ಚುನಾವಣಾ ಅಪಪ್ರಚಾರ, ಸುಳ್ಳು ‌ಸುದ್ದಿ ತಡೆಗೆ ಗೂಗಲ್, ಫೇಸ್‌ಬುಕ್‌, ಟ್ವಿಟ್ಟರ್‌ ಅಭಿಯಾನ
ದೇಶ

ಚುನಾವಣಾ ಅಪಪ್ರಚಾರ, ಸುಳ್ಳು ‌ಸುದ್ದಿ ತಡೆಗೆ ಗೂಗಲ್, ಫೇಸ್‌ಬುಕ್‌, ಟ್ವಿಟ್ಟರ್‌ ಅಭಿಯಾನ

ರಾಜಕೀಯ ದ್ವೇಷ ಬಿತ್ತುವ ಪೋಸ್ಟ್‌ಗಳು, ಸುಳ್ಳು ಸುದ್ದಿಗಳು ಚುನಾವಣೆಯ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇವುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರುವುದಾಗಿ ಈ ಕಂಪನಿಗಳು ಚುನಾವಣಾ ಆಯೋಗಕ್ಕೆ ಭರವಸೆ ನೀಡಿವೆ.

ಸಾಮಾಜಿಕ ಜಾಲತಾಣಗಳಲ್ಲಿ ‘ಫೇಕ್‌ ನ್ಯೂಸ್‌’ ತಡೆ ಸಂಬಂಧ ಜಾಗತಿಕ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಇದೇ ಹೊತ್ತಲ್ಲಿ ಭಾರತದಲ್ಲಿಯೂ ‘ಸುಳ್ಳು ಸುದ್ದಿ’ ಹಬ್ಬುವುದನ್ನು ತಡೆಗಟ್ಟುವ ಸಂಬಂಧ ಪ್ರಯತ್ನಗಳು ಜಾರಿಯಲ್ಲಿವೆ.

ಇತ್ತೀಚೆಗೆ ದೇಶದಲ್ಲಿ ಸುಳ್ಳು ಸುದ್ದಿಗಳನ್ನೇ ಆಧರಿಸಿ ಸರಣಿ ಗುಂಪು ಹಲ್ಲೆಗಳು ನಡೆದಿದ್ದವು. ಘಟನೆ ಬಳಿಕ ಆನ್‌ಲೈನ್‌ ಜಗತ್ತಿನ ಕಂಪನಿಗಳು ಒಂದು ಹಂತಕ್ಕೆ ಎಚ್ಚೆತ್ತುಕೊಂಡಿವೆ. ಇದೀಗ 2019ರ ಲೋಕಸಭಾ ಚುನಾವಣೆಯನ್ನು ಗೂಗಲ್, ಫೇಸ್‌ಬುಕ್‌, ಟ್ವಿಟ್ಟರ್ ಕಂಪನಿಗಳು ಗಂಭೀರವಾಗಿ ಪರಿಗಣಿಸಿವೆ. ಚುನಾವಣೆ ವೇಳೆ ರಾಜಕೀಯ ದ್ವೇಷ, ಅಪಪ್ರಚಾರ ಹಾಗೂ ವದಂತಿಗಳಂಥ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ತಡೆಯಲು ಈ ಕಂಪನಿಗಳೀಗ ಮುಂದಾಗಿವೆ. ಈ ಸಂಬಂಧ ಅಭಿಯಾನ ನಡೆಸಲು ಸ್ವತಃ ಚುನಾವಣಾ ಆಯೋಗದ ಜತೆಗೆ ಮಾತುಕತೆ ನಡೆಸಿವೆ.

ಸದ್ಯದ ಭಾರತದ ರಾಜಕಾರಣದಲ್ಲಿ ಆನ್‌ಲೈನ್‌ ಪ್ರಚಾರವೂ ಚುನಾವಣೆ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಜಾಹೀರಾತು ಹಾಗೂ ರಾಜಕಾರಣಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ ನಿಗಾ ವಹಿಸಲು ಕಂಪನಿಗಳು ನಿರ್ಧರಿಸಿವೆ. ಅದರಲ್ಲೂ ಮುಖ್ಯವಾಗಿ ಸುಳ್ಳು ಸುದ್ದಿ ಹಾಗೂ ರಾಜಕೀಯ ಅಪಪ್ರಚಾರದ ಬಗ್ಗೆ ಸಂಪೂರ್ಣ ನಿಗಾವಹಿಸಲು ಮುಂದಾಗಿವೆ.

ಸಾಮಾನ್ಯವಾಗಿ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದ ಮೇಲೂ ಆನ್‌ಲೈನ್‌ನಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಜಾಹೀರಾತುಗಳು ಹರಿದಾಡುತ್ತಲೇ ಇರುತ್ತವೆ. ಇನ್ನು ಮುಂದೆ ಇದರ ಮೇಲೆ ಈ ಮೂರೂ ಕಂಪೆನಿಗಳು ನಿಯಂತ್ರಣ ಹೇರಲಿವೆ. ಜತೆಗೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಂದ ಹಣ ಪಡೆದು ಪೋಸ್ಟ್ ಆಗುವ ಜಾಹೀರಾತು ಹಾಗೂ ಪ್ರಾಯೋಜಿತ ಸುದ್ದಿಗಳನ್ನು ಗುರುತಿಸುವ ವ್ಯವಸ್ಥೆಗೆ ಈ ಕಂಪನಿಗಳು ಸಿದ್ಧತೆ ನಡೆಸಿವೆ.

ಇದಲ್ಲದೆ ರಾಜಕೀಯ ದ್ವೇಷ ಬಿತ್ತುವ ಪೋಸ್ಟ್‌ಗಳು, ಸುಳ್ಳು ಸುದ್ದಿಗಳು, ಅಪಪ್ರಚಾರದ ಪೋಸ್ಟ್‌ಗಳು ಚುನಾವಣೆಯ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೀಗಾಗಿ ಇವುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರುವುದಾಗಿ ಈ ಕಂಪನಿಗಳು ಚುನಾವಣಾ ಆಯೋಗಕ್ಕೆ ಭರವಸೆ ನೀಡಿವೆ. ಇಂಥಹ ವಿಷಯಗಳನ್ನು ನಿರ್ಬಂಧಿಸುವ ಜತೆಗೆ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮಾಹಿತಿ ನೀಡಲೂ ಕಂಪನಿಗಳು ನಿರ್ಧರಿಸಿವೆ.

ಚುನಾವಣಾ ಆಯೋಗದ ಜತೆ ಕಂಪನಿಗಳು ಮಾತುಕತೆ ನಡೆಸಿದ್ದನ್ನು ಖುದ್ದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ಖಚಿತ ಪಡಿಸಿದ್ದಾರೆ. "ಸುಳ್ಳು ಸುದ್ದಿ ಹಾಗೂ ರಾಜಕೀಯ ದ್ವೇಷದ ಅಪಪ್ರಚಾರದ ವಿಷಯಗಳ ನಿಯಂತ್ರಣಕ್ಕೆ ಈ ಮೂರು ಕಂಪನಿಗಳು ಚುನಾವಣಾ ಆಯೋಗದ ಜತೆಗೆ ಮಾತುಕತೆ ನಡೆಸಿವೆ. ಕಂಪೆನಿಗಳ ಈ ಅಭಿಯಾನ ಸ್ವಯಂ ಪ್ರೇರಿತವಾಗಿದೆ" ಎಂದು ತಿಳಿಸಿದ್ದಾರೆ.

ವಾಟ್ಸಾಪ್‌ ರೇಡಿಯೋ ಅಭಿಯಾನ

ಚುನಾವಣಾ ಆಯೋಗದ ಜತೆಗಿನ ಮಾತುಕತೆ ಒಂದು ಕಡೆಯಾದರೆ ಭಾರತದಲ್ಲಿ ಸುಳ್ಳು ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸಲು ವಾಟ್ಸಪ್ ಸಾಂಪ್ರದಾಯಿಕ ಮಾಧ್ಯಮ ರೇಡಿಯೋ ಮೊರೆ ಹೋಗಿದೆ. ಕನ್ನಡವೂ ಸೇರಿದಂತೆ ಮರಾಠಿ, ತೆಲುಗು, ತಮಿಳು, ಬಂಗಾಳಿ, ಗುಜರಾತಿ, ಅಸ್ಸಾಮಿ ಹಾಗೂ ಒರಿಯಾ ಭಾಷೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಅದು ಹಮ್ಮಿಕೊಂಡಿದೆ. ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಈ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಸರಣಿ ಗುಂಪು ಹಲ್ಲೆ ಪ್ರಕರಣಗಳು ನಡೆದ ನಂತರ ವಾಟ್ಸಾಪ್‌ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಈ ಸಂಬಂಧ ಜನರನ್ನು ಎಚ್ಚರಿಸುವ ಕೆಲಸಕ್ಕೆ ಗಂಭೀರ ಪ್ರಯತ್ನಕ್ಕೆ ಕೈ ಹಾಕಿದೆ.

ಜಾಗತಿಕ ಬೆಳವಣಿಗೆಗಳು

ಭಾರತದಲ್ಲಿ ವಾಟ್ಸಾಪ್‌ ಸೇರಿ ಸಾಮಾಜಿಕ ಜಾಲತಾಣಗಳು ಹೀಗೊಂದು ತೀರ್ಮಾನಕ್ಕೆ ಬಂದಿರುವ ಸಮಯದಲ್ಲೇ ಜಾಗತಿಕ ಮಟ್ಟದಲ್ಲಿಯೂ ‘ಸುಳ್ಳು ಸುದ್ದಿ’ ತಡೆಗಟ್ಟಬೇಕು ಎಂಬ ಬೇಡಿಕೆ ಎಂದಿಗಿಂತಲೂ ಜೋರಾಗಿ ಕೇಳಿ ಬರುತ್ತಿದೆ. ಈ ಸಂಬಂಧ ಬುಧವಾರವಷ್ಟೇ ಅಮೆರಿಕಾದ ಸೆನೆಟ್‌ ಬೇಹುಗಾರಿಕೆ ಸಮಿತಿ ಪ್ರಮುಖ ಸಾಮಾಜಿಕ ಜಾಲತಾಣಗಳ ಅಧಿಕಾರಿಗಳಿಂದ ಖುದ್ದು ವಿವರಣೆ ಪಡೆದುಕೊಂಡಿದೆ.

“ಈ ವೇಳೆ ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ನಾವು ಸಿದ್ಧವಾಗಿರಲಿಲ್ಲ” ಎಂದು ಟ್ಟಿಟ್ಟರ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್‌ ಡೊರ್ಸಿ ಒಪ್ಪಿಕೊಂಡಿದ್ದಾರೆ. ಇದೀಗ ನಾವು ನಕಲಿ ಖಾತೆಗಳನ್ನು ಡಿಲೀಟ್‌ ಮಾಡುತ್ತಿದ್ದು 5.3 ಲಕ್ಷ ಖಾತೆಗಳನ್ನು ರದ್ದುಗೊಳಿಸಲಾಗಿದೆ ಎಂದವರು ಮಾಹಿರಿ ನೀಡಿದ್ದಾರೆ.

ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ ‘ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತು ಇತರ ರಾಷ್ಟ್ರಗಳಲ್ಲಿ ನಡೆದ ಚುನಾವಣೆಗಳಿಂದ ನಾವು ಬಹಳಷ್ಟು ಪಾಠ ಕಲಿತಿದ್ದೇವೆ. ಚುನಾವಣೆಗಳ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾಗಿದೆ ಎನ್ನುವುದನ್ನು ನಾವು ಅರಿತಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

ಒಂದೆಡೆ ಟ್ಟಿಟ್ಟರ್‌ ನಕಲಿ ಖಾತೆಗಳನ್ನು ಡಿಲೀಟ್‌ ಮಾಡಲು ಆರಂಭಿಸಿದ್ದರೆ, ಫೇಸ್‌ಬುಕ್‌ ಪೋಸ್ಟ್‌ಗಳ ಮೇಲೆಯೇ ಕಣ್ಗಾವಲು ಇಡಲು ನಿರ್ಧರಿಸಿದೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತಿದೆ. ಜಗತ್ತಿನಾದ್ಯಂತ ಫೇಸ್‌ಬುಕ್‌ನಲ್ಲಿ ಜನರು ಬರೆಯುವ ವಿಚಾರಗಳ ಮೇಲೆ ನಿಗಾ ಇಡಲು 10 ಸಾವಿರ ಸಿಬ್ಬಂದಿಗಳ ನೇಮಕಕ್ಕೆ ಫೇಸ್‌ಬುಕ್‌ ನಿರ್ಧರಿಸಿದ್ದು, ಕನ್ನಡದಲ್ಲಿಯೂ 30 ಜನರನ್ನು ಈ ಸಂಬಂಧ ಕೆಲಸಕ್ಕೆ ನೇಮಿಸಲಿದೆ.

ಇವರುಗಳು ಪೋಸ್ಟ್‌ಗಳ ಗುಣಮಟ್ಟ ನಿರ್ವಹಣೆ ಮಾಡುವುದರ ಜತೆಗೆ ಆಕ್ಷೇಪಾರ್ಹ ಸುದ್ದಿಗಳನ್ನು ಡಿಲೀಟ್‌ ಮಾಡಲಿದ್ದಾರೆ. ಹಿಂಸಾತ್ಮಕ, ಸುಳ್ಳು ಸುದ್ದಿಗಳು, ಕ್ರಿಮಿನಲ್‌ ಮತ್ತು ಉಗ್ರ ಸಂಬಂಧಿ ಪೋಸ್ಟ್‌ಗಳು, ಕೋಮು ಪ್ರಚೋದನಕಾರಿ ಚಿತ್ರ ಮತ್ತು ಬರಹಗಳು, ಅಶ್ಲೀಲ, ಮಾನಹಾನಿಕರ ಮತ್ತು ವದಂತಿಗಳನ್ನು ಹರಡುವ ಪೋಸ್ಟ್‌ಗಳನ್ನು ಮಾನಿಟರ್‌ ಮಾಡಲಿದ್ದಾರೆ.

ಹೀಗೆ ಭಾರತವೂ ಸೇರಿ ಜಗತ್ತಿನಾದ್ಯಂತ ಸುಳ್ಳು ಸುದ್ದಿಗಳಿಗೆ ತಡೆ, ನಕಲಿ ಖಾತೆಗಳ ನಾಶ ಸೇರಿದಂತೆ ಪ್ರಮುಖ ಬೆಳವಣಿಗೆಗಳು ಆನ್‌ಲೈನ್‌ ಜಗತ್ತಿನಲ್ಲಿ ನಡೆಯುತ್ತಿವೆ. ಇವುಗಳು ಸದ್ಯದ ಜನಾಕ್ರೋಶವನ್ನು ತಣ್ಣಗಾಗಿಸುವ ಕಣ್ಣೊರೆಸುವ ತಂತ್ರಗಳಾಗದೆ ನೈಜ ಪ್ರಯತ್ನಗಳಾಗಬೇಕಿದೆ. ಆಗ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.