ಸೆಮಿಫೈನಲ್‌ ಮತದಾನೋತ್ತರ ಸಮೀಕ್ಷೆ; ಕೈ ಮೇಲುಗೈ, ಕಮಲಕ್ಕೆ ಹಿನ್ನಡೆ ಚಿಂತೆ?
ದೇಶ

ಸೆಮಿಫೈನಲ್‌ ಮತದಾನೋತ್ತರ ಸಮೀಕ್ಷೆ; ಕೈ ಮೇಲುಗೈ, ಕಮಲಕ್ಕೆ ಹಿನ್ನಡೆ ಚಿಂತೆ?

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಹಾಗೂ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಇದು ಸದ್ಯ ಬಿಜೆಪಿಯನ್ನು ಚಿಂತೆಗೆ ದೂಡಿದೆ.

2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎನ್ನಲಾಗುತ್ತಿರುವ ಪಂಚರಾಜ್ಯಗಳ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್‌ ಮೇಲುಗೈ ಪಡೆಯುವ ಸಾಧ್ಯತೆ ಇದೆ. ರಾಷ್ಟ್ರೀಯ ಸುದ್ದಿ ವಾಹಿನಿಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ನೀಡಿರುವ ಅಂಕಿಸಂಖ್ಯೆಗಳು ಕಮಲ ಪಕ್ಷವನ್ನು ಆತಂಕಕ್ಕೆ ದೂಡಿವೆ.

ಒಟ್ಟು 230 ಸ್ಥಾನಗಳಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ 110ರಿಂದ 126, ಬಿಜೆಪಿ 90ರಿಂದ 106 ಮತ್ತು ಇತರರು 6ರಿಂದ 22 ಸ್ಥಾನ ಪಡೆಯಲಿದ್ದಾರೆ ಎಂದು ಸಿ-ವೋಟರ್‌ ಸಮೀಕ್ಷೆ ತಿಳಿಸಿದೆ. ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಬಿಜೆಪಿ 126, ಕಾಂಗ್ರೆಸ್89, ಬಿಎಸ್‌ಪಿ 6 ಮತ್ತು ಇತರರು 9 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ಹೇಳಿದೆ.

ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ 102ರಿಂದ 120, ಕಾಂಗ್ರಸ್‌ 104ರಿಂದ 122, ಬಿಎಸ್‌ಪಿ 1ರಿಂದ 3, ಇತರರು 3ರಿಂದ 8 ಸ್ಥಾನಗಳನ್ನು ಪಡೆಯಲಿದ್ದಾರೆ. ಮಧ್ಯಪ್ರದೇಶದಲ್ಲಿ ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ 116 ಸ್ಥಾನಗಳು.

ರಾಜಸ್ತಾನದ ಒಟ್ಟು 200 ಸ್ಥಾನಗಳಲ್ಲಿ ಕಾಂಗ್ರೆಸ್‌ 105, ಬಿಜೆಪಿ 85, ಬಿಎಸ್‌ಪಿ 2 ಮತ್ತು ಇತರರು 7 ಸ್ಥಾನ ಪಡೆಯಲಿದ್ದಾರೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ತಿಳಿಸಿದೆ. ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಇಲ್ಲಿ 119ರಿಂದ 141, ಬಿಜೆಪಿ 55ರಿಂದ 72 ಹಾಗೂ ಇತರರು 4ರಿಂದ 11 ಸ್ಥಾನಗಳನ್ನು ಪಡೆಯಲಿದ್ದಾರೆ.

ಛತ್ತೀಸ್‌ಗಡದ 90 ಸ್ಥಾನಗಳಲ್ಲಿ ಬಿಜೆಪಿ 46, ಕಾಂಗ್ರೆಸ್‌ 35, ಬಿಎಸ್‌ಪಿ 7 ಮತ್ತು ಇತರರು 2 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ಹೇಳಿದೆ. ಆದರೆ, ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಮುಂದಿದೆ. ಇಲ್ಲಿ ಕಾಂಗ್ರೆಸ್‌ 55ರಿಂದ 65, ಬಿಜೆಪಿ 21ರಿಂದ 31 ಹಾಗೂ ಇತರರು 4ರಿಂದ 8 ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿ ಸರಕಾರ ರಚನೆಗೆ ಅಗತ್ಯವಿರುವ ಸ್ಥಾನ 46.

ತೆಲಂಗಾಣದ ಒಟ್ಟು 119 ಸ್ಥಾನಗಳ ಪೈಕಿ ಟಿಆರ್‌ಎಸ್‌ 66, ಕಾಂಗ್ರೆಸ್‌ 37, ಬಿಜೆಪಿ 11 ಹಾಗೂ ಇತರರು 9 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಟೈಮ್ಸ್‌ ನೌ – ಸಿಎನ್‌ಎಕ್ಸ್‌ ಸಮೀಕ್ಷೆ ತಿಳಿಸಿದೆ. ಟಿಆರ್‌ಎಸ್‌ 79ರಿಂದ 91, ಕಾಂಗ್ರೆಸ್‌ – ಟಿಡಿಪಿ ಮೈತ್ರಿಕೂಟ 21ರಿಂದ 33 ಹಾಗೂ ಬಿಜೆಪಿ 1ರಿಂದ 3 ಸ್ಥಾನಗಳನ್ನು ಗೆಲ್ಲಲಿದೆ ಎಂದು ಇಂಡಿಯಾ ಟುಡೆ – ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಹೇಳಿದೆ. ಇಲ್ಲಿ ಸರಕಾರ ರಚನೆಗೆ 60 ಸ್ಥಾನಗಳನ್ನು ಪಡೆಯಬೇಕಿದೆ.

ಮಿಝೋರಾಂನ ಒಟ್ಟು 40 ಸ್ಥಾನಗಳ ಪೈಕಿ ಕಾಂಗ್ರೆಸ್ 16 ಎಂಎನ್‌ಎಫ್‌ 18 ಬಿಜೆಪಿ 0 ಇತರರು 6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಮಿಝೋರಾಂನ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ಇಲ್ಲಿ ಖಾತೆ ತೆರೆಯುವುದೇ ಅನುಮಾನ.

ಈ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡುತ್ತಿದ್ದರೆ 2013ರ ಚುನಾವಣೆಗಿಂತ ಕಾಂಗ್ರೆಸ್‌ ಹೆಚ್ಚಿನ ಮತ ಪಡೆದಿರುವುದು ಹಾಗೂ ಬಿಜೆಪಿ ಈ ಹಿಂದಿನ ಚುನಾವಣೆಗಿಂತ ಕಡಿಮೆ ಮತಗಳನ್ನು ಪಡೆದಿರುವುದು ಕಂಡು ಬರುತ್ತಿದೆ. ಇದೇ ಟ್ರೆಂಡ್‌ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದರೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿನಲ್ಲಿರುವ ಬಿಜೆಪಿಗೆ ತೀವ್ರ ಮುಖಭಂಗವಾಗುವುದಂತೂ ಖಚಿತ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್‌ 11ರಂದು ಹೊರಬೀಳಲಿದೆ.