samachara
www.samachara.com
ರಾಹುಲ್‌ ಟೀಕಿಸುವ ಭರದಲ್ಲಿ ವಿಕೃತಿ ಮೆರೆದ ಮೋದಿ, ಡಿಸ್ಲೆಕ್ಸಿಯಾ ಮಕ್ಕಳ ವ್ಯಂಗ್ಯಕ್ಕೆ ಆಕ್ರೋಶ
ದೇಶ

ರಾಹುಲ್‌ ಟೀಕಿಸುವ ಭರದಲ್ಲಿ ವಿಕೃತಿ ಮೆರೆದ ಮೋದಿ, ಡಿಸ್ಲೆಕ್ಸಿಯಾ ಮಕ್ಕಳ ವ್ಯಂಗ್ಯಕ್ಕೆ ಆಕ್ರೋಶ

ವಿದ್ಯಾರ್ಥಿಗಳ ಜತೆಗಿನ ಸಂವಾದದ ವೇಳೆ ಪ್ರಧಾನಿ ಮೋದಿ ಬಳಸಿದ, “ಅಗೌರವ ಸೂಚಕ, ಅಸೂಕ್ಷ್ಮ ಭಾಷೆಯನ್ನು ಖಂಡಿಸುತ್ತೇವೆ,” ಎಂಬುದಾಗಿ ಸರಕಾರೇತರ ಸಂಸ್ಥೆಯೊಂದು ಹೇಳಿದೆ.

ಡಿಸ್‌ಲೆಕ್ಸಿಯಾ (ಕಲಿಕೆಯಲ್ಲಿ ಹಿಂದುಳಿಯುವುದು) ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಸರಕಾರೇತರ ಸಂಸ್ಥೆಯೊಂದು ಪ್ರಧಾನಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.

‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌’ ಹೆಸರಿನಲ್ಲಿ ಉತ್ತರಾಖಂಡದ ಬಿಟೆಕ್‌ ವಿದ್ಯಾರ್ಥಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂವಾದ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರು ಡಿಸ್‌ಲೆಕ್ಸಿಯಾಗೆ ಸಂಬಂಧಿಸಿದ ತಮ್ಮ ಪ್ರಾಜೆಕ್ಟ್‌ ಬಗ್ಗೆ ವಿವರಿಸಲು ಆರಂಭಿಸಿದರು.

"ನಿಮ್ಮ ಮುಂದೆ ನನ್ನ ಆಲೋಚನೆಯನ್ನು ಹಂಚಿಕೊಳ್ಳುವ ಅವಕಾಶ ಪಡೆದಿದ್ದಕ್ಕೆ ನಾನು ನಿಜವಾಗಿಯೂ ಪುಣ್ಮ ಮಾಡಿದ್ದೇನೆ. ಡಿಸ್ಲೆಕ್ಸಿಯಾ ಖಾಯಿಲೆ ಇರುವವರಿಗೆ ಸಂಬಂಧಿಸಿದ ಯೋಜನೆ ಇದು. ಡಿಸ್ಲೆಕ್ಸಿಯಾ ಇರುವ ಮಕ್ಕಳು ಓದುವಿಕೆ ಮತ್ತು ಬರೆಯುವಿಕೆಯಲ್ಲಿ ಹಿಂದುಳಿದಿರುತ್ತಾರೆ. ಆದರೆ ಅವರ ಬುದ್ಧಿಮತ್ತೆ ಮತ್ತು ಸೃಜನಶೀಲತೆ ಮೇಲ್ಮಟ್ಟದಲ್ಲಿರುತ್ತದೆ," ಎಂದು ವಿದ್ಯಾರ್ಥಿನಿಯೊಬ್ಬಳು ವಿವರಿಸುತ್ತಿದ್ದಳು. ಸುಲಭವಾಗಿ ಅರ್ಥವಾಗಲು ಆಕೆ ಹಿಂದಿಯ ಜನಪ್ರಿಯ ಚಿತ್ರ ‘ತಾರೇ ಜಮೀನ್‌ ಪರ್‌’ ಉದಾಹರಣೆಯಾಗಿಯೂ ನೀಡಿದಳು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ, “40-50 ವರ್ಷದ ಮಕ್ಕಳಿಗೂ ಇದೂ ಸಹಾಯಕ್ಕೆ ಬರುತ್ತದಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಇದಕ್ಕೆ ಸಭಿಕರು ಜೋರಾಗಿ ನಗಲು ಆರಂಭಿಸಿದ್ದಲ್ಲದೆ, ಚಪ್ಪಾಳೆ ಹೊಡೆಯಲು ಶುರು ಮಾಡಿದರು. ಆಗ ಆಕೆ ನಗುತ್ತಲೇ, “ಹೌದು ಸರ್,” ಎಂದು ಸಹಜವಾದ ಉತ್ತರ ನೀಡಿದಳು. ಆದರೆ ಮತ್ತಷ್ಟು ಮುಂದುವರಿದ ಮೋದಿ, ಇದರಿಂದ “ಅಂತಹ ಮಕ್ಕಳ ತಾಯಂದಿರು ತುಂಬಾ ಸಂತೋಷ ಪಡುತ್ತಾರೆ,” ಎಂದು ಕೀಳು ಮಟ್ಟದ ಹಾಸ್ಯ ಮಾಡಿದ್ದಾರೆ.

ಅವರ ಈ ಹೇಳಿಕೆಗೆ ಹಲವಾರು ಜನರು ಕಿಡಿಕಾರಿದ್ದು, ಇದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ವಿರುದ್ಧ ಬಳಸಿದ ಕೀಳು ಮಟ್ಟದ ತಮಾಷೆ ಎಂದು ‘ನ್ಯಾಷನಲ್‌ ಪ್ಲಾಟ್‌ಫಾರಂ ಫಾರ್‌ ದಿ ರೈಟ್ಸ್‌ ಆಫ್‌ ದಿ ಡಿಸೇಬಲ್ಡ್‌ (ಎನ್‌ಪಿಆರ್‌ಡಿ)‘ ಈ ಹೇಳಿಕೆಯನ್ನು ವ್ಯಾಖ್ಯಾನಿಸಿದೆ.

ವಿದ್ಯಾರ್ಥಿಗಳ ಜತೆಗಿನ ಸಂವಾದದ ವೇಳೆ ಪ್ರಧಾನಿ ಮೋದಿ ಬಳಸಿದ, “ಅಗೌರವ ಸೂಚಕ, ಅಸೂಕ್ಷ್ಮ ಭಾಷೆಯನ್ನು ಖಂಡಿಸುತ್ತೇವೆ,” ಎಂಬುದಾಗಿ ಎನ್‌ಪಿಆರ್‌ಡಿ ಹೇಳಿದೆ.

ಮೋದಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ತಮ್ಮ “ರಾಜಕೀಯ ಎದುರಾಳಿಗಳ ಮೇಲೆ ಹರಿಹಾಯಲು ಯತ್ನಿಸಿದರು," ಎಂಬುದಾಗಿ ಎನ್‌ಪಿಆರ್‌ಡಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. “ಅನಗತ್ಯ ಮತ್ತು ಸಂಪೂರ್ಣ ಅಸೂಕ್ಷ್ಮ ಪ್ರತಿಕ್ರಿಯೆಯ ಮೂಲಕ ಪ್ರಧಾನಿ ಡಿಸ್ಲೆಕ್ಸಿಯಾ ಜನರನ್ನು ಕೀಳಾಗಿ ಚಿತ್ರಿಸಿದ್ದಾರೆ. ಇಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಬಂದ ಈ ಹೇಳಿಕೆಯನ್ನು ಕ್ಷಮಿಸಲು ಸಾಧ್ಯವಿಲ್ಲ," ಎಂದಿರುವುದಲ್ಲದೆ ಇದು ಮೋದಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

2014ರ ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಅವರು ಇದೇ ರೀತಿ ಮಾಡನಾಡಿದ್ದರು ಎಂದು ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಗಿದೆ.

“2014ರ ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿ ಕುರುಡ, ಕಿವುಡ ಎಂಬ ಶಬ್ದಗಳನ್ನು ವಿರೋಧಿಗಳ ವಿರುದ್ಧ ಬಳಸಿದ್ದರು.” ಇದೇ ರೀತಿಯ ಪದ ಪ್ರಯೋಗವನ್ನು ಉಳಿದ ರಾಜಕಾರಣಿಗಳೂ ಬಳಸುತ್ತಾರೆ. ಹಿಂದೊಮ್ಮೆ ರಾಹುಲ್‌ ಗಾಂಧಿ ಕೂಡ ಮೋದಿಯನ್ನು ಮನೋವ್ಯಾಧಿಯಿಂದ ಬಳಲುತ್ತಿರುವ ವ್ಯಕ್ತಿ ಎಂದು ಕರೆದಿದ್ದರು ಎಂದು ಎನ್‌ಪಿಆರ್‌ಡಿ ಉಲ್ಲೇಖಿಸಿದೆ.

ಟ್ಟಿಟ್ಟರ್‌ನಲ್ಲಿ ಕೂಡ ಹಲವಾರು ಜನರು ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಮೋದಿಯವರೇ ನಿಮಗೆ ನಾಚಿಕೆಯಾಗಬೇಕು. ನೀವು ಇದಕ್ಕಿಂತ ಕೆಳಗಿಳಿಯಲು ಸಾಧ್ಯವಿಲ್ಲ. ಯಾವ ನದಿಯಲ್ಲಿ ಮುಳೆಗೆದ್ದರೂ ನಿಮ್ಮ ಅಸೂಕ್ಷ್ಮತೆ ತೊಳೆದು ಹೋಗಲು ಸಾಧ್ಯವಿಲ್ಲ. ಅವರು ಕಲಿಯುವಿಕೆಯಲ್ಲಿ ಹಿಂದುಳಿದಿರಬಹುದು, ಆದರೆ ನಿಮ್ಮಂತೆ ಹೃದಯಹೀನರಲ್ಲ,” ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ರೀತಿ ಮಾತನಾಡುವುದು ‘ಅಸಾಮರ್ಥ್ಯದಿಂದ ಕೂಡಿದ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016’ರ ಪ್ರಕಾರ ಅಪರಾಧ ಎಂಬುದಾಗಿಯೂ ಎನ್‌ಪಿಆರ್‌ಡಿ ಹೇಳಿದೆ. ಇದರ ಅನ್ವಯ ಉದ್ದೇಶಪೂರ್ವಕವಾಗಿ ಅಸಾಮರ್ಥ್ಯದಿಂದ ಕೂಡಿದ ವ್ಯಕ್ತಿಗಳನ್ನು ಅವಮಾನಿಸುವುದು ಅಪರಾಧವಾಗಿದೆ ಎಂಬುದಾಗಿ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನಶಾಸ್ತ್ರಜ್ಞ ಡಾ. ಅ. ಶ್ರೀಧರ್‌, “ಕಲಿಕೆಯಲ್ಲಿ ಹಿಂದುಳಿದವರಿಗೆ ಸೂಕ್ತ ಬೆಂಬಲ ಸಿಕ್ಕಿದಾಗ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ,” ಎಂದಿದ್ದಾರೆ. ಆದರೆ, “ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಹಿಂದೆ ತಳ್ಳುವುದಾದರೆ ಅವರಲ್ಲಿ ಏನೋ ವಿಕೃತಿ ಇದೆ ಎನ್ನಬೇಕಾಗುತ್ತದೆ,” ಎಂದು ವಿಶ್ಲೇಷಿಸಿದ್ದಾರೆ.

ಚಿತ್ರ ಕೃಪೆ: ಝೀ ನ್ಯೂಸ್