samachara
www.samachara.com
ಭಾರತದಲ್ಲಿ ಗರಿಷ್ಠ ಮಟ್ಟಕ್ಕೇರಿದ ನಿರುದ್ಯೋಗ: ಆಡಳಿತ ಪಕ್ಷದ ಆರ್ಭಟ ಮುಚ್ಚಿಟ್ಟ ಸತ್ಯ
ದೇಶ

ಭಾರತದಲ್ಲಿ ಗರಿಷ್ಠ ಮಟ್ಟಕ್ಕೇರಿದ ನಿರುದ್ಯೋಗ: ಆಡಳಿತ ಪಕ್ಷದ ಆರ್ಭಟ ಮುಚ್ಚಿಟ್ಟ ಸತ್ಯ

ಕಲಬುರಗಿಯ ಉರಿ ಬಿಸಿಲಿನಲ್ಲಿ ನಿಂತು ತನ್ನ ಸರಕಾರದ ಸಾಧನೆಗಳನ್ನು ವಿವರಿಸುತ್ತಿರುವ ಪ್ರಧಾನಿ ಮೋದಿ ನಿರುದ್ಯೋಗದ ಬಗ್ಗೆ ಯಾವುದೇ ಮಾತುಗಳನ್ನು ಆಡಿಲ್ಲ. ಯಾಕೆ ಎಂಬುದನ್ನು ಈ ಅಂಕಿ ಅಂಶಗಳು ವಿವರಿಸುತ್ತವೆ.

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಬಿಗಡಾಯಿಸಿರುವುದು ಇನ್ನು ನಿಗೂಢ ವಿಚಾರವಲ್ಲ. 2019ರ ಫೆಬ್ರವರಿಯಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.2ಕ್ಕೆ ಏರಿಕೆಯಾಗಿದೆ ಎಂಬುದಾಗಿ ‘ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)‘ ಸಂಸ್ಥೆ ಹೇಳಿದೆ. 2016ರ ಸೆಪ್ಟೆಂಬರ್‌ ನಂತರ ನಿರುದ್ಯೋಗ ಪ್ರಮಾಣದಲ್ಲಾಗಿರುವ ಗರಿಷ್ಠ ಏರಿಕೆ ಇದು ಎಂದು ಸಿಎಂಐಇ ಹೇಳಿದೆ.

ವಿಶೇಷವೆಂದರೆ ಸದ್ಯ ಉದ್ಯೋಗ ಅರಸಿ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಿದ್ದೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಮುಂಬೈ ಮೂಲದ ಚಿಂತಕರ ಚಾವಡಿಯ ಮುಖ್ಯಸ್ಥ ಮಹೇಶ್‌ ವ್ಯಾಸ್‌ ‘ರಾಯ್ಟರ್ಸ್‌’ಗೆ ತಿಳಿಸಿದ್ದಾರೆ.

ಒಟ್ಟಾರೆ ಉದ್ಯೋಗದಲ್ಲಿರುವವರ ಪ್ರಮಾಣವೂ ಇಳಿಮುಖವಾಗಿದ್ದು ಕಳೆದ ವರ್ಷ ಫೆಬ್ರವರಿಯಲ್ಲಿ 40.6 ಕೋಟಿ ಜನರು ಉದ್ಯೋಗದಲ್ಲಿದ್ದರೆ, ಈ ಪ್ರಮಾಣ 2019ರ ಫೆಬ್ರವರಿ ಹೊತ್ತಿಗೆ 40 ಕೋಟಿಗೆ ಇಳಿಕೆಯಾಗಿದೆ. ಅಂದರೆ 60 ಲಕ್ಷ ಉದ್ಯೋಗಿಗಳೇ ನಿರುದ್ಯೋಗಿಗಳಾಗಿದ್ದಾರೆ.

ಸಾವಿರಾರು ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿರುವ ‘ಸಿಎಂಐಇ’, ಸರಕಾರದ ಇಲಾಖೆ ನಡೆಸಿರುವ ನಿರೋದ್ಯೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳಿಗಿಂತ ಇದು ಹೆಚ್ಚು ನಂಬಿಕೆಗೆ ಅರ್ಹವಾದುದು ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಫೆಬ್ರವರಿಯಲ್ಲಿ ಬಿಸಿನೆಸ್‌ ಸ್ಟ್ಯಾಂಡರ್ಡ್‌ಗೆ ಸೋರಿಕೆಯಾಗಿದ್ದ ‘ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ’ಯು 2017-18ರಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚಿನ ಮಟ್ಟಕ್ಕೆ ಏರಿಕೆಯಾಗಿದೆ ಎಂದು ತಿಳಿಸಿತ್ತು. ಸರಕಾರಿ ಸಂಸ್ಥೆ ‘ನ್ಯಾಷನಲ್ ಸ್ಯಾಂಪಲ್‌ ಸರ್ವೇ ಆಫೀಸ್‌ (ಎನ್‌ಎಸ್‌ಎಸ್‌ಒ)‘ ನಡೆಸಿದ ಈ ಸಮೀಕ್ಷೆಯನ್ನು ಸರಕಾರ ಬಿಡುಗಡೆ ಮಾಡದೇ ಇರುವ ತೀರ್ಮಾನ ತೆಗೆದುಕೊಂಡಿತ್ತು.

ಹೀಗಿದ್ದೂ ಮಾಧ್ಯಮಗಳಿಗೆ ಸೋರಿಕೆಯಾದ ಸಮೀಕ್ಷೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಾನ ಕಳೆದಿತ್ತು. ಇದೀಗ ಎರಡನೇ ಸಮೀಕ್ಷೆ ಹೊರಬಿದ್ದಿದ್ದು ಇದರಲ್ಲೂ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ. 2018ರ ಫೆಬ್ರವರಿಯಲ್ಲಿ ಶೇಕಡಾ 5.9 ಇದ್ದ ನಿರುದ್ಯೋಗ ಪ್ರಮಾಣ ಒಂದು ವರ್ಷದ ಅವಧಿಯಲ್ಲಿ ಶೇಕಡಾ 22ರಷ್ಟು ಏರಿಕೆಯಾಗಿದ್ದು ಸದ್ಯ ಶೇಕಡಾ 7.2ಕ್ಕೆ ಬಂದು ನಿಂತಿದೆ ಎಂಬುದಾಗಿ ಈ ವರದಿ ವಿವರಿಸಿದೆ.

ಲೋಕಸಭೆ ಚುನಾವಣೆಯನ್ನು ಎದುರಿಸಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಇದು ಕಹಿ ಸುದ್ದಿಯಾಗಿದೆ. ಅದರಲ್ಲೂ ನಿರುದ್ಯೋಗ ಸಮಸ್ಯೆ ಮತ್ತು ದುರ್ಬಲ ಕೃಷಿ ಉತ್ಪನ್ನಗಳ ಬೆಲೆಯನ್ನು ವಿರೋಧ ಪಕ್ಷಗಳು ಚುನಾವಣಾ ವಿಷಯವಾಗಿ ಆಯ್ಕೆ ಮಾಡಿಕೊಂಡಿವೆ. ಹೀಗಾಗಿ ಈ ಅಂಕಿ ಅಂಶಗಳು ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆ.

ಜನವರಿಯಲ್ಲಿ ನಿರುದ್ಯೋಗಕ್ಕೆ ಸಂಬಂಧಿಸಿದ ಮತ್ತೊಂದು ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದ ಸಿಎಂಐಇ ಅನಾಣ್ಯೀಕರಣ ಮತ್ತು ಗೊಂದಲದ ಜಿಎಸ್‌ಟಿ ಜಾರಿಯ ನಂತರ ದೇಶದಲ್ಲಿ 1.1 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಹೇಳಿತ್ತು. ಸರಕಾರದ ಈ ಎರಡು ತೀರ್ಮಾನಗಳಿಂದ ಲಕ್ಷಾಂತರ ಸಣ್ಣ ಉದ್ಯಮಗಳಿಗೆ ಹೊಡೆತ ಬಿದ್ದಿದೆ ಎಂದು ವರದಿ ವಿವರಿಸಿತ್ತು.

ಆದರೆ ಸರಕಾರ ಮಾತ್ರ ತನ್ನ ಬಳಿಯಲ್ಲಿ ನಿರುದ್ಯೋಗದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ ಎಂದು ಹೇಳಿಕೊಳ್ಳುತ್ತಲೇ ಬಂದಿದೆ. ಜತೆಗೆ ಕಳೆದ ತಿಂಗಳು ಸಂಸತ್‌ ಅಧಿವೇಶನ ಸಂದರ್ಭದಲ್ಲಿಯೂ ಪ್ರತಿಕ್ರಿಯೆ ನೀಡಿದ್ದ ಸರಕಾರ ಅನಾಣ್ಯೀಕರಣದಿಂದ ಉದ್ಯೋಗ ಮತ್ತು ಸಣ್ಣ ಉದ್ದಿಮೆದಾರರ ಮೇಲಾಗಿರುವ ಪರಿಣಾಮದ ಬಗ್ಗೆ ತನ್ನ ಬಳಿಯಲ್ಲಿ ದಾಖಲೆಗಳಿಲ್ಲ ಎಂದು ತಿಳಿಸಿತ್ತು.

ಕೃಪೆ: ರಾಯ್ಟರ್ಸ್‌