ಲೆಟ್ಸ್ ಹ್ಯಾವ್ ಫನ್: ವಿವಾಹ ಬಾಹಿರ ಸಂಬಂಧ ಅಪರಾಧವಲ್ಲ ಎಂದ ಸುಪ್ರಿಂ ಕೋರ್ಟ್
ದೇಶ

ಲೆಟ್ಸ್ ಹ್ಯಾವ್ ಫನ್: ವಿವಾಹ ಬಾಹಿರ ಸಂಬಂಧ ಅಪರಾಧವಲ್ಲ ಎಂದ ಸುಪ್ರಿಂ ಕೋರ್ಟ್

“ವ್ಯಭಿಚಾರದಿಂದ ಅತೃಪ್ತ ವೈವಾಹಿಕ ಜೀವನವಲ್ಲ, ಬದಲಿಗೆ ಅತೃಪ್ತ ವೈವಾಹಿಕ ಜೀವನದ ಪರಿಣಾಮವೇ ವಿವಾಹ ಬಾಹಿರ ಸಂಬಂಧ” - ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ. 

158 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನಿಗೆ ತಿಲಾಂಜಲಿ ನೀಡಿರುವ ಸುಪ್ರೀಂ ಕೋರ್ಟ್‌ ವಿವಾಹ ಬಾಹಿರ ಸಂಬಂಧ ಅಪರಾಧವಲ್ಲ ಎಂದು ಹೇಳಿದೆ. ಆದರೆ ಇದು ವಿಚ್ಛೇದನಕ್ಕೆ ಸೂಕ್ತ ಕಾರಣವಾಗಬಹುದು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪಿತ್ತಿದೆ. ಈ ಮೂಲಕ 158 ವರ್ಷಗಳಿಂದ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್‌ 497ನ್ನು ನ್ಯಾಯಾಲಯ ರದ್ದುಗೊಳಿಸಿದೆ.

ವಿವಾಹಿತ ಮಹಿಳೆಯೊಂದಿಗೆ ವ್ಯಕ್ತಿಯು ಲೈಂಗಿಕ ಸಂಬಂಧ ಹೊಂದುವುದು ಅಪರಾಧವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹೇಳಿದ್ದಾರೆ. ವ್ಯಭಿಚಾರವನ್ನು ಅಪರಾಧವನ್ನಾಗಿಸುವುದು ಹಿಂದುಳಿದಿರುವ ಸಂಕೇತ ಮತ್ತು ಇದರಿಂದ ‘ಅತೃಪ್ತ ಜನರನ್ನು ಶಿಕ್ಷಿಸಿದಂತಾಗುತ್ತದೆ’ ಎಂದು ವ್ಯಾಖ್ಯಾನಿಸಿದೆ.

ಈ ಹಿಂದೆ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್‌ 497 ಪ್ರಕಾರ ವಿವಾಹಿತೆಯೊಂದಿಗೆ ಆಕೆಯ ಗಂಡನ ಒಪ್ಪಿಗೆ ಇಲ್ಲದೆ ಲೈಂಗಿಕ ಸಂಪರ್ಕ ಸಾಧಿಸುವುದು ಅಪರಾಧವಾಗಿತ್ತು. ಇದನ್ನು ಅತ್ಯಾಚಾರವೆಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿರಲಿಲ್ಲ. ಆದರೆ ಲೈಂಗಿಕ ಸಂಪರ್ಕ ಸಾಧಿಸಿದ ವ್ಯಕ್ತಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿತ್ತು. ಇದರಲ್ಲಿ ಮಹಿಳೆಯನ್ನು ಗಂಡನ ‘ಆಸ್ತಿ’ ಎಂದು ಪರಿಗಣಿಸುವ ಮೂಲಕ ಆಕೆಗೆ ಯಾವುದೇ ಶಿಕ್ಷೆ ನೀಡಲು ಅವಕಾಶ ಇರಲಿಲ್ಲ. ಇದೀಗ ಈ ಕಾನೂನನ್ನು ಕೋರ್ಟ್‌ ರದ್ದುಗೊಳಿಸಿದೆ.

“ಮನೆಯನ್ನು ನಾಶ ಪಡಿಸಲು ಯಾವುದೇ ಸಾಮಾಜಿಕ ಪರವಾನಗಿ” ಇರಬಾರದು ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ, ಹೆಂಡತಿಯನ್ನು ‘ಆಸ್ತಿ’ ಎಂದು ಪರಿಗಣಿಸಲಾಗದು ಎಂದಿದ್ದಾರೆ. ಗಂಡ ಹೆಂಡತಿಯ ನಿಯಂತ್ರಕನಲ್ಲ ಎಂದೂ ಹೇಳಿರುವ ಕೋರ್ಟ್‌, ಹಲವು ದೇಶಗಳು ವ್ಯಭಿಚಾರವನ್ನು ಶಿಕ್ಷಾರ್ಹ ಅಪರಾಧದಿಂದ ಕೈಬಿಟ್ಟಿರುವುದನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದೆ.

ವಿವಾಹ ಬಾಹಿರ ಸಂಬಂಧದಲ್ಲಿ ಪುರುಷನಿಗೆ ಮಾತ್ರ ಶಿಕ್ಷೆ ನೀಡುವುದು ತಾರತಮ್ಯವಾಗುತ್ತದೆ ಎಂದು ಪ್ರಶ್ನಿಸಿ ಹಲವರು ಐಪಿಸಿ ಸೆಕ್ಷನ್‌ 497ರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಈ ಕಾಯಿದೆಯ ಪರವಾಗಿ ವಾದಿಸಿದ್ದ ಕೇಂದ್ರ ಸರಕಾರ, ವ್ಯಭಿಚಾರವನ್ನು ಅಪರಾಧವಾಗಿಯೇ ಪರಿಗಣಿಸಬೇಕು. ಇದರಿಂದ ಮದುವೆಯ ‘ಪಾವಿತ್ರ್ಯತೆ’ಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ವಾದಿಸಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಒಂದೊಮ್ಮೆ ಮಹಿಳೆಯ ಗಂಡ ಆಕೆಯ ಪರವಾಗಿ ನಿಂತು ಅನೈತಿಕ ಸಂಬಂಧ ಶಿಕ್ಷಾರ್ಹವಲ್ಲದಾಗ ಸರಕಾರ ಹೇಗೆ ಮದುವೆ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿತ್ತು. ಮುಂದುವರಿದು ಇಂದು ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ, “ವ್ಯಭಿಚಾರ ಅತೃಪ್ತ ವೈವಾಹಿಕ ಜೀವನಕ್ಕೆ ಕಾರಣವಾಗಲಾರದು, ಬದಲಿಗೆ ಅತೃಪ್ತ ವೈವಾಹಿಕ ಜೀವನದ ಪರಿಣಾಮವೇ ವಿವಾಹ ಬಾಹಿರ ಸಂಬಂಧ,” ಎಂದು ಹೇಳಿದ್ದಾರೆ.

ಈ ಹಿಂದೆ ಮೂರು ಬಾರಿ ಸುಪ್ರೀಂ ಕೋರ್ಟ್‌ ವ್ಯಭಿಚಾರವನ್ನು ಎತ್ತಿ ಹಿಡಿದಿತ್ತು. ಆದರೆ ಕಳೆದ ವರ್ಷ ಸುಪ್ರೀಂ ಕೋರ್ಟ್‌, ‘ವ್ಯಭಿಚಾರದ ಕಾನೂನು ಮಹಿಳೆಯರು ತನ್ನ ಗಂಡನ ಅಧೀನವೆಂದು ಪರಿಗಣಿಸುತ್ತದೆ. ಇದೀಗ ಮಹಿಳೆಯೊಬ್ಬಳು ಪ್ರತಿ ವಿಷಯದಲ್ಲಿ ಒಬ್ಬ ಪುರುಷನಿಗೆ ಸಮನಾವಾಗಿರುತ್ತಾಳೆ ಎಂದು ತಿಳಿದುಕೊಳ್ಳುವ ಸಮಯ ಬಂದಿದೆ’ ಎಂದು ಹೇಳಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ತೀರ್ಪು ಹೊರ ಬಿದ್ದಿದ್ದು, ‘ವಿವಾಹ ಬಾಹಿರ ಸಂಬಂಧವನ್ನು ಅಪರಾಧವಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.