಾಯಕರೆಲ್ಲಾ ವಿ. ಪಿ. ಸಿಂಗ್‌ ಮೇಲೆ ಮುಗಿಬಿದ್ದರು. ಖಾಸಗಿ ಸಂಸ್ಥೆಗಳ ಜತೆ ಸೇರಿ ದೇಶದ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ್ದಾರೆ ಎಂಬುದು ಎಲ್ಲರ ಆಕ್ರೋಶವಾಗಿತ್ತು. ಕೊನಗೆ ವಿಧಿಯಿಲ್ಲದೆ ಇಬ್ಬರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ರಾಜೀವ್‌ ಗಾಂಧಿ ತನಿಖಾ ಆಯೋಗವನ್ನು ರಚಿಸಿದರು. ನ್ಯಾ. ಎಂ.ಪಿ. ಥಕ್ಕರ್‌ ಮತ್ತು ನ್ಯಾ. ಎಸ್‌. ನಟರಾಜನ್‌ ಆಯೋಗ ತನಿಖೆ ಆರಂಭಿಸಿತು.

ಅಲ್ಲಿಗೆ ವಿ. ಪಿ. ಸಿಂಗ್‌ ಮತ್ತು ರಾಜೀವ್‌ ಗಾಂಧಿ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಯಲಿಗೆ ಬಂತು.

ರಕ್ಷಣಾ ಇಲಾಖೆಗೆ ಬಂದ ವಿ.ಪಿ. ಸಿಂಗ್‌; ಹೊತ್ತಿಕೊಂಡ ಬೋಫೋರ್ಸ್‌ ಬೆಂಕಿ:

ಇದರ ನಡುವೆ ಒಂದು ಪ್ರಮುಖ ಬೆಳವಣಿಗೆ ಜರುಗಿ ಹೋಗಿತ್ತು. ರಾಜೀವ್‌ ಗಾಂಧಿ ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದ ನಂತರ ಗಡಿಯಲ್ಲಿ ಟ್ಯಾಂಕ್‌ಗಳನ್ನು ಹಿಡಿದುಕೊಂಡು ಪಾಕಿಸ್ತಾನ ಗುಟುರು ಹಾಕಲು ಆರಂಭಿಸಿತ್ತು. ಹೀಗಾಗಿ ಅನುಭವಿ ವಿ. ಪಿ. ಸಿಂಗ್‌ರನ್ನು ಅವರು ರಕ್ಷಣಾ ಇಲಾಖೆ ಸಚಿವರಾಗಿ ನೇಮಿಸಿದ್ದರು.

ಅವರು ರಕ್ಷಣಾ ಇಲಾಖೆಯನ್ನು ವಹಿಸಿಕೊಂಡ ನಂತರ ಜರ್ಮನಿಯಿಂದ ಸಬ್‌ಮೆರೀನ್‌ (ಜಲಾಂತರ್ಗಾಮಿ) ಯೊಂದನ್ನು ಖರೀದಿಸುವ ಸಂಬಂಧ ರಾಜೀವ್‌ ಗಾಂಧಿ ಜತೆ ಮನಸ್ತಾಪ ಉಂಟಾಯಿತು. ಏಜೆಂಟ್‌ಗಳಿಗೆ ಕಮಿಷನ್‌ ನೀಡುವ ಸಂಬಂಧ ಈ ತಿಕ್ಕಾಟ ಹುಟ್ಟಿಕೊಂಡಿತ್ತು.

ರಕ್ಷಣ ಇಲಾಖೆಯ ಎಲ್ಲಾ ಡೀಲ್‌ಗಳಲ್ಲಿ ಏಜೆಂಟ್‌ಗಳನ್ನು ರದ್ದು ಪಡಿಸಿ ರಾಜೀವ್‌ ಗಾಂಧಿ ಸರಕಾರ ಅಕ್ಟೋಬರ್‌ 1985ರಲ್ಲಿ ಆದೇಶ ಹೊರಡಿಸಿತ್ತು. ಇದಾದ ನಂತರ ಸಬ್‌ಮೆರೀನ್‌ ಖರೀದಿಯಲ್ಲಿ ಮಧ್ಯವರ್ತಿಗಳಿಗೆ ಹಣ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಾಗ ಏಜೆಂಟ್‌ಗಳ ಬಗ್ಗೆ ವರದಿ ನೀಡುವಂತೆ ಹಣಕಾಸು ಇಲಾಖೆಗೆ ವಿ. ಪಿ. ಸಿಂಗ್‌ ಸೂಚನೆ ನೀಡಿದರು. ಈ ವರದಿ ಬಂದು ಅದಕ್ಕೆ ತಮ್ಮ ಷರಾ ಹಾಕಿ ಲ್ಯೂಟೆನ್ಸ್‌ & ಬೇಕರ್‌ ವಿನ್ಯಾಸದ ಪ್ರಧಾನ ಮಂತ್ರಿ ಸಚಿವಾಲಯವನ್ನು ಏಪ್ರಿಲ್‌ 10ರಂದು ಸಿಂಗ್‌ ತಲುಪುವಷ್ಟರಲ್ಲಿ ಅದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

1980ರಲ್ಲಿ ಸಂಜಯ್‌ ಗಾಂಧಿ ಬದುಕಿದ್ದಾಗ ಈ ಜಲಾಂತರ್ಗಾಮಿ ಖರೀದಿಯ ಚರ್ಚೆ ಆರಂಭಗೊಂಡಿತ್ತು. ಹೀಗೊಂದು ಹಿನ್ನೆಲೆಯ ಖರೀದಿ ವ್ಯವಹಾರದಲ್ಲಿ ಮಧ್ಯವರ್ತಿಗೆ ಹಣ ನೀಡುವ ಬೆಳವಣಿಗೆ ಗಾಂಧಿ ಕುಟುಂಬವನ್ನು ಮುಜುಗರಕ್ಕೀಡು ಮಾಡಿತು. ಏಪ್ರಿಲ್‌ 12ರಂದು ಪ್ರಧಾನಿಯನ್ನು ಭೇಟಿಯಾಗಿ ಬಂದ ಸಿಂಗ್‌ ರಾಜೀನಾಮೆ ನೀಡಿ ಸರಕಾರದಿಂದ ಹೊರ ಬಂದರು.

ಇದಾಗಿ ಕೇವಲ ನಾಲ್ಕು ದಿನಗಳು ಉರುಳಿದ್ದವು. ಸಿಂಗ್‌ ಮತ್ತು ರಾಜೀವ್‌ ಎರಡು ದ್ರುವಗಳಲ್ಲಿ ನಿಂತಿದ್ದರು. ಹೀಗಿರುವಾಗ ಸ್ವೀಡನ್‌ ರೇಡಿಯೋದಲ್ಲಿ ಮ್ಯಾಗ್ನಸ್‌ ನೀಲ್ಸನ್‌ ಎಂಬ ವರದಿಗಾರ ಸ್ಫೋಟಕ ಸುದ್ದಿಯೊಂದನ್ನು ನೀಡಿದ. ರಾಜೀವ್‌ ಗಾಂಧಿ ಸರಕಾರದ ಬೋಫೋರ್ಸ್‌ ಆರ್ಟಿಲರಿ ಡೀಲ್‌ನಲ್ಲಿ ಭಾರತೀಯ ಸೇನೆ ಮಧ್ಯವರ್ತಿಯೊಬ್ಬನಿಗೆ 1.2 ಬಿಲಿಯನ್‌ ಡಾಲರ್‌ ಕಮಿಷನ್‌ ಪಾವತಿ ಮಾಡಲಾಗಿದೆ ಎಂಬುದು ನೀಲ್ಸನ್‌ ನೀಡಿದ್ದ ಸುದ್ದಿಯಾಗಿತ್ತು.

ಸೇನೆಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಮಧ್ಯವರ್ತಿಗಳ ಪಾಲ್ಗೊಳ್ಳುವಿಕೆ ರದ್ದುಗೊಳಿಸಿದ ಆರು ತಿಂಗಳ ನಂತರ ಅಂದರೆ 1986ರ ಮಾರ್ಚ್‌ನಲ್ಲಿ ಈ ಡೀಲ್‌ಗೆ ಸಹಿ ಬಿದ್ದಿತ್ತು. ಇಷ್ಟು ಸುದ್ದಿ ಸಾಕಿತ್ತು. ರಾಜೀವ್‌ ಗಾಂಧಿ ನಡುಗಿ ಬಿಟ್ಟರು.

ಆರಂಭದಲ್ಲಿ ಹಣ ಪಾವತಿ ನಡೆದೇ ಇಲ್ಲ ಎಂದು ರಾಜೀವ್‌ ಗಾಂಧಿ ಸಾಗಾ ಹಾಕಿದರು. ಇದಕ್ಕೆ ಸ್ಟೀಡನ್‌ ಪ್ರಧಾನಮಂತ್ರಿಯೂ ಧ್ವನಿ ಗೂಡಿಸಿದರು. ಇತ್ತ ವಿ. ಪಿ. ಸಿಂಗ್‌ ಕಾಂಗ್ರೆಸ್‌ ಸಂಸದೀಯ ಸಮಿತಿ ಸಭೆಗೆ ಒತ್ತಾಯಿಸುತ್ತಿದ್ದರು. ರಾಜೀವ್‌ ಗಾಂಧಿ ತಲೆ ದಂಡಕ್ಕೆ ಅವರು ಹವಣಿಸುತ್ತಿದ್ದರು. ಇದರ ನಡುವೆ ಸ್ಟೀಡನ್‌ ಸರಕಾರದ ಲೆಕ್ಕ ಪರಿಶೋಧಕರು ವರದಿಗಾರ ಹೇಳಿದ ಲೆಕ್ಕಕ್ಕಿಂತ ಹೆಚ್ಚಿನ ಹಣ ಸಂದಾಯವಾಗಿದೆ ಎಂದು ಬಿಟ್ಟರು.

ಭಾರತದ ರಾಜಕಾರಣದಲ್ಲಿ ಬಿರುಗಾಳಿ ಏಳಲು ಅಷ್ಟು ಸಾಕಿತ್ತು.

ರಾಜೀವ್‌ ವಜಾಕ್ಕೆ ರಾಷ್ಟ್ರಪತಿಗಳ ಸಂಚು:

ಈ ಬೆಳವಣಿಗೂ ಮೊದಲೇ ಮಾರ್ಚ್‌ನಲ್ಲೇ ರಾಜೀವ್‌ ಗಾಂಧಿಯನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲು ಗ್ಯಾನಿ ಜೇಲ್ ಸಿಂಗ್‌ ಆಲೋಚಿಸಿದ್ದರು. ಬೋಫೋರ್ಸ್‌ ಹಗರಣ ಕೇಳಿ ಬಂದ ನಂತರ ನಡೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳೀಪಟವಾಗುವುದರೊಂದಿಗೆ ಅವರಿಗೆ ಈಗ ಹೆಚ್ಚಿನ ಬಲ ಬಂತು.

ರಾಜೀವ್‌ ಗಾಂಧಿ ವಜಾಗೊಳಿಸಲು ಜೇಲ್ ಸಿಂಗ್‌ ಮುಂದಾದರು. ಆದರೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಸಂಪಾದಕರಾಗಿ ಬಂದಿದ್ದ ಅರುಣ್‌ ಶೌರಿ ಈ ನಿರ್ಧಾರಕ್ಕೆ ಗೋಯೆಂಕಾ ಸಮ್ಮತಿಯಿಲ್ಲ ಎಂದು ಬಿಟ್ಟರು. ಕಾರಣ ರಾಜೀವ್ ಗಾಂಧಿ ಜಾಗಕ್ಕೆ ಅರುಣ್‌ ನೆಹರೂ ನೇಮಿಸುವುದು ಗೊಯೆಂಕಾಗೆ ಬೇಕಾಗಿರಲಿಲ್ಲ. ಕಾರಣ ಅಂಬಾನಿ-ನೆಹರೂ ಆಪ್ತರಾಗಿದ್ದರು. ಇತ್ತ ಜೇಲ್‌ ಸಿಂಗ್‌ ಅವಧಿ ಜೂನ್‌ಗೆ ಮುಗಿಯುತ್ತಾ ಬಂದಿತ್ತು. ಕಾಂಗ್ರೆಸ್‌ ಬಂಡಾಯಗಾರರನ್ನು ಅವಲಂಬಿಸಿ ಎರಡನೇ ಅವಧಿಗೆ ರಾಷ್ಟ್ರಪತಿ ಸ್ಥಾನದಲ್ಲಿ ಕುಳಿತುಕೊಳ್ಳಲು ಅವರು ಸರ್ಕಸ್‌ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅತ್ತ ವಿ.ಪಿ. ಸಿಂಗ್‌ ಪಕ್ಷದಿಂದ ಉಚ್ಛಾಟನೆಗೊಂಡರು.

ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್‌ ಸಿಂಗ್‌.
ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್‌ ಸಿಂಗ್‌.
/ಇಂಡಿಯನ್‌ ನರ್ವ್

ಕಾಂಗ್ರೆಸ್‌ನಿಂದ ಹೊರ ಬಂದ ವಿ.ಪಿ ಸಿಂಗ್‌ ‘ಜನ್‌ ಮೋರ್ಚಾ’ ಹೆಸರಿನಲ್ಲಿ ಸರಕಾರದ ವಿರುದ್ಧ ಆಂದೋಲನ ಆರಂಭಿಸಿದರು. ವಿಶೇಷವೆಂದರೆ ಇದಕ್ಕೆ ಅರುಣ್‌ ನೆಹರೂ ಜತೆಯಾದರು.

ಇನ್ನೊಂದು ಕಡೆ ಅವರ ಹಳೆ ಫೇರ್‌ಫ್ಯಾಕ್ಸ್‌ ಪ್ರಕರಣದ ತನಿಖೆ ನಡೆಯುತ್ತಿತ್ತು. ಎರಡೆರಡು ಬಾರಿ ತನಿಖಾ ಆಯೋಗದ ಅವಧಿಯನ್ನು ಮುಂದೂಡಲಾಯಿತು. ಪ್ರಕರಣದಲ್ಲಿ ನುಸ್ಲಿ ವಾಡಿಯಾರನ್ನು ಮಾತ್ರ ಆರೋಪಿಯನ್ನಾಗಿ ಮಾಡಲಾಗಿತ್ತು. ಅವರ ವಿರುದ್ಧ ಸರಿಯಾದ ಸಾಕ್ಷ್ಯಗಳಿಲ್ಲದಿದ್ದರೂ ವಿಚಾರಣೆ ನಡೆಸುತ್ತಿದ್ದುದರಿಂದ ಬಗ್ಗೆ ಮೇಲಿಂದ ಮೇಲೆ ಎಕ್ಸ್‌ಪ್ರೆಸ್‌ ಸೇರಿದಂತೆ ಇತರ ಪತ್ರಿಕೆಗಳಲ್ಲಿ ಆಕ್ಷೇಪ ಕೇಳಿ ಬರತೊಡಗಿತು. ಇದರ ನಡುವೆ ವಾಡಿಯಾ ಮತ್ತು ಗೋಯೆಂಕಾರನ್ನು ಹಣಿಯಲು ಸಣ್ಣ ಸಣ್ಣ ಸಾಕ್ಷ್ಯಗಳಿಗಾಗಿಯೂ ಸಿಬಿಐ ಹುಡುಕಾಡುತ್ತಲೇ ಇತ್ತು.

ಹೀಗಿರುವಾಗಲೇ ಅದೊಂದು ದಿನ ಬ್ರಿಟನ್‌ ಪ್ರಜೆ ನುಸ್ಲಿ ವಾಡಿಯಾ ಬಾಂಬೆಯ ಹೊಟೇಲ್‌ ಒಂದರಲ್ಲಿ ಭಾರತೀಯ ಪ್ರಜೆಯ ಹೆಸರಿನಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ಅವತ್ತಿನ ಕಾನೂನು ಪ್ರಕಾರ ವಿದೇಶಿಗರು ಆಯಾ ದೇಶದ ಕರೆನ್ಸಿಯಲ್ಲೇ ಹಣ ಪಾವತಿಸಬೇಕಿತ್ತು. ಹೀಗಾಗಿ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿ ಆರೋಪದಡಿ ವಾಡಿಯಾರನ್ನು ಬಂಧಿಸಿ ಸಿಬಿಐ 7 ಗಂಟೆ ವಶದಲ್ಲಿಟ್ಟುಕೊಂಡಿತು. ಕೊನೆಗೆ ಜೇಠ್ಮಲಾನಿ ಬಂದು ಜಾಮೀನು ಕೊಡಿಸಿದರು.

ಸಿಬಿಐ ಹೀಗೊಂದು ಸರ್ಕಸ್‌ ನಡೆಸುತ್ತಿರುವಾಗ ನಿಜವಾಗಿಯೂ ಅವರ ಬಳಿಯಲ್ಲಿ ಫೇರ್‌ಫ್ಯಾಕ್ಸ್‌ ಬರೆದ ಪತ್ರ ಇದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಇನ್ನೊಂದು ಬದಿಯಲ್ಲಿ ತನಿಖಾ ನಡೆಸುತ್ತಿದ್ದ ಆಯೋಗದ ನ್ಯಾಯಮೂರ್ತಿಗಳು ‘ನಮಗೆ ಆ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಬಿಟ್ಟರು.

ಅಷ್ಟೊತ್ತಿಗೆ ಪದೇ ಪದೇ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಇಂಡಿಯನ್ಸ್‌ ಎಕ್ಸ್‌ಪ್ರೆಸ್‌ ರಾಜೀವ್‌ ಗಾಂಧಿಗೆ ಇನ್ನಿಲ್ಲದ ಕಾಟ ಕೊಟ್ಟಿತ್ತು. ಇದರಿಂದ ಹತಾಷರಾದ ರಾಜೀವ್‌ ಗಾಂಧಿ ಹುಚ್ಚು ತೀರ್ಮಾನವೊಂದನ್ನು ತೆಗೆದುಕೊಂಡರು.

ಇಂಡಿಯನ್ಸ್‌ ಎಕ್ಸ್‌ಪ್ರೆಸ್‌ ರೇಡ್‌:

ಅವತ್ತು ಸೆಪ್ಟೆಂಬರ್‌ 1, 1987; ಹಿಂದಿನ ದಿನ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಿತ್ತು. ಅದರ ಮರುದಿನ ಹಣಕಾಸು ಇಲಾಖೆಯ ರೆವೆನ್ಯೂ ಇಂಟಲಿಜೆನ್ಸ್‌ ನಿರ್ದೇಶಕ ಬಿ.ವಿ. ಕುಮಾರ್‌ ನೇತೃತ್ವದ ಬರೋಬ್ಬರಿ 400 ಅಧಿಕಾರಿಗಳ ತಂಡ ಇಂಡಿಯನ್‌ ಎಕ್ಸ್‌ಪ್ರೆಸ್‌ ಮುದ್ರಣ ಕೇಂದ್ರಗಳ ಮೇಲೆ ಅಕ್ಷರಶಃ ಮುಗಿಬಿತ್ತು.

ದೇಶದೆಲ್ಲೆಡೆ ಇದ್ದ ಎಕ್ಸ್‌ಪ್ರೆಸ್‌ ಮುದ್ರಣ ಕೇಂದ್ರಗಳ ಮೇಲೆ ದಾಳಿ ನಡೆದು ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು. ಮುದ್ರಣ ಯಂತ್ರಗಳನ್ನು ಪರಿಶೀಲನೆ ನಡೆಸಲಾಯಿತು. ಹಲವು ಸಿಬ್ಬಂದಿಗಳನ್ನು ಪ್ರಶ್ನೆಗೆ ಒಳಪಡಿಸಲಾಯಿತು. ಆದರೆ ಏನೂ ಸಿಗಲಿಲ್ಲ. ಕೊನೆಗೆ ಒಂದು ಆರೋಪ ಹೊರಿಸಲು ತನಿಖಾ ಸಂಸ್ಥೆಗೆ ಸಹಾಯವಾಯಿತು.

2.75 ಕೋಟಿ ರೂಪಾಯಿ ಮೊತ್ತದ ಹೆಚ್ಚಿನ ವೇಗ ಹೊಂದಿರುವ ಮುದ್ರಣ ಯಂತ್ರವನ್ನು ತೆರಿಗೆ ಪಾವತಿಸದೇ ಭಾರತಕ್ಕೆ ತಂದಿದ್ದಾರೆ ಎಂಬುದಾಗಿ ಎಕ್ಸ್‌ಪ್ರೆಸ್‌ ಮೇಲೆ ಆರೋಪ ಹೊರಿಸಲಾಯಿತು. ಈ ಪ್ರಿಂಟಿಂಗ್‌ ಮೆಷೀನ್‌ನಲ್ಲಿ ಭಾರತಕ್ಕೆ 33 ಲಕ್ಷ ರೂಪಾಯಿ ತೆರಿಗೆ ತಪ್ಪಿಸಿದ್ದಾರೆ. ವಿದೇಶದಲ್ಲಿ ಹಣವನ್ನು ನಗದು ರೂಪದಲ್ಲಿ ಪಾವತಿ ಮಾಡಿ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿದ್ದಾರೆ ಎಂಬ ದೂರು ದಾಖಲಿಸಲಾಯಿತು. ಈ ದಾಳಿ ಮೂಲಕ ರಾಜೀವ್‌ ಗಾಂಧಿ ಎಕ್ಸ್‌ಪ್ರೆಸ್‌ಗೆ ನೇರ ಎಚ್ಚರಿಕೆಯನ್ನು ರವಾನಿಸಿದ್ದರು.

ಗೋಯೆಂಕಾ ಆಪ್ತ ವಲಯದಲ್ಲಿದ್ದ ನುಸ್ಲಿ ವಾಡಿಯಾ.
ಗೋಯೆಂಕಾ ಆಪ್ತ ವಲಯದಲ್ಲಿದ್ದ ನುಸ್ಲಿ ವಾಡಿಯಾ.
/ಟೈಮ್ಸ್‌ ನೌ

ಇನ್ನೊಂದು ಕಡೆಯಲ್ಲಿ ಫೇರ್‌ಫ್ಯಾಕ್ಸ್‌ ಪ್ರಕರಣದಲ್ಲಿ ವಾಡಿಯಾ ಮತ್ತು ಗೋಯೆಂಕಾ ಫೇರ್‌ಫ್ಯಾಕ್ಸ್‌ಗೆ ಹಣ ನೀಡುತ್ತಾರೆ. ಅಲ್ಲಿಂದ ಭುರೆ ಲಾಲ್‌ ಮುಖಾಂತರ ತಮಗೆ ಬೇಕಾದ ಮಾಹಿತಿಗಳನ್ನು ತರಿಸಿಕೊಳ್ಳುತ್ತಾರೆ ಎಂಬುದನ್ನು ಸಿಬಿಐ ಸಾಬೀತು ಮಾಡಬೇಕಾಗಿತ್ತು. ಆದರೆ ಅದಕ್ಕೆ ಈ ಪತ್ರಗಳು ಸಾಲುತ್ತಿರಲಿಲ್ಲ. ಏನೇ ಸರ್ಕಸ್‌ ಮಾಡಿದರೂ ನುಸ್ಲಿ ವಾಡಿಯಾರನ್ನು ಕಾನೂನಿನ ಕುಣಿಕೆಯಲ್ಲಿ ತರಲು ಸಾಧ್ಯವಾಗಲಿಲ್ಲ.

ಕೊನಗೆ ಥಕ್ಕರ್‌-ನಟರಾಜನ್‌ ಆಯೋಗ ನವೆಂಬರ್‌ 30ರಂದು ಸರಕಾರಕ್ಕೆ ತಮ್ಮ ವರದಿ ಸಲ್ಲಿಸಿತು. ಇದನ್ನು ಡಿಸೆಂಬರ್‌ 9, 1987ರಲ್ಲಿ ಪ್ರಕಟ ಮಾಡಲಾಯಿತು. “ವಿ.ಪಿ. ಸಿಂಗ್‌ ಭಾರತದ ಭದ್ರತೆಯನ್ನು ಅಪಾಯಕ್ಕೆ ತಳ್ಳಿದ್ದಾರೆ. ಭುರೆ ಲಾಲ್‌ ಮೂಲಕ ಸಿಐಎಯ ಕೆಲವು ಸಿಬ್ಬಂದಿಗಳು ಕೆಲಸ ಮಾಡುವ ಅಮೆರಿಕಾದ ಕಂಪನಿ ಜತೆ ಸಂಬಂದ ಹೊಂದಿದ್ದಾರೆ. ಇದಕ್ಕೆ ವಾಡಿಯಾ ಸಹಾಯ ಮಾಡಿದ್ದಾರೆ,” ಎಂಬುದು ವರದಿಯ ಸಾರವಾಗಿತ್ತು.

ಆದರೆ ಫೇರ್‌ಫಾಕ್ಸ್‌ ಪೋರ್ಜರಿ ಪತ್ರಗಳ ಬಗ್ಗೆ ಯಾವತ್ತೂ ತನಿಖೆ ನಡೆಯಲೇ ಇಲ್ಲ. ರಿಲಯನ್ಸ್‌ ಅಕ್ರಮಗಳತ್ತ ಯಾರೂ ಕಣ್ಣಾಡಿಸಲಿಲ್ಲ. ಆದರೆ 1987ರ ಹೊತ್ತಿಗೆ ದಾಖಲೆಯ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ರಾಜೀವ್‌ ಗಾಂಧಿ ಸರಕಾರ ಚುನಾವಣಾ ಸೋಲಿನತ್ತ ಮುಖ ಮಾಡಿತ್ತು. ಅಧಿಕಾರದಲ್ಲಿ ತೇಲುತ್ತಿದ್ದವರು ಪ್ರಪಾತಕ್ಕೆ ಬಿದ್ದಿದ್ದರು. ಇಷ್ಟಕ್ಕೆಲ್ಲಾ ಕಾರಣ ಮತ್ಯಾರೂ ಆಗಿರಲಿಲ್ಲ ಇಬ್ಬರು ಉದ್ಯಮಪತಿಗಳಾಗಿದ್ದರು.

ಪಾಲಿಸ್ಟರ್ ಪೂರಕ ರಸಾಯನಿಕ ಪದಾರ್ಥಗಳಾಗಿದ ಶುದ್ಧೀಕರಿಸಿದ ಟೆರೆಫ್ತಾಲಿಕ್ ಆಸಿಡ್‌ ಮತ್ತು ಡೈಮಿಥೈಲ್ ಟೆರೆಫ್ತಾಲೇಟ್ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವ ಭರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಬಾನಿ ಮತ್ತು ಮತ್ತು ಬಾಂಬೆ ಡೈಯಿಂಗ್‌ನ ವಾಡಿಯಾ ಇಷ್ಟೆಲ್ಲಾ ಆಟವಾಡಿದ್ದರು.

ಥಕ್ಕರ್‌ ಮತ್ತು ನಟರಾಜನ್‌ ಆಯೋಗದ ಅಂತಿಮ ವರದಿಯಲ್ಲಿ ಏನೂ ಇರಲಿಲ್ಲ. ಒಂದೊಮ್ಮೆ ವಿದೇಶ ವಿನಿಮಯ ನಿಯಮ ಉಲ್ಲಂಘಿಸಿ ಫೇರ್‌ಫಾಕ್ಸ್‌ಗೆ ಹಣ ಪಾವತಿಸಿದ್ದರೂ ಅದರಲ್ಲಿ ಭಾರತದ ಭದ್ರತೆಗೆ ಅಪಾಯ ಎನ್ನುವುದು ಕೇವಲ ಕಪೋಲ ಕಲ್ಪಿತ ಕಥೆಯಾಗಿತ್ತು. ಸರಕಾರ ತನ್ನ ಮುಖ ಉಳಿಸಿಕೊಳ್ಳಲು ಹೀಗೊಂದು ಕತೆ ಕಟ್ಟಿತ್ತು.

ಇಡೀ ಪ್ರಕ್ರಿಯೆ, “ದಾರಿ ತಪ್ಪಿಸುವ, ನಡೆದ ಘಟನೆಗಳನ್ನು ಮುಚ್ಚಿಡುವ ಪ್ರಯತ್ನಗಳು ಮಾತ್ರವೇ ಆಗಿದ್ದವು”. ಇಷ್ಟೆಲ್ಲಾ ಪ್ರಕ್ರಿಯೆಗಳ ನಂತರ ಅಂತಿಮವಾಗಿ ತಮಗೆ ಬೇಕಾದ ಪ್ರಯೋಜನವನ್ನು ಧೀರೂಭಾಯಿ ಅಂಬಾನಿ ಪಡೆದುಕೊಂಡರು.

ಸದ್ಯ ನಡೆಯುತ್ತಿರುವ ರಫೇಲ್‌ ಫೈಲ್‌ ಕಳ್ಳತನ, ಮತ್ತೆ ಪ್ರತ್ಯಕ್ಷ, ಗೌಪ್ಯತಾ ಕಾಯ್ದೆಯ ಬಳಕೆ ಮೊದಲಾದ ಘಟನಾವಳಿಗಳನ್ನು ಈ ನಿಟ್ಟಿನಲ್ಲಿ ನೋಡಬೇಕಿದೆ. ಅಂದ ಹಾಗೆ ಅವತ್ತು ಈ ಪ್ರಕರಣದಲ್ಲಿ ಇದ್ದವರು ಧೀರೂಭಾಯಿ ಅಂಬಾನಿ. ಇವತ್ತು ರಫೇಲ್‌ ಹಗರಣದಲ್ಲಿ ಕೇಳಿ ಬರುತ್ತಿರುವ ಹೆಸರು ಅವರ ಕಿರಿಯ ಪುತ್ರ ಅನಿಲ್‌ ಅಂಬಾನಿಯದ್ದು. ಅಷ್ಟೇ ವ್ಯತ್ಯಾಸ!