ದಿಕ್ಕು ತಪ್ಪಿದ ‘ಕ್ಯಾಶ್ ಲೆಸ್ ಇಂಡಿಯಾ’: ಪೇಟಿಎಂ ಹೊಸ ಖಾತೆಗಳಿಗೆ ಆರ್‌ಬಿಐ ನಿರ್ಬಂಧ; ಯಾಕೆ?
ದೇಶ

ದಿಕ್ಕು ತಪ್ಪಿದ ‘ಕ್ಯಾಶ್ ಲೆಸ್ ಇಂಡಿಯಾ’: ಪೇಟಿಎಂ ಹೊಸ ಖಾತೆಗಳಿಗೆ ಆರ್‌ಬಿಐ ನಿರ್ಬಂಧ; ಯಾಕೆ?

ಪೇಟಿಎಂ ಹೊಸ ಖಾತೆಗಳ ಮೇಲಿನ ನಿರ್ಬಂಧಕ್ಕೆ ಕೆವೈಸಿ ನಿಯಮ ಉಲ್ಲಂಘನೆಯೇ ಕಾರಣ ಎಂದು ಆರ್‌ಬಿಐ ಹೇಳಿದೆ.

ಭಾರತದಲ್ಲಿ 23 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪೇಟಿಎಂ ಈಗ ಬಳಕೆದಾರರ ಮಾಹಿತಿ ಸೋರಿಕೆಯ ಕಾರಣಕ್ಕೆ ಸಂಕಷ್ಟದ ಸ್ಥಿತಿ ತಲುಪಿದೆ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮೇಲಿನ ನಿಷೇಧ ಹಾಗೂ ಹೊಸದಾಗಿ ಪೇಟಿಎಂ ಖಾತೆ ತೆರೆಯಲು ನಿರ್ಬಂಧ ವಿಧಿಸಿರುವುದಕ್ಕೆ ಕಾರಣಗಳೇನು ಎಂಬುದನ್ನು ಆರ್‌ಬಿಐ ಹೇಳಿದೆ.

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಮಾಹಿತಿಯಿಂದ ಪೇಟಿಎಂ ಮೇಲಿನ ನಿರ್ಬಂಧಕ್ಕೆ ಅರ್‌ಬಿಐ ನೀಡಿದ ಪ್ರಮುಖ ಕಾರಣಗಳೇನು ಎಂಬುದು ತಿಳಿದುಬಂದಿದೆ. ಮೊದಲು ಮಾಹಿತಿ ನೀಡಲು ಹಿಂದೇಟು ಹಾಕಿದ್ದ ಆರ್‌ಬಿಐ ಕೊನೆಗೂ ಮಾಹಿತಿ ಹಂಚಿಕೊಂಡಿದೆ.

ಪೇಟಿಎಂ ಬಳಕೆದಾರರ ಮಾಹಿತಿಯ ಕೆವೈಸಿ (ನೋ ಯುವರ್ ಕಸ್ಟಮರ್) ನಿಯಮವನ್ನು ಉಲ್ಲಂಘಿಸಿದ ಆರೋಪ ಪೇಟಿಎಂ ಮೇಲಿದೆ. ಆದರೆ, ನಿಯಮ ಉಲ್ಲಂಘನೆ ಯಾವ ರೀತಿಯದ್ದು ಎಂಬ ಬಗ್ಗೆ ಇನ್ನೂ ಅಸ್ಪಷ್ಟತೆ ಮುಂದುವರಿದಿದೆ. ಪೇಟಿಎಂ ಸಂಸ್ಥಾಪಕ ವಿಜಯ್‌ ಶೇಖರ್‌ ಶರ್ಮಾಗೆ ಸೇರಿದ ‘ಒನ್‌ 97 ಕಮ್ಯುನಿಕೇಷನ್ಸ್‌’ ಜತೆಗೆ ಪೇಟಿಎಂ ನಿಕಟ ಸಂಬಂಧ ಹೊಂದಿರುವ ಬಗ್ಗೆಯೂ ಆರ್‌ಬಿಐ ಅಸಮಾಧಾನಗೊಂಡಿದೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಅನ್ನು ‘ಒನ್‌ 97 ಕಮ್ಯುನಿಕೇಷನ್ಸ್‌’ ನಡೆಸುತ್ತಿದೆ. ಬ್ಯಾಂಕ್‌ನಲ್ಲಿ ಶರ್ಮಾ ಪಾಲುದಾರಿಕೆ ಶೇಕಡ 51ರಷ್ಟಿದೆ. ಉಳಿದ ಪಾಲುದಾರಿಕೆ ‘ಒನ್‌ 97 ಕಮ್ಯುನಿಕಷನ್ಸ್‌’ ಮತ್ತು ಅದರ ಸೋದರ ಸಂಸ್ಥೆಗಳ ಹೆಸರಿನಲ್ಲಿದೆ. ಪೇಟಿಎಂ ವಹಿವಾಟಿನಲ್ಲಿ ‘ಒನ್‌ 97 ಕಮ್ಯುನಿಕೇಷನ್ಸ್‌’ ಹಸ್ತಕ್ಷೇಪವೂ ನಿರ್ಬಂಧಕ್ಕೆ ಕಾರಣ ಎಂದಿದೆ ಆರ್‌ಬಿಐ.

Also read: ಪೇಟಿಎಂ ಬಳಸುತ್ತಿದ್ದೀರಾ?: ಎಚ್ಚರ, ನಿಮ್ಮ ಮಾಹಿತಿ ಕಳುವಾಗಿದೆ!

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ 100 ಕೋಟಿ ರೂಪಾಯಿ ವಹಿವಾಟಿನ ಮಿತಿಯನ್ನು ನಿರ್ವಹಿಸುವಲ್ಲಿಯೂ ವಿಫಲವಾಗಿದೆ. ಅಲ್ಲದೆ ಪ್ರತಿ ಖಾತೆಯ ದಿನದ ವಹಿವಾಟಿನ ಮಿತಿ 1 ಲಕ್ಷ ರೂಪಾಯಿ ಎಂಬ ನಿಯಮವನ್ನೂ ಬ್ಯಾಂಕ್‌ ಉಲ್ಲಂಘಿಸಿದೆ ಎಂದು ಆರ್‌ಬಿಐ ಹೇಳಿದೆ. ನಿಯಮಗಳ ಪ್ರಕಾರ ಪೇಮೆಂಟ್ಸ್‌ ಬ್ಯಾಂಕ್‌ನ ಒಂದು ಖಾತೆಯಲ್ಲಿ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಹೋಲ್ಡ್‌ ಮಾಡುವಂತಿಲ್ಲ.

ಪೇಟಿಎಂನ ಹೊಸ ಖಾತೆ ಹಾಗೂ ಇ-ವಾಲೆಟ್‌ಗಳನ್ನು ತೆರೆಯುವುದರ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದ ನಂತರ ಆ ಸಮಯದಲ್ಲಿ ಪೇಟಿಎಂನ ಸಿಇಒ ಆಗಿದ್ದ ರೇಣು ಸತ್ತಿ ರಾಜೀನಾಮೆ ನೀಡಿದ್ದರು. ರೇಣು ನಂತರ ಅಕ್ಟೋಬರ್‌ ತಿಂಗಳಲ್ಲಿ ಪೇಟಿಎಂಗೆ ಎನ್‌ಬಿಐನ ಮಾಜಿ ಅಧಿಕಾರಿ ಹಾಗೂ ಎನ್‌ಪಿಸಿಐನ ಮಾಜಿ ಸಲಹೆಗಾರ ಎಸ್‌.ಕೆ. ಗುಪ್ತಾ ಅವರನ್ನು ಸಿಇಒ ಆಗಿ ನೇಮಕ ಮಾಡಲಾಗಿತ್ತು.

ಭಾರತದಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ಗಳು ದೊಡ್ಡ ಮಟ್ಟದಲ್ಲಿ ಹಿನ್ನಡೆ ಕಂಡಿವೆ ಎಂಬ ಅಂಶವೂ ಆರ್‌ಬಿಐ ನೀಡಿರುವ ಮಾಹಿತಿಯಿಂದ ಬಯಲಾಗಿದೆ. 2018 ಮೇ ತಿಂಗಳವರೆಗೆ ಭಾರತದ ಪೇಟೆಂಟ್ಸ್‌ ಬ್ಯಾಂಕ್‌ಗಳ ಒಟ್ಟು ಠೇವಣಿ 540 ಕೋಟಿ ರೂಪಾಯಿ ಮಾತ್ರ. ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ 307 ಕೋಟಿ ರೂಪಾಯಿ, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ 194 ಕೋಟಿ ರೂಪಾಯಿ, ಫಿನೊ ಪೇಮೆಂಟ್ಸ್‌ ಬ್ಯಾಂಕ್‌ 37 ಕೋಟಿ ರೂಪಾಯಿ ಮತ್ತು ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ 1.4 ಕೋಟಿ ರೂಪಾಯಿ ಠೇವಣಿ ಹೊಂದಿವೆ.

ಒಟ್ಟಾರೆ, ‘ಡಿಜಿಟಲ್ ಇಂಡಿಯಾ’ದ ಹಾದಿಯನ್ನು ತೋರಿಸಲು ಬಂದ ಪೇಟಿಎಂ ಈಗ ನಿರ್ಬಂಧಕ್ಕೆ ಒಳಗಾಗುವ ಮೂಲಕ ಫೋನ್‌ನಲ್ಲಿ ಯಾವುದನ್ನೂ ನಂಬುವ ಹಾಗಿಲ್ಲ ಎಂಬ ಸತ್ಯವನ್ನು ಮತ್ತೊಮ್ಮೆ ನೆನಪಿಸಿದೆ.