samachara
www.samachara.com
ಜೆಎನ್‌ಯು ಭದ್ರತೆಗೆ ಬರೋಬ್ಬರಿ 17.38 ಕೋಟಿ ಖರ್ಚು; ಗ್ರಂಥಾಲಯಕ್ಕೆ ಇಲ್ಲ ಕಿಮ್ಮತ್ತು!
ದೇಶ

ಜೆಎನ್‌ಯು ಭದ್ರತೆಗೆ ಬರೋಬ್ಬರಿ 17.38 ಕೋಟಿ ಖರ್ಚು; ಗ್ರಂಥಾಲಯಕ್ಕೆ ಇಲ್ಲ ಕಿಮ್ಮತ್ತು!

2017-18ರಲ್ಲಿ ಜೆಎನ್‌ಯುನಲ್ಲಿ ಗ್ರಂಥಾಲಯಕ್ಕೆ 4.18 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದರೆ, ಭದ್ರತೆಗೆ ಬರೋಬ್ಬರಿ 17.38 ಕೋಟಿ ರೂಪಾಯಿಗಳನ್ನು ಸುರಿಯಲಾಗಿದೆ.

Team Samachara

ಸಾಮಾನ್ಯವಾಗಿ ಶಿಕ್ಷಣ ಕೇಂದ್ರಗಳಾದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಸಂಬಂಧಿತ ಚಟುವಟಿಕೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ ಎಂಬುದು ಜನ ಸಾಮಾನ್ಯರ ಊಹೆ. ಆದರೆ ಇದಕ್ಕೆ ವಿರುದ್ಧವಾಗಿದೆ ‘ಜವಾಹರ್‌ಲಾಲ್‌ ನೆಹರೂ ಯುನಿವರ್ಸಿಟಿ (ಜೆಎನ್‌ಯು)‘ ಆಡಳಿತ ಮಂಡಳಿಯ ತೀರ್ಮಾನಗಳು. ಇದಕ್ಕೆ ಕನ್ನಡಿ ಹಿಡಿಯುವಂತೆ ಕಳೆದೆರಡು ವರ್ಷದಲ್ಲಿ ಜೆಎನ್‌ಯು ಭದ್ರತೆಗೆ ಖರ್ಚು ಮಾಡಿರುವ ಹಣ ಗ್ರಂಥಾಲಯಕ್ಕೆ ಖರ್ಚು ಮಾಡಿದ್ದಕ್ಕಿಂತ 4 ಪಟ್ಟು ಅಧಿಕವಾಗಿದೆ ಎಂಬುದಾಗಿ ‘ದಿ ಟೆಲಿಗ್ರಾಫ್‌’ ವರದಿ ಮಾಡಿದೆ.

2016-17ರಲ್ಲಿ ಇಲ್ಲಿ ಗ್ರಂಥಾಲಯಕ್ಕೆ 3.1 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಅದೇ ವರ್ಷ ಭದ್ರತೆಗೆ 9.52 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಇದು ಕಳೆದ ವರ್ಷ ಮತ್ತೆ ಜಾಸ್ತಿಯಾಗಿದ್ದು ಗ್ರಂಥಾಲಯಕ್ಕೆ 4.18 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದರೆ, ಭದ್ರತೆಗೆ ಬರೋಬ್ಬರಿ 17.38 ಕೋಟಿ ರೂಪಾಯಿಗಳನ್ನು ಸುರಿಯಲಾಗಿದೆ. ಅಂದರೆ ಗ್ರಂಥಾಲಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಹಣವನ್ನು ಭದ್ರತೆಗೆ ಸುರಿಯಲಾಗಿದೆ. ಇದೀಗ ಈ ಬಾರಿ ಗ್ರಂಥಾಲಯದ ಅನುದಾನ ಇನ್ನೂ ಕಡಿಮೆಯಾಗಿದ್ದು ಶೇಕಡಾ 60ರಷ್ಟು ಇಳಿಕೆಯಾಗಿ 1.7 ಕೋಟಿ ರೂಪಾಯಿಗೆ ತಂದಿಡಲಾಗಿದೆ.

ಭದ್ರತಾ ಸಿಬ್ಬಂದಿಗಳು, ಸಿಸಿಟಿವಿ ಕ್ಯಾಮೆರಾಗಳು, ಜೆಎನ್‌ಯುನ ಒಳಗಡೆ ನಡೆಯುವ ಪ್ರತಿಭಟನೆಗಳ ವಿಡಿಯೋ ಚಿತ್ರೀಕರಣಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲಾಗಿದೆ.

ಇದೇ ವೇಳೆ ಬುಧವಾರವಷ್ಟೇ ಇಲ್ಲಿನ ಪ್ರಾಧ್ಯಾಪಕರು ವಿಶ್ವವಿದ್ಯಾಲಯದ ಶೈಕ್ಷಣಿಕ ಖರ್ಚುಗಳನ್ನು ಕಳೆದೆರಡು ವರ್ಷದಲ್ಲಿ ಕಡಿತಗೊಳಿಸುತ್ತಿದೆ. ಇದರಿಂದ ಸಂಶೋಧನೆಗಳಿಗೆ ನಗದು ಕೊರತೆಯಾಗುತ್ತಿದೆ. ಹೀಗಾಗಿ ವಿಶ್ವವಿದ್ಯಾನಿಲಯದ ಘನತೆಗೆ ಅಪಾಯ ಒದಗಿದೆ ಎಂದು ದೂರಿದ್ದರು.

“2012-13ರಿಂದ 2015-16ರವರೆಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಒಟ್ಟಾರೆ ಖರ್ಚಿನ ಶೇಕಡಾ 8.5 ರಷ್ಟು ಹಣವನ್ನು ಮೀಸಲಿಡಲಾಗುತ್ತಿತ್ತು. ಕಳೆದ ಎರಡು ವರ್ಷದಲ್ಲಿ ಇದರ ಸರಾಸರಿ ವೆಚ್ಚ ಶೇಕಡಾ 6.65ಕ್ಕೆ ಇಳಿಕೆಯಾಗಿದೆ,” ಎಂದು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಅತುಲ್‌ ಸೂದ್‌ ಆರೋಪಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಕಡಿತವಾಗಿರುವುದರಿಂದ ನಿಯತಕಾಲಿಕೆಗಳ ಚಂದಾ ಪಡೆದುಕೊಳ್ಳುವುದಕ್ಕೂ ಹೊಡೆತ ಬೀಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಹಿಂದೆ ಪಿಎಚ್‌ಡಿ ಮತ್ತು ಎಂ.ಫಿಲ್ ಗಳ ಸೀಟುಗಳ ಸಂಖ್ಯೆಯನ್ನು ವಿವಿ ಶೇಕಡಾ 90ರಷ್ಟು ಕಡಿತಗೊಳಿಸಿತ್ತು. ಇದಕ್ಕೆ ದೆಹಲಿ ಹೈಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿ ತನ್ನ ಸಾಮರ್ಥ್ಯವನ್ನು ಜೆಎನ್‌ಯು ವ್ಯರ್ಥಪಡಿಸುತ್ತಿದೆ ಎಂದು ಹೇಳಿತ್ತು.

ಇದನ್ನು ಉಲ್ಲೇಖಿಸಿರುವ ಸೂದ್‌ “ದಶಕಗಳ ಕಾಲ ತೆರಿಗೆದಾರರ ಹಣದಲ್ಲಿ ಕಷ್ಟಪಟ್ಟು ಕಟ್ಟಿದ ಜೆಎನ್‌ಯು ಸಂಪನ್ಮೂಲವನ್ನು ಜೆಎನ್‌ಯು ಆಡಳಿತ ಮಂಡಳಿ ಇದೀಗ ಹಾಳುಗೆಡವುತ್ತಿದೆ,” ಎಂದು ಅವರು ದೂರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮಂಗಳವಾರ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಆಡಳಿತ ಮಂಡಳಿಯ ತೀರ್ಮಾನವನ್ನು ವಿರೋಧಿಸಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದರು.

ಆಡಳಿತ ಮಂಡಳಿ ಮಾರಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಾಧ್ಯಾಪಕರನ್ನು ಸೆಮಿನಾರ್‌ಗಳಲ್ಲಿ ಭಾಗವಹಿಸಲೂ ಅವಕಾಶ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಈ ತಿಂಗಳ ಸುತ್ತೋಲೆಯಲ್ಲಿ “ಸೆಮಿನಾರ್ ಪಾಲ್ಗೊಳ್ಳುವುದು, ಕಾನ್ಫರೆನ್ಸ್ಗಳಿಗೆ ಪ್ರಯಾಣ, ಯೋಜನಾ ಸಭೆಗಳಲ್ಲಿ ಭಾಗವಹಿಸಲು ಮತ್ತು ಪ್ರತಿಷ್ಠಿತ ಫೆಲೋಶಿಪ್‌ಗಳು ಪಡೆಯಲು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯಿಂದ ಅನುಮತಿಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಪ್ರಸ್ತುತ, ದೆಹಲಿಯಲ್ಲಿ ಒಂದೇ ಒಂದು ಸೆಮಿನಾರ್‌ನಲ್ಲಿಯೂ ಪ್ರಾಧ್ಯಾಪಕರನ್ನು ಭಾಗವಹಿಸಲು ಬಿಡುತ್ತಿಲ್ಲ. ಯಾವುದೇ ಪ್ರಾಧ್ಯಾಪಕರು ತಮ್ಮ ಸಂಶೋಧನಾ ಕೆಲಸಗಳಿಗಾಗಿ ಭಾರತದ ಯಾವುದೇ ಭಾಗಗಳಿಗಾಗಲೀ ವಿದೇಶಗಳಿಗಾಗಲಿ ತೆರಳುವಂತಿಲ್ಲ,” ಎಂದು ಸೂದ್‌ ವಿವರಿಸಿದ್ದಾರೆ.

ಇಷ್ಟೆಲ್ಲಾ ಆರೋಪಗಳು ಕೇಳಿ ಬಂದಿದ್ದರೂ ಜೆಎನ್‌ಯು ಕುಲಪತಿ ಎಂ. ಜಗದೀಶ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ವಿವರಣೆ ನೀಡಿರುವ ವಿವಿಯ ಹಣಕಾಸು ಅಧಿಕಾರಿ ಹೀರಮನ್ ತಿವಾರಿ, “ವಿವಿ ಪ್ರತಿ ವರ್ಷ ಲೈಬ್ರರಿಗೆ 1.7 ಕೋಟಿ ರೂಪಾಯಿಗಳನ್ನು ಮಾತ್ರ ಮೀಸಲಿಡುತ್ತದೆ. ಆದರೆ 2017ರಲ್ಲಿ ಯುಜಿಸಿ 12ನೇ ಪಂಚ ವಾರ್ಷಿಕ ಯೋಜನೆಯಂತೆ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿತ್ತು. ಈ ಯೋಜನೆ ಕಳೆದ ವರ್ಷಕ್ಕೆ ಅಂತ್ಯವಾಗಿದ್ದು ಇದೀಗ ವಿವಿಯ ನಿಯಮಿತ ಹಣ ಮಾತ್ರ ಗ್ರಂಥಾಲಯಕ್ಕೆ ಮೀಡಲಿಡಲಾಗಿದೆ,” ಎಂದಿದ್ದಾರೆ.

ಕೃಪೆ: ದಿ ಟೆಲಿಗ್ರಾಫ್‌