‘ಅಂಬಾನಿಯನ್ನು ಜೈಲಿಗಾಕಿ’; ಸುಪ್ರಿಂ ಕೋರ್ಟ್‌ನಲ್ಲಿ ಎರಿಕ್ಸನ್ ಮನವಿ 
ದೇಶ

‘ಅಂಬಾನಿಯನ್ನು ಜೈಲಿಗಾಕಿ’; ಸುಪ್ರಿಂ ಕೋರ್ಟ್‌ನಲ್ಲಿ ಎರಿಕ್ಸನ್ ಮನವಿ 

ಸುಮಾರು 46 ಸಾವಿರ ಕೋಟಿ ರೂಪಾಯಿ ಸಾಲದಲ್ಲಿ ಆರ್‌ಕಾಂ ಮುಳುಗಿದ್ದು ಒಂದಷ್ಟು ಸರಕುಗಳನ್ನು ಜಿಯೋ ಮತ್ತು ಕೆನಡಾ ಮೂಲಕ ಬ್ರೂಕ್‌ಫೀಲ್ಡ್‌ಗೆ ಮಾರಾಟ ಮಾಡಿ 18,000 ಕೋಟಿ ರೂಪಾಯಿ ಮೊತ್ತದ ಹಣವನ್ನು ಹೊಂದಿಸಲು ಅನಿಲ್‌ ಅಂಬಾನಿ ಮುಂದಾಗಿದ್ದಾರೆ.

ಆ ಕಡೆ ಸಂಸತ್‌ನಲ್ಲಿ ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಅನಿಲ್‌ ಅಂಬಾನಿ ಹೆಸರು ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಈ ಕಡೆ ಒಂದು ಕಾಲದ ಶ್ರೀಮಂತ ಉದ್ಯಮಿ, ಭಾರತದ ಉದ್ಯಮ ದೈತ್ಯ ಧೀರೂಭಾಯಿ ಅಂಬಾನಿಯ ಪುತ್ರ, ಅದೇ ಅನಿಲ್‌ ಅಂಬಾನಿಯನ್ನು ಬಂಧಿಸುವಂತೆ ಸ್ವೀಡನ್‌ ಮೂಲದ ಎರಿಕ್ಸನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ತನಗೆ ಅಂಬಾನಿ ಕೊಡಬೇಕಾಗಿದ್ದ ಹಣವನ್ನು ಕೊಟ್ಟಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಎರಡೂ ಗಡುವುಗಳಿಗೆ ಅಂಬಾನಿ ತಪ್ಪಿದ್ದಾರೆ. ಹೀಗಾಗಿ ಹಣ ನೀಡುವವರೆಗೆ ಅವರನ್ನು ಜೈಲಿಗಟ್ಟಿ ಎಂದು ಎರಿಕ್ಸನ್‌ ಮನವಿ ಮಾಡಿಕೊಂಡಿದೆ.

ಸ್ವೀಡನ್‌ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್‌ಗೆ ಅನಿಲ್‌ ಅಂಬಾನಿ ಅಧ್ಯಕ್ಷರಾಗಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) 550 ಕೋಟಿ ರೂಪಾಯಿಗಳನ್ನು ನೀಡಬೇಕಾಗಿತ್ತು. ಈ ಹಣವನ್ನು ಅಂಬಾನಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್‌ ಈ ಹಿಂದೆಯೇ ಕೋರ್ಟ್‌ ಮೆಟ್ಟಿಲೇರಿತ್ತು. ಮೊದಲ ಬಾರಿಗೆ ನ್ಯಾಯಾಲಯ ಅಂಬಾನಿಗೆ ಸೆಪ್ಟೆಂಬರ್‌ 30ರ ಮೊದಲು ಬಾಕಿ ಹಣ ಪಾವತಿ ಮಾಡುವಂತೆ ಗಡುವು ನೀಡಿತ್ತು. ಆದರೆ ಅಂಬಾನಿ ಆದೇಶಕ್ಕೆ ತಪ್ಪಿದ್ದರಿಂದ ಎರಿಕ್ಸನ್‌ ಅಕ್ಟೋಬರ್‌ನಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯ ಅಂಬಾನಿಗೆ ಎರಡನೇ ಬಾರಿಗೆ ಡಿಸೆಂಬರ್‌ 15ರ ಗಡುವು ನೀಡಿತ್ತು. ಆದರೆ ಅಂಬಾನಿ ಈ ಬಾರಿಯೂ ಹಣ ನೀಡಿಲ್ಲ. ಹೀಗಾಗಿ ಮತ್ತೊಮ್ಮೆ ಎರಿಕ್ಸನ್‌ ನ್ಯಾಯಾಲಯದ ಮೆಟ್ಟಿಲೇರಿದೆ.

‘ಅಂಬಾನಿಗೆ ದೇಶ ಬಿಡಲು ಅವಕಾಶ ನೀಡಬಾರದು. ಈ ಕಾರಣಕ್ಕೆ ಅವರು ಹಣವನ್ನು ಪೂರ್ತಿಯಾಗಿ ನೀಡುವವರೆಗೆ ಅವರನ್ನು ಸಿವಿಲ್‌ ಜೈಲಿಗೆ ಹಾಕಬೇಕು’ ಎಂದು ಎರಿಕ್ಸನ್‌ ಕೋರಿಕೊಂಡಿದೆ. ಮತ್ತು ಬಾಕಿ ಹಣವನ್ನು ಬಡ್ಡಿ ಸಮೇತ ನೀಡುವಂತೆ ಆರ್‌ಕಾಂ ಮಾಲಿಕರಿಗೆ ನಿರ್ದೇಶನ ನೀಡುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ಜತೆಗೆ ಆರ್‌ಕಾಂ ಆಸ್ತಿಗಳ ಮಾರಾಟಕ್ಕೆಯೂ ತಡೆ ನೀಡುವಂತೆ, ಈಗಾಗಲೇ ಮಾರಾಟಗೊಂಡಿರುವ ಆಸ್ತಿಗಳ ಪ್ರಕ್ರಿಯೆಯನ್ನು ರದ್ದುಗೊಳಿಸವಂತೆ ಕೇಳಿಕೊಂಡಿದೆ. “ಒಂದೊಮ್ಮೆ ನ್ಯಾಯಾಂಗ ನಿಂದನೆ ಪ್ರಕರಣದ ಪ್ರಕಾರ ಅಪರಾಧಿ ಎಂದು ಸಾಬೀತಾದರೆ (ಅನಿಲ್‌ ಅಂಬಾನಿ) ಆರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ,” ಎಂದು ಆರ್‌ಕಾಂ ಪರ ವಕೀಲ ಅನಿಲ್‌ ಖೇರ್‌ ಹೇಳಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರಕ್ಕೆ ನಿಗದಿಪಡಿಸಿದೆ.

ಆದರೆ ಇದಕ್ಕೆ ಪ್ರತಿಯಾಗಿ ಆರ್‌ಕಾಂ ದೂರ ಸಂಪರ್ಕ ಇಲಾಖೆ ವಿರುದ್ಧವೇ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ತಾನು ಹಣ ಪಾವತಿ ಮಾಡದೇ ಇರುವುದಕ್ಕೆ ಇಲಾಖೆಯ ಮೇಲೆ ರಿಲಯನ್ಸ್‌ ಕಮ್ಯೂನಿಕೇಷನ್ಸ್‌ ಗೂಬೆ ಕೂರಿಸಿದ್ದು, ತನ್ನ ತರಂಗ ಗುಚ್ಛ ಮಾರಾಟ ಪ್ರಕ್ರಿಯೆಯನ್ನು ಇಲಾಖೆ ನಿಧಾನಗೊಳಿಸುತ್ತಿರುವುದರಿಂದ ಎರಿಕ್ಸನ್‌ ಮತ್ತು ಇತರರಿಗೆ ಬಾಕಿ ಹಣ ಪಾವತಿ ಮಾಡಲಾಗುತ್ತಿಲ್ಲ ಎಂದು ಹೇಳಿದೆ. ತಾನು ರಿಲಯನ್ಸ್‌ ಜಿಯೋ ಇನ್‌ಫೋಕಾಂಗೆ ಮಾರಾಟ ಮಾಡಲು ಹೊರಟಿರುವ ತರಂಗಗುಚ್ಛಗಳಿಗೆ ಇಲಾಖೆ ನೋ ಅಬ್ಜೆಕ್ಷನ್‌ ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಅದು ದೂರಿದೆ. ಪ್ರಕರಣದಲ್ಲಿ ಬಾಕಿ ಹಣಕ್ಕೆ ಅನಿಲ್‌ ಅಂಬಾನಿ ಸ್ವತಃ ತಮ್ಮನ್ನೇ ಗ್ಯಾರಂಟಿಯನ್ನಾಗಿ ನೀಡಿದ್ದಾರೆ. ಹೀಗಾಗಿ ಪ್ರಕರಣವೀಗ ವೈಯಕ್ತಿಕವಾಗಿ ಅವರ ಕೊರಳನ್ನೇ ಸುತ್ತಿಕೊಳ್ಳುತ್ತಿದೆ.

ಇನ್ನೊಂದು ಕಡೆ ದೂರ ಸಂಪರ್ಕ ಇಲಾಖೆಗೆ ಸ್ಪೆಕ್ಟ್ರಂಗೆ ಸಂಬಂಧಿಸಿದಂತೆ ರಿಲಯನ್ಸ್‌ನಿಂದ 2,947 ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ. ಈ ಪ್ರಕರಣವೂ ಸುಪ್ರಿಂ ಕೋರ್ಟ್‌ನಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ್ದ ನ್ಯಾಯಾಲಯ 1,400 ಕೋಟಿ ರೂಪಾಯಿ ಮೊತ್ತದ ಕಾರ್ಪೊರೇಟ್‌ ಗ್ಯಾರೆಂಟಿ ತೆಗೆದುಕೊಂಡು ಆರ್‌ಕಾಂ-ಜಿಯೋ ಮಾರಾಟಕ್ಕೆ ಅವಕಾಶ ನೀಡುವಂತೆ ಸೂಚಿಸಿತ್ತು. ಜತೆಗೆ ಆರ್‌ಕಾಂನ ಉಪ ಕಂಪನಿಗಳಿಂದ ಭೂಮಿಯನ್ನು ಭದ್ರತೆಯಾಗಿ ತೆಗೆದುಕೊಳ್ಳುವಂತೆ ಹೇಳಿತ್ತು. ಆದರೆ ಇದಕ್ಕೂ ರಿಲಯನ್ಸ್‌ ಒಪ್ಪಿಕೊಂಡಿಲ್ಲ. ಮತ್ತು ಸುಪ್ರೀಂ ಕೋರ್ಟ್‌ ಸಂಧಾನ ಸೂತ್ರದಂತೆ ನಡೆದುಕೊಂಡಿಲ್ಲ. ಹೀಗಾಗಿ ದೂರ ಸಂಪರ್ಕ ಇಲಾಖೆ ಅಣ್ಣ ಮುಖೇಶ್‌ ಅಂಬಾನಿ ಮತ್ತು ತಮ್ಮ ಅನಿಲ್‌ ಅಂಬಾನಿಯ ಕಂಪನಿಗಳ ನಡುವಿನ ಡೀಲ್‌ಗೆ ಅಡ್ಡಗಾಲು ಹಾಕಿದೆ.

ಸುಮಾರು 46 ಸಾವಿರ ಕೋಟಿ ರೂಪಾಯಿ ಸಾಲದಲ್ಲಿ ಆರ್‌ಕಾಂ ಮುಳುಗಿದ್ದು ಒಂದಷ್ಟು ಸರಕುಗಳನ್ನು ಜಿಯೋ ಮತ್ತು ಕೆನಡಾ ಮೂಲಕ ಬ್ರೂಕ್‌ಫೀಲ್ಡ್‌ಗೆ ಮಾರಾಟ ಮಾಡಿ 18,000 ಕೋಟಿ ರೂಪಾಯಿ ಮೊತ್ತದ ಹಣವನ್ನು ಹೊಂದಿಸಲು ಅನಿಲ್‌ ಅಂಬಾನಿ ಮುಂದಾಗಿದ್ದಾರೆ. ಆದರೆ ಹಳೇ ವಿವಾದಗಳಿಂದಾಗಿ ಇದಕ್ಕಿನ್ನೂ ದೂರಸಂಪರ್ಕ ಇಲಾಖೆ ಒಪ್ಪಿಗೆ ನೀಡಿಲ್ಲ. ಈ ಕಾರಣಕ್ಕೆ ಒಂದು ಕಾಲದ ಕುಬೇರ, ಭಾರತದ ಎರಡನೇ ಶ್ರೀಮಂತ ಉದ್ಯಮಿ ಅನಿಲ್‌ ಅಂಬಾನಿ 550 ಕೋಟಿ ರೂಪಾಯಿ ಹಣಕ್ಕೂ ಗತಿ ಇಲ್ಲದೆ ಒದ್ದಾಡುತ್ತಿದ್ದಾರೆ.

ಚಿತ್ರ ಕೃಪೆ: ರಾಯ್ಟರ್ಸ್‌; ಮಾಹಿತಿ: ಎಕಾನಾಮಿಕ್‌ ಟೈಮ್ಸ್‌

Also read: ಅಣ್ಣ ಟಾಪರ್‌; ತಮ್ಮ ಪಾಪರ್‌: 46,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಅನಿಲ್‌ ಅಂಬಾನಿ!