samachara
www.samachara.com
ಭಾರತದ ಯುವ ಜನತೆಯ ವರ್ಷದ ಹುಡುಕಾಟ; ಉದ್ಯೋಗಕ್ಕಾಗಿ ‘ಸರ್ಚ್‌ ಎಂಜಿನ್’ ತುಂಬ ಅಲೆದಾಟ!
ದೇಶ

ಭಾರತದ ಯುವ ಜನತೆಯ ವರ್ಷದ ಹುಡುಕಾಟ; ಉದ್ಯೋಗಕ್ಕಾಗಿ ‘ಸರ್ಚ್‌ ಎಂಜಿನ್’ ತುಂಬ ಅಲೆದಾಟ!

ಗೂಗಲ್‌ ಪ್ರತಿ ವರ್ಷ ‘ಇಯರ್‌ ಇನ್‌ ಸರ್ಚ್‌’ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಉದ್ಯೋಗದ ಹುಡುಕಾಟ ಭಾರತದಲ್ಲಿ 2014ರಿಂದ ಏಕಾಏಕಿ ಏರುತ್ತಿರುವುದು ಕಂಡು ಬರುತ್ತಿದೆ. ನಿಜವಾದ ಕಾರಣ ಏನಿರಬಹುದು? 

ಸಮಾಜವೊಂದರ ಸಾಮೂಹಿಕ ಸಮಸ್ಯೆಗೆ ಗೂಗಲ್‌ ಕನ್ನಡಿ ಹಿಡಿದಿದೆ. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿ, ‘ಜಾಬ್ಸ್‌ ನಿಯರ್‌ ಮಿ’ ಎಂದು ಹುಡುಕಾಡುವವರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ದೊಡ್ಡ ಮಟ್ಟಕ್ಕೆ ಹೆಚ್ಚಾಗಿದೆ. ಅದರಲ್ಲೂ ಕಳೆದೆರಡು ವರ್ಷಗಳಲ್ಲಿ ಈ ಪ್ರಮಾಣ ನಾಗಲೋಟದಲ್ಲಿ ಬೆಳೆಯುತ್ತಿದೆ. ಪರಿಣಾಮ ಗೂಗಲ್‌ನ ‘ನಿಯರ್‌ ಮಿ’ ಕೆಟಗರಿಯಲ್ಲಿ ಜಾಬ್ಸ್‌ ಟಾಪ್‌ 10ರಲ್ಲಿ ಸ್ಥಾನ ಪಡೆದಿದೆ.

ಗೂಗಲ್‌ ಪ್ರತಿ ವರ್ಷ ‘ಇಯರ್‌ ಇನ್‌ ಸರ್ಚ್‌’ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಜಾಬ್‌ಗೆ ಸಂಬಂಧಿಸಿದ ಗ್ರಾಫ್‌ನ್ನು ಗೂಗಲ್‌ ಬಿಡುಗಡೆ ಮಾಡಿದೆ. ಭಾರತದಲ್ಲಿ ಕೆಲಸಕ್ಕಾಗಿ ಹುಡುಕಾಡುತ್ತಿರುವವರ ಆಧಾರದ ಗ್ರಾಫ್‌ 2004 ರಿಂದ 2014ರವರೆಗೆ ಒಂದೇ ರೀತಿಯಲ್ಲಿ ಇದ್ದರೆ 2014ರಿಂದ ಏಕಾಏಕಿ ಏರಲು ಆರಂಭಿಸಿದೆ. 2014ರಲ್ಲಿ ‘ಜಾಬ್ಸ್‌ ನಿಯರ್‌ ಮಿ’ ಹುಡುಕುತ್ತಿದ್ದವರ ಸಂಖ್ಯೆಯನ್ನು 1 ಎಂದು ತೆಗೆದುಕೊಂಡರೆ 2017ರ ಆಗಸ್ಟ್‌ ಹೊತ್ತಿಗೆ ಇದು 50ಕ್ಕೆ ತಲುಪಿದೆ. ಏಪ್ರಿಲ್‌ 2018ಕ್ಕಾಗುವಾಗ 2017ರಿಂದ ದುಪ್ಪಟ್ಟು ಹೆಚ್ಚಾಗಿದ್ದು 100ಕ್ಕೆ ಮುಟ್ಟಿದೆ. ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾದ ಹುಡುಕಾಟದ ಪದಗುಚ್ಛಕ್ಕೆ 100ರ ರೇಟಿಂಗ್‌ ನೀಡಲಾಗುತ್ತದೆ.

ಯಾವ ಭಾಗಕ್ಕೆ ಸೇರಿದವರು ಹೀಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ನೋಡಿದಾಗ ಹೆಚ್ಚಾಗಿ ಕೈಗಾರಿಕಾ ಪ್ರದೇಶಗಳೇ ಗುರುತಿಸಿಕೊಂಡಿವೆ. ಸಿಕಂದರಾಬಾದ್‌ ಕಳೆದ 15 ವರ್ಷಗಳಲ್ಲಿ ಉದ್ಯೋಗ ಹುಡುಕುವವರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಥಾಣೆ, ನವಿ ಮುಂಬೈ, ಫರೀದಾಬಾದ್‌, ಗಾಜಿಯಾಬಾದ್‌, ಪಿಂಪ್ರಿ-ಚಿಂಚ್ವಡ್‌, ವಿಶಾಖಪಟ್ಟಣ, ಬೆಂಗಳೂರು, ಹೈದರಾಬಾದ್‌ ಮತ್ತು ಗುರ್ಗಾಂವ್‌ ನಂತರದ ಸ್ಥಾನಗಳಲ್ಲಿವೆ.

ಇನ್ನೂ ತಳಮಟ್ಟಕ್ಕೆ ಹೋಗಿ ಸಣ್ಣ ಸಣ್ಣ ನಗರಗಳಲ್ಲೂ ಇದೇ ರೀತಿ ಎಷ್ಟರ ಮಟ್ಟಿಗೆ ಯಾವ ಪದವನ್ನು ಹುಡುಕಾಟ ಮಾಡಲಾಗುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಯಾವುದೇ ಪದಕ್ಕೆ ಇಲ್ಲಿ ಕನಿಷ್ಠ ಎಂದರೆ 0 ಮತ್ತು ಗರಿಷ್ಠ 100 ಅಂಕಗಳನ್ನು ನೀಡುವುದು ರೂಢಿ. 100 ಅಂಕ ಪಡೆದುಕೊಂಡಿದ್ದರೆ ಅಲ್ಲಿ ಬಳಕೆಯಲ್ಲಿರುವ ಎಲ್ಲಾ ಪದಪುಂಚಗಳಿಗಿಂತ ಆ ಪದ ಹೆಚ್ಚು ಜನಪ್ರಿಯ ಎಂದರ್ಥ. ಇಲ್ಲಿಯೂ ಕೂಡ ಜಾಬ್ಸ್‌ ಹುಡುಕಾಟ 100 ಅಂಕಗಳನ್ನು ಪಡೆದುಕೊಂಡಿದೆ. ಈ ರೀತಿ ಹುಟುಕಾಟ ನಡೆಸುತ್ತಿರುವವರಲ್ಲಿ ಶೇಕಡಾ 50ರಷ್ಟು ಜನರು ಮೊಬೈಲ್‌ನಲ್ಲಿ ಹುಡುಕಾಡುತ್ತಾರೆ ಎಂಬ ವಿವರಗಳನ್ನೂ ಗೂಗಲ್‌ ನೀಡಿದೆ.

ಉದ್ಯೋಗದ ಹುಡುಕಾಟ ಕಳೆದ ನಾಲ್ಕೈದು ವರ್ಷಗಳಲ್ಲಿ ನಿರಂತರ ಏರಿಕೆಯಾದ ಹಿನ್ನೆಲೆಯಲ್ಲಿ 2018ರ ಏಪ್ರಿಲ್‌ನಲ್ಲಿ ಗೂಗಲ್‌ ಹೊಸ ಸರ್ಚ್‌ ಟೂಲ್‌ ಒಂದನ್ನು ಬಿಡುಗಡೆಗೊಳಿಸಿತ್ತು. ಬೇರೆ ಬೇರೆ ವೆಬ್‌ಸೈಟ್‌ಗಳಲ್ಲಿರುವ ಉದ್ಯೋಗಾವಕಾಶಗಳ ಮಾಹಿತಿಯನ್ನು ‘ಜಾಬ್ಸ್‌ ನಿಯರ್‌ ಮಿ’ ಅಥವಾ ‘ಜಾಬ್ಸ್‌’ ಎಂದು ಟೈಪ್‌ ಮಾಡಿದರೆ ನಿಮಗೆ ಈ ಮಾಹಿತಿಗಳು ಸಿಗುತ್ತವೆ. ವಿಪರ್ಯಾಸವೆಂದರೆ ಮಾಹಿತಿ ಎಲ್ಲ ಕಡೆಯಲ್ಲೂ ಸಿಗುತ್ತಿದೆ. ಆದರೆ ಯುವ ಜನತೆಗೆ ಉದ್ಯೋಗ ಮಾತ್ರ ಸಿಗುತ್ತಿಲ್ಲ. ಹುಡುಕಾಟ ನಿಂತಿಲ್ಲ ಎಂಬುದಕ್ಕೆ ವರದಿ ಸಾಕ್ಷಿ ನೀಡುತ್ತಿದೆ ಎಂಬುದಷ್ಟೆ ಸಮಾಧಾನ. ಅಂದಹಾಗೆ, ನೀವೂ ಏನಾದರೂ ‘ಜಾಬ್ಸ್‌’ ಹುಡುಕಾಟವನ್ನು ನಡೆಸಿದ್ದರೆ, ನೀವೂ ವರದಿಗೆ ಕೊಡುಗೆ ನೀಡಿದ್ದೀರಿ ಎಂದರ್ಥ.