samachara
www.samachara.com
ಮುಷ್ಕರಕ್ಕೆ ಸೊಪ್ಪು ಹಾಕದ ಸರಕಾರ; ಖಾಸಗಿ ಲಾಬಿಗೆ ಬಲಿಯಾಗುತ್ತಾ ಬಿಎಸ್‌ಎನ್‌ಎಲ್?
ದೇಶ

ಮುಷ್ಕರಕ್ಕೆ ಸೊಪ್ಪು ಹಾಕದ ಸರಕಾರ; ಖಾಸಗಿ ಲಾಬಿಗೆ ಬಲಿಯಾಗುತ್ತಾ ಬಿಎಸ್‌ಎನ್‌ಎಲ್?

ಒಂದು ಕಾಲದಲ್ಲಿ ವಿಎಸ್‌ಎನ್‌ಎಲ್‌ ಮುಳುಗಿಸಿದ್ದ ಸರಕಾರ ಹಾಗೂ ಆಡಳಿತ ವ್ಯವಸ್ಥೆ ಈಗ ಬಿಎಸ್‌ಎನ್‌ಎಲ್‌ ಅನ್ನೂ ಅದೇ ಹಾದಿಗೆ ನೂಕಿದೆ.

ಲ್ಯಾಂಡ್‌ಲೈನ್ ಸಂಪರ್ಕವನ್ನೇ ನೆಚ್ಚಿದ್ದ ಮೊಬೈಲ್‌ಗಳಿಲ್ಲದ ಕಾಲವದು. ವಿದೇಶಿ ಕರೆಗಳ ನಿರ್ವಹಣೆಗಾಗಿ ಭಾರತ ಸರಕಾರ 1986 ರಲ್ಲಿ ವಿದೇಶಿ ಸಂಚಾರ ನಿಗಮ (ವಿಎಸ್‌ಎನ್‌ಎನ್) ಎಂಬ ಸರಕಾರಿ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಿತ್ತು. ಆದರೆ 2002 ರ ಸುಮಾರಿಗೆ ಈ ಕಂಪೆನಿಯ ಶೇ.45 ರಷ್ಟು ಶೇರುಗಳನ್ನು ಟಾಟಾ ಸಮೂಹಕ್ಕೆ ಮಾರಲಾಗಿತ್ತು. ಕಾಲಕ್ರಮೇಣ ಈ ಸರಕಾರಿ ಸ್ವಾಮ್ಯದ ಕಂಪೆನಿಯನ್ನು ವ್ಯವಸ್ಥಿತವಾಗಿ ಮುಳುಗಿಸಲಾಯಿತು.

ಕೊನೆಗೂ 2008 ರಲ್ಲಿ ಟಾಟಾ ಸಮೂಹ ವಿದೇಶಿ ಸಂಚಾರ ನಿಗಮವನ್ನು ಅಧೀಕೃತವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಟಾಟಾ ಕಮ್ಯೂನಿಕೇಷನ್‌ ಅಸ್ಥಿತ್ವಕ್ಕೆ ಬಂದಿತ್ತು. ಇಂದು ಇಂತಹದ್ದೇ ವಿಷಮ ಪರಿಸ್ಥಿತಿ ಭಾರತದ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಯಾದ ಬಿಎಸ್‌ಎನ್‌ಗೂ ಎದುರಾಗಿದೆ.

ದೇಶದಲ್ಲಿ ಶೇ.12 ರಷ್ಟು ಗ್ರಾಹಕರನ್ನು ಹೊಂದಿರುವ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 4 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಆದರೆ ಖಾಸಗಿ ಲಾಭಿಗೆ ಮಣಿದಿರುವ ಟೆಲಿಕಾಂ ಇಲಾಖೆಗೆ ಸುತಾರಾಂ ಸರಕಾರಿ ಸ್ವಾಮ್ಯದ ಕಂಪೆನಿಯ ಅಭಿವೃದ್ಧಿ ಬೇಡವಾಗಿದೆ. ಪರಿಣಾಮ ಶೀಘ್ರದಲ್ಲಿ ಬಿಎಸ್‌ಎನ್‌ಎಲ್ ಕಾಲಗರ್ಭದಲಿ ಹುದುಗಿಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಮುಷ್ಕರಕ್ಕೆ ಸೊಪ್ಪು ಹಾಕದ ಸರಕಾರ; ಖಾಸಗಿ ಲಾಬಿಗೆ ಬಲಿಯಾಗುತ್ತಾ ಬಿಎಸ್‌ಎನ್‌ಎಲ್?

ಬಿಎಸ್‌ಎನ್ಎಲ್ ಸಂಸ್ಥೆಯನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸಿ ಬಿಎಸ್ಎನ್‌ಎಲ್‌ನ ಎಲ್ಲಾ ಯೂನಿಯನ್ ಒಕ್ಕೂಟಗಳಾದ, ಬಿಎಸ್‌ಎನ್‌ಎಲ್ ಎಂಪ್ಲಾಯ್ ಯೂನಿಯನ್, ನ್ಯಾಷನಲ್ ಫೆಡರೇಶನ್ ಆಫ್ ಟೆಲಿಕಾಂ ಎಂಪ್ಲಾಯ್ಸ್, ಆಲ್ ಇಂಡಿಯಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಎಕ್ಸಿಕ್ಯೂಟಿವ್ ಅಸೋಶಿಯೇಷನ್, ಸಂಚಾರ್ ನಿಗಮ್ ಎಕ್ಸಿಕ್ಯೂಟಿವ್ ಅಸೋಶಿಯೇಷನ್, ಆಲ್ ಇಂಡಿಯಾ ಗ್ರಾಜುವೇಟ್ ಇಂಜಿನೀಯರ್ ಅಂಡ್ ಟೆಲಿಕಾಂ ಆಫೀಸರ್ಸ್ ಅಸೋಶಿಯೇಷನ್, ಟೆಲಿಕಮ್ಯುನಿಕೇಷನ್ ಎಂಪ್ಲಾಯೀಸ್ ಪ್ರೊಗ್ರೆಸೀವ್ ಯೂನಿಯನ್, ಬಿಎಸ್‌ಎನ್‌ಎಲ್ ಆಫೀಸರ್ಸ್ ಅಸೋಶಿಯೇಷನ್ ಮೊನ್ನೆಯಿಂದ ಮೂರು ದಿನಗಳ ಕಾಲ ಹೋರಾಟಕ್ಕೆ ಮುಂದಾಗಿದ್ದಾರೆ.

ಆದರೆ, ಟೆಲಿಕಾಂ ಇಲಾಖೆಯ ಅಧಿಕಾರಿಗಳಾಗಲಿ, ಸರಕಾರವಾಗಲಿ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಈ ಹೋರಾಕ್ಕೆ ಕ್ಯಾರೆ ಎನ್ನುತ್ತಿಲ್ಲ. ಇವರ ಈ ಬೇಜವಾಬ್ದಾರಿ ನೀತಿ ದೇಶದ ಹೆಮ್ಮೆಯ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಕಾಲಗರ್ಭ ಸೇರುವ ಎಲ್ಲಾ ಸಾಧ್ಯತೆಗಳನ್ನೂ ನಮ್ಮ ಮುಂದೆ ತೆರೆದಿಡುತ್ತಿದೆ. ಆದರೆ ಸರಕಾರದ ಇಂತಹ ಬೆಳವಣಿಗೆಗಳ ಹಿಂದೆ ಖಾಸಗಿ ಲಾಭಿಯೂ ಇಲ್ಲದೆ ಏನಿಲ್ಲ.

ಖಾಸಗಿ ಲಾಬಿ ಕುಮ್ಮಕ್ಕು:

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಪರಿಚಯಿಸಿದ ಜಿಯೋ ಟೆಲಿಕಾಂ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು. ಜಿಯೋ ಆಗಮನದಿಂದಾಗಿ ಅತ್ಯಂತ ಹೆಚ್ಚು ನಷ್ಟ ಅನುಭವಿಸಿದ ಕಂಪೆನಿಗಳ ಪೈಕಿ ಬಿಎಸ್‌ಎನ್‌ಎಲ್ ಮೊದಲ ಸ್ಥಾನದಲ್ಲಿದೆ.

ಟೆಲಿಕಾಂ ನಿಯಮದ ಅನ್ವಯ ಯಾವುದೇ ಕಂಪೆನಿ ತಾನು ನೀಡುವ ಸೇವೆಗೆ ದರ ನಿಗದಿ ಮಾಡುವ ಮೊದಲು ಟ್ರಾಯ್ ಅನುಮತಿ ಪಡೆಯಬೇಕು. ಆದರೆ ಜಿಯೋ ವಿಚಾರದಲ್ಲಿ ಹೀಗಾಗಲಿಲ್ಲ. ಆರಂಭದ ದಿನಗಳಲ್ಲಿ ಜಿಯೋ ಜನರಿಗೆ ಉಚಿತ ಸೇವೆ ನೀಡಿತ್ತು. ಈ ಕುರಿತು ಟ್ರಾಯ್ ತುಟಿ ಬಿಚ್ಚಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೆ ಈ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಅಂತೆ ಕಾರ್ಯನಿರ್ವಹಿಸಿದರು.

ನೋಡ ನೋಡುತ್ತಿದ್ದಂತೆ ಜಿಯೋ ದೇಶದ ಶೇ.36 ರಷ್ಟು ಚಂದಾದಾರರನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಂಡಿತ್ತು. ಕೇವಲ ಎರಡು ವರ್ಷದಲ್ಲಿ ಇಡೀ ಭಾರತೀಯ ಟೆಲಿಕಾಂ ವ್ಯವಸ್ಥೆಯ ಮೇಲೆ ಉದ್ಯಮಿ ಅಂಬಾನಿ ಹಿಡಿತ ಸಾಧಿಸುವಂತಾಯಿತು. ಇದರ ನೇರ ಪರಿಣಾಮ ಎದುರಿಸಿದ್ದು ಬಿಎಸ್‌ಎನ್‌ಎಲ್.

ಹಾಗೆ ನೋಡಿದರೆ ಬಿಎಸ್‌ಎನ್‌ಎಲ್ ಒಂದು ಕಾಲದಲ್ಲಿ ಟೆಲಿಕಾಂ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿತ್ತು. ಆರಂಭದ ದಿನಗಳಲ್ಲೇ ದೇಶದಾದ್ಯಂತ 45,500 ಟವರ್‌ಗಳನ್ನು ಹೊಂದಿತ್ತು. ಗ್ರಾಹಕರಿಗೆ ಉತ್ತಮ ಹಾಗೂ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿತ್ತು. ಆದರೆ ಖಾಸಗಿ ಕಂಪೆನಿಗಳ ಲಾಭಿಗೆ ಮಣಿದು ಸರಕಾರವೇ ಸ್ವತಃ ಈ ಕಂಪೆನಿಯನ್ನು ಬಲಿಕೊಡಲು ಮುಂದಾಗಿದೆ ಎನ್ನುತ್ತಾರೆ ಬಿಎಸ್‌ಎನ್‌ಎಲ್ ಕಾರ್ಮಿಕ ಸಂಘಟನೆಯ ಮುಖಂಡ ವೈ.ಆರ್.ನಾಗರಾಜ್.

ಹೀಗೆ ಹೇಳಲು ಕಾರಣಗಳೂ ಸಾಕಷ್ಟಿವೆ. “2013-14 ರ ಅವಧಿಯ ವರೆಗೆ ಬಿಎಸ್ಎನ್‌ಎಲ್ ಲಾಭದಲ್ಲೇ ಇತ್ತು. ವಾರ್ಷಿಕ 30 ಸಾವಿರ ಕೋಟಿ ರೂಪಾಯಿ ಆದಾಯ ಈ ಕಂಪೆನಿಗಿತ್ತು. ಆದರೆ ತದನಂತರ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಪೈಪೋಟಿ ನೀಡಲು ಬಿಎಸ್‌ಎನ್‌ಎಲ್ ಏದುಸಿರು ಬಿಟ್ಟದ್ದು ನಿಜ. ಆದರೆ ಜಿಯೋ ಬಂದ ನಂತರ ಬಿಎಸ್‌ಎನ್‌ಎಲ್‌ನ ನಷ್ಟದ ಪ್ರಮಾಣ ಏರುತ್ತಲೇ ಹೋಯಿತು. ಕಳೆದ ಎರಡು ವರ್ಷಗಳಿಂದ ಬಿಎಸ್ಎನ್‌ಎಲ್ ಸಾವಿರಾರು ಕೋಟಿ ನಷ್ಟದಲ್ಲಿದೆ. ಇದಕ್ಕೆ ಕಾರಣ ಖಾಸಗಿಯವರ ಲಾಬಿ, ಅಧಿಕಾರಿಗಳ ಬೇಜವಾಬ್ದಾರಿ ನೀತಿ ಹಾಗೂ ಟೆಲಿಕಾಂ ಇಲಾಖೆಗೆ ಇಚ್ಚಾಶಕ್ತಿಯ ಕೊರತೆಯೇ ಹೊರತು ಬಿಎಸ್‌ಎನ್‌ಎಲ್ ಕಳಪೆ ಸೇವೆಯಲ್ಲ” ಎಂಬುದು ನಾಗರಾಜ್ ಅವರ ಮಾತು.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ:

ಬಿಎಸ್‌ಎನ್‌ಎಲ್ ಸಂಸ್ಥೆಯ ಪ್ರಸ್ತುತ ಪರಿಸ್ಥಿತಿಗೆ ಈ ಗಾಧೆ ಸೂಕ್ತವಾಗಿಯೇ ಇದೆ, ಕಾರಣ ಇಂದು ಎಲ್ಲಾ ಖಾಸಗಿ ಟೆಲಿಕಾಂ ಕಂಪೆನಿಗಳು 4ಜಿ ಸೇವೆಯನ್ನು ಒದಗಿಸುತ್ತಿದ್ದರೆ ಬಿಎಸ್‌ಎನ್ಎಲ್ ಮಾತ್ರ 3ಜಿ ಸೇವೆಯಲ್ಲೇ ಉಳಿದಿದೆ. ತನ್ನ ಸೇವೆಯನ್ನೂ ಈವರೆಗೆ ಈ ಕಂಪೆನಿ ನಷ್ಟ ಅನುಭವಿಸಲು ಇದೂ ಒಂದು ಕಾರಣ. ಹೀಗಾಗಿ ಬಿಎಸ್‌ಎನ್ಎಲ್ ತನ್ನ ನಷ್ಟವನ್ನು ಸರಿದೂಗಿಸಿಕೊಂಡು ಶೀಘ್ರದಲ್ಲಿ 4ಜಿ ಸೇವೆ ನೀಡುವ ಮೂಲಕ ಮತ್ತೆ ಮರುಜೀವ ಪಡೆಯಬಹುದು. ಇದಕ್ಕೆ ಬಿಎಸ್‌ಎನ್‌ಎಲ್ ಮುಂದಿರುವ ಏಕೈಕ ದಾರಿ ಎಂದರೆ ತನ್ನ ಬಳಿ ಇರುವ ಭೂಮಿಯನ್ನು ಅಡವಿಟ್ಟು ಹಣ ಪಡೆಯುವುದು.

ಆದರೆ ಟೆಲಿಕಾಂ ಇಲಾಖೆ ಇದಕ್ಕೂ ಅವಕಾಶ ಕಲ್ಪಿಸುತ್ತಿಲ್ಲ. ಇಂದು ದೇಶದ ಎಲ್ಲಾ ಖಾಸಗಿ ಟೆಲಿಕಾಂ ಕಂಪೆನಿಗಳು ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಪಡೆದು ವ್ಯವಹಾರ ನಡೆಸುತ್ತಿವೆ. ಆದರೆ ಬಿಎಸ್‌ಎನ್‌ಗೆ ಮಾತ್ರ ಈ ಭಾಗ್ಯವಿಲ್ಲ. ಯಾವ ಬ್ಯಾಂಕ್‌ಗಳು ಬಿಎಸ್‌ಎನ್‌ಗೆ ಸಾಲ ಕೊಡಲು ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ಮತ್ತದೇ ಟೆಲಿಕಾಂ ಇಲಾಖೆಯ ಬೇಜವಾಬ್ದಾರಿ ನೀತಿ.

ಬಿಎಸ್‌ಎನ್‌ಎಲ್ ಸಂಸ್ಥೆಗೆ ದೇಶದ ನಾನಾ ಮೂಲೆಯಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳಿವೆ. ಆದರೆ ಈ ಅಸ್ತಿಗಳನ್ನು ಈವರೆಗೆ ಟೆಲಿಕಾಂ ಇಲಾಖೆ ಬಿಎಸ್‌ಎನ್‌ಎಲ್ ಸಂಸ್ಥೆಗೆ ವರ್ಗಾಯಿಸಿಲ್ಲ. ಕಂಪೆನಿಯ ಆಡಳಿತ ಮಂಡಳಿ ಈ ಕುರಿತು ವಿಚಾರಿಸಿದರೆ ನೀತಿ ಆಯೊಗ, ಡಿಜಿಟಲ್ ಕಮಿಷನ್ ನಲ್ಲಿ ಒಪ್ಪಿಗೆ ಪಡೆದು ಆನಂತರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಈ ಕುರಿತ ಮಾತುಕತೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಟೆಲಿಕಾಂ ಇಲಾಖೆಯ ಈ ಮಂದಗತಿಯ ಕೆಲಸದ ಹಿಂದೆ ಮಾರುಕಟ್ಟೆಯನ್ನು ಖಾಸಗಿಯವರಿಗೆ ನೀಡುವ ಹುನ್ನಾರವೂ ಇದೆ ಎನ್ನಲಾಗುತ್ತಿದೆ.

ಬೀದಿಗೆ ಬಂದ 4 ಲಕ್ಷ ಕುಟುಂಬಗಳು

ದೇಶದಾದ್ಯಂತ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಸುಮಾರು 1 ಲಕ್ಷ ಖಾಯಂ ಹಾಗೂ 1.5 ಲಕ್ಷ ಕಾಂಟ್ರಾಕ್ಟ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸಂಖ್ಯೆ 4 ಲಕ್ಷಕ್ಕೂ ಮೀರಿದೆ. ಆದರೆ ನಷ್ಟದ ಕಾರಣ ನೀಡಿ ಕಳೆದ ಮೂರು ವರ್ಷದಲ್ಲಿ ಹಲವಾರು ಜನರನ್ನು ಸ್ವಯಂ ನಿವೃತ್ತಿ ನೀಡಿ ಮನೆಗೆ ಕಳುಹಿಸಲಾಗಿದೆ. ಅಲ್ಲದೆ ಕಳೆದ 6 ತಿಂಗಳಿನಿಂದ ಕಾಂಟ್ರಾಕ್ಟ್ ಉದ್ಯೋಗಿಗಳಿಗೆ ಸಂಬಳ ನೀಡಿಲ್ಲ.

ಒಂದು ಕಾಲದಲ್ಲಿ ದೇಶದಲ್ಲಿ ಸಂಪರ್ಕ ಕ್ರಾಂತಿ ಸೃಷ್ಟಿಸಿದ್ದ ಬಿಎಸ್‌ಎನ್‌ಎಲ್ ಇಂದು ಹೇಳ ಹೆಸರಿಲ್ಲದಂತಾಗುತ್ತಿದೆ. ಉದ್ಯೋಗಿಗಳಿಗೆ ಕನಿಷ್ಟ ಸಂಬಳ ನೀಡಲೂ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ. ಸರಕಾರಿ ಸ್ವಾಮ್ಯದ ಈ ಟೆಲಿಕಾಂ ಕಂಪೆನಿಯನ್ನು ಉಳಿಸಿಕೊಳ್ಳುವ ಇರಾದೆ ಸ್ವತಃ ಸರಕಾರಕ್ಕೆ ಇಲ್ಲದಂತೆ ಕಾಣುತ್ತಿದೆ. ಈ ಹಿಂದೆ ವಿಎಸ್‌ಎನ್‌ಎಲ್ ಕಂಪೆನಿಯನ್ನು ಖಾಸಗಿಯವರಿಗೆ ಮಾರಿಕೊಂಡ ಹಾಗೆ ಭವಿಷ್ಯದಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯನ್ನೂ ನಷ್ಟದ ನೆಪ ಒಡ್ಡಿ ಖಾಸಗಿಯವರಿಗೆ ಮಾರಾಟ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಈ ನಡುವೆ ದೇಶದಾದ್ಯಂತ ಸೋಮವಾರದಿಂದ ಬಿಎಸ್‌ಎನ್ಎಲ್ ಉದ್ಯೋಗಿಗಳು ಮೂರು ದಿನದ ಮುಷ್ಕರಕ್ಕೆ ಮುಂದಾಗಿದ್ದಾರೆ. ಕೆಲಸಕ್ಕೆ ಹಾಜರಾಗದೆ ಟೆಲಿಕಾಂ ಇಲಾಖೆಯ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಈವರೆಗೆ ಇಲಾಖೆಯಿಂದ ಯಾವ ಸ್ಪದಂನೆಯೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಾದರೂ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಹೋರಾಟ ಫಲ ನೀಡುತ್ತಾ? ಸರಕಾರಿ ಸ್ವಾಮ್ಯದ ಈ ಕಂಪೆನಿಯನ್ನು ಉಳಿಸಿಕೊಳ್ಳುವಲ್ಲಿ ಸರಕಾರ ಮನಸ್ಸು ಮಾಡುತ್ತಾ? ಸರಕಾರದ ಮುಂದಿನ ನಡೆಯೇ ಈ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.