samachara
www.samachara.com
ರಫೇಲ್‌ ಡೀಲ್‌ & ಅಂಬಾನಿಯ 86,500 ಕೋಟಿ ರೂ. ಮಾನನಷ್ಟದ ಕಥೆ!
ದೇಶ

ರಫೇಲ್‌ ಡೀಲ್‌ & ಅಂಬಾನಿಯ 86,500 ಕೋಟಿ ರೂ. ಮಾನನಷ್ಟದ ಕಥೆ!

ಕರ್ನಾಟಕದಲ್ಲಿ 80 ಲಕ್ಷಕ್ಕಿಂತ ಹೆಚ್ಚಿನ ಮಾನನಷ್ಟ ಮೊಕದ್ದಮೆಯಲ್ಲಿ ಪರಿಹಾರ ಕೋರುವುದಾದರೆ, 2,47,125 ರೂಪಾಯಿ ಮತ್ತು 80 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರಕ್ಕೆ ಶೇಕಡಾ 1ರಷ್ಟು ಹಣ ಕಟ್ಟಬೇಕಾಗುತ್ತದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಅನಿಲ್‌ ಅಂಬಾನಿ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ತಮ್ಮ ಮತ್ತು ತಮ್ಮ ಕಂಪನಿಗಳ ಮಾನ ನಷ್ಟವಾಗಿದೆ ಎಂದವರು ನ್ಯಾಯಾಲಯಗಳ ಮೊರೆ ಹೋಗಿದ್ದು 28 ಪ್ರಕರಣಗಳಲ್ಲಿ ಬರೋಬ್ಬರಿ 86,500 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಭಾರತದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮಾನವನ್ನು ಕಳೆದುಕೊಂಡವರು ತಾನು ಎಂದು ನ್ಯಾಯಾಲಯದ ಮುಂದೆ ಸಮಸ್ಯೆ ತೋಡಿಕೊಂಡಿದ್ದಾರೆ.

ರಫೇಲ್‌ ಡೀಲ್‌ ಸಂಬಂಧಿಸಿದಂತೆ ವಿಡಿಯೋ ಚರ್ಚೆ ನಡೆಸಿದ್ದಕ್ಕಾಗಿ ಸೋಮವಾರ ನ್ಯೂಸ್‌ ಪೋರ್ಟಲ್‌ ‘ದಿ ವೈರ್‌’ ಮೇಲೆ 6,000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಕುರಿತು ‘ದಿ ಕ್ವಿಂಟ್‌’ ಜತೆ ಮಾತನಾಡಿರುವ ‘ದಿ ವೈರ್‌’ ಸಂಸ್ಥಾಪಕ ಸಂಪಾದಕ ಎಂ. ಕೆ. ವೇಣು, “ಈ ಮೊಕದ್ದಮೆಗಳು ಕಿರುಕುಳಗಳಾಗಿವೆ. ಸ್ಲಾಪ್‌ (ಸಾರ್ವಜನಿಕ ಭಾಗವಹಿಸುವಿಕೆ ವಿರುದ್ಧದ ತಂತ್ರಾತ್ಮಕ ಕಾನೂನು) ಬಳಕೆಗೆ ಅತ್ಯುತ್ತಮ ಉದಾಹರಣೆ,” ಎಂದು ಕಿಡಿಕಾರಿದ್ದಾರೆ.

‘ದಿ ವೈರ್‌’ ಮೇಲೆ ಅಂಬಾನಿ ಮುನಿಸಿಕೊಳ್ಳುವುದು ಮೊದಲೇನೂ ಅಲ್ಲ. ಈ ಹಿಂದೆಯೂ ಎರಡು ಬಾರಿ; ಫೆಬ್ರವರಿ 14 ಮತ್ತು ಅಕ್ಟೋಬರ್‌ 24ರಂದು ಅಂಬಾನಿ ಕಡೆಯಿಂದ ದಾಖಲಾಗಿತ್ತು. ಇದೀಗ ಮತ್ತೊಂದು ಕೇಸ್‌ ದಾಖಲಾಗಿದೆ. “ಸರಕಾರದ ನಡೆಯನ್ನು ಪ್ರಶ್ನಿಸಿದ್ದಕ್ಕೆ ಇದೀಗ ನಮ್ಮ ಮೇಲೆ ಅದಾನಿ ಮತ್ತು ಅನಿಲ್‌ ಅಂಬಾನಿಯವರಿಂದ ದಾಖಲಾದ ಹಲವು ಸಿವಿಲ್‌ ಮತ್ತು ಕ್ರಿಮಿನಲ್‌ ಕೇಸ್‌ಗಳಿವೆ,” ಎಂದು ವೇಣು ಟ್ಟೀಟ್ ಮಾಡಿದ್ದಾರೆ. ಈ ಹಿಂದೆ ಅಮಿತ್‌ ಶಾ ಪುತ್ರ ಜಯ್‌ ಶಾ ಕೂಡ ‘ದಿ ವೈರ್‌’ ಮೇಲೆ ಇದೇ ರೀತಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅನಿಲ್‌ ಅಂಬಾನಿ ಮಾನನಷ್ಟ ಮೊಕದ್ದಮೆ ಸರಣಿ:

ಅನಿಲ್‌ ಅಂಬಾನಿಯವರಿಗೆ ಮಾನನಷ್ಟ ಮೊಕದ್ದಮೆಗಳು ಲೀಲಾಜಾಲ ಎಂಬುದನ್ನು ಅವರ ಇತ್ತೀಚಿನ ನಡೆಗಳು ಹೇಳುತ್ತವೆ. ರಫೇಲ್‌ ಡೀಲ್‌ ಸಂಬಂಧ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗಳ ದೊಡ್ಡ ಪಟ್ಟಿಯೇ ಇದೆ. ಇದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ‘ಎನ್‌ಡಿಟಿವಿ’.

ಎನ್‌ಡಿಟಿವಿ ಮೇಲೆ ಅಂಬಾನಿ 10,000 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರೆ, ದಿ ಸಿಟಿಜನ್‌ ಮತ್ತು ಅದರ ಸಂಪಾದಕಿ ಸೀಮಾ ಮುಸ್ತಾಫಾ ಮೇಲೆ 7,000 ಕೊಟಿ ರೂಪಾಯಿಯ ಕೇಸ್‌ ದಾಖಲಿಸಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಮತ್ತು ಎಎಪಿ ಸಂಜಯ್‌ ಸಿಂಗ್‌ ಮೇಲೆ ತಲಾ 5,000 ಕೋಟಿ ರೂಪಾಯಿಯ ಪ್ರಕರಣ ದಾಖಲಾಗಿದೆ. ಹೀಗೆ ಒಟ್ಟು 17 ಪ್ರಕರಣಗಳಲ್ಲಿ 86,500 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಅನಿಲ್‌ ಅಂಬಾನಿ.

ಎಕಾನಾಮಿಕ್ ಟೈಮ್ಸ್‌, ದಿ ವೀಕ್‌, ದಿ ಟ್ರಿಬ್ಯೂನ್‌, ಡಿಎನ್‌ಎ ಪತ್ರಕರ್ತ ಅತೀಕ್‌ ಶೇಖ್‌, ಬಿಸಿನೆಸ್‌ ಸ್ಟ್ಯಾಂಡರ್ಡ್‌ ಅಂಕಣಕಾರ ಅಜಯ್‌ ಶುಕ್ಲಾ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವರುಮನ್‌ ಚೋಪ್ರಾ, ಶಕ್ತಿ ಸಿನ್ಹಾ ಗೋಹಿಲ್‌, ಓಮನ್‌ ಚಾಂಡಿ, ರಣದೀಪ್‌ ಸುರ್ಜೇವಾಲಾ, ಅಶೋಕ್‌ ಚೌಹಾಣ್‌, ಸಂಜಯ್‌ ನಿರುಪಮ್‌, ಅನುರಾಗ್‌ ನಾರಾಯಣ್‌, ಸುನಿಲ್‌ ಕುಮಾರ್ ಜಾಕರ್‌, ಪ್ರಿಯಾಂಕ ಚತುರ್ವೇದಿ.. ಹೀಗೆ ಅವರು ಮಾನನಷ್ಟ ಮೊಕದ್ದಮೆ ದಾಖಲಿಸದವರ ಪಟ್ಟಿ ಮುಂದುವರಿಯುತ್ತದೆ.

ಪ್ರಕರಣಗಳನ್ನು ದಾಖಲಿಸುವಾಗ ಅನಿಲ್‌ ಅಂಬಾನಿ ಅಂತರಾಷ್ಟ್ರೀಯ ಮಾಧ್ಯಮಗಳನ್ನೂ ಬಿಟ್ಟಿಲ್ಲ. ಬ್ಲೂಂಬರ್ಗ್‌, ಫೈನಾನ್ಸಿಯಲ್‌ ಟೈಮ್ಸ್‌ ಮೇಲೆಯೂ ಅವರು ಕಾನೂನು ಸಮರಗಳನ್ನು ಹೂಡಿದ್ದಾರೆ.

ಒಟ್ಟು 28 ಪ್ರಕರಣಗಳನ್ನು ದಾಖಲಿಸಲಾಗಿದ್ದು ಇದರಲ್ಲಿ 17 ಪ್ರಕರಣಗಳ ಮಾನನಷ್ಟ ಮೊಕದ್ದಮೆಗಳ ಒಟ್ಟು ಮೊತ್ತ 86,500 ಕೋಟಿ ರೂಪಾಯಿಗಳಾಗುತ್ತವೆ. ಇನ್ನುಳಿದ 11 ಪ್ರಕರಣಗಳಲ್ಲಿ ಎಷ್ಟು ಮೊತ್ತದ ಮಾನನಷ್ಟ ಮೊತ್ತವನ್ನು ಕೇಳಲಾಗಿದೆ ಎಂಬ ವಿವರಗಳು ಲಭ್ಯವಾಗಿಲ್ಲ.

ಮಾನನಷ್ಟ ಮೊಕದ್ದಮೆಗಳ ಸ್ವರ್ಗ ಅಹಮದಾಬಾದ್

ಅದಾನಿ, ಅಂಬಾನಿ, ಜಯ್‌ ಶಾ ಮೊದಲಾದವರೆಲ್ಲಾ ತಮ್ಮ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಲು ಅಹಮದಾಬಾದ್ ನ್ಯಾಯಾಲಯವನ್ನೇ ಮೇಲಿಂದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂಬಾನಿಯಂತೂ ಎಲ್ಲಾ 28 ಪ್ರಕರಣಗಳನ್ನೂ ಇಲ್ಲೇ ದಾಖಲಿಸಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ನ್ಯಾಯಾಲದ ಕನಿಷ್ಠ ಶುಲ್ಕ. ಪ್ರತಿ ಪ್ರಕರಣಕ್ಕೂ ನ್ಯಾಯಾಲಯಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕ ಮೊತ್ತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನತೆಗಳಿವೆ.

ಉದಾಹರಣೆಗೆ ಕರ್ನಾಟಕದಲ್ಲಿ 80 ಲಕ್ಷಕ್ಕಿಂತ ಹೆಚ್ಚಿನ ಮಾನನಷ್ಟ ಮೊಕದ್ದಮೆಯಲ್ಲಿ ಪರಿಹಾರ ಕೋರುವುದಾದರೆ, 2,47,125 ರೂಪಾಯಿ ಮತ್ತು 80 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರಕ್ಕೆ ಶೇಕಡಾ 1ರಷ್ಟು ಹಣ ಕಟ್ಟಬೇಕಾಗುತ್ತದೆ. ಸರಳವಾಗಿ ಹೇಳಬೇಕಾದರೆ 10,000 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು ಎಂದರೆ ಏನಿಲ್ಲವೆಂದರೂ ಸುಮಾರು 100 ಕೋಟಿ ರೂಪಾಯಿಗಳನ್ನು ನ್ಯಾಯಾಲಯಕ್ಕೆ ಕಟ್ಟಬೇಕಾಗುತ್ತದೆ.

ಆದರೆ ಗುಜರಾತ್‌ನಲ್ಲಿ ಹಾಗಲ್ಲ. ಗುಜರಾತ್‌ ಕೋರ್ಟ್‌ ಫೀಸ್‌ ಆಕ್ಟ್‌ 2004ರ ಪ್ರಕಾರ ಇಲ್ಲಿ ದಾಖಲಾಗುವ ಯಾವುದೇ ಪ್ರಕರಣಗಳಿಗೆ ಅತಿ ಹೆಚ್ಚಿನ ಕೋರ್ಟ್‌ ಶುಲ್ಕ 75,000 ರೂಪಾಯಿಗಳು ಮಾತ್ರ. ಈ ಕಾರಣಕ್ಕೆ ಅಹಮದಾಬಾದ್‌ನಲ್ಲೇ ಮಾನನಷ್ಟ ಮೊಕದ್ದಮೆಗಳು ದಾಖಲಾಗುತ್ತವೆ. ಉದ್ಯಮಿಗಳನ್ನು ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ.