samachara
www.samachara.com
‘ನೆಹರೂ ಸ್ಮಾರಕ ವಿವಾದ’: ಮನಮೋಹನ್‌ ಸಿಂಗ್‌ ಮೋದಿಗೆ ಬರೆದ  ಪತ್ರದಲ್ಲಿ ಏನಿದೆ?
ದೇಶ

‘ನೆಹರೂ ಸ್ಮಾರಕ ವಿವಾದ’: ಮನಮೋಹನ್‌ ಸಿಂಗ್‌ ಮೋದಿಗೆ ಬರೆದ ಪತ್ರದಲ್ಲಿ ಏನಿದೆ?

“ವಾಜಪೇಯಿ ಆಡಳಿತಾವಧಿಯಲ್ಲಿ ತೀನ್‌ ಮೂರ್ತಿ ಕಾಂಪ್ಲೆಕ್ಸ್‌ನ ರಚನೆ ಮತ್ತು ವಿನ್ಯಾಸವನ್ನು ಬದಲಾವಣೆ ಮಾಡುವ ಯಾವ ಯತ್ನವೂ ನಡೆದಿರಲಿಲ್ಲ. ಆದರೆ ದುರದೃಷ್ಟಕರವೆಂದರೆ ಅದು ಈಗಿನ ಸರಕಾರದ ಅಜೆಂಡವಾಗಿದ್ದಂತೆ ಕಾಣಿಸುತ್ತಿದೆ” - ಮನ್‌ಮೋಹನ್‌ಸಿಂಗ್.

ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಭಾರತದ ಮೊದಲ ಪ್ರಧಾನಿ ಜವಹರ್‌ಲಾಲ್‌ ನೆಹರೂ ವಿರುದ್ಧ ಕೆಂಡಕಾರುತ್ತಲೇ ಬಂದವರು ಪ್ರಧಾನಿ ನರೇಂದ್ರ ಮೋದಿ. ಇದೀಗ ಅವರ ಕಣ್ಣು ದೆಹಲಿಯ ತೀನ್‌ ಮೂರ್ತಿ ಹೌಸ್‌ ಸಂಕೀರ್ಣದಲ್ಲಿರುವ ‘ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್‌ಎಮ್‌ಎಮ್‌ಎಲ್‌)’ದ ಮೇಲೆ ಬಿದ್ದಿದೆ. ಇದೇ ಜಾಗದಲ್ಲಿ ದೇಶದ ಎಲ್ಲಾ ಪ್ರಧಾನಿಗಳಿಗೂ ಸ್ಮಾರಕವನ್ನು ನಿರ್ಮಿಸಲು ಹಾಲಿ ಸರಕಾರ ಹೊರಟಿದ್ದು ಇದು ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಕ್ರೋಶಕ್ಕೆ ಗುರಿಯಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಟು ಶಬ್ದಗಳಲ್ಲಿ ಮನ್‌ಮೋಹನ್‌ ಸಿಂಗ್‌ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ಅವರು ಇತಿಹಾಸ ಮತ್ತು ಪರಂಪರೆಗೆ ಬೆಲೆ ನೀಡಿ ಜವಹರ್‌ಲಾಲ್‌ ನೆಹರೂ ಸ್ಮಾರಕಕ್ಕೆ ಕೈ ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ.

ತೀನ್‌ ಮೂರ್ತಿ ಹೌಸ್‌ ಮತ್ತು ನೆಹರೂ:

ಭಾರತದ ಪ್ರಧಾನಿಯಾಗಿದ್ದ ನೆಹರೂ 1964ರಲ್ಲಿ ನಿಧನರಾದ ನಂತರ ಅವರು ಉಳಿದುಕೊಳ್ಳುತ್ತಿದ್ದ ತೀನ್‌ ಮೂರ್ತಿ ಹೌಸ್‌ ಕಾಂಪ್ಲೆಕ್ಸ್‌ನ್ನು ಸ್ಮಾರಕವಾಗಿ ಬದಲಾಯಿಸಲಾಗಿತ್ತು. ಇದೊಂದು ಸ್ವಾಯತ್ತ ಸ್ಮಾರಕ ಸಂಸ್ಥೆಯಾಗಿದ್ದು ಭಾರತ ಸರಕಾರ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಜವಹರ್‌ಲಾಲ್‌ ಸ್ಮಾರಕವಿರುವ ತೀನ್ ಮೂರ್ತಿ ಹೌಸ್‌ ಕಾಂಪ್ಲೆಕ್ಸ್‌
ಜವಹರ್‌ಲಾಲ್‌ ಸ್ಮಾರಕವಿರುವ ತೀನ್ ಮೂರ್ತಿ ಹೌಸ್‌ ಕಾಂಪ್ಲೆಕ್ಸ್‌
ಚಿತ್ರ ಕೃಪೆ: ಹಾಲಿಡೇಐಕ್ಯೂ

ಸುಮಾರು 30 ಎಕರೆ ಹರಡಿಕೊಂಡಿರುವ ಈ ತೀನ್‌ ಮೂರ್ತಿ ಹೌಸ್‌ ಸಂಕೀರ್ಣವನ್ನು ವಿನ್ಯಾಸ ಮಾಡಿದವರು ಖ್ಯಾತ ಬ್ರಿಟಿಷ್‌ ಕಟ್ಟಡ ವಿನ್ಯಾಸಗಾರ ರಾಬರ್ಡ್‌ ಟಾರ್‌ ರಸೆಲ್‌. 1929ರಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ಇದರ ನಿರ್ಮಾಣ ಆರಂಭಿಸಲಾಗಿತ್ತು. ಬ್ರಿಟೀಷ್‌ ಸೇನೆಯ ಕಮಾಂಡರ್‌ ಇನ್‌ ಚೀಫ್‌ ಇದರಲ್ಲಿ ಉಳಿದುಕೊಳ್ಳುತ್ತಿದ್ದರು. ಮುಂದೆ ಸ್ವಾತಂತ್ರ್ಯ ಬಂದನ ನಂತರ ನೆಹರೂ ಭಾರತದ ಪ್ರಧಾನಿಯಾಗಿ ಇದರಲ್ಲೇ ಉಳಿದುಕೊಳ್ಳಲು ಆರಂಭಿಸಿದರು. ಸುಮಾರು 17 ವರ್ಷಗಳ ದೀರ್ಘ ಪ್ರಧಾನಿ ಪಟ್ಟ ಅಲಂಕರಿಸಿದ ನೆಹರೂ ಜತೆಗೆ ಈ ತೀನ್‌ ಮೂರ್ತಿ ಹೌಸ್‌ ಕೂಡ ಗುರುತಿಸಿಕೊಂಡಿತ್ತು. ಈ ಕಾರಣಕ್ಕೆ ಅವರ ನಿಧನಾನಂತರ ಇದನ್ನೇ ಸ್ಮಾರಕವಾಗಿಸಲಾಯ್ತು.

ಇದೀಗ ಕೇಂದ್ರ ಸರಕಾರ ಇದರ ಸ್ವರೂಪವನ್ನು ಬದಲಾವಣೆ ಮಾಡಲು ಕೈ ಹಾಕುತ್ತಿದ್ದಂತೆ ಅಪರೂಪಕ್ಕೆ ಪತ್ರ ಬರೆದಿರುವ ಸಿಂಗ್‌, “ನೆಹರೂ ಕಾಂಗ್ರೆಸಿಗೆ ಮಾತ್ರ ಸೇರಿದವರಲ್ಲ. ಅವರು ಇಡೀ ದೇಶಕ್ಕೆ ಸೇರಿದವರು” ಎಂದು ಚಾಟಿ ಬೀಸಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಪತ್ರದಲ್ಲಿ ನೆನಪಿಸಿಕೊಂಡ ಡಾ. ಸಿಂಗ್, “ಬಿಜೆಪಿಯ ಮೇರು ನಾಯಕರ ಆಡಳಿತಾವಧಿಯಲ್ಲಿ ಎನ್‌ಎಂಎಂಎಲ್‌ ಮತ್ತು ತೀನ್‌ ಮೂರ್ತಿ ಕಾಂಪ್ಲೆಕ್ಸ್‌ನ ರಚನೆ ಮತ್ತು ವಿನ್ಯಾಸವನ್ನು ಬದಲಾವಣೆ ಮಾಡುವ ಯಾವ ಯತ್ನವೂ ನಡೆದಿರಲಿಲ್ಲ. ಆದರೆ ದುರದೃಷ್ಟಕರವೆಂದರೆ ಅದು ಈಗಿನ ಸರಕಾರದ ಅಜೆಂಡವಾಗಿದ್ದಂತೆ ಕಾಣಿಸುತ್ತಿದೆ,” ಎಂದು ಕಿಡಿಕಾರಿದ್ದಾರೆ.

ಎನ್‌ಎಂಎಂಎಲ್‌ನ್ನು “ಭಾರತದ ಮೊದಲ ಪ್ರಧಾನ ಮಂತ್ರಿಯವರ ಸ್ಮರಣಾರ್ಥ ರಚಿಸಲಾಗಿತ್ತು. ಭಾರತದ ದೇಶದ ಪ್ರಧಾನ ಶಿಲ್ಪಿ ಅವರಾಗಿದ್ದು ದೇಶ ಮತ್ತು ಜಗತ್ತಿನ ಚರಿತ್ರೆಯಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಅವರ ವೈಶಿಷ್ಟ್ಯತೆ ಮತ್ತು ಶ್ರೇಷ್ಠತೆಯನ್ನು ಅವರ ವಿರೋಧಿಗಳೂ ಗೌರವಿಸುತ್ತಾರೆ,” ಎಂದು ಪತ್ರದಲ್ಲಿ ಸಿಂಗ್‌ ಉಲ್ಲೇಖಿಸಿದ್ದಾರೆ.

“ನೆಹರೂ ತೀರಿಕೊಂಡಾಗ ಸ್ವತಃ ಅಟಲ್‌ ಬಿಹಾರಿ ವಾಜಪೇಯಿಯವರು ಸಂಸತ್ತಿನಲ್ಲಿ, ‘ತೀನ್‌ ಮೂರ್ತಿ ಇನ್ನೊಮ್ಮೆ ಅಂಥಹ ನಿವಾಸಿಯನ್ನು ನೋಡಲು ಸಾಧ್ಯವಿಲ್ಲ. ಅವರದ್ದು ರೋಮಾಂಚಕ ವ್ಯಕ್ತಿತ್ವ. ವಿರೋಧಿಗಳನ್ನು ಸಹ ಜತೆಗೆ ತೆಗೆದುಕೊಂಡು ಹೋಗುವ ಆ ವರ್ತನೆ, ಅವರ ಆ ಸೌಮ್ಯತೆ, ಇದನ್ನೆಲ್ಲಾ ನಾವು ಸದ್ಯದ ಭವಿಷ್ಯದಲ್ಲಿ ನೋಡಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯದ ನಡುವೆಯೂ ನಮ್ಮಲ್ಲಿ ಅವರ ಶ್ರೇಷ್ಠ ಆದರ್ಶಗಳು, ಅವರ ಸಮಗ್ರತೆ, ದೇಶದ ಮೇಲಿನ ಅವರ ಪ್ರೀತಿ ಮತ್ತು ಅವರ ಅದಮ್ಯ ಧೈರ್ಯಕ್ಕೆ ಗೌರವವಿದೆ’ ಎಂದಿದ್ದರು,” ಎಂಬುದನ್ನು ಮೋದಿಗೆ ನೆನಪಿಸಿದ್ದಾರೆ. ಈ ಭಾವನೆಗಳನ್ನು ಗೌರವಿಸಿ ಎಂದು ಪ್ರಧಾನಿ ಮೋದಿಗೆ ಅವರು ಮನವಿಯನ್ನೂ ಮಾಡಿಕೊಂಡಿದ್ದಾರೆ.

“1920 ರ ದಶಕದ ಮಧ್ಯ ಮತ್ತು 1940 ರ ದಶಕದ ಮಧ್ಯದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದವರು ನೆಹರೂ. ಹೀಗಾಗಿ ಮ್ಯೂಸಿಯಂ ತನ್ನ ಪ್ರಾಥಮಿಕ ಗಮನವನ್ನು ‘ನೆಹರು ಮತ್ತು ಸ್ವಾತಂತ್ರ್ಯ ಹೋರಾಟ’ದ ಬಗ್ಗೆ ಉಳಿಸಿಕೊಳ್ಳಬೇಕು" ಎಂದು ಹೇಳಿರುವ ಸಿಂಗ್‌, ಯಾವುದೇ ಪರಿಷ್ಕರಣೆಯೂ ಅವರ ಈ ಕೊಡುಗೆಗಳನ್ನು ತೊಡೆದು ಹಾಕುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಆದರೆ ಇದೇ ಉದ್ದೇಶವನ್ನು ಇಟ್ಟುಕೊಂಡು ಮರು ನಿರ್ಮಾಣಕ್ಕೆ ಕೈ ಹಾಕಿದವರು ಮನ್‌ಮೋಹನ್‌ ಸಿಂಗ್‌ ಪತ್ರಕ್ಕೆ ಬೆಲೆ ನೀಡುತ್ತಾರಾ ಕಾದು ನೋಡಬೇಕಿದೆ.