samachara
www.samachara.com
ವೈಮಾನಿಕ ದಾಳಿಗೆ ಭಾರತದ ಸಂಭ್ರಮ; ಮೋದಿಗೆ ಚುನಾವಣಾ ‘ಲಾಭ’ದ ಮುನ್ಸೂಚನೆ
ದೇಶ

ವೈಮಾನಿಕ ದಾಳಿಗೆ ಭಾರತದ ಸಂಭ್ರಮ; ಮೋದಿಗೆ ಚುನಾವಣಾ ‘ಲಾಭ’ದ ಮುನ್ಸೂಚನೆ

ಕೃಷಿ ಬಿಕ್ಕಟ್ಟು, ರೈತರ ಕಡಿಮೆ ಆದಾಯ ಮತ್ತು ನಿರುದ್ಯೋಗ ಸಮಸ್ಯೆಗಳಿಗಿಂತ ಈಗ ರಾಷ್ಟ್ರಭಕ್ತಿ ಚುನಾವಣೆಯ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡಲಿದೆ. ವೈಮಾನಿಕ ದಾಳಿ ಇದಕ್ಕೆ ಹೊಸ ಸೇರ್ಪಡೆ.

ಭಾರತ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿ ಅಲ್ಲಿ ಅಡಗಿದ್ದ ನೂರಾರು ಉಗ್ರರನ್ನು ಕೊಂದಿದೆ ಎಂದು ಭಾರತದ ಜನರು ಮಂಗಳವಾರ ದೇಶದ ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ತಿಂಗಳಿಗೂ ಮುನ್ನಾ ದೇಶದ ಜನರ ಈ ಬಗೆಯ ಪ್ರತಿಕ್ರಿಯೆ ಮತ್ತೆ ನರೇಂದ್ರ ಮೋದಿಗೆ ಅಧಿಕಾರ ತಂದುಕೊಡುವ ಮುನ್ಸೂಚನೆಯಂತೆ ಕಾಣುತ್ತಿದೆ ಎಂಬುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯ. ಕೃಷಿ ಬಿಕ್ಕಟ್ಟು, ರೈತರ ಕಡಿಮೆ ಆದಾಯ ಮತ್ತು ನಿರುದ್ಯೋಗ ಸಮಸ್ಯೆಗಳಿಗಿಂತ ಈಗ ರಾಷ್ಟ್ರಭಕ್ತಿ ಚುನಾವಣೆಯ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡಲಿದೆ.

ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಹತ್ಯಾ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆಯು ಪಾಕಿಸ್ತಾನದ ನೆಲದೊಳಗಿನ ಜೈಷ್‌ - ಎ- ಮೊಹಮ್ಮದ್‌ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ ಎಂದು ಭಾರತ ಹೇಳಿದೆ.

ಈ ದಾಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೈಷ್‌ - ಎ- ಮೊಹಮ್ಮದ್‌ ಉಗ್ರರು ಹತರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಹೇಳಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ವಾಯುಪಡೆಯ ದಾಳಿ ಮಂಗಳವಾರ ಬೆಳಗ್ಗಿನಿಂದಲೇ ದೇಶದಲ್ಲಿ ಸಂಭ್ರಮಾಚರಣೆಯ ವಾತಾವರಣವನ್ನು ನಿರ್ಮಿಸಿತ್ತು. ದಾಳಿಯ ಬಗ್ಗೆ ಹಲವು ಸಂದೇಹಗಳು ದಿನವಿಡೀ ಉಳಿದುಕೊಂಡಿದ್ದವು. ಆದರೆ, ಸರಕಾರದ ಪರವಾದ ಭಾರತೀಯರು ದಾಳಿಯನ್ನು ಸಂಭ್ರಮಿಸಲು ಈ ಸಂದೇಹಗಳು ಅಡ್ಡಿಯಾಗಲೇ ಇಲ್ಲ.

"ಮೋದಿಜಿ ಕೊನೆಗೂ ಇದನ್ನು ಸಾಧಿಸಿದರು," ಎಂದು ಜಮ್ಮು ಪ್ರಾಂತ್ಯದಲ್ಲಿ ಚಾಲಕರಾಗಿ ಕೆಲಸ ಮಾಡುವ ಸಂದೀಶ್‌ ಶರ್ಮಾ ಹೀಗೆ ಹೇಳುವಾಗ ಅವರಲ್ಲಿ ಮೋದಿ ಬಗ್ಗೆ ಗೌರವಾದರಗಳೇ ಹೆಚ್ಚಾಗಿದ್ದವು. "ಇಲ್ಲಿ ಪಾಕಿಸ್ತಾನದ ಬಗ್ಗೆ ಸಾಕಷ್ಟು ಸಿಟ್ಟಿದೆ," ಎನ್ನುವ ಶರ್ಮಾ ಜಮ್ಮು- ಕಾಶ್ಮೀರದ ಗಡಿ ಭಾಗದವರು.

ಭಾರತದ ಬಹುತೇಕ ವಿರೋಧ ಪಕ್ಷಗಳೂ ಈ ಘಟನೆಯ ಬಗ್ಗೆ ವಾಯುಪಡೆಯನ್ನು ಅಭಿನಂದಿಸಿದ್ದವು. ಈ ಮೂಲಕ ದೇಶದ ಜನತೆಯ ಗೌರವ ಸಲ್ಲಬೇಕಾದ್ದು ಮೋದಿಗಲ್ಲ, ವಾಯುಪಡೆಗೆ ಎಂಬ ಸಂದೇಶ ಕೊಡಲು ವಿಪಕ್ಷಗಳು ಪ್ರಯತ್ನಿಸಿದ್ದವು.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ "ಭಾರತೀಯ ವಾಯು ಪಡೆಯ ಪೈಲಟ್‌ಗಳಿಗೆ ನನ್ನ ಸಲ್ಯೂಟ್‌," ಎಂದು ಟ್ವೀಟ್‌ ಮಾಡಿದ್ದರು.

ಗಡಿ ನಿಯಂತ್ರಣ ರೇಖೆಯಿಂದ ಸುಮಾರು 100 ಮೀಟರ್‌ ದೂರದಲ್ಲಿರುವ ಗ್ರಾಮದಲ್ಲಿ ಸೇನೆಯ ನಿರ್ಮಾಣ ಹಂತದ ಬಂಕರ್‌ ಸುತ್ತ ಜಮಾಯಿಸಿದ್ದ ಗ್ರಾಮಸ್ಥರು ಭಾರತಕ್ಕೆ ಜೈಕಾರ ಹಾಕಿದ್ದರು.

"ನಾವು ಈ ರಾತ್ರಿ ಸಂಭ್ರಮಾಚರಣೆ ಮಾಡುತ್ತೇವೆ. ಪಾಕಿಸ್ತಾನದ ದಾಳಿಗೆ ನಮ್ಮ ಗ್ರಾಮದ ಹಲವರು ಬಲಿಯಾಗಿದ್ದಾರೆ. ಭಾರತದ ಪ್ರತಿದಾಳಿ ನಮ್ಮಲ್ಲಿ ಸಂಭ್ರಮ ತಂದಿದೆ" ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರೊಬ್ಬರು.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹಲವು ವರ್ಷಗಳಿಂದ ಷೆಲ್‌ ದಾಳಿಗಳು ನಡೆಯುತ್ತಲೇ ಇವೆ. ಈ ದಾಳಿಗಳಿಗೆ ಬಲಿಯಾದ ಗ್ರಾಮಸ್ಥರಲ್ಲಿ ಈಗಿನ ಪ್ರತಿದಾಳಿ ಹೆಚ್ಚೇ ಸಂಭ್ರಮ ಉಂಟು ಮಾಡಿದೆ.

ಪುಲ್ವಾಮ ದಾಳಿಯ ಬಳಿಕ ಮೋದಿ ಪ್ರತಿದಾಳಿಯ ಒತ್ತಡದಲ್ಲಿದ್ದರು ಮತ್ತು ಈ ದಾಳಿಯ ಬಳಿಕ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಎರಡೂ ರಾಷ್ಟ್ರಗಳ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕೃತವಾಗಿ ಘೋಷಣೆಯಾಗದಿದ್ದರೂ ಯುದ್ಧ ಈಗಾಗಲೇ ಆರಂಭವಾಗಿದೆ.

ಚುನಾವಣೆಗೂ ಮುನ್ನಾ ಆರ್ಥಿಕ ವಿಚಾರಗಳಲ್ಲಿ ಬಿಜೆಪಿ ಎದುರುಗೊಳ್ಳಬೇಕಿದ್ದ ದುರಿತಗಳನ್ನೆಲ್ಲಾ ಈ ವೈಮಾನಿಕ ದಾಳಿ ಅಳಿಸಿ ಹಾಕಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. "ಸರಕಾರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದೆ ಎಂಬ ಸಂಭ್ರಮಾಚರಣೆಯ ಅಲೆಯಲ್ಲಿ ದೇಶದ ಜನರ ಮನೋಭಾವ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗಿ ಬದಲಾಗಲಿದೆ" ಎನ್ನುತ್ತಾರೆ ದೆಹಲಿಯ ಸಾಮಾಜಿಕ ಅಭಿವೃದ್ಧಿ ಅಧ್ಯಯನ ಕೇಂದ್ರದ (ಸಿಎಸ್‌ಡಿಎಸ್‌) ನಿರ್ದೇಶಕ ಸಂಜಯ್‌ ಕುಮಾರ್‌.

ಕಳೆದ ವರ್ಷ ಭಾರತದಲ್ಲಿ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿತ್ತು. ಇದಾದ ಬಳಿಕ ಮೋದಿಯನ್ನು ಸೋಲಿಸಲು ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿದ್ದವು. ದೇಶದಲ್ಲಿ ಮೋದಿ ಅಲೆ ಕಡಿಮೆಯಾಗುತ್ತಿದೆ ಎಂದು ಹೇಳುವ ಸಂದರ್ಭದಲ್ಲೂ 'ಮೋದಿ ದೇಶದ ಜನಪ್ರಿಯ ನಾಯಕ' ಎಂದು ಕಳೆದ ತಿಂಗಳು ಬಿಡುಗಡೆಯಾದ 'ಇಂಡಿಯಾ ಟುಡೆ' ಜನಮತ ಅಭಿಪ್ರಾಯ ಹೇಳಿತ್ತು.

"ಬಿಜೆಪಿಯಿಂದ ದೂರಾಗುತ್ತಿದ್ದ ದೊಡ್ಡ ಸಂಖ್ಯೆಯ ಮತದಾರರು ಈಗ ಮತ್ತೆ ಬಿಜೆಪಿ ತೆಕ್ಕೆಗೆ ಬರುವಂತಾಗಿದೆ. ಇದೆಲ್ಲವೂ ಬಿಜೆಪಿಗೆ ಚುನಾವಣಾ ಲಾಭವೇ ಆಗಲಿದೆ" ಎನ್ನುತ್ತಾರೆ ಸಂಜಯ್ ಕುಮಾರ್‌.

ಪಕ್ಷದ ಬಗ್ಗೆ ಭ್ರಮನಿರಸಗೊಂಡಿದ್ದ ಬಿಜೆಪಿ ಬೆಂಬಲಿಗರಿಗೂ ಈಗ ಒಂದು ರೀತಿಯ ನೆಮ್ಮದಿ ಸಿಕ್ಕಂತಾಗಿದೆ. ವೈಮಾನಿಕ ದಾಳಿಯ ಬಳಿಕ ದೇಶದ ಮನೋಭಾವ ಬಿಜೆಪಿ ಪಡೆಗೆ ತಿರುಗಿದಂತೆ ಕಾಣುತ್ತಿದೆ. "ಈ ಘಟನೆಯಿಂದ ಬಿಜೆಪಿ ಬೆಂಬಲಿಗರೆಲ್ಲರೂ ನರೇಂದ್ರ ಮೋದಿ ಪರವಾಗಿ ಕೆಲಸ ಮಾಡಲಿದ್ದಾರೆ. ಚುನಾವಣಾ ಪೂರ್ವದಲ್ಲಿ ಪುಲ್ವಾಮ ಘಟನೆ ಮತ್ತು ವೈಮಾನಿಕ ದಾಳಿಗಳೇ ಚುನಾವಣೆಯಲ್ಲಿ ನಿರ್ಣಾಯಕವಾಗಲಿವೆ" ಎನ್ನುತ್ತಾರೆ ರಾಜಕೀಯ ಸಮೀಕ್ಷಾ ಸಂಸ್ಥೆ ಸಿಎನ್‌ಎಕ್ಸ್‌ನ ಸಂಸ್ಥಾಪಕ ಭವೇಶ್‌ ಝಾ.

ದೇಶದ ಮುಖ್ಯ ವಾಹಿನಿ ಮಾಧ್ಯಮಗಳಲ್ಲೂ ರಾ‍ಷ್ಟ್ರಭಕ್ತಿಯ ಘೋಷಣೆಗಳು ಜಗಮಗಿಸುತ್ತಿವೆ. ವೈಮಾನಿಕ ದಾಳಿಯ ಘಟನೆಯನ್ನು ಟೈಮ್ಸ್‌ ನೌ ಸೇರಿದಂತೆ ಹಲವು ಮಾಧ್ಯಮಗಳು 'ಸೋಲರಿಯದ ಭಾರತಕ್ಕೆ ಹೆಮ್ಮೆಯ ಸಮಯ' ಎಂಬ ಹೆಡ್ಡಿಂಗ್‌ ನೀಡಿ ಸುದ್ದಿ ಬಿತ್ತರಿಸುತ್ತಿವೆ.

ಕೆಲವು ಮಾಧ್ಯಮಗಳು 2016ರಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ನ ಎರಡನೇ ಆವೃತ್ತಿ ಇದು ಎಂದು ಸಾರುತ್ತಿವೆ. ಮಂಗಳವಾರದ ಮಟ್ಟಿಗೆ #SurgicalStrike2, #IndianAirForce, #IndiaStrikesBack ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದವು.

ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಭಾರತದ ವಿದೇಶಾಂಗ ಇಲಾಖೆ ದಾಳಿಯ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗ ಪಡಿಸಿತ್ತು. ಅದೇ ಹೊತ್ತಿಗೆ ರಾಜಸ್ತಾನದ ಚುರುವಿನ ಚುನಾವಣಾ ರ್ಯಾಲಿಯಲ್ಲಿ ಮೋದಿ ಈ ವಿಚಾರವನ್ನು ಹೇಗೆ ದಾಟಿಸಬೇಕೋ ಹಾಗೆ ಜನ ಸಮೂಹಕ್ಕೆ ದಾಟಿಸಿದ್ದರು.

"ಭಾರತ ಸುಭದ್ರವಾದ ಕೈಗಳ ರಕ್ಷಣೆಯಲ್ಲಿದೆ ಎಂದು ನಾನು ಭರವಸೆ ನೀಡುತ್ತೇನೆ" ಎಂಬ ಮಾತನ್ನು ಚುನಾವಣಾ ರ್ಯಾಲಿಯ ವೇದಿಕೆಯಿಂದ ಮೋದಿ ಹರಿಬಿಟ್ಟಿದ್ದರು.

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳ ಫ್ಲೆಕ್ಸ್‌ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಮೋದಿ ಭಾಷಣ ಮಾಡುತ್ತಿದ್ದರೆ ಜನ, "ಮೋದಿ, ಮೋದಿ, ಮೋದಿ" ಕೂಗುತ್ತಿದ್ದರು.

ಸುದ್ದಿಮೂಲ: ರಾಯಿಟರ್ಸ್‌

(ಇದು ಸುದ್ದಿ ಸಂಸ್ಥೆ ಮಂಗಳವಾರದ ಬೆಳವಣಿಗೆ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟ ವರದಿ. ಬುಧವಾರ ಸಂಜೆ ವೇಳೆಗೆ ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ- ಸಮಾಚಾರ)