34 ವರ್ಷದ ಹಿಂದೆ ಬಿದ್ದಿದ್ದ ದೊಡ್ಡ ಮರ; ಮತ್ತೆ ಕಾಂಗ್ರೆಸ್‌ ಬುಡ ಅದುರಿಸಲಿದೆಯೇ ಸಿಖ್‌ ದಂಗೆ?
ದೇಶ

34 ವರ್ಷದ ಹಿಂದೆ ಬಿದ್ದಿದ್ದ ದೊಡ್ಡ ಮರ; ಮತ್ತೆ ಕಾಂಗ್ರೆಸ್‌ ಬುಡ ಅದುರಿಸಲಿದೆಯೇ ಸಿಖ್‌ ದಂಗೆ?

‘ಕಾಂಗ್ರೆಸ್ ಮುಖಂಡರ ಅಣತಿಯಂತೇ ಸಿಖ್‌ ದಂಗೆ ನಡೆದಿತ್ತು’ ಎಂಬ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಈಗ ಕಾಂಗ್ರೆಸ್‌ ಪಕ್ಷವನ್ನು ಹಣಿಯಲು ಮುಂದಾಗಿದೆ.

"ಒಂದು ದೊಡ್ಡ ಮರ ಬಿದ್ದಾಗ ಭೂಮಿ ಅದುರುವುದು ಸಹಜ" – 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ನಡೆದ ‘ಸಿಖ್‌ ದಂಗೆ’ಯನ್ನು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಸಮರ್ಥಿಸಿಕೊಂಡು ಆಡಿದ್ದ ಮಾತಿದು. ಇಂದಿರಾ ಗಾಂಧಿ ಹತ್ಯೆ ಹಾಗೂ ಸಿಖ್‌ ದಂಗೆ ನಡೆದು ಸುಮಾರು ಮೂರೂವರೆ ದಶಕದ ಬಳಿಕ ಇದರ ಮಸಿ ಮತ್ತೆ ಕಾಂಗ್ರೆಸ್‌ಗೆ ಮೆತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

‘ಕಾಂಗ್ರೆಸ್ ಮುಖಂಡರ ಅಣತಿಯಂತೇ ಸಿಖ್‌ ದಂಗೆ ನಡೆದಿತ್ತು’ ಎಂಬ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಈಗ ಕಾಂಗ್ರೆಸ್‌ ಪಕ್ಷವನ್ನು ಹಣಿಯಲು ಮುಂದಾಗಿದೆ. ಸಿಖ್‌ ದಂಗೆಯಲ್ಲಿ ಇಬ್ಬರು ಕಾಂಗ್ರೆಸ್‌ ಮುಖಂಡರು ತಪ್ಪಿತಸ್ಥರು ಎಂದು ದೆಹಲಿ ಕೋರ್ಟ್‌ ಹೇಳಿರುವುದರಿಂದ ಕಾಂಗ್ರೆಸ್ ಕಾಲೆಳೆಯಲು ಬಿಜೆಪಿಗೆ ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ. ರಾಮಮಂದಿರ, ಶಬರಿಮಲೆ ವಿಚಾರಗಳ ಜತೆಗೆ ಚುನಾವಣಾ ವಿಷಯವಾಗಿ ಬಳಸಿಕೊಳ್ಳಲು ಬಿಜೆಪಿಗೆ ಈಗ ಸಿಖ್‌ ದಂಗೆ ಸಹಕಾರಿಯಾಗಲಿದೆ.

ಗೋದ್ರಾ ಹತ್ಯಾ ಕಾಂಡದಲ್ಲಿ ಬಿಜೆಪಿ ಅನುಭವಿಸಿದ್ದ ಮುಜುಗರವನ್ನು ಈಗ ಸಿಖ್‌ ದಂಗೆ ವಿಚಾರದಲ್ಲಿ ಕಾಂಗ್ರೆಸ್‌ ಅನುಭವಿಸುವ ದಿನಗಳು ಆರಂಭವಾಗಿವೆ ಎನ್ನಲಾಗುತ್ತಿದೆ. ಮರೆತು ಹೋಗಿದ್ದ ಸಿಖ್ ದಂಗೆ ಮತ್ತೆ ಜೀವಂತವಾಗುವ ಮೂಲಕ ಈಗ ಕಾಂಗ್ರೆಸ್‌ ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಸಂದರ್ಭ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸಿಖ್‌ ದಂಗೆ ಕಾಂಗ್ರೆಸ್‌ಗೆ ತಕ್ಕಮಟ್ಟಿಗೆ ಪೆಟ್ಟುಕೊಡುವ ಸಾಧ್ಯತೆಗಳಿವೆ.

ಸಿಖ್‌ ದಂಗೆಗೆ ಕಾಂಗ್ರೆಸ್‌ ಪಕ್ಷ ಕಾರಣವಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪದೇ ಪದೇ ಹೇಳುತ್ತಿದ್ದರೂ ಇತಿಹಾಸದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಸಿಖ್‌ ದಂಗೆಯ ಇತಿಹಾಸದ ಸತ್ಯ ಈಗ ಮತ್ತೆ ವರ್ತಮಾನದ ಬೆಳಕಿನಲ್ಲಿ ಕಾಣುವಂತಾಗಿದೆ. ಸಿಖ್‌ ದಂಗೆ ಸಂದರ್ಭದಲ್ಲಿ ಸಿಖ್ಖರ ಮೇಲೆ ದಾಳಿ ಮಾಡುವಂತೆ ಪ್ರಚೋದನೆ ನೀಡಿದ್ದ ಆರೋಪ ಹೊತ್ತಿದ್ದ ಕಾಂಗ್ರೆಸ್‌ ಮುಖಂಡರಾದ ಸಜ್ಜನ್‌ ಕುಮಾರ್‌ ಮತ್ತು ಜಗದೀಶ್‌ ಟೈಟ್ಲರ್‌ ತಪ್ಪಿತಸ್ಥರು ಎಂದು ದೆಹಲಿ ಕೋರ್ಟ್‌ ಹೇಳಿದೆ. ಇದರಿಂದ ಸಿಖ್‌ ದಂಗೆಯ ಅಡ್ಡಕತ್ತರಿಗೆ ಕಾಂಗ್ರೆಸ್‌ ಸಿಲುಕಿದಂತಾಗಿದೆ.

ಸಿಖ್ ದಂಗೆ ಹಿನ್ನೆಲೆ:

ಹತ್ಯೆಗೀಡಾದ ಇಂದಿರಾ ಗಾಂಧಿ...
ಹತ್ಯೆಗೀಡಾದ ಇಂದಿರಾ ಗಾಂಧಿ...
/ಬಿಬಿಸಿ

ಆಪರೇಷನ್‌ ಬ್ಲ್ಯೂಸ್ಟಾರ್‌ಗೆ ಪ್ರತೀಕಾರವಾಗಿ 1984ರ ಅಕ್ಟೋಬರ್‌ 31ರಂದು ಇಂದಿರಾ ಗಾಂಧಿಯನ್ನು ಅವರ ಸಿಖ್‌ ಅಂಗ ರಕ್ಷಕರು ಗುಂಡಿಕ್ಕಿ ಕೊಂದಿದ್ದರು. ಮರು ದಿನದಿಂದಲೇ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಕಡೆಗಳಲ್ಲಿ ಸಿಖ್ಖರನ್ನು ಗುರಿಯಾಗಿಸಿಕೊಂಡು ದಂಗೆಗಳೆದ್ದವು. ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ ಕಾಂಗ್ರೆಸ್‌ ಪಕ್ಷದ ಮುಖಂಡರೇ ಸಿಖ್ಖರ ವಿರುದ್ಧ ದಂಗೆ ನಡೆಸಿದ ಆರೋಪ ಕಳೆದ ಮೂರು ದಶಕಗಳಿಂದಲೂ ಇದೆ.

ಇದರ ಸುದೀರ್ಘ ವಿಚಾರಣೆಗಳು ನಡೆದು 1994ರಲ್ಲಿ ದೆಹಲಿ ಪೊಲೀಸರು ಸಿಖ್‌ ದಂಗೆ ಪ್ರಕರಣಗಳಿಗೆ ಇತಿಶ್ರೀ ಹಾಡಿದ್ದರು. ಆದರೆ, 2015ರಲ್ಲಿ ಸಿಖ್‌ ದಂಗೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಇದೀಗ ಇಬ್ಬರು ಕಾಂಗ್ರೆಸ್‌ ಮುಖಂಡರು ತಪ್ಪಿತಸ್ಥರು ಎಂದು ಕೋರ್ಟ್‌ ಹೇಳಿರುವುದರಿಂದ ಎಸ್‌ಐಟಿ ತನಿಖೆಗೆ ಪ್ರಾಮುಖ್ಯತೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿಖ್‌ ದಂಗೆ ಪ್ರಕರಣ ಇನ್ಯಾವ ಕಾಂಗ್ರೆಸ್‌ ಮುಖಂಡರ ಬುಡಕ್ಕೆ ಬರಲಿದೆಯೋ ಗೊತ್ತಿಲ್ಲ.

Also read: ರಾಜತಾಂತ್ರಿಕ ಮಟ್ಟದಲ್ಲಿ ಎದ್ದ ಹೊಸ ವಿವಾದ ಮತ್ತು ಖಲಿಸ್ತಾನ ಚಳವಳಿಯ ರಕ್ತಸಿಕ್ತ ಅಧ್ಯಾಯ