samachara
www.samachara.com
ಚುನಾವಣೆ ಹಿನ್ನೆಲೆಯಲ್ಲಿ ಹೀಗೊಂದು ಅಸಾಂಪ್ರದಾಯಿಕ ಸಂದರ್ಶನ!
ದೇಶ

ಚುನಾವಣೆ ಹಿನ್ನೆಲೆಯಲ್ಲಿ ಹೀಗೊಂದು ಅಸಾಂಪ್ರದಾಯಿಕ ಸಂದರ್ಶನ!

ಸಾಮಾನ್ಯವಾಗಿ ನೇತಾರರನ್ನು ಸಂದರ್ಶನ ಮಾಡುವುದು ರೂಢಿ. ಆದರೆ ಝಾ ಸಾಮಾನ್ಯ ಜನರ ಬೆನ್ನು ಬೀಳುವ ಮೂಲಕ ಅಸಂಪ್ರದಾಯಕ ಆಯಾಮವೊಂದನ್ನು ಬಿಚ್ಚಿಟ್ಟಿದ್ದಾರೆ. ಅದರ ಕನ್ನಡಾನುವಾದ ಇಲ್ಲಿದೆ.

Team Samachara

ಕಳೆದ 15 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರುವ ಮಧ್ಯ ಪ್ರದೇಶದಲ್ಲಿ ನವೆಂಬರ್‌ 28ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ‘ದಿ ಟೆಲಿಗ್ರಾಫ್‌’ಗಾಗಿ ರಾಜ್ಯ ಪ್ರವಾಸದಲ್ಲಿರುವ ಹಿರಿಯ ಪತ್ರಕರ್ತ ಸಂಜಯ್‌ ಕೆ ಝಾ ಕೃಷಿ ಕಾರ್ಮಿಕರೊಬ್ಬರ ಸಂದರ್ಶನ ಮಾಡಿದ್ದಾರೆ. ಸಾಮಾನ್ಯವಾಗಿ ನೇತಾರರನ್ನು ಸಂದರ್ಶನ ಮಾಡುವುದು ರೂಢಿ. ಆದರೆ ಝಾ ಸಾಮಾನ್ಯ ಜನರ ಬೆನ್ನು ಬೀಳುವ ಮೂಲಕ ಅಸಂಪ್ರದಾಯಕ ಆಯಾಮವೊಂದನ್ನು ಬಿಚ್ಚಿಟ್ಟಿದ್ದಾರೆ. ಅದರ ಕನ್ನಡಾನುವಾದ ಇಲ್ಲಿದೆ.

ರಾಜಧಾನಿ ಭೋಪಾಲ್‌ನಿಂದ 50 ಕಿಲೋಮೀಟರ್‌ ದೂರದಲ್ಲಿರುವ ರೈಸನ್‌ ಜಿಲ್ಲೆಯ ಖಸ್ರೋಡ್‌ ಗ್ರಾಮದಲ್ಲಿ ರಾಜ್‌ಕುಮಾರ್‌ ಉಯ್ಕೆ ಮನೆ ಇದೆ. ಭೋಜ್‌ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಇಲ್ಲಿಗೆ ಭೇಟಿ ನೀಡಿದ ಝಾ ಅವರ ಬಳಿ ಮುಖಾಮುಖಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರಶ್ನೆ: ನೀವು ಒಬ್ಬ ರೈತ?

ರಾಜ್‌ಕುಮಾರ್‌: ಅಲ್ಲ, ಕೃಷಿ ಕಾರ್ಮಿಕ. ನಾನು ಬೇರೆಯವರ ಹೊಲವನ್ನು ನೋಡಿಕೊಳ್ಳುತ್ತೇನೆ.

ತಿಂಗಳಿಗೆ ಎಷ್ಟು ದುಡಿಯುತ್ತೀರಿ?

(ನಗುತ್ತಲೇ, ಮುಖದಲ್ಲಿ ಭಾವನೆಗಳು ಖಾಲಿಯಾಗಿತ್ತು. ಬಟ್ಟೆ, ಗುಡಿಸಲ ತುಂಬಾ ಬಡತನ ಕಣ್ಣಿಗೆ ರಾಚುತ್ತಿದ್ದವು…)

ಜಮೀನನ್ನು ನೋಡಿಕೊಳ್ಳುವಾಗ ನೀವು ಏನೇನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ?

ಡಿಎಪಿ (ರಸಗೊಬ್ಬರ) ಬೆಲೆ ಏರಿಕೆಯಾಗಿದೆ. ವಿದ್ಯುತ್‌ ರಾತ್ರಿ 2.30ರಿಂದ ಬೆಳಿಗ್ಗೆ 6 ಗಂಟೆವರೆಗೆ ಬರುತ್ತದೆ. ನಾನು ಪಂಪ್‌ ಚಾಲೂ ಮಾಡಲು ರಾತ್ರಿ ಎದ್ದೇಳಬೇಕು. ನಮಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಬೇಕು.

ಆದರೆ ಮುಖ್ಯಮಂತ್ರಿಗಳು ಹೇಳುತ್ತಾರೆ ನಾವು 24 ಗಂಟೆ ವಿದ್ಯುತ್‌ ನೀಡುತ್ತಿದ್ದೇವೆ ಎಂದು?

24 ಗಂಟೆ ವಿದ್ಯುತ್‌ ನೀಡಲು ಅವರು ನಾಲ್ಕು ತಿಂಗಳಿಗೆ 32,000 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಾರೆ. ನಾವು ನಾಲ್ಕು ತಿಂಗಳಿಗೆ ನೀಡುವುದು 15,000 ರೂಪಾಯಿ.

ಸರಕಾರ ನಿರ್ಧರಿಸಿದ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಯನ್ನು ನೀವು ನಿಮ್ಮ ಬೆಳೆಗೆ ಪಡೆದಿದ್ದೀರಾ?

ನಾನು ಗೋಧಿಗೆ 1,750ರೂಪಾಯಿ ಪಡೆದಿದ್ದೇನೆ. ಎಂಎಸ್‌ಪಿ 1,840 ರೂಪಾಯಿ.

ಮನೆ ಕಟ್ಟಲು ಹಣ ಪಡೆದಿದ್ದೀರಾ?

ಇಲ್ಲ. ನಮ್ಮ ಗ್ರಾಮದಲ್ಲಿ ಯಾರೂ ಪಡೆದಿಲ್ಲ. ಒಂದೇ ಮನೆಯನ್ನು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ಕಟ್ಟಲಾಗಿದೆ. ರಾಜ್ಯದ ಯೋಜನೆಯಡಿಯಲ್ಲಿ ಯಾರೂ ಕಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಗ್ರಾಮಕ್ಕೆ ಯಾವುದೇ ಯೋಜನೆಗಳಿಲ್ಲ ಎನ್ನುತ್ತಾರೆ.

ಆದರೆ ನೀವು ಇದರ ಬಗ್ಗೆ ಹೆಚ್ಚು ವಿಚಾರಿಸಲಿಲ್ವಾ?

ಅಧಿಕಾರಿಗಳು ಕೇಳಿಸಿಕೊಳ್ಳುವುದಿಲ್ಲ. ಅವರು ಇದಕ್ಕಾಗಿ ತುಂಬಾ ದಾಖಲೆಗಳನ್ನು ಕೇಳುತ್ತಾರೆ. ಬ್ಯಾಂಕ್‌ನಲ್ಲೂ ಸಮಸ್ಯೆ, ಆಧಾರ್‌ನದ್ದು ಇನ್ನೊಂದು ಸಮಸ್ಯೆ. ಸುತ್ತಿ ಸುತ್ತಿ ಚಪ್ಪಲಿ ಸವೆದು ಹೋಗಿದೆ.

ಆದರೆ ಮೋದಿಜಿ ಹೇಳ್ತಾರೆ ಅವರು ಬಡವರಿಗಾಗಿ ಬ್ಯಾಂಕ್‌ ಖಾತೆ ತೆರಿದಿದ್ದೇನೆ ಎಂದು.

ಯಾರ ಬಳಿಯಲ್ಲಿ ದುಡ್ಡಿರುತ್ತೋ ಅವರು ಬ್ಯಾಂಕ್‌ ಖಾತೆಯನ್ನು ಇಲ್ಲದಿದ್ದರೂ ತೆರೆಯುತ್ತಿದ್ದರು. ಝೀರೋ ಬ್ಯಾಲೆನ್ಸ್‌ ಬ್ಯಾಂಕ್‌ ಖಾತೆಯಿಂದ ಏನು ಲಾಭ?

ಆದರೆ ಕನಿಷ್ಟ ನಿಮ್ಮನ್ನು ಬ್ಯಾಂಕ್‌ ಒಳಗೆ ಬಿಟ್ಟುಕೊಳ್ಳುತ್ತಿದ್ದಾರಲ್ಲಾ...

(ಆಗಸ್ಟೇ ಬಂದ ಇನ್ನೊಬ್ಬ ವ್ಯಕ್ತಿಯ ಕಡೆಗೆ ಕೈ ತೋರಿಸಿ) ಅವರ ಬಳಿಯಲ್ಲಿ ಕೇಳಿ ಅವರು ಈ ಮೊದಲೇ ಬ್ಯಾಂಕ್‌ ಖಾತೆ ತೆರೆದಿದ್ದಾರಾ ಇಲ್ವಾ ಎಂದು. ಈತ ಹರ್ಲಾಲ್‌ ಗೌರ್‌ ದೊಡ್ಡ ರೈತ.

ಹರ್ಲಾಲ್‌: ನಾನು ಬ್ಯಾಂಕ್‌ ಖಾತೆ ತೆರೆದು 30 ವರ್ಷವಾಯ್ತು. ಮೊದಲು ನೀವು ಒಂದು ಸ್ಲಿಪ್‌ ಭರ್ತಿ ಮಾಡಿದರೆ ಸಾಕಾಗುತ್ತಿತ್ತು. ಈಗ ಅವರು ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಕೇಳಿ ಹಿಂಸೆ ನೀಡುತ್ತಾರೆ.

ನಿಮಗೆ ಫಸಲ್‌ ಬಿಮಾ (ಬೆಳೆ ವಿಮೆ) ಲಾಭ ಸಿಕ್ಕಿದೆಯಾ?

ಒಂದೇ ಒಂದೂ ಪೈಸೆಯೂ ಇಲ್ಲ. ಪಕ್ಕದ ಅಶಪುರ್‌ ಮತ್ತು ನಿಮ್ಖೇಡಾದಲ್ಲಿ ಸಿಕ್ಕಿದೆ. ಇಲ್ಲಿ ನಮಗೆ ಒಳ್ಳೆಯ ಗುಣಮಟ್ಟದ ಭತ್ತ ಸಿಗುವುದಿಲ್ಲ. ಆದರೆ ಅವರು ನಮ್ಮನ್ನು ಈ ಕೆಟಗರಿಗೆ ಹಾಕಿದ್ದಾರೆ. ನಮ್ಮ ಭತ್ತ ಕಳಪೆ ಆದರೂ ನಾವು ಏನೂ ಪಡೆದಿಲ್ಲ. ಗೋಧಿಗೂ ಏನೂ ಇಲ್ಲ.

ಮಗಳಿಗೆ ಲಡ್ಲಿ ಯೋಜನೆಯ ಲಾಭ ಸಿಕ್ಕಿದೆಯಾ?

ಇಲ್ಲಿಯವರೆಗೆ ಯಾರಿಗೂ ಸಿಕ್ಕಿಲ್ಲ. ಅವರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 7ನೇ ತರಗತಿ ಉತ್ತೀರ್ಣರಾಗಿ 18 ವರ್ಷ ತಲುಪಿದಾಗ 1 ಲಕ್ಷ ರೂಪಾಯಿ ಸಿಗುತ್ತದೆ. ಗ್ರಾಮದ ಶೇಕಡಾ 80ಕ್ಕೂ ಹೆಚ್ಚು ಹುಡುಗಿಯರು ಐದು ಆರನೇ ಕ್ಲಾಸಿಗೇ ಶಾಲೆ ಬಿಡುತ್ತಾರೆ. ಯಾರು ಶಾಲೆ ಮುಗಿಸುತ್ತಾರೋ ಅವರು 18 ವರ್ಷದವರೆಗೂ ಕಾಯಬೇಕು.

ಆದರೆ ನೀವು ಗೋಧಿ ಮತ್ತು ಅಕ್ಕಿಯನ್ನು ಕೆಜಿಗೆ ಒಂದು ರೂಪಾಯಿಯಂತೆ ಪಡೆಯುತ್ತೀರಾ?

ಹೌದು ನನಗೆ ಸಿಗುತ್ತದೆ.

ಹರ್ಲಾಲ್‌: ನನಗೆ ಇಲ್ಲ. ಕೇವಲ ಬಿಪಿಎಲ್‌ ಕಾರ್ಡ್‌ನವರಿಗೆ ಮಾತ್ರ.

ಶಿವರಾಜ್‌ ಸಿಂಗ್‌ ಸರ್ಕಾರ ಮತ್ತೆ ಬರುತ್ತದಾ?

ರಾಜ್‌ಕುಮಾರ್‌ (ಮೌನ)

ಹರ್ಲಾಲ್‌: ಸಾಧ್ಯವೇ ಇಲ್ಲ.

ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಮೋದಿ ಹೆಚ್ಚಿಸಿದ ಬಗ್ಗೆ ನಿಮಗೆ ಹೆಮ್ಮೆ ಇದೆಯಾ?

ಇಲ್ಲಿ ಕೆಲಸವಿಲ್ಲ, ಇದೇ ದೊಡ್ಡ ಸಮಸ್ಯೆ.

ಆದರೆ ನೀವು 3,000 ಕೋಟಿ ರುಪಾಯಿಯ ಅತೀ ದೊಡ್ಡ ಸರ್ದಾರ್‌ ಪಟೇಲ್‌ ಪ್ರತಿಮೆ ಪಡೆದಿದ್ದೀರಿ.

ನಾನು ಬಿಕಾಂ ಮಾಡಿದ್ದೇನೆ. ಖಾಸಗಿ ಕಂಪನಿಗಳು ತಿಂಗಳಿಗೆ 6,000 ರೂಪಾಯಿ ನೀಡುತ್ತವೆ. ಅದಕ್ಕಾಗಿ ನಾನು ಕೃಷಿ ಕಾರ್ಮಿಕನಾಗಿದ್ದೇನೆ.

ಹಿಂದೂ ನಾಯಕರು ಆಡಳಿತ ನಡೆಸುತ್ತಿದ್ದಾರೆ ನಿಮಗೆ ಹೆಮ್ಮೆ ಇಲ್ವಾ?

ನನ್ನ ತಂಗಿಯೂ ಬಿ.ಕಾಂ ಓದಿದ್ದಾಳೆ. ನಾವು ಬೈದುಲ್ಲಾಗಂಜ್‌ನಲ್ಲಿ ಓದಿದ್ದು. (ಪಕ್ಕದ ನಗರ, 8 ಕಿಲೋಮೀಟರ್‌ ದೂರದಲ್ಲಿದೆ)

ಹರ್ಲಾಲ್‌: ನನ್ನ ಇಬ್ಬರು ಮಕ್ಕಳು ಭೋಪಾಲ್‌ನಲ್ಲಿ ಎಂ.ಕಾಂ ಕಲಿತಿದ್ದಾರೆ. ಇಬ್ಬರೂ ಮನೆಯಲ್ಲಿ ಕೂತಿದ್ದಾರೆ. ನಾನು ಅವರನ್ನು ಕರೆಯಲೇ?

ಹರ್ಲಾಲ್‌ ಗೌರ್‌ ಜತೆ ನಿಂತಿರುವ ರಾಜ್‌ಕುಮಾರ್‌ ಉಯ್ಕೆ
ಹರ್ಲಾಲ್‌ ಗೌರ್‌ ಜತೆ ನಿಂತಿರುವ ರಾಜ್‌ಕುಮಾರ್‌ ಉಯ್ಕೆ
/ದಿ ಟೆಲಿಗ್ರಾಫ್‌

ಹೀಗೆ ಹೇಳುತ್ತಲೇ ರಾಜ್‌ಕುಮಾರ್‌ ಮನೆಯಿಂದ ಹೊರಗೆ ಹೊರಟು ನಿಂತರು. ಹೋಗುತ್ತಲೇ, “ಉದ್ಯೋಗ ಸೃಷ್ಟಿ ಬಗ್ಗೆ ಏನಾದರೂ ಬರೆಯಿರಿ. ಅದೇ ದೊಡ್ಡ ಸಮಸ್ಯೆ,” ಎಂದು ಹೇಳಿ ಹೊರಟರು.

ನಡೆದ ಬೆಳವಣಿಗೆಯೆಲ್ಲವನ್ನೂ ಇಳಿ ಬಿಟ್ಟ ಪರದೆ ಹಿಂದೆ ನಿಂತು ಆತನ ತಂಗಿ ನೋಡುತ್ತಿದ್ದಳು. ಆಕೆ ರಾಜ್‌ಕುಮಾರ್‌ಗೆ ದನ ನೋಡಿಕೊಳ್ಳಲು, ಕೃಷಿಗೆ ಸಹಾಯ ಮಾಡುತ್ತಿದ್ದಳು. ಆಕೆ ಬುಡಕಟ್ಟು ಜನಾಂಗವೊಂದಕ್ಕೆ ಸೇರಿದ್ದಳು. ಈ ಜನಾಂಗ ಆರ್ಥಿಕ, ಸಾಮಾಜಿಕ ತೊಂದರೆಗಳ ನಡುವೆಯೂ ಮಕ್ಕಳಿಗೆ ಶಿಕ್ಷಣ ನೀಡಲು ಒತ್ತು ನೀಡುತ್ತಿತ್ತು.

ಈ ಸಂದರ್ಶನ ಮಾಡುವ ಸಮಯದಲ್ಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಪ್ರಧಾನಿ ನರೇಂದ್ರ ಮೋದಿ, ‘ರಾಹುಲ್‌ ಗಾಂಧಿ ಮತ್ತು ಕಮಲ್‌ನಾಥ್‌ ಮುಸ್ಲಿಂ ಮತಗಳನ್ನು ಬೇಡುತ್ತಿದ್ದಾರೆ’ ಎಂದು ಭಾಷಣ ಬಿಗಿಯುತ್ತಿದ್ದರು. ಇನ್ನೊಂದು ಕಡೆ ಯೋಗಿ ಆದಿತ್ಯನಾಥ್‌ ಕಾಂಗ್ರೆಸ್‌ಗೆ ಅಲಿ ಬೇಕು, ಬಜರಂಗಬಲಿ ಬೇಡ ಎನ್ನುತ್ತಿದ್ದರು. ಇದರ ನಡುವೆ ಆ ಪದವೀಧರ ಆದಿವಾಸಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದರು.