samachara
www.samachara.com
ಅಲ್ಲಿ ಪುಟಿನ್‌, ಇಲ್ಲಿ ಅಮಿತ್‌ ಶಾ;  ‘ರೇಡಿಯೇಷನ್‌ ಪಾಯ್ಸನಿಂಗ್‌’ ಆರೋಪಕ್ಕೆ ಗುರಿಯಾದ ಇಬ್ಬರು ನಾಯಕರ ಸುತ್ತ...
ದೇಶ

ಅಲ್ಲಿ ಪುಟಿನ್‌, ಇಲ್ಲಿ ಅಮಿತ್‌ ಶಾ; ‘ರೇಡಿಯೇಷನ್‌ ಪಾಯ್ಸನಿಂಗ್‌’ ಆರೋಪಕ್ಕೆ ಗುರಿಯಾದ ಇಬ್ಬರು ನಾಯಕರ ಸುತ್ತ...

ಲೋಯಾ ಪರಿಚಯಸ್ಥರಾಗಿದ್ದ ವಕೀಲ ಸತೀಶ್‌ ಉಕೆ ‘ರೇಡಿಯೋ ಆಕ್ಟಿವ್‌ ಐಸೋಟೋಪ್‌’ನಿಂದ ಅವರ ಕೊಲೆ ನಡೆದಿದೆ ಎಂದಿದ್ದಾರೆ. ಜತೆಗೆ ಸಾಕ್ಷಿಯಾಗಿ ಪೋಸ್ಟ್‌ ಮಾರ್ಟಂ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಆತನ ಹೆಸರು ಅಲೆಗ್ಸಾಂಡರ್‌ ಲಿಟ್ವಿನೆಂಕೋ. ರಷ್ಯಾದ ಗುಪ್ತಚರ ಸಂಸ್ಥೆ ‘ಕೆಜಿಬಿ’ ಮತ್ತು ಅಲ್ಲಿನ ಗೃಹ ಇಲಾಖೆ ‘ಫೆಡರಲ್‌ ಸೆಕ್ಯುರಿಟಿ ಸರ್ವಿಸಸ್‌ (ಎಫ್‌ಎಸ್‌ಬಿ)‘ನ ಅಧಿಕಾರಿಯಾಗಿದ್ದವನು. ಸಂಘಟಿತ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಆತನದ್ದು ದೊಡ್ಡ ಹೆಸರು. ಹೀಗಿರುವಾಗಲೇ ಆತ ಮತ್ತು ಆತನ ಒಂದಷ್ಟು ಸಹೋದ್ಯೋಗಿಗಳು ರಷ್ಯಾದ ಒಲಿಗಾರ್ಕ್ (ರಾಜಕೀಯ ಪ್ರಭಾವಿ ಉದ್ಯಮಿ) ಬೋರಿಸ್‌ ಬೆರೆಜೊಸ್ಕಿ ಕೊಲೆ ಹಿಂದೆ ತಮ್ಮ ಬಾಸ್‌ಗಳಿದ್ದಾರೆ ಎಂದು ಅಚ್ಚರಿಯ ಲೈವ್‌ ಪ್ರೆಸ್‌ ಮೀಟ್‌ ನಡೆಸಿ ಘೋಷಿಸಿದ್ದರು. ಅಂದ ಹಾಗೆ ಇಲ್ಲಿ ‘ಬಾಸ್‌’ ಎಂಬುದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಪುಟಿನ್‌ ಇದೇ ಕೆಜಿಬಿ, ಎಫ್‌ಎಸ್‌ಬಿಯಿಂದ ಬಂದವರು. ಮುಂದೆ ರಷ್ಯಾದ ಅಧ್ಯಕ್ಷರಾಗುವಲ್ಲಿ ಪುಟಿನ್‌ಗೆ ಬೆನ್ನಿಗೆ ನಿಂತಿದ್ದು ಇದೇ ಬೋರಿಸ್‌ ಬೆರೆಜೊಸ್ಕಿ. ಅವರಿಬ್ಬರ ನಡುವೆ ಮುಂದೆ ಜಗಳ ಹತ್ತಿಕೊಂಡಿದ್ದನ್ನೂ ಇಡೀ ಜಗತ್ತೇ ನೋಡಿತ್ತು. ಹೀಗಾಗಿ ‘ಬಾಸ್‌’ ಪುಟಿನ್‌ ಎಂಬುದಕ್ಕೆ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳಿತ್ತು.

‘ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ’ ಎನ್ನುವಂತೆ ಪತ್ರಿಕಾಗೋಷ್ಠಿ ನಡೆಸಿದ ಅಲೆಗ್ಸಾಂಡರ್‌ ಲಿಟ್ವಿನೆಂಕೋನನ್ನು ಪುಟಿನ್‌ ಸರಕಾರ ಎರಡೆರಡು ಬಾರಿ ಬಂಧಿಸಿತು. ಮುಂದೆ ರಾಜಕೀಯ ಆಶ್ರಯ ಕೋರಿ ಅವರು ಇಂಗ್ಲೆಂಡ್‌ಗೆ ಕುಟುಂಬ ಸಮೇತ ವಲಸೆ ಹೋದರು. ಲಂಡನ್‌ನಲ್ಲಿ ನೆಲೆನಿಂತ ಲಿಟ್ವಿನೆಂಕೋ ಪುಟಿನ್‌ ಬೆಳವಣಿಗೆಯ ಹಂತಗಳನ್ನು ಪುಸ್ತಕಗಳ ಮೂಲಕ ತೆರೆದಿಡಲು ಆರಂಭಿಸಿದರು. ಹೇಗೆ ಜನ ಬೆಂಬಲ ಗಳಿಸಲು ಪುಟಿನ್‌ ತಮ್ಮ ದೇಶದ ನೆಲದಲ್ಲೇ ಬಾಂಬ್‌ ದಾಳಿಗಳನ್ನು ನಡೆಸುತ್ತಿದ್ದರು ಎಂಬುದನ್ನು ವಿವರಿಸಿದ್ದರು. ಹೀಗಿರುವಾಗಲೇ ಅದೊಂದು ದಿನ 2006ರ ನವೆಂಬರ್‌ 1ರಂದು ಏಕಾಏಕಿ ಕುಸಿದು ಬಿದ್ದು ಆಸ್ಪತ್ರೆ ಸೇರಿದರು ಲಿಟ್ವಿನೆಂಕೋ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಫಲ ನೀಡಿಲಿಲ್ಲ.

ಆಮೇಲೆ ತಿಳಿದು ಬಂದಿದ್ದು ಏನು ಎಂದರೆ ಅವರನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಕೊಲ್ಲಲಾಗಿತ್ತು. ಜಗತ್ತಿನಲ್ಲಿ ಮೊದಲ ಬಾರಿಗೆ ‘ರೇಡಿಯೋನ್ಯೂಕ್ಲೈಡ್‌ ಪೊಲೋನಿಯಂ-210’ ಬಳಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಮತ್ತೆ ಈ ಬಾರಿ ಅನುಮಾನದ ಬೆರಳು ಪುಟಿನ್‌ ಕಡೆಗೆ ತೋರಿಸುತ್ತಿತ್ತು. ಪುಟಿನ್‌ ಈ ಹತ್ಯೆ ಹಿಂದೆ ಇದ್ದಾರೆ ಎಂಬುದು ಋಜುವಾತಾಗಲಿಲ್ಲವಾದರೂ ಜನರು ಮಾತ್ರ ಸ್ಪಷ್ಟವಾಗಿ ಈ ಕೊಲೆ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ.

ಅಲೆಗ್ಸಾಂಡರ್‌ ಲಿಟ್ವಿನೆಂಕೋ - ‘ರೇಡಿಯೋನ್ಯೂಕ್ಲೈಡ್‌ ಪೊಲೋನಿಯಂ-210’ ದಾಳಿಗೆ ಮೊದಲ ಮತ್ತು ನಂತರ. 
ಅಲೆಗ್ಸಾಂಡರ್‌ ಲಿಟ್ವಿನೆಂಕೋ - ‘ರೇಡಿಯೋನ್ಯೂಕ್ಲೈಡ್‌ ಪೊಲೋನಿಯಂ-210’ ದಾಳಿಗೆ ಮೊದಲ ಮತ್ತು ನಂತರ. 
/ನ್ಯೂಯಾರ್ಕ್‌ ಟೈಮ್ಸ್‌

ಇದೀಗ ಭಾರತದ ವಿಷಯಕ್ಕೆ ಬರೋಣ.

ಇವರ ಹೆಸರು ಎಚ್‌.ಬಿ. ಲೋಯಾ. ನಾಗಪುರದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಧೀಶರಾಗಿದ್ದವರು. ಹಾಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಓರ್ವ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅವರು ಡಿಸೆಂಬರ್ 1, 2014ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಇಂದಿನವರೆಗೂ ಅವರದ್ದು ಸಹಜ ಸಾವಲ್ಲ, ಕೊಲೆ ಎಂಬ ಅನುಮಾನಗಳಿವೆಯಾದರೂ ಇದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಇದೀಗ ‘ಖಚಿತವಾಗಿ ಲೋಯಾ ಅವರನ್ನು ಕೊಲೆ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಕೋರಿ ಅವರ ಪರಿಚಯಸ್ಥರೂ ಆದ ವಕೀಲರೊಬ್ಬರು ಬಾಂಬೆ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ. ಸತೀಶ್‌ ಉಕೆ ಸಲ್ಲಿಸಿದ ಈ ಪಿಐಎಲ್‌ನಲ್ಲಿ ಅವರು ಲೋಯಾರನ್ನು ‘ರೇಡಿಯೋಆಕ್ಟಿವ್‌ ಪಾಯ್ಸನಿಂಗ್‌’ (ವಿಕಿರಣ) ಕೊಲೆ ಮಾಡಲಾಗಿದೆ ಎಂದು ಹೇಳಿದ್ದು ಇದಕ್ಕೆ ಬೇಕಾದ ಒಂದಷ್ಟು ಸಾಕ್ಷ್ಯಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇದೇ ಹೊತ್ತಲ್ಲಿ ಲೋಯಾ ಪ್ರಕರಣದಲ್ಲಿ ದಾಖಲೆಗಳನ್ನು ಭದ್ರವಾಗಿರಿಸುವ ಸಂಬಂಧ ವಿಚಾರಣೆಯೊಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಮುಂದೆ ಬಂದಿತ್ತು. ಆದರೆ ಈ ಪೀಠದಲ್ಲಿ ಮೂವರು ನ್ಯಾಯಾಧೀಶರು ಇದೀಗ ಒಬ್ಬೊಬ್ಬರಾಗಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಸೋಮವಾರ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ಎಸ್‌.ಬಿ. ಶುಕ್ರೆ ಮತ್ತು ಎಸ್‌.ಎಂ. ಮೋದಕ್‌ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಯಾವುದೇ ಕಾರಣವನ್ನೂ ನೀಡದೆ, ವಿಚಾರಣೆ ‘ನಮ್ಮ ಮುಂದೆ ಬೇಡ’ ಎಂದು ವಿಭಾಗೀಯ ಪೀಠ ಹೇಳಿತ್ತು.

ಇದೀಗ ಬುಧವಾರ ಮತ್ತೋರ್ವ ನ್ಯಾಯಾಮೂರ್ತಿ ಸ್ವಪ್ನಾ ಜೋಶಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಆಕೆಯೂ ತಮ್ಮ ನಿರ್ಧಾರಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ಇದೀಗ ಪೀಠದಲ್ಲಿ ಪಿ. ಎನ್‌. ದೇಶ್‌ಮುಖ್‌ ಮಾತ್ರ ಉಳಿದುಕೊಂಡಿದ್ದಾರೆ. ಇವೆಲ್ಲಾ ಸತೀಶ್‌ ಉಕೆ ಪಿಐಎಲ್ ಸಲ್ಲಿಸಿದ ನಂತರ ನಡೆಯುತ್ತಿರುವ ಬೆಳವಣಿಗೆಗಳು.

ಅವರು ಪಿಐಎಲ್‌ ಜತೆ ರೇಡಿಯೋ ಆಕ್ಟಿವ್‌ ಐಸೋಟೋಪ್‌ನಿಂದ ಲೋಯಾ ಸತ್ತಿದ್ದಾರೆ ಎನ್ನುವುದಕ್ಕೆ ಪೋಸ್ಟ್‌ ಮಾರ್ಟಂ ಮತ್ತು ಒಂದಷ್ಟು ಇತರ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅರ್ಜಿಯಲ್ಲಿ ಅವರು ಭೇಟಿಯೊಂದನ್ನೂ ಪ್ರಸ್ತಾಪಿಸಿದ್ದರು. ಆಗಿನ ಭಾರತದ ಅಣು ಶಕ್ತಿ ಆಯೋಗದ ಅಧ್ಯಕ್ಷರಾದ ರತನ್‌ ಕುಮಾರ್‌ ಸಿನ್ಹಾರನ್ನು ಮಾರ್ಚ್‌ 2015ರ ನಾಗ್ಪುರದಲ್ಲಿ ಅಮಿತ್‌ ಶಾ ಭೇಟಿಯಾಗಿದ್ದರು. ಈ ಸಭೆಯ ಎಲ್ಲಾ ಅಧಿಕೃತ ದಾಖಲೆಗಳನ್ನು ನಾಶಪಡಿಸಲಾಗಿದೆ. ‘ರೇಡಿಯೋ ಆಕ್ಟಿವ್‌ ವಿಷಪ್ರಾಶನ’ದಿಂದ ಲೋಯಾ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ತಿಳಿಸಿದ್ದರು.

ಯಾರಿವರು ಮೂವರು ನ್ಯಾಯಮೂರ್ತಿಗಳು?

ಡಿಸೆಂಬರ್‌ 1, 2014ರಂದು ಲೋಯಾ ಸಾವಿಗೀಡಾಗಿದ್ದರು. ಅವರು ಜೋಶಿ ಪುತ್ರಿಯ ಮದುವೆಯಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಹೊರಟಿದ್ದರು. ಅವರ ಜತೆಗೆ ಆಗ ಇದ್ದವರು ನ್ಯಾಯಮೂರ್ತಿ ಮೊದಕ್‌. ಅದಾದ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗ ಅಲ್ಲಿದ್ದವರು ನ್ಯಾ. ಶುಕ್ರೆ. ಹೀಗೆ ಮೂರು ಜನ ಈ ಸಾವಿನ ಸಂದರ್ಭದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಲೋಯಾ ಸಂಪರ್ಕದಲ್ಲಿದ್ದರು.

ಕಳೆದ ಏಪ್ರಿಲ್‌ನಲ್ಲಿ ಲೋಯಾ ಸಾವಿನ ಸ್ವತಂತ್ರ ತನಿಖೆ ಅಗತ್ಯವಿಲ್ಲ ಎಂದು ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹೇಳಿದ್ದರು. ‘ಅವರಿಗೆ ಹೃದಯಾಘಾತ ಆಗುವಾಗ ನಾನು ಜತೆಗಿದ್ದೆ’ ಎಂದು ಮೋದಕ್‌ ಹೇಳಿಕೆ ನೀಡಿದ್ದರಿಂದ ಅವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದರು. ಆದರೆ ಸತೀಶ್‌ ಉಕೆ ಹೇಳುವುದೇ ಬೇರೆ.

ಸತೀಶ್‌ ಉಕೆ ಅರ್ಜಿ:

ತಮ್ಮ ಅರ್ಜಿಯಲ್ಲಿ ಉಕೆ ತಮ್ಮ ಸಹೋದ್ಯೋಗಿಗಳಾಗಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಪ್ರಕಾಶ್‌ ತೋಂಬ್ರೆ ಮತ್ತು ವಕೀಲ ಶ್ರೀಕಾಂತ್‌ ಖಂಡಲ್ಕರ್‌ ಅವರು, ‘ಲೋಯಾ ರೇಡಿಯೋ ಆಕ್ಟಿವ್‌ ಐಸೋಟೋಪ್‌ನಿಂದಾಗಿ ಸಾವಿಗೀಡಾಗಿದ್ದಾರೆ’ ಎಂದು ತಮಗೆ ಹೇಳಿದ್ದರು ಎಂಬುದಾಗಿ ತಿಳಿಸಿದ್ದಾರೆ. ಆದರೆ ಮುಂದೆ ಇದೇ ತೊಂಬ್ರೆ ಮತ್ತು ಖಂಡಲ್ಕರ್‌ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು ಈಗ ಇತಿಹಾಸ.

ಲೋಯಾ ರವಿ ಭವನ್‌ನಲ್ಲಿ ಸಾವಿಗೀಡಾಗಿದ್ದರು, ನಂತರ ನಾಗ್ಪುರದ ಸರಕಾರಿ ವೈದ್ಯಕೀಯ ಕಾಲೇಜು ನಾಗ್ಪುರದಲ್ಲಿ ಪೋಸ್ಟ್‌ಮಾರ್ಟಂ ಮಾಡಲಾಗಿತ್ತು. ಈ ಸಂಬಂಧ ತಮ್ಮ ಸಾವಿಗೂ ಮೊದಲೇ ಪ್ರತಿಕ್ರಿಯೆ ನೀಡಿದ್ದ ತೊಂಬ್ರೆ ಮತ್ತು ಖಂಡಲ್ಕರ್‌, ‘ಕೊಲೆಯಲ್ಲಿ ಭಾಗಿಯಾದ ನಿಜವಾದ ಆರೋಪಿಗಳನ್ನು ರಕ್ಷಿಸಲು ರವಿ ಭವನದ ದಾಖಲೆಗಳನ್ನು ತಿರುಚಲಾಗಿದೆ’ ಎಂದಿದ್ದರು.

ಅಷ್ಟೇ ಅಲ್ಲದೆ ಅಕ್ಟೋಬರ್‌ 2014ರಲ್ಲಿ ತೊಂಬ್ರೆ ಮತ್ತು ಖಂಡಲ್ಕರ್‌ ಮೂಲಕ ಉಕೆಯನ್ನು ಸಂಪರ್ಕಿಸಿದ್ದ ಲೋಯಾ, ಸೊಹ್ರಾಬುದ್ದೀನ್‌ ಶೇಖ್‌ ಪ್ರಕರಣದಲ್ಲಿ ತಮ್ಮ ಮೇಲೆ ಒತ್ತಡವಿದೆ ಎಂದು ಹೇಳಿದ್ದರಂತೆ. ಉಕೆ ಮತ್ತು ಲೋಯಾ ಎಂದೂ ಮುಖಾಮುಖಿ ಮಾತನಾಡಿರಲಿಲ್ಲ. ಆದರೆ ಅಕ್ಟೋಬರ್ 2014ರಲ್ಲಿ ವಿಡಿಯೋ ಕಾಲಿಂಗ್‌ ಮೂಲಕ ಮಾತನಾಡಿದ್ದರು. ಅಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಉಕೆ, ‘ತೊಂಬ್ರೆ ಮತ್ತು ಖಂಡಲ್ಕರ್‌ ಸಮ್ಮುಖದಲ್ಲೇ ಮೂರನೇ ಅಪರಿಚತ ವ್ಯಕ್ತಿಯನ್ನು ನಾನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಆತ ಟ್ಯಾಬ್‌ ಮೊಬೈಲ್‌ ಮೂಲಕ ಲೋಯಾ ಅವರಿಗೆ ವಿಡಿಯೋ ಕರೆ ಮಾಡಿದ್ದ’ ಎಂದಿದ್ದಾರೆ.

ವಿಡಿಯೋ ಕರೆಯಲ್ಲಿ ಲೋಯಾ, ‘ತಮ್ಮವರ ಪರವಾಗಿ ತೀರ್ಪು ನೀಡಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಹೇಳಿದ್ದರು. ಜತೆಗೆ ‘ಶುಭಾಂಶು ಜೋಶಿ ಎಂಬ ನಾಗ್ಪುರದ ವ್ಯಕ್ತಿ ಲಂಚ ನೀಡಲಿದ್ದಾನೆ’ ಎಂದೂ ವಿವರಿಸಿದ್ದರು ಎಂಬುದನ್ನು ಉಕೆ, ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಮಾತ್ರವಲ್ಲದೇ ಕರೆ ಮಾಡಿದ ಸಂದರ್ಭದಲ್ಲಿ ಅಮಿತ್‌ ಶಾ ಅವರಿಗೆ ಕ್ಲೀನ್‌ಚಿಟ್‌ ನೀಡುವ ಕರಡು ಆದೇಶವನ್ನು ತಮಗೀಗಾಗಲೇ ನೀಡಲಾಗಿದೆ ಎಂದು ಲೋಯಾ ಹೇಳಿದ್ದರಂತೆ. ಕರಡು ಆದೇಶ ಸಿಕ್ಕಿದ ಹಿನ್ನೆಲೆಯಲ್ಲಿ ಉಕೆಯವರು ತೊಂಬ್ರೆ ಮತ್ತು ಖಂಡಲ್ಕರ್‌ ಜತೆ ದೆಹಲಿಗೆ ತೆರಳಿ ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ ಅವರನ್ನು ಭೇಟಿಯಾಗಿದ್ದರಉ. ಆದರೆ ಇದರಲ್ಲಿ ಮುಂದುವರಿಯಲ್ಲಿ ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ಭೂಷಣ್‌ ಹೇಳಿ ಕಳುಹಿಸಿದ್ದರಂತೆ. ಈ ಎಲ್ಲಾ ವಿವರಗಳನ್ನು ಅವರು ನ್ಯಾಯಾಲಯದ ಮುಂದಿಟ್ಟಿದ್ದಾರೆ.

ಒಂದು ಕಡೆ 2006ರಲ್ಲಿ ರಷ್ಯಾ ಸರಕಾರದ ಕಡೆಯಿಂದ ಮೊದಲ ಬಾರಿಗೆ ವಿಕಿರಣಗಳನ್ನು ಬಳಸಿ ವ್ಯಕ್ತಿಯೊಬ್ಬರನ್ನು ಕೊಲ್ಲಲಾಗಿದೆ. ಇದೀಗ 2014ರಲ್ಲಿ ಲೋಯಾ ಅವರನ್ನು ಇದೇ ರೀತಿ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇಲ್ಲೂ ಭಾರತವನ್ನು ಆಳುತ್ತಿರುವ ಬಿಜೆಪಿ ಪಕ್ಷದ ಅಧ್ಯಕ್ಷರ ಮೇಲೆ ಆರೋಪ ಕೇಳಿ ಬಂದಿದೆ. ಇವೆಲ್ಲಾ ಕೇವಲ ಕಾಕತಾಳಿಯವೇ? ಅಥವಾ ಅಂತಾರಾಷ್ಟ್ರೀಯ ಕೊಡು ಕೊಳ್ಳುವಿಕೆಯಾ ಆಯಾಮಾನೂ ಇದೆಯಾ? ಗಟ್ಟಿ ನೆಲೆಯ ತನಿಖೆಯೊಂದು ನಡೆಯಬೇಕಿದೆ.