samachara
www.samachara.com
‘ವ್ಯಕ್ತಿ ವಿರೋಧಿ ರಾಜಕಾರಣದ ಹೊಸ ಅಧ್ಯಾಯ’: ತೆಲಂಗಾಣದಲ್ಲಿ ಹಳೇ ಶತ್ರುಗಳ ಹೊಸ ಮೈತ್ರಿ! 
ದೇಶ

‘ವ್ಯಕ್ತಿ ವಿರೋಧಿ ರಾಜಕಾರಣದ ಹೊಸ ಅಧ್ಯಾಯ’: ತೆಲಂಗಾಣದಲ್ಲಿ ಹಳೇ ಶತ್ರುಗಳ ಹೊಸ ಮೈತ್ರಿ! 

ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ ಮತ್ತು ತೆಲಂಗಾಣದಲ್ಲಿ ತಮ್ಮದೇ ಆದ ಆಸ್ತಿತ್ವವನ್ನು ಹೊಂದಿರುವ ಕಾಂಗ್ರೆಸ್, ಕಮ್ಯೂನಿಸ್ಟ್‌ ಪಕ್ಷ ಹಾಗೂ ‘ತೆಲಂಗಾಣ ಜನ ಸಮಿತಿ’ ಒಟ್ಟಾಗಿ ತೆಲಂಗಾಣ ವಿಧಾನಸಭೆ ಚುನಾವಣೆ ಎದುರಿಸಲು ನಿರ್ಧರಿಸಿವೆ.

ಅವಧಿ ಪೂರ್ವ ಚುನಾವಣೆ ಎದುರಿಸುವ ಉದ್ದೇಶದಿಂದ ತೆಲಂಗಾಣ ವಿಧಾನಸಭೆಯನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಿಸರ್ಜನೆ ಮಾಡಿರುವುದು ಹಳೇ ವಿಚಾರ. ಅಲ್ಲೀಗ ಅವರ ವಿರೋಧಿಗಳೆಲ್ಲಾ ಒಟ್ಟಾಗುವ ಸೂಚನೆ ನೀಡಿದ್ದಾರೆ.

ಮುಖ್ಯವಾಗಿ ಪಕ್ಕದ ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ತೆಲುಗು ದೇಶಂ ಪಕ್ಷ ಮತ್ತು 2014ರ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿದ್ದ ಕಾಂಗ್ರೆಸ್ ಜತೆಯಾಗಲು ನಿರ್ಧರಿಸಿವೆ. ತೆಲಂಗಾಣದಲ್ಲಿ ತನ್ನದೇ ಆದ ಆಸ್ತಿತ್ವವನ್ನು ಹೊಂದಿರುವ ಕಮ್ಯೂನಿಸ್ಟ್‌ ಪಕ್ಷಗಳು ಮತ್ತು ‘ತೆಲಂಗಾಣ ಜನ ಸಮಿತಿ’ಯೂ ಈ ಮೈತ್ರಿಕೂಟದಲ್ಲಿ ಪಾಲುದಾರರಾಗಲಿದ್ದು ಹೊಸ ರಾಜಕೀಯ ಮೈತ್ರಿಕೂಟವೊಂದು ಅಸ್ತಿತ್ವಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ. ಹೀಗೊಂದು ಮಾಹಿತಿಯನ್ನು ಸ್ವತಃ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್‌. ಸಿ. ಕುಂಟಿಯಾ ಹಂಚಿಕೊಂಡಿದ್ದಾರೆ. ಜತೆಗೆ ಅವರು ಕರ್ನಾಟಕ ಮಾದರಿಯನ್ನೂ ಪ್ರಸ್ತಾಪ ಮಾಡಿದ್ದು, ಮುಖ್ಯಮಂತ್ರಿ ಹುದ್ದೆಯನ್ನು ಪ್ರಾದೇಶಿಕ ಪಕ್ಷಗಳು ಪಡೆದುಕೊಳ್ಳಬಹುದು ಎಂಬ ಸಂದೇಶವನ್ನು ರವಾನಿಸಿದ್ದಾರೆ.

“ಇದು ಕೇವಲ ಆರಂಭಿಕ ಹಂತ ಅಷ್ಟೇ. ನಾವಿನ್ನೂ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿಲ್ಲ. ಆದರೆ ನಾವು ವಿಶಾಲ ನೆಲೆಯಲ್ಲಿ ಮೈತ್ರಿಕೂಟವನ್ನು ರಚಿಸುತ್ತಿದ್ದೇವೆ. ಇದರಲ್ಲಿ ಟಿಡಿಪಿ ಕೂಡ ಇರಲಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಈ ಮೈತ್ರಿಕೂಟ ರಚನೆಯಾಗಲಿದೆ,” ಎಂದು ಕುಂಟಿಯಾ ಮಾಹಿತಿ ನೀಡಿದ್ದಾರೆ. ‘ಕೋಮುವಾದಿ ಶಕ್ತಿ’ಗಳನ್ನು ಸೋಲಿಸಲು ಹೀಗೊಂದು ಮೈತ್ರಿಯ ಅನಿವಾರ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ.

ವಿರೋಧ ಪಕ್ಷಗಳು ಹೀಗೊಂದು ಮೈತ್ರಿಕೂಟ ರಚನೆ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದ್ದರೆ ಕೆಸಿಆರ್‌ ಮಾತ್ರ ಒಂಟಿ ಸಲಗದಂತೆ ಮುನ್ನುಗ್ಗಲು ಬಯಸಿದ್ದಾರೆ. ಸೆಪ್ಟೆಂಬರ್ 6 ರಂದು ವಿಧಾನಸಭೆ ವಿಸರ್ಜನೆ ಮಾಡಿರುವ ಅವರು ಏಕಾಂಗಿಯಾಗಿ ಚುನಾವಣೆ ಎದುರಿಸುವ ಘೋಷಣೆ ಮಾಡಿದ್ದಾರೆ. ಬೆನ್ನಿಗೆ ಅಂದೇ 119ರಲ್ಲಿ 105 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಆದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಹೇಳಿರುವ ಅವರು ಅಸಾದುದ್ದೀನ್‌ ಓವೈಸಿಯವರ ‘ಮಜ್ಲಿಸ್‌ ಇ ಇತ್ತೆಹುದಾಲ್‌ ಮುಸ್ಲಿಮೀನ್‌’ ನಮ್ಮ ಗೆಳೆಯರು ಎಂದು ಹೇಳಿ ಹೊಸ ದಾಳವನ್ನೂ ಉರುಳಿಸಿದ್ದಾರೆ.

ತೆಲಂಗಾಣ ರಾಜ್ಯದ ತುಂಬಾ ‘ತೆಲುಗು ರಾಷ್ಟ್ರ ಸಮಿತಿ (ಟಿಆರ್‌ಸಿ)’ ಭದ್ರ ತಳಪಾಯ ಹೊಂದಿದ್ದರೂ, ಹೈದರಾಬಾದ್‌ನಲ್ಲಿ ಮಾತ್ರ ಕೆಸಿಆರ್‌ಗೆ ಹೇಳಿಕೊಳ್ಳುವಂಥ ಅಸ್ತಿತ್ವವಿಲ್ಲ. ಮಹಾನಗರದಲ್ಲಿ ಓವೈಸಿಯ ಪಕ್ಷ ಮತ್ತು ಬಿಜೆಪಿ ಪ್ರಾಬಲ್ಯ ಮೆರೆದಿದೆ. ಹೀಗಾಗಿ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಓವೈಸಿಯನ್ನು ಗೆಳೆಯರು ಎಂದು ಕೆಸಿಆರ್‌ ಹೇಳಿರುವ ಸಾಧ್ಯತೆ ಇದೆ. ಇದರ ಜತೆಗೆ ಮುಸ್ಲಿಂ ಮತಬ್ಯಾಂಕ್‌ ಜತೆ ಗುರುತಿಸಿಕೊಂಡಿರುವ ಓವೈಸಿಯ ಮೂಲಕ ಹೈದರಾಬಾದ್‌ ಹೊರಗಿನ ಅಲ್ಪಸಂಖ್ಯಾತ ಮತಗಳ ಮೇಲೆಯೂ ಅವರು ಕಣ್ಣಿಟ್ಟಿದ್ದಾರೆ. ಮಂಗಳವಾರವಷ್ಟೇ ಎಐಎಂಐಎಂ 7 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದನ್ನು ಇಲ್ಲಿ ಸ್ಮರಿಸಬಹುದು.

ಕೆಸಿಆರ್‌ ಓವೈಸಿಯನ್ನು ಗೆಳೆಯ ಎಂದು ಕರೆದಿರುವುದರಿಂದ ಎಐಎಂಐಎಂನಿಂದ ಕಾಂಗ್ರೆಸ್ ದೂರ ಸರಿದಿದೆ. ಓವೈಸಿ ಜತೆ ಕೈ ಜೋಡಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ. ಬದಲಿಗೆ ಉಳಿದ ಪ್ರಮುಖ ಪಕ್ಷಗಳ ಜತೆ ಅದು ಕೈ ಜೋಡಿಸಲು ಮುಂದಾಗಿದೆ. ಮುಖ್ಯವಾಗಿ ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿ ಹಿಂದೆ ಕಾಂಗ್ರೆಸ್ ನಾಯಕ ರೇವಂತ್‌ ರೆಡ್ಡಿ ಕೈಚಳಕವಿರುವಂತೆ ಕಾಣಿಸುತ್ತಿದೆ. ತೆಲಂಗಾಣದಲ್ಲಿ ಕೆಸಿಆರ್‌ ಬಿಟ್ಟರೆ ಅತ್ಯಂತ ಜನಪ್ರಿಯ ನಾಯಕರಾಗಿರುವ ರೆಡ್ಡಿ ಕಳೆದ ಚುನಾವಣೆಯಲ್ಲಿ ಟಿಡಿಪಿಯಿಂದ ಗೆದ್ದು ನಂತರ ಕಾಂಗ್ರೆಸ್‌ಗೆ ವಲಸೆ ಬಂದಿದ್ದರು. ಅವರೀಗ ಹಲವು ಸಮೀಕ್ಷೆಗಳಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೈತ್ರಿ ಮೂಲಕ ಸಿಎಂ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ.

ಅನಿವಾರ್ಯ ನಡೆ:

ಹಾಗೆ ನೋಡಿದರೆ ರೇವಂತ್‌ ರೆಡ್ಡಿ ಮಾತ್ರವಲ್ಲ 2014ರ ಚುನಾವಣೆ ನಂತರ ತೆಲಂಗಾಣದಲ್ಲಿ ದೊಡ್ಡ ಮಟ್ಟದ ಪಕ್ಷಾಂತರ ಪರ್ವಗಳು ನಡೆದಿದ್ದವು. ಪರಿಣಾಮ 2014ರಲ್ಲಿ ಚುನಾವಣೆಯಲ್ಲಿ 63 ಸ್ಥಾನಗಳನ್ನು ಗೆದ್ದುಕೊಂಡಿದ್ದ ಟಿಆರ್‌ಎಸ್‌ ಪಕ್ಷದ ಬಲ 2018ರ ವೇಳೆಗೆ 90ಕ್ಕೆ ಏರಿಕೆಯಾಗಿತ್ತು.

ಪರಿಣಾಮ 2014ರಲ್ಲಿ 21 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಬಲ 2018ರ ಹೊತ್ತಿಗೆ 12ಕ್ಕೆ ಇಳಿಕೆಯಾಗಿತ್ತು. 15 ಸ್ಥಾನ ಗೆದ್ದಿದ್ದ ಟಿಡಿಪಿ ಜಂಘಾ ಬಲವನ್ನೇ ಉಡುಗಿಸಿದ್ದ ಕೆಸಿಆರ್ ಕೇವಲ ಇಬ್ಬರು ಶಾಸಕರು ಮಾತ್ರ ಪಕ್ಷದಲ್ಲಿ ಉಳಿಯುವಂತೆ ಮಾಡಿದ್ದರು. ಜತೆಗೆ ಸಿಪಿಐ ಶಾಸಕರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದರು.

ಇಂಥಹ ಕಡು ಕಷ್ಟ ಕಾಲದಲ್ಲಿ ಟಿಡಿಪಿ, ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್‌ ಪಕ್ಷಗಳು ಮೈತ್ರಿಗೆ ಮುಂದಾಗಿವೆ. ಸಮಾನ ವಿರೋಧಿ ಕೆಸಿಆರ್‌ರನ್ನು ಏಕಾಂಗಿಯಾಗಿ ಎದುರಿಸಲು ಅಸಾಧ್ಯ ಎಂದು ಮನಗಂಡಿರುವ ಪಕ್ಷಗಳು ಅನಿವಾರ್ಯ ಮೈತ್ರಿಗೆ ಕಟ್ಟುಬಿದ್ದಿವೆ. ಇಲ್ಲಿ ರಾಜ್ಯದ ಗದ್ದುಗೆಯನ್ನು ಪಡೆದುಕೊಳ್ಳುವುದರಾಚೆಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಪಕ್ಷಗಳು ಬಂದು ನಿಂತಿವೆ.

ಸದ್ಯದಲ್ಲೇ ಚುನಾವಣೆ:

ವಿಧಾನಸಭೆ ವಿಸರ್ಜನೆ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆಗಳು ನಡೆಯುತ್ತಿದ್ದರೆ ಅತ್ತ ಚುನಾವಣಾ ಆಯೋಗವೂ ತರಾತುರಿಯಲ್ಲಿ ಚುನಾವಣೆಗೆ ಸಿದ್ಧವಾಗುತ್ತಿದೆ. ಅಕ್ಟೋಬರ್‌ 8 ರಂದು ತೆಲಂಗಾಣದಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯುಕ್ತರು ಭಾನುವಾರ ಘೋಷಣೆ ಮಾಡಿದ್ದಾರೆ. ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆಯಾಗಿರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆಯೋಗ ಕೈಬಿಟ್ಟಿದೆ.

ಇದೀಗ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶದ ಜತೆ ವರ್ಷಾಂತ್ಯದಲ್ಲಿ ತೆಲಂಗಾಣ ಚುನಾವಣೆ ಬಹುತೇಕ ನಡೆಯಲಿದೆ. ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಬೇಕಾದ ಅಗತ್ಯ ಇವಿಎಂ ಮತ್ತು ವಿವಿಪ್ಯಾಟ್‌ಗಳ ಸಂಗ್ರಹ ತನ್ನ ಬಳಿ ಇದೆ ಇದೆ ಎಂದು ಆಯೋಗವೂ ಹೇಳಿದೆ. ಹೀಗೆ ನೂತನ ರಾಜ್ಯ ತೆಲಂಗಾಣ ಮೊದಲ ಪ್ರತ್ಯೇಕ ಚುನಾವಣೆ ಎದುರಿಸಲು ಸಜ್ಜಾಗಿದೆ.