samachara
www.samachara.com
‘ಟ್ರಾನ್ಸ್‌ಪ್ಲಾಂಟ್‌’: ಮೆಡಿಕಲ್ ಮಾಫಿಯಾದ ಹೊಸ ಅವತಾರ!
ದೇಶ

‘ಟ್ರಾನ್ಸ್‌ಪ್ಲಾಂಟ್‌’: ಮೆಡಿಕಲ್ ಮಾಫಿಯಾದ ಹೊಸ ಅವತಾರ!

ಗುಣಮಟ್ಟವಿಲ್ಲದ, ದೋಷಪೂರಿತ ಉಪಕರಣಗಳಿಂದ ರೋಗಿಗಳ ತೊಂದರೆಗೆ ಸಿಲುಕುತ್ತಿದ್ದಾರೆ. ಕೆಲವೊಮ್ಮೆ ಸಾವಿಗೂ ಗುರಿಯಾಗುತ್ತಿದ್ದಾರೆ. ಆದರೆ ಇದರ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದಕ್ಕೆ 2014ಕ್ಕೆ ಮೊದಲು ಯಾವುದೇ ಸರಿಯಾದ ಸಂಸ್ಥೆಗಳು ಇರಲಿಲ್ಲ.

Team Samachara

ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಾರದ ದಾಖಲಾಗಿದ್ದು ಇದೇ ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ. ಅದಕ್ಕೂ ಮೊದಲು ಮಣಿಪಾಲದ ಕೆಎಂಸಿ, ವೈಟ್‌ಫೀಲ್ಡ್‌ನಲ್ಲಿರುವ ಸತ್ಯ ಸಾಯಿ ಆಸ್ಪತ್ರೆಗಳಲ್ಲಿ ಅವರನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದರು.

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯ ಎಂದು ಅಲ್ಲಿನ ವೈದ್ಯರು ಒತ್ತಿ ಹೇಳಿದ್ದರು. ಸತ್ಯ ಸಾಯಿ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ಶಸ್ತ್ರಚಿಕಿತ್ಸೆ ಬೇಡ ಎಂದಿದ್ದರು ವೈದ್ಯರು. ಹೀಗೆ, ಒಂದೇ ವೃತ್ತಿಯ ಇಬ್ಬರು ವೃತ್ತಿಪರರು ತಿದ್ವಿರುದ್ದ ಹೇಳಿಕೆಯಿಂದ ಕುಟುಂಬ ಗೊಂದಲಕ್ಕೆ ಈಡಾಯಿತು. ಕೊನೆಗೆ, ಖ್ಯಾತ ವೈದ್ಯ ಡಾ. ಮಂಜುನಾಥ್‌ ನೇತೃತ್ವದ ಜಯದೇವ ಆಸ್ಪತ್ರೆಗೆ ಶಾರದರನ್ನು ಕರೆತಂದರು.

ಡಾ. ಮಂಜುನಾಥ್ ನಿರ್ದೇಶದ ಮೇರೆಗೆ ಡಾ. ಶ್ರೀನಿವಾಸ್ ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಿದರು. “ದಿಲ್ಲಿಯಿಂದ ಉಪಕರಣ ತರಿಸಬೇಕು, ಅದಕ್ಕೆ 2.08 ಲಕ್ಷ ಖರ್ಚಾಗುತ್ತದೆ. ಅದರ ಶಿಪ್ಪಿಂಗ್ ಚಾರ್ಜ್‌ 40 ಸಾವಿರ, ಉಪಕರಣ ಅಳವಡಿಸಲು ಬರುವ ಪರಿಣಿತ ವೈದ್ಯರಿಗೆ 30 ಸಾವಿರ, ಆಸ್ಪತ್ರೆ ಬಿಲ್ 10 ಸಾವಿರ,” ಹೀಗೆ ಒಟ್ಟು 2.87,861 ಲಕ್ಷ ರೂಪಾಯಿಯ ಕೊಟೇಶನ್ ಕೊಟ್ಟರು ಡಾ. ಶ್ರೀನಿವಾಸ್.

ಕುಟುಂಬ ಹಣ ಹೊಂದಿಸಿಕೊಂಡು ಶಸ್ತ್ರ ಚಿಕಿತ್ಸೆಗೆ ಅಣಿಯಾದರು. ನಾಳೆ ಆಪರೇಷನ್ ಇರುತ್ತೆ ಎಂದಿದ್ದ ವೈದ್ಯರು ಹಿಂದಿನ ದಿನ ಎಂಡೋಸ್ಕೂಪಿಗೆ ಎಂದು ಬೆಳಗ್ಗೆ 11 ಗಂಟೆಗೆ ಕರೆದುಕೊಂಡು ಹೋದರು ಶಾರದರನ್ನು. ಅಷ್ಟೆ, ಅಲ್ಲಿಂದ ಮುಂದಿನ 20 ಗಂಟೆಗಳ ಅವಧಿಯಲ್ಲಿ ಶಾರದ ಹೊರಬಂದಿದ್ದ ಹೆಣವಾಗಿ. “ಉಪಕರಣ ಕೈ ಕೊಟ್ಟಿತು. ಇವರ ಹೃದಯಕ್ಕೆ ಅದು ಸರಿ ಬರಲಿಲ್ಲ. ನಮ್ಮನ್ನು ಕ್ಷಮಿಸಿ ಬಿಡಿ,’’ ಎಂದು ಡಾ. ಶ್ರೀನಿವಾಸ್ ಜಯದೇವ ಹೃದ್ರೋಗ ಆಸ್ಪತ್ರೆಯ ಒಂದನೇ ಮಹಡಿಯಲ್ಲಿರುವ ಐಸಿಯು ಮುಂದೆ ಅವಲತ್ತುಕೊಂಡರು.

ಶಾರದ ಶಸ್ತ್ರಚಿಕಿತ್ಸೆಗೆ ಜಯದೇವ ಆಸ್ಪತ್ರೆಯಲ್ಲಿ ನೀಡಿದ ಕೊಟೇಶನ್. 
ಶಾರದ ಶಸ್ತ್ರಚಿಕಿತ್ಸೆಗೆ ಜಯದೇವ ಆಸ್ಪತ್ರೆಯಲ್ಲಿ ನೀಡಿದ ಕೊಟೇಶನ್. 

ಇವತ್ತಿಗೂ ಶಾರದ ಕುಟುಂಬಕ್ಕೆ ಅವರ ಸಾವು ಯಾಕಾಯಿತು? ಎಲ್ಲಿ ಸಮಸ್ಯೆಯಾಯಿತು? ಅದಕ್ಕೆ ಯಾರು ಹೊಣೆ? ಎಂಬ ಬಗ್ಗೆ ಚಿಕ್ಕ ಸುಳಿವೂ ಕೂಡ ಸಿಕ್ಕಿಲ್ಲ.

ಸ್ಥಳೀಯ ವೈದ್ಯಕೀಯ ವಿಯಷವೊಂದು ಹೀಗಿರುವಾಗಲೇ, ಪನಾಮಾ ಪೇಪರ್ಸ್‌, ಪ್ಯಾರಡೈಸ್‌ ಪೇಪರ್ಸ್‌ನಂತ ಬೆಚ್ಚಿ ಬೀಳಿಸುವ ತನಿಖಾ ವರದಿಗಳನ್ನು ಹೊರ ತಂದಿದ್ದ ಪತ್ರಕರ್ತರ ಒಕ್ಕೂಟ ‘ಐಸಿಐಜೆ’, ವೈದ್ಯಕೀಯ ಉಪಕರಣಗಳ ಬಗ್ಗೆ ತನಿಖೆಯೊಂದನ್ನು ಹೊರಗೆಡವಿದೆ. 36 ದೇಶಗಳ 100 ಪತ್ರಕರ್ತರು ಸೇರಿ ಈ ವರದಿಯನ್ನು ಹೊರ ತಂದಿದ್ದಾರೆ. ಬಿಬಿಸಿ, ದಿ ಗಾರ್ಡಿಯನ್‌, ಎಪಿ ಸೇರಿದಂತೆ ಪ್ರಖ್ಯಾತ ಮಾಧ್ಯಮ ಸಂಸ್ಥೆಗಳು ಇದರಲ್ಲಿ ಭಾಗವಹಿಸಿವೆ. ಭಾರತದಿಂದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಇದರಲ್ಲಿ ಪಾಲುದಾರ ಸಂಸ್ಥೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವನ್ನು ಗುರಿಯಾಗಿಸಿಕೊಂಡು ಪತ್ರಿಕೆ ನಡೆಸಿದ ತನಿಖಾ ವರದಿಯ ಸಾರಾಂಶ ಇಲ್ಲಿ ಕಟ್ಟಿಕೊಟ್ಟಿದ್ದೇವೆ. ನೀವೆಲ್ಲಾದರೂ ‘ಟ್ರಾನ್ಸ್‌ಪ್ಲಾಂಟ್‌’ ಹೆಸರಿನಲ್ಲಿ ಮೆಡಿಕಲ್ ಮಾಫಿಯಾದ ಹೊಸ ಹಣ ಗಳಿಕೆಯ ಮಾರ್ಗದಿಂದ ವಂಚನೆಗೆ ಒಳಗಾಗಿದ್ದರೆ, ಕನಿಷ್ಟ ಅದರ ಅಂತರಂಗ ಮಾಹಿತಿ ಏನು ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.

‘ಎಂಡಿಎಇ’:

ವೈದ್ಯಕೀಯ ಕ್ಷೇತ್ರದ ಸುದೀರ್ಘ ಇತಿಹಾಸದಲ್ಲಿ ವೈದ್ಯಕೀಯ ಉಪಕರಣವೊಂದು ರೋಗಿಗೆ ಸಮಸ್ಯೆ ನೀಡಿದ ಬಗ್ಗೆ ವರದಿಯಾಗಿದ್ದೇ ಕಡಿಮೆ. ಭಾರತದಲ್ಲಿ ಈ ಸಂಬಂಧ ಸಣ್ಣ ಪ್ರಯತ್ನವೊಂದು 2014ರಲ್ಲಿ ಆರಂಭವಾಯಿತು. ವಿಪರ್ಯಾಸವೆಂದರೆ ಈ ವರದಿಗಳು ಗಾಝಿಯಾಬಾದ್‌ನಲ್ಲಿರುವ ಸರಕಾರಿ ಕಚೇರಿಯ ಕಂಪ್ಯೂಟರ್‌ಗಳನ್ನು ಹೋಗಿ ಸೇರಿಕೊಂಡಿತೇ ಹೊರತು ಅಲ್ಲಿಂದ ಹೊರಗೆ ಬರಲಿಲ್ಲ. ದೂರುಗಳು ಅತ್ಯಂತ ಗಂಭೀರ ಸ್ವರೂಪದ್ದಾದರೂ ಸರಕಾರ ಇದನ್ನು ಬಹಿರಂಗಗೊಳಿಸುವ ಪ್ರಯತ್ನ ಮಾಡಲಿಲ್ಲ.

ಯಾವುದೇ ಒಂದು ವೈದ್ಯಕೀಯ ಉಪಕರಣ ಅಥವಾ ಸಲಕರಣೆ ಎಷ್ಟರ ಮಟ್ಟಿಗೆ ಸಮಸ್ಯೆ ನೀಡುತ್ತಿದೆ, ಮುಕ್ತ ಮಾರುಕಟ್ಟೆ ಬಿಡುಗಡೆ ಮಾಡಬಹುದೇ ಎಂಬುದನ್ನು ಮೆಡಿಕಲ್‌ ಡಿವೈಸ್‌ ಅಡ್ವರ್ಸ್‌ ಇವೆಂಟ್‌ (ಎಂಡಿಎಇ) ಎಂದು ಕರೆಯಲಾಗುವ ವರದಿ ಹೇಳುತ್ತದೆ. ಇದು ತುಂಬಾ ಸೂಕ್ಷ್ಮವಾದ ವರದಿಯಾಗಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಸಲಕರಣೆ ಅಥವಾ ಉಪಕರಣ ಮಾರುಕಟ್ಟೆಗೆ ಬರುತ್ತದೆ.

ಇವತ್ತಿಗೆ ವೈದ್ಯಕೀಯ ಉಪಕರಣಗಳು ಎನ್ನುವುದು ಭಾರತದಲ್ಲಿ ಸುಮಾರು 35,000 ಕೋಟಿ ರೂಪಾಯಿಗಳ ಬೃಹತ್‌ ಮಾರುಕಟ್ಟೆ. ಈ ಉದ್ಯಮದ ಆಳದಲ್ಲಿ ಏನೇನು ನಡೆಯುತ್ತಿದೆ ಎಂಬುದರ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ವೈದ್ಯಕೀಯ ಉಪಕರಣಗಳ ಕುರಿತು ‘ಇಂಡಿಯನ್‌ ಎಕ್ಸೆಪ್ರೆಸ್‌’ ತನಿಖೆಗೆ ಇಳಿಯಿತು. ಎಂಡಿಎಇ ವರದಿಗಳನ್ನು ಪರಿಶೀಲನೆಗೆ ಒಳಪಡಿಸಿತು. ಈ ಸಂದರ್ಭದಲ್ಲಿ ಹಲವು ಅಚ್ಚರಿಯ ಅಂಶಗಳು ಬಯಲಾಗಿವೆ.

ವೈದ್ಯಕೀಯ ಉಪಕರಣಗಳು ಕೈಕೊಟ್ಟಿವೆ ಎಂದು 2014ರಲ್ಲಿ 40 ಪ್ರಕರಣಗಳು ದಾಖಲಾದರೆ ಈ ವರ್ಷವೊಂದರಲ್ಲೇ 556 ಪ್ರಕರಣಗಳು ದಾಖಲಾಗಿವೆ. ಡಜನ್‌ಗು ಹೆಚ್ಚು ಜನ ಸ್ಟೆಂಟ್‌ಗಳನ್ನು ಹಾಕಿದ ನಂತರ ಸಾವಿಗೂ ಗುರಿಯಾಗಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಇಂಡಿಯನ್‌ ಫಾರ್ಮಕೊಪಿಯಾ ಕಮಿಷನ್‌ (ಐಪಿಸಿ) ನೀಡುತ್ತಿದೆ.

‘ಐಪಿಸಿ’ ಎಂಬುದು ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಔಷಧಗಳಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕೆಲಸ ಮಾಡುತ್ತದೆ. ದೇಶದಾದ್ಯಂತ ಎಂಡಿಎಂಸಿ (ಅಡ್ವರ್ಸ್‌ ಇವೆಂಟ್‌ ಮಾನಿಟರಿಂಗ್‌ ಸೆಂಟರ್‌) ಕೇಂದ್ರಗಳಿದ್ದು ಇವುಗಳಿಂದ ಮಾಹಿತಿಯನ್ನು ತರಿಸಿಕೊಂಡು ವರದಿಗಳನ್ನು ‘ಐಪಿಸಿ’ ಸಿದ್ದಪಡಿಸುತ್ತದೆ. ಇದಲ್ಲದೆ ಮೂರು ವರ್ಷಗಳ ಹಿಂದೆ ವೈದ್ಯಕೀಯ ಉಪಕರಣಗಳ ಅಪಾಯ ಮತ್ತು ಅವುಗಳ ಸುರಕ್ಷತೆಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲು ಆರಂಭಿಸಿದ ಜಾಗೃತ ಯೋಜನೆಯ ಸಂಯೋಜಕ ಕೇಂದ್ರವಾಗಿಯೂ ಇದು ಕೆಲಸ ಮಾಡುತ್ತಿದೆ.

ಈ ವರದಿಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ದಾಖಲಾದ ಮಾಹಿತಿಗಳ ಸ್ಯಾಂಪಲ್‌ಗಳು ಈ ಕೆಳಗಿನಂತಿವೆ.

  • 2014ರಲ್ಲಿ ಮೊದಲ ಬಾರಿಗೆ ಸಂಸ್ಥೆಯನ್ನು ಆರಂಭಿಸಿದ ನಂತರ ವೈದ್ಯಕೀಯ ಉಪಕರಣಗಳು ಪ್ರತಿಕೂಲ ಪರಿಣಾಮ ಬೀರಿದ 903 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 325 ಕಾರ್ಡಿಯಿಕ್‌ ಸ್ಟಂಟ್‌, 145 ಆರ್ಥೋಪೆಡಿಕ್‌ ಇಂಪ್ಲಾಂಟ್ಸ್‌, 83 ಐಯುಸಿಡಿ (ಇಂಟ್ರಾಯುಟೆರಿನ್‌ ಕಾಂಟ್ರಾಸೆಪ್ಟಿವ್‌ ಡಿವೈಸ್‌ - ಗರ್ಭನಿರೋಧಕಗಳು), 58 ಇಂಟ್ರಾವೆನಸ್‌ ಕ್ಯಾನುವಲ್ಸ್‌, 21 ಕ್ಯಾಥೆಟೆರ್ಸ್‌ ಮತ್ತು 271 ಇತರ ವೈದ್ಯಕೀಯ ಉಪಕರಣಗಳು ಪ್ರತಿಕೂಲ ಪರಿಣಾಮ ಬೀರಿದ್ದು ವರದಿಯಾಗಿದೆ.
  • ಈ ದೂರುಗಳು ಬಂದ ತಕ್ಷಣ ಐಪಿಸಿಯು ದೂರು ಬಂದ ಸಲಕರಣೆಗಳ ಎಂಡಿಎಇ ವರದಿಗಳ ಜತೆ ದೂರನ್ನು ತಾಳೆ ಮಾಡುತ್ತದೆ. ಇಲ್ಲಿಯವರೆಗೆ ಒಟ್ಟು 556 ಸ್ಟೆಂಟ್‌ ವಿಫಲಗೊಂಡಿರುವ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 290 ಪ್ರಕರಣಗಳಲ್ಲಿ ಅಬ್ಬೋಟ್ಟ್ ಎಂಬ ವಿಶ್ವದ ಅತ್ಯಂತ ದೊಡ್ಡ ಡ್ರಗ್‌ ಎಲುಟಿಂಗ್‌ ಸ್ಟೆಂಟ್‌ ತಯಾರಿಕಾ ಕಂಪನಿಯ ಸ್ಟೆಂಟ್‌ಗಳನ್ನು ಬಳಸಲಾಗಿತ್ತು. ಕುಕ್‌ ಮೆಡಿಕಲ್‌ ಸ್ಟೆಂಟ್‌ಗಳ ವಿರುದ್ಧ 18 ವರದಿಗಳು ಮತ್ತು ಟೆರಿಮೊ ಯೂರೋಪ್‌ ವಿರುದ್ಧ 14 ವರದಿಗಳು ದಾಖಲಾಗಿದ್ದು ಅಬ್ಬೋಟ್ಟ್ ನಂತರದ ಸ್ಥಾನದಲ್ಲಿವೆ.
  • ಉಳಿದ ವೈದ್ಯಕೀಯ ಉಪಕರಣಗಳ ವಿಚಾರಕ್ಕೆ ಬಂದರೆ ಆರ್ಥೋಪೆಡಿಕ್‌ ಇಂಪ್ಲಾಂಟ್ಸ್‌ಗಳಲ್ಲಿ ಜಾನ್ಸನ್‌ ಆಂಡ್‌ ಜಾನ್ಸನ್‌ 19 ಉಪಕರಣಗಳು ಕೈಕೊಟ್ಟಿವೆ. ಬೇಯರ್‌ ಎಜಿಯ ಉಪಕರಗಳು ವಿರುದ್ಧ ಈ ರೀತಿಯ 36 ವರದಿಗಳಿದ್ದು ಮೆರಿನಾ ಎಂಬ ಐಯುಡಿಗೆ ಸಂಬಂಧಿಸಿದಂತೆ ಈ ದೂರುಗಳು ದಾಖಲಾಗಿವೆ.
  • ವೈದ್ಯಕೀಯ ಉಪಕರಣಗಳು ಕೈಕೊಟ್ಟಿರುವ ಬಗ್ಗೆ ನಾಗ್ಪುರ, ಜೈಪುರ, ರೋಹ್ಟಕ್‌, ಕೋಟಾ, ತ್ರಿಶ್ಶೂರ್‌, ಡೆಹ್ರಾಡೂನ್‌, ಪಂಚಕುಲ, ಕೊಚ್ಚಿ ಮತ್ತು ಗೊಹಾನಾದಂಥ ಸಣ್ಣ ಸಣ್ಣ ನಗರಗಳ ಆಸ್ಪತ್ರೆಗಳು ರಾಶಿ ರಾಶಿ ವರದಿಗಳನ್ನು ಸಲ್ಲಿಸುತ್ತಿವೆ. ಆದರೆ ಮೆಟ್ರೋಪಾಲಿಟನ್‌ ನಗರಗಳಾದ ನವದೆಹಲಿ ಮತ್ತು ಮುಂಬೈನಿಂದ ಗಣನೀಯ ವರದಿಗಳು ಸಲ್ಲಿಕೆಯಾಗಿಲ್ಲ. ಉದಾಹರಣೆಗೆ ನವದೆಹಲಿಯ ಎಐಐಎಂಎಸ್‌ (ಏಮ್ಸ್‌) ನಿಂದ 2018ರಲ್ಲಿ ಒಂದೇ ಒಂದು ವರದಿ ದಾಖಲಾಗಿಲ್ಲ. ವಿಶೇಷವೆಂದರೆ ಏಮ್ಸ್‌ ‘ಎಂಡಿಎಂಸಿ’ ಕೇಂದ್ರಗಳಲ್ಲಿ ಒಂದು.
  • 2018ರಲ್ಲಿ ಡಜನ್‌ಗೂ ಹೆಚ್ಚು ಪ್ರತಿಕೂಲ ಪರಿಣಾಮ ಬೀರಿದ ಯೆಲ್ಲೋ ರಿಪೋರ್ಟ್‌ಗಳು ಸಲ್ಲಿಕೆಯಾಗಿವೆ. ಯೆಲ್ಲೋ ರಿಪೋರ್ಟ್‌ಗಳೆಂದರೆ ರೋಗಿಗಳು ಸತ್ತಿದ್ದಾರೆ ಎಂದರ್ಥ. ವಿಶೇಷವೆಂದರೆ ಎಲ್ಲಾ ಸಾವುಗಳೂ ಕಾರ್ಡಿಯಾಕ್‌ ಸ್ಟೆಂಟ್‌ಗಳ ಅಳವಡಿಕೆ ನಂತರವೇ ನಡೆದಿವೆ.

ಎಲ್ಲಾ ಸಾವಿನ ವರದಿಗಳನ್ನು ಬರೆಯುವಾಗಲೂ ಅವುಗಳಲ್ಲಿ ಸಾರಾಂಶವನ್ನು ಬರೆಯಲಾಗುತ್ತದೆ. ಉದಾಹರಣೆಗೆ 2018ರ ಮಾರ್ಚ್‌ನಲ್ಲಿ ಇದೇ ರೀತಿ ಸ್ಟೆಂಟ್‌ ಅಳವಡಿಕೆ ನಂತರ ಜಮ್ಮುವಿನ ರೋಗಿಯೊಬ್ಬರು ಅಸುನೀಗಿದರು. “ಸ್ಟೆಂಟ್‌ ರೋಗಿಯ ಸಾವಿಗೆ ಕಾರಣವಾಗಿರಬಹುದು ಅಥವಾ ಅದಕ್ಕೆ ಕೊಡುಗೆ ನೀಡಿರಬಹುದು,” ಎಂದು ಬರೆಯಲಾಗಿದೆ. ಕೊಯಮತ್ತುರಿನಲ್ಲಿ ಇನ್ನೊಂದು ವರದಿಯಲ್ಲಿ “ರೋಗಿಯ ಸಾವು ವೈದ್ಯಕೀಯ ಉಪಕರಣಗಳ ಕಾರಣಕ್ಕೆ ಆಗಿಲ್ಲ” ಎಂದು ಬರೆಯಲಾಗಿದೆ.

ಇದೇ ವೇಳೆ ಪ್ರತಿ ವರದಿ ಕೂಡ ಹೇಳಿಕೆಯೊಂದರ ಮೂಲಕ ಕೊನೆಗೊಳ್ಳುತ್ತದೆ. “ರೋಗಿಗೆ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಯಾವುದೇ ಗಮನಾರ್ಹ ವಿಳಂಬವಾಗಿಲ್ಲ ಮತ್ತು ರೋಗಿಗೆ ಈ ಹಿಂದಿನ ಯಾವುದೇ ರೋಗದ ಲಕ್ಷಣಗಳು ಅಥವಾ ಗಾಯಗಳು ಯಾವುದೂ ಇರಲಿಲ್ಲ,” ಎಂದು ಬರೆಯಲಾಗುತ್ತದೆ.

  • ಲಕ್ಷಗಟ್ಟಲೆ ಕಾರ್ಡಿಯಾಕ್‌ ಸ್ಟೆಂಟ್‌ಗಳನ್ನು ಆಸ್ಪತ್ರೆಯೊಂದಕ್ಕೆ ಪೂರೈಕೆ ಮಾಡಲಾಗಿರುತ್ತದೆ. ಇವುಗಳಲ್ಲಿ ದೋಷಪೂರಿತವಾಗಿರುವ ಸ್ಟೆಂಟ್‌ಗಳ ಲೆಕ್ಕ ತೆಗೆದರೆ ಒಂದೇ ರಾಶಿಯಲ್ಲೇ 1-4 ವಿಫಲವಾಗಿರುವ ಉದಾಹರಣೆಗಳು ಸಿಗುತ್ತವೆ.
  • ಈ ಎಂಡಿಎಇ ವರದಿಗಳ ಮೂರನೇ ಒಂದು ಭಾಗ ವರದಿಗಳಲ್ಲಿ ಇತರ ಸಲಕರಣೆಗಳು ವಿಫಲವಾಗಿವೆ ಎಂದು ಪಟ್ಟಿ ಮಾಡಲಾಗಿದೆ. ಒಂದಾದ ಮೇಲೊಂದು ಆಸ್ಪತ್ರೆಗಳು ವೈದ್ಯಕೀಯ ಉತ್ಪನ್ನಗಳಲ್ಲಿ ಸಮಸ್ಯೆ ಇದೆ ಎಂದು ವರದಿ ಮಾಡುತ್ತಿವೆ. ಆದರೆ ಅಸಲಿಗೆ ಅವು ಉಪಕರಣಗಳೇ ಅಲ್ಲ. ಉದಾಹರಣೆಗೆ ಕೈಗವಸು, ಬಟ್ಟೆ, ಪ್ಲಾಸ್ಟರ್‌, ಡೈಪರ್‌, ಸ್ವಾಬ್‌, ಶಸ್ತ್ರ ಚಿಕಿತ್ಸೆಯ ಕತ್ತರಿಗಳು, ಮೂತ್ರದ ಡಬ್ಬಿಗಳು ಕೈಕೊಟ್ಟಿವೆ ಎಂದು ತಜ್ಞ ವೈದ್ಯರೇ ವರದಿ ಸಲ್ಲಿಸುತ್ತಿದ್ದಾರೆ.
  • ಹೃದಯದ ಕವಾಟಗಳು, ಪೇಸ್‌ಮೇಕರ್ಸ್‌, ವೆಂಟಿಲೇಟರ್‌ಗಳು, ಡಿಫಿಬ್ರಿಲೇಟರ್‌, ಇನ್‌ಫ್ಯುಷನ್‌ ಪಂಪ್‌, ಹಲ್ಲಿನ ಇಂಪ್ಲಾಂಟ್‌ಗಳಲ್ಲಿ ತೊಂದರೆಗಳಿವೆ ಎಂಬ ಹಲವು ಗಂಭೀರ ವರದಿಗಳೂ ಇಲ್ಲಿ ದಾಖಲಾಗಿವೆ.

ದೇಶದಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳಿಗೆ ನಿಯಂತ್ರಣ ಹೇರಲು ಸಂಸ್ಥೆಯೊಂದಿದೆ. ಅದರ ಹೆಸರು ‘ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’. ಇದರ ಮುಖ್ಯಸ್ಥರಾದ ಡಾ. ಎಸ್‌. ಈಶ್ವರ್‌ ರೆಡ್ಡಿ, “ವೈದ್ಯಕೀಯ ಉಪಕರಣಗಳಿಂದ ಪ್ರತಿಕೂಲ ಪರಿಣಾಮಗಳಾಗಿರುವ ಬಗ್ಗೆ ನಮಗೆ ಐಪಿಸಿಯಿಂದ ಇನ್ನಷ್ಟೇ ವರದಿಗಳು ಬರಬೇಕಾಗಿವೆ,” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆದರೆ ನಮ್ಮಲ್ಲಿ ಒಂದು ಸ್ಯವಸ್ಥೆ ಇದೆ. ಅದರ ಪ್ರಕಾರ ಒಂದೊಮ್ಮೆ ಗಂಭೀರ ಪ್ರತಿಕೂಲ ಪರಿಣಾಮಗಳಾದರೆ ಅದನ್ನು ಐಪಿಸಿಯು ತಾಂತ್ರಿಕ ಸಮಿತಿಗೆ ವರ್ಗಾಯಿಸುತ್ತಾರೆ,” ಎಂದು ಅವರು ತಿಳಿಸಿದ್ದಾರೆ.

“ಭಾರತದಲ್ಲಿ ವೈದ್ಯಕೀಯ ಉಪಕರಗಳು ವಿಫಲವಾದರೆ ಈ ಬಗ್ಗೆ ವರದಿ ನೀಡಬಹುದು ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇಲ್ಲಿ ಈ ರೀತಿ ವರದಿ ಮಾಡುವ ಸಂಸ್ಕೃತಿ ಇನ್ನೂ ಆರಂಭಗೊಂಡಿಲ್ಲ,” ಎನ್ನುತ್ತಾರೆ ಐಪಿಸಿಯ ಪ್ರಧಾನ ವೈಜ್ಞಾನಿಕ ಅಧಿಕಾರಿ ವಿವೇಕಾನಂದನ್‌ ಕಲೈಸೆಲ್ವನ್‌.

“ಬ್ಯಾಂಡೇಜ್‌ಗಳು ಮತ್ತು ಕೈಗವಸುಗಳಂತಹ ಅಂಶಗಳ ಕುರಿತು ‘ಎಂಡಿಎಇ’ ವರದಿಗಳನ್ನು ನೋಡಿದರೆ ದೊಡ್ಡ ಆಸ್ಪತ್ರೆಗಳಿಗೂ ಸಹ ಯಾವುದು ವೈದ್ಯಕೀಯ ಸಾಧನ, ಯಾವುದು ಅಲ್ಲ, ಯಾವುದರ ಕುರಿತು ವರದಿ ಮಾಡಬೇಕೆಂದರ ಬಗ್ಗೆ ತಿಳಿವಳಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ನಾವು ಮಾಡಬೇಕಾಗಿರುವುದೆಂದರೆ ವರದಿ ಮಾಡುವ ಸಂಸ್ಕೃತಿಯನ್ನು ಆರಂಭಿಸಬೇಕು ಮತ್ತು ವರದಿಗಳ ಗುಣಮಟ್ಟವನ್ನು ಸುಧಾರಿಸುವ ಕಡೆ ಗಮನ ಹರಿಸಬೇಕು. ನಾವು ಇದನ್ನು ಗೌಪ್ಯ ವಸ್ತುವೆಂದು ಪರಿಗಣಿಸುತ್ತಿದ್ದೇವೆ. ಮತ್ತು ಎಂಡಿಎಇ ವರದಿಗಳನ್ನು ಸಾರ್ವಜನಿಕವಾಗಿ ಇಡಬೇಕೋ ಬೇಡವೋ ಎಂಬುದರ ಬಗ್ಗೆ ಸಿಎಎಸ್‌ಸಿಒ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಅವರಿಗೆ ಪ್ರತಿ ತಿಂಗಳು ವರದಿಗಳನ್ನು ಕಳುಹಿಸಿಕೊಡುತ್ತೇವೆ,” ಎಂದು ಅವರು ವಿವರಿಸಿದ್ದಾರೆ.

ಇನ್ನೊಂದು ಕಡೆಯಲ್ಲಿ ಈ ರೀತಿ ಕಡಿಮೆ ವರದಿಯಾಗಲು ತಜ್ಞರ ಕೊರತೆಯ ಕಾರಣವನ್ನು ಮುಂದಿಡುತ್ತಾರೆ ನವದೆಹಲಿಯ ಏಮ್ಸ್‌ ಮುಖ್ಯಸ್ಥೆ ಡಾ. ಪೂಜಾ ಗುಪ್ತ. ಹೆಚ್ಚಿನ ಉಸ್ತುವಾರಿ ಕೇಂದ್ರಗಳಲ್ಲಿ ವೈಜ್ಞಾನಿಕ ಸಹಾಯಕರಿಲ್ಲ. ಈ ಕೇಂದ್ರಗಳಿಗೆ ತಜ್ಞರನ್ನು ಐಪಿಸಿ ನೇಮಿಸಿಲ್ಲ. ಹೀಗಾಗಿ ಕಳಪೆ ಗುಣಮಟ್ಟದ ವರದಿಗಳು ದಾಖಲಾಗುತ್ತವೆ ಎನ್ನುತ್ತಾರೆ ಅವರು.

"ನವದೆಹಲಿಯಿಂದ ದಾಖಲಾಗುವ ವರದಿಗಳು ತೀರಾ ಕಳಪೆಯಾಗಿವೆ ಮತ್ತು ದೋಷಯುಕ್ತ ಸಾಧನಗಳನ್ನು ವರದಿ ಮಾಡುವ ಬಗ್ಗೆ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಲ್ಲೇ ವಿರೋಧವಿದೆ,” ಎಂದು ವಿವರಿಸುತ್ತಾರೆ ಅವರು. "ವರದಿ ಮಾಡುವುದರಿಂದು ಪ್ರಕರಣದಲ್ಲಿ ತಾವೇ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಎಂದು ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಭಾವಿಸುತ್ತಾರೆ. ಮತ್ತು ಪ್ರತಿಕೂಲ ಘಟನೆಗಳನ್ನು ವರದಿ ಮಾಡುವ ಮೊದಲು ಈ ಸಂಸ್ಕೃತಿಗೆ ತೆರೆದುಕೊಳ್ಳುವ ವಿಚಾರದಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಅಭದ್ರತೆಯ ಭಾವವಿದೆ. ಇದನ್ನು ಬದಲಾಯಿಸಲು ಇನ್ನಷ್ಟು ಜಾಗೃತಿ ಮತ್ತು ಪ್ರಚಾರ ಬೇಕಾಗಿದೆ,” ಎಂಬುದು ಅವರ ಅಭಿಪ್ರಾಯ.

ಒಟ್ಟಾರೆ ವಿಷಯ ಇಷ್ಟೇ. ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟವಿಲ್ಲದ, ದೋಷಪೂರಿತ ಉಪಕರಣಗಳಿಂದ ರೋಗಿಗಳ ತೊಂದರೆಗೆ ಸಿಲುಕುತ್ತಿದ್ದಾರೆ. ಕೆಲವೊಮ್ಮೆ ಸಾವಿಗೂ ಗುರಿಯಾಗುತ್ತಿದ್ದಾರೆ. ಆದರೆ ಇದರ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದಕ್ಕೆ 2014ಕ್ಕೆ ಮೊದಲು ಯಾವುದೇ ಸರಿಯಾದ ಸಂಸ್ಥೆಗಳು ಇರಲಿಲ್ಲ. 2014ರಲ್ಲಿ ಇದಕ್ಕಾಗಿ ಎಂಡಿಎಇ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತಾದರೂ, ಅದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಜತೆಗೆ ಇಲ್ಲಿಗೆ ದೂರುಗಳು ದಾಖಲಾದರೂ ಅವುಗಳ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಜಾನ್ಸನ್‌ ಆಂಡ್‌ ಜಾನ್ಸನ್‌ ಕಂಪನಿಯ ಹಿಪ್‌ ಇಂಪ್ಲಾಂಟ್‌ ವಿಫಲವಾಗಿ ರೋಗಿಗಳಿಗೆ 33 ಲಕ್ಷದಿಂದ 1.2 ಕೋಟಿ ರೂಪಾಯಿವರೆಗೆ ಪರಿಹಾರ ನೀಡುವಂತೆ ಆರೋಗ್ಯ ಇಲಾಖೆ ಅಕ್ಟೋಬರ್‌ನಲ್ಲಿ ಆದೇಶ ನೀಡತ್ತು. ಇಂಥಹ ಬೆಳವಣಿಗೆಗಳು ಭಾರತದಲ್ಲಿ ಸದ್ಯಕ್ಕೆ ಅಪರೂಪವಾಗಿವೆ.

ಆಸಕ್ತರು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪೂರ್ಣ ವರದಿಗಳಿಗೆ ಇಲ್ಲಿಗೆ ಭೇಟಿ ನೀಡಿ.

Join Samachara Official. CLICK HERE