samachara
www.samachara.com
ಬಿಜೆಪಿಗೆ ರಾಮ, ಎಡಪಕ್ಷಗಳಿಗೆ ರೈತ; 2019ರ ಚುನಾವಣೆಗೆ ಅನ್ನದಾತರ ಸಂಘಟನೆ
ದೇಶ

ಬಿಜೆಪಿಗೆ ರಾಮ, ಎಡಪಕ್ಷಗಳಿಗೆ ರೈತ; 2019ರ ಚುನಾವಣೆಗೆ ಅನ್ನದಾತರ ಸಂಘಟನೆ

ಎಡಪಕ್ಷಗಳು ರಾಷ್ಟ್ರಮಟ್ಟದಲ್ಲಿ ರೈತರನ್ನು ಸಂಘಟಿಸುತ್ತಿರುವುದು ಲೋಕಸಭಾ ಚುನಾವಣೆಯ ನಿರ್ಣಾಯಕ ಅಂಶಗಳಲ್ಲಿ ಒಂದಾಗಲಿದೆ.

Team Samachara

2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಮ ಹಾಗೂ ರಾಮಮಂದಿರ ನಿರ್ಮಾಣದ ಜಪದಲ್ಲಿ ಮುಳುಗಿದ್ದರೆ ಕಾಂಗ್ರೆಸ್‌ ತನ್ನ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಈ ನಡುವೆ ಎಡಪಕ್ಷಗಳು ಹಾಗೂ ಪ್ರಗತಿಪರರು ಮುಂಬರುವ ಲೋಕಸಭಾ ಚುನಾವಣೆಗೆ ದೇಶದ ಅನ್ನದಾತರ ಸಮಸ್ಯೆಗಳನ್ನು ಮುನ್ನೆಲೆಗೆ ತಂದಿದ್ದಾರೆ. ಇದೇ 30ರಂದು ದೆಹಲಿಯಲ್ಲಿ ರೈತರ ಬೃಹತ್‌ ಶಕ್ತಿ ಪ್ರದರ್ಶನ ನಡೆಯಲಿದೆ.

ತಮ್ಮ ಹಲವು ಬೇಡಿಕೆಗಳನ್ನು ಹೊತ್ತು ರಾಜಧಾನಿ ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಿಹೋದ ರೈತರು ಈ ಬೇಡಿಕೆಗಳ ಈಡೇರಿಕೆಗೆ 15 ದಿನಗಳ ಗಡುವನ್ನು ರಾಜ್ಯ ಸರಕಾರಕ್ಕೆ ನೀಡಿದ್ದಾರೆ. ರಾಜ್ಯದ ರೈತರ ಹೋರಾಟದ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲಿ ಬೃಹತ್‌ ರೈತ ಸಮಾವೇಶಕ್ಕೆ ಸಿದ್ಧತೆಗಳು ನಡೆದಿವೆ. ನವೆಂಬರ್‌ 30ರಂದು ದೆಹಲಿಯಲ್ಲಿ ನಡೆಯಲಿರುವ ‘ನೇಷನ್‌ ಫಾರ್‌ ಫಾರ್ಮರ್ಸ್‌’ ಬೃಹತ್‌ ಸಮಾವೇಶಕ್ಕೆ ರೈತರನ್ನು ಒಗ್ಗೂಡಿಸಲಾಗುತ್ತಿದೆ. ಕರ್ನಾಟಕದಿಂದಲೂ ಸುಮಾರು ಎರಡು ಸಾವಿರ ಮಂದಿ ರೈತರು ರಾಜಧಾನಿಗೆ ಹೋಗಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮತ್ತೊಂದು ಕಡೆ ಬರ, ಸಾಲಮನ್ನಾ ವಿಚಾರಗಳ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಸಭೆ ಕರೆದಿದ್ದಾರೆ. ಬರ ಪರಿಹಾರದ ಮಾನದಂಡಗಳನ್ನು ಪರಿಷ್ಕರಿಸುವಂತೆ ರಾಜ್ಯದ ರೈತರು ಮಾಡಿರುವ ಮನವಿಗೆ ಈ ಸಭೆಯಲ್ಲಿ ಒಪ್ಪಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತ ಮುಖಂಡರಿದ್ದಾರೆ. ಬೆಳೆ ನಷ್ಟದ ಪರಿಹಾರ ಹಣ ಹೆಚ್ಚಳ ಹಾಗೂ ಬರ ಪರಿಹಾರ ಕಾರ್ಯಗಳ ಸ್ವರೂಪದಲ್ಲಿ ಬದಲಾವಣೆಯ ಸಂಬಂಧ ರೈತರು ಸರಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ವಾರದ ಹಿಂದೆ ಬೆಂಗಳೂರಿನಲ್ಲಿ ನಡೆದ ರೈತರ ಬೃಹತ್‌ ಪ್ರತಿಭಟನೆಯ ವೇಳೆ ಸರಕಾರಕ್ಕೆ ಸಲ್ಲಿಸಿದ್ದ ಬೇಡಿಕೆಗಳ ಪಟ್ಟಿಯಲ್ಲೂ ಈ ಮನವಿ ಇತ್ತು.

“ಬರ ಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡುವುದು, ಬರ ಪರಿಹಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವುದು, ಪರಿಹಾರ ನಷ್ಟದ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರಿ ರೈತರನ್ನು ಯಾಮಾರಿಸುವ ಕೆಲಸವನ್ನು ಸರಕಾರಗಳು ಮಾಡುತ್ತಲೇ ಬಂದಿವೆ. ಬೆಳೆ ನಷ್ಟದ ಪರಿಹಾರದ ಹೆಸರಿನಲ್ಲಿ ಸರಕಾರ ಈಗ ನೀಡುತ್ತಿರುವ ಹಣ ಕೊಟ್ಟರೂ ಒಂದೇ ಕೊಡದಿದ್ದರೂ ಒಂದೇ” ಎನ್ನುತ್ತಾರೆ ರೈತ ಮುಖಂಡ ಚಾಮರಸ ಮಾಲಿ ಪಾಟೀಲ್‌.

“ಬರದ ಸಂದರ್ಭದಲ್ಲಿ ಬೆಳೆ ನಷ್ಟದ ಪರಿಹಾರವನ್ನು ಪ್ರತಿ ಹೆಕ್ಟೇರ್‌ಗೆ ಕನಿಷ್ಠ 25 ಸಾವಿರ ರೂಪಾಯಿಗೆ ಹೆಚ್ಚಿಸಬೇಕು. ಬೆಳೆ ಆಧಾರಿತವಾಗಿ ನ್ಯಾಯಯುತ ಪರಿಹಾರ ನೀಡಲು ಸರಕಾರ ಮುಂದಾಗಬೇಕು. ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ಕನಿಷ್ಠ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು, ನೀರನ್ನು ಸಮರ್ಪಕವಾಗಿ ಒದಗಿಸಬೇಕು. ಕೈಯಿಂದ ಹಣ ಕೊಟ್ಟು ಮೇವು ಖರೀದಿಸಿರುವ ರೈತರಿಗೆ ಆ ಹಣ ಪಾವತಿ ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನೂ ರಾಜ್ಯ ಸರಕಾರದ ಮುಂದೆ ಇಟ್ಟಿದ್ದೇವೆ. ಸರಕಾರ ಸೂಕ್ತವಾಗಿ ಸ್ಪಂದಿಸದೇ ಇದ್ದರೆ ಮತ್ತೆ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯ” ಎಂಬುದು ಅವರ ಮಾತು.

ಬಿಜೆಪಿಗೆ ರಾಮ, ಎಡಪಕ್ಷಗಳಿಗೆ ರೈತ; 2019ರ ಚುನಾವಣೆಗೆ ಅನ್ನದಾತರ ಸಂಘಟನೆ
-ಸಾಂದರ್ಭಿಕ ಚಿತ್ರ

ಈ ಹಿಂದೆ ಬರಪೀಡಿತ ಎಂದು ಘೋಷಿಸಿರುವ 86 ತಾಲ್ಲೂಕುಗಳ ಜತೆಗೆ ಈಗ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಇತರೆ ತಾಲ್ಲೂಕುಗಳನ್ನೂ ಬರಪೀಡಿತ ಎಂದು ಘೊಷಿಸಬೇಕು. ಮಾನದಂಡ ಪರಿಷ್ಕರಣೆಯ ಜತೆಗೆ ಬರ ಪರಿಹಾರಕ್ಕೆಂದು ಬಿಡುಗಡೆಯಾದ ಹಣ ರೈತರಿಗೆ ತಲುಪುವಂತೆ ನೋಡಿಕೊಳ್ಳುವ ಸಮರ್ಪಕ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ರೈತ ಮುಖಂಡರ ಆಗ್ರಹ.

“ಈಗ ಸರಕಾರ ಎಕರೆಗೆ ಒಂದೋ ಎರಡೋ ಸಾವಿರ ಬೆಳೆ ನಷ್ಟ ಪರಿಹಾರ ಕೊಡುತ್ತಿದೆ. ಈ ಹಣ ರೈತನ ಯಾವ ಕಷ್ಟಕ್ಕೂ ಸಾಲದು. ಹೀಗಾಗಿ ನ್ಯಾಯಯುತವಾದ ಬೆಳೆ ನಷ್ಟ ಪರಿಹಾರಕ್ಕೆ ಹಲವು ದಿನಗಳಿಂದ ಬೇಡಿಕೆ ಇಡುತ್ತಲೇ ಇದ್ದೇವೆ. ಈ ಬಾರಿಯೂ ಸರಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಮತ್ತೆ ಬೀದಿಗಿಳಿದು ಹೋರಾಡಬೇಕಾಗುತ್ತದೆ. ಬೆಳೆ ನಷ್ಟ ಪರಿಹಾರ ಎಂದು ಸರಕಾರ ಈಗ ನೀಡುತ್ತಿರುವ ಚಿಲ್ಲರೆ ಹಣದಿಂದ ಏನೂ ಪ್ರಯೋಜನವಿಲ್ಲ” ಎನ್ನುತ್ತಾರೆ ರೈತ ಮುಖಂಡ ಕುರಬೂರು ಶಾಂತಕುಮಾರ್‌.

ಬೇಡಿಕೆಗಳ ಈಡೇರಿಕೆಗೆ ರೈತರು ರಾಜ್ಯ ಸರಕಾರಕ್ಕೆ ನೀಡಿದ್ದ ಗಡುವು ಡಿಸೆಂಬರ್‌ 5ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಸರಕಾರ ತಮ್ಮ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ. ಆದರೆ, ರೈತರ ಈ ಎಚ್ಚರಿಕೆಯನ್ನು ರಾಜ್ಯ ಸರಕಾರ ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಲಿದೆಯೋ ನೋಡಬೇಕು.

ಒಂದು ಕಡೆ ರಾಷ್ಟ್ರಮಟ್ಟದಲ್ಲಿ ರೈತರನ್ನು ಸಂಘಟಿಸುತ್ತಿರುವುದು ಲೋಕಸಭಾ ಚುನಾವಣೆಯ ನಿರ್ಣಾಯಕ ಅಂಶಗಳಲ್ಲಿ ಒಂದಾಗಲಿದೆ. ಮತ್ತೊಂದು ಕಡೆ ರಾಜ್ಯದಲ್ಲಿ ರೈತರು ಬರ ಹಾಗೂ ಸಾಲಮನ್ನಾ ವಿಚಾರಗಳಲ್ಲಿ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಉಗ್ರ ಹೋರಾಟದ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ 2019ರ ಚುನಾವಣೆಗೆ ರೈತರ ಸಮಸ್ಯೆಗಳೂ ಪ್ರಮುಖ ವಿಷಯಗಳಾಗಲಿವೆ.