samachara
www.samachara.com
ಎರವಲು ತಂದ ರಾಷ್ಟ್ರೀಯತೆಯ ನೆರಳಲ್ಲಿ ತಾರಕಕ್ಕೇರಿದ ‘ರಾಷ್ಟ್ರಪ್ರೇಮ’ - ಏನಿದು?
ದೇಶ

ಎರವಲು ತಂದ ರಾಷ್ಟ್ರೀಯತೆಯ ನೆರಳಲ್ಲಿ ತಾರಕಕ್ಕೇರಿದ ‘ರಾಷ್ಟ್ರಪ್ರೇಮ’ - ಏನಿದು?

ಭಾರತಕ್ಕೆ ಒಂದು ರಾಷ್ಟ್ರೀಯತೆ ಇಲ್ಲ ಅಥವಾ ಭಾರತದ ಮಟ್ಟಿಗೆ ರಾಷ್ಟ್ರೀಯತೆ ಎಂಬುದು ಲೀನಿಯಲ್‌ ಅಲ್ಲ. ಇಲ್ಲಿ ಕನ್ನಡ ಜಗತ್ತಿನ ರಾಷ್ಟ್ರೀಯತೆಯೂ ಇದೆ, ಕಾಶ್ಮೀರದ ರಾಷ್ಟ್ರೀಯತೆಯೂ ಇದೆ.

“ಈ ದೇಶದ ಜನರು ನಮ್ಮನ್ನೂ ಮನುಷ್ಯರು ಎಂದು ಒಪ್ಪಿಕೊಳ್ಳದ ಮೇಲೆ ನಾವು ಈ ದೇಶದ ಜನರೊಳಗೆ ಒಂದು ಎಂದು ಅನಿಸಲು ಹೇಗೆ ಸಾಧ್ಯ?”

ಕರ್ನಾಟಕದ ದಕ್ಷಿಣ ತುದಿಯ ಬಿಳಿಗಿರಿರಂಗನ ಬೆಟ್ಟದ ಆದಿವಾಸಿ ಸೋಲಿಗ ಸಮುದಾಯದ ಮಾದೇಗೌಡರು ಕೇಳಿದ ಇಂಥದ್ದೇ ಪ್ರಶ್ನೆಯನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಸುಮಾರು ಎಂಟು ದಶಕಗಳ ಹಿಂದೆ ಹೇಳಿದ್ದರು. ಕಾಲ ಉರುಳಿ ಹೋಗಿದೆ, ಆ ಮಾತು ಇನ್ನೂ ಉಳಿದಿದೆ. ಎಂಟು ದಶಕಗಳ ನಂತರವೂ ಈ ದೇಶ ಮನುಷ್ಯರನ್ನ ಮನುಷ್ಯರು ಎಂದು ಒಪ್ಪಿಕೊಳ್ಳದ ಮೇಲೆ ಈ ದೇಶ ರಾಷ್ಟ್ರೀಯತೆ ಹೆಸರಲ್ಲಿ ಒಂದಾಗಲು ಸಾಧ್ಯವೇ? ರಾಷ್ಟ್ರೀಯತೆಯ ವಿಚಾರ ಬಂದಾಗ ಇದೊಂದು ತೀರಾ ಪ್ರಾಥಮಿಕ ಹಾಗೂ ಜಟಿಲವಾದ ಪ್ರಶ್ನೆ.

ವಾರಗಳ ಹಿಂದೆ ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದಾಗ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ, ರಾಷ್ಟ್ರೀಯತೆಯ ಬಗ್ಗೆ ದೇಶದಲ್ಲಿ ಸಾಮೂಹಿಕವಾದಂಥ ಅಥವಾ ಸಾಮೂಹಿಕಗೊಳಿಸಲಾದ ಉದ್ವೇಗವೊಂದು ಹುಟ್ಟಿಕೊಂಡಿತ್ತು. ಕೈಗೆ ಬಂದೂಕು ಸಿಕ್ಕರೆ ಇಡೀ ಪಾಕಿಸ್ತಾನವನ್ನು ಇನ್ನಿಲ್ಲವಾಗಿಸುವ ಅವಾಸ್ತವಿಕ ಮಾತುಗಳೂ ಸಾಮಾನ್ಯವಾಗಿದ್ದವು. ಮುಖ್ಯವಾಹಿನಿಯ ಮಾಧ್ಯಮಗಳೂ ಈ ಭಾವೋದ್ವೇಗದ ಬೆಂಕಿಗೆ ದಿನದಿನವೂ ತುಪ್ಪ ಸುರಿಯುತ್ತಲೇ ಇದ್ದವು. ಪುಲ್ವಾಮ ಘಟನೆ ನಡೆದು ಇಂದಿಗೆ ಹತ್ತು ದಿನ. ಈಗ ಈ ಬೆಂಕಿಯ ಕೆನ್ನಾಲಿಗೆ ಸ್ವಲ್ಪಮಟ್ಟಿಗೆ ತಗ್ಗಿದೆ.

ಮತ್ತೆ ಮಾದೇಗೌಡರ ಮಾತುಗಳಿಗೆ ಬಂದರೆ, ಪುಲ್ವಾಮ ಘಟನೆ ನಡೆದ ವಾರದೊಳಗೇ ನಮ್ಮದೇ ದೇಶದ ಸುಪ್ರೀಂಕೋರ್ಟ್‌ ಆದಿವಾಸಿಗಳ ಬಗ್ಗೆ ತೀರಾ ನಿರ್ದಯವಾದ್ದು ಎನ್ನಬಹುದಾದ ಆದೇಶವೊಂದನ್ನು ನೀಡಿದೆ. ಅರಣ್ಯ ಭೂಮಿಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಅರ್ಜಿಗಳು ತಿರಸ್ಕೃತಗೊಂಡಿರುವ ಹನ್ನೊಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಮುಂದಿನ ವಿಚಾರಣೆಯೊಳಗೆ ಅರಣ್ಯದಿಂದ ವಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ವಕ್ಕಲೆಬ್ಬಿಸುವ ಕೆಲಸಕ್ಕೆ ಸುಪ್ರೀಂಕೋರ್ಟ್‌ ನೀಡಿರುವ ಗಡುವು ಐದು ತಿಂಗಳು. ಕಾಡಿನಿಂದ ವಕ್ಕಲೆಬ್ಬಿಸುವವರ ಪುನರ್‌ ವಸತಿಯ ಬಗ್ಗೆ, ಕಾರ್ಯಾಚರಣೆ ಅಮಾನವೀಯವಾಗಿ ನಡೆಯಬಾರದೆಂಬ ಬಗ್ಗೆ ಆದೇಶದಲ್ಲಿ ಒಂದೇ ಒಂದು ಸಾಲನ್ನೂ ಘನ ನ್ಯಾಯಾಲಯ ಹೇಳಿಲ್ಲ.

ಹಕ್ಕುಪತ್ರಗಳಿಗಾಗಿ ಅರ್ಜಿ ಹಾಕಿರುವವರ ಪೈಕಿ ಆದಿವಾಸಿಗಳಲ್ಲದವರೂ ಇದ್ದಾರೆ. ಆದರೆ, ಈ ಆದೇಶದಿಂದ ನಿಜಕ್ಕೂ ಹೆಚ್ಚು ಹಾನಿಯಾಗುವುದು ಆದಿವಾಸಿಗಳಿಗೆ. ಕಾಡಿನೊಂದಿಗೆ ಬದುಕುವ ಲಕ್ಷಾಂತರ ಮಂದಿ ಆದಿವಾಸಿಗಳ ಹಕ್ಕನ್ನೇ ಕಸಿದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದರೂ ದೇಶದ ಬಹುಪಾಲು ಜನ ಈ ಘಟನೆಗೂ ತಮಗೂ ಸಂಬಂಧವೇ ಇಲ್ಲದಂತಿದ್ದಾರೆ. ಆದಿವಾಸಿಗಳನ್ನು ಮನುಷ್ಯರು ಎಂದು ಒಪ್ಪಲು ತಯಾರಿಲ್ಲದ ಮನಸ್ಸುಗಳು ಈ ವಿಚಾರದಲ್ಲಿ ಸಂವೇದನೆಯನ್ನೇ ಮರೆತಂತಿವೆ. ಇಂಥ ಸಂದರ್ಭದಲ್ಲಿ ನಾವೂ ಈ ದೇಶದ ಜನರಲ್ಲಿ ಒಂದು ಎಂಬ ಭಾವನೆ ಆದಿವಾಸಿಗಳಲ್ಲಿ ಬರಲು ಹೇಗೆ ಸಾಧ್ಯ?

ಒಂದು ಕಡೆ ಅತ್ಯುಗ್ರ ರಾಷ್ಟ್ರಪ್ರೇಮವನ್ನು ತೋರುವ ಜನ ದೇಶದೊಳಗಿನ ಸಂಕಟಗಳಿಗೆ ಭಾವಶೂನ್ಯರಾಗುವ ಅಪಾಯವೇ ಭಾರತವನ್ನು ನಾವೆಲ್ಲರೂ ಒಂದು ಎಂಬ ಮನೋಭಾವದೊಳಗೆ ಬೆಸೆಯಲು ಸೋತಿರುವುದು. ಇದು ಕೇವಲ ಆದಿವಾಸಿಗಳೊಂದಿಗಿನ ಸಮಸ್ಯೆ ಮಾತ್ರವಲ್ಲ, ಈ ದೇಶದ ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರನ್ನು ಇಲ್ಲಿನ ಬಹುಸಂಖ್ಯಾತರು ಮನುಷ್ಯರು ಎಂದು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ರಾಷ್ಟ್ರೀಯತೆ ಈ ದೇಶಕ್ಕೆ ಇಂದಿಗೂ ರಾಜಕೀಯ ಲಾಭದ ಸರಕಾಗಿದೆಯೇ ಹೊರತು ಎಲ್ಲರನ್ನೂ ಒಂದು ಸಾಮಾನ್ಯ ಅಂಶದಲ್ಲಿ ಬೆಸೆಯುವ ಸಾಧನವಾಗಿಲ್ಲ.

“ಭಾರತ ಒಂದು ರಾಷ್ಟ್ರ ಅಥವಾ ಒಂದು ದೇಶವಲ್ಲ. ಯುರೋಪ್‌ನಂತೆ ಹಲವು ದೇಶಗಳ ಒಂದು ಭೂ ಭಾಗ. ಶತಮಾನಗಳ ಬಳಿಕವೂ ಯುರೋಪಿನ ಹೆಸರಿನಲ್ಲಿ ಅಭಿಪ್ರಾಯ ದಾಖಲಿಸಲು ಸಾಧ್ಯ. ಆದರೆ, ಭಾರತದಲ್ಲಿ ಇದು ಸಾಧ್ಯವಿಲ್ಲ. ಭಾರತ ಜನಾಂಗ ಹಾಗೂ ಧರ್ಮದ ಆಧಾರದಲ್ಲಿ ಹಲವು ಭಾಗಗಳಾಗಿ ಒಡೆದು ಹೋಗಿದೆ” ಎಂದು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟನ್‌ ಹಿಂದೆ ಮುಂದೆ ನೋಡುತ್ತಿದ್ದ ಸಂದರ್ಭದಲ್ಲಿ ಚರ್ಚಿಲ್‌ ಹೇಳಿರುವ ಈ ಮಾತುಗಳು ಇಂದಿಗೂ ನಿಜವಾಗಿಯೇ ಉಳಿದಿವೆ. ಈ ದೇಶ ಮಾನಸಿಕವಾಗಿ ಒಂದಾಗುವಂಥ ಸಂದರ್ಭ ಇನ್ನೂ ಸೃಷ್ಟಿಯಾಗಿಲ್ಲ, ಬದಲಾಗಿ ಕಂದರಗಳು, ಗೋಡೆಗಳು ದೇಶದೊಳಗೆ ದೊಡ್ಡದಾಗುತ್ತಲೇ ಇವೆ.

ರಾಷ್ಟ್ರೀಯತೆ ಎನ್ನುವುದು ಭಾವನಾತ್ಮಕ, ಮಾನಸಿಕ ಕಲ್ಪನೆ. ಒಂದು ಧರ್ಮ, ಒಂದು ಭಾಷೆ ಭಾರತದಲ್ಲಿ ಇಲ್ಲದಿರುವುದರಿಂದ ಯುರೋಪ್‌ ಮಾದರಿಯ ರಾಷ್ಟ್ರೀಯತೆ ಇಲ್ಲಿ ಸಾಧ್ಯವಿಲ್ಲ. ಈಗ ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಪ್ರತ್ಯೇಕತೆಯನ್ನು ರಾಜಕೀಯವಾಗಿಯೇ ಎದುರುಗೊಳ್ಳಬೇಕು. ಸೆಕ್ಯುಲರ್‌ ಪಕ್ಷಗಳು ಈ ವಿಚಾರದಲ್ಲಿ ಪ್ರಬುದ್ಧತೆ ತೋರಬೇಕು. ಕಾಂಗ್ರೆಸ್‌ ಈ ಹಿಂದೆ ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳದೆ ಅದು ಎಲ್ಲರ ವಿಶ್ವಾಸಾರ್ಹತೆ ಗಳಿಸುವುದು ಸಾಧ್ಯವಿಲ್ಲ. ಧರ್ಮ ಮೀರಿದ ರಾಷ್ಟ್ರೀಯತೆಯನ್ನು ಸಾಂಸ್ಕೃತಿಕವಾಗಿ ಕಟ್ಟಿಕೊಳ್ಳುವ ಕಡೆಗೆ ಈಗ ಯೋಚಿಸಬೇಕು.
- ಎ. ನಾರಾಯಣ, ರಾಜಕೀಯ ಚಿಂತಕ

ಕಟ್ಟಿ ಹಾಕಿರುವ ಸಂವಿಧಾನ

ಸಂವಿಧಾನದ ಹೆಸರಿನಲ್ಲಿ ಭಾರತ ಒಂದಾಗಿರುವುದು ಬಿಟ್ಟರೆ ಮಾನಸಿಕವಾಗಿ ಭಾರತ ಯಾವತ್ತೂ ಒಂದಾಗಿಲ್ಲ, ಅದು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲೂ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು ದೇಶಕ್ಕೆ ತನ್ನದೇ ಆದ ಸಂವಿಧಾನ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಜಾರಿಗೆ ಬಂದ ನಂತರ ಸಂವಿಧಾನದ ಅಡಿಯಲ್ಲಿ ದೇಶದಲ್ಲಿರುವ ಎಲ್ಲರೂ ಸಮಾನರು ಎಂಬ ಕನಸು ಹುಟ್ಟಿಕೊಂಡಿತು. ಈ ಕನಸು ಕಾಣುವ ಸಂದರ್ಭದಲ್ಲೇ ಇದು ಸಾಕಾರವಾಗುವುದು ಸಾಧ್ಯವೇ ಎಂಬ ಅನುಮಾನಗಳೂ ಇದ್ದವು. ಈ ಸಮಾನತೆಯ ಉದಾತ್ತ ಕನಸು ಕೇವಲ ಸಂವಿಧಾನದ ಪ್ರಸ್ತಾವನೆಯ ಆಶಯದ ಮಟ್ಟಕ್ಕೆ ಉಳಿದುಕೊಂಡಿದೆಯೇ ಹೊರತು ದೇಶ ಸಂವಿಧಾನದ ಆಧಾರದಲ್ಲೂ ಮಾನಸಿಕವಾಗಿ; ಸ್ವಯಂಪ್ರೇರಣೆಯಿಂದ ಒಂದಾಗಿಲ್ಲ.

ಸಂವಿಧಾನ ಕಟ್ಟಿ ಹಾಕಿರುವ ಕಾರಣಕ್ಕೆ ಭಾರತ ಎಂಬುದು ಒಂದು ದೇಶವಾಗಿ ಇಂದು ನಮಗೆ ಕಾಣುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಈ ದೇಶಕ್ಕೆ ಸಾಧ್ಯವಾಗಿಲ್ಲ. ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಭೂ ಭಾಗಗಳೂ ರಾಜಕೀಯವಾಗಿ ಭಾರತದೊಂದಿಗೆ ಇವೆಯೇ ಹೊರತು ಮಾನಸಿಕವಾಗಿ ಅಖಂಡ ಭಾರತ ಈ ಹೊತ್ತಿಗೂ ಒಂದಾಗಿಲ್ಲ.

ಸಿಂಧೂ ನಾಗರಿಕತೆಯ ಜೀವನ ಕ್ರಮವಾಗಿದ್ದ 'ಹಿಂದೂ' ಎಂಬುದನ್ನು ಧರ್ಮವಾಗಿಸಿಕೊಂಡು ಹಿಂದೂರಾಷ್ಟ್ರ ಕಟ್ಟಲು ಹೊರಟಿರುವವರಿಗೆ ದೇಶದ ಸಂವಿಧಾನವೇ ತೊಡಕಾಗಿದೆ. ಈ ಕಾರಣಕ್ಕೇ ಸಂವಿಧಾನವನ್ನು ಸುಟ್ಟು ಹಾಕುವ, ಸಂವಿಧಾನವನ್ನು ಬದಲಿಸುವ, ಮನುಸ್ಮೃತಿಯನ್ನೇ ದೇಶದ ಸಂವಿಧಾನವಾಗಿಸುವ ಮಾತುಗಳನ್ನು ಉಗ್ರ ರಾಷ್ಟ್ರಭಕ್ತಿ ಹೇಳಿಸುತ್ತಲೇ ಇರುತ್ತದೆ. ಆದರೆ, ದೇಶದಲ್ಲಿ ಜಾತಿ, ವರ್ಗಗಳ ಒಡಕು ಇರುವವರೆಗೂ ಅನ್ಯ ಧರ್ಮದವರನ್ನೂ ಒಪ್ಪಿಕೊಂಡ ರಾಷ್ಟ್ರೀಯತೆ ಕಟ್ಟಿಕೊಳ್ಳುವುದಿರಲಿ, ಹಿಂದೂ ರಾಷ್ಟ್ರೀಯತೆಯನ್ನೇ ಕಟ್ಟಲು ಸಾಧ್ಯವಿಲ್ಲ.

ರಾಷ್ಟ್ರೀಯತೆ ಮತ್ತು ಗ್ಲೋಬಲ್‌ ವಿಲೇಜ್

'ಜಾಗತಿಕ ಪ್ರಜೆ', 'ಜಾಗತಿಕ ಗ್ರಾಮ', 'ವಿಶ್ವಮಾನವ' ಪರಿಕಲ್ಪನೆಗಳು ಚಲಾವಣೆಗೆ ಬಂದು ದಶಕಗಳೇ ಕಳೆದುಹೋಗಿವೆ. ಈ ಪರಿಕಲ್ಪನೆಗಳು ಆದರ್ಶದ ನೆಲೆಯಲ್ಲಿವೆಯೇ ಹೊರತು ಸಾಕಾರವಾಗಿಲ್ಲ, ಬಹುಶಃ ಸಾಕಾರವಾಗುವುದು ಅಷ್ಟು ಸುಲಭವೂ ಇಲ್ಲ. ಜಾಗತೀಕರಣವನ್ನು ಒಪ್ಪಿಕೊಂಡ ಕಾಲದಲ್ಲಿ ಬೇರೆ ಬೇರೆ ದೇಶಗಳ, ಬೇರೆ ಬೇರೆ ಭಾಷೆ ಮಾತನಾಡುವ ಜನ ಕೆಲಸಕ್ಕಾಗಿ ಇಂಗ್ಲಿಷ್‌ ಭಾಷೆಯ ಮೂಲಕ ಜಗತ್ತಿನ ಎಲ್ಲೆಡೆ ಹಬ್ಬಿಕೊಂಡಿದ್ದಾರೆ. ಆದರೂ ಜಾಗತಿಕ ಗ್ರಾಮ ಎಂಬುದು ಕಲ್ಪನೆಯಲ್ಲಿ ಕಾಣುವಷ್ಟು ಸರಳವಾಗಿಯೇನೂ ಇಲ್ಲ.

ಮಧ್ಯಮ ವರ್ಗದ ಸಿಟ್ಟನ್ನು ಕೀಳರಿಮೆಯಾಗಿ ಬದಲಿಸುವ ಮಾರುಕಟ್ಟೆಯ ತಂತ್ರಗಳು ಮಧ್ಯಮ ವರ್ಗದ ಸಿಟ್ಟನ್ನು ಹತ್ತಿಕ್ಕುತ್ತಿವೆ. ಜಾಗತೀಕರಣದ ಕನ್ನಡಿಯ ಹಿಂದಿನ ದುಷ್ಪರಿಣಾಮಗಳನ್ನು ಎದುರಿಸಲು ಬೇಕಾಗಿದ್ದ ಈ ಸಿಟ್ಟೇ ಈಗ ತನ್ನ ಸ್ವರೂಪ ಬದಲಿಸಿಕೊಂಡಿರುವುದರಿಂದ ಈ ನೆಲೆಯಲ್ಲೂ ರಾಷ್ಟ್ರೀಯತೆ ಎಂಬುದು ಸಾಕಾರವಾಗಲು ಸಾಧ್ಯವಿಲ್ಲ. ದಶಕಗಳ ಹಿಂದೆ ಶತ್ರುವಾಗಿ ಕಂಡಿದ್ದ ಜಾಗತೀಕರಣವೂ ಇಂದು ಒಪ್ಪಿತವಾಗಿ ಜಾಗತೀಕರಣದ ಮಾರುಕಟ್ಟೆ ತಂತ್ರಗಳಿಗೆ ದೇಶದ ಜನ ಒಗ್ಗಿ ಹೋಗಿದ್ದಾರೆ. ಈ ಹಂತದಲ್ಲಿ ಗಾಂಧಿ ಹೇಳುವ ಸ್ವರಾಜ್ಯವೂ ಗತದ ಪಳೆಯುಳಿಕೆಯಾಗಿ ಕಾಣುವುದು ದುರಂತ.

ಎರವಲು ತಂದ ರಾಷ್ಟ್ರೀಯತೆಯ ನೆರಳಲ್ಲಿ ತಾರಕಕ್ಕೇರಿದ ‘ರಾಷ್ಟ್ರಪ್ರೇಮ’ - ಏನಿದು?

ನಿಜವಾಗಿ ರಾಷ್ಟ್ರೀಯತೆ ಅಂದರೇನು?

ರಾಷ್ಟ್ರ ಅಥವಾ ದೇಶದ ಪರಿಕಲ್ಪನೆ ಪ್ರಾಚೀನ ಗ್ರೀಕ್‍‍ ಕಾಲದಲ್ಲೂ ಇತ್ತು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಬರುವವರೆಗೂ ಆಯಾ ಭೂ ಭಾಗಗಳ ರಾಜರ ಅಧೀನದ ರಾಜ್ಯ, ನಾಡು ಎಂಬ ಕಲ್ಪನೆ ಇತ್ತು. ಆದರೆ, ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಅಸ್ಪಷ್ಟವಾಗಿ ಹುಟ್ಟಿಕೊಂಡಿದ್ದು 16ನೇ ಶತಮಾನದ ಯುರೋಪ್‍‍ನಲ್ಲಿ. ಯುರೋಪ್‍‍ನ ಹಲವು ಭೂ ಭಾಗಗಳು ಒಂದು ಧರ್ಮ, ಒಂದು ಭಾಷೆಯ ಆಧಾರದಲ್ಲಿ ಒಂದು ಒಕ್ಕೂಟವಾಗಿ ಸೇರುವ ಪ್ರಕ್ರಿಯೆ 19ನೇ ಶತಮಾನದ ಹೊತ್ತಿಗೆ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯನ್ನು ರೂಪಿಸಿತ್ತು.

ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಒಂದು ಧರ್ಮ, ಒಂದು ಭಾಷೆ ಮತ್ತು ಒಬ್ಬ ಸಾಮಾನ್ಯ ಶತ್ರು ಎಂಬ ಪರಿಕಲ್ಪನೆಯಲ್ಲಿ 19ನೇ ಶತಮಾನದ ಯುರೋಪ್‌ನ ರಾಷ್ಟ್ರೀಯತೆ ಹುಟ್ಟಿಕೊಂಡಿತ್ತು. ಪ್ರಜಾತಂತ್ರವನ್ನು ಕಟ್ಟುವುದಕ್ಕಾಗಿ ಪ್ರಭುತ್ವ ಅಂದಿಗೆ ಸಾಮಾನ್ಯ ಶತ್ರುವಾಗಿತ್ತು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಗಾಗಿ ಧರ್ಮ- ಭಾಷೆಯ ಆಧಾರದಲ್ಲಿ ನಿರ್ದಿಷ್ಟ ಭೂ ಭಾಗದಲ್ಲಿ ಪ್ರಜೆಗಳೆಲ್ಲರೂ ಒಂದೇ ಎಂದು ಒಕ್ಕೂಟಗೊಳ್ಳುವ ಚಳವಳಿ ರಾಷ್ಟ್ರೀಯತೆ ಎನಿಸಿತ್ತು.

ಹೆಚ್ಚೂ ಕಡಿಮೆ ಇದೇ ಪರಿಕಲ್ಪನೆಯನ್ನು ಭಾರತ ಸ್ವಾತಂತ್ರ್ಯ ಚಳವಳಿಗೆ ಬಳಸಿಕೊಂಡಿದ್ದು. ಹಲವು ಭಾಷೆ, ಹಲವು ಧರ್ಮಗಳು ಇದ್ದಾಗಲೂ ಆಗ ಭಾರತಕ್ಕೆ ಸಾಮಾನ್ಯ ಶತ್ರುವಾಗಿದ್ದು ಬ್ರಿಟಿಷರು. ಬ್ರಿಟಿಷರನ್ನು ಎದುರಿಸುವ ಸಲುವಾಗಿ ಆಗ ಭಾಷೆ, ಧರ್ಮಗಳ ವಿಚಾರಗಳು ಸ್ವಲ್ಪಮಟ್ಟಿಗೆ ತಣ್ಣಗಿದ್ದವು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲೇ, ದೇಶ ವಿಭಜನೆಯ ಜೊತೆಜೊತೆಗೇ ಧರ್ಮ ಮುನ್ನೆಲೆಗೆ ಬಂತು. ದಕ್ಷಿಣದಲ್ಲಿ ಭಾಷಾವಾರು ಹೋರಾಟಗಳು ಆರಂಭವಾದವು. ಆ ಕಾಲದಲ್ಲೇ ಧರ್ಮವಾಗಿ ಹಿಂದೂ, ಭಾಷೆಯಾಗಿ ಹಿಂದಿ ಎಂಬ ಹೇರಿಕೆಯ ಜತೆಗೇ ಪಾಕಿಸ್ತಾನ ಭಾರತಕ್ಕೆ ಕಾಮನ್‌ ಎನಿಮಿ ಆಯಿತು.

ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ಎರವಲು ತಂದ ರಾಷ್ಟ್ರೀಯತೆಯನ್ನೇ ಇಂದಿಗೂ ಭಾರತದ ರಾಷ್ಟ್ರೀಯತೆ ಎಂದು ಕರೆಯಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಚಳವಳಿಯ ರೆಂಬೆಗೆ ಯುರೋಪ್‌ನ ರಾಷ್ಟ್ರೀಯತೆಯ ಕಡ್ಡಿ ತಂದು ಕಸಿ ಮಾಡಿದ್ದು ದೇಶಕ್ಕೆ ಸ್ವಾತಂತ್ರ್ಯದ ಫಲ ಕೊಡಲು ನೆರವಾಗಿದ್ದು ನಿಜ. ಆದರೆ, ಅತಿರೇಕದ ರಾಷ್ಟ್ರಭಕ್ತಿಯ ಆಧಾರದಲ್ಲಿ ಭಾರತದ ಎಲ್ಲರ ಮೇಲೂ ಉಗ್ರ ರಾಷ್ಟ್ರೀಯತೆಯನ್ನು ಹೇರಲು ಹೊರಟಿರುವುದು ಅಪಾಯಕಾರಿ. ಭಾರತ ಹಲವು ಸಮುದಾಯ, ಹಲವು ಭಾಷೆ, ಹಲವು ಜೀವನ ಕ್ರಮಗಳ ಭೂ ಪ್ರದೇಶ. ಇದನ್ನು 'ಸರ್ವ ಜನಾಂಗದ ಶಾಂತಿಯ ತೋಟ'ವಾಗಿಯೇ ನೋಡಬೇಕೇ ಹೊರತು ಒಂದೇ ಜನಾಂಗದ, ಒಂದೇ ಭಾಷೆಯ ರಾಷ್ಟ್ರೀಯತೆಗೆ ಕಟ್ಟಿ ಹಾಕುವುದು ಅಸಾಧ್ಯ.

ಭಾರತಕ್ಕೆ ಭಾರತದ್ದೇ ಆದಂಥ ರಾಷ್ಟ್ರೀಯತೆಯ ಮಾದರಿ ಇದೆಯೇ ಎಂಬುದೇ ಸಮಸ್ಯಾತ್ಮಕ. ಭಾರತೀಯರೆಲ್ಲರೂ ಒಂದೇ ಎಂಬ ನೆಲೆಯಲ್ಲಿ ನಾವೆಲ್ಲರೂ ಒಂದೇ ಎಂದು ಮಾನಸಿಕವಾಗಿ ಒಪ್ಪಿಕೊಂಡಾಗ ಮಾತ್ರ ಭಾರತಕ್ಕೆ ಭಾರತೀಯವಾದ ರಾಷ್ಟ್ರೀಯತೆ ಎಂಬುದು ದಕ್ಕಲು ಸಾಧ್ಯ. ಆದರೆ, ದೇಶದ ಸದ್ಯದ ಪರಿಸ್ಥಿತಿ ಇನ್ನೂ ಅಷ್ಟೊಂದು ಪ್ರಬುದ್ಧವಾಗೂ ಇಲ್ಲ, ಉದಾರವಾಗೂ ಇಲ್ಲ. ದೇಶದ ಎಲ್ಲ ಜಾತಿ, ಧರ್ಮಗಳ ಜನರೂ ಒಪ್ಪಿಕೊಳ್ಳಲು ಅಸಾಧ್ಯವಾದಂಥ ಸಂಕೇತಗಳನ್ನು ರಾಷ್ಟ್ರೀಯತೆ, ರಾಷ್ಟ್ರಭಕ್ತಿಯ ಹೆಸರಲ್ಲಿ ಮೆರೆಸಲಾಗುತ್ತಿದೆ. ಹೀಗಿರುವಾಗ ಭಾರತಕ್ಕೆ ಭಾರತೀಯವಾದ ರಾಷ್ಟ್ರೀಯತೆ ಎಂಬುದು ಸದ್ಯಕ್ಕಂತೂ ಕಾಣುತ್ತಿಲ್ಲ.

ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನಗಳಂದು ತ್ರಿವರ್ಣದ ರಿಬ್ಬನ್‍‍, ತ್ರಿವರ್ಣದ ಬಟ್ಟೆ ಧರಿಸಿ, ಧ್ವಜ ಹಾರಿಸಿ, ಸಿಹಿ ತಿಂದು, ಜೈ ಕಾರ ಕೂಗಿ ಮನೆಗೆ ಹೋಗುವಷ್ಟು ಸುಲಭದಲ್ಲಿ ರಾಷ್ಟ್ರೀಯತೆಯನ್ನು ಪರಿಭಾವಿಸಲು ಸಾಧ್ಯವಿಲ್ಲ. ಹಾಗೆಯೇ ಸೈನಿಕರ ಸಾವುಗಳ ಸಂದರ್ಭದಲ್ಲಿ ಕಾಣುವ ಭಾವತೀವ್ರತೆಯೂ ನಿಜವಾದ ರಾಷ್ಟ್ರೀಯತೆ ಅಲ್ಲ. ನಾವೆಲ್ಲರೂ ಒಂದು ಎಂಬ ಸಾಮಾನ್ಯ ಅರಿವು ದೇಶದ ಎಲ್ಲರಲ್ಲೂ ಬಾರದ ಹೊರತು ರಾಷ್ಟ್ರೀಯತೆಯ ವಿಚಾರದಲ್ಲಿ ಎಷ್ಟೆಲ್ಲಾ ಭಾವೋದ್ವೇಗಕ್ಕೆ ಒಳಗಾದರೂ ಅದು ಅರ್ಥಹೀನ.

ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಭಾರತದಲ್ಲಿ ಧರ್ಮ ಒಂದು ಸಾಧನವಲ್ಲ. ಸಹೋದರತ್ವ ಇಲ್ಲದ ದೇಶದಲ್ಲಿ ರಾಷ್ಟ್ರೀಯತೆ ಎಂಬ ನಾಗರಿಕ ಕಲ್ಪನೆ ಸಾಕಾರವಾಗುವುದು ಕಷ್ಟ. ಅಂಬೇಡ್ಕರ್ ಹೇಳಿದ್ದೂ ಅದನ್ನೇ. ಕಾಶ್ಮೀರದಲ್ಲಿ ಆಜಾದಿ ಎಂಬ ಕೂಗು ಎದ್ದಿದ್ದು 1991ರ ಹೊತ್ತಿಗೆ. ಬಹುತ್ವವನ್ನು ಬಲವಂತವಾಗಿ ಕಟ್ಟಿ ಹಾಕಲು ಸಾಧ್ಯವಿಲ್ಲ. ಸ್ವಯಂಪ್ರೇರಿತವಾಗಿ ಒಂದಾದರೆ ಮಾತ್ರ ರಾಷ್ಟ್ರೀಯತೆಯ ಆಶಯ ಸಾಕಾರವಾಗುವುದು. ಭಾರತದ ಮಟ್ಟಿಗೆ ರಾಷ್ಟ್ರೀಯತೆ ಎಂಬುದು ‘ಟೆರಿಟೋರಿಯಲ್ ನ್ಯಾಷಲಿಸಂ’ ಅಷ್ಟೆ.
- ಶಿವಸುಂದರ್, ರಾಜಕೀಯ ಚಿಂತಕ

ಗೋಡೆಗಳು, ಕಂದರಗಳು ಮತ್ತು ರಾಷ್ಟ್ರಭಕ್ತಿ

ನವೆಂಬರ್ ತಿಂಗಳು ಬಂದರೆ ಕರ್ನಾಟಕದಲ್ಲಿ ರಾಜ್ಯೋತ್ಸವವನ್ನು ಸಂಭ್ರಮಿಸುವಂತೆ ಬರ್ಲಿನ್‍‍ನಲ್ಲಿ ಗೋಡೆ ಕೆಡವಿದ್ದನ್ನು ಸಂಭ್ರಮಿಸುತ್ತಾರೆ. ಈ ವರ್ಷದ ನವೆಂಬರ್‌ಗೆ ಬರ್ಲಿನ್‍‍ ಗೋಡೆ ಕೆಡವಿ 30 ವರ್ಷ. ಇದೇ ವರ್ಷ ಗೋಡೆ ಕಟ್ಟುವುದಕ್ಕಾಗಿ ಅಮೆರಿಕ ತನ್ನ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಗೋಡೆ ಬೀಳಿಸಿದ್ದನ್ನು ಸಂಭ್ರಮಿಸುವ ಕಾಲದಲ್ಲೇ ಗೋಡೆ ಕಟ್ಟಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಿಸಿಕೊಳ್ಳುವ ದುರಿತ ಕಾಲದ ಕಡೆಗೆ ಜಗತ್ತು ನಡೆದಿರುವುದು ವೈರುಧ್ಯ.

ಯಾವುದೇ ದೇಶಕ್ಕೆ ಹೊರಗಿನವರಿಂದ ಅಪಾಯವಾಗುವ ಭಯ ಯಾವಾಗಲೂ ಇದ್ದಿದ್ದೇ. ಇದು ಪಾಳಯಪಟ್ಟು, ಪ್ರಾಂತ್ಯ, ರಾಜ್ಯಗಳಿಂದ ಕಾಲದಿಂದ ಹಿಡಿದು ಈಗಿನ ರಾಷ್ಟ್ರಗಳವರೆಗೂ ಸಾಮಾನ್ಯ. ಚೀನಾದ ಮಹಾಗೋಡೆಯ ನಿರ್ಮಾಣದ ಹಿಂದೆ ಇದ್ದಿದ್ದೂ ಇಂಥದ್ದೇ ಭಯ, ಅಮೆರಿಕ ತುರ್ತು ಪರಿಸ್ಥಿತಿ ಘೋಷಿಸಿ ಗೋಡೆ ನಿರ್ಮಿಸಲು ಹೊರಟಿರುವುದರ ಹಿಂದೆ ಇರುವುದೂ ಇಂಥದ್ದೇ ಭಯ. ಆದರೆ, ಭಯದ ಮೂಲಗಳು ಹಾಗೂ ಸ್ವರೂಪಗಳು ಕಾಲಕಾಲಕ್ಕೆ ಬದಲಾಗುತ್ತಿವೆ. ಬೇರೆ ದೇಶಗಳಲ್ಲಿ ನೆಲೆ ನಿಂತಿರುವ ಭಾರತೀಯರೂ, ಭಾರತದಲ್ಲಿ ನೆಲೆಸಿರುವ ಬೇರೆ ದೇಶದವರೂ ರಾಷ್ಟ್ರೀಯತೆಯನ್ನು ಪರಿಭಾವಿಸುವ ನೆಲೆಗಳೂ ಭಿನ್ನವಾಗಿರುತ್ತವೆ.

ಭಾರತ - ಪಾಕಿಸ್ತಾನ ಹುಟ್ಟುವಾಗಲೇ ಒಡೆದುಹೋಗಿರುವುದರಿಂದ ಈ ಎರಡೂ ದೇಶಗಳು ಪರಸ್ಪರರ ವಿಚಾರದಲ್ಲಿ ಉದಾರವಾದ ನಿಲುವುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಅಗತ್ಯವಿರುವುದು ಉದಾರವಾದಕ್ಕಿಂತ ಪ್ರಬುದ್ಧತೆ. ಭಾರತದ ಸಿಟ್ಟು ಪಾಕಿಸ್ತಾನದ ಕಡೆಗೆ ತಿರುಗುವ ಹೊತ್ತಿನಲ್ಲಿ ಎರಡೂ ದೇಶಗಳ ಕಾಮನ್‌ ಎನಿಮಿ ಆಗಬೇಕಾದ್ದು ಭಯೋತ್ಪಾದನೆ. ಆದರೆ, ಭಯೋತ್ಪಾದಕ ದಾಳಿಗಳು ನಡೆದಾಗೆಲ್ಲಾ ನಮ್ಮ ಸಿಟ್ಟು ಪಾಕಿಸ್ತಾನದ ಹೆಸರಿನಲ್ಲಿ ಅಕ್ಕಪಕ್ಕದ ಮುಸ್ಲಿಮರ ಕಡೆಗೆ ತಿರುಗುತ್ತಿದೆ.

ದೇಶಸೇವೆ VS ದೇಶಭಕ್ತಿ

ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಎಲ್ಲಾ ವೃತ್ತಿಗಳಲ್ಲಿರುವವರ ಸೇವೆಯೂ ರಾಷ್ಟ್ರಸೇವೆಯೇ. ತಮ್ಮ ಹೊಟ್ಟೆಪಾಡಿಗಾಗಿ ಎಂದು ಎಲ್ಲರೂ ಕೆಲಸ ಮಾಡುತ್ತಿರುವುದು ಪರೋಕ್ಷವಾಗಿ ರಾಷ್ಟ್ರದ ಹಿತಕ್ಕಾಗಿ, ರಾಷ್ಟ್ರದ ಅಭಿವೃದ್ಧಿಗಾಗಿಯೇ. ಗಡಿಯಲ್ಲಿ ನಿಂತು ದೇಶ ಕಾಯುವುದು ಮಾತ್ರ ದೇಶದ ಸೇವೆ ಅಲ್ಲ, ಈ ದೇಶದ ಬೀದಿಗಳನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರು ಮಾಡುತ್ತಿರುವುದೂ ದೇಶ ಸೇವೆಯೇ. ಇಂಥ ವಿಚಾರಗಳಲ್ಲಿ ವಿವೇಕ ಶೂನ್ಯತೆರಾಗಿ ವರ್ತಿಸುವುದು ನಾಗರಿಕತೆಯ ಲಕ್ಷಣವಲ್ಲ.

ಆದಿವಾಸಿಗಳು, ಅಲೆಮಾರಿಗಳು, ದಲಿತರನ್ನು ಒಳಗೊಳ್ಳದ ರಾಷ್ಟ್ರೀಯತೆ; ಇವರ ಸ್ಮೃತಿಗಳನ್ನು, ಇವರ ಜೀವನ ಮೌಲ್ಯಗಳನ್ನು ಗೌರವಿಸದ ರಾಷ್ಟ್ರೀಯತೆಗೆ ಸ್ವಂತ ಆತ್ಮವಿಲ್ಲ. ಗಾಂಧಿ ಹೇಳುವ 'ಸ್ವರಾಜ್ಯ'ದ ಪರಿಕಲ್ಪನೆಯ ಜೀವನ ವಿಧಾನದ ಮೇಲೂ ಹಿಂದೂ ಧರ್ಮದ ಪ್ರಭಾವವೇ ಹೆಚ್ಚಾಗಿದ್ದು ಕೂಡಾ ಈ ಮಾದರಿ ಅನ್ವಯವಾಗಲು ವಿಫಲವಾಗಿದ್ದಕ್ಕೆ ಕಾರಣ. ಹೀಗಾಗಿ ಎರವಲು ತಂದ ರಾಷ್ಟ್ರೀಯತೆಯನ್ನೇ ಭಾರತ ತನ್ನದೆಂಬಂತೆ ಭಾವೋದ್ವೇಗಕ್ಕೆ ಒಳಗಾಗುವುದು ಒಂದು ರೀತಿಯ ವಿಸ್ಮೃತಿ.

ಭಾರತಕ್ಕೆ ಒಂದು ರಾಷ್ಟ್ರೀಯತೆ ಇಲ್ಲ ಅಥವಾ ಭಾರತದ ಮಟ್ಟಿಗೆ ರಾಷ್ಟ್ರೀಯತೆ ಎಂಬುದು ಲೀನಿಯಲ್‌ ಅಲ್ಲ. ಇಲ್ಲಿ ಕನ್ನಡ ಜಗತ್ತಿನ ರಾಷ್ಟ್ರೀಯತೆಯೂ ಇದೆ, ಕಾಶ್ಮೀರದ ರಾಷ್ಟ್ರೀಯತೆಯೂ ಇದೆ. ನಾಗಾಲ್ಯಾಂಡ್‍‍ ರಾಷ್ಟ್ರೀಯತೆಯೂ ಇದೆ, ಗುಜರಾತ್‍‍ ಮಾದರಿಯ ರಾಷ್ಟ್ರೀಯತೆಯೂ ಇದೆ. ಆದರೆ, ಒಟ್ಟಿಗೆ ಬಾಳುವ, ತಮ್ಮ ತಮ್ಮ ಬದುಕು ಹಸನು ಮಾಡಿಕೊಳ್ಳುವ ಜತೆಗೆ ಎಲ್ಲರ ಬದುಕೂ ಹಸನಾಗಬೇಕೆಂದು ಭಾವಿಸುತ್ತಾ ನಾಗರಿಕರಾಗುವ ಕಡೆಗೆ ದೇಶವನ್ನು ಕರೆದೊಯ್ಯಬೇಕಿದ್ದ ರಾಷ್ಟ್ರೀಯತೆಯ ಪರಿಕಲ್ಪನೆ ಈಗ ಪರಸ್ಪರ ದ್ವೇಷಿಸಿಕೊಳ್ಳಲು, ಪರಸ್ಪರರ ಕೊಂದುಕೊಳ್ಳಲು ಹತಾರವಾಗುತ್ತಿರುವುದು ವಿಪರ್ಯಾಸ.