samachara
www.samachara.com
ಉತ್ತರಕ್ಕೆ ಕಾಲಿಟ್ಟ ಮಳೆರಾಯ: ದ್ವೀಪದಂತಾದ ಉತ್ತರ ಪ್ರದೇಶದ 300 ಹಳ್ಳಿಗಳು
ದೇಶ

ಉತ್ತರಕ್ಕೆ ಕಾಲಿಟ್ಟ ಮಳೆರಾಯ: ದ್ವೀಪದಂತಾದ ಉತ್ತರ ಪ್ರದೇಶದ 300 ಹಳ್ಳಿಗಳು

ಕೇರಳ ಮತ್ತು ಕೊಡಗು ಜನತೆಯನ್ನು ಕಾಡಿಸಿದ ಮಳೆರಾಯ ಈಗ ಉತ್ತರ ಭಾರತದ ರಾಜ್ಯಗಳಿಗೆ ಕಂಟಕವಾಗಿ ಪರಿಣಮಿಸಿದ್ದಾನೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯ ನದಿಗಳೀಗ ತುಂಬಿ ಹರಿಯುತ್ತಿದ್ದು, ಅಲ್ಲಿನ ಜನ ಭಯಭೀತರಾಗಿದ್ದಾರೆ.

ಮಹಾಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಹಲವು ಭಾಗಗಳು ಇನ್ನೂ ಚೇತರಿಸಿಕೊಂಡಿಲ್ಲ. ಸಹಸ್ರಾರು ಜನರ ಬದುಕು ಬೀದಿಗೆ ಬಂದಿದೆ. ಈ ಅನಾಹುತಗಳ ಸುದ್ದಿ ಬದಿಗೆ ಸರಿಯುವ ಮೊದಲೇ ಉತ್ತರ ಭಾರತದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ.

ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಉತ್ತರ ಪ್ರದೇಶದ ನದಿಗಳು ತುಂಬಿ ಹರಿಯುತ್ತಿದ್ದು, ಮೊರಾದಾಬಾದ್, ಸಂಬಲ್‌, ಆಮ್ರೋಹಾ, ರಾಮ್‌ಪುರ್‌, ನೇಪಾಳದ ಗಡಿ ಹಂಚಿಕೊಂಡಿರುವ ಲಕ್ಷ್ಮಿಪುರ್‌ ಕೇರಿ ಸೇರಿದಂತೆ ಹಲವಾರು ಜಿಲ್ಲೆಗಳ ಸುಮಾರು 300 ಗ್ರಾಮಗಳು ತಮ್ಮ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿವೆ. ಕಳೆದ ಮೂರು ದಿನಗಳ ಅವಧಿಯಲ್ಲೇ ಮಹಾಮಳೆ ಉತ್ತರ ಪ್ರದೇಶದ 49 ಜನರನ್ನು ಬಲಿ ಪಡಿದಿದ್ದು, ಮಂಗಳವಾರದಂದೇ 12 ಜನ ಮೃತಪಟ್ಟಿದ್ದಾರೆ.

ವಿಪರೀತ ಮಳೆಯಿಂದ ಕಂಗಾಲಾಗಿರುವ ಜಿಲ್ಲೆಗಳ ಪೈಕಿ ಆಮ್ರೋಹಾ ಕೂಡ ಒಂದು. ಈ ಜಿಲ್ಲೆಯ ಹಲವಾರು ಭಾಗಗಳಲ್ಲಿ 9 ಅಡಿಗಿಂತಲೂ ಹೆಚ್ಚು ನೀರು ಹರಿಯುತ್ತಿದೆ. ಮನೆಗಳಲ್ಲಿನ ಸಾಮಗ್ರಿಗಳೆಲ್ಲಾ ನೀರು ಪಾಲಾಗಿವೆ. ಹಳ್ಳಿಗಳಲ್ಲಿನ ಹಲವಾರು ಕುಟುಂಬಗಳು ನಗರಗಳಲ್ಲಿನ ತಮ್ಮ ಸಂಬಂಧಿಗಳ ಮನೆಗಳಿಗೆ ಆಶ್ರಯ ಬೇಡಿ ಹೋಗುತ್ತಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಜಲಾವೃತಗೊಂಡಿರುವ ಒಂದು ರಸ್ತೆ. 
ಉತ್ತರ ಪ್ರದೇಶದಲ್ಲಿ ಜಲಾವೃತಗೊಂಡಿರುವ ಒಂದು ರಸ್ತೆ. 
/ಪಿಟಿಐ. 

ಸುದ್ದಿ ವಾಹಿನಿಗಳ ಜತೆ ಮಾತನಾಡಿರುವ ಮೊರಾದಾಬಾದ್‌ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಹೇಳುವಂತೆ, “ ಜಿಲ್ಲೆಯಲ್ಲಿ ಹರಿಯುವ ರಾಮ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಟಾಕೂರ್‌ದ್ವಾರ್‌, ಕಾಂತ್‌, ಬಿಲಾರಿ ಪ್ರದೇಶಗಳಲ್ಲಿನ ಹಳ್ಳಿಗಳು ಮುಳುಗಡೆಯಾಗುವ ಬೀತಿ ಎದುರಿಸುತ್ತಿವೆ. ಮೊರಾದಾಬಾದ್‌ ಜಿಲ್ಲೆಯಲ್ಲಿನ ಬಹುತೇಕ ಸೇತುವೆಗಳು ಭೋರ್ಗೆರೆದು ಹರಿಯುತ್ತಿರುವ ನದಿ ನೀರಿನಲ್ಲಿ ಮುಚ್ಚಿ ಹೋಗಿವೆ. ಈವರೆಗೆ ಒಟ್ಟು 53 ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ.

ಪಿಲಿಭಿತ್‌ ಮತ್ತು ಲಕ್ಷ್ಮಿ ಪುರ ಜಿಲ್ಲೆಗಳಲ್ಲಿ ಹರಿಯುವ ಶಾರದಾ ನದಿ ಕೂಡ ಬೋರ್ಗೆರೆಯುತ್ತಿದೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿನ ಇಳಿಜಾರು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಪಿಲಿಭಿತ್‌ ಜಿಲ್ಲೆಯ ಪೂರ್ವ ಮತ್ತು ಉತ್ತರ ಭಾಗದಲ್ಲಿರುವ ಸುಮಾರು 40 ಗ್ರಾಮಗಳು ಪ್ರವಾಹಕ್ಕೆ ತತ್ತರಿಸಿ, ನಡುಗಡ್ಡೆಗಳಾಗಿವೆ.

ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಇದೀ ಪರಿಸ್ಥಿತಿ ಉಂಟಾಗಿದೆ. ಪ್ರವಾಹದ ನೀರು ನದಿಪಾತ್ರದಲ್ಲಿನ ಕೃಷಿ ಭೂಮಿಗೆ ನುಗ್ಗಿದ್ದು ಹಲವಾರು ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಯನ್ನು ಹಾಳುಗೆಡವಿದೆ. ಪ್ರವಾಹದಿಂದ ಉಂಟಾಗಬಹುದಾದ ಹೆಚ್ಚಿನ ಅಪಾಯವನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ ಎನ್ನಲಾಗಿದೆ.

ಸುದ್ದಿ ವಾಹಿನಿಗಳ ಜತೆ ಮಾತನಾಡಿರುವ ಪಿಲಿಭಿತ್‌ ಜಿಲ್ಲಾಧಿಕಾರಿ ಡಾ. ಅಖಿಲೇಶ್‌ ಮಿಶ್ರಾ, “ಪ್ರವಾಹದ ಭೀತಿ ಎದುರಿಸುತ್ತಿರುವ ಪ್ರದೇಶಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ಸಿಬ್ಬಂದಿಗಳು ಪ್ರವಾಹ ಪ್ರದೇಶಗಳಲ್ಲಿನ ಸ್ಥಿತಿಗತಿಗಳ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಿ, ನಿರಂತರವಾಗಿ ಸಂಪರ್ಕದಲ್ಲಿ ಇರಲಿದ್ದಾರೆ. ಇದರಿಂದ ಪ್ರವಾಹಕ್ಕೆ ತುತ್ತಾದ ಜನರನ್ನು ರಕ್ಷಿಸಲು, ಪುನರ್ವಸತಿ ಕಲ್ಪಿಸಲು ಅನುಕೂಲವಾಗಲಿದೆ,” ಎಂದಿದ್ದಾರೆ.

ಡಾ. ಅಖಿಲೇಶ್‌ ಮಿಶ್ರಾ ಹೇಳುವಂತೆ ಪಿಲಿಭಿತ್‌ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದಿಂದ ರಕ್ಷಿಸಿದ ಜನರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಹಾರ, ಚಿಕಿತ್ಸೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ನೆರೆ ಮಳೆಯ ಪರಿಣಾಮ ಹೀಗಿದೆ. 
ಉತ್ತರ ಪ್ರದೇಶದಲ್ಲಿ ನೆರೆ ಮಳೆಯ ಪರಿಣಾಮ ಹೀಗಿದೆ. 
/ಪಿಟಿಐ. 

ರಾಜ್ಯ ವಿಪತ್ತು ನಿರ್ವಹಣಾ ಪಡೆ ಈಗಾಗಲೇ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ರಕ್ಷಿಸಿದ ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸುತ್ತಿದೆ. ಇತೆರೆ ಇಲಾಖೆಗಳೂ ಕೂಡ ವಿಪತ್ತು ನಿರ್ವಹಣಾ ಪಡೆಯೊಟ್ಟಿಗೆ ಕೈ ಜೋಡಿಸಿವೆ. ಜಿಲ್ಲಾಧಿಕಾರಿ ಡಾ. ಅಖಿಲೇಶ್‌ ಮಿಶ್ರಾ, “ಈವೆರಗೂ ವಿಪತ್ತು ನಿರ್ವಹಣಾ ಪಡೆ ಮತ್ತು ಇತರೆ ಇಲಾಖೆಗಳಲ್ಲಿನ ಸಿಬ್ಬಂದಿಗಳೇ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಗೆ ಹೆಚ್ಚಿನ ಜನರ ಅವಶ್ಯಕತೆ ಇದುವರೆಗೂ ಕಂಡು ಬಂದಿಲ್ಲ. ಹಾಗೇನಾದರೂ ಹೆಚ್ಚು ಜನರ ಅಗತ್ಯ ಬಿದ್ದಲ್ಲಿ, ಇತರರ ನೆರವನ್ನು ಪಡೆಯಲಾಗುವುದು,” ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಪ್ರಮುಖ ನದಿಗಳು:

ಉತ್ತರ ಪ್ರದೇಶದಲ್ಲಿನ ಗಂಗಾ, ರಾಮ ಗಂಗಾ, ಶಾರದಾ, ಗಾಗ್ರಾ ಮತ್ತು ಕುವಾನೋ ನದಿಗಳು ಮಂಗಳವಾರದ ವೇಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪಿಲಿಯಾ ಮತ್ತು ಲಕ್ಷ್ಮಿಪುರ ಪ್ರದೇಶದಲ್ಲಿ ಶಾರದಾ ನದಿ ಅಪಾಯದ ಮಟ್ಟಕ್ಕಿಂತ 1.26 ಮೀಟರ್‌ ಎತ್ತರಕ್ಕೆ ಹರಿಯುತ್ತಿದೆ. ಬರಬಂಕಿ ಪ್ರದೇಶದಲ್ಲಿ ಗಾಗ್ರಾ ನದಿ ಅಪಾಯದ ಮಟ್ಟ ಮೀರಿ 0.8 ಮೀಟರ್‌ ಎತ್ತರಕ್ಕೆ ಹರಿಯುತ್ತಿದ್ದರೆ, ಮೊರಾದಾಬಾದ್‌ ಪ್ರದೇಶದಲ್ಲಿ ಗಂಗಾ ನದಿ ಅಪಾಯದ ಮಟ್ಟಕ್ಕಿಂತ 0.5 ಮೀಟರ್‌ ಎತ್ತರಕ್ಕ ಹರಿಯುತ್ತಿದೆ. ಜತೆಗೆ ಕಾಚಲಾ ಮತ್ತು ಬದೌನ್‌ ಪ್ರದೇಶಗಳಲ್ಲೂ ಕೂಡ ಗಂಗಾ ನದಿ ಆರ್ಭಟಿಸುತ್ತಿದೆ.

ಉತ್ತರಾಖಾಂಡ್‌ ಜನರೂ ಕೂಡ ಮಹಾಮಳೆಯಿಂದ ತತ್ತರಿಸುತ್ತಿದ್ದಾರೆ. ಮಳೆಯಿಂದಾಗಿ ರಾಜ್ಯದ ತೆಹ್ರಿ ಗರ್ವಾಲ್‌ ಜಿಲ್ಲೆಯಲ್ಲಿನ ಬುದಾ ಕೇದಾರ್‌ ಬಳಿಯ ಕೋಟ್‌ ಗ್ರಾಮದಲ್ಲಿ ಗುಡ್ಡದ ಪಾರ್ಶ್ವಭಾಗ ಕುಸಿದಿದ್ದು, ಮನೆಯೊಂದು ಧ್ವಂಸಗೊಂಡಿದೆ. ಮನೆಯಲ್ಲಿದ್ದ 11 ಜನರಲ್ಲಿ 4 ಜನ ಈಗಾಗಲೇ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಇನ್ನುಳಿದ 6 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈ ಆರು ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಉತ್ತರಾಖಂಡದ ರಾಜ್ಯ ವಿಪತ್ತು ನಿರ್ವಹಣಾ ಪಡೆ ಶೋಧನಾ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇವರೊಟ್ಟಿಗೆ ಜಿಲ್ಲೆಯ ಹಲವಾರು ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ. ಮಂಗಳವಾರ ಕೂಡ ತೆಹ್ರಿ ಗರ್ವಾಲ್‌ ಜಿಲ್ಲೆಯಲ್ಲೇ ಮಳೆಯ ಅವಾಂತರದಿಂದಾಗಿ ಬಸ್‌ವೊಂದು ಕಮರಿಯೊಳಗೆ ಬಿದ್ದ ಕಾರಣ ಇಬ್ಬರು ಮೃತಪಟ್ಟು 34 ಜನ ಗಾಯಗೊಂಡಿದ್ದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರಿನ ಮಟ್ಟ ಇನ್ನೂ ಹೆಚ್ಚಾಗಲಿದೆ ಎಂದು ದೆಹಲಿ ಸರಕಾರ ತಿಳಿಸಿದೆ. ದಕ್ಷಿಣ ಭಾರತದ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಜನತೆ ಮಹಾಮಳೆಗೆ ಸಿಲುಕಿ, ದುಸ್ತರವಾದ ಬದುಕು ಎದುರಿಸುವಂತಾಗಿದೆ. ಇಲ್ಲಿನ ಜನತೆ ಚೇತರಿಸಿಕೊಳ್ಳುವ ಮೊದಲೇ ಮಳೆರಾಯ ಉತ್ತರ ಭಾರತದ ಜನರನ್ನು ಕಾಡಿಸಲು ಆರಂಭಿಸಿದ್ದಾನೆ.