samachara
www.samachara.com
ಬುಲಂದ್‌ಶಹರ್‌ ಗಲಭೆಯ ಕಿಂಗ್‌ಪಿನ್‌; ಭಜರಂಗದಳ ಕಾರ್ಯಕರ್ತನ ಬಂಧನ
ದೇಶ

ಬುಲಂದ್‌ಶಹರ್‌ ಗಲಭೆಯ ಕಿಂಗ್‌ಪಿನ್‌; ಭಜರಂಗದಳ ಕಾರ್ಯಕರ್ತನ ಬಂಧನ

ಡಿಸೆಂಬರ್‌ 3ರಂದು ಬುಲಂದ್‌ಶಹರ್‌ನಲ್ಲಿ ನಡೆದಿದ್ದ ಗಲಭೆಯಲ್ಲಿ ಸಿಯಾನಾ ಠಾಣೆ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಮತ್ತು ಸ್ಥಳೀಯ ಯುವಕ ಸುಮಿತ್‌ ಕುಮಾರ್‌ ಸಾವನ್ನಪ್ಪಿದ್ದರು.

ದೇಶವೇ ಬೆಚ್ಚಿ ಬಿದ್ದಿದ್ದ ಬುಲಂದ್‌ಶಹರ್‌ ಗಲಭೆಯ ಪ್ರಮುಖ ಆರೋಪಿ, ಭಜರಂಗದಳ ನಾಯಕ ಯೋಗೀಶ್‌ ರಾಜ್‌ನನ್ನು ಕೊನೆಗೂ ಯೋಗಿ ಆದಿತ್ಯನಾಥ್ ಸರಕಾರ ಬಂಧಿಸಿದೆ. ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಜ್‌ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ. ಇದೀಗ ಆತನನ್ನು ಬುಲಂದ್‌ಶಹರ್‌ನ ಕಾಲೇಜೊಂದರಿಂದ ಬುಧವಾರ ಸಂಜೆ ಬಂಧಿಸಲಾಗಿದೆ.

ಸ್ಥಳೀಯ ಭಜರಂಗದಳದ ಜತೆ ಗುರುತಿಸಿಕೊಂಡಿರುವ ರಾಜ್‌ ಸಂಘಟನೆಯ ಜಿಲ್ಲಾ ಸಂಯೋಜಕನಾಗಿದ್ದಾನೆ. ಈತ ನಾನು ಗುಂಪು ಗಲಭೆಯಲ್ಲಿ ಭಾಗಿಯಾಗಿದ್ದೆ ಮತ್ತು ಕಲ್ಲು ತೂರಾಟಕ್ಕೆ ಪ್ರೇರಣೆ ನೀಡಿದ್ದೆ ಎಂಬುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಡಿಸೆಂಬರ್‌ 3ರಂದು ಬುಲಂದ್‌ಶಹರ್‌ನಲ್ಲಿ ನಡೆದಿದ್ದ ಗಲಭೆಯಲ್ಲಿ ಸಿಯಾನಾ ಠಾಣೆ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಮತ್ತು ಸ್ಥಳೀಯ ಯುವಕ ಸುಮಿತ್‌ ಕುಮಾರ್‌ ಸಾವನ್ನಪ್ಪಿದ್ದರು. ಗೋ ಹತ್ಯೆ ವಿರೋಧಿಸಿ ನಡೆಯುತ್ತಿದ್ದ ಗುಂಪು ಗಲಭೆಯನ್ನು ಚದುರಿಸಲು ತೆರಳಿದ್ದ ಸಂದರ್ಭ ಸುಬೋಧ್‌ ಸಿಂಗ್‌ ಮೇಲೆ ಈ ದಾಳಿ ನಡೆದಿತ್ತು.

ಡಿಸೆಂಬರ್‌ 3ರ ಗಲಭೆಗೂ ಮುನ್ನ ಯೋಗೇಶ್‌ ರಾಜ್‌ ಅಪ್ರಾಪ್ತರು ಸೇರಿ 7 ಜನರ ಮೇಲೆ ಸಿಯಾನಾ ಠಾಣೆಗೆ ದೂರು ನೀಡಿದ್ದ. 7 ಜನರು ಗೋ ಹತ್ಯೆ ಮಾಡುತ್ತಿರುವುದನ್ನು ನಾನು ನೋಡಿರುವುದಾಗಿ ಆತ ತಿಳಿಸಿದ್ದ. ಈ ಆಧಾರದ ಮೇಲೆ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು. ಆದರೆ ಇದರ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರ ಗುಂಪು ಕಟ್ಟಿಕೊಂಡು ಬಂದಿದ್ದ ರಾಜ್‌ ಇಬ್ಬರ ಸಾವಿಗೆ ಕಾರಣನಾಗಿದ್ದ.

ಗಲಭೆ ನಡೆದ ನಂತರ ಪ್ರಮುಖ ಆರೋಪಿಗಳೆಲ್ಲರೂ ಪರಾರಿಯಾಗಿದ್ದರು. ನಂತರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಯೋಗೀಶ್‌ ‘ನಾನೇನೂ ತಪ್ಪು ಮಾಡಿಲ್ಲ. ಗಲಭೆ ದಿನ ನಾನು ಸ್ಥಳದಲ್ಲೇ ಇರಲಿಲ್ಲ’ ಎಂದು ವಾದಿಸಿದ್ದ. ಜತೆಗೆ ನನ್ನನ್ನು ರೌಡಿ ಶೀಟರ್‌ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೂರಿದ್ದ.

ಹೀಗೆ ಪೊಲೀಸರ ಕೈಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ವಿಡಿಯೋ ಬಿಡುಗಡೆ ಮಾಡುತ್ತಾ ತಲೆ ಮರೆಸಿಕೊಂಡಿದ್ದ ರಾಜ್‌ನನ್ನು ಈಗ ಬಂಧಿಸಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. “ಹೌದು ರಾಜ್‌ ಬಂಧಿತನಾಗಿದ್ದಾನೆ. ಆತ ವೈದ್ಯಕೀಯ ಪರೀಕ್ಷೆಗೆ ಒಳಪಡುತ್ತಿದ್ದು ದಿನದ ಅಂತ್ಯದಲ್ಲಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು,” ಎಂದು ಸಿಯಾನಾ ವೃತ್ತಿ ನಿರೀಕ್ಷಕ ರಾಘವೇಂದ್ರ ಕುಮಾರ್‌ ಮಿಶ್ರಾ ಹೇಳಿದ್ದಾರೆ.

ರಾಜ್‌ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಕಳೆದ ವಾರ ಪೊಲೀಸರು ಇನ್ನೋರ್ವ ಪ್ರಮುಖ ಆರೋಪಿ ಕೌಲಾನನ್ನು ಬಂಧಿಸಿದ್ದರು. ಈತ ಗರಗಸದ ಮೂಲಕ ಇನ್ಸ್‌ಪೆಕ್ಟರ್‌ ಮೇಲೆ ದಾಳಿ ನಡೆಸಿದ್ದ ಎನ್ನಲಾಗಿದೆ. ಈತ ನೀಡಿದ ಸುಳಿವಿನ ಮೇರೆಗೆ ದೆಹಲಿಯ ಟ್ಯಾಕ್ಸಿ ಡ್ರೈವರ್‌ ಪ್ರಶಾಂತ್‌ ನಾಥ್‌ನನ್ನೂ ಪೊಲೀಸರು ಬಂಧಿಸಿದ್ದರು. ಈತ ಸುಬೋಧ್‌ ಸಿಂಗ್‌ ಮೇಲೆ ಗುಂಡು ಹಾರಿಸಿದ್ದ ಎನ್ನಲಾಗಿದೆ. ಮೊದಲಿಗೆ ಪ್ರಶಾಂತ್‌ ನಾಥ್‌ ಹೆಸರು ಎಫ್‌ಐಆರ್‌ನಲ್ಲಿ ಇರಲಿಲ್ಲ. ಆದರೆ ನಂತರ ವಿಡಿಯೋದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

ಆರಂಭದಲ್ಲಿ ಪೊಲೀಸರು ಮನುಷ್ಯರ ಹತ್ಯೆಗಿಂತ ಗೋ ಹತ್ಯೆ ಬಗ್ಗೆಯೇ ಹೆಚ್ಚಿನ ಆಸಕ್ತಿ ತಾಳಿದ್ದರು. ನಂತರ ನಿಧಾನವಾಗಿ ಒಬ್ಬೊಬ್ಬರನ್ನೇ ಬಂಧಿಸಲು ಆರಂಭಿಸಿದ್ದರು. ಇದೀಗ ಪ್ರಮುಖ ಆರೋಪಿ, ಭಜರಂಗದಳದ ಜಿಲ್ಲಾ ಸಂಯೋಜಕನನ್ನು ಬಂಧಿಸಿದ್ದಾರೆ. ಇದು ಆರಂಭಿಕ ಬೆಳವಣಿಗೆ ಅಷ್ಟೇ. ಇದರಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕೃಪೆ: ಇಂಡಿಯನ್‌ ಎಕ್ಸ್‌ಪ್ರೆಸ್‌