samachara
www.samachara.com
‘ಕಾಶ್ಮೀರದಿಂದ ನೇರ ಪ್ರಸಾರ’: ದೇಶ ಪ್ರೇಮಿಗಳಿಗೆ ಭಾರತದ ಮುಕುಟ ಬೇಕು; ಆದರೆ...
ದೇಶ

‘ಕಾಶ್ಮೀರದಿಂದ ನೇರ ಪ್ರಸಾರ’: ದೇಶ ಪ್ರೇಮಿಗಳಿಗೆ ಭಾರತದ ಮುಕುಟ ಬೇಕು; ಆದರೆ...

... ವರುಷಗಳು ಉರುಳಿದಂತೆ ಕಲ್ಪನೆ ಕಳೆದು ಮಾಧ್ಯಮಗಳಿಂದ, ಪುಸ್ತಕ, ಸಾಮಾಜಿಕ ಮಾಧ್ಯಮಗಳಿಂದ ಕಾಶ್ಮೀರದ ಬಗೆಗಿನ ಅರಿವು ವಿಸ್ತಾರಗೊಳ್ಳುತ್ತಾ ಹೋಯಿತು. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದ ನಂತರ ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವ ಚಿತ್ರಣ ದೊರೆಯಿತು.

  • ಸುಮಂತ್‌ ದಾಮ್ಲೆ

ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ | ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾದಾನಂಚ ದೇಹಿಮೇ | ಹೀಗಂತ ಕಾಶ್ಮೀರ ಪುರವಾಸಿನಿಯಾದ ಶಾರದಾ ದೇವಿಯನ್ನು ನಮಿಸುವ ಶ್ಲೋಕವನ್ನು ಬಾಲ್ಯದ ದಿನಗಳಲ್ಲಿ ಪಠಿಸುತ್ತಿದ್ದವನು ನಾನು. ನನ್ನ ಕಾಶ್ಮೀರದ ಬಗೆಗಿನ ಕಲ್ಪನೆ ಆರಂಭವಾಗಿದ್ದು ಹೀಗೆ. ಮುಂದೆ ಇತಿಹಾಸದ ಪಠ್ಯ ಪುಸ್ತಕಗಳ ಮುಖಾಂತರ ಅಲ್ಲಿನ ಭೂಭಾಗದ ಪರಿಚಯವಾಯಿತು. ವರುಷಗಳು ಉರುಳಿದಂತೆ ಕಲ್ಪನೆ ಕಳೆದು ಪತ್ರಿಕೆ, ಪುಸ್ತಕ, ಸಾಮಾಜಿಕ ಮಾಧ್ಯಮಗಳಿಂದ ಕಾಶ್ಮೀರದ ಬಗೆಗಿನ ಅರಿವು ವಿಸ್ತಾರಗೊಳ್ಳುತ್ತಾ ಹೋಯಿತು. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದ ನಂತರ ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವ ಚಿತ್ರಣ ದೊರೆಯಿತು.

ಕಾಶ್ಮೀರದ ಸುಂದರ ಜಾಗ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಹಿಮಾಲಯದ ಮಡಿಲಲ್ಲಿರುವ ಶ್ವೇತಮಯ ಮತ್ತು ಹಸಿರುಮಯ ತಾಣವದು. ತನ್ನ ಪ್ರಾಕೃತಿಕ ವೈಭವದಿಂದಾಗಿ ಭಾರತ ಮಾತ್ರವಲ್ಲದೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಗಳಿಸಿದೆ. ಇಲ್ಲಿನ ಪ್ರಕೃತಿ ಎಷ್ಟು ಸೊಗಸೋ ಜನರೂ ಅಷ್ಟೇ. ಇಲ್ಲಿನ ಜನರ ಎತ್ತರ, ಮೈಕಟ್ಟು, ಸಿಗ್ಧ ಸೌಂದರ್ಯ ಎಂಥವರನ್ನೂ ಬೆರಗು ಮೂಡಿಸುತ್ತದೆ. ಆದರೆ ಈ ಬೆರಗು ಬಹಿರಂಗದಲ್ಲಿ ಮಾತ್ರ ಅಂತರಂಗದಲ್ಲಿ ಇಲ್ಲ ಎಂಬುದು ನನಗೆ ಗೊತ್ತಾಗಿದ್ದು ಕಾಶ್ಮೀರದಲ್ಲಿ ಇಳಿದಾಗಲೇ.

ಜಮ್ಮು ಮತ್ತು ಕಾಶ್ಮೀರ ಮೂರು ಭಾಗಗಳಾಗಿ ವಿಭಜನೆಗೊಂಡಿದೆ: ಕಾಶ್ಮೀರ ಕಣಿವೆ, ಲೇಹ್‌-ಲಡಾಕ್‌ ಮತ್ತು ಜಮ್ಮು. ಇದರಲ್ಲಿ ಲೇಹ್‌ ಲಡಾಕ್‌ ಚಳಿಗಾಲದ ಅವಧಿಯಲ್ಲಿ ಸಂಪೂರ್ಣ ಹಿಮದಿಂದ ಆವೃತವಾಗಿರುತ್ತದೆ. ಹೀಗಾಗಿ ಇಲ್ಲಿನ ಕೆಲವು ಪಂಗಡಗಳು ಚಳಿಗಾಲಕ್ಕೆ ಬೇಕಾದ ಜೀವನಾವಶ್ಯಕ ವಸ್ತುಗಳನ್ನು ಪೇರಿಸಿಟ್ಟು ಆ ಅವಧಿಯನ್ನು ತಳ್ಳುತ್ತಾರೆ. ಇನ್ನು ಕೆಲವರು ಕಾಶ್ಮೀರ ಕಣಿವೆಯ ಭಾಗಕ್ಕೆ ಬಂದು ಜೀವನ ಕಂಡುಕೊಳ್ಳುತ್ತಾರೆ.

ಪ್ರಾಕೃತಿಕ ಸವಾಲಿನ ಮಧ್ಯೆ ಇಲ್ಲಿ ಜೀವನ ನಡೆಸುವುದು ತುಂಬಾ ಕಷ್ಟ. ಜತೆಗೆ ಬಡತನ ಎನ್ನುವುದು ಹಾಸು ಹೊದ್ದು ಮಲಗಿದೆ. ಅಲ್ಲಲ್ಲಿ ಕೃಷಿ ಇದೆ ಬಿಟ್ಟರೆ ಅದರಿಂದ ಹೆಚ್ಚಿನವರ ಬದುಕೇನು ನಡೆಯುವುದಿಲ್ಲ. ವಾಣಿಜ್ಯ ಬೆಳೆಯಾಗಿ ಪೆಹಲ್ಗಾಮ್‌ ತೆರಳುವ ದಾರಿ ಮಧ್ಯದಲ್ಲಿ ಸೇಬನ್ನು ಬೆಳೆಯುತ್ತಾರೆ. ಸ್ವಲ್ಪ ಜನ ಕುರಿ ಮೇಯಿಸಿದರೆ, ಪಾಂಪೋರೆ ಪ್ರದೇಶದಲ್ಲಿ ಕೇಸರಿ ಬೆಳೆಯಲಾಗುತ್ತದೆ. ಇಲ್ಲೆ ಕ್ರಿಕೆಟ್‌ ಬ್ಯಾಟ್‌ ತಯಾರಿಸುವುದೂ ಇದೆ. ಅದು ಬಿಟ್ಟರೆ ಶ್ರೀನಗರ ಗುಲ್‌ಮಾರ್ಗ್‌ ದಾರಿ ಮಧ್ಯದಲ್ಲಿ ಕೆಲವು ಕಾಶ್ಮೀರಿ ಶಾಲು, ಕರ್ಟನ್‌, ಮ್ಯಾಟ್‌ಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಕೊನೆಗೆ ಹೆಚ್ಚಿನವರ ಬದುಕು ನಡೆಯುವುದು ಮಾತ್ರ ಪ್ರವಾಸೋದ್ಯಮದಿಂದ. ಹೊರಗಿನಿಂದ ಬರುವ ಪ್ರವಾಸಿಗರೇ ಕಾಶ್ಮೀರದ ಜೀವಾಳ; ಇಲ್ಲಿನ ಜೀವನಾಧಾರ.

ಸಾಮಾನ್ಯವಾಗಿ ಇಂತಹ ಸವಾಲಿನ ಪ್ರದೇಶಗಳ ಜನರು ಶಿಕ್ಷಣವನ್ನು ಚಿಮ್ಮು ಹಲಗೆಯಾಗಿ ಬಳಸಿಕೊಂಡು ಬೆಳೆದು ಬಿಡುತ್ತಾರೆ. ಆದರೆ ಕಾಶ್ಮೀರದಲ್ಲಿ ಅಂತಹ ಪರಿಸ್ಥಿತಿಯೂ ಇಲ್ಲ. ಕಾರಣ ಇಲ್ಲಿನ ಸರಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಖಾಸಗಿ ಶಾಲೆಗಳಿಗೆ ಹಣ ನೀಡಲು ಹೆಚ್ಚಿನವರ ಬಳಿ ದುಡ್ಡಿಲ್ಲ. ಹೀಗೊಂದು ಇಕ್ಕಟ್ಟಿನಲ್ಲಿ ಕಾಶ್ಮೀರಿಗಳು ಸಿಲುಕಿಕೊಂಡಿದ್ದಾರೆ.

ಗುಲ್‌ಮಾರ್ಗದ ಒಂದು ನೋಟ.
ಗುಲ್‌ಮಾರ್ಗದ ಒಂದು ನೋಟ.
/ಸಮಾಚಾರ

ಹೀಗೆ ಸುಮ್ಮನೆ ಕಾಶ್ಮೀರಿಗನೊಬ್ಬನ ಬಳಿ ಆತನ ಮಕ್ಕಳ ಬಗ್ಗೆ ವಿಚಾರಿಸಿದೆ. ಆತ ಗುಲ್‌ಮಾರ್ಗ್‌ದಲ್ಲಿ ಕೆಲಸ ಮಾಡುತ್ತಿದ್ದ. ‘ಮಕ್ಕಳು ಶ್ರೀನಗರದಲ್ಲಿ ಹಾಸ್ಟೆಲ್‌ನಲ್ಲಿದ್ದು ಇಂಗ್ಲೀಷ್‌ ಓದುತ್ತಿದ್ದಾರೆ. ಮಗಳು 12ನೇ ತರಗತಿ ಓದುತ್ತಿದ್ದಾಳೆ, ಮಗ 9ನೇ ತರಗತಿ’ ಎಂದು ಆತ ತಿಳಿಸಿದ. ಇಂಗ್ಲೀಷ್‌ ಓದುತ್ತಿದ್ದಾರೆ ಎಂಬುದನ್ನು ಆತ ಒತ್ತಿ ಹೇಳಿದ. ಕಾಶ್ಮೀರಿಗರಿಗೆ ಇಂಗ್ಲೀಷ್‌ ಬಗ್ಗೆ ತುಂಬಾ ವ್ಯಾಮೋಹವಿದೆ. ತಾನು ಇಲ್ಲಿ ದುಡಿದು ಹಣ ಕಳುಹಿಸುತ್ತೇನೆ. ಅವರಲ್ಲಿ ಹಾಸ್ಟೆಲ್‌ನಲ್ಲಿದ್ದು ಓದುತ್ತಾರೆ ಎಂದು ಆತ ವಿವರಿಸಿದ.

ನಾವು ತೆರಳಿದ ಸಂದರ್ಭದಲ್ಲಿ ಇಲ್ಲಿನ ಶಾಲಾ-ಕಾಲೇಜುಗಳಿಗೆ ವಾರ್ಷಿಕ ರಜೆ ನಡೆಯುತ್ತಿತ್ತು. ಚಳಿಗಾಲದಿಂದಾಗಿ ನವೆಂಬರ್‌ನಿಂದ ಫೆಬ್ರವರಿವರೆಗೆ ಇಲ್ಲಿ ಶೈಕ್ಷಣಿಕ ರಜೆ ಇರುತ್ತದೆ. ಹಿಮ ಬೀಳುವ ಪ್ರಮಾಣ ಆಧರಿಸಿ ಕೆಲವು ಕಡೆ ಈ ಅವಧಿ ವಿಸ್ತಾರಗೊಳ್ಳುವುದೂ ಇದೆ. ಜನರಿಗೆ ಹೀಗೊಂದು ರಜೆ ಇದ್ದರೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ರಜೆ ಇರುವುದಿಲ್ಲ.

ಹಾಗಾಗಿ ಸ್ವಲ್ಪ ಮಟ್ಟಿಗೆ ಇಲ್ಲಿನ ಜನರು ಬದುಕುಳಿದಿದ್ದಾರೆ. ಪ್ರವಾಸಿಗರಿಗೆ ಸೇವೆಯನ್ನು ನೀಡುವ ನೆಪದಲ್ಲಿ ಒಂದಷ್ಟು ಕಾಸು ಸಂಪಾದಿಸಿಕೊಂಡು ಜೀವನ ನಡೆಸುತ್ತಾರೆ. ಕಾಶ್ಮೀರ ಒಂದೊಂದು ಋತುವಿನಲ್ಲಿ ಒಂದೊಂದು ಬಣ್ಣವನ್ನು ಪಡೆದುಕೊಳ್ಳುವುದರಿಂದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ನಮ್ಮಂತೆ ಫೆಬ್ರವರಿಗೆ ಹೋದರೆ ಇಲ್ಲಿ ಮೈ ಕೊರೆಯುವ ಚಳಿ. ರಸ್ತೆಯ ಇಕ್ಕೆಲಗಳಲ್ಲಿ ಹಿಮದ ರಾಶಿಗಳ ಗುಡ್ಡೆಯೇ ರಚನೆಯಾಗಿರುತ್ತವೆ. ಮನೆಗಳ ಮೇಲೆ, ಮರಗಳ ಮೇಲೆಲ್ಲಾ ಹಿಮ ತುಂಬಿಕೊಂಡಿರುತ್ತದೆ.

ಈ ಹಿಮವನ್ನೇ ಆಧರಿಸಿ ಒಂದಷ್ಟು ಪ್ರವಾಸೋದ್ಯಮ ಚಟುವಟಿಕೆ ನಡೆಯುತ್ತದೆ.

ಹಿಮದಿಂದ ಆವೃತವಾದ ಲೇಹ್‌ ಮತ್ತು ಗುಲ್‌ಮಾರ್ಗ್‌ ನಡುವಿನ ಎನ್‌ಎಚ್‌ 1.
ಹಿಮದಿಂದ ಆವೃತವಾದ ಲೇಹ್‌ ಮತ್ತು ಗುಲ್‌ಮಾರ್ಗ್‌ ನಡುವಿನ ಎನ್‌ಎಚ್‌ 1.
/ಸಮಾಚಾರ.

ಉದಾಹರಣೆಗೆ ನಾವು ಗುಲ್‌ಮಾರ್ಗ್‌ಗೆ ಭೇಟಿ ನೀಡಿದೆವು. ಇದು ಇಲ್ಲಿನ ಜನಪ್ರಿಯ ಪ್ರವಾಸಿ ತಾಣ. ಬೆಟ್ಟದ ಮೇಲಿರುವ ಈ ಕೇಂದ್ರ (ಹಿಲ್‌ ಸ್ಟೇಷನ್‌) ಗೋಂಡೋಲಾ ಕೇಬಲ್‌ ಕಾರ್‌ಗೆ ಜನಪ್ರಿಯವಾಗಿದೆ. ಇದರಲ್ಲಿ ಕುಳಿತು ಪಶ್ಚಿಮ ಹಿಮಾಲಯದ ಸೌಂದರ್ಯವನ್ನು ಸವಿಯಬಹುದು. ಸ್ಕೈಯಿಂಗ್‌, ಸ್ನೋಬೋರ್ಡಿಂಗ್‌, ಟೋಬೊಗನ್‌, ಹೆಲಿ ಸ್ಕೈಯಿಂಗ್‌ ಮೊದಲಾದ ಮಂಜಿನ ಆಟಗಳಿಗೆ ಈ ಪ್ರದೇಶ ಜನಪ್ರಿಯವಾಗಿದೆ.

ಇಲ್ಲಿ ದಟ್ಟ ಮಂಜಿನ ನಡುವೆ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಗುಂಡಿಗೆಯೂ ಬೇಕು. ಚಳಿಗಾಲದ ಅವಧಿಯಲ್ಲಿ ರಸ್ತೆ ಮಾರ್ಗವಾಗಿ ಈ ಜಾಗ ತಲುಪಲು ಸಾಧ್ಯವಾಗುವುದಿಲ್ಲ. ರಸ್ತೆಯಲ್ಲಿ ಬಿದ್ದಿರುವ ಮಂಜಿನಿಂದ ವಾಹನಗಳು ಜಾರುತ್ತಿರುತ್ತವೆ. ಅದಕ್ಕಾಗಿ ಇಲ್ಲಿನ ಜನರು ಕಾರ್‌, ಟಾಟಾ ಸುಮೋಗಳ ಚಕ್ರಕ್ಕೆ ಚೈನ್‌ ಕಟ್ಟಿ ಓಡಿಸುತ್ತಾರೆ. 10-20 ಕಿಲೋಮೀಟರ್‌ ವೇಗದಲ್ಲಿ ಬ್ಯಾಲೆನ್ಸ್‌ ಮಾಡುತ್ತಾ ವಾಹನ ಚಲಾಯಿಸುವ ಚಾಲಕರ ಧೈರ್ಯದ, ಅಷ್ಟೇ ಸಾಹಸದ ಕ್ರಿಯೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ.

ಬಡತನ ಮತ್ತು ಕೆಲವು ಅವಧಿಯಲ್ಲಿ ಮಾತ್ರ ಇಲ್ಲಿಗೆ ಯತೇಚ್ಛವಾಗಿ ಪ್ರವಾಸಿಗರು ಬರುವುದರಿಂದ ಜನರು ತುಸು ಹೆಚ್ಚೇ ಹಣ ಕೇಳುತ್ತಾರೆ. ನಮಗೆ ಸೋನಾಮಾರ್ಗ್‌ ಸಮೀಪ 10-12 ಕಿಲೋಮೀಟರ್‌ ದೂರವನ್ನು ಅನಿವಾರ್ಯವಾಗಿ ಟಾಟಾ ಸುಮೋದಲ್ಲಿ ತೆರಳಬೇಕಾಗಿತ್ತು. ಅದಕ್ಕೆ ಆತ ತಲಾ 800 ರೂಪಾಯಿ ಪಡೆದುಕೊಂಡಿದ್ದ.

ಗುಲ್‌ಮಾರ್ಗ್‌ನಲ್ಲಿಯೂ ಸ್ಲೆಡ್ಜಿಂಗ್‌ ಎಂಬ ಐಸ್‌ನಲ್ಲಿ ಜಾರಿಗೊಂಡು ತೆರಳುವ ಸಾರಿಗೆಗೆ ಸಾರಿಗೆ, ಆಟಕ್ಕೆ ಆಟದ ಪ್ರಯಾಣ ವ್ಯವಸ್ಥೆ ಇದೆ. ಇದಕ್ಕೆ 3ರಿಂದ ಮೂರುವರೆ ಕಿಲೋಮೀಟರ್‌ ತೆರಳಲು ಒಬ್ಬರಿಗೆ 1200 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಕಾಶ್ಮೀರ ಎಂದರೆ ಹಾಗೆನೇ ಜೇಬಿಗೆ ತುಸು ಭಾರ.

ಹಾಗಂಥ ಈ ಹಣ ಪೂರ್ತಿ ಆತನ ಜೇಬಿಗೂ ಹೋಗುವುದಿಲ್ಲ. ಇವರದೊಂದು ಯೂನಿಯನ್‌ ಇರುತ್ತದೆ. 500-600 ರೂಪಾಯಿಗಳನ್ನು ಇಟ್ಟುಕೊಂಡು ಆತ ಉಳಿದಿದ್ದನ್ನು ಯೂನಿಯನ್‌ಗೆ ನೀಡಬೇಕು. ಇಲ್ಲಿ ನಿರುದ್ಯೋಗ ಸಮಸ್ಯೆ ತೀರಾ ಹೆಚ್ಚಾಗಿರುವುದರಿಂದ ಪ್ರವಾಸಿಗರಿಗಿಂತ ಹೆಚ್ಚು ಜನರೇ ಇದ್ದಾರೆ. ಹಾಗಾಗಿ ಸರದಿಯಂತೆ ಆತನಿಗೆ ಆ ಕೆಲಸ ಬರುತ್ತದೆ. ಈಗ ಕೆಲಸ ಮಾಡಿದರೆ ನಂತರ ಆತ ತನ್ನ ಸರದಿಗಾಗಿ ಕಾಯುತ್ತಾ ಕೂರಬೇಕು.

ಇಲ್ಲಿ ಸ್ಲೆಡ್ಜಿಂಗ್‌ ಮಾಡುವವನ ಬಳಿ ಮಂಜು ಕರಗಿದರೆ ಮುಂದೇನು ಮಾಡುತ್ತೀಯಾ ಎಂದು ಕೇಳಿದೆ. ಅದಕ್ಕಾತ “ಕುದುರೆ ಓಡಿಸುತ್ತೇನೆ” ಎಂದು ತಣ್ಣಗೆ ಉತ್ತರಿಸಿದ.

ಗುಲ್‌ಮಾರ್ಗ್‌ನಲ್ಲಿ ಲೇಖಕರು. ಬೆಂಗಡೆ(ಹಿಂದೆ)ಯಲ್ಲಿ ಪಶ್ಚಿಮ ಹಿಮಾಲಯವನ್ನು ಕಾಣಬಹುದು.
ಗುಲ್‌ಮಾರ್ಗ್‌ನಲ್ಲಿ ಲೇಖಕರು. ಬೆಂಗಡೆ(ಹಿಂದೆ)ಯಲ್ಲಿ ಪಶ್ಚಿಮ ಹಿಮಾಲಯವನ್ನು ಕಾಣಬಹುದು.
/ಸಮಾಚಾರ.

ಚಳಿಗಾಲ ಕಳೆದು ಏಪ್ರಿಲ್‌ ಬಂದರೆ ಕಾಶ್ಮೀರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಅಷ್ಟೊತ್ತಿಗೆ ಮಂಜು ಕರಗಿ ಕಾಶ್ಮೀರ ಹಸಿರು ಹೊದಿಕೆಯನ್ನು ಹೊದ್ದುಕೊಂಡಿರುತ್ತದೆ. ಉದ್ಯಾನಗಳು ನಳ ನಳಿಸಲು ಆರಂಭವಾಗುತ್ತವೆ. ಟುಲಿಪ್‌ ಹೂವುಗಳು ಅರುಳುತ್ತವೆ. ನದಿಗಳು, ಗದ್ದೆಗಳು, ಕಣಿವೆ, ಸೇಬಿನ ತೋಟಗಳು ನೋಡಲು ಕಣ್ಣಿಗೆ ಇಂಪಿನ ಅನುಭವ ನೀಡುತ್ತವೆ.

ಪ್ರಕೃತಿ ಬದಲಾಗುತ್ತಿದ್ದಂತೆ ಜನರೂ ಬದಲಾಗುತ್ತಾರೆ. ಆಯಾ ಕಾಲಕ್ಕೆ ತಕ್ಕಂತೆ ಪೋಷಾಕು ತೊಡುವುದು ಇಲ್ಲಿನ ಜನರಿಗೆ ಸಲೀಸು. ಜನ ತಮ್ಮ ಉದ್ಯೋಗ ಬದಲಿಸುತ್ತಾರೆ. ಬದಲಿಸಲಾಗದವರು ಒಂದು ಅವಧಿಯಲ್ಲಿ ದುಡಿದ ಹಣದಲ್ಲಿ ಉಳಿದೆಲ್ಲಾ ಸಮಯ ಜೀವಿಸುತ್ತಾರೆ.

ಬೇಸಿಗೆ ಬರುತ್ತಿದ್ದಂತೆ ಪಹಲ್ಗಾಮ್‌ನಂಥ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತವೆ. ಅಮರನಾಥ ಯಾತ್ರೆ ಆರಂಭವಾಗುವ ಸ್ಥಳವಿದು. ಇಲ್ಲಿ ಅರು, ಬೀಟಬ್‌ ಕಣಿವೆಗಳ ಸೌಂದರ್ಯವನ್ನು ಸವಿಯಬಹುದು. ಬೆಟ್ಟದ ತುತ್ತ ತುದಿಯನ್ನು ತಲುಪಲು ಕುದುರೆ ಸವಾರಿಯೂ ಇದೆ. ಬಿಸಿಲು ಬಿದ್ಬದು ಹಿಮ ಕರಗಿ ನೀರಿನ ಹರಿವು ಹೆಚ್ಚಾದಾಗ ಇಲ್ಲಿನ ನದಿಗಳಲ್ಲಿ ರಾಫ್ಟಿಂಗ್‌ ಮಾಡಲು ಅನುಕೂಲವಾಗಿರುತ್ತವೆ.

ಜಮ್ಮು ಇಲ್ಲಿನ ಚಳಿಗಾಲದ ರಾಜಧಾನಿಯಾದರೆ, ಬೇಸಿಗೆಗೆ ಎಲ್ಲಾ ಇಲಾಖೆ, ಸಚಿವಾಲಯಗಳು ಶ್ರೀನಗರಕ್ಕೆ ವರ್ಗಾವಣೆಯಾಗುತ್ತವೆ. ಇಲ್ಲಿನ ಪ್ರಮುಖ ಆಕರ್ಷಣೆ ದಾಲ್‌ ಸರೋವರ. 18-22 ಕಿಲೋಮೀಟರ್‌ ವಿಸ್ತೀರ್ಣವಿರುವ ದಾಲ್‌ ಸರೋವರದಲ್ಲಿ 1,000 ಕ್ಕೂ ಮಿಕ್ಕಿ ಬೋಟ್‌ ಹೌಸ್‌ಗಳಿವೆ. ಪ್ರತಿಯೊಂದು ಬೋಟ್‌ನಲ್ಲಿ ಮೂರರಿಂದ ನಾಲ್ಕು ಡಬಲ್ ರೂಂಗಳು, ಸ್ನಾನದ ಮನೆ, ಶೌಚಾಲಯ ವ್ಯವಸ್ಥೆ ಇರುತ್ತದೆ.

ಇವುಗಳನ್ನು ಬಾಡಿಗೆ ರೂಪದಲ್ಲಿ ನೀಡಿ ಹಣ ಸಂಪಾದನೆ ಮಾಡುತ್ತಾರೆ. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ನಾಲ್ಕು ಜನರು ಕುಳಿತುಕೊಳ್ಳಬಹುದಾದ ಪುಟ್ಟ ದೋಣಿ ಶಿಖಾರ್‌. ಪ್ರವಾಸಿಗರನ್ನು ಕುಳಿತುಕೊಳ್ಳಿಸಿ ಈ ದೋಣಿಯಲ್ಲಿ ದಾಲ್‌ ಸರೋವರದ ತುಂಬಾ ವಿಹಾರವನ್ನು ಮಾಡಿಸುತ್ತಾರೆ. ವಿಹಾರದ ಸಂದರ್ಭದಲ್ಲಿ ಅಲ್ಲಿನ ಜನರು ತಾವರೆ, ಸೇಬು, ಕೇಸರಿ, ಆಭರಣಗಳು, ಕಾಶ್ಮೀರದ ಪಾನಕ ‘ಖವ’, ತಿಂಡಿ-ತಿನಿಸುಗಳನ್ನು ಶಿಖಾರ್‌ನಲ್ಲೇ ಮಾರಾಟ ಮಾಡಿಕೊಂಡು ಬರುತ್ತಾರೆ. ನಮ್ಮ ಜತೆ ಜತೆಗೇ ಪ್ರಯಾಣ ಮುಂದುವರಿಸುತ್ತಾ, ಭಾವನಾತ್ಮಕವಾಗಿ ಮಾತನಾಡುತ್ತಾ ವ್ಯಾಪಾರದ ತೆಕ್ಕೆಯೊಳಗೆ ಬೀಳಿಸುತ್ತಾರೆ.

ದಾಲ್‌ ಸರೋವರದಲ್ಲಿ ತಿನಿಸುಗಳನ್ನು ಮಾರಾಟ ಮಾಡಿಕೊಂಡು ಬರುವ ಶಿಖಾರ್‌ಗಳು.
ದಾಲ್‌ ಸರೋವರದಲ್ಲಿ ತಿನಿಸುಗಳನ್ನು ಮಾರಾಟ ಮಾಡಿಕೊಂಡು ಬರುವ ಶಿಖಾರ್‌ಗಳು.
/ಸಮಾಚಾರ.

ಹೀಗೆ ಏನೇನೋ ಸರ್ಕಸ್‌ಗಳನ್ನು ಮಾಡಿ ಬದುಕು ಕಟ್ಟಿಕೊಳ್ಳಲು ಯತ್ನಿಸುವುದು ಎಲ್ಲೆಲ್ಲೂ ಕಾಣ ಸಿಗುತ್ತದೆ. ಜನರು ದುಡ್ಡಿಗಾಗಿ ಹಪಾಹಪಿಸುತ್ತಿರುತ್ತಾರೆ. ಕೈ ಜೇಬಿಗೆ ಹೋದರೆ ಸಾಕು ಸುತ್ತಲೂ ಜನರು ನೆರೆಯುತ್ತಾರೆ. ಹಣವನ್ನೇ ಬೆರಗು ಕಣ್ಣುಗಳಿಂದ ನೋಡುತ್ತಾರೆ. 500-2000 ರೂಪಾಯಿಯ ನೋಟು ಕಂಡರೆ ಬಿಟ್ಟ ಕಣ್ಣು ಬಿಟ್ಟು ನೋಡುತ್ತಾರೆ. ನನಗೂ ಹಣ ಬೇಕು ಎಂಬ ಬಯಕೆ ಅವರ ನೋಟದಲ್ಲಿ ಇಣುಕುತ್ತಿರುತ್ತದೆ.

ಹಾಗಂಥ ಈ ಜನರು ಕಳ್ಳರಲ್ಲ. ಎಷ್ಟೇ ದುಡ್ಡಿದ್ದರೂ ಕದಿಯಲು ಮುಂದಾಗುವುದಿಲ್ಲ. ನಾವಿದ್ದ ಬೋಟ್‌ ಹೌಸ್‌ನ ಬಾಗಿಲಿಗೆ ಲಾಕ್‌ ಇರಲಿಲ್ಲ. ನಾವು ಲಗೇಜ್‌ ಬಿಟ್ಟು ಹೋಗಿದ್ದೆವು. ಆದರೆ ಯಾರೂ ಯಾವ ವಸ್ತುಗಳನ್ನೂ ಮುಟ್ಟಿರಲಿಲ್ಲ. ಪ್ರವಾಸಿಗರಿಗೆ ಸುಳ್ಳು ಹೇಳುವ ದಾರಿ ತಪ್ಪಿಸುವ ಪರಿಪಾಠಗಳನ್ನೂ ಇಟ್ಟುಕೊಂಡಿಲ್ಲ.

ಹೊಟ್ಟೆ ಹೊರೆದುಕೊಳ್ಳಲು ಒಂದಷ್ಟು ಕಣ್ಕಟ್ಟು ವಿದ್ಯೆಗಳನ್ನಷ್ಟೇ ಬಳಸುತ್ತಾರೆ. ದಾಲ್‌ ಸರೋವರದ ಸುತ್ತ ಕೇಸರಿಯನ್ನು ಗ್ರಾಂಗೆ 50 ರೂಪಾಯಿಗೆ ಮಾರುತ್ತಿರುವುದು ಕಣ್ಣಿಗೆ ಬಿತ್ತು. ಆದರೆ ಕೇಸರಿಯ ಮೂಲ ಬೆಲೆ ಗ್ರಾಂಗೆ 200 ರೂಪಾಯಿಗಳಷ್ಟಿದೆ. ಕೇಸರಿ ಜತೆ ಇದಕ್ಕೆ ಒಂದಷ್ಟು ಬೇರೆ ವಸ್ತುಗಳನ್ನು ಮಿಶ್ರಣ ಮಾಡಿ ಪ್ರವಾಸಿಗರನ್ನು ಯಾಮಾರಿಸುತ್ತಾರೆ. ಇಲ್ಲಿ ಅವರಿಗೆ ಮೋಸ ಮಾಡುವುದಕ್ಕಿಂತ ದಿನ ನಿತ್ಯದ ಅಗತ್ಯಗಳ ಸಂಪಾದಿಸಿಕೊಳ್ಳಲು ಹೊರಟಂತೆ ನನಗೆ ಕಾಣಿಸಿತು.

ಇಷ್ಟೆಲ್ಲಾ ಸೌಂದರ್ಯದ ಖಣಿಯಂತಿರುವ ಕಾಶ್ಮಿರದಲ್ಲಿ ಹಿಂಸಾಚಾರ. ಭಯೋತ್ಪಾದಕ ಚಟುವಟಿಕೆಗಳು ಇತ್ತೀಚೆಗೆ ಸಾಮಾನ್ಯವಾಗಿವೆ. ಇದು ಇಲ್ಲಿನ ಜನರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತಾಗಿದೆ. ಕಣಿವೆ ಪ್ರಕ್ಷುಬ್ಧಗೊಂಡ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ತಗ್ಗಿದೆ. ಅದು ಇಲ್ಲಿನ ಜನರ ಬದುಕನ್ನು ಮತ್ತಷ್ಟು ದುರ್ಬಲಗೊಳಿಸಿದೆ.

ಕಾಶ್ಮೀರ ಮೊದಲಿಗೆ ಹೀಗಿರಲಿಲ್ಲ. 1957ರಲ್ಲಿ ಭಾರತ ದೇಶದೊಂದಿಗೆ ಜಮ್ಮು ಮತ್ತು ಕಾಶ್ಮೀರ ಸೇರಿಕೊಂಡ ನಂತರದ ದಿನಗಳಲ್ಲಿ ಎಲ್ಲವೂ ಬದಲಾಗುತ್ತಾ ಬಂತು. ಪಾಕಿಸ್ತಾನದ ಕೆಲವು ಮುಖಂಡರು ಕಾಶ್ಮೀರದ ಭಾಗಗಳಿಗೆ ಬಂದು ನೆಲೆಸಿ ಅಲ್ಲಿನ ನಿವಾಸಿಗಳನ್ನು ಧರ್ಮದ ಹೆಸರಿನಲ್ಲಿ ಎತ್ತಿ ಕಟ್ಟಿದ್ದರು. ಅದಕ್ಕೆ ಇಲ್ಲಿನ ರಾಜಕೀಯ ನಾಯಕರು, ಸೇನೆಯ ಕೆಲವು ತಪ್ಪುಗಳೂ ಸೇರಿಕೊಂಡು ಜನರು ಬಂದೂಕು ಕೈಗೆತ್ತಿಕೊಳ್ಳಲು ಪ್ರೇರಣೆಯಾಯಿತು. ಇದು ಇಂದಿಗೂ ಮುಂದುವರಿದಿದೆ.

ಕಾಶ್ಮೀರದ ಕೆಲವು ಕುಟುಂಬಗಳು ತಮ್ಮ ಮಕ್ಕಳನ್ನೇ ಬಂಡುಕೋರ ಸಂಘಟನೆಗಳಿಗೆ ಕಳುಹಿಸಲು ಮುಂದಾಗುತ್ತಿದ್ದಾರೆ. ಅದು ಅವರಿಗೆ ದೊಡ್ಡದೆಂದು ಅನಿಸುತ್ತಿಲ್ಲ. ಇದು ವಾಸ್ತವ ಮತ್ತು ಕಹಿ ಸತ್ಯ. ಅಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದವರು, ಅವರ ಬಗ್ಗೆ ಒಲವಿದ್ದವರು ಜನರ ನಡುವೆಯೇ ಓಡಾಡಿಕೊಂಡಿದ್ದಾರೆ. ಸ್ಥಳೀಯರಿಗೆ ಅವರು ಯಾರು, ಪ್ರವಾಸಿಗರು ಯಾರು, ಸೇನಯವರು ಯಾರು ಎಂಬ ವ್ಯತ್ಯಾಸಗಳು ಸ್ಪಷ್ಟವಾಗಿ ಗೊತ್ತಿವೆ. ಆದರೆ ಸೇನೆಯವರಿಗೆ ಇದೆಲ್ಲಾ ಅಷ್ಟಾಗಿ ಅರ್ಥವಾದಂತೆ ಅನಿಸುವುದಿಲ್ಲ. ಯಾಕೆಂದರೆ ಸೇನಾ ವಿರೋಧಿ ಶಕ್ತಿಗಳಿಗೆ ಸ್ಥಳೀಯರ ಪ್ರಬಲ ಬೆಂಬಲವಿದೆ.

ಇನ್ನು ಸರಕಾರ ಇಲ್ಲಿಗೆ ಸಾರಿಗೆ, ಅಂಚೆ, ಬ್ಯಾಂಕಿಂಗ್‌ ಸೇನೆ ಎಲ್ಲವನ್ನೂ ನೀಡಿದೆ. ಆದರೆ ಮೂಲಕ ಸೌಕರ್ಯದಾಚೆ ಕಣಿವೆಯನ್ನು ಅಭಿವೃದ್ಧಿ ಪಡಿಸಲು ಕೈ ಹಾಕಿಲ್ಲ. ಇಡೀ ರಾಜ್ಯವೇ ತೀರಾ ಹಿಂದುಳಿದಿದ್ದು ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.

ಕೇಂದ್ರ ಸರರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿ ಅಲ್ಲಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದು ಅಲ್ಲಿಗೆ ಕಾಲಿಟ್ಟಾಗ ತಿಳಿಯುತ್ತದೆ. “ಯಾವ ಸರಕಾರವೂ ನಮಗೆ ಏನೂ ಮಾಡುವುದಿಲ್ಲ. ನಮ್ಮ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ,” ಎಂಬ ಭಾವನೆ ಕಾಶ್ಮೀರಿಗರಲ್ಲಿ ದಟ್ಟವಾಗಿದೆ. ಜತೆಗೆ ಇಲ್ಲಿನ ಭದ್ರತಾ ಪಡೆಗಳ ಸಿಬ್ಬಂದಿಗಳೂ ಸ್ವಲ್ಪ ಮಟ್ಟಿಗೆ ಆಕ್ರಮಣಕಾರಿಯಾಗಿದ್ದಾರೆ. ಹೀಗಾಗಿ ಅವರ ಮೇಲೆ ಜನರಿಗೆ ಅಗಾಧ ದ್ವೇಷವಿದೆ.

ಜತೆಗೆ ತಮ್ಮನ್ನು ತಾವು ಸ್ವತಂತ್ರ ದೇಶದ ಜನರು ಎಂದು ಅವರೇ ಅಂದುಕೊಂಡಿದ್ದಾರೆ. ನೀವು ಎಲ್ಲಿಯವರು ಎಂದಾಗ ‘ಕಾಶ್ಮೀರಿಗರು’ ಎನ್ನುತ್ತಾರೆ. ನಮ್ಮನ್ನು ‘ಭಾರತೀಯರು’ ಎಂಬುದಾಗಿ ನೋಡುತ್ತಾರೆ. ಆ ನೋಟದಲ್ಲೇ ಭಿನ್ನತೆಯೊಂದು ಕಾಣಿಸುತ್ತದೆ. ಅವರಲ್ಲಿ ಪ್ರತ್ಯೇಕತೆಯ ಕೂಗು ಸ್ಪಷ್ಟವಾಗಿದೆ; ಸ್ವತಂತ್ರ ಕಾಶ್ಮೀರದ ಕಲ್ಪನೆಯಲ್ಲಿ ಅವರಿದ್ದಾರೆ. ನಾವು ದೇಶ ಪ್ರೇಮದ ಹೆಸರಿನಲ್ಲಿ ಕಾಶ್ಮೀರವನ್ನು ಬಯಸುತ್ತಿದ್ದೇವೆ. ಆದರೆ ಅವರಿಗೆ ಅದು ಬೇಕಾಗಿಲ್ಲ. ಈ ಭಾವನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೇಂದ್ರ ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಬೇರೆ ಏನೇ ಮಾಡಿದರೂ ಅದು ಕಾಶ್ಮೀರವನ್ನು ಗೆಲ್ಲುವ ವ್ಯರ್ಥ ಪ್ರಯತ್ನವಾಗಬಹುದು. ಅಷ್ಟೇ.

  • ಲೇಖಕರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು, ಸದ್ಯ ಕೊಡಗಿನಲ್ಲಿ ಪ್ರಾಧ್ಯಾಪಕರು.