samachara
www.samachara.com
ಅವಧಿ ಪೂರ್ವ ಚುನಾವಣಾ ಕಸರತ್ತು, ನಾಳೆ ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ
ದೇಶ

ಅವಧಿ ಪೂರ್ವ ಚುನಾವಣಾ ಕಸರತ್ತು, ನಾಳೆ ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ

2004ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆರು ತಿಂಗಳ ಮೊದಲೇ ಚುನಾವಣೆ ಎದುರಿಸಿ ಸೋಲೊಪ್ಪಿಕೊಂಡಿದ್ದರು. ಕರ್ನಾಟಕದಲ್ಲಿ ಎಸ್‌.ಎಂ. ಕೃಷ್ಣ ಕೂಡ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆ ಮಾಡಿ ಮಕಾಡೆ ಮಲಗಿದ್ದರು.

ತೆಲಂಗಾಣದಲ್ಲಿ ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಅನುಮಾನಗಳ ನಡುವೆಯೇ ಗುರುವಾರ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಮಹತ್ವದ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ‘ವಿಧಾನಸಭೆ ವಿಸರ್ಜನೆ’ಯ ತೀರ್ಮಾನ ತೆಗೆದುಕೊಂಡು ಕೆಸಿಆರ್‌ ಚುನಾವಣೆಗೆ ತೆರಳಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಯ ಶಾಸಕರಿಗೆ ಎಲ್ಲಾ ಕಾರ್ಯಕ್ರಮಗಳನ್ನು ಗುರುವಾರಕ್ಕೆ ಮೊದಲು ಮುಗಿಸಿಕೊಳ್ಳಿ ಎಂಬ ಸೂಚನೆ ನೀಡಲಾಗಿದೆ.

ನಿಗದಿತ ಅವಧಿಯಂತೆ 2019ರ ಮೇನಲ್ಲಿ ಲೋಕಸಭೆ ಚುನಾವಣೆ ಜತೆಗೆ ತೆಲಂಗಾಣದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ 4 ವರ್ಷದ ಆಡಳಿತದ ನಂತರವೂ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದೇನೆ ಎಂದು ಭಾವಿಸಿರುವ ಕೆ. ಚಂದ್ರಶೇಖರ್‌ ರಾವ್‌ ಅವಧಿಗೂ ಮುನ್ನ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಈ ಮೂಲಕ ಮುಂದಿನ ಐದು ವರ್ಷಗಳ ಕಾಲ ತನ್ನ ಆಡಳಿತವನ್ನು ಗಟ್ಟಿ ಮಾಡಿಕೊಳ್ಳುವ ಸನ್ನಾಹದಲ್ಲಿದ್ದಾರೆ.

“ನಾಳೆ (ಸೆ.6) ಬೆಳಿಗ್ಗೆ 6.45ಕ್ಕೆ ಕೆಸಿಆರ್‌ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ರಾಜ್ಯ ವಿಧಾನಭೆಯನ್ನು ವಿಸರ್ಜಿಸುವ ಸಂಪುಟ ಸಭೆಯ ತೀರ್ಮಾನದ ಪ್ರತಿಯನ್ನು ಸಲ್ಲಿಸಲಿದ್ದಾರೆ,” ಎಂಬುದಾಗಿ ಹೆಸರು ಹೇಳಲಿಚ್ಚಿಸದ ಟಿಆರ್‌ಎಸ್‌ ಪದಾಧಿಕಾರಿಯೊಬ್ಬರು ಹಿಂದೂಸ್ಥಾನ್‌ ಟೈಮ್ಸ್‌ಗೆ ಹೇಳಿದ್ದಾರೆ.

ಪಂಚ ರಾಜ್ಯ ಚುನಾವಣೆ?

ನವೆಂಬರ್-ಡಿಸೆಂಬರ್‌ನಲ್ಲಿ ರಾಜಸ್ಥಾನ, ಛತ್ತೀಸ್‌ಗಢ, ಮಿಜೋರಾಂ ಮತ್ತು ಮಧ್ಯ ಪ್ರದೇಶ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಜತೆಗೆ ತೆಲಂಗಾಣ ಚುನಾವಣೆಯನ್ನು ಎದುರಿಸಲು ಕೆಸಿಆರ್ ಯೋಜನೆ ರೂಪಿಸಿದ್ದಾರೆ. ಒಂದೊಮ್ಮೆ ಇದು ಕೈಗೂಡಿದಲ್ಲಿ ಪಂಚ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ.

ಈ ಹಿಂದೆ ಕಳೆದ ಭಾನುವಾರ ಕೆಸಿಆರ್‌ ಸಂಪುಟ ಸಭೆ ಕರೆದಿದ್ದರು. ಜತೆಗೆ ಬೃಹತ್‌ ‘ಪ್ರಗತಿ ನಿವೇದನಾ ಸಭೆ’ಯನ್ನು ಅಂದೇ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜಿಸಿ ಅವಧಿಗೂ ಮುನ್ನ ಚುನಾವಣೆಯನ್ನು ಎದುರಿಸುವ ತೀರ್ಮಾನವನ್ನು ಕೆಸಿಆರ್‌ ಘೋಷಣೆ ಮಾಡಲಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಹಾಗೇನೂ ಆಗಿರಲಿಲ್ಲ.

ಭಾನುವಾರ ನಡೆದಿದ್ದ ಟಿಆರ್‌ಎಸ್‌  ‘ಪ್ರಗತಿ ನಿವೇದನಾ ಸಭೆ’
ಭಾನುವಾರ ನಡೆದಿದ್ದ ಟಿಆರ್‌ಎಸ್‌ ‘ಪ್ರಗತಿ ನಿವೇದನಾ ಸಭೆ’
/ಸೋಷಿಯಲ್ ನ್ಯೂಸ್‌

ಇದಾದ ನಂತರ ಟಿಆರ್‌ಎಸ್‌ ಕರೀಂನಗರ ಸಂಸದ ವಿನೋದ್‌ ಕುಮಾರ್‌ ಬೊಯಿನಪಲ್ಲಿ ಸೆಪ್ಟೆಂಬರ್‌ 10ರ ಮೊದಲು ವಿಧಾನಸಭೆ ವಿಸರ್ಜನೆ ಮಾಡಲಾಗುವುದು ಮತ್ತು ನಾಲ್ಕು ರಾಜ್ಯಗಳ ಚುನಾವಣೆ ಜತೆ ತೆಲಂಗಾಣದ ಚುನಾವಣೆಯೂ ನಡೆಯಲಿದೆ ಎಂದಿರುವುದರಿಂದ ಗುರುವಾರ ವಿಧಾನಸಭೆ ವಿಸರ್ಜನೆಯಾಗಲಿದೆ ಎಂಬ ಸುದ್ದಿಗಳು ಹೈದರಾಬಾದ್‌ನಲ್ಲಿ ದಟ್ಟವಾಗಿ ಹರಿದಾಡುತ್ತಿವೆ.

ಚುನಾವಣೆ ಮುಂದೂಡಲು ಆಗ್ರಹ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, “ಒಂದೊಮ್ಮೆ ಚಂದ್ರಶೇಖರ್‌ ರಾವ್‌ ವಿಧಾನಸಭೆ ವಿಸರ್ಜನೆ ಮಾಡಿದಲ್ಲಿ ಚುನಾವಣೆಯನ್ನು ಮುಂದೂಡುವಂತೆ ನಮ್ಮ ಪಕ್ಷ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದೆ” ಎಂದು ಕಳೆದ ವಾರ ಕಾಂಗ್ರೆಸ್‌ ನಾಯಕ ಎಂ ಶಶಿಧರ್‌ ರೆಡ್ಡಿ ಹೇಳಿದ್ದರು. ತೆಲಂಗಾಣದಲ್ಲಿ ಜನವರಿಯಲ್ಲಿ ಪರಿಷ್ಕೃತ ಮತದಾರರ ಪಟ್ಟಿ ಸಿದ್ಧವಾಗಲಿದ್ದು ಇದಾದ ನಂತರವೇ ಚುನಾವಣೆ ನಡೆಯಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. “ಚುನಾವಣಾ ಆಯೋಗ ನಮ್ಮ ಮನವಿಯನ್ನು ಒಪ್ಪಿಕೊಳ್ಳದಿದ್ದರೆ ಇದಕ್ಕಿರುವ ಕಾನೂನಾತ್ಮಕ ದಾರಿಯಲ್ಲಿ ನ್ಯಾಯಾಲಯದ ಬಾಗಿಲು ತಟ್ಟಲಿದ್ದೇವೆ” ಎಂದೂ ಅವರು ಹೇಳಿದ್ದಾರೆ.

ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಚಂದ್ರಶೇಖರ್‌ ರಾವ್‌ ಗುರುವಾರ ವಿಧಾನಸಭೆ ವಿಸರ್ಜನೆಯ ತೀರ್ಮಾನ ಹೊರಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಶುಕ್ರವಾರ ಅಂದರೆ ಸೆಪ್ಟೆಂಬರ್ 7 ರಂದು ಸಿದ್ದಿಪೇಟ್‌ ಜಿಲ್ಲೆಯ ಹುಸ್ನಾಬಾದ್‌ನಲ್ಲಿ ಚಂದ್ರಶೇಖರ್‌ ರಾವ್‌ ಬೃಹತ್‌ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೆ ಜನಾಶಿರ್ವಾದ ಸಭೆ (ಪ್ರಜಾ ದೀವೆನಾ ಸಭಾ) ಎಂದು ಹೆಸರಿಡಲಾಗಿದ್ದು, ಇದು ಚುನಾವಣಾ ಪ್ರಚಾರದ ಚಾಲನಾ ಕಾರ್ಯಕ್ರಮ ಎಂದುಕೊಳ್ಳಲಾಗಿದೆ. ಇದರಲ್ಲಿ ಸುಮಾರು 65 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.

“ಈ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಟಿಆರ್‌ಎಸ್‌ ಪಕ್ಷವನ್ನು ಬೆಂಬಲಿಸುವಂತೆ ಮುಖ್ಯಮಂತ್ರಿಗಳು ಜನರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ,” ಎಂದು ಸಿದ್ದಿಪೇಟ್‌ ಶಾಸಕ ಹಾಗೂ ನೀರಾವರಿ ಸಚಿವ ಟಿ. ಹರೀಶ್‌ ರಾವ್‌ ಹೇಳಿದ್ದಾರೆ. ಇಂಥಹ 50 ರ್ಯಾಲಿಗಳನ್ನು ಉದ್ದೇಶಿಸಿ ಮುಂದಿನ ಮೂರು ತಿಂಗಳು ಚಂದ್ರಶೇಖರ್‌ ರಾವ್‌ ಭಾಷಣ ಮಾಡಲಿದ್ದಾರೆ ಎಂದವರು ಹೇಳಿದ್ದು ಚುನಾವಣಾ ಪ್ರಚಾರದ ನೀಲಿನಕ್ಷೆಯನ್ನು ತೆರೆದಿಟ್ಟಿದ್ದಾರೆ.

ಅವಧಿ ಪೂರ್ವ ಚುನಾವಣೆ ಮತ್ತು ಗೆಲುವಿನ ಕನಸು

2004 ರಲ್ಲಿ ನಡೆದಿದ್ದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಶೇಖರ್‌ ರಾವ್‌ ನೇತೃತ್ವದ ಪಕ್ಷ 119ರಲ್ಲಿ 90 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿತ್ತು. ಇದಾಗಿ ನಾಲ್ಕು ವರ್ಷ ಕಳೆದಿದ್ದು ಇಂದಿಗೂ ಚಂದ್ರಶೇಖರ್‌ ರಾವ್‌ ಅದೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಜತೆಗೆ ಸರಿಸುಮಾರು ಅಷ್ಟೇ ಸ್ಥಾನಗಳನ್ನು ಟಿಆರ್‌ಎಸ್‌ ಪಕ್ಷ ಪಡೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಈ ಹಿನ್ನೆಲೆಯಲ್ಲಿ ಅವರು ಅವಧಿಪೂರ್ವ ಚುನಾವಣೆಗೆ ಉತ್ಸುಕರಾಗಿದ್ದಾರೆ.

ಆದರೆ ಇತ್ತೀಚಿನ ಉದಾಹರಣೆಗಳನ್ನು ತೆಗೆದುಕೊಂಡಾಗ ಇತಿಹಾಸ ಚಂದ್ರಶೇಖರ್‌ ರಾವ್‌ ವಿರುದ್ಧವಾಗಿದೆ. ಈ ಹಿಂದೆ ಇದೇ ರೀತಿ ಅವಧಿ ಪೂರ್ವ ಚುನಾವಣೆ ಎದುರಿಸಿ ಇಬ್ಬರು ಜನಪ್ರಿಯ ನಾಯಕರು ಮುಗ್ಗರಿಸಿದ್ದರು. 2004ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆರು ತಿಂಗಳ ಮೊದಲೇ ಚುನಾವಣೆಗೆ ಹೊರಟು ಸೋಲೊಪ್ಪಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೂಡ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸಿದ್ದರು. ಅವರೂ ಸೋಲೊಪ್ಪಿಕೊಂಡ ಇತಿಹಾಸ ಕಣ್ಣ ಮುಂದಿದೆ. ಈ ಎಲ್ಲಾ ಐತಿಹಾಸಿಕ ಘಟನೆಗಳನ್ನು ಎದುರಿಗಿಟ್ಟುಕೊಂಡು ಕೆಸಿಆರ್‌ ಚುನಾವಣೆ ಎದುರಿಸಲು ಹೊರಟಿದ್ದಾರೆ. ಈ ಬಾರಿ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೊಡಬೇಕಿದೆ.