samachara
www.samachara.com
ಮೋದಿಗೊಂದು ಕಹಿ ಸುದ್ದಿ; ಕುಸಿತದ ಹಾದಿಯಲ್ಲಿ ಜಿಡಿಪಿ, 5 ತ್ರೈಮಾಸಿಕಗಳಲ್ಲೇ ಕನಿಷ್ಠ ಬೆಳವಣಿಗೆ ದರ ದಾಖಲು
ದೇಶ

ಮೋದಿಗೊಂದು ಕಹಿ ಸುದ್ದಿ; ಕುಸಿತದ ಹಾದಿಯಲ್ಲಿ ಜಿಡಿಪಿ, 5 ತ್ರೈಮಾಸಿಕಗಳಲ್ಲೇ ಕನಿಷ್ಠ ಬೆಳವಣಿಗೆ ದರ ದಾಖಲು

2018-19 ರ ಅವಧಿಯಲ್ಲಿ ಅಭಿವೃದ್ಧಿ ದರ ಶೇ. 7.0 ರಷ್ಟು ಇರಲಿದೆ ಎಂದು ಅಂಕಿ ಅಂಶಗಳ ಸಚಿವಾಲಯ ಇದೇ ವೇಳೆ ತಿಳಿಸಿದೆ. ಆದರೆ ಇದಕ್ಕಿಂತಲೂ ಜಿಡಿಪಿ ಕೆಳಕ್ಕಿಳಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಭಾರತದ ಜಿಡಿಪಿ ಅಥವಾ ನಿವ್ವಳ ಉತ್ಪನ್ನ ದರ 2018 ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 6.6 ರಷ್ಟಿತ್ತು ಎಂದು ಕೇಂದ್ರ ಅಂಕಿ ಅಂಶಗಳ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಇದು ಕಳೆದ ಐದು ತ್ರೈಮಾಸಿಕ ಅಂದರೆ ಸರಿ ಸುಮಾರು ಒಂದೂವರೆ ವರ್ಷದಲ್ಲಿ ದಾಖಲಾದ ಅತ್ಯಂತ ಕನಿಷ್ಠ ಬೆಳವಣಿಗೆ ದರವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಇದು ಕಹಿ ಸುದ್ದಿಯಾಗಿ ಪರಿಣಮಿಸಿದೆ.

ಈ ಹಿಂದೆ ಅಂದರೆ 2017 ಸೆಪ್ಟೆಂಬರ್ ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇಕಡಾ 6.8ರಷ್ಟು ದಾಖಲಾಗಿತ್ತು. ಈಗ ಅದಕ್ಕಿಂತಲೂ ಕಡಿಮೆ ಬೆಳವಣಿಗೆ ದರ ದಾಖಲಾಗಿದೆ. ಇದು ಆರ್ಥಿಕ ತಜ್ಞರ ನಿರೀಕ್ಷೆಗಿಂತಲೂ ಕಡಿಮೆಯಾಗಿದೆ.

ಈ ಹಿಂದೆ ಫೆಬ್ರವರಿ 19-25 ರಂದು ರಾಯ್ಟರ್ಸ್ ಸುದ್ದಿ ಸಂಸ್ಥೆ 2018-19ರ ಮೂರನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು 55ಕ್ಕೂ ಹೆಚ್ಚು ಅರ್ಥಶಾಸ್ತ್ರರಿಂದ ಪಡೆದುಕೊಂಡಿತ್ತು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞರ ಅಭಿಪ್ರಾಯದ ಮೇಲೆ ಜಿಡಿಪಿ ಸರಾಸರಿ ಬೆಳವಣಿಗೆ ದರ ಶೇಕಡಾ 6.9 ರಷ್ಟು ಇರಲಿದೆ ಎಂದು ರಾಯ್ಟರ್ಸ್‌ ಭವಿಷ್ಯ ನುಡಿದಿತ್ತು. ಆದರೆ ಈ ಭವಿಷ್ಯನ್ನೂ ಮೀರಿ ಜಿಡಿಪಿ ಕೆಳಕ್ಕಿಳಿದಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅಂದರೆ 2018ರ ಏಪ್ರಿಲ್-ಜೂನ್ ಅವಧಿಯಲ್ಲಿ ಶೇಕಡಾ 8.0 ಜಿಡಿಪಿ ದರ ದಾಖಲಾಗಿತ್ತು. ಎರಡನೇ ತ್ರೈಮಾಸಿಕದ ಹೊತ್ತಿಗೆ ಅಂದರೆ ಸೆಪ್ಟೆಂಬರ್‌ ಅಂತ್ಯಕ್ಕೆ ಜಿಡಿಪಿ ದರ ಶೇಕಡಾ 7.1ಕ್ಕೆ ಕುಸಿದಿತ್ತು. ನಂತರ ಇದನ್ನು ಮರು ಪರಿಶೀಲನೆ ಮಾಡಿ ಸರಕಾರ ಶೇಕಡಾ 7.0 ಗೆ ಇಳಿಸಿತ್ತು. ಇದೀಗ ಮೂರನೇ ತ್ರೈಮಾಸಿಕದಲ್ಲಿ ಮತ್ತಷ್ಟು ಪಾತಾಳಕ್ಕಿಳಿದಿರುವ ಜಿಡಿಪಿ ಶೇಕಡಾ 6.6ಕ್ಕೆ ತಲುಪಿದೆ.

 ಭಾರತ ಅಂಕಿ ಅಂಶ ಸಚಿವಾಲಯ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಕುಸಿತದ ಹಾದಿ ಹಿಡಿದಿರುವ ಜಿಡಿಪಿ ದರ.
ಭಾರತ ಅಂಕಿ ಅಂಶ ಸಚಿವಾಲಯ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಕುಸಿತದ ಹಾದಿ ಹಿಡಿದಿರುವ ಜಿಡಿಪಿ ದರ.

ಇನ್ನು 2017-18 ರ ಅವಧಿಯಲ್ಲಿ ಭಾರತದ ಸರಾಸರಿ ಜಿಡಿಪಿ ದರ ಶೇಕಡಾ 7.2 ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ 2018-19 ರ ಅವಧಿಯಲ್ಲಿ ಅಭಿವೃದ್ಧಿ ದರ ಶೇ. 7.0 ರಷ್ಟು ಇರಲಿದೆ ಎಂದು ಅಂಕಿ ಅಂಶಗಳ ಸಚಿವಾಲಯ ಇದೇ ವೇಳೆ ತಿಳಿಸಿದೆ.

ಆದರೆ ಇದಕ್ಕಿಂತಲೂ ಜಿಡಿಪಿ ಕೆಳಕ್ಕಿಳಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ‘ಕಳೆದ ವರ್ಷ ರಾಷ್ಟ್ರದಾದ್ಯಂತ ಅಸಮರ್ಪಕ ಮಳೆ ದಾಖಲಾಗಿತ್ತು. ಇದರಿಂದ ಎಲ್ಲಾ ರಾಜ್ಯಗಳ ಜಲಾಶಯಗಳು ಖಾಲಿಯಾದ ಕಾರಣ ಕೃಷಿ ಚಟುಚಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿತ್ತು. ಆಹಾರ ಧಾನ್ಯಗಳ ಭಿತ್ತನೆಯಲ್ಲಿ ಕಳಪೆ ಸಾಧನೆ ದಾಖಲಾಗಿತ್ತು. ಇದನ್ನು ಸಮರ್ಪಕವಾಗಿ ಗ್ರಹಿಸಿದ್ದೇ ಆದಲ್ಲಿ ಜಿಡಿಪಿ ದರ ಮತ್ತಷ್ಟು ಕುಸಿತವಾಗಲಿದೆ,’ ಎನ್ನುವ ಅರ್ಥದಲ್ಲಿ ‘ಎಲ್‌ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್‌’ ಸಂಸ್ಥೆಯ ಆರ್ಥಿಕ ತಜ್ಞೆ ರೂಪ ರೇಗೆ ನಿಟ್ಶುರ್‌ ತಿಳಿಸಿದ್ದಾರೆ.

ಕೇಂದ್ರ ಅಂಕಿ ಅಂಶಗಳ ಇಲಾಖೆ ಈ ವರ್ಷದ ಸರಾಸರಿ ಜಿಡಿಪಿ ದರ ಶೇಕಡಾ 7.0 ಇರಲಿದೆ ಎಂದು ಅಂದಾಜಿಸಿದ್ದರೆ, ಕೇಂದ್ರೀಯ ಅಂಕಿ ಅಂಶಗಳ ಸಂಸ್ಥೆ ಶೇಕಡಾ 7.2ರಷ್ಟಿರಬಹುದು ಎಂದು ಲೆಕ್ಕ ಹಾಕಿದೆ. ಆದಾಗ್ಯೂ, ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ ಮಾತ್ರ 2018-19ರಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 7.4 ರಷ್ಟು ಇರಲಿದೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದೆ.

ಮುಂದಿನ ಆರ್ಥಿಕ ವರ್ಷದ ಜಿಡಿಪಿ ಅಂದಾಜನ್ನೂ ಆರ್‌ಬಿಐ ಲೆಕ್ಕ ಹಾಕಿದ್ದು ಮೊದಲಾರ್ಧದಲ್ಲಿ ಶೇಕಡಾ 7.2 ರಿಂದ ಶೇಕಡಾ 7.4ರ ನಡುವೆ ಇರಲಿದೆ ಎಂದು ಹೇಳಿದೆ. ಮೂರನೇ ತ್ರೈಮಾಸಿಕದಲ್ಲಿ ಇದು ಶೇಕಡಾ 7.5ನ್ನು ತಲುಪಲಿದೆ ಎಂದು ಅದು ಮಾಹಿತಿ ನೀಡಿದೆ. ಇದರಲ್ಲಿ ಯಾವುದು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.