samachara
www.samachara.com
ದಪ್ಪ ಮೀಸೆ, ಕರಿ ಕೋಟು: ಲಂಡನ್‌ನಲ್ಲಿ ದರ್ಶನ ನೀಡಿದ ‘ಚೋಟಾ ಮೋದಿ’
ದೇಶ

ದಪ್ಪ ಮೀಸೆ, ಕರಿ ಕೋಟು: ಲಂಡನ್‌ನಲ್ಲಿ ದರ್ಶನ ನೀಡಿದ ‘ಚೋಟಾ ಮೋದಿ’

ಭಾರತದಿಂದ ಪರಾರಿಯಾಗಿ ಲಂಡನ್ ನಗರದ ಐಶಾರಾಮಿ ಟೊಟೆನ್ಹ್ಯಾಮ್ ಕೋರ್ಟ್ ರಸ್ತೆಯಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸವಾಗಿರುವ ನೀರವ್ ಮೋದಿ ದರ್ಶನವಾಗಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,000 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿಯನ್ನು ಲಂಡನ್‌ನಲ್ಲಿ 'ದಿ ಟೆಲಿಗ್ರಾಫ್’ ಪತ್ರಿಕೆ ಪತ್ತೆ ಮಾಡಿದೆ.

ಬಹುಕೋಟಿ ವೆಚ್ಚದ ಐಶಾರಾಮಿ ಮನೆಯಲ್ಲಿ ವಾಸವಾಗಿರುವ ನೀರವ್ ಮೋದಿ ಹೊಸ ಉದ್ಯಮಕ್ಕೂ ಕೈಹಾಕಿದ್ದಾನೆ ಎಂದು ಲಂಡನ್‌ ಮೂಲದ ವರದಿ ಹೇಳಿದೆ.

ಲಂಡನ್ ರಸ್ತೆಯಲ್ಲಿ ಟ್ಯಾಕ್ಸಿಗಾಗಿ ಕಾಯುತ್ತಾ ನಿಂತಿದ್ದ ನೀರವ್ ಮೋದಿಯನ್ನು ‘ದಿ ಟೆಲಿಗ್ರಾಫ್’ ಪತ್ರಿಕೆಯ ವರದಿಗಾರ ಪತ್ತೆಹಚ್ಚಿ ಭಾರತದಲ್ಲಿ ಆತನ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಪ್ರಶ್ನಿಸಿದ್ದಾರೆ .

ಆದರೆ, ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿರುವ ಮೋದಿ, ಅಲ್ಲಿಂದ ಟ್ಯಾಕ್ಸಿ ಹತ್ತಿ ಹೊರಟು ಹೋಗಿದ್ದಾನೆ. ಈ ಕುರಿತು ಎರಡು ನಿಮಿಷದ ವಿಡಿಯೋವನ್ನು ದಿ ಟೆಲಿಗ್ರಾಫ್ ಪತ್ರಿಕೆ ತನ್ನ ಟ್ವೀಟರ್‌ ಖಾತೆಯಲ್ಲಿ ಶೇರ್ ಮಾಡಿದೆ.

ವಂಚನೆ ಪ್ರಕರಣದಲ್ಲಿ ಸಿಲುಕಿ ನ್ಯಾಯಾಲಯದಿಂದ ಆರ್ಥಿಕ ಅಪರಾಧಿ ಎಂಬ ಹಣೆಪಟ್ಟಿಗೆ ಒಳಗಾಗಿದ್ದ ನೀರವ್ ಮೋದಿ ಕಳೆದ ವರ್ಷವೇ ದೇಶದಿಂದ ಪಲಾಯನ ಮಾಡಿದ್ದ. ಆದರೆ ಈವರೆಗೆ ಆತ ಎಲ್ಲಿದ್ದಾನೆ ಎಂಬುದೇ ನಿಗೂಢವಾಗಿ ಉಳಿದಿತ್ತು. ಈ ನಿಗೂಢತೆಯನ್ನು ಭೇದಿಸುವಲ್ಲಿ 'ದಿ ಟೆಲಿಗ್ರಾಫ್’ ಪತ್ರಿಕೆ ಯಶಸ್ವಿಯಾಗಿದೆ.

ಮುಂಬೈನ ಅಲಿಭಾಗ್ ಜಿಲ್ಲೆಯ ಕಡಲ ತೀರದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದ್ದ ನೀರವ್ ಮೋದಿ ಒಡೆತನದ ಐಶಾರಾಮಿ ಬಂಗಲೆಯನ್ನು ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ನಿನ್ನೆ ಸ್ಫೋಟಿಸುವ ಮೂಲಕ ಕಟ್ಟಡವನ್ನು ತೆರವುಗೊಳಿಸಿತ್ತು.

ಇಂಗ್ಲೆಂಡ್‌ನಲ್ಲೂ ಐಶಾರಾಮಿ ಬದುಕು

48 ವರ್ಷದ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೇಹುಲ್ ಚೋಕ್ಸಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಬಹುಕೋಟಿ ವಂಚಿಸಿದ ಆರೋಪವಿದೆ. ಆದರೆ ಮೈಮೇಲೆ ಬಹುಕೋಟಿ ಸಾಲ ಇದ್ದರೂ ಇವರ ಐಶಾರಾಮಿ ಬದುಕಿಗೆ ಮಾತ್ರ ಇದು ತೊಡಕಾಗಿಲ್ಲ.

ಈತನ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿರುವ ಸರಕಾರ ಈತನನ್ನು ಹುಡುಕಿ ಭಾರತಕ್ಕೆ ಒಪ್ಪಿಸುವಂತೆ ಇಂಟರ್‌ಪೋಲ್ ಗೆ ಮನವಿ ಮಾಡಿದೆ. ಆದರೆ ಈತ ಲಂಡನ್ ನಗರದ ಐಶಾರಾಮಿ ಟೊಟೆನ್ಹ್ಯಾಮ್ ಕೋರ್ಟ್ ರಸ್ತೆಯಲ್ಲಿರುವ ಐಶಾರಾಮಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಾನೆ.

ಈತ ವಾಸವಾಗಿರುವ ಫ್ಲ್ಯಾಟ್‌ನ ಬಾಡಿಗೆ ವರ್ಷಕ್ಕೆ 8 ಮಿಲಿಯನ್ ಪೌಂಡ್. ಅಂದರೆ ಭಾರತೀಯ ಮೌಲ್ಯದಲ್ಲಿ ವರ್ಷಕ್ಕೆ ಸುಮಾರು 75 ಕೋಟಿ ರೂ. ಹಣವನ್ನು ಈತ ಬಾಡಿಗೆ ರೂಪದಲ್ಲಿ ಪಾವತಿಸುತ್ತಿದ್ದಾನೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಇನ್ನೂ ನೀರವ್ ಮೋದಿ ಹಾಕಿದ್ದ ಕಪ್ಪು ಬಣ್ಣದ ಆಸ್ಟ್ರೀಜ್ ಜಾಕೆಟ್‌ನ ಬೆಲೆ ಭಾರತೀಯ ಮೌಲ್ಯದಲ್ಲಿ ಸುಮಾರು 8 ಲಕ್ಷ ರೂ ಬೆಲೆಬಾಳುತ್ತದೆ ಎಂದು ಟೆಲಿಗ್ರಾಫ್ ವರದಿಯಲ್ಲಿ ಉಲ್ಲೇಖಿಸಿದೆ.

ಹೊಸ ಉದ್ಯಮ ಆರಂಭಿಸಲಿರುವ ಮೋದಿ

ಲಂಡನ್‌ನಲ್ಲಿ ಹೊಸ ಡೈಮಂಡ್ ಉದ್ಯಮಕ್ಕೆ ಕೈ ಹಾಕಿರುವ ನೀರವ್ ಮೋದಿ ಆ ಕುರಿತು ಸ್ಥಳೀಯ ಉದ್ಯಮಿಗಳ ಬಳಿ ಸಾಕಷ್ಟು ಸಲಹೆ ಪಡೆದಿದ್ದಾನೆ. ಅಲ್ಲದೆ ಉದ್ಯಮಕ್ಕೆ ಅನುಕೂಲವಾಗುವಂತೆ ಇತ್ತೀಚೆಗೆ ಲಂಡನ್‌ ಉದ್ಯೋಗ ಮತ್ತು ಪಿಂಚಣಿ ಇಲಾಖೆಯಿಂದ ವಿಮೆ ಸಂಖ್ಯೆಯನ್ನು ಪಡೆದುಕೊಂಡಿದ್ದು, ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ. ಈ ಖಾತೆಗಳ ಮೂಲಕ ಆನ್‌ಲೈನ್ ವಹಿವಾಟು ನಡೆಸುತ್ತಿದ್ದಾನೆ ಎಂದು ‘ದಿ ಟೆಲಿಗ್ರಾಫ್’ ಹೇಳಿದೆ.

ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಬೇಕೆಂದರೆ ಅಥವಾ ಉದ್ಯಮ ನಡೆಸಬೇಕೆಂದರೆ ರಾಷ್ಟ್ರೀಯ ವಿಮಾ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ಆದರೆ ಕಳೆದ ಆಗಸ್ಟ್‌ನಲ್ಲಿಯೇ ಆತನನ್ನು ಗಡೀಪಾರು ಮಾಡುವಂತೆ ಭಾರತ ಸರ್ಕಾರ ಇಂಗ್ಲೆಂಡಿನ ಗೃಹ ಕಾರ್ಯದರ್ಶಿಗಳ ಕಚೇರಿಗೆ ಮನವಿ ಮಾಡಿತ್ತು. ಆದರೆ ಭಾರತದಿಂದ ಇಂತಹದ್ದೊಂದು ಮನವಿ ಬಂದಿದೆ ಎಂದು ಅಲ್ಲಿನ ಗೃಹ ಕಾರ್ಯದರ್ಶಿಗಳಾಗಲಿ, ಗೃಹ ಕಚೇರಿಯಾಗಲಿ ಇದುವರಗೆ ದೃಢಪಡಿಸಿಲ್ಲ.

ಈ ನಡುವೆ ಇಂಗ್ಲೆಂಡ್ ಸರ್ಕಾರ ನೀರವ್ ಮೋದಿಗೆ ರಾಷ್ಟ್ರೀಯ ವಿಮಾ ಸಂಖ್ಯೆಯನ್ನು ಹೇಗೆ ಮತ್ತು ಏಕೆ ನೀಡಿತು ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ ಎಂದು ಪತ್ರಿಕೆ ತಿಳಿಸಿದೆ.

ಈತನ ಹೊಸ ಡೈಮಂಡ್ ಕಚೇರಿ ಮನೆಯ ಪಕ್ಕದಲ್ಲೇ ಇರುವ ಸೋಹೋ ನಗರದಲ್ಲಿದ್ದು ಪ್ರತಿದಿನ ಈತ ತನ್ನ ನಾಯಿಯ ಜೊತೆಗೆ ನಡೆಯುತ್ತಾ ಕಚೇರಿ ತಲುಪುತ್ತಾನೆ. ಆದರೆ, ಈವರೆಗೆ ಈತನ ಗುರುತು ಯಾರಿಗೂ ಪತ್ತೆಯಾಗಿಲ್ಲ. ತನ್ನನ್ನು ಯಾರೂ ಗುರುತಿಸಬಾರದು ಎಂಬ ಉದ್ದೇಶದಿಂದ ದಪ್ಪ ಮೀಸೆ ಬಿಟ್ಟುಕೊಂಡು ತನ್ನ ಗುರುತನ್ನು ಮರೆಮಾಚಲು ಪ್ರಯತ್ನಿಸಿದ್ದ ಎಂದು ಟೆಲಿಗ್ರಾಫ್ ತಿಳಿಸಿದೆ.

ಈ ಹಿಂದೆ ನೀರವ್ ಮೋದಿ ದೇಶದಿಂದ ಪಲಾಯನ ಮಾಡಿದಾಗ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಬದಲಿಸಿಕೊಂಡಿದ್ದು ಇಂಗ್ಲೆಂಡ್‌ನಲ್ಲಿ ವಾಸವಾಗಿರುವ ಸಾಧ್ಯತೆ ಇದೆ ಎಂದು ಸರಕಾರವೇ ಹೇಳಿತ್ತು.

ಅತ್ತ ಬಹುಕೊಟಿ ವಂಚಕ ನೀರವ್ ಮೋದಿಯನ್ನು ಭಾರತಕ್ಕೆ ವಾಪಾಸ್ ಕರೆತರಲು ಸರಕಾರ ಪ್ರಯತ್ನಿಸುತ್ತಿದ್ದರೆ, ಆತ ಲಂಡನ್ ನಗರದಲ್ಲಿ ಓಡಾಡಿಕೊಂಡಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಕಾಂಗ್ರೆಸ್, “ಪತ್ರಿಕಾ ಧರ್ಮವನ್ನು ಪಾಲಿಸಿರುವ ದಿ ಟೆಲಿಗ್ರಾಫ್ ಪತ್ರಿಕೆಯು ನೀರವ್ ಮೋದಿಯನ್ನು ಪತ್ತೆಹಚ್ಚಿದೆ. ಆದರೆ ಈ ಕೆಲಸ ಮೋದಿ ಸರಕಾರದಿಂದ ಯಾಕಾಗಲಿಲ್ಲ?" ಎಂದು ಪ್ರಶ್ನೆ ಮಾಡಿದೆ. ಅಲ್ಲದೆ ಮೋದಿ ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ, ನೀರವ್ ಮೋದಿಯನ್ನೇ? ಅಥವಾ ಅತನಿಗೆ ದೇಶದಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟವರನ್ನೇ? ಎಂದು ಖಾರವಾಗಿ ಪ್ರಶ್ನಿಸಿದೆ.

ದಿ ಟೆಲಿಗ್ರಾಫ್ ವರದಿ ಬೆನ್ನಿಗೆ ಎಚ್ಚೆತ್ತಿರುವ ಸರಕಾರ, “ನಮ್ಮ ಸಂದೇಶ ಸ್ಪಷ್ಟವಾಗಿದೆ. ನಿರಾಶ್ರಿತನಂತೆ ಲಂಡನ್‌ನಲ್ಲಿ ವಾಸವಾಗಿರುವ ನೀರವ್ ಮೋದಿಯನ್ನು ಕಾನೂನಿನ ಮುಂದೆ ತಂದು ನಿಲ್ಲಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿಗಳಲ್ಲಿ ಒಬ್ಬನಾದ ಮೇಹುಲ್ ಚೋಕ್ಸಿ ಇತ್ತೀಚೆಗೆ ಟ್ರಿನಿಡಾಡ್‌ ಪೌರತ್ವ ಪಡೆದಿದ್ದು, ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ತೆರಳಿ ತನ್ನ ಭಾರತೀಯ ಪೌರತ್ವ ಹಾಗೂ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸಿದ್ದ. ಆದರೆ ನೀರವ್ ಮೋದಿ ಲಂಡನ್‌ ನಲ್ಲಿರುವ ಶಂಕೆಯನ್ನು ಸರಕಾರ ವ್ಯಕ್ತಪಡಿಸುತ್ತಿತ್ತೇ ಹೊರತು ಆತನ ಎಲ್ಲಿದ್ದಾನೆ ಎಂಬ ಗುಟ್ಟು ಈವರೆಗೆ ಯಾರಿಗೂ ತಿಳಿದಿರಲಿಲ್ಲ.

ಇದೀಗ ಆತ ಲಂಡನ್‌ನಲ್ಲಿದ್ದಾನೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ಆತನನ್ನು ದೇಶಕ್ಕೆ ವಾಪಾಸ್ ಕರೆತರುವಲ್ಲಿ ಸಫಲವಾಗುತ್ತಾ? ಅಥವಾ ವಿಜಯ ಮಲ್ಯ ಪ್ರಕರಣದಂತೆ ಈ ಪ್ರಕರಣವೂ ಸಹ ಲಂಡನ್‌ ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.