samachara
www.samachara.com
‘ಒಎನ್‌ಜಿಸಿಗೆ ಮೋದಿ ನಿರ್ಧಾರಗಳೇ ಮಾರಕ’: 25,000 ಕೋಟಿ ಸಾಲದ ಸುಳಿಯಲ್ಲಿ ಸಾರ್ವಜನಿಕ  ಕಂಪನಿ
ದೇಶ

‘ಒಎನ್‌ಜಿಸಿಗೆ ಮೋದಿ ನಿರ್ಧಾರಗಳೇ ಮಾರಕ’: 25,000 ಕೋಟಿ ಸಾಲದ ಸುಳಿಯಲ್ಲಿ ಸಾರ್ವಜನಿಕ ಕಂಪನಿ

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ತರಹದ ಸಂಘ ಪರಿವಾರ ಹಿನ್ನೆಲೆಯ ಹಲವರು ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಆದರೆ ಇವರು ಯಾವತ್ತೂ ಕಂಪನಿ ಬಗ್ಗೆ ಆಸಕ್ತಿ ತಾಳಿದ ಉದಾಹರಣೆಗಳಿಲ್ಲ. 

Team Samachara

ಇವೆಲ್ಲಾ ಕೆಲವೇ ವರ್ಷಗಳ ಹಿಂದಿನ ಕತೆ. ನಷ್ಟದಲ್ಲೇ ಮುಳುಗೇಳುತ್ತಿರುವ ಸರಕಾರಿ ಸ್ವಾಮ್ಯದ ಕಂಪನಿಗಳಿಗೆ ಅಪವಾದದಂತಿದ್ದ ಒಯಿಲ್ ಅಂಡ್ ನಾಚುರಲ್ ಗ್ಯಾಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಒಎನ್‌ಜಿಸಿ) ಕಂಪನಿ ಭರಪೂರ ಲಾಭದಲ್ಲಿತ್ತು. ಎಷ್ಟು ಅಂದರೆ ದೇಶದ ಅತ್ಯಂತ ಹೆಚ್ಚು ಲಾಭ ಗಳಿಸುವ ಸಾರ್ವಜನಿಕ ಕಂಪನಿ ಅದಾಗಿತ್ತು. ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಯಾರೂ ಈ ಕಂಪನಿಯ ಲಾಭದ ಸಮೀಪಕ್ಕೂ ಸುಳಿಯಲು ಸಾಧ್ಯವಿರಲಿಲ್ಲ. ಕಂಪನಿಗಿದ್ದ ಮೀಸಲು ನಿಧಿಯಂತೂ ಹಲವು ರಾಜ್ಯಗಳ ಬಜೆಟ್‌ ಮೊತ್ತವನ್ನು ದಾಟುವಂತಿತ್ತು. ಆದರೆ, ಆ ದಿನಗಳೆಲ್ಲಾ ಇವತ್ತು ನೆನಪು ಮಾತ್ರ.

2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರು. ಅದೇ ವರ್ಷ ‘ಮೋದಿ ಪ್ರಧಾನಿಯಾದರೆ ಅದು ಭಾರತಕ್ಕೆರಗಿದ ದುರಂತ’ ಎಂದಿದ್ದರು ಮಾಜಿ ಪ್ರಧಾನಿ, ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್‌ ಸಿಂಗ್‌. ಅವರ ಮಾತು ಎಷ್ಟರ ಮಟ್ಟಿಗೆ ಸತ್ಯಾವಾಯಿತು ಎಂಬುದನ್ನು ತಜ್ಞರೇ ಹೇಳಬೇಕು. ಆದರೆ. ಒಎನ್‌ಜಿಸಿ ಪಾಲಿಗಂತೂ ಮೋದಿ ಆಗಮನ ದುರಂತವನ್ನೇ ತಂದಿಟ್ಟಿತು. 2013-14ರಲ್ಲಿ 1.07 ಲಕ್ಷ ಕೋಟಿ ರೂಪಾಯಿ ಇದ್ದ ಕಂಪನಿಯ ‘ಮೀಸಲು ನಿಧಿ’ ಇವತ್ತು 10,127 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಈ ಹಣ ಇನ್ಯಾವಾಗ ಖರ್ಚಾಗಿ ಒಎನ್‌ಜಿಸಿ ಒಡಲು ಬರಿದಾಗುತ್ತೋ ಗೊತ್ತಿಲ್ಲ. ಇದರ ನಡುವೆ ಕಂಪನಿ 25 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲದಲ್ಲಿದೆ.

ನೆಹರೂ ಬಿತ್ತಿದ ಬೆಳೆ:

ಒಎನ್‌ಜಿಸಿ ಘಟಕದಲ್ಲಿ ನೆಹರೂ ಮತ್ತು ಅಂದಿನ ನೈಸರ್ಗಿಕ ಸಂಪನ್ಮೂಲ ಸಚಿವ ಎಂ.ಡಿ. ಮಾಳವಿಯ. 
ಒಎನ್‌ಜಿಸಿ ಘಟಕದಲ್ಲಿ ನೆಹರೂ ಮತ್ತು ಅಂದಿನ ನೈಸರ್ಗಿಕ ಸಂಪನ್ಮೂಲ ಸಚಿವ ಎಂ.ಡಿ. ಮಾಳವಿಯ. 
/ಒಎನ್‌ಜಿಸಿ

1955ರಲ್ಲಿ ‘ಆಯಿಲ್‌ ಆಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಒಎನ್‌ಜಿಸಿ)‘ ಎಂಬ ಸಂಸ್ಥೆಯನ್ನು ಹುಟ್ಟಿಹಾಕಿದ್ದರು ಅಂದಿನ ಪ್ರಧಾನಿ ಜವಹರ್‌ ಲಾಲ್‌ ನೆಹರೂ. ಈ ಸಂಸ್ಥೆ ಹುಟ್ಟಿದ್ದೇ ಒಂದು ದೊಡ್ಡ ಕಥೆ. ಇಂಥಹದ್ದೊಂದು ಸಂಸ್ಥೆ ಕಟ್ಟಲು ಅಂದಿನ ನೈಸರ್ಗಿಕ ಸಂಪನ್ಮೂಲ ಸಚಿವರನ್ನೇ ಅಧ್ಯಯನಕ್ಕೆಂದು ಹಲವು ದೇಶಗಳಿಗೆ ಕಳುಹಿಸಿದ್ದರು. ವಿದೇಶಗಳ ಸಂಸ್ಥೆಗಳನ್ನೆಲ್ಲಾ ನೋಡಿ, ಇಲ್ಲಿನ ಉದ್ಯೋಗಿಗಳಿಗೆ ವಿದೇಶದಲ್ಲಿ ತರಬೇತಿಗಳನ್ನು ನೀಡಿ ಸಂಸ್ಥೆ ಕಟ್ಟಲಾಯಿತು. ಮುಂದೆ ಸಂಸ್ಥೆಯನ್ನು ಶ್ರೀಮಂತಗೊಳಿಸುವ ಪ್ರಕ್ರಿಯೆ ಹಲವು ವರ್ಷಗಳ ಕಾಲ ನಡೆಯಿತು. ಪರಿಣಾಮ ಖಾಸಗಿ ಕಂಪನಿಗಳ ಕಣ್ಣು ಕುಕ್ಕುವಂತೆ ಎದ್ದು ನಿಂತಿತು ಸರಕಾರಿ ಸ್ವಾಮ್ಯದ ಒಎನ್‌ಜಿಸಿ.

1991ರಲ್ಲಿ ಕಂಪನಿ ವಿಶ್ವಬ್ಯಾಂಕ್‌ನಿಂದ 450 ಮಿಲಿಯನ್‌ ಡಾಲರ್‌ ಸಾಲ ಪಡೆದುಕೊಂಡಿತ್ತು. ಇದರ ನಡುವೆ ಕಂಪನಿಗೆ 1992-93ರಲ್ಲಿ ಪಿ. ವಿ. ನರಸಿಂಹ ರಾವ್‌ ಸರಕಾರ ತೈಲ ಮೂಲಗಳನ್ನು ಪತ್ತೆ ಹಚ್ಚಲು ಅವಕಾಶಗಳನ್ನು ನೀಡಿತು. ಅಲ್ಲಿಂದ ಕಂಪನಿ ನಾಗಾಲೋಟದಲ್ಲಿ ಬೆಳವಣಿಗೆ ಕಂಡಿತು. ದೇಶೀಯ ತೈಲ ಉತ್ಪಾದನೆಯ ಶೇಕಡಾ 70ರಷ್ಟು ಪಾಲನ್ನಂತೂ ಒಎನ್‌ಜಿಸಿಯೇ ಪೂರೈಕೆ ಮಾಡುವ ಹಂತಕ್ಕೆ ಬಂದು ನಿಂತಿತು.

ಇವೆಲ್ಲದರ ಒಟ್ಟು ಪರಿಣಾಮ 2013-14ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಕಂಪನಿ ಬಳಿಯಲ್ಲಿ 1.07 ಲಕ್ಷ ಕೋಟಿ ರೂಪಾಯಿ ಮೀಸಲು ನಿಧಿ ಇತ್ತು.

ಕರಗಿದ ಮೀಸಲು ನಿಧಿ:

ಆದರೆ ಮೋದಿ ಪ್ರಧಾನಿಯಾಗಿದ್ದೇ ತಡ ಮೀಸಲು ನಿಧಿ ಕರಗಲು ಆರಂಭಿಸಿತು. 2016-17ರಲ್ಲೊಮ್ಮೆ ಈ ಮೊತ್ತ 1.31 ಲಕ್ಷ ಕೋಟಿ ರೂಪಾಯಿಗೂ ಏರಿಕೆಯಾಗಿತ್ತು. ಆದರೆ ಇದು ಹೆಚ್ಚು ಸಮಯ ಉಳಿಯಲಿಲ್ಲ. ಅಗತ್ಯವಿಲ್ಲದ ಕಂಪನಿಗಳ ವಿಲೀನ, ಖರೀದಿ ಪ್ರಕ್ರಿಯೆಗಳು ನಡೆಯಿತು. ಕಂಪನಿ ನೋಡ ನೋಡುತ್ತಿದ್ದಂತೆ ಸಾಲದ ಸುಳಿಗೆ ಸಿಲುಕಿತು.

ಒಎನ್‌ಜಿಸಿಯ ಮೀಸಲು ನಿಧಿ (ಸಾವಿರ ಕೋಟಿ ರೂಪಾಯಿಗಳಲ್ಲಿ)
ಒಎನ್‌ಜಿಸಿಯ ಮೀಸಲು ನಿಧಿ (ಸಾವಿರ ಕೋಟಿ ರೂಪಾಯಿಗಳಲ್ಲಿ)
/ಸ್ಕ್ರಾಲ್‌

ಸಂಕಷ್ಟದ ದಿನಗಳು ಆರಂಭವಾದವು. ಕಳೆದ ನವೆಂಬರ್‌ನಲ್ಲಿ ಒಎನ್‌ಜಿಸಿ ಘಟಕಗಳಲ್ಲಿ ತಾನು ಹೊಂದಿದ್ದ ಶೇಕಡಾ 60 ಶೇರನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ತೈಲ ಸಚಿವಾಲಯ ನಿರ್ಧರಿಸಿತು. ಈ ಶೇರುಗಳನ್ನು ಕಂಪನಿಯೇ ಖರೀದಿ (ಶೇರು ಬೈಬ್ಯಾಕ್‌) ಮಾಡಬೇಕಾಗಿತ್ತು. ಒಂದೇ ವರ್ಷದಲ್ಲಿ ಕಂಪನಿಯ ಶೇಕಡಾ 90 ರಷ್ಟು ನಿಧಿ ಕರಗಿತು. ಪರಿಣಾಮ 2001ರ ನಂತರ ಇದೇ ಮೊದಲ ಬಾರಿಗೆ ಕಂಪನಿ ಅತೀ ಕಡಿಮೆ ಮೀಸಲು ನಿಧಿಯನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದೆ.

2014 - 15ರ ಮಧ್ಯದಲ್ಲೂ ಒಮ್ಮೆ ಇದೇ ರೀತಿ ಶೇಕಡಾ 74ರಷ್ಟು ಹಣವನ್ನು ಕಳೆದುಕೊಂಡಿತ್ತು. ಮೂಲ ಬಂಡವಾಳ ಹೂಡಿಕೆಗೆ ಇದನ್ನು ಬಳಸಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮೀಸಲು ನಿಧಿ ಲಾಭದಿಂದ ಬಂದ ಹಣವಾಗಿದ್ದು ಇದರಲ್ಲೇ ಶೇರುದಾರರಿಗೆ ಡಿವಿಡೆಂಡ್‌ ರೂಪದಲ್ಲಿ ಲಾಭವನ್ನು ಹಂಚಲಾಗುತ್ತದೆ. ಅದೇ ವರ್ಷ ಡಿವಿಡೆಂಡ್‌ ಹಂಚಿದ್ದರಿಂದ, ಜತೆಗೆ ಇದ್ದ ಮೀಸಲು ನಿಧಿಯನ್ನು ಬಂಡವಾಳ ಹೂಡಿಕೆಗೆ ಬಳಸಿದ್ದರಿಂದ ಕಂಪನಿ ತೀವ್ರ ಹಿನ್ನಡೆ ಅನುಭವಿಸಿತು. ಅದೇ ವರ್ಷ ಮೊದಲ ಬಾರಿಗೆ ಮೋದಿ ಆಪ್ತ ಮುಖೇಶ್‌ ಅಂಬಾನಿಯ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಭಾರತದ ಅತ್ಯಂತ ಹೆಚ್ಚಿನ ಲಾಭದಾಯಕ ಸಂಸ್ಥೆಯಾಗಿ ಮೂಡಿ ಬಂತು. 18,334 ಕೋಟಿ ರೂಪಾಯಿ ಆದಾಯದೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಒಎನ್‌ಜಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. 2014-15ರ ನಂತರ ಮತ್ತೆ ಮೀಸಲು ನಿಧಿಯನ್ನು ಮೊದಲಿನ ಸ್ಥಿತಿಗೆ ಮರಳಿ ತರಲಾಗಿತ್ತು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.

ಕಾರಣವೇನು?

ಹೀಗೆ ಯಾಕಾಯ್ತು ಅಂತ ಹುಡುಕಿದರೆ ಹಲವು ಕಾರಣಗಳು ಸಿಗುತ್ತವೆ. ಒಂದನೆಯದ್ದು ಡಿವಿಡೆಂಡ್‌. ಭಾರತದಲ್ಲೇ ಅತಿ ಹೆಚ್ಚು ಡಿವಿಡೆಂಡ್‌ ನೀಡುವ ಸರಕಾರಿ ಸ್ವಾಮ್ಯದ ಕಂಪನಿ ಒಎನ್‌ಜಿಸಿ. 2013 – 14ರಲ್ಲಿ ಕಂಪನಿ ಕಡೆಯಿಂದ 8,127 ಕೋಟಿ ರೂಪಾಯಿ ಲಾಭಾಂಶ ವಿತರಣೆ ಮಾಡಲಾಗಿತ್ತು. ಒಂದಷ್ಟು ಏರಿಕೆ ಇಳಿಕೆ ಕಂಡು 2017-18ರಲ್ಲಿ ಮತ್ತೆ 8,470 ಕೋಟಿ ರೂಪಾಯಿಗಳನ್ನು ಶೇರುದಾರರಿಗೆ ಹಂಚಲಾಗಿದೆ.

ಇದರ ಜತೆಗೆ ಸರಕಾರವೇ ಇಂಧನ ಸಬ್ಸಿಡಿಯ ಭಾರವನ್ನು ಹೊತ್ತುಕೊಳ್ಳುವಂತೆ ಕಂಪನಿಯ ಮೇಲೆ ಒತ್ತಡ ಹೇರಿದೆ. ಪರಿಣಾಮ ತೈಲ ಬೆಲೆ ಏರಿಕೆಯಾದಾಗಲೂ ಸಂಸ್ಕರಣಾ ಘಟಕಗಳಿಗೆ ಒಎನ್‌ಜಿಸಿ ಕಡಿಮೆ ಬೆಲೆಗೆ ತೈಲ ಮಾರಾಟ ಮಾಡಬೇಕಾಗಿ ಬಂದಿದೆ. 2014ರಲ್ಲಂತೂ ದಾಖಲೆಯ 56,384 ಕೋಟಿ ರೂಪಾಯಿ ಸಬ್ಸಿಡಿ ಪಾವತಿ ಮಾಡುವಂತೆ ಕಂಪನಿಗೆ ಸೂಚಿಸಲಾಗಿತ್ತು. 2013ಕ್ಕೆ ಹೋಲಿಸಿದರೆ ಈ ಮೊತ್ತ ಶೇಕಡಾ 14ರಷ್ಟು ಹೆಚ್ಚಾಗಿತ್ತು. 2015ರಲ್ಲಿ ಒಎನ್‌ಜಿಸಿ ಮತ್ತು ಆಯಿಲ್‌ ಇಂಡಿಯಾ ಎರಡೇ ಕಂಪನಿಗಳು ರಾಷ್ಟ್ರೀಯ ಸಬ್ಸಿಡಿ ಬಿಲ್‌ನ ಶೇಕಡಾ 40ರಷ್ಟು ಹಣವನ್ನು ಪಾವತಿಸಿದ್ದವು. ಇದು ಲಾಭ ಇಳಿಕೆಯಾಗಲು ಮತ್ತು ಮೀಸಲು ನಿಧಿ ಕರಗಲು ಮತ್ತೊಂದು ಕಾರಣ.

ಇಷ್ಟಲ್ಲದೆ ಈ ಬಾರಿ ಪೆಟ್ರೋಲ್‌ ದರ ಕಡಿತಕ್ಕೆ ನಿರ್ಧರಿಸಿದ್ದ ಕೇಂದ್ರ ಸರಕಾರ ಅದರ ಹೊರೆಯನ್ನೂ ಇದೇ ಕಂಪನಿಯ ಮೇಲೆ ಹಾಕಲು ಹೊರಟಿತ್ತು. ಆದರೆ ಇದಕ್ಕೆ ಕಂಪನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಒಎನ್‌ಜಿಸಿಯನ್ನು ಇದರಿಂದ ಹೊರಗಿಡಲಾಯಿತು. ಜೂನ್‌ನಲ್ಲಿ ಮಾತನಾಡಿದ್ದ ಕಂಪನಿ ಅಧ್ಯಕ್ಷ ಶಶಿ ಶಂಕರ್, ಕಂಪನಿಯಲ್ಲಿ ಈಗಾಗಲೇ ಎಚ್ಚರಿಕೆಯ ಗಂಟೆ ಮೊಳಗುತ್ತಿದೆ ಎಂದು ಎಚ್ಚರಿಸಿದ್ದರು.

ಈ ಹಿಂದೆ ಒಎನ್‌ಜಿಸಿಯ ಮೀಸಲು ನಿಧಿ ಕಡಿಮೆಯಾಗಲು ಸಬ್ಸಿಡಿ ಮತ್ತು ಡಿವಿಡೆಂಡ್ ಕಾರಣವಾಗಿತ್ತು. ಆದರೆ 2017-18ರಲ್ಲೇಕೆ ಶೇಕಡಾ 92ರಷ್ಟು ಮೀಸಲು ನಿಧಿ ಕಡಿಮೆಯಾಯಿತು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾರಣವಾಗಿದ್ದು ಮೋದಿ ಸರಕಾರದ ಒಂದು ಕೆಟ್ಟ ನಡೆ. ತಾವೇ ಮುಖ್ಯಮಂತ್ರಿಯಾಗಿದ್ದ ಗುಜರಾತ್‌ನ ‘ಗುಜರಾತ್‌ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್‌’ನನ್ನು ಸಾಲದ ಸುಳಿಯಿಂದ ಮೇಲೆತ್ತಲು ಮತ್ತು ‘ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌’ನಲ್ಲಿರುವ ಸರಕಾರದ ಶೇರನ್ನು ಖರೀದಿ ಮಾಡುವಂತೆ ಒಎನ್‌ಜಿಸಿಗೆ ಅನಗತ್ಯ ಒತ್ತಡ ಹೇರಿತು.

Also read: 'ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್': ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ

ಕೊನೆಗೆ ಅನಿವಾರ್ಯವಾಗಿ 2017ರ ಆಗಸ್ಟ್‌ನಲ್ಲಿ 8 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿ ಕೃಷ್ಣಾ-ಗೋದಾವರಿ ಜಲಾನಯನ ಪ್ರದೇಶದಲ್ಲಿದ್ದ ಗುಜರಾತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಗ್ಯಾಸ್‌ ಘಟಕದ ಶೇಕಡಾ 80 ಶೇರುಗಳನ್ನು ಒಎನ್‌ಜಿಸಿ ಖರಿದೀಸಿತು. 2017-18ರಲ್ಲಿ ಇದಕ್ಕಾಗಿ ಕಂಪನಿ 7,480 ಕೋಟಿ ರುಪಾಯಿಗಳನ್ನು ಪಾವತಿ ಮಾಡಿತು.

ಕೃಷ್ಣಾ-ಗೋದಾವರಿ ನದಿ ಪಾತ್ರದಲ್ಲಿನ ಈ ಘಟಕವನ್ನು 2003ರಲ್ಲಿ ಹರಾಜು ಹಾಕಲಾಗಿತ್ತು. ಇದನ್ನು ಖರೀದಿಸಿದ ಗುಜರಾತ್‌ ಕಾರ್ಪೊರೇಷನ್‌ ಇಲ್ಲಿನ ತೈಲ ಮೂಲವನ್ನು ಪತ್ತೆ ಹಚ್ಚಿದ್ದು ಶತಮಾನದ ಸಾಧನೆ ಎಂದು ಬಿಂಬಿಸಿಕೊಂಡಿತ್ತು. ಹೀಗೆ ಹೇಳಿದ್ದರೂ 2015ರವೆರೆಗೆ ಇಲ್ಲಿ ಯಾವುದೇ ವಾಣಿಜ್ಯ ಬಳಕೆಯ ಉತ್ಪಾದನೆ ಆರಂಭವಾಗಿರಲಿಲ್ಲ. ಬದಲಿಗೆ ಅಷ್ಟೊತ್ತಿಗೆ ಕಾರ್ಪೊರೇಷನ್‌ 19,576 ಕೋಟಿ ರೂಪಾಯಿ ಸಾಲದ ಭಾರವನ್ನು ಹೊತ್ತುಕೊಂಡಿತ್ತು. ಇದಕ್ಕಾಗಿ ವರ್ಷಕ್ಕೆ ಕಟ್ಟಬೇಕಾಗಿದ್ದ ಬಡ್ಡಿಯೇ 1,804.06 ಕೋಟಿ ರೂಪಾಯಿ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಕಂಪನಿಯನ್ನು ಸಾಲದ ಸುಳಿಗೆ ಸುಳಿಗೆ ತಳ್ಳಿ ದೆಹಲಿ ದರ್ಬಾರ್‌ಗೆ ಬಂದ ಮೋದಿ ಬೇರೊಂದು ಸರಕಾರಿ ಕಂಪನಿ ಮೂಲಕ ಅದನ್ನು ಖರೀದಿಸುವಂತೆ ಮಾಡಿದರು. ಅಲ್ಲಿ ಗುಜರಾತ್‌ ಕಂಪನಿ ಸಾಲದ ಸುಳಿಯಲ್ಲಿ ಸಿಲುಕಿತ್ತು. ಈಗ ಇಲ್ಲಿ ಒಎನ್‌ಜಿಸಿಯ ಸರದಿ.

ಇದೆಲ್ಲಾ ನಡೆದ ನಂತರ ಹಿಂದೂಸ್ಥಾನ ಪೆಟ್ರೋಲಿಯಂ ಭಾರವನ್ನು ಒಎನ್‌ಜಿಸಿ ಮೇಲೆ ಹಾಕಲಾಯಿತು. ಕಂಪನಿಯಲ್ಲಿ ಸರಕಾರ ಹೊಂದಿದ್ದ ಶೇಕಡಾ 51.11 ಶೇರನ್ನು ಖರೀದಿಸುವಂತೆ ಕಂಪನಿಗೆ ಸೂಚಿಸಲಾಯಿತು. ಹಣಕಾಸು ಇಲಾಖೆಯ ಹಣಕಾಸಿನ ಕೊರತೆಯನ್ನು ನೀಗಿಸಲು ಹೀಗೊಂದು ತೀರ್ಮಾನ ತೆಗೆದುಕೊಳ್ಳಲಾಯ್ತು. ವಿಶೇಷ ಅಂದ್ರೆ ಪ್ರತಿ ಶೇರಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಶೇಕಡಾ 14ರಷ್ಟು ಹೆಚ್ಚುವರಿ ಹಣ ನೀಡಿ 36,915 ಕೋಟಿ ರೂಪಾಯಿ ಮೊತ್ತದ ಪ್ರಕ್ರಿಯೆ ನಡೆಯಿತು.

ಇನ್ನೂ ವಿಚಿತ್ರವೆಂದರೆ, ಇದಕ್ಕೆ ನೀಡಲು ಒಎನ್‌ಜಿಸಿ ಬಳಿ ಹಣವಿರಲಿಲ್ಲ, ಇದಕ್ಕಾಗಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಂದ 35 ಸಾವಿರ ಕೋಟಿ ರೂಪಾಯಿ ಕಡಿಮೆ ಅವಧಿಯ ಸಾಲವನ್ನು ಕಂಪನಿ ಪಡೆದುಕೊಂಡಿತು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ 7,340 ಕೋಟಿ ರೂ., ಬ್ಯಾಂಕ್‌ ಆಫ್‌ ಇಂಡಿಯಾದಿಂದ 4,460 ಕೋಟಿ ರೂ, ಪಿಎನ್‌ಬಿ ಬ್ಯಾಂಕ್‌ನಿಂದ 10,600 ಕೋಟಿ ರೂ. ಮತ್ತು ಖಾಸಗಿ ಬ್ಯಾಂಕ್‌ಗಳಾದ ಎಕ್ಸ್‌ಪೋರ್ಟ್‌ ಇಂಪೋರ್ಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ 1,600 ಕೋಟಿ ರೂ., ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 4,000 ಕೋಟಿ ರೂ., ಐಸಿಐಸಿಐ ಬ್ಯಾಂಕ್‌ನಿಂದ 4,000 ಕೋಟಿ ರೂ., ಆಕ್ಸಿಸ್‌ ಬ್ಯಾಂಕ್‌ನಿಂದ 3,000 ಕೋಟಿ ರೂ., ಸಾಲ ಪಡೆಯಿತು. ಹೀಗೆ 2017-18ರ ಹೊತ್ತಿಗೆ ಪ್ರಧಾನಿ ಮೋದಿ ತೀರ್ಮಾನದಿಂದಾಗಿ ಒಎನ್‌ಜಿಸಿ ಬರೋಬ್ಬರಿ 25,592.2 ಕೋಟಿ ರೂಪಾಯಿ ಸಾಲದಲ್ಲಿದೆ.

ಇದೀಗ ಕಂಪನಿಗೆ ಸಾಲ ಕಟ್ಟಲು ದುಡ್ಡಿಲ್ಲದಾಗಿದೆ. ಇದಕ್ಕಾಗಿ ‘ಆಯಿಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ’ ಮತ್ತು ‘ಜಿಎಐಎಲ್‌’ನಲ್ಲಿರುವ ತನ್ನ ಶೇರುಗಳ ಮಾರಾಟಕ್ಕೆ ಕಂಪನಿ ಮುಂದಾಗಿದೆ. ಎರಡೂ ಕಂಪನಿಗಳಲ್ಲಿ ಒಎನ್‌ಜಿಸಿಗೆ ಕ್ರಮವಾಗಿ ಶೇಕಡಾ 13.77 ಮತ್ತು 4.86ರಷ್ಟು ಶೇರುಗಳಿವೆ. ಇದನ್ನು ಮತ್ತೊಂದು ಸರಕಾರಿ ಸ್ವಾಮ್ಯದ ‘ಎಲ್‌ಐಸಿ’ಗೆ ಮಾರಾಟ ಮಾಡಲು ಮುಂದಾಗಿದೆ. ಆದರೆ ಎಲ್‌ಐಸಿ ಮಾರುಕಟ್ಟೆ ಮೌಲ್ಯದಿಂದ ಶೇಕಡಾ 10ರಷ್ಟು ರಿಯಾಯಿತಿ ದರದಲ್ಲಿ ಮಾತ್ರ ಶೇರುಗಳನ್ನು ಖರೀದಿಸಲು ಮುಂದಾಗಿದೆ. ಇದನ್ನು ‘ಒಎನ್‌ಜಿಸಿ’ ನಿರಾಕರಿಸಿದ್ದು ಶೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗಿದೆ. ಆದರೆ ಇದಕ್ಕೆ ತಾಂತ್ರಿಕ ಸಮಸ್ಯೆಗಳಿದ್ದು ಅವುಗಳ ನಿವಾರಣೆಯಾಗಬೇಕಾಗಿದೆ. ಜತೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಹಣ ಒಂದೇ ಹಂತದಲ್ಲಿ ಸಿಗುವುದಿಲ್ಲ.

ಇದೇ ವೇಳೆ ಒಎನ್‌ಜಿಸಿ ಸಂಸ್ಥೆ ‘ಒಪಿಎಎಲ್‌’ (ಒಎನ್‌ಜಿಸಿ ಪೆಟ್ರೋ ಅಡಿಷನ್‌ ಲಿ.,) ನಲ್ಲಿರುವ ತನ್ನ ಶೇರುಗಳ ಮಾರಾಟಕ್ಕೂ ಮುಂದಾಗಿದೆ. ಆದರೆ ಇದಕ್ಕೆ ಸಿಬ್ಬಂದಿಗಳ ಒಕ್ಕೂಟಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಒಎನ್‌ಜಿಸಿ ನೌಕರರ ಸಂಘದ ಸಾಂಕೇತಿಕ ಪ್ರತಿಭಟನೆ. 
ಒಎನ್‌ಜಿಸಿ ನೌಕರರ ಸಂಘದ ಸಾಂಕೇತಿಕ ಪ್ರತಿಭಟನೆ. 

ತಜ್ಞರ ಪ್ರಕಾರ, ತೈಲ ಉದ್ಯಮವೇ ಆಕಸ್ಮಿಕ ಅಪಾಯಗಳನ್ನು ಅವಲಂಬಿಸಿರುವ ಉದ್ಯಮ. ಈ ಕಾರಣಕ್ಕಾಗಿ ದೊಡ್ಡ ಮೊತ್ತದ ಮೀಸಲು ನಿಧಿಯನ್ನು ಎತ್ತಿಟ್ಟಿರುತ್ತಾರೆ. ಅಂಥಹದ್ದರಲ್ಲಿ ಈ ರೀತಿಯ ಸಾಲದ ಹೊರೆಯನ್ನು ಇಟ್ಟುಕೊಂಡು ವ್ಯವಹಾರ ನಡೆಸುವುದು ಇನ್ನೂ ಅಪಾಯಕಾರಿ. ಇದರ ಜತೆಗೆ ತೈಲ ಮತ್ತು ಗ್ಯಾಸ್‌ ಪರಿಶೋಧನೆ ಯೋಜನೆಗೆ ಒಎನ್‌ಜಿಸಿ ಕೈ ಹಾಕಿದೆ. ಇದು ಒಎನ್‌ಜಿಸಿಯ ಬೃಹತ್‌ ಯೋಜನೆಯಾಗಿದ್ದು ಇದಕ್ಕಾಗಿ ಮುಂದಿನ ನಾಲ್ಕು ವರ್ಷ ವರ್ಷಕ್ಕೆ 35 ಸಾವಿರ ಕೋಟಿಯಂತೆ ಕಂಪನಿ ಹೂಡಿಕೆ ಮಾಡಬೇಕಾಗಿದೆ. ಆದರೆ ಅದಕ್ಕೆ ಕಂಪನಿ ಬಳಿ ಹಣವಿಲ್ಲ.

ಇತ್ತೀಚೆಗೆ ಇದೇ ಮೋದಿ ಸರಕಾರ ತೈಲ ಮತ್ತು ಗ್ಯಾಸ್‌ ಪರಿಶೋಧನಾ ಬ್ಲಾಕ್‌ಗಳ ಮೊದಲ ಹಂತದ ಹರಾಜು ಹಾಕಿತ್ತು. 55 ಬ್ಲಾಕ್‌ಗಳನ್ನು ಹರಾಜಿಗೆ ಇಡಲಾಗಿತ್ತು. ಇದರಲ್ಲಿ ‘ಅನಿಲ್ ಅಗರ್ವಾಲ್‌ ವೇದಾಂತ ರಿಸೋರ್ಸಸ್‌’ 44 ಬ್ಲಾಕ್‌ಗಳನ್ನು ಬಾಚಿಕೊಂಡರೆ ಒಎನ್‌ಜಿಸಿಗೆ ಸಿಕ್ಕಿದ್ದು ಕೇವಲ ಎರಡು. ಇದಕ್ಕೆ ಕಾರಣ ಕಂಪನಿ ಬಳಿಯಲ್ಲಿ ಹಣವಿಲ್ಲದಿರುವುದು.

ಒಎನ್‌ಜಿಸಿ 2001-02ರಿಂದ ಯಾವತ್ತೂ ಸಾಲ ಹೊಂದಿಲ್ಲ. ಆದರೆ ಈಗ 18 ವರ್ಷಗಳ ನಂತರ ಮೊದಲ ಬಾರಿಗೆ ಸಾಲದ ಸುಳಿಯಲ್ಲಿ ಸಿಲುಕಿದೆ. “ಕಂಪನಿಯ ಮೀಸಲು ನಿಧಿಯನ್ನು ಬೆಳೆಸಬಹುದು. ಆದರೆ ಯಾವುದಕ್ಕೂ ಕಂಪನಿ ಮೊದಲು ಸಾಲದಿಂದ ಹೊರಬರಬೇಕು,” ಎನ್ನುತ್ತಾರೆ ಕಂಪನಿಯ ಅಧಿಕಾರಿಯೊಬ್ಬರು.

ಇದೇ ಸಂದರ್ಭದಲ್ಲಿ ಕಂಪನಿಯ ನೌಕರರ ಸಂಘಗಳು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಸರಕಾರದ ನಿರಂತರ ಮಧ್ಯ ಪ್ರವೇಶ ನಗದು ಶ್ರೀಮಂತವಾಗಿದ್ದ ಕಂಪನಿಯನ್ನು ಭಾರೀ ಸಾಲದ ಸುಳಿಗೆ ತಳ್ಳಿದೆ ಎಂದು ದೂರಿದ್ದಾರೆ. ಅಧಿಕಾರಿಗಳು ಕೂಡ ಶೇರು ಬೈ ಬ್ಯಾಕ್‌ನಿಂದ ಕಂಪನಿಯನ್ನು ಹೊರಗಿಡುವಂತೆ ಕೇಳಿಕೊಂಡಿದ್ದರು. ಆದರೆ ಯಾವುದಕ್ಕೂ ಸರಕಾರ ತಲೆ ಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ಇದೀಗ ನೌಕರರ ಯೂನಿಯನ್‌ಗಳೇ ಒಎನ್‌ಜಿಸಿ ನೀತಿ ನಿರ್ದಾರಗಳಲ್ಲಿ ತಲೆ ಹಾಕದಂತೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮತ್ತು ಕಂಪನಿಯನ್ನು ಮೊದಲಿನ ಹಾದಿಯಲ್ಲಿ ತರಲು ಸೂಕ್ತ ತೀರ್ಮಾನಗಳು ಅಗತ್ಯವಾಗಿವೆ. ಮುಂದಿನ ದಿನಗಳಲ್ಲಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಿದ್ದರೂ ನಮಗೆ ಮುಂಚಿತವಾಗಿ ತಿಳಿಸಬೇಕು ಎಂದು ಈ ಯೂನಿಯನ್‌ಗಳು ಸರಕಾರಕ್ಕೆ ಷರತ್ತು ವಿಧಿಸಿವೆ.

ಅಂದಾಹಾಗೆ, ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ತರಹದ ಸಂಘ ಪರಿವಾರ ಹಿನ್ನೆಲೆಯ ಹಲವರು ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಆದರೆ ಇವರು ಯಾವತ್ತೂ ಕಂಪನಿ ಬಗ್ಗೆ ಆಸಕ್ತಿ ತಾಳಿದ ಉದಾಹರಣೆಗಳಿಲ್ಲ. ಇವೆಲ್ಲದರ ಒಟ್ಟು ಪರಿಣಾಮ ಒಎನ್‌ಜಿಸಿ ಎಂಬ ಶ್ರೀಮಂತ ಸಂಸ್ಥೆ ಸಂಕಷ್ಟದಲ್ಲಿದೆ.

ಮಾಹಿತಿ ಕೃಪೆ: ನ್ಯೂಸ್‌ಕ್ಲಿಕ್‌

Join Samachara Official. CLICK HERE