samachara
www.samachara.com
ಚುನಾವಣೆಗೂ ಮುನ್ನ ಬಂಡಾಯದ ಬಿಸಿ, ಒಡಿಶಾ ಬಿಜೆಪಿ ತೊರೆದ ಪ್ರಭಾವಿ ನಾಯಕರು
ದೇಶ

ಚುನಾವಣೆಗೂ ಮುನ್ನ ಬಂಡಾಯದ ಬಿಸಿ, ಒಡಿಶಾ ಬಿಜೆಪಿ ತೊರೆದ ಪ್ರಭಾವಿ ನಾಯಕರು

ರೂರ್ಕೆಲಾ ಶಾಸಕ ದಿಲೀಪ್‌ ರೇ ಮತ್ತು ಹಿರಿಯ ನಾಯಕ ಬಿಜೋಯ್‌ ಮಹಾಪಾತ್ರ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಾಧ್ಯಕ್ಷ ಅಮಿತ್‌ ಶಾ ಅವರಿಗೆ ಸಲ್ಲಿಸಿದ್ದಾರೆ.

Team Samachara

ಲೋಕಸಭೆ ಚುನಾವಣೆಯ ಜತೆ ವಿಧಾನಸಭೆ ಚುನಾವಣೆ ಎದುರಿಸಲಿರುವ ಒಡಿಶಾದ ಬಿಜೆಪಿ ಪಾಳಯದಲ್ಲಿ ಬಂಡಾಯ ಸ್ಫೋಟಗೊಂಡಿದೆ. ಹಲವು ದಿನಗಳಿಂದ ಹೊಗೆಯಾಡುತ್ತಿದ್ದ ಅಸಮಧಾನ ಸ್ಪಷ್ಟ ರೂಪ ಪಡೆದುಕೊಂಡಿದ್ದು ಇಬ್ಬರು ಪ್ರಭಾವಿ ಹಿರಿಯ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ರೂರ್ಕೆಲಾ ಶಾಸಕ ದಿಲೀಪ್‌ ರೇ ಮತ್ತು ಹಿರಿಯ ನಾಯಕ ಬಿಜೋಯ್‌ ಮಹಾಪಾತ್ರ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಾಧ್ಯಕ್ಷ ಅಮಿತ್‌ ಶಾ ಅವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆಗಿಂತ ಅವರು ರಾಜೀನಾಮೆ ನೀಡುವಾಗ ನೀಡಿದ ಕಾರಣ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. “ಪಕ್ಷದಲ್ಲಿ ತಮ್ಮ ವಿರುದ್ಧ ಕೀಳು ತಂತ್ರಗಳನ್ನು ಬಳಸುತ್ತಿದ್ದಾರೆ ಮತ್ತು ಪಕ್ಷದಲ್ಲಿ ಪೀಠೋಪಕರಣಗಳಾಗಿ ಇರಲು ನಮಗೆ ಇಷ್ಟವಿಲ್ಲ,” ಎಂದು ಅವರು ಹೇಳಿದ್ದಾರೆ.

“ಪಕ್ಷದಲ್ಲಿ ‘ಬೇರಿಲ್ಲ’ದ ನಾಯಕರಿಗೆ ಹೆಚ್ಚಿನ ಬೆಲೆ ನೀಡುತ್ತಾ ಅವರನ್ನು ಅಗತ್ಯಕ್ಕಿಂತ ಹೆಚ್ಚು ದೊಡ್ಡ ನಾಯಕರಂತೆ ಬಿಂಬಿಸಲಾಗುತ್ತಿದೆ. ಅವರುಗಳ ಮುಂದೆ ಪಕ್ಷದಲ್ಲಿ ಪೀಠೋಕರಣಗಳ ರೀತಿ ಗುರುತಿಸಿಕೊಳ್ಳಲು ನಾವು ಇಚ್ಛಿಸುವುದಿಲ್ಲ,” ಎಂದು ಉಭಯ ನಾಯಕರು ರಾಜೀನಾಮೆ ಪತ್ರದಲ್ಲಿ ತಮ್ಮ ಖಾರವಾದ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ನೇರ ಚುನಾವಣೆಗೆ ನಿಂತು ಗೆಲ್ಲದೆ ಮಧ್ಯ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್‌ ಅವರನ್ನು ರಾಜ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಇದನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ನಾಯಕರು ಪಕ್ಷದ ತೀರ್ಮಾನವನ್ನು ಖಂಡಿಸಿದ್ದಾರೆ.

ಇಷ್ಟಲ್ಲದೆ, “ಪದೇ ಪದೇ ರಾಜ್ಯ ಬಿಜೆಪಿಯ ಗೊಂದಲಗಳನ್ನು ನಿಮ್ಮ ಗಮನಕ್ಕೆ ತಂದಾಗಲೂ ನೀವಾಗಲಿ, ಪಕ್ಷದ ಕೇಂದ್ರೀಯ ಹಿರಿಯ ನಾಯಕರಾಗಲಿ ನಮ್ಮನ್ನು ಸಂಪರ್ಕಿಸಲು ಯತ್ನಿಸಿಲ್ಲ. ಜತೆಗೆ ಸಮಸ್ಯೆ ಬಗೆಹರಿಸುವ ಬಗ್ಗೆಯೂ ಗಮನಹರಿಸಿಲ್ಲ,” ಎಂದು ಇಬ್ಬರೂ ನಾಯಕರು ದೂರಿದ್ದಾರೆ.

ದಿಲೀಪ್‌ ರೇ ಮಾಜಿ ಕೇಂದ್ರ ಸಚಿವರೂ ಹೌದು. ಸದ್ಯ ಅವರು ರೂರ್ಕೆಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಪಕ್ಷಕ್ಕೆ ರಾಜೀನಾಮೆ ನೀಡುವುದರ ಜತೆಗೆ ಶಾಸಕ ಸ್ಥಾನಕ್ಕೂ ಅವರು ರಾಜೀನಾಮೆ ಬಿಸಾಕಿದ್ದಾರೆ. ಇನ್ನು ಮೊಹಾಪಾತ್ರ ಮಾಜಿ ರಾಜ್ಯ ಕ್ಯಾಬಿನೆಟ್‌ ಸಚಿವರಾಗಿದ್ದು ಹಲವು ಬಾರಿ ಪಟ್ಕುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಶಾ ಅವರಿಗೆ ಬರೆದಿರುವ ಪತ್ರದಲ್ಲಿ ಉಭಯ ನಾಯಕರು ಬಿಜಾಪುರ್‌ ವಿಧಾನಸಭಾ ಉಪಚುನಾವಣೆಯಲ್ಲಿ 40 ಸಾವಿರ ಮತಗಳ ಅಂತರದಿಂದ ಅಂತರದಲ್ಲಿ ಪಕ್ಷ ಸೋತಿದ್ದಕ್ಕೆ ಮತ್ತು ಪಂಚಾಯತ್‌ ಮಟ್ಟದಲ್ಲಿ ನಡೆದ ಎಲ್ಲಾ ಉಪ ಚುನಾವಣೆಗಳಲ್ಲೂ ಪಕ್ಷ ಸೋಲನುಭವಿಸಿದ್ದಕ್ಕೆ ಸ್ವಘೋಷಿತ ಉನ್ನತ ನಾಯಕರೇ ಕಾರಣ ಎಂದಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಹಾಕಿರುವ ರೇ, “ನಾನು 2014ರ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರಿಗೆ ಇಂದಿರಾ ಗಾಂಧಿ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಾಗಿ ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದೆ. ಜತೆಗ ಬ್ರಹ್ಮಣಿ ನದಿಗೆ ಎರಡನೇ ಸೇತುವೆ ಕಟ್ಟುಸುವುದಾಗಿಯೂ ತಿಳಿಸಿದ್ದೆ. ಈ ಭರವಸೆಗಳನ್ನು ಈಡೇರಿಸಲು ನನಗೆ ಸಾಧ್ಯವಾಗಿಲ್ಲ. ಇದು ನನ್ನ ವೈಫಲ್ಯ ಎಂದು ಒಪ್ಪಿಕೊಂಡು ನಾನು 2019ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ,” ಎಂದು ಘೋಷಿಸಿದ್ದಾರೆ.

ಒಡಿಶಾದಲ್ಲಿ 2000ನೇ ಇಸವಿಯಿಂದ ಬಿಜು ಜನತಾದಳದ (ಬಿಜೆಪಿ) ನವೀನ್‌ ಪಟ್ನಾಯಕ್‌ ಮುಖ್ಯಮಂತ್ರಿಯಾಗಿದ್ದಾರೆ. ಒಂದು ಕಾಲದಲ್ಲಿ ನವೀನ್‌ ಪಟ್ನಾಯಕ್‌ ಬಿಜೆಪಿಯ ಮಿತ್ರರಾಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ಎನ್‌ಡಿಎನಿಂದ ದೂರ ಸರಿದಿದ್ದರು. 2014ರಲ್ಲಿ ಬಿಜೆಡಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿತ್ತು. ಇದರಲ್ಲಿ ಪಟ್ನಾಯಕ್‌ ಪಕ್ಷ 21 ರಲ್ಲಿ 20 ಲೋಕಸಭಾ ಸ್ಥಾನಗಳನ್ನು ಮತ್ತು 147 ರಲ್ಲಿ 117 ವಿಧಾನಸಬಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಬಿಜೆಪಿಗೆ ಅಸ್ತಿತ್ವವಿದ್ದು ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಿಜೆಪಿ ಚುನಾವಣೆಗೆ ಇನ್ನೂ ಅರ್ಧ ವರ್ಷ ಇರುವಾಗಲೇ ಅರ್ಧ ಪ್ರಚಾರ ಮುಗಿಸಿದೆ. ರಾಜ್ಯದಲ್ಲಿ ಬೃಹತ್‌ ಸಮಾವೇಶಗಳನ್ನು ನಡೆಸುತ್ತಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆಯೇ ‘ಇಬ್ಬರು ಹಿರಿಯ ನಾಯಕರ ನಿರ್ಗಮನ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲಿದೆ’ ಎಂದು ಸ್ವತಃ ಕೇಂದ್ರ ಸಚಿವ ಜೂಲಂ ಓರಂ ತಿಳಿಸಿದ್ದಾರೆ. ಇದನ್ನು ಪಕ್ಷ ಹೇಗೆ ನಿಭಾಯಿಸುತ್ತದೆ ಎಂಬುದು ಬಿಜೆಪಿಯ ಭವಿಷ್ಯವನ್ನು ನಿರ್ಧರಿಸಲಿದೆ.