samachara
www.samachara.com
‘PAN ಕಾರ್ಡ್ ಕರಾಮತ್ತು’: 27ರ ಅನುಜ್‌ 13 ಕಂಪನಿಗಳ ನಿರ್ದೇಶಕ & 1 ಕಂಪನಿಯ ಮಾಲಿಕ!
ದೇಶ

‘PAN ಕಾರ್ಡ್ ಕರಾಮತ್ತು’: 27ರ ಅನುಜ್‌ 13 ಕಂಪನಿಗಳ ನಿರ್ದೇಶಕ & 1 ಕಂಪನಿಯ ಮಾಲಿಕ!

ಪ್ರತಿ ತಿಂಗಳು 25,000 ಸಂಬಳ ಪಡೆಯುತ್ತಿದ್ದ ಅನುಜ್‌ ಇದ್ದಕ್ಕಿದ್ದಂತೆ ಕಂಪನಿ ಮಾಲಿಕರಾದರು. ಜತೆಗೆ 13 ಕಂಪನಿಗಳ ನಿರ್ದೇಶಕರಾಗಿ 20 ಕೋಟಿ ವ್ಯವಹಾರ ನಡೆಸಿದ್ದರು. ಎಲ್ಲವೂ ಕಾಗದದ ಮೇಲಿನ ಕತೆಗಳು ಅಷ್ಟೆ. 

ಅನುಜ್‌ ಕುಮಾರ್‌ ಶ್ರೀವಾಸ್ತವ್‌, 27ರ ಹರೆಯದ ಯುವಕ. ದೆಹಲಿಯ ಲಕ್ಷ್ಮೀ ನಗರದಲ್ಲಿ ವಾಸವಿರುವ ಶ್ರೀವಾಸ್ತವ್‌, ಕಂಪನಿಯೊಂದರಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ವ್ಯಾಗನ್‌ ಆರ್‌ ಕಾರನ್ನೂ ಕೂಡ ಚಲಾಯಿಸುತ್ತಾರೆ. ಇದನ್ನು ಬಿಟ್ಟು ಬೇರೆ ಯಾವ ಆದಾಯದ ಮೂಲವೂ ಇವರಿಗಿಲ್ಲ.

ಆದರೆ ಕೆಲವು ದಿನಗಳ ಹಿಂದೆ ಶ್ರೀವಾಸ್ತವ್‌ ಕಿವಿಗೆ ಬಿದ್ದ ಮಾಹಿತಿಯೊಂದು ಆಶ್ಚರ್ಯದ ಜತೆ ಆಘಾತವನ್ನೂ ತಂದೊಡ್ಡಿತ್ತು. ದೊರೆತ ಮಾಹಿತಿ ಪ್ರಕಾರ ಶ್ರೀವಾಸ್ತವ್‌ 13 ಕಂಪನಿಗಳ ನಿರ್ದೇಶಕ ಹುದ್ದೆಯನ್ನು ನಿಭಾಯಿಸುವುದರ ಜತೆಗೆ ಕಳೆದ ಕೆಲವು ತಿಂಗಳುಗಳಲ್ಲಿ 20 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದರು. ಈ ವ್ಯವಹಾರಗಳ ಪೈಕಿ ಇತ್ತೀಚಿನದು ಹಾಂಗ್‌ಕಾಂಗ್‌ ಮೂಲದ ಕಂಪನಿಯೊಂದರ ಜತೆ ನಡೆಸಿದ 61 ಲಕ್ಷ ಮೌಲ್ಯದ ವಹಿವಾಟು. ಈ ವಿಷಯಗಳೆಲ್ಲಾ ಶ್ರೀವಾಸ್ತವ್‌ಗೆ ತಿಳಿದದ್ದು ಜನವರಿ ತಿಂಗಳಲ್ಲಿ ಮನೆಗೆ ಬಂದ ಮೊದಲ ನೋಟಿಸ್‌ನಿಂದ.

ಅದು ಆದಾಯ ತೆರಿಗೆ ಇಲಾಖೆಯಿಂದ ಬಂದಿದ್ದ ನೋಟಿಸ್‌. ತನಗೆ ಗುರುತು ಪರಿಚಯವೇ ಇಲ್ಲದ ಕಂಪನಿಗಳ ಜತೆ ಕೋಟಿ ಕೋಟಿ ವ್ಯವಹಾರಗಳಲ್ಲಿ ತನಗರಿವಿಲ್ಲದೇ ಭಾಗಿಯಾಗಿರುವುದನ್ನು ಕಂಡು ಭಯಭೀತರಾದ ಶ್ರೀವಾಸ್ತವ್‌, ಫೆಬ್ರವರಿ ತಿಂಗಳಲ್ಲಿ ದೆಹಲಿ ಪೊಲೀಸ್‌ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಈ ಕುರಿತು ದೂರು ದಾಖಲಿಸಿದ್ದರು.

“ನನಗೆ ತಿಳಿಯದಂತೆಯೇ ತನ್ನ ಪಾನ್‌ ಕಾರ್ಡ್‌ ನಂಬರ್‌ ಬಳಸಿ ನಕಲಿ ಕಂಪನಿಗಳು ವಿದೇಶಿ ಕಂಪನಿಗಳೊಂದಿಗೆ ದೊಡ್ಡ ಮೊತ್ತದ ವಹಿವಾಟು ನಡೆಸುತ್ತಿವೆ,” ಎಂದು ಶ್ರೀವಾಸ್ತವ್‌ ಅಸ್ತಿತ್ವದಲ್ಲಿಯೇ ಇಲ್ಲದ ಕಂಪನಿಗಳ ಮೇಲೆ ಮೊಕದ್ದಮೆ ಹೂಡಿದ್ದರು.

ಜುಲೈ ತಿಂಗಳ ಅಂತ್ಯದವರೆಗೂ ಅವರ ಭಯ ಹಾಗೆಯೇ ಮುಂದುವರೆದಿತ್ತು. ಜುಲೈ 31ರಂದು ದೆಹಲಿಯ ನ್ಯಾಯಾಲಯ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವನ್ನು ಉದ್ದೇಶಿಸಿ ಸೆಪ್ಟೆಂಬರ್‌ 1ರೊಳಗೆ ಈ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. ಇದರಿಂದಾದಾದರೂ ಆದಾಯ ತೆರಿಗೆ ಇಲಾಖೆಗೆ ಸತ್ಯ ಅರಿವಾಗಬಹುದು ಎನ್ನುವ ನಂಬಿಕೆ ಶ್ರೀವಾಸ್ತವ್‌ ಅವರದ್ದು.

‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶ್ರೀವಾಸ್ತವ್‌, ತನ್ನ ಸ್ನೇಹಿತರು ತನ್ನನ್ನು ದೊಡ್ಡ ಉದ್ಯಮಿ ಎಂದು ರೇಗಿಸುತ್ತಾರೆಂದು ವಿ‍ಷಾದ ವ್ಯಕ್ತ ಪಡಿಸುತ್ತಾರೆ. ನನ್ನ ಕಷ್ಟ ನನ್ನದು ಎನ್ನುವುದು ಅವರ ಅಳಲು. “ನಾನು ಬ್ಯಾಂಕ್‌ಗಳಿಂದ 5 ಲಕ್ಷ ವೈಯಕ್ತಕ ಸಾಲ ಪಡೆಯಲೂ ಕೂಡ ಅಸಮರ್ಥ. ನನ್ನ ಆದಾಯವನ್ನು ನೋಡುವ ಬ್ಯಾಂಕ್‌ಗಳೆಲ್ಲಾ ಸಾಲದ ಮನವಿಯನ್ನು ತಿರಸ್ಕರಿಸುತ್ತವೆ. ಹೀಗಿರುವಾಗ ನಾನೇಗೆ ಕೋಟಿ ಕೋಟಿ ವ್ಯವಹಾರ ನಡೆಸಲು ಸಾಧ್ಯ,” ಎಂದಿದ್ದಾರೆ ಶ್ರೀವಾಸ್ತವ್‌.

ಬಿಹಾರದ ಬಕ್ಸಾರ್‌ನಿಂದ ಬಂದು, ದೆಹಲಿಯಲ್ಲಿ ನೆಲೆಯೂರಿದ್ದ ಶ್ರೀವಾಸ್ತವ್‌, ಮೊದಲು ಬಾರಿಗೆ ಜನವರಿಯಲ್ಲಿ ಆದಾಯ ತೆರಿಗೆ ಇಲಾಖೆಯ ನೋಟಿಸ್‌ ಪಡೆದಾಗ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ನಂತರ ಅದೇ ತಿಂಗಳಲ್ಲಿ ಇನ್ನೂ 2 ನೋಟಿಸ್‌ಗಳು ಬಂದಿದ್ದವು. ಆಗಲೂ ಶ್ರೀವಾಸ್ತವ್‌ ಸುಮ್ಮನಿದ್ದರು. ಒಂದು ನೋಟಿಸ್‌ನಲ್ಲಿ “2015ರ ಏಪ್ರಿಲ್‌ 23ರಂದು ನಿಮ್ಮ ಪ್ಯಾನ್‌ ಕಾರ್ಡ್ ನಂಬರ್‌ನಿಂದ 61.37 ಲಕ್ಷ ಮೌಲ್ಯದ ಅಕ್ರಮ ವಹಿವಾಟು ನಡೆದಿದೆ. ಹಾಂಗ್‌ಕಾಂಗ್‌ನ ಮಾಂಗ್‌ಕಾಕ್‌ ರಸ್ತೆಯಲ್ಲಿರುವ ಡೈನಮಿಕ್‌ ಟೆಲಿಕಾಂ ಟ್ರೇಡಿಂಗ್‌ ಲಿಮಿಟೆಡ್‌ ಹೆಸರಿನ ಕಂಪನಿಗೆ ಮ್ಯಾಕ್ಸ್‌ಕಾರ್ಟ್ ಇಂಪ್ಲೆಕ್ಸ್ ಕಂಪನಿ ನಿಮ್ಮ ಪಾನ್‌ ಕಾರ್ಡ್‌ ನಂಬರ್‌ ಬಳಸಿ ಅಕ್ರಮವಾಗಿ ಹಣ ನೀಡಿದೆ,” ಎಂದು ಉಲ್ಲೇಖಿಸಲಾಗಿತ್ತು.

ನೋಟಿಸ್‌ಗಳ ಬಗ್ಗೆ ಶ್ರೀವಾಸ್ತವ್‌ ತಲೆಕೆಡಿಸಿಕೊಳ್ಳದಿದ್ದಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಶ್ರೀವಾಸ್ತವ್‌ಗೆ ಫೋನಾಯಿಸಿದ್ದರು. ‘ನಿಮ್ಮ ಜನಕಪುರಿ ಬ್ಯಾಂಕ್‌ ಖಾತೆಯಿಂದ ನ್ಯಾಷನಲ್‌ ಬ್ಯಾಂಕ್‌ಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು, ನೀವೇ ಮ್ಯಾಕ್ಸ್‌ಕಾರ್ಟ್‌ ಇಂಪ್ಲೆಕ್ಸ್ ಕಂಪನಿಯ ಮಾಲೀಕ,’ ಎಂದು ಅಧಿಕಾರಿಯೊಬ್ಬರು ಶ್ರೀವಾಸ್ತವ್‌ಗೆ ತಿಳಿಸಿದ್ದರು. ಅದುವರೆಗೂ ಹಾಂಗ್‌ಕಾಂಗ್‌ ಹೆಸರನ್ನಷ್ಟೇ ಕೇಳಿದ್ದ ಶ್ರೀವಾಸ್ತವ್‌ಗೆ ಹಾಂಕ್‌ಕಾಂಗ್‌ನ ಪ್ರತಿಷ್ಟಿತ ರಸ್ತೆಯೊಂದರಲ್ಲಿ ತನ್ನದೇ ಮಾಲಿಕತ್ವದ ಕಂಪನಿಯಿದೆ ಎಂದು ಗೊತ್ತೇ ಇರಲಿಲ್ಲ.

ಆದಾಯ ತೆರಿಗೆ ಇಲಾಖೆ ಅಧಿಕಾರಿಯೇ ಫೋನ್‌ ಮಾಡಿದ ನಂತರ ವಿಷಯದ ಗಂಭೀರತೆ ಅರಿತ ಶ್ರೀವಾಸ್ತವ್‌, ಮರು ದಿನವೇ ತಮ್ಮ ಖಾತೆಯಿದ್ದ ಬ್ಯಾಂಕ್‌ಗೆ ತೆರಳಿದರು. ನೋಟಿಸ್ ಮತ್ತು ಅದಾಯ ಅಧಿಕಾರಿ ನೀಡಿದ ಪೂರ್ಣಪಾಠವನ್ನು ಒಪ್ಪಿಸಿ, ಬ್ಯಾಂಕ್‌ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾದು ಕುಳಿತರು. ದುಡ್ಡು ಶ್ರೀವಾಸ್ತವ್‌ ಖಾತೆಯಿಂದಲೇ ವರ್ಗಾವಣೆಗೊಂಡಿದ್ದು ಖಾತ್ರಿಯಾಗಿತ್ತು. ವೋಟರ್‌ ಐಡಿ, ಪ್ಯಾನ್‌ ಕಾರ್ಡ್‌, ಫೋಟೊ ಎಲ್ಲವೂ ಕೂಡ ಶ್ರೀವಾಸ್ತವ್‌ನದ್ದೇ ಆಗಿತ್ತು. ಆದರೆ ಹಸ್ತಾಕ್ಷರ ಮಾತ್ರ ಶ್ರೀವಾಸ್ತವ್‌ನ ಸಹಿಯೊಂದಿಗೆ ಹೊಂದಿಕೆ ಆಗಲಿಲ್ಲ. ನಂತರ ವಕೀಲರೊಬ್ಬರನ್ನು ಭೇಟಿಯಾದ ಶ್ರೀವಾಸ್ತವ್‌, ಅವರ ನೆರವಿನಿಂದ ದೆಹಲಿ ಪೊಲೀಸ್‌ ಮತ್ತು ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಿದ್ದರು.

ಒಂದೆಡೆ ಶ್ರೀವಾಸ್ತವ್‌ ಈ ಕುರಿತು ದೂರು ದಾಖಲಿಸಲು ಹೆಣಗಾಡುತ್ತಿರುವ ಸಮಯದಲ್ಲಿಯೇ ಆದಾಯ ತೆರಿಗೆ ಎಂಬ ಹೆಸರಿನಲ್ಲಿ ಅಪಾರ ಪ್ರಮಾಣದ ಹಣ ಅವರ ಬ್ಯಾಂಕ್‌ ಖಾತೆಯಿಂದ ಖಾಲಿಯಾಗುತ್ತಾ ಸಾಗುತ್ತಿತ್ತು. ಆಗ ಶ್ರೀವಾಸ್ತವ್‌ ತಾವು ಕೆಲಸ ನಿರ್ವಹಿಸುವ ಕಂಪನಿಯ ಸಿಎ ಜತೆ ಕುಳಿತು ಚರ್ಚಿಸಿ, ಇದರ ಸುತ್ತ ಹುಡುಕಾಟ ನಡೆಸಿದಾಗ, ಈಗಾಗಲೇ ಒಂದು ಕಂಪನಿ ಮಾಲೀಕನಾಗಿರುವ ಶ್ರೀವಾಸ್ತವ್‌ ಇನ್ನೂ 13 ಕಂಪನಿಗಳ ನಿರ್ದೇಶಕನೂ ಹೌದು ಎಂಬ ವಿಚಾರ ಬೆಳಕಿಗೆ ಬಂತು. ಜತೆಗೆ ಆತನ ಪಾನ್‌ ಕಾರ್ಡ್‌ ಬಳಸಿ ನಕಲಿ ಬ್ಯಾಂಕ್‌ ಖಾತೆಗಳನ್ನೂ ಕೂಡ ತೆರೆಯಲಾಗಿತ್ತು. ಇದೆಲ್ಲದರೊಟ್ಟಿಗೆ ತಿಂಗಳಿಗೆ 25,000 ಸಂಬಳ ಎಣಿಸುತ್ತಿದ್ದ ಅನುಜ್‌ ಕುಮಾರ್‌ ಶ್ರೀವಾಸ್ತವ್‌, ಆದಾಯ ತೆರಿಗೆ ಅಧಿಕಾರಿಗಳ ದಾಖಲೆಗಳ ಪ್ರಕಾರ 7 ತಿಂಗಳ ಅವಧಿಯಲ್ಲಿ 20 ಕೋಟಿ ವಹಿವಾಟು ನಡೆಸಿದ್ದರು.

ಕಂಪನಿಗಳ ನಿರ್ಮಾಣ, ಅಂತರರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಏನೂ ಅರಿಯದ ಅನುಜ್‌ ಕುಮಾರ್‌ ಶ್ರೀವಾಸ್ತವ್‌ ತಮಗೆ ತಿಳಿಯದಂತೆಯೇ ವಿದೇಶದಲ್ಲಿದ್ದ ಕಂಪನಿಯೊಂದರ ಮಾಲಿಕರಾಗಿದ್ದರು. ಜತೆಗೆ ಕಂಪನಿಗಳ ನಿರ್ದೇಶಕನ ಸ್ಥಾನ ನಿರ್ವಹಿಸುತ್ತಿರುವುದಲ್ಲದೇ 20 ಕೋಟಿ ವ್ಯವಹಾರವನ್ನೂ ಮಾಡಿದ್ದರು. ಅದರೆ ಅದರಿಂದ ಒಂದು ರುಪಾಯಿಯ ಲಾಭವೂ ಕೂಡ ಶ್ರೀವಾಸ್ತವ್‌ಗೆ ದೊರೆತಿಲ್ಲ. ಆದರೂ ಕೂಡ ಈಗ ಅನಿವಾರ್ಯವಾಗಿ ಆದಾಯ ತೆರಿಗೆ ಕಟ್ಟಬೇಕಾಗಿ ಬಂದಿದೆ. ಆದರೆ ದೂರು ನೀಡಿರುವ ಹಿನ್ನೆಲೆಯಲ್ಲಿ ಕೊಂಚ ನೆಮ್ಮದಿ ಮೂಡಿದೆ. ಹೀಗೆ, ವ್ಯಕ್ತಿಯೊಬ್ಬನ ಪಾನ್ ಕಾರ್ಡ್‌ ಬಳಸಿ ವಹಿವಾಟು ನಡೆದಿದ್ದಾದರೂ ಹೇಗೆ? ಎಂಬುದನ್ನು ಅರಿಯಲು ವರದಿಗಾಗಿ ಕಾಯಲೇಬೇಕಿದೆ. ಏನಕ್ಕೂ ನೀವೊಮ್ಮೆ ನಿಮ್ಮ ಪಾನ್‌ ಕಾರ್ಡ್‌ ಸುಸ್ಥಿತಿಯಲ್ಲಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.