samachara
www.samachara.com
‘ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಲ್ಲಲಿವೆ’: ವಾದ್ರಾ ವಿಚಾರಣೆಗೆ ಮಮತಾ ಪ್ರತಿಕ್ರಿಯೆ
ದೇಶ

‘ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಲ್ಲಲಿವೆ’: ವಾದ್ರಾ ವಿಚಾರಣೆಗೆ ಮಮತಾ ಪ್ರತಿಕ್ರಿಯೆ

ಲೋಕಸಭಾ ಚುನಾವಣೆಗೆ ಮುಂಚೆ ಬಿಜೆಪಿ ಎಲ್ಲಾ ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Team Samachara

ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ವಿಚಾರಣೆ ನಡೆಸುತ್ತಿರುವುದರ ಹಿಂದೆ ಬಿಜೆಪಿಯ ರಾಜಕೀಯ ಪ್ರೇರಣೆ ಇದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಥ ಸಂದರ್ಭದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿರಲಿವೆ ಎಂದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಹಾಗೂ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ವಿಚಾರಣೆ ನಡೆಸುತ್ತಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬ್ಯಾನರ್ಜಿ, “ಇದು ಗಂಭೀರ ಪ್ರಕರಣವೇನಲ್ಲ. ಪ್ರತಿಯೊಬ್ಬರಿಗೂ ಸಾಂದರ್ಭಿಕ ನೋಟಿಸ್ ನೀಡಿ ವಿಚಾರಣೆ ಮಾಡುವುದು ಸಾಮಾನ್ಯ ಸಂಗತಿ. ನಾವು ಒಟ್ಟಾಗಿ ನಿಲ್ಲುತ್ತೇವೆ, ನಾವು ಒಗ್ಗಟ್ಟಾಗಿದ್ದೇವೆ” ಎಂದಿದ್ದಾರೆ.

“ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಎಲ್ಲಾ ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ”ಎಂದು ಮಮತಾ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯಾಗ್ರಹದ ನಂತರ ಗಟ್ಟಿಯಾದ ಸಂಬಂಧ

ಸಿಬಿಐ ಸಂಸ್ಥೆಯನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅರೋಪಿಸಿ ಭಾನುವಾರ ಕೇಂದ್ರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದರು. ಈ ಘಟನೆಯ ನಂತರ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ಸಂಬಂಧ ಗಟ್ಟಿಯಾಗಿದೆ ಎನ್ನಲಾಗುತ್ತಿದೆ.

ಭಾನುವಾರ ಸಿಬಿಐ ಅಧಿಕಾರಿಗಳು ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ನಿವಾಸಕ್ಕೆ ಬಂದಿದ್ದರು. ಆದರೆ, ಸ್ಥಳೀಯ ಪೊಲೀಸರು ಸಿಬಿಐ ಅಧಿಕಾರಿಗಳನ್ನು ರಾಜೀವ್ ಅವರ ಮನೆಯ ಒಳಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ. ನಂತರ ನಡೆದ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡ ಸ್ಥಳೀಯ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.

ಸಿಬಿಐ ಅಧಿಕಾರಿಗಳ ನಡೆ ಹಾಗೂ ಕೇಂದ್ರ ಸರಕಾರದ ದಮನಕಾರಿ ನೀತಿಯನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಮೂರು ದಿನಗಳ ಕಾಲ ರಾಜೀವ್ ಕುಮಾರ್ ನಿವಾಸದ ಎದುರೇ ಸತ್ಯಾಗ್ರಹ ನಡೆಸಿದ್ದರು. ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‌ಪಿ ಪಕ್ಷದ ಮಾಯಾವತಿ ಹಾಗೂ ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಸೇರಿದಂತೆ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಮಮತಾ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದರು.