samachara
www.samachara.com
26/11 ದಾಳಿಗೆ ಹತ್ತು ವರ್ಷ: ಹಳೆಯ ಕಹಿ ನೆನಪಿನ ಸ್ಟೋರಿಗಳ ಸುರಿಮಳೆಯನ್ನು ನಿರೀಕ್ಷಿಸಿ...
ದೇಶ

26/11 ದಾಳಿಗೆ ಹತ್ತು ವರ್ಷ: ಹಳೆಯ ಕಹಿ ನೆನಪಿನ ಸ್ಟೋರಿಗಳ ಸುರಿಮಳೆಯನ್ನು ನಿರೀಕ್ಷಿಸಿ...

ಈ ಹತ್ತು ವರ್ಷಗಳಲ್ಲಿ ಹಲವು ಬೆಳವಣಿಗೆಗಳಿಗೆ ಈ ದೇಶ ಸಾಕ್ಷಿಯಾಗಿದೆ. ಮೇಲಾಗಿ ಇದೇ ಸೋಮವಾರ ಹಳೆಯ ಕಹಿ ನೆನಪನ್ನು ನಾನಾ ಆಯಾಮದಲ್ಲಿ ಎದುರುಗೊಳ್ಳಲು ಸ್ಟೋರಿಗಳ ಗುಚ್ಛವೊಂದು ನಿಮಗಾಗಿ ಕಾಯುತ್ತಿದೆ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

26/11 ಮುಂಬೈ ದಾಳಿ ನಡೆದು ಸೋಮವಾರಕ್ಕೆ ಭರ್ತಿ 10 ವರ್ಷ. ಅಮೆರಿಕಾರ ಡಬ್ಲ್ಯುಟಿಸಿ ಕಟ್ಟಡದ ಮೇಲೆ ನಡೆದ 9/11ರ ದಾಳಿ ನಂತರ ಹಲವು ಭಯಾನಕ ದಾಳಿಯ ಪ್ರಯತ್ನಗಳು ಜಗತ್ತಿನಾದ್ಯಂತ ನಡೆದಿದ್ದವು. ಆದರೆ ಅವೆಲ್ಲಾ ವಿಫಲ ಯತ್ನಗಳೇ ಆಗಿದ್ದವು. 11-ಎಂ ಸ್ಪೇನ್‌ ದಾಳಿ, 7/7 ಲಂಡನ್‌ ದಾಳಿ ಮತ್ತು 2006 ಮುಂಬೈ ರೈಲು ಸರಣಿ ಬಾಂಬ್‌ ಸ್ಫೋಟ ಮಾತ್ರ ಇದರಲ್ಲಿ ಯಶಸ್ವಿಯಾಗಿದ್ದವು. ಇವೆಲ್ಲಕ್ಕಿಂತ ಯಶಸ್ವಿಯಾಗಿ ನಡೆದ ದಾಳಿ ಅಂದರೆ ಮುಂಬೈ ದಾಳಿ.

ದಾಳಿಯಲ್ಲಿ 17 ದೇಶಗಳಿಗೆ ಸೇರಿದ 166 ಜನರು ಸಾವನ್ನಪ್ಪಿ, ಸುಮಾರು 300 ಜನರು ಗಾಯಗೊಂಡರು. ಇದು ಒಂದು ಕಡೆಯಾದರೆ ಮೂರು ದಿನಗಳ ಕಾಲ ಭಾರತವೂ ಸೇರಿದಂತೆ ಹಲವು ದೇಶದ ಜನರನ್ನು ಟಿವಿ ಮುಂದೆ ತಂದು ಕೂರಿಸಿ ಭಯದ ಉತ್ಪಾದನೆ ನಡೆಸಿದ್ದ ಉಗ್ರರು ತಮ್ಮ ಯೋಜನೆಯನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತಂದಿದ್ದರು.

ತನಿಖಾಧಿಕಾರಿಗಳ ಪ್ರಕಾರ ಪಾಕಿಸ್ತಾನದಿಂದ ಜಲಮಾರ್ಗದಲ್ಲಿ ಮುಂಬೈಗೆ ಬಂದ 10 ಜನ ಲಷ್ಕರ್‌ ಇ ತಯ್ಯಬಾ ಉಗ್ರರು ಲಿಯೋಪೋಲ್ಡ್‌ ಕೆಫೆ, ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌, ದಿ ತಾಜ್‌ ಮಹಲ್‌ ಪ್ಯಾಲೇಸ್‌ ಹೋಟೆಲ್‌, ಒಬೆರಾಯ್‌ ಟ್ರೈಡೆಂಟ್‌, ಕಾಮಾ ಆಸ್ಪತ್ರೆ, ನಾರಿಮನ್‌ ಹೌಸ್‌ನಲ್ಲಿ ದಾಳಿ ನಡೆಸಿದ್ದರು. 10 ಜನ ಉಗ್ರರಲ್ಲಿ ಅಜ್ಮಲ್‌ ಕಸಬ್‌ ಮಾತ್ರ ಬದುಕಿಳಿದಿದ್ದ. ಆತನನ್ನು ದಾಳಿ ವೇಳೆ ಸೆರೆ ಹಿಡಿದು ಮುಂದೆ ಗಲ್ಲಿಗೇರಿಸಲಾಯಿತು. ಈತ ತಾನು ಪಾಕಿಸ್ತಾನದಿಂದ ಬಂದವ ಎಂದು ತನಿಖೆ ವೇಳೆ ಹೇಳಿಕೊಂಡಿದ್ದ. ಮುಂದೆ ಈತ ನಮ್ಮ ದೇಶದವನೇ ಎಂದು ಪಾಕಿಸ್ತಾನವೂ ಒಪ್ಪಿಕೊಂಡಿತು. ಹೀಗಿದ್ದೂ ಈತನ ಹಿನ್ನೆಲೆ ಬಗ್ಗೆ ಅನುಮಾನಗಳು ಅವತ್ತಿಗೂ, ಇವತ್ತಿಗೂ ಇವೆ.

ರಕ್ತ ಸಿಕ್ತ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್.
ರಕ್ತ ಸಿಕ್ತ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್.
/ಡಿಎನ್‌ಎ

ಅದಕ್ಕೆ ಕಾರಣ ಮುಂಬೈ ಎಟಿಎಸ್‌ ಮುಖ್ಯಸ್ಥರಾಗಿದ್ದ ಹೇಮಂತ್‌ ಕರ್ಕರೆಯವರ ಅನುಮಾನಾಸ್ಪದ ಸಾವು. ಮಲೆಗಾಂಬ್‌ ಬಾಂಬ್‌ ಸ್ಫೋಟದ ತನಿಖೆ ನಡೆಸುತ್ತಾ ಸಂಘ ಪರಿವಾರ ಮತ್ತು ಅದರ ಅಂಗ ಸಂಸ್ಥೆಗಳ ಬುಡಕ್ಕೆ ಕೈ ಹಾಕಿದ್ದ ಕರ್ಕರೆ ಮತ್ತವರ ಎಟಿಎಸ್‌ ಹಾಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಲಪಂಥೀಯ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅವರು ಈ ತನಿಖೆಯೇ ಸಾವಿಗೆ ಮುನ್ನುಡಿ ಬರೆಯಿತು ಎಂಬ ವಾದಗಳೂ ಇವೆ. ಮಹಾರಾಷ್ಟ್ರದ ನಿವೃತ್ತ ಐಜಿಪಿ ಎಸ್‌.ಎಂ. ಮುಶ್ರಿಫ್‌ ಬರೆದ ‘ಕರ್ಕರೆಯನ್ನು ಕೊಂದವರು ಯಾರು?’ ಎಂಬ ಪುಸ್ತಕ ಈ ನಿಟ್ಟಿನಲ್ಲಿ ಮಾತನಾಡುತ್ತದೆ.

ಏನೇ ಆದರೂ ಕರ್ಕರೆ, ಮುಂಬೈ ದಾಳಿ ಇವೆಲ್ಲಾ ಇವತ್ತಿಗೆ ಕೇವಲ ದುಃಸ್ವಪ್ನಗಳಷ್ಟೇ. ಈ ಹತ್ತು ವರ್ಷಗಳಲ್ಲಿ ಹಲವು ಬೆಳವಣಿಗೆಗಳಿಗೆ ಈ ದೇಶ ಸಾಕ್ಷಿಯಾಗಿದೆ. ಮುಂಬೈ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಹದಗೆಟ್ಟಿದೆ. ದಾಳಿಯಿಂದ ಅಘಾತಕ್ಕೆ ಗುರಿಯಾದ ಭಾರತ ಸರಕಾರ ಎಚ್ಚರಗೊಂಡು ಗುಪ್ತಚರ ಇಲಾಖೆ ಸೇರಿದಂತೆ ಎಲ್ಲವನ್ನೂ ಮತ್ತಷ್ಟು ಬಲಗೊಳಿಸಿತು. ಕಪ್ಪು ಬಟ್ಟೆ ತೊಟ್ಟ ಎನ್‌ಎಸ್‌ಜಿ ಕಮಾಂಡೋಗಳು ದೆಹಲಿಯ ಹೊರಗೆ ಕಾಲಿಟ್ಟರು. ಬೆಂಗಳೂರಿನಂತ ನಗರಗಳಿಗೂ ಬಂದರು. ಹೀಗಿದ್ದೂ ಉಗ್ರರ ಭವಿಷ್ಯದ ದಾಳಿಗಳನ್ನೆಲ್ಲಾ ತಡೆಯಲು ಭಾರತ ಸರಕಾರದಿಂದ ಸಾಧ್ಯವಾಗಲಿಲ್ಲ. ಏನಿಲ್ಲವೆಂದರೂ ಈ ಹತ್ತು ವರ್ಷಗಳಲ್ಲಿ ಸುಮಾರು 40ರಷ್ಟು ಉಗ್ರರ ದಾಳಿಗಳು ಭಾರತದಲ್ಲಿ ನಡೆದಿವೆ. ಉಗ್ರರನ್ನು ಮಟ್ಟ ಹಾಕಲು ಅನಾಣ್ಯೀಕರಣದಂಥ ಕ್ರಮಗಳನ್ನು ಕೈಗೊಂಡರೂ ಇಂದಿಗೂ ಎಲ್ಲಾ ದಾಳಿಗಳನ್ನೇನೂ ತಡೆಯಲು ದೇಶದ ಯಾವುದೇ ಸಂಸ್ಥೆಗಳಿಂದಲೂ ಸಾಧ್ಯವಾಗಲಿಲ್ಲ. ಉದಾಹರಣೆಗೆ ಲೇಟೆಸ್ಟ್‌ ಅಮೃತಸರ ದಾಳಿ ಕಣ್ಣ ಮುಂದಿದೆ.

ಅಂತರಾಷ್ಟ್ರೀಯ ತನಿಖೆ:

ಮುಂಬೈನಲ್ಲಿ ನಡೆದ ಭಯಾನಕ ದಾಳಿ ನಂತರ ದೊಡ್ಡ ಮಟ್ಟದ ತನಿಖೆ ಭಾರತ ಸೇರಿದಂತೆ ಎಲ್ಲೆಡೆ ಆರಂಭಗೊಂಡಿತು. ಅಜ್ಮಲ್‌ ಕಸಬ್‌ನನ್ನು ಭಾರತ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿ ನಂತರ 2012ರಲ್ಲಿ ನವೆಂಬರ್ 21ರಂದು ಗಲ್ಲಿಗೇರಿಸಿತು. ಡೇವಿಡ್‌ ಹೆಡ್ಲಿಯನ್ನು ಅಮೆರಿಕಾ ಬಂಧಿಸಿತು. ಇದೇ ವೇಳೆ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ದಾಳಿಗೆ ಯೋಜನೆ ರೂಪಿಸಿದ, ಆರ್ಥಿಕ ಸಹಾಯ ಒದಗಿಸಿದ, ಬೆಂಬಲಿಸಿದ 7 ಜನರ ಮೇಲೆ ಪಾಕಿಸ್ತಾನವೂ ಪ್ರಕರಣ ದಾಖಲಿಸಿಕೊಂಡಿತು. ಮುಖ್ಯ ಸಂಚುಕೋರ ಝಕಿ ಉರ್‌ ರೆಹಮಾನ್‌ ಲಖ್ವಿ ಮತ್ತು ಆರು ಜನರನ್ನು ಪಾಕಿಸ್ತಾನ ಪವಾಡವೆಂಬಂತೆ ಬಂಧಿಸಿತು.

ಆದರೆ ಇವತ್ತು ಇವರೆಲ್ಲಾ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಪಾಕಿಸ್ತಾನ ಇವರ ವಿಚಾರದಲ್ಲಿ ನಡೆದುಕೊಂಡ ರೀತಿಯಲ್ಲಿ ಹಲವು ಆಕ್ಷೇಪಗಳಿವೆ. ಇಡೀ ತನಿಖೆಯ, ಶಿಕ್ಷೆಯ ಅಣಕದಂತೆ ಲಖ್ವಿ ಜೈಲಿನಲ್ಲಿದ್ದಾಗಲೇ ತಂದೆಯಾದರು. ವಿಚಾರಣೆ ವೇಳೆ ಒಂಭತ್ತು ನ್ಯಾಯಾಧೀಶರು ಬದಲಾದರು. ಹಠಮಾರಿ ವಕೀಲ ಚೌಧರಿ ಜುಲ್ಫೀಕರ್‌ ಅಲಿ 2013ರ ಮೇನಲ್ಲಿ ಹತ್ಯೆಯಾದರು. ಹತ್ತು ವರ್ಷಗಳ ನಂತರವೂ ಪಾಕಿಸ್ತಾನದ ಅಧಿಕಾರಿಗಳ ತನಿಖೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇದೆಲ್ಲಾ ಮುಗಿದು ಇವರೆಲ್ಲಾ ಶಿಕ್ಷೆಗೆ ಗುರಿಯಾಗುವುದು ದೂರದ ಮಾತು.

ಇದಲ್ಲದೆ ಚಾರ್ಜ್‌ಶೀಟ್‌ನಲ್ಲಿ ಇನ್ನೂ 20 ಜನರ ಹೆಸರಿತ್ತು. ಇವರು ಯಾರು? ಎಲ್ಲಿಯವರು? ಪತ್ತೆ ಹಚ್ಚಲು, ಹಿಡಿಯಲು ಯತ್ನಿಸಿದ ವಿವರಗಳು ಯಾರಿಗೂ ಗೊತ್ತಿಲ್ಲ. ಇವರ ಸಮೀಪವೂ ಪಾಕಿಸ್ತಾನ ಸರಕಾರ ತೆರಳಲಿಲ್ಲ. 27 ಭಾರತೀಯ ಸಾಕ್ಷಿಗಳು ಹೇಳಿಕೆ ಪಡೆಯಬೇಕಾಗಿದೆ, ಭಾರತದಿಂದ ಹೆಚ್ಚಿನ ಸಾಕ್ಷ್ಯಾಧಾರಗಳು ಬೇಕು ಎನ್ನುತ್ತಲೇ ಪಾಕಿಸ್ತಾನ ಯಶಸ್ವಿಯಾಗಿ 10 ವರ್ಷಗಳನ್ನು ಮುಗಿಸಿದೆ.

ಅಂತಾರಾಷ್ಟ್ರೀಯ ಪರಿಣಾಮ ಬೀರಿದ ಹೀಗೊಂದು ಭಯಾನಕ ಮುಂಬೈ ದಾಳಿ ಸುತ್ತ ಈ 10 ವರ್ಷಗಳಲ್ಲಿ ನಡೆದ ಬೆಳವಣಿಗೆಗಳು ನೂರಾರು ಸಂತ್ರಸ್ತರಿಗೆ ಪರಿಹಾರ, ದುಬಾರಿ ಹೋಟೆಲ್‌ಗಳು ಪಡೆದ ಕೋಟ್ಯಂತರ ರೂಪಾಯಿ ಇನ್ಶೂರೆನ್ಸ್‌, ಮರು ನಿರ್ಮಾಣಗೊಂಡ ಹೋಟೆಲ್‌ಗಳು, ತಾಜ್‌ ಮಹಲ್‌ನಲ್ಲಿ ಬಂದು ಇಳಿದುಕೊಂಡು ಉಗ್ರರಿಗೆ ಕಟು ಸಂದೇಶ ನೀಡಿದ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಇಸ್ರೇಲ್‌ ಭೇಟಿ ವೇಳೆ ಸಂತ್ರಸ್ತ ಬಾಲಕ ಮೋಶೆಯನ್ನು ಭೇಟಿಯಾದ ಮೋದಿ... ಹೀಗೆ ಹಲವು ಘಟನೆಗಳು ನಡೆದಿವೆ.

ಮುಂಬೈ ದಾಳಿಯ ವೇಳೆ ತಾಜ್‌ ಮಹಲ್‌ ಹೋಟೆಲ್‌ನಲ್ಲಿ ಉಗ್ರರು ಹಚ್ಚಿದ್ದ ಬೆಂಕಿ.
ಮುಂಬೈ ದಾಳಿಯ ವೇಳೆ ತಾಜ್‌ ಮಹಲ್‌ ಹೋಟೆಲ್‌ನಲ್ಲಿ ಉಗ್ರರು ಹಚ್ಚಿದ್ದ ಬೆಂಕಿ.
/ದಿ ಕ್ವಿಂಟ್‌

ಇದರ ನಡುವೆಯೇ ಹಲವು ಪುಸ್ತಕಗಳೂ ಬಿಡುಗಡೆಯಾಗಿವೆ. ಮುಶ್ರಿಫ್‌ರಂಥವರು ಬರೆದ ಭಿನ್ನ ದನಿಯ ಪುಸ್ತಕಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ರವಿ ಬೆಳಗೆರೆಯಿಂದ ಹಿಡಿದು ಅಂತರಾಷ್ಟ್ರೀಯ ಲೇಖಕರವರೆಗೆ ದಾಳಿಯ ಅನುಭವ ಕಥನಗಳು, ತನಿಖೆಯ ವಿವರಗಳನ್ನು ಆಧಾರವಾಗಿಟ್ಟುಕೊಂಡು ಬಂದ ಪುಸ್ತಕಗಳು ಹತ್ತಾರು. ಇದೇ ಕಥಾವಸ್ತುವನ್ನು ಇಟ್ಟುಕೊಂಡು ಸಿನಿಮಾ, ಅಂತರಾಷ್ಟ್ರೀಯ ಟಿವಿ ಸರಣಿಗಳು, ಸಾಕ್ಷ್ಯಿಚಿತ್ರಗಳೂ ನಿರ್ಮಾಣಗೊಂಡಿವೆ.

ಇಷ್ಟನ್ನೆಲ್ಲಾ ನೋಡು ನೋಡುತ್ತಲೇ 2018 ಮುಗಿಯುವ ಹಂತಕ್ಕೆ ಬಂದಿದ್ದೇವೆ. ದಾಳಿಗೆ ದಶ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವರದಿಗಳ ಸುರಿಮಳೆಯಾಗುತ್ತಿದೆ. ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ಗ್ರೂಪ್‌ ಮತ್ತು ಫೇಸ್‌ಬುಕ್‌ ಜತೆಯಾಗಿ ‘26/11 ಸ್ಟೊರೀಸ್‌ ಆಫ್‌ ಸ್ಟ್ರೆಂತ್‌’ ಎಂಬ ಅದ್ಧೂರಿ ಕಾರ್ಯಕ್ರಮವನ್ನು ‘ಗೇಟ್‌ ವೇ ಆಫ್‌ ಮುಂಬೈ’ ಮುಂಭಾಗ ಯಶಸ್ವಿಯಾಗಿ ನಡೆಸಿವೆ. ಇನ್ನೊಂದು ಕಾರ್ಯಕ್ರಮ ಸೋಮವಾರ ಇದೇ ಜಾಗದಲ್ಲಿ ಆಯೋಜನೆಯಾಗಿದೆ. ಹಲವು ದೊಡ್ಡ ದೊಡ್ಡ ಕಾರ್ಪೊರೇಟ್‌ ಕಂಪನಿಗಳು ಇದಕ್ಕೆ ಕೈ ಜೋಡಿಸಿವೆ ಎಂಬುದು ವಿಶೇಷ.

ಕಾರ್ಯಕ್ರಮದ ಭಾಗವಾಗಿ ಹಲವರು ಲೇಖನಗಳನ್ನು ಬರೆಯುತ್ತಿದ್ದಾರೆ. ಹೀಗೆ ‘ಸ್ಟೋರೀಸ್‌ ಆಫ್‌ ಸ್ಟ್ರೆಂತ್‌’ ಲೇಖನವನ್ನು ಇವತ್ತು ಬರೆದವರು ಕಾರ್ಪೊರೇಟ್‌ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌. ‘ಆಧ್ಯಾತ್ಮ ವರ್ಸಸ್‌ ಭಯೋತ್ಪಾದನೆ' ಎಂಬ ತಮ್ಮ ಅಂಕಣದಲ್ಲಿ ಜನರಲ್ಲಿ ನಂಬಿಕೆ, ಸಾಮರಸ್ಯ ಬೆಸೆಯುವಲ್ಲಿ ಆಧ್ಯಾತ್ಮದ ಪಾತ್ರ ಮಹತ್ವದ್ದು. ಆಧ್ಯಾತ್ಮ ‘ಸೇಫ್ಟಿ ವಾಲ್ವ್’ ಇದ್ದಂತೆ ಎಂದು ಹೇಳುತ್ತಿದ್ದಾರೆ. ಮತ್ತವರ ಮಾತನ್ನೆ ಹೆಚ್ಚಿನ ಜನರು ಕೇಳುತ್ತಿದ್ದಾರೆ. ಹೀಗೆ ಹತ್ತು ವರ್ಷ ಕಳೆದು ಹನ್ನೊಂದನೇ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ನೀವು ದಶಕದ ಹಿಂದಿನ ಕಹಿ ನೆನಪಿಗೆ ನಾನಾ ರೀತಿಯಲ್ಲಿ ಮುಖಾಮುಖಿಯಾಗಲೇಬೇಕಿದೆ. ಏನಕ್ಕೂ ಸಿದ್ಧರಾಗಿ ಅಷ್ಟೆ.