samachara
www.samachara.com
ಕೇಂದ್ರಕ್ಕೆ ಮುಖಭಂಗ; ಸಿಬಿಐಗೆ ಮರಳಿದ ಅಲೋಕ್‌  ವರ್ಮಾ;  ‘ರಜೆ ರದ್ದುಗೊಳಿಸಿದ’ ಸುಪ್ರೀಂ ಕೋರ್ಟ್‌
ದೇಶ

ಕೇಂದ್ರಕ್ಕೆ ಮುಖಭಂಗ; ಸಿಬಿಐಗೆ ಮರಳಿದ ಅಲೋಕ್‌ ವರ್ಮಾ; ‘ರಜೆ ರದ್ದುಗೊಳಿಸಿದ’ ಸುಪ್ರೀಂ ಕೋರ್ಟ್‌

ಕ್ಷಿಪ್ರ ಬೆಳವಣಿಗೆಯಲ್ಲಿ ಅಕ್ಟೋಬರ್‌ 23ರ ಮಧ್ಯರಾತ್ರಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಆಸ್ತಾನಾರನ್ನು ಸರಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಆದರೀಗ ಸುಪ್ರಿಂ ಕೋರ್ಟ್ ವರ್ಮಾ ಪರ ತೀರ್ಪು ನೀಡಿದೆ.

ಅಲೋಕ್‌ ವರ್ಮಾರನ್ನು ಮತ್ತೆ ಸಿಬಿಐ ನಿರ್ದೇಶಕರನ್ನಾಗಿ ನೇಮಕಗೊಳಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅವರನ್ನು ವಜಾಗೊಳಿಸುವಂತೆ ಶಿಫಾರಸ್ಸು ಮಾಡಿದ್ದ ಕೇಂದ್ರ ಜಾಗೃತ ಆಯೋಗದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸುವುದರೊಂದಿಗೆ ಕೇಂದ್ರ ಸರಕಾರ ಭಾರೀ ಮುಖಭಂಗಕ್ಕೀಡಾಗಿದೆ.

ಅಕ್ಟೋಬರ್‌ 23ರ ಮಧ್ಯರಾತ್ರಿಯ ಕ್ಷಿಪ್ರ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ವರ್ಮಾ ಅಧಿಕಾರವನ್ನು ಕಿತ್ತುಕೊಂಡು ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಬಳಿಕ ತಮ್ಮನ್ನು ರಜೆಯ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ತೀರ್ಪು ನೀಡಿರುವ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ತ್ರಿ ಸದಸ್ಯ ಪೀಠ ಈ ಆದೇಶ ನೀಡಿದೆ.

ಹೀಗಿದ್ದೂ ಯಾವುದೇ ಪಾಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಅಲೋಕ್‌ ವರ್ಮಾ ಅವರಿಗೆ ನ್ಯಾಯಾಲಯ ಸೂಚಿಸಿದೆ. ವರ್ಮಾ ಮೇಲಿನ ಸಿವಿಸಿ ತನಿಖಾ ವರದಿಯ ಮೇಲೆ ವಾರದೊಳಗೆ ಸಭೆ ಸೇರಿ ಶಾಸನ ಸಮಿತಿ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ನಿಬಂಧನೆ ಮುಂದುವರಿಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಶಾಸನ ಸಮಿತಿಯಲ್ಲಿ ಪ್ರಧಾನಿ, ಮುಖ್ಯನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರು ಇರುತ್ತಾರೆ.

ಅಕ್ಟೋಬರ್‌ 23ರಂದು ಮಧ್ಯರಾತ್ರಿ ವರ್ಮಾ ಜತೆಗೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ತಾನಾ ಅವರನ್ನೂ ವಜಾಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ನ್ಯಾಯಾಲಯ ರಾವ್‌ ನೇಮಕವನ್ನು ರದ್ದುಗೊಳಿಸಿದೆ.

ವರ್ಮಾ ಮತ್ತು ಆಸ್ತಾನಾ ಪರಸ್ಪರ ಜಗಳ ಮಾಡಿಕೊಂಡಿದ್ದರಿಂದ ಅವರಿಬ್ಬರನ್ನು ವಜಾ ಮಾಡಬೇಕಾಯಿತು ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ನ್ಯಾಯಾಲಯದಲ್ಲಿ ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಪೀಠ ಈ ಜಗಳ ಜುಲೈನಿಂದಲೇ ನಡೆಯುತ್ತಿತ್ತು. ತುರ್ತು ಕ್ರಮ ಕೈಗೊಳ್ಳಲು ಇದು ರಾತೋ ರಾತ್ರಿ ನಡೆದ ಘಟನೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಸಿವಿಸಿ ಪರ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಇಬ್ಬರು ಹಿರಿಯ ಅಧಿಕಾರಿಗಳು ಗಂಭೀರ ಪ್ರಕರಣಗಳನ್ನು ತನಿಖೆ ಮಾಡುವ ಬದಲು ಒಬ್ಬರನ್ನೊಬ್ಬರು ತನಿಖೆ ನಡೆಸುತ್ತಿದ್ದರು. ಒಂದೊಮ್ಮೆ ಇಂಥಹ ಅಚ್ಚರಿಯ ಸನ್ನಿವೇಶದಲ್ಲಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಿವಿಸಿಗೆ ಇಲ್ಲದಿದ್ದಲ್ಲಿ, ಅದು ಹಲ್ಲಿಲ್ಲದ ಸಂಸ್ಥೆಯಾಗುತ್ತದೆ,” ಎಂದು ವಾದಿಸಿದರು. ಆದರೆ ಈ ವಾದಕ್ಕೆ ನ್ಯಾಯಾಲಯ ಮನ್ನಣೆ ನೀಡಲಿಲ್ಲ.

ಅಕ್ಟೋಬರ್‌ 2017ರಲ್ಲಿ ರಾಕೇಶ್‌ ಆಸ್ತಾನಾರನ್ನು ವಿಶೇಷ ನಿರ್ದೇಶಕರ ಹುದ್ದೆಗೆ ಪದೋನ್ನತಿ ನೀಡುವಾಗಲೇ ವರ್ಮಾ ಆಕ್ಷೇಪಿಸಿದ್ದರು. ಮುಂದಿನ ದಿನಗಳಲ್ಲಿ ಮೋಯಿನ್ ಖುರೇಷಿ ಪ್ರಕರಣದಲ್ಲಿ ಅವರನ್ನು ಪ್ರಕರಣದಿಂದ ಹೊರ ತರಲು ಆಸ್ತಾನಾ ಲಂಚ ಸ್ವೀಕರಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ವರ್ಮಾ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಆಸ್ತಾನಾ ವರ್ಮಾ ವಿರುದ್ಧ ಡಜನ್‌ಗೂ ಹೆಚ್ಚು ಆರೋಪಗಳ ಮಳೆಗರೆದಿದ್ದರು. ಇದರಲ್ಲಿ ಅವರು ಮೊಯೀನ್‌ ಖುರೇಷಿ ಪ್ರಕರಣದಲ್ಲಿ ಸಿಬಿಐ ನಿರ್ದೇಶಕರೇ ಲಂಚ ಸ್ವೀಕರಿಸಿದ್ದಾರೆ ಎಂದಿದ್ದರು.

ಈ ಎಲ್ಲಾ ಬೆಳವಣಿಗೆಗಳು ಅಕ್ಟೋಬರ್‌ 23ರಂದು ವರ್ಮಾ ಮತ್ತು ಆಸ್ತಾನಾ ವಜಾಕ್ಕೆ ಕಾರಣವಾಗಿತ್ತು. ಆದರೆ ಇದೀಗ ವರ್ಮಾರನ್ನು ಮತ್ತೆ ಸಿಬಿಐ ನಿರ್ದೇಶಕರನ್ನಾಗಿ ಸುಪ್ರೀಂ ಕೋರ್ಟ್‌ ನೇಮಕ ಮಾಡಿದೆ. ಅವರಿಗೆ ಜನವರಿ 31ರ ವರೆಗೆ ಅಧಿಕಾರಾವಧಿ ಇದ್ದು 23 ದಿನಗಳ ಅಧಿಕಾರವನ್ನು ಹೊಂದಿದ್ದಾರೆ.

ಚಿತ್ರ ಕೃಪೆ: ದಿ ಪ್ರಿಂಟ್

Also read: ಉದ್ಯಮಿ- ರಾ ಅಧಿಕಾರಿ-ಸಿಬಿಐ ವಿಶೇಷ ನಿರ್ದೇಶಕ: ಇದು ಬೇಲಿಯೇ ಎದ್ದು ಹೊಲ ಮೇಯಲು ಹೊರಟ ಕತೆ!

Also read: ಸಿಬಿಐ ಶಿಕಾರಿಯ ರೋಚಕ ಕತೆ | ಅಂಬಾನಿ ಕುಟುಂಬದ  ರಕ್ಷಣೆಗೆ ಅಂದು ಅಟಲ್, ಇಂದು ಮೋದಿ!

Also read: ಇದು ಸಿಬಿಐ ಬೃಹನ್ನಾಟಕ: ‘ಆಸ್ತಾನಾ ತನಿಖೆಯಲ್ಲಿ ದೋವಲ್ ಮಧ್ಯಪ್ರವೇಶ, ಕೇಂದ್ರ ಸಚಿವರಿಗೆ ಕಿಕ್‌ಬ್ಯಾಕ್‌’