samachara
www.samachara.com
ಮುಂಗಾರು ಮಾರುತ: ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ; ಕರ್ನಾಟಕದಲ್ಲೇ 166 ಬಲಿ :(
ದೇಶ

ಮುಂಗಾರು ಮಾರುತ: ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ; ಕರ್ನಾಟಕದಲ್ಲೇ 166 ಬಲಿ :(

ಈಗಾಗಲೇ ದೇಶದ ಬಹುಪಾಲು ನದಿಗಳಲ್ಲಿ ಪ್ರವಾಹ ಹರಿಸಿ, ಜಲಾಶಯಗಳನ್ನೆಲ್ಲಾ ತುಂಬಿಸಿರುವ ಮಳೆರಾಯ ಇನ್ನೂ ಶಾಂತಗೊಳ್ಳುವ ಲಕ್ಷಣಗಳನ್ನು ತೋರುತ್ತಿಲ್ಲ. ಈ ನಡುವೆ ಸಾವಿನ ಸಂಖ್ಯೆ ಸಾವಿರ ಗಡಿ ದಾಟಿದೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಈ ಬಾರಿಯ ಮಾನ್ಸೂನ್‌ ಮಾರುತ ದೇಶಾದ್ಯಂತ 1,267 ಜನರನ್ನು ಬಲಿ ಪಡೆದಿದೆ. ಈ ಪೈಕಿ 443 ಜನ ಕೇರಳದಲ್ಲಿಯೇ ಮೃತರಾಗಿದ್ದಾರೆ. ದೇಶದ 8 ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತಕ್ಕೆ ಕಾರಣವಾದ ಮಳೆ, ಸಾವು ನೋವುಗಳ ಜತೆಗೆ ಅಪಾರವಾದ ಆರ್ಥಿಕ ನಷ್ಟವನ್ನೂ ತಂದೊಡ್ಡಿದೆ.

ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿಯಂತೆ ಕೇರಳದ ಬೀಕರ ಪ್ರವಾಹ 443 ಜನರನ್ನು ಬಲಿ ಪಡೆದದ್ದಲ್ಲದೇ, 14 ಜಿಲ್ಲೆಗಳ 54.11 ಲಕ್ಷ ಜನರನ್ನು ಸಂಕಷ್ಟಕ್ಕೆ ದೂಡಿದೆ. ಉತ್ತರ ಪ್ರದೇಶದಲ್ಲಿ 218, ಪಶ್ಚಿಮ ಬಂಗಾಳ ರಾಜ್ಯದಲ್ಲಿ 198, ಕರ್ನಾಟಕದಲ್ಲಿ 166, ಮಧ್ಯ ಪ್ರದೇಶದಲ್ಲಿ 139, ಗುಜರಾತ್‌ನಲ್ಲಿ 52, ಅಸ್ಸಾಂನಲ್ಲಿ 49 ಹಾಗೂ ನಾಗಲ್ಯಾಂಡ್‌ 11 ಜನ ಮಾನ್ಸೂನ್‌ನ ಅಬ್ಬರಕ್ಕೆ ಪ್ರಾಣ ತೆತ್ತಿದ್ದಾರೆ.

ಇದರ ಜತೆಗೆ ಕೇರಳದಲ್ಲಿ ನಾಪತ್ತೆಯಾಗಿರುವ 15 ಮಂದಿ ಇನ್ನು ಪತ್ತೆಯಾಗಿಲ್ಲ. ಉತ್ತರ ಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 5, ಕರ್ನಾಟಕದಲ್ಲಿ 3 ಮಂದಿ ನಾಪತ್ತೆಯಾಗಿದ್ದಾರೆ.

ಮಹಾರಾಷ್ಟ್ರದ 23 ಜಿಲ್ಲೆಗಳು ಮಳೆಗೆ ತತ್ತರಿಸಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ತಲಾ 23 ಜಿಲ್ಲೆಗಳು, ಉತ್ತರ ಪ್ರದೇಶದ 18 ಜಿಲ್ಲೆಗಳು, ನಾಗಲ್ಯಾಂಡ್‌ ಮತ್ತು ಕರ್ನಾಟಕದಲ್ಲಿ 11 ಜಿಲ್ಲೆಗಳು, ಗುಜರಾತ್‌ನಲ್ಲಿ 10 ಜಿಲ್ಲೆಗಳು ಮಳೆಯಿಂದಾಗಿ ಕಷ್ಟ ಅನುಭವಿಸುತ್ತಿದ್ದರೆ, ಕೇರಳದ 14 ಜಿಲ್ಲೆಗಳು ಮಳೆಗೆ ಆಸ್ತವ್ಯಸ್ತಗೊಂಡಿವೆ.

ಮಾನ್ಸೂನ್‌ ಮಳೆ ಕೇರಳದ 14.52 ಲಕ್ಷ ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ದೂಡಿದ್ದಲ್ಲದೇ, 47,727 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆಗಳನ್ನು ಹಾಳುಗೆಡವಿದೆ. ಅಸ್ಸಾಂನ 27,930 ಹೆಕ್ಟೇರ್‌ ಪ್ರದೇಶದ ಬೆಳೆಯನ್ನು ನಾಶ ಮಾಡಿದ್ದು, 11.47 ಜನರ ಜೀವನವನ್ನು ದುರಂತವಾಗಿಸಿದೆ. ಪಶ್ಚಿಮ ಬಂಗಾಳದ 2.92 ಲಕ್ಷ ಜನರ ಬದುಕಿನ ಜತೆಗೆ ಆಟವಾಡಿ, 48,552 ಹೆಕ್ಟೇರ್‌ ಪ್ರದೇಶದ ಬೆಳೆಗಳಿಗೆ ಹಾನಿ ಮಾಡಿದೆ. ಉತ್ತರ ಪ್ರದೇಶದ 49,053 ಹೆಕ್ಟೇರ್‌ ಬೆಳೆಯನ್ನು ನಾಶ ಮಾಡಿ, 2.92 ಜನರನ್ನು ಅಂತಂತ್ರರನ್ನಾಗಿಸಿದೆ. ಕರ್ನಾಟಕದಲ್ಲೂ ಕೂಡ 3,521 ಹೆಕ್ಟೇರ್‌ ಪ್ರದೇಶದ ಬೆಳೆಗಳು ನೆಲಕಚ್ಚಿದ್ದು, 3.5 ಲಕ್ಷ ಜನ ಮಳೆಯಿಂದಾಗಿ ಕಂಗೆಟ್ಟಿದ್ದಾರೆ.

ಭಾರತದ ಜನಜೀವನ ಮತ್ತು ಆರ್ಥಿಕತೆಯ ಮೇಲೆ ಮಾನ್ಸೂನ್‌ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ವಾರ್ಷಿಕ ಮಳೆಯ ಶೇ.70ರಷ್ಟು ಭಾಗ ಮಾನ್ಸೂನ್‌ ಅವಧಿಯಲ್ಲಿಯೇ ನೆಲ ಮುಟ್ಟುತ್ತದೆ. ದೇಶದ ಅರ್ಧಕ್ಕಿಂತಲೂ ಹೆಚ್ಚಿನ ಜನರಿಗೆ ಕೃಷಿಯೇ ಆದಾಯದ ಮೂಲವಾಗಿದ್ದು, ಮುಂಗಾರು ಮಳೆಯ ಮೇಲೆ ಅವರ ಆರ್ಥಿಕ ಸುಸ್ಥಿರತೆ ಅವಲಂಭಿತವಾಗಿದೆ. ಕೆಲವೊಮ್ಮೆ ಅಬ್ಬರಿಸಿ ಬೊಬ್ಬಿರಿಯುವ ಮಳೆ, ಮತ್ತೊಮ್ಮೆ ಸಮಯಕ್ಕೆ ಸರಿಯಾಗಿ ಬಾರದೇ ರೈತರನ್ನು ಕಂಗೆಡಿಸುತ್ತದೆ.

ಈ ವರ್ಷವೂ ಆಗಿರುವುದು ಹೀಗೆಯೇ. ಅವಧಿಗೆ ಮೊದಲೇ ಆರಂಭಗೊಂಡ ಮಳೆ ಬಿತ್ತನೆ ಸಮಯಕ್ಕೆ ಬಾರದೇ ದೇಶದ ಹಲವಾರು ಭಾಗಗಳಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ. ಇನ್ನು ಕೆಲವೆಡೆ ಬಿತ್ತನೆಯಾಗಿ ಪೈರು ಕಂಡಿದ್ದ ಕೃಷಿ ಭೂಮಿ ಮಾನ್ಸೂನ್‌ ಅಬ್ಬರಕ್ಕೆ ತತ್ತರಿಸಿದೆ.

Also read: ಮಾನ್ಸೂನ್‌ ಮಳೆಯ ಜೂಜಾಟ: ಜಲಾಶಯಗಳು ತುಂಬಿವೆ; ಹೆಚ್ಚಿನ ಕಡೆ ಬಿತ್ತನೆಯೇ ಆಗಿಲ್ಲ

ಇದು ಇಲ್ಲಿಯವೆರಗೂ ನಡೆದಿರುವುದು. ಈ ನಂತರವೂ ಕೂಡ ಭರಪೂರ ಮಳೆ ಸುರಿಯುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ಮುಂದಿಟ್ಟಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಉತ್ತರ ಭಾರತದ ಉತ್ತರಖಾಂಡ್‌ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರಾಖಂಡದ ಬಾನ್ಬಾಸಾ ಬ್ಯಾರೇಜ್‌ನಲ್ಲಿ ಈಗಾಗಲೇ 85,000 ಕ್ಯೂಸೆಕ್ಸ್‌ ಒಳಹರಿವಿದ್ದು, ರಾಜ್ಯದ ಹರಿದ್ವಾರ, ಡೆಹ್ರಾಡೂನ್, ತೆಹ್ರಿ ಮತ್ತು ಪೌರಿ ಗಡ್ವಾಲ್ ಜಿಲ್ಲೆಗಳಲ್ಲಿ ಪ್ರವಾಹದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಜತೆಗೆ ರುದ್ರಪ್ರಯಾಗ್, ಉತ್ತರಕಾಶಿ, ಪಿಥೋರಘರ್ ಮತ್ತು ಚಂಪಾವತ್ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಉತ್ತರ ಪ್ರದೇಶದ ನರೋರಾ ಬ್ಯಾರೇಜ್‌ನಲ್ಲಿ ಈಗಾಗಲೇ 2 ಲಕ್ಷ ಕ್ಯೂಸೆಕ್ಸ್‌ ಒಳಹರಿವಿದ್ದು, ಭಾರಿ ಮಳೆಯ ಸಂಭವದಿಂದಾಗಿ ಫರೂಕಾಹಾಬಾದ್, ಬುಡೌನ್, ಘಜಿಯಾಬಾದ್, ಕನ್ನೌಜ್, ಕಾನ್ಪುರ್, ಬರಾಬಂಕಿ, ಫೈಜಾಬಾದ್, ಬಲಿಯಾ ಮತ್ತು ಬಾಲ್ರಾಂಪುರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ ಬುಲಂದಶಹಾರ್, ಬಿಜ್ನೋರ್, ಮೊರಾದಾಬಾದ್, ಬರೇಲಿ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳ ಹಲವು ಭಾಗಗಳಲ್ಲಿ ವಾಯುಭಾರ ಕುಸಿತದಿಂದ ಆಗಸ್ಟ್‌ 28 ಮತ್ತು 29ರಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಭಾರತದ ದಾಮೋದರ ನದಿ, ಸುಬರ್ಣರೇಖಾ ನದಿ, ಬುರ್ಹಾಬಾಂಗ್, ಬ್ರಹ್ಮಣಿ, ಬೈತರ್ಣಿ, ಮಹಾನದಿ, ರಿಷಿಕೇಶ, ವಂಶಧಾರಾ, ನಾಗವಾಲಿ, ಇಂದ್ರವಾತಿ ಮತ್ತು ಸಬರಿ ನದಿಗಳು ತುಂಬಿ ಹರಿಯುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ಈಗಾಗಲೇ ಸಾವಿರಾರು ಜನರ ಬಲಿ ಪಡೆದು, ಲಕ್ಷಾಂತರ ಜರನ್ನು ಅಂತ್ರವಾಗಿಸಿರುವ ಮಹಾಮಳೆ, ಮುಂದಿನ ದಿನಗಳಲ್ಲೂ ಕೂಡ ದೇಶದ ಜನರನ್ನು ಅಸ್ಥಿರತೆ ದೂಡುವ ಸಂಭವಗಳಿವೆ.

2014 ಮತ್ತು 2015ರಲ್ಲಿ ಕೈಕೊಟ್ಟು, ಬರಗಾಲಕ್ಕೆ ಕಾರಣವಾದ ಮಾನ್ಸೂನ್‌ ಮಾರುತ, 2016ರಲ್ಲಿ ಶೇ.97ರಷ್ಟು ಮಳೆ ಸುರಿಸಿ ಮಂದಹಾಸ ಮೂಡಿಸಿತ್ತು. ಕಳೆದ ವರ್ಷ ಶೇ.95ರ ಆಸುಪಾಸಿನಷ್ಟು ಮಳೆಯಾಗಿ, ಕೊನೆಯ ಎರಡು ತಿಂಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಈ ವರ್ಷದಲ್ಲಿ ಅಗಲೇ ದೇಶದ ಬಹುಪಾಲು ನದಿಗಳಲ್ಲಿ ಪ್ರವಾಹ ಹರಿಸಿ, ಜಲಾಶಯಗಳನ್ನೆಲ್ಲಾ ತುಂಬಿಸಿರುವ ಮಳೆರಾಯ ಇನ್ನೂ ಶಾಂತಗೊಳ್ಳುವ ಲಕ್ಷಣಗಳನ್ನು ತೋರುತ್ತಿಲ್ಲ.