samachara
www.samachara.com
ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌; ಉಳಿದಿರುವುದು ಅವರ ಬರಹಗಳಷ್ಟೇ...
ದೇಶ

ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌; ಉಳಿದಿರುವುದು ಅವರ ಬರಹಗಳಷ್ಟೇ...

ದೇಶದ ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ, ರಾಯಭಾರಿಯಾಗಿ ಗುರುತಿಸಿಕೊಂಡಿದ್ದ ಕುಲದೀಪ್‌ ನಯ್ಯರ್‌ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೊಂದು ಭಾವಪೂರ್ಣ ಶ್ರದ್ಧಾಂಜಲಿ ಇಲ್ಲಿದೆ. 

ಭಾರತದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾಗಿದ್ದ 95ರ ಪ್ರಾಯದ ಕುಲದೀಪ್‌ ನಯ್ಯರ್‌ ಆಗಸ್ಟ್‌ 23ರಂದು ದೆಹಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. 

ಪತ್ರಕರ್ತ, ಲೇಖಕ, ಅಂಕಣಕಾರ, ರಾಜಕಾರಣಿ, ರಾಯಭಾರಿ ಹೀಗೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದವರು ಕುಲದೀಪ್‌ ನಯ್ಯರ್‌. ಅವರನ್ನು ಬಹುಜನರು ‘ಎಡ ಪಂಥೀಯ’ ಎಂದೂ ಕರೆಯುತ್ತಿದ್ದಾರೆ. ಗುರುವಾರ ಮಧ್ಯಾಹ್ನ 12:30ರ ವೇಳೆಗೆ ನಯ್ಯರ್‌ ಕೊನೆಯುಸಿರೆಳೆದಿದ್ದು ಅವರ ನಿಧನಕ್ಕೆ ದೇಶದ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ.

ಕುಲದೀಪ್‌ ನಯ್ಯರ್‌ ಜನಿಸಿದ್ದು ಇಂದಿನ ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ. 1923ರಲ್ಲಿ ಹುಟ್ಟಿದ ನಯ್ಯರ್‌ ತಂದೆ ಗುರುಭಕ್ಷ್‌ ಸಿಂಗ್‌ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿ ವೃತ್ತಿಯಲ್ಲಿದ್ದವರು. ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಹೊರಬಿದ್ದ ‌ನಯ್ಯರ್‌ ಮುಂದೆ ಲಾಹೋರಿನ ಕಾನೂನು ಕಾಲೇಜೊಂದರಿಂದ ಎಲ್‌ಎಲ್‌ಬಿ ಪದವಿ ಪಡೆದರು. ಜತೆಗೆ 1952ರಲ್ಲಿ ಜರ್ನಲಿಸಂ ಅಧ್ಯಯನವನ್ನೂ ನಡೆಸಿದ್ದರು.

ಪಾಕಿಸ್ತಾನದಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದ ಕುಲದೀಪ್‌ ನಯ್ಯರ್‌ ಮೂಲತಃ ಉರ್ದು ಪತ್ರಿಕೆಗಳ ವರದಿಗಾರರಾಗಿದ್ದರು. ಮುಂದೆ ನವದೆಹಲಿಗೆ ಬಂದವರೇ ಇಂಗ್ಲೀಷ್‌ ಪತ್ರಕರ್ತರಾದರು. ಅವರು ದೆಹಲಿಯಲ್ಲಿ ‘ದಿ ಸ್ಟೇಟ್ಸ್‌ಮನ್' ಪತ್ರಿಕೆಯ ಸಂಪಾದಕರಾಗಿದ್ದ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ನಯ್ಯರ್‌ 2 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಯಿತು.

ಮುಂದೆ ಪತ್ರಿಕೋದ್ಯಮದಾಚೆಗೆ ಕಾಲಿಟ್ಟ ನಯ್ಯರ್‌ 1996ರಲ್ಲಿ ವಿಶ್ವಸಂಸ್ಥೆಗೆ ಭಾರತದ ಪ್ರತಿನಿಧಿಯಾಗಿ ತೆರಳಿದ್ದರು. 1990ರಲ್ಲಿ ಭಾರತದ ಬ್ರಿಟನ್‌ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 1997ರಲ್ಲಿ ಭಾರತದ ರಾಜ್ಯಸಭೆಗೂ ಅವರು ಆಯ್ಕೆಯಾಗಿದ್ದರು.

ಸುದ್ದಿ ಸಂಸ್ಥೆಗಳ ಮೂಲಕ ಅಂಕಣ ಬರೆಯುತ್ತಿದ್ದ ಕುಲದೀಪ್‌ ನಯ್ಯರ್‌ ಭಾರತದ ಪತ್ರಿಕೆಗಳನ್ನೆಲ್ಲಾ ಆವರಿಸಿಕೊಂಡಿದ್ದರು. ಅವರ ಅಂಕಣಗಳು ಭಾರತದ 14 ಭಾಷೆಗಳ ಸುಮಾರು 80 ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಡೆಕ್ಕನ್‌ ಹೆರಾಲ್ಡ್‌, ದಿ ಡೈಲಿ ಸ್ಟಾರ್‌, ದಿ ಸಂಡೇ ಗಾರ್ಡಿಯನ್‌, ದಿ ನ್ಯೂಸ್‌, ದಿ ಸ್ಟೇಟ್‌ಮನ್‌, ಪಾಕಿಸ್ತಾನದ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌, ಡಾನ್‌ ಇತ್ಯಾದಿ ಪ್ರಮುಖ ಪತ್ರಿಕೆಗಳಿಗೆ ಕುಲದೀಪ್‌ ನಯ್ಯರ್ ಅಂಕಣಗಳನ್ನು ಬರೆಯುತ್ತಿದ್ದರು.

ಅಂಕಣ ಬರಹಗಳ ಜತೆ ನಯ್ಯರ್ 15 ಪುಸ್ತಕಗಳನ್ನೂ ಹೊರ ತಂದಿದ್ದರು. ಜವಹರ್‌ ಲಾಲ್‌ ನೆಹರೂ, ಡೇನಿಯಲ್‌ ಸ್ಮಿತ್, ಬಾರಿ ಮಾನಿಲೋ ಇತ್ಯಾದಿ ಪ್ರಮುಖ ವ್ಯಕ್ತಿಗಳ ಬಗ್ಗೆ ಅವರು ಬರೆದ ಲೇಖನಗಳು ಜನಪ್ರಿಯವಾಗಿದ್ದವು. 2012ರಲ್ಲಿ ಕುಲದೀಪ್‌ ನಯ್ಯರ್‌ ತಮ್ಮ ಆತ್ಮಕತೆ ‘ಬಿಯಾಂಡ್‌ ದಿ ಲೈನ್ಸ್’ ಕೃತಿಯನ್ನು ಬರೆದು ಮುಗಿಸಿದ್ದರು.

ಕುಲದೀಪ್‌ ನಯ್ಯರ್‌ಗೆ ಹಲವು ಮುಖಗಳಿದ್ದು. ಪತ್ರಕರ್ತ, ರಾಯಭಾರಿ, ರಾಜಕಾರಣಿಯಾಚೆ ಅವರು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಾಂತಿ ಸ್ಥಾಪನೆಗೆ ಹೋರಾಟ ನಡೆಸುತ್ತಿದ್ದರು. 2000ನೇ ಇಸವಿಯ ನಂತರ ಪ್ರತಿ ವರ್ಷ ಆಗಸ್ಟ್‌ 14 ಮತ್ತು ಆಗಸ್ಟ್‌ 15ರಂದು ಅಮೃತಸರದ ಬಳಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ ವಾಗ್‌ ಗಡಿ ಬಳಿ ಮೊಂಬತ್ತಿ ಹಚ್ಚಿ ತಮ್ಮದೇ ರೀತಿಯಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಿದ್ದರು.

ಮಾನವಹಕ್ಕು ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದ ಅವರು 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಸೈನಿಕರು ಬಾಂಗ್ಲಾದೇಶದ ಸೈನಿಕರ ಮೇಲೆ ನಡೆಸಿದ ದೌರ್ಜನ್ಯಗಳನ್ನು ವಿರೋಧಿಸಿದ್ದರು. ಶಿಕ್ಷೆಯ ಅವಧಿ ಪೂರೈಸಿ ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಭಾರತೀಯ ಕೈದಿಗಳು ಮತ್ತು ಭಾರತದ ಜೈಲುಗಳಲ್ಲಿನ ಪಾಕಿಸ್ತಾನಿ ಕೈದಿಗಳ ಪರವಾಗಿ ಅವರು ಧ್ವನಿ ಎತ್ತುತ್ತಲೇ ಬಂದಿದ್ದರು.

ಬಿಚ್ಚು ಮನಸ್ಸಿನ ಬರಹಗಾರ

ಬಹುಮುಖಿ ಕೆಲಸಗಾರ ಕುಲದೀಪ್‌ ನಯ್ಯರ್‌ ಅವರಿಗೆ ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ವಿಶ್ಲೇಷಕ ಎನ್ನುವುದು ಬಲು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅವರು ಲೇಖನ ಹಿಡಿದರೆಂದರೆ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಯಾವ ಹಿಂಜರಿಕೆಯೂ ಇಲ್ಲದೆ, ಬಿಚ್ಚು ಮನಸ್ಸಿನಿಂದ ಬರೆಯುತ್ತಿದ್ದರು. ಇದೇ ಕಾರಣಕ್ಕೆ ಅವರು ಹಲವು ಸಂದರ್ಭಗಳಲ್ಲಿ ವಿವಾದಕ್ಕೂ ಗುರಿಯಾಗಿದ್ದರು.

ನಯ್ಯರ್ ಭಾರತ ವಿರೋಧಿ ಸಿದ್ಧಾಂತ ಹೊಂದಿರುವವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದರು. ಅವರು 2010ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಪತ್ರಿಕೆ ಡಾನ್‌ಗೆ ಬರೆದಿದ್ದ ಲೇಖನದಲ್ಲಿ ಮುಂಬೈ ‘ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)‘ ದ ಮುಖ್ಯಸ್ಥ ಹೇಮಂತ್‌ ಕರ್ಕರೆಯನ್ನು ಕೊಂದವರು ಹಿಂದೂ ಬಲಪಂಥೀಯರು ಎಂದು ಬರೆದಿದ್ದ ಭಾರೀ ಗದ್ದಲು ಉಂಟು ಮಾಡಿತ್ತು. ಪಾಕಿಸ್ತಾನದ ಐಎಸ್‌ಐ ಸ್ಥಾಪಕ ಸೈಯದ್‌ ಗುಲಾನ್‌ ನಬೀ ಫೈ ಎಂಬ ಅಮೆರಿಕಾದಲ್ಲಿ ಅಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದು ಅಮೆರಿಕಾದ ಅಧಿಕಾರಿಗಳು 2011ರ ಜುಲೈ ತಿಂಗಳಲ್ಲಿ ಬಹಿರಂಗಪಡಿಸಿದ್ದರು. ಈ ಸಂದರ್ಭದಲ್ಲೂ ನಯ್ಯರ್‌ ವಿರುದ್ಧ ಆಕ್ರೋಶಗಳು ಕೇಳಿ ಬಂದಿತ್ತು.

ಇಷ್ಟೆಲ್ಲಾ ಪರ ವಿರೋಧದ ನಡುವೆ ಕುಲದೀಪ್‌ ನಯ್ಯರ್ ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ದುಡಿದಿದ್ದರು. ಈ ಕಾರಣಕ್ಕೆ ಅವರಿಗೆ 2003ರಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಆಸ್ಟರ್‌ ಪ್ರಶಸ್ತಿ, ಮತ್ತು 2007ರಲ್ಲಿ ಜೀವಮಾನ ಸಾಧನೆಗಾಗಿ ಶಾಹಿದ್‌ ನಿಯೋಗಿ ಸ್ಮಾರಕ ಪ್ರಶಸ್ತಿ ಸಂದಿತ್ತು. ಇವತ್ತಿಗೆ ಕುಲದೀಪ್ ನಯ್ಯರ್ ನಮ್ಮ ನಡುವೆ ಇಲ್ಲ. ಆದರೆ ಅವರು ಬಿಟ್ಟು ಹೋದ ಮಾನವೀಯ ಪತ್ರಿಕೋದ್ಯಮದ ಆಶಯಗಳು ಬರಹಗಳ ರೂಪದಲ್ಲಿ ನಮ್ಮ ನಡುವೆ ಉಳಿದುಕೊಂಡಿದೆ. ಅವುಗಳ ಬೆಳಕಿನಲ್ಲಿ ಭವಿಷ್ಯದ ಪೀಳಿಗೆ ಮುಂದೆ ಸಾಗಬೇಕಿದೆ.