ಮಜ್ದೂರ್‌-ಕಿಸಾನ್‌ ಸಂಘರ್ಷ್‌ ರ‍್ಯಾಲಿ: ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ  ಜನಾಕ್ರೋಶ
ದೇಶ

ಮಜ್ದೂರ್‌-ಕಿಸಾನ್‌ ಸಂಘರ್ಷ್‌ ರ‍್ಯಾಲಿ: ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ ಜನಾಕ್ರೋಶ

ದೇಶದಲ್ಲಿ ಬೆಲೆ ಏರಿಕೆ, ಪೆಟ್ರೋಲ್‌-ಡೀಸೆಲ್‌ ದರ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಂಥ ಸವಾಲಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಬೃಹತ್‌ ರ‍್ಯಾಲಿ ನಡೆಯುತ್ತಿದೆ.

ಕೇಂದ್ರ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆಯೊಂದು ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜನೆಯಾಗಿದೆ. ‘ಮಜ್ದೂರ್‌-ಕಿಸಾನ್‌ ಸಂಘರ್ಷ್‌ ರ‍್ಯಾಲಿ’ ಹೆಸರಿನಲ್ಲಿ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದಿರುವ ಕಾರ್ಮಿಕರು ಮತ್ತು ರೈತರು ದೆಹಲಿಯ ಪಾರ್ಲಿಮೆಂಟ್‌ ಸ್ಟ್ರೀಟ್‌ ನಿಂದ ಜಂತರ್‌ ಮಂತರ್‌ಗೆ ಜಾಥಾ ಹೊರಟಿದ್ದಾರೆ.

ದೇಶದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕು, ಕನಿಷ್ಠ ವೇತನ ಜಾರಿಯಾಗಬೇಕು, ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಬೇಕು ಮತ್ತು ಒಂದು ಕೋಟಿಯಷ್ಟಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಉದ್ಯೋಗಿಗಳು ಎಂದು ಗುರುತಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.

ಎಡಪಕ್ಷಗಳ ಅಂಗಸಂಸ್ಥೆಗಳಾದ ಸಿಐಟಿಯು, ಅಖಿಲ ಭಾರತ ಕಿಸಾನ್‌ ಸಭಾ, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆಗಳು ಒಟ್ಟಾಗಿ ಈ ಜಾಥಾ ಹಮ್ಮಿಕೊಂಡಿವೆ. ಈ ವರ್ಷ ಮಹಾರಾಷ್ಟ್ರದಲ್ಲಿ ಸಾಲಮನ್ನಾ ಮತ್ತು ಕನಿಷ್ಠ ಬೆಂಬಲ ಬೆಲೆಗಾಗಿ ನಡೆದ ಜಾಥಾದಲ್ಲಿ ಪಾಲ್ಗೊಂಡಿದ್ದ ರೈತರು ಈ ಪ್ರತಿಭಟನೆಯಲ್ಲಿಯೂ ಪಾಲ್ಗೊಂಡಿದ್ದಾರೆ.

ದೇಶದಲ್ಲಿ ಬೆಲೆ ಏರಿಕೆ, ಪೆಟ್ರೋಲ್‌ ಡೀಸೆಲ್‌ ದರ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಂಥ ಸವಾಲಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಇಂಥಹದ್ದೊಂದು ಬೃಹತ್‌ ರ‍್ಯಾಲಿ ನಡೆಯುತ್ತಿದೆ.

31 ಬೇಡಿಕೆಗಳು

“ನಾನು ತಿಂಗಳಿಗೆ 1,000 ರೂಪಾಯಿ ಗಳಿಸುತ್ತೇನೆ. ಆದರೆ ಇದು ತಿಂಗಳಿಗೆ 18,000 ಕ್ಕೆ ಏರಿಕೆಯಾಗಬೇಕು. ಮತ್ತು ನನ್ನ ಉದ್ಯೋಗವನ್ನು ಶಾಶ್ವತಗೊಳಿಸಬೇಕು” ಎನ್ನುತ್ತಾರೆ ವ್ಯಾನ್‌, ಬಸ್‌, ರೈಲು ಮತ್ತು ಆಟೋ ರಿಕ್ಷಾ ಹತ್ತಿ ದೂರದ ಮಧ್ಯ ಪ್ರದೇಶದ ಗೋಪಾಲ್‌ಗಂಜ್‌ನಿಂದ ದೆಹಲಿಗೆ ಬಂದಿರುವ ಆಶಾ ಕಾರ್ಯಕರ್ತೆ ನೇಹಾ ಚಂದ್ರವಂಶಿ. ಇಂಥಹದ್ದೇ ಬೇಡಿಕೆಗಳನ್ನು ಇಟ್ಟುಕೊಂಡು ನೂರಾರು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ರಾಷ್ಟ್ರ ರಾಜಧಾನಿಗೆ ದಾಗುಂಡಿ ಇಟ್ಟಿದ್ದಾರೆ.

ಮುಖ್ಯವಾಗಿ ಅಸಂಘಟಿತ ವಲಯದವರನ್ನು ಗುರಿಯಾಗಿಸಿಟ್ಟುಕೊಂಡು ಈ ರ‍್ಯಾಲಿಯನ್ನು ಸಂಘಟಿಸಿಸಲಾಗಿದೆ ಎಂದು ಪ್ರತಿಭಟನೆಯ ಆಯೋಜಕಿ ಹೇಮಲತಾ ಹೇಳಿದ್ದಾರೆ. ಸುಮಾರು 5 ತಿಂಗಳಿನಿಂದ ಇಂಥಹದ್ದೊಂದು ಜಾಥಾಕ್ಕೆ ಪೂರ್ವ ತಯಾರಿ ಮಾಡಿಕೊಂಡು ಇದೀಗ ಅವರೆಲ್ಲಾ ದೆಹಲಿಗೆ ಬಂದಿದ್ದಾರೆ. ಮೊದಲಿಗೆ ರಾಜ್ಯ ಮಟ್ಟದ ಸಭೆಗಳು, ನಂತರ ಜಿಲ್ಲಾ ಮಟ್ಟದ ಸಿದ್ಧತೆಗಳು ಹಾಗೂ ಫ್ಯಾಕ್ಟರಿಗಳಿಗೆ ಹೋಗಿ ಕಾರ್ಮಿಕರಿಗೆ ಅವರ ಬೇಡಿಕೆಗಳ ಬಗ್ಗೆ ಸವಿವರವಾಗಿ ತಿಳಿಸಿ ಅವರನ್ನೆಲ್ಲಾ ದೆಹಲಿಗೆ ಕರೆ ತರಲಾಗಿದೆ. ಒಟ್ಟಾರೆ ಕಾರ್ಮಿಕ ಕಾನೂನು ಮತ್ತು ಕನಿಷ್ಠ ಸಂಬಳದ ಬೇಡಿಕೆಗಳನ್ನು ಒಳಗೊಂಡ 31 ಆಗ್ರಹಗಳನ್ನು ಪಟ್ಟಿ ಮಾಡಿ ಅದನ್ನು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟಿಸಿ 1 ಕೋಟಿ ಪ್ರತಿಗಳನ್ನು ಹಂಚಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಂಥಹದ್ದೊಂದು ಬೇಡಿಕೆಗಳ ಇಡೇರಿಕೆಗಾಗಿ ಪ್ರತಿಭಟನೆಗೆ ಬಂದಿರುವವರು ರಾಮಲೀಲಾ ಮೈದಾನದಲ್ಲಿ ಉಳಿದುಕೊಂಡಿದ್ದಾರೆ. ಇವರುಗಳಿಗೆ ರಾಜ್ಯವಾರು ಕ್ಯಾಂಪ್‌ಗಳನ್ನು ಮಾಡಲಾಗಿದೆ. ಇಲ್ಲಿಯೇ ಇವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಬಂದಿರುವ ಪ್ರತಿಭಟನಾಕಾರರಿಗೆ ದೆಹಲಿ ಸರ್ಕಾರದ ಸಂಚಾರಿ ಆರೋಗ್ಯ ಯೋಜನೆ ಅಡಿಯಲ್ಲಿ ಅಗತ್ಯ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.

ಸದ್ಯ ಇದೀಗ ಪಾರ್ಲಿಮೆಂಟ್‌ ಸ್ಟ್ರೀಟ್‌ನತ್ತ ಜಾಥಾ ಹೊರಟಿರುವ ಪ್ರತಿಭಟನಾಕಾರರು ಕೇಂದ್ರ ಸರಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ. ‘ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದೆಲ್ಲಾ ಎಲ್ಲಿ ಹೋಯಿತು? ಸರಕಾರಕ್ಕೆ ಪಾಲಿಸಿಗಳನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಕಾರ್ಮಿಕರು ಸರಕಾರವನ್ನು ಬದಲಿಸುತ್ತಾರೆ,’ ಎಂದು ಅಖಿಲ ಭಾರತ ಕಿಸಾನ್‌ ಸಭಾದ ಸದಸ್ಯ ಕೃಷ್ಣ ಪ್ರಸಾದ್‌ ಗುಡುಗಿದ್ದಾರೆ.

ಹೀಗೊಂದು ಸವಾಲನ್ನು ಎಸೆಯುತ್ತಾ , ಕೆಂಬಾವುಟ ಹಿಡಿದು ದೆಹಲಿಗೆ ಬಂದಿರುವ ಈ ಪ್ರತಿಭಟನಾಕಾರರು ಕೇಂದ್ರ ಸರಕಾರ ಹೇಗೆ ಸ್ವೀಕರಿಸುತ್ತದೆ ಎಂದು ಕಾದು ನೋಡಬೇಕಿದೆ.