‘ಅಂದು - ಇಂದು’: ಫ್ರೆಂಚ್‌ ಮಾಧ್ಯಮಗಳ ಕಣ್ಣಲ್ಲಿ ರಫೇಲ್‌ ಡೀಲ್‌...
ದೇಶ

‘ಅಂದು - ಇಂದು’: ಫ್ರೆಂಚ್‌ ಮಾಧ್ಯಮಗಳ ಕಣ್ಣಲ್ಲಿ ರಫೇಲ್‌ ಡೀಲ್‌...

ಒಂದು ಕಾಲದಲ್ಲಿ ರಫೇಲ್‌ ಡೀಲ್‌ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ನೀಡಿದ ಕೊಡುಗೆ ಅಂತ ಫ್ರೆಂಚ್ ಮಾಧ್ಯಮಗಳು ಬಣ್ಣಿಸಿದ್ದವು. ಇವತ್ತು ಅದೇ ಒಪ್ಪಂದ ಉಬಯ ದೇಶಗಳ ಸಂಬಂಧಕ್ಕೆ ಮಾರಕ ಅನ್ನುತ್ತಿವೆ. 

ರಫೇಲ್‌ ಯುದ್ಧ ವಿಮಾನ ಖರೀದಿ ವಿವಾದ ದೇಶದಲ್ಲಿ ಸದ್ದು ಮಾಡುತ್ತಿದೆ. ಪರಿಣಾಮ ಕೇಂದ್ರ ಸರಕಾರ ಪೇಚಿಗೆ ಸಿಲುಕಿದೆ. ಭಾರತದಲ್ಲಷ್ಟೇ ಅಲ್ಲದೆ ಫ್ರಾನ್ಸ್‌ನಲ್ಲೂ ಈ ಯುದ್ಧ ವಿಮಾನ ಖರೀದಿ ವಿವಾದ ಚರ್ಚೆಗೆ ಗ್ರಾಸವಾಗಿದ್ದು ಅಲ್ಲಿನ ಪ್ರಮುಖ ಮಾಧ್ಯಮಗಳು ಡೀಲ್‌ ಹಿಂದೆ ಬಿದ್ದಿವೆ. ಅಲ್ಲಿನ ಮಾಧ್ಯಮಗಳು ಎರಡು ವರ್ಷಗಳ ಹಿಂದೆ ಈ ವಿವಾದದ ಬಗ್ಗೆ ಏನು ಹೇಳಿದ್ದವು; ಸದ್ಯಕ್ಕೆ ಏನು ಹೇಳುತ್ತಿವೆ ಎಂಬುದನ್ನು ಇಲ್ಲಿ ನೀಡಿದ್ದೇವೆ.

7.8 ಬಿಲಿಯನ್‌ ಯೂರೋ ಒಪ್ಪಂದ:

ಸೆಪ್ಟೆಂಬರ್‌ 23, 2016ರಂದು ರಪೇಲ್‌ ಒಪ್ಪಂದಕ್ಕೆ ಸಹಿ ಬಿದ್ದಿತ್ತು. ಭಾರತದ ಕಡೆಯಿಂದ ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್ ಮತ್ತು ಫ್ರಾನ್ಸ್‌ ರಕ್ಷಣಾ ಸಚಿವ ಜೀನ್‌ ವ್ಯೆಸ್‌ ಲೆ ಡ್ರಿಯಾನ್‌ ಒಪ್ಪಂದಕ್ಕೆ ಷರಾ ಬರೆದಿದ್ದರು. ಅವತ್ತು ಈ ಒಪ್ಪಂದದ ಬಗ್ಗೆ ವರದಿ ಮಾಡಿದ್ದ ಫ್ರಾನ್ಸ್‌ನ ‘ಆರ್‌ಎಫ್‌ಐ’, ಇದು 7.8 ಬಿಲಿಯನ್‌ ಯೂರೋ (ಇಂದಿನ ಲೆಕ್ಕದಲ್ಲಿ 66 ಸಾವಿರ ಕೋಟಿ ರೂ.) ಒಪ್ಪಂದ ಎಂದು ಹೇಳಿತ್ತು. ವಿಶೇಷವೆಂದರೆ ಇಂದಿಗೂ ಈ ಖರೀದಿ ಡೀಲ್‌ನ ಮೊತ್ತ ಎಷ್ಟು ಎಂಬ ಬಗ್ಗೆ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ಜಟಾಪಟಿ ನಡೆಯುತ್ತಿದೆ.

‘ಸುಮಾರು 9 ವರ್ಷಗಳ ಟೆಂಡರ್‌ ಪ್ರಕ್ರಿಯೆ ನಂತರ ಭಾರತ ಮತ್ತು ಡಸಾಲ್ಟ್‌ ನಡುವೆ ಚರ್ಚೆ ನಡೆದು ಇದೀಗ ಡೀಲ್‌ಗೆ ಬರಲಾಗಿದೆ. ಇದರಿಂದ ನವ ದೆಹಲಿ ಸಂಭ್ರಮಾಚರಣೆಯಲ್ಲಿದೆ’ ಎಂದು ಅದು ಬರೆದಿತ್ತು.

2007ರಲ್ಲಿ ಈ ಒಪ್ಪಂದದ ಒಳಕ್ಕೆ ಡಸಾಲ್ಟ್‌ ನುಸುಳಿತ್ತು. ಆರಂಭದಲ್ಲಿ ಇದು 126 ಯುದ್ಧ ವಿಮಾನ ಖರೀದಿಯ ಒಪ್ಪಂದವಾಗಿತ್ತು. ನಂತರ ಈ ಸಂಖ್ಯೆಯನ್ನು 36ಕ್ಕೆ ಇಳಿಸಲಾಯಿತು ಎಂದು ಅಂದೇ ಫ್ರಾನ್ಸ್‌ ಮಾಧ್ಯಮ ಬರೆದಿತ್ತು. ವಿಮಾನ ರಫ್ತಿನ ವಿಚಾರದಲ್ಲಿ ಇದು ಜಗತ್ತಿನಲ್ಲಿ ಈವರೆಗೆ ನಡೆದ ಅತೀ ದೊಡ್ಡ ಡೀಲ್‌ ಎಂದು ಅದು ಬಣ್ಣಿಸಿತ್ತು.

ಆದರೆ, ಟೀಕಾಕಾರರು ವಿಮಾನದ ಬೆಲೆಯ ಬಗ್ಗೆ ತಕರಾರು ಎತ್ತಿದ್ದಾರೆ ಎಂದುದನ್ನು ವರದಿಯಲ್ಲಿ ದಾಖಲಿಸಲಾಗಿತ್ತು. ಮತ್ತು ಸಂಖ್ಯೆಗಳನ್ನು ಕಡಿಮೆಗೊಳಿಸಿದ್ದಕ್ಕೂ ಟೀಕೆಗಳು ವ್ಯಕ್ತವಾಗಿದ್ದವು. ಇವೆಲ್ಲದರಾಚೆಗೆ ಈ ಡೀಲ್‌ ಭಾರತ ಮತ್ತು ಫ್ರಾನ್ಸ್‌ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿದೆ ಎಂದು ಅಭಿಪ್ರಾಯಪಟ್ಟಿತ್ತು ‘ಆರ್‌ಎಫ್‌ಐ’ ವೆಬ್‌ಸೈಟ್‌.

ಡಸಾಲ್ಟ್‌ ಶಾಪ ವಿಮೋಚನೆ:

ಸೆಪ್ಟೆಂಬರ್ 23, 2016ರಂದೇ ಇನ್ನೊಂದು ವರದಿ ಬರೆದಿದ್ದ ಆರ್‌ಎಫ್‌ಐ ಈ ಡೀಲ್‌ ‘ಡಸಾಲ್ಟ್‌ನ ಶಾಪ ವಿಮೋಚನೆ’ ಎಂದು ಕರೆದಿತ್ತು. 2001ರಿಂದ ಬರೋಬ್ಬರಿ 14 ವರ್ಷಗಳ ಕಾಲ ವಿದೇಶಿ ರಫ್ತಿಗೆ ಯತ್ನಿಸಿ ಸೋತಿದ್ದ ಡಸಾಲ್ಟ್‌ ಮೊದಲ ಬಾರಿಗೆ ಯಶಸ್ವಿ ಡೀಲ್‌ ಕುದಿರಿಸಿದೆ ಎಂದು ಅದು ಬರೆದಿತ್ತು.

ಯುದ್ಧ ವಿಮಾನಗಳ ಯಶಸ್ಸು ಆರಂಭವಾಗಿದೆ. ಫೆಬ್ರವರಿಯಲ್ಲಿ ಈಜಿಪ್ಟ್‌ 24 ರಫೇಲ್‌ ಖರೀದಿಸಿದೆ. ಮೇನಲ್ಲಿ ಕತಾರ್‌ ಮತ್ತು ಇದೀಗ ಬಾರತ ರಫೇಲ್‌ ಖರೀದಿಗೆ ಮುಂದಾಗಿವೆ. ಇದು ಡಸಾಲ್ಟ್‌ ಪಾಲಿನ ಅತೀ ದೊಡ್ಡ ಡೀಲ್‌ ಎಂಬುದಾಗಿ ವೆಬ್‌ಸೈಟ್‌ ಬರೆದುಕೊಂಡಿತ್ತು.

ಆರಂಭದಲ್ಲಿ 126 ವಿಮಾನಗಳ ಖರೀದಿಗೆ ಭಾರತ ಮುಂದಾಗಿತ್ತು. ಆದರೆ 2014ರಲ್ಲಿ ಸರಕಾರ ಬದಲಾದ ನಂತರ ನರೆಂದ್ರ ಮೋದಿ ತುರ್ತು ಅಗತ್ಯಕ್ಕಾಗಿ 36 ವಿಮಾನಗಳ ಖರೀದಿಗೆ ಮುಂದಾದರು. ಭಾರತಕ್ಕೆ ಇನ್ನೂ 90 ಹೆಚ್ಚುವರಿ ಯುದ್ಧ ವಿಮಾನಗಳು ಬೇಕಾಗಿದೆ. ಯುಎಇಗೂ 60 ರಫೇಲ್‌ಗಳು ಬೇಕಾಗಿವೆ ಎಂದು ಅದು ಬರೆದಿತ್ತು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಡಸಾಲ್ಟ್‌ ಸಿಇಒ ಎರಿಕ್‌ ಟ್ರಾಪಿಯರ್‌, "ನಾವು ಭಾರತದ ಇಲಾಖೆಗಳನ್ನು ನಿರೀಕ್ಷಿಸುತ್ತಿದ್ದೇವೆ. ರಫೇಲ್‌ ಬಗ್ಗೆ ಒಂದು ದಿನ ಅವರಿಗೆ ಮನವರಿಕೆ ಮಾಡಲು ಇಚ್ಛಿಸಿದ್ದೇವೆ. ಇದರಿಂದ ಭಾರತದಲ್ಲಿ ರಫೇಲ್‌ ಉತ್ಪಾದನೆ ಬಗ್ಗೆ ನಮಗೆ ತುಸು ಹೆಚ್ಚಿನ ಸಹಾಯವಾಗಲಿದೆ,” ಎಂದಿದ್ದರು.

ಆದರೆ ಮುಂದೆ ಪರಿಸ್ಥಿತಿ ಬದಲಾಗುತ್ತಾ ಹೋಗಿದ್ದನ್ನು ಫ್ರಾನ್ಸ್ ಮಾಧ್ಯಮಗಳು ಬೆನ್ನು ಹತ್ತಿದ್ದವು.

ವಿವಾದಗಳಿಂದಾಗಿ ಭಾರತ ಹೊಸ ಡೀಲ್‌ನಿಂದ ಹಿಂದೆ ಸರಿಯಲಿದೆ ಎಂದು ‘ಲಾ ಟ್ರಿಬ್ಯೂನ್‌’ ವೆಬ್ಸೈಟ್‌ ಕಳೆದ ಏಪ್ರಿಲ್‌ನಲ್ಲೇ ವರದಿ ಮಾಡಿದೆ. ನಮ್ಮಲ್ಲಿ ವಿತ್ತ ಸಚಿವರು, ರಕ್ಷಣಾ ಸಚಿವರು ಈ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ ಎಂಬುದನ್ನು ಗಮನಿಸಬೇಕಿದೆ.

ಹೊಸ ಡೀಲ್‌ನಿಂದ ಭಾರತ ಹಿಂದಕ್ಕೆ:

ರಫೇಲ್‌ ಡೀಲ್‌ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ದೃಶ್ಯ. 
ರಫೇಲ್‌ ಡೀಲ್‌ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ದೃಶ್ಯ. 

36 ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ 2016ರಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿವಾದ ಎದ್ದಿರುವುದರಿಂದ ಹೊಸ ಒಪ್ಪಂದಕ್ಕೆ ಬರಲು ಭಾರತ ಹಿಂದೇಟು ಹಾಕುತ್ತಿದೆ. ಲೋಕಸಭೆ ಚುನಾವಣೆಗೆ ಒಂದು ವರ್ಷವಿರುವಾಗ ವಿವಾದಗಳಲ್ಲಿ ಸಿಲುಕಿಕೊಳ್ಳಲು ಇಚ್ಚಿಸದ ಪ್ರಧಾನಿ ನರೇಂದ್ರ ಮೋದಿ ಒಪ್ಪಂದಕ್ಕೆ ಸಹಿ ಹಾಕದಿರಲು ತೀರ್ಮಾನಿಸಿದೆ ಎಂದು ಬರೆದಿತ್ತು.

'ಆದರೆ ಮೇನಲ್ಲಿ ಭಾರತ ಪ್ರವಾಸ ಮಾಡಲಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಡಸಾಲ್ಟ್‌, ಏರ್‌ಬಸ್‌, ಏರಿಯಾನ್‌ಗ್ರೂಪ್‌, ಎಂಬಿಡಿಎ, ಸಾಫ್ರಾನ್‌ ಮತ್ತು ಥೇಲ್ಸ್‌ ಕಂಪನಿಗಳ ಪ್ರತಿನಿಧಿಗಳ ಜತೆ ಭಾರತಕ್ಕೆ ತೆರಳಲಿದ್ದಾರೆ. ಹೀಗಾಗಿ ಈ ಡೀಲ್‌ ಕೊನೆಗೂ ನಡೆಯಬಹುದು,’ ಎಂದು ಸಣ್ಣ ಆಶಯವನ್ನು ‘ಲಾ ಟ್ರಿಬ್ಯೂನ್‌’ ವ್ಯಕ್ತಪಡಿಸಿತ್ತು.

ಡಸಾಲ್ಟ್‌ ಹೊಸ ಒಪ್ಪಂದದ ಆಸಕ್ತಿ:

ಮಾರ್ಚ್‌ 10, 2018ರಂದು ‘ಸ್ಪುಟ್ನಿಕ್‌’ ಬರೆದಿದ್ದ ವರದಿ ಪ್ರಕಾರ, ‘2018ರ ಅಂತ್ಯಕ್ಕೆ 12 ವಿಮಾನಗಳನ್ನು ತನ್ನ ಗ್ರಾಹಕ ದೇಶಗಳಿಗೆ ಪೂರೈಸಿ ಅವರನ್ನು ಹೊಸ ಒಪ್ಪಂದಗಳಿಗೆ ಒಪ್ಪಿಸಲು ಮುಂದಾಗಿತ್ತು ಡಸಾಲ್ಟ್‌. ಇದರಲ್ಲಿ ಮುಖ್ಯವಾಗಿ ಭಾರತದ ಒಪ್ಪಂದದ ಬಗ್ಗೆಯೇ ಕಂಪನಿ ಹೆಚ್ಚು ಗಮನ ಹರಿಸಿತ್ತು. ಕಾರಣ ಭಾರತಕ್ಕೆ ದೊಡ್ಡ ಸಂಖ್ಯೆಯ ಯುದ್ಧ ವಿಮಾಗಳು ಬೇಕಾಗಿತ್ತು. ಹೀಗಿದ್ದೂ ಈ ಒಪ್ಪಂದ ನಡೆಯಲೇ ಇಲ್ಲ’ ಎಂದು ಹೇಳಿದೆ. ಜತೆಗೆ, ಈ ಕಾರಣಕ್ಕೆ ‘ರಫೇಲ್‌ ಹಗರಣ’ ಎಂಬ ಶಬ್ದ ಪ್ರಬಲವಾಗಿ ಕೇಳಿ ಬರಲು ಆರಂಭವಾಯಿತು ಎಂದು ಹೇಳಿದೆ.

ಹಗರಣದ ವಾಸನೆ:

ಭಾರತದ ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್ ಮತ್ತು ಫ್ರಾನ್ಸ್‌ ರಕ್ಷಣಾ ಸಚಿವ ಜೀನ್‌ ವ್ಯೆಸ್‌ ಲೆ ಡ್ರಿಯಾನ್‌ ರಫೇಲ್ ಒಪ್ಪಂದಕ್ಕೆ ಷರಾ ಹಾಕಿದ್ದರು.
ಭಾರತದ ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್ ಮತ್ತು ಫ್ರಾನ್ಸ್‌ ರಕ್ಷಣಾ ಸಚಿವ ಜೀನ್‌ ವ್ಯೆಸ್‌ ಲೆ ಡ್ರಿಯಾನ್‌ ರಫೇಲ್ ಒಪ್ಪಂದಕ್ಕೆ ಷರಾ ಹಾಕಿದ್ದರು.

ಈ ಸಂದರ್ಭದಲ್ಲಿ ರಫೇಲ್‌ ಡೀಲ್‌ನಲ್ಲಿ ಹಗರಣ ನಡೆದಿರುವ ವಾಸನೆ ಮೂಗಿಗೆ ಬಡಿಯುತ್ತಿದೆ ಎಂಬುದಾಗಿ ಸ್ಪುಟ್ನಿಕ್‌ ಜುಲೈನಲ್ಲಿ ಬರೆದಿತ್ತು. ವಿರೋಧ ಪಕ್ಷಗಳು, ‘ರಫೇಲ್‌ ಯುದ್ಧ ವಿಮಾನ ಖರೀದಿಯ ಮುಖ್ಯ ವಿವರಗಳನ್ನೇ ಗೌಪ್ಯವಾಗಿಟ್ಟಿದೆ. ಹೆಚ್ಚಿನ ಮೊತ್ತ ಪಾವತಿ ಮಾಡಿರುವುದಲ್ಲದೆ ಸರಕಾರ ಅಕ್ರಮಗಳನ್ನು ಎಸಗಿದೆ’ ಎಂದು ಆರೋಪಿಸುತ್ತಿವೆ. ಇದನ್ನು ಬೆಂಬಲಿಸಿ ರಾಹುಲ್‌ ಗಾಂಧಿ ಟ್ಟೀಟ್‌ ಮಾಡಿರುವುದನ್ನೂ ಅದು ತನ್ನ ವರದಿಯಲ್ಲಿ ಹೇಳಿತ್ತು.

ಪ್ರಧಾನಿ ತಮ್ಮ ಆಪ್ತರಿಗೆ ಕೆಲವು ಭಾಗಗಳ ನಿರ್ಮಾಣದ ಗುತ್ತಿಗೆ ನೀಡಿ ಸ್ವಜನ ಪಕ್ಷಪಾತದ ಎಸಗಿದ್ದಾರೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂಬುದಾಗಿ ವರದಿ ಹೇಳಿತ್ತು.

ಹೀಗೊಂದು ಪರಿಸ್ಥಿತಿಯಲ್ಲಿ ಇಡೀ ಡೀಲ್‌ಗೆ ದೊಡ್ಡ ಮಟ್ಟದ ತಿರುವು ನೀಡಿದ್ದು ‘ಮೀಡಿಯಾಪಾರ್ಟ್‌’ನ ವರದಿ. ಇದರಲ್ಲಿ ಮಾತನಾಡಿದ್ದ ಫ್ರಾನ್ಸ್‌ ಮಾಜಿ ಅಧ್ಯಕ್ಷ ಪ್ರಾಂಕೋಯಿಸ್‌ ಹೊಲಾಂಡ್‌ ‘ರಿಲಯನ್ಸ್‌ ಡಿಫೆನ್ಸ್‌’ ಆಯ್ಕೆ ನಮ್ಮದಲ್ಲ ಭಾರತದ್ದು ಎಂದಿದ್ದರು. ತಮ್ಮ ಪತ್ನಿ ಜ್ಯೂಲಿ ಗಯಟ್‌ ಸಿನಿಮಾಗೆ ರಿಲಯನ್ಸ್‌ ಹಣ ಹೂಡಿದ್ದರಿಂದ ಸ್ವತಃ ಆರೋಪಕ್ಕೆ ಗುರಿಯಾಗಿದ್ದ ಅವರು ಈ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆ ಸುತ್ತ ಭಾರತ ಮತ್ತು ಫ್ರಾನ್ಸ್‌ನಲ್ಲಿಯೂ ದೊಡ್ಡ ಮಟ್ಟಕ್ಕೆ ಚರ್ಚೆಗಳು ನಡೆಯುತ್ತಿವೆ. ಅದೀಗ ಭಾರತ ಮತ್ತು ಫ್ರಾನ್ಸ್‌ ಸಂಬಂಧದ ಬುಡಕ್ಕೆ ಬಂದು ನಿಂತಿದೆ.

ದ್ವಿಪಕ್ಷೀಯ ಸಂಬಂಧಕ್ಕೆ ಹುಳಿ

ತಮ್ಮನ್ನು ರಕ್ಷಿಸಿಕೊಳ್ಳಲು ಹೊಲಾಂಡ್‌ ನೀಡಿದ ಎರಡು ವಾಕ್ಯಗಳು ಬೆಂಕಿ ಬಿರುಗಾಳಿ ಎಬ್ಬಿಸಿವೆ ಎಂದು ‘ಚಾಲೆಂಜ್‌’ ಸೆಪ್ಟೆಂಬರ್‌ 24ರಂದು ವರದಿ ಮಾಡಿದೆ. “ಭಾರತ ಸರ್ಕಾರವೇ ಗ್ರೂಪ್‌ನ ಹೆಸರನ್ನು ಪ್ರಸ್ತಾಪಿಸಿತ್ತು. ನಂತರ ಡಸಾಲ್ಟ್‌ ಅಂಬಾನಿ ಜತೆ ಚರ್ಚೆಗೆ ಮುಂದಾಗಿತ್ತು,” ಎಂದು ಹೊಲಾಂಡ್ ನೀಡಿದ ಹೇಳಿಕೆ ದೆಹಲಿಯಲ್ಲಿ ಬಾಂಬ್‌ ಹಾಕಿತ್ತು. ಇದಕ್ಕೆ ವಿರುದ್ಧವಾದ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು. ಇದರಿಂದ ಈ ವಾಕ್ಯ ರಾಹುಲ್‌ ಗಾಂದಿ ಪಾಲಿಗೆ ಸ್ವರ್ಗದ ಉಡುಗೊರೆಯಾಗಿ ತೇಲಿ ಬಂತು ಎಂದು ಅದು ಹೇಳಿದೆ.

ಇದೀಗ ಫ್ರಾನ್ಸ್ ಸರ್ಕಾರವೂ ಸೇರಿದಂತೆ ಅಲ್ಲಿನ ಮಾಧ್ಯಮಗಳು ಹೊಲಾಂಡ್‌ ಹೇಳಿಕೆ ಮತ್ತು ಅದರ ನಂತರ ತಿರುವ ಪಡೆದುಕೊಂಡ ರಫೇಲ್‌ ಡೀಲ್‌ ಭಾರತ ಮತ್ತು ಫ್ರಾನ್ಸ್‌ ದ್ವಿಪಕ್ಷೀಯ ಸಂಬಂಧಕ್ಕೆ ಹುಳಿ ಹಿಂಡುತ್ತಿದೆ ಎಂಬ ವಿಶ್ಲೇಷಣೆಗೆ ಬಂದು ನಿಂತಿವೆ. ಒಂದು ಕಾಲದಲ್ಲಿ ರಫೇಲ್‌ ಡೀಲ್‌ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ನೀಡಿದ ಕೊಡುಗೆ ಎಂಬಲ್ಲಿಂದ, ಇವತ್ತು ಅದೇ ಒಪ್ಪಂದವನ್ನು ಮಾರಕ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಎರಡು ವರ್ಷಗಳಲ್ಲಿ ಬದಲಾಗಿ ಹೋಗಿದೆ. ಇದಕ್ಕೆ ಸಾಕ್ಷಿಯಾಗಿ ಫ್ರೆಂಚ್ ಮಾಧ್ಯಮಗಳ ವರದಿಗಳು ಕಣ್ಣ ಮುಂದಿವೆ.