samachara
www.samachara.com
ಸನ್ನಿಗೆ ಪಾಸ್‌ಪೋರ್ಟ್‌, ಕೈಲಾಶ್‌ ಖೇರ್‌ಗೆ ಕ್ಯಾಶ್‌: ಇದು ಸೆಲೆಬ್ರಿಟಿಗಳ ‘ಪ್ರಾಪಗಂಡಾ ಪುರಾಣ’
ದೇಶ

ಸನ್ನಿಗೆ ಪಾಸ್‌ಪೋರ್ಟ್‌, ಕೈಲಾಶ್‌ ಖೇರ್‌ಗೆ ಕ್ಯಾಶ್‌: ಇದು ಸೆಲೆಬ್ರಿಟಿಗಳ ‘ಪ್ರಾಪಗಂಡಾ ಪುರಾಣ’

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣಕ್ಕಾಗಿ ರಾಜಕೀಯ ಪಕ್ಷಗಳ ಪರ ಪ್ರಚಾರಕ್ಕೆ ತಾವು ಸಿದ್ಧವಿರುವುದಾಗಿ ಸೆಲೆಬ್ರಿಟಿಗಳು ‘ಕೋಬ್ರಾಪೋಸ್ಟ್‌’ ಕುಟುಕು ಕಾರ್ಯಾಚರಣೆಯಲ್ಲಿ ಹೇಳಿಕೊಂಡಿದ್ದಾರೆ. 

ತನಿಖಾ ವರದಿಗಳ ಮೂಲಕ ಆಗಾಗ ಸದ್ದು ಮಾಡುವ ‘ಕೋಬ್ರಾಪೋಸ್ಟ್‌’ ಈ ಬಾರಿ ಬಾಲಿವುಡ್‌ ಸೆಲೆಬ್ರಿಟಿಗಳ ಮೇಲೆ ಮುಗಿ ಬಿದ್ದಿದೆ. ನೋಟಿಗಾಗಿ ಎಂತಹ ಪ್ರಾಪಗಂಡಾ ಮಾಡಲು ಸಿದ್ಧ ಎನ್ನುವ ಮೂಲಕ ತಮಗಿರುವ ಜನಪ್ರಿಯತೆಯನ್ನು ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವವರು ಹೇಗೆ ಮಾರಾಟಕ್ಕೆ ಇಟ್ಟಿದ್ದಾರೆ ಎಂಬುದರ ಅಸಲಿ ಝಲಕ್‌ನ್ನು ಈ ಕುಟುಕು ಕಾರ್ಯಾಚರಣೆ ಹೊರಹಾಕಿದೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕಾಗಿ ತನಿಖಾ ವೆಬ್‌ಸೈಟ್‌ ಹೆಸರಾಂತ ನಟ, ನಟಿಯರನ್ನು ಸಂಪರ್ಕಿಸಿದೆ. ಇದಕ್ಕೆ ಒಪ್ಪಿಕೊಂಡವರು ತಮ್ಮ ಮಾರುಕಟ್ಟೆ ಬೆಲೆಯನ್ನೂ ಫಿಕ್ಸ್‌ ಮಾಡಿದ್ದಾರೆ. ಈವರೆಗೆ ಜಾಹೀರಾತುಗಳ ರೂಪದಲ್ಲಿ ಅಧಿಕೃತವಾಗಿ ತಮ್ಮ ಸಾರ್ವಜನಿಕ ಇಮೇಜ್‌ನ್ನು ಉತ್ಪನ್ನಗಳ ಮಾರಾಟಕ್ಕೆ ಬಳಸುತ್ತಿದ್ದವರು ಈಗ ರಾಜಕೀಯದ ಸರಕನ್ನೂ ಜನರಿಗೆ ತಲುಪಿಸಲು ಸಿದ್ಧವಿದ್ದೇವೆ ಎಂದು ಈ ವರ್ಗದ ಜನ ಹೇಳಿಕೊಂಡಿದ್ದಾರೆ.

ತನಿಖೆ ನಡೆದಿದ್ದು ಹೇಗೆ?:

‘ಕೋಬ್ರಾಪೋಸ್ಟ್‌’ ವೆಬ್‌ಸೈಟ್‌ ವರದಿಗಾರರು ಸಾರ್ವಜನಿಕ ಸಂಪರ್ಕಾಧಿಕಾರಿಗಳ (ಪಿಆರ್‌) ಹೆಸರಿನಲ್ಲಿ ಡಜನ್‌ಗೂ ಹೆಚ್ಚು ಬಾಲಿವುಡ್‌ ಸೆಲೆಬ್ರಿಟಿಗಳ ಬೆನ್ನು ಬಿದ್ದಿದ್ದಾರೆ. ನಿರ್ದಿಷ್ಟ ರಾಜಕೀಯ ಪಕ್ಷ, ರಾಜಕಾರಣಿಯೊಬ್ಬರ ಪರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕವ ಕೆಲಸವನ್ನು ಅವರ ಮುಂದಿಟ್ಟಿದ್ದಾರೆ. ಅದಕ್ಕಾಗಿ ಹಣ ನೀಡುವ ಆಫರ್‌ ಮುಂದಿಟ್ಟಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಈ ಹಣವನ್ನು ನಗದು, ಕಪ್ಪು ಹಣ ಯಾವುದೇ ರೂಪದಲ್ಲಾದರೂ ನೀಡಿ ಎಂದು ಕೆಲವರು ಮುಕ್ತವಾಗಿ ಕಳ್ಳ ಮಾರುಕಟ್ಟೆಯಲ್ಲಿ ಹಣ ಮಾಡುವ ದುರಾಸೆ ತೋರಿಸಿದ್ದಾರೆ. ಕೆಲವರು ನಗದು ರೂಪದಲ್ಲೇ ಹಣ ಸಂದಾಯ ಮಾಡುವಂತೆ ತಿಳಿಸುವ ಮೂಲಕ ತಮ್ಮ ದೇಶಸೇವೆಯ ಅಸಲಿ ರೂಪವನ್ನೂ ಬಿಚ್ಚಿಟ್ಟಿದ್ದಾರೆ.

ಈ ತನಿಖಾ ವರದಿಗಾಗಿ ಹಾಡುಗಾರರು, ಹಾಸ್ಯ ನಟರು, ನಟ-ನಟಿಯರು ಸೇರಿ 36 ಸೆಲೆಬ್ರಿಟಿಗಳನ್ನು ಸಂಪರ್ಕಿಸಿದ್ದೇವೆ ಎಂದು ಕೋಬ್ರಾಪೋಸ್ಟ್‌ ಹೇಳಿಕೊಂಡಿದೆ. ಬಿಜೆಪಿ, ಕಾಂಗ್ರೆಸ್‌, ಎಎಪಿ ಪಕ್ಷದ ಪರ ಪ್ರಚಾರಕ್ಕೆ ಸೆಲೆಬ್ರಿಟಿಗಳ ಬಳಿಯಲ್ಲಿ ಕೇಳಿಕೊಂಡಿದ್ದಾಗಿ ವೆಬ್‌ಸೈಟ್‌ ಹೇಳಿದೆ.

ಪಟ್ಟಿಯಲ್ಲಿ ಕೈಲಾಶ್‌ ಕೇರ್‌, ವಿವೇಕ್‌ ಒಬೆರಾಯ್‌, ಸೋನು ಸೂದ್‌, ಜಾಕಿಶ್ರಾಫ್‌, ಶಕ್ತಿ ಕಪೂರ್‌, ರಾಖಿ ಸಾವಂತ್‌, ಮಿಖಾ ಸಿಂಗ್‌, ಅಮಿಶಾ ಪಟೇಲ್‌, ಸನ್ನಿ ಲಿಯೋನ್‌, ಪೂನಂ ಪಾಂಡೆ, ಮಹಿಮಾ ಚೌಧರಿ, ರಾಹುಲ್‌ ಭಟ್‌, ಅಮನ್‌ ವರ್ಮಾ, ರಾಜ್‌ಪಾಲ್‌ ಯಾದವ್‌, ಗಣೇಶ್‌ ಆಚಾರ್ಯ, ರೋಹಿತ್‌ ರಾಯ್‌, ಶ್ರೇಯಸ್‌ ತಲ್ಪಾಡೆ, ದೀಪ್ಶಿಖಾ ನಾಗ್‌ಪಾಲ್‌, ಟಿಸ್ಕಾ ಚೋಪ್ರಾ, ಪುನೀತ್‌ ಇಸ್ಸಾರ್‌, ಸುರೇಂದ್ರ ಪಾಲ್‌, ಅಖಿಲೇಂದ್ರ ಮಿಶ್ರಾ, ಪಂಕಜ್‌ ಧೀರ್, ನಿಕಿತಿನಿ ಧೀರ್‌, ತೇಜ್ವಾನಿ, ಅಭಿಜೀತ್‌ ಭಟ್ಟಾಚಾರ್ಯ, ವಿಜಯ್‌ ಈಶ್ವರ್‌ಲಾಲ್‌ ಪವಾರ್‌, ಬಾಬಾ ಸೆಹಗಲ್‌, ಉಪಾಸನಾ ಸಿಂಗ್, ಸಲೀಂ ಝೈದಿ, ರಾಜು ಶ್ರೀವತ್ಸವಾ, ಸುನಿಲ್‌ ಪಾಲ್‌, ಸಂಭಾವನಾ ಸೇಠ್‌, ಕೊಯಿನಾ ಮಿತ್ರಾ, ಮಿನಿಷಾ ಲಾಂಬಾ, ಎವಿಲಿನ್‌ ಶರ್ಮಾ, ವಿಜಯ್‌ ಪವಾರ್‌, ಕೃಷ್ಣ ಅಭಿಷೇಕ್‌ ಇದ್ದಾರೆ.

ಕೋಬ್ರಾಪೋಸ್ಟ್‌ ತನಿಖೆ ಹೇಳುವುದೇನು?

ತಮ್ಮ ತಮ್ಮ ಟ್ಟಿಟ್ಟರ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವಂತೆ ಈ ಸೆಲೆಬ್ರಿಟಿಗಳನ್ನು ಕೇಳಿಕೊಳ್ಳಲಾಗಿತ್ತು. ಇದರಲ್ಲಿ ಕೆಲವು ಸೆಲೆಬ್ರಿಟಿಗಳು ಆಫರ್‌ ಒಪ್ಪಿಕೊಂಡಿದ್ದಲ್ಲದೆ ಹಣ ನೀಡದೆಯೂ ಕೆಲವು ಟ್ಟೀಟ್‌ಗಳನ್ನು ಮಾಡಿ ತಮ್ಮ ಆಸಕ್ತಿಯನ್ನು ಹೊರಗೆಡಹಿದ್ದರು. ಇನ್ನು ಕೆಲವರು ಮುಂಗಡ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಒಂದು ಪೋಸ್ಟ್‌ಗೆ 2 ಲಕ್ಷ ರೂಪಾಯಿಗಳಿಂದ ಆರಂಭಿಸಿ 50 ಲಕ್ಷ ರೂಪಾಯಿವರೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಉದಾಹರಣೆಗೆ; ಹಾಡುಗಾರ ಕೈಲಾಶ್‌ ಖೇರ್‌ರನ್ನು ಸಂಪರ್ಕಿಸಿದಾಗ ಪ್ರಸ್ತಾಪವನ್ನು ಒಂದೇ ಏಟಿಗೆ ಒಪ್ಪಿಕೊಂಡಿದ್ದಾರೆ. ಜತೆಗೆ ನಗದು ರೂಪದಲ್ಲಿ ಹಣ ಸ್ವೀಕರಿಸಿಯೂ ಪಕ್ಷದ ಪರ ಪ್ರಚಾರ ನಡೆಸಲು ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ. ಜಾಕಿಶ್ರಾಫ್‌ ಆಫರ್‌ ಒಪ್ಪಿಕೊಂಡಿದ್ದಲ್ಲದೆ ಹಣಕ್ಕಾಗಿ ಚರ್ಚೆಯನ್ನೂ ನಡೆಸಿರುವುದು ಕುಟುಕು ಕಾರ್ಯಾಚರಣೆಯಲ್ಲಿ ದಾಖಲಾಗಿದೆ. ಒಂದು ಸ್ಯಾಂಪಲ್ಸ್ ಇಲ್ಲಿದೆ.

ಇದರ ಜತೆಗೆ ಕೆಲವು ಸೆಲೆಬ್ರಿಟಿಗಳು ವಿವಾದಾತ್ಮಕ ಟ್ಟೀಟ್‌ಗಳನ್ನು ಮಾಡಲೂ ಒಪ್ಪಿಕೊಂಡಿದ್ದಾರೆ. ನಟ ಕಂ ನಿರ್ದೇಶಕ ಪುನೀತ್‌ ಇಸ್ಸಾರ್‌ ಅಂಥಹವರಲ್ಲಿ ಒಬ್ಬರು. “ನಾನು ಕೆಲವು ಕಲ್ಪನೆಗಳ ಬಗ್ಗೆ ಚರ್ಚಿಸುತ್ತೇನೆ. ನಾನು ಅವುಗಳನ್ನು ಬೇಕಾದಂತೆ ತಿರುಗಿಸಬಲ್ಲೆ, ನಾನು ಎದುರಾಳಿಗಳನ್ನು ನಾಶಪಡಿಸಬಲ್ಲೆ. ಹಾಗಾಗಿ ನಾವು ಹಣದ ಬಗ್ಗೆ ಆಮೇಲೆ ಮಾತನಾಡೋಣ," ಎಂದು ಅವರು ಕೋಬ್ರಾಪೋಸ್ಟ್‌ ವರದಿಗಾರನಿಗೆ ತಿಳಿಸಿದ್ದಾರೆ.

ಆಫರ್‌ ಮುಂದಿಟ್ಟ ಸಂದರ್ಭದಲ್ಲಿ ಸನ್ನಿ ಲಿಯೋನ್‌ ತಮ್ಮ ಪತಿ ಡೇನಿಯಲ್‌ಗೆ ಪಾಸ್ಪೋರ್ಟ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಇನ್ನು ಹಾಸ್ಯ ನಟ ಸುನಿಲ್‌ ಪಾಲ್ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪರ ತೀಕ್ಷ್ಣ ವಿಡಂಬನೆಗಳನ್ನು ಮಾಡುವುದಾಗಿ ಹೇಳಿದ್ದಾರೆ.

ಹೀಗೆ ತಮ್ಮ ಸಾಮಾಜಿಕ ಜವಾಬ್ದಾರಿಗಳಾಚೆಗೆ ತಮ್ಮನ್ನು ತಾವು ಮಾರಿಕೊಳ್ಳಲು ಸಿದ್ಧವಾದ ಸೆಲೆಬ್ರಿಟಿಗಳ ನಡುವೆ ವಿದ್ಯಾ ಬಾಲನ್‌, ಅರ್ಷದ್‌ ವಾರ್ಸಿ, ಸೌಮ್ಯ ಟಂಡನ್‌ ಮತ್ತು ರಾಝಾ ಮುರಾದ್‌ ತಾವು ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾರೆ.

ಎಲ್ಲವೂ ಬಿಕರಿಗಿರುವ ಮಾರುಕಟ್ಟೆಯಲ್ಲಿ ಜನ ನಂಬುವ, ಪ್ರೀತಿಸುವ, ಆರಾಧಿಸುವ ಮಂದಿ ಹಣಕ್ಕಾಗಿ ಯಾವ ಮಟ್ಟಕ್ಕೆ ಇಳಿಯಬಲ್ಲರು ಎಂಬುದಕ್ಕೆ ಸಾಕ್ಷಿ ರೂಪವೊಂದನ್ನು ಈ ಕುಟುಕು ಕಾರ್ಯಾಚರಣೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿಟ್ಟಿದೆ. ಅದಕ್ಕೆ ಅಲ್ವಾ ಹೇಳುವುದು; ಬೆಳ್ಳಗಿರುವುದು ಎಲ್ಲಾ ಹಾಲಲ್ಲ ಅಂತ.