‘ಸಂಖ್ಯಾಬಲ’ದಲ್ಲಿ ಚೀನಾ ಹಿಂದಿಕ್ಕುತ್ತಿರುವ ಭಾರತಕ್ಕೆ ‘ಎಲ್ಲರಿಗೂ ಸ್ವಂತ ಮನೆ’ ಎಂಬ ಮೋದಿ ಕನಸು!
ದೇಶ

‘ಸಂಖ್ಯಾಬಲ’ದಲ್ಲಿ ಚೀನಾ ಹಿಂದಿಕ್ಕುತ್ತಿರುವ ಭಾರತಕ್ಕೆ ‘ಎಲ್ಲರಿಗೂ ಸ್ವಂತ ಮನೆ’ ಎಂಬ ಮೋದಿ ಕನಸು!

ಮುಂದಿನ 4 ವರ್ಷದಲ್ಲಿ ದೇಶದ ಎಲ್ಲರಿಗೂ ಸ್ವಂತ ಸೂರು ಎಂಬ ಕನಸನ್ನು ಮೋದಿ ಬಿತ್ತಿದ್ದರೆ, ಭಾರತ ಮುಂದಿನ 3 ದಶಕದಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲು ಹೊರಟಿದೆ!

2022ರ ವೇಳೆಗೆ ದೇಶದ ಎಲ್ಲಾ ಕುಟುಂಬಗಳಿಗೂ ಸ್ವಂತ ಮನೆ ಎಂಬ ಕನಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಜುಜ್ವಾ ಗ್ರಾಮದಲ್ಲಿ ಬಿತ್ತಿದ್ದಾರೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿರುವ ಮೋದಿ, “2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದೆ. ಆ ವೇಳೆಗೆ ದೇಶದ ಎಲ್ಲಾ ಕುಟುಂಬಗಳಿಗೂ ಸ್ವಂತ ಮನೆ ಇರಬೇಕೆಂಬ ಕನಸು ನನ್ನದು” ಎಂದು ಹೇಳಿದ್ದಾರೆ.

“ಗುಜರಾತ್‌ ನನಗೆ ಸಾಕಷ್ಟು ಕಲಿಸಿದೆ. ಕಾಲಮಿತಿಯಲ್ಲಿ ಕನಸುಗಳನ್ನು ಪೂರ್ಣಗೊಳಿಸಬೇಕೆಂಬ ಪಾಠವನ್ನೂ ನಾನು ಇಲ್ಲಿಂದಲೇ ಕಲಿತಿದ್ದೇನೆ. 2022ರ ವೇಳೆಗೆ ದೇಶದ ಎಲ್ಲಾ ಕುಟುಂಬಗಳಿಗೂ ಸ್ವಂತ ಮನೆಗಳಿರಬೇಕು ಹಾಗೂ ಯಾವ ಕುಟುಂಬವೂ ಸ್ವಂತ ಮನೆ ಇಲ್ಲದೆ ಇರಬಾರದು” ಎಂದು ಮೋದಿ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆ ಸಮೀಪಸುತ್ತಿರುವಂತೆ ದೇಶದ ಜನಸಾಮಾನ್ಯರ ಮನೆಗಳ ಬಗ್ಗೆ ಮಾತನಾಡಿರುವ ಮೋದಿ 2022ರವರೆಗೂ ತಾವು ಅಧಿಕಾರದಲ್ಲಿರಬೇಕೆಂಬ ಕನಸನ್ನೂ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ದೇಶದ ದೊಡ್ಡ ಓಟ್‌ ಬ್ಯಾಂಕ್‌ ಆಗಿರುವ ಮಧ್ಯಮ ವರ್ಗದ ಸ್ವಂತ ಮನೆ ಹೊಂದಬೇಕೆಂಬ ಕನಸಿಗೆ ಮೋದಿ ಮಾತು ರೆಕ್ಕೆಪುಕ್ಕ ಮೂಡುವಂತೆ ಮಾಡಿದೆ.

ಮೋದಿ ದೇಶದ ಜನರಿಗಾಗಿ ಸ್ವಂತ ಸೂರಿನ ಕನಸು ಕಂಡ ದಿನವೇ ಭಾರತ ಹಾಗೂ ಚೀನಾದ ಜನಸಮಖ್ಯೆಯನ್ನು ಹೋಲಿಸಿ ನೋಡುವ ಅಧ್ಯಯನ ವರದಿಯೊಂದು ಸುದ್ದಿಯಾಗಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ ಚೀನಾಗಿಂತ ಶೇ. 8ರಷ್ಟು ಹೆಚ್ಚಾಗಲಿದೆ ಎಂದು ಈ ಅಧ್ಯಯನ ವರದಿ ಹೇಳಿದೆ.

ವಾಷಿಂಗ್ಟನ್‌ ಮೂಲದ ಸ್ವಯಂ ಸೇವಾ ಸಂಸ್ಥೆ ‘ಜನಸಂಖ್ಯೆ ಅವಲೋಕನ ಕೇಂದ್ರ’ (ಪಿಆರ್‌ಬಿ) ವಿಶ್ವದ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಮುಂದಿನ ಮೂರು ದಶಕಗಳ ವೇಳೆಗೆ ಭಾರತದ ಜನಸಂಖ್ಯೆ 168 ಕೋಟಿಯಷ್ಟಾಗಲಿದೆಯಂತೆ.

ಈಗ ಭಾರತದ ಜನಸಂಖ್ಯೆ 137 ಮತ್ತು ಚೀನಾದ ಜನಸಂಖ್ಯೆ 139 ಕೋಟಿ ಇದೆ. ಮುಂದಿನ 32 ವರ್ಷದ ವೇಳೆಗೆ ಭಾರತದ ಜನಸಂಖ್ಯೆ ಚೀನಾ ಜನಸಂಖ್ಯೆಯನ್ನು ಮೀರಿಸುತ್ತದೆ ಎನ್ನುತ್ತದೆ ಈ ವರದಿ. 2050ರ ವೇಳೆಗೆ ಚೀನಾದ ಜನಸಂಖ್ಯೆ 134 ಕೋಟಿಗೆ ಇಳಿಯಲಿದೆ ಎನ್ನಲಾಗಿದೆ.

ಜನಸಂಖ್ಯೆಯ ವಿಚಾರದಲ್ಲಿ ಚೀನಾ ದೇಶವನ್ನೂ ಭಾರತ ಹಿಂದಿಕ್ಕಲಿದೆ ಎಂದರೆ ಆ ವೇಳೆಗೆ ಜನರಿಗೆ ಬೇಕಾದಷ್ಟು ಆಹಾರ, ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವ ದೊಡ್ಡ ಯೋಜನೆಗಳನ್ನೇ ಸರಕಾರ ಹಾಕಿಕೊಳ್ಳಬೇಕಾಗುತ್ತದೆ. ಆದರೆ, ಸರಕಾರದ ಯೋಜನೆಗಳ ಸಾಧನೆಯನ್ನು ನೋಡಿದರೆ ಭಾರತದ ಭವಿಷ್ಯವೇನೂ ಮೋದಿ ಕನಸು ಕಂಡಂತೆ ಸ್ವಂತ ಮನೆಯ ಸುಂದರ ಲೋಕವಾಗಿರುವುದಿಲ್ಲ.

Also read: ಸಂಪೂರ್ಣವಾಗಿ ಬಡತನ ನಿರ್ಮೂಲನೆ ಸಾಧ್ಯವೇ?

ಭಾರತದಲ್ಲಿ ಸುಮಾರು 25 ಕೋಟಿ ಕುಟುಂಬಗಳಿವೆ ಎಂಬ ಅಂದಾಜಿದೆ. ಮನೆಗಳಿಲ್ಲದೆ ಅಲೆಮಾರಿಗಳಾಗಿ ಬದುಕುತ್ತಿರುವ ಹಾಗೂ ಸೂರಿಲ್ಲದೆ ಬದುಕುತ್ತಿರುವ ಲಕ್ಷಾಂತರ ಬಡ ಜನರಿರುವ ಭಾರತದಲ್ಲಿ ಜನಗಣತಿಯ ಅಂಕಿಅಂಶಗಳು ಇವರನ್ನು ದೂರ ಇಟ್ಟಿರುವುದೇ ಹೆಚ್ಚು. ಹೀಗಾಗಿ ಅಂದಾಜಿನಲ್ಲಲ್ಲದೆ ಭಾರತದ ಕುಟುಂಬಗಳ ಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಲೆಕ್ಕಾಚಾರಕ್ಕೆ ಸಿಕ್ಕಿರುವ ಈ 25 ಕೋಟಿ ಅಂದಾಜು ಕುಟುಂಬಗಳೆಲ್ಲವೂ ಸ್ವಂತ ಮನೆ ಹೊಂದಿಲ್ಲ. ಸರಕಾರದ ವಸತಿ ಯೋಜನೆಗಳು ಅದೆಷ್ಟೋ ಜನರ ಹತ್ತಿರಕ್ಕೂ ಸುಳಿಯುತ್ತಿಲ್ಲ.

ಭಾರತದಲ್ಲಿ ಮನೆಗಳ ನಿರ್ಮಾಣದ ರಾಜ್ಯ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ 2011-12ರ ಸಾಲಿನಿಂದ ಇಲ್ಲಿಯವರೆಗೆ ನಿರ್ಮಾಣವಾಗಿರುವುದು ಅಂದಾಜು 1 ಕೋಟಿ ಮನೆಗಳು. ಇವುಗಳಲ್ಲಿ ಶೇಕಡ 30ರಷ್ಟು ರಾಜ್ಯದ ಯೋಜನೆಗಳಿಂದ ನಿರ್ಮಾಣವಾಗಿದ್ದರೆ, ಉಳಿದ ಮನೆಗಳು ಕೇಂದ್ರದ ಯೋಜನೆಗಳಿಂದ ನಿರ್ಮಾಣವಾಗಿರುವಂಥವು. ಸರಕಾರದ ಅಂಕಿಸಂಖ್ಯೆಗಳ ಪ್ರಕಾರವೇ ದೇಶದಲ್ಲಿ ಸರಕಾರದ ಯೋಜನೆಗಳಿಂದ ನಿರ್ಮಾಣವಾಗಿರುವ ಮನೆಗಳ ಪ್ರಮಾಣಕ್ಕೂ ದೇಶದ ಕುಟುಂಬಗಳ ಪ್ರಮಾಣಕ್ಕೂ ಹೋಲಿಸಿದರೆ ಒಂದಕ್ಕೊಂದು ತಾಳಮೇಳವೇ ಇಲ್ಲ.

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಇಚ್ಛಾಶಕ್ತಿ ರಾಜಕಾರಣಿಗಳಲ್ಲೂ ಇಲ್ಲ, ಯೋಜನೆಗಳನ್ನು ಗುಣಮಟ್ಟದಲ್ಲಿ ಜಾರಿಗೊಳಿಸಿ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವ ಬದ್ಧತೆ ಅಧಿಕಾರಿಗಳಲ್ಲೂ ಇಲ್ಲ. ಹೀಗಾಗಿ ಅದೆಷ್ಟೋ ಸರಕಾರಿ ವಸತಿ ಯೋಜನೆಗಳು ವರ್ಷಗಟ್ಟಲೆ ಕೊಳೆಯುತ್ತಾ, ಕಳಪೆ ಕಾಮಗಾರಿಯ ಹಣೆಪಟ್ಟಿ ಹೊತ್ತು ನಿಲ್ಲುತ್ತಿವೆ.

ದೇಶದಲ್ಲಿ ಇಂದಿಗೂ ಲಕ್ಷಾಂತರ ಜನ ರಸ್ತೆ ಪಕ್ಕದ ಜಾಗಗಳಲ್ಲೇ ವಾಸಿಸುತ್ತಿದ್ದಾರೆ. ಮನೆ ಕಟ್ಟಿಕೊಳ್ಳಬೇಕೆಂಬ ಕನಸೇ ಇಲ್ಲದಂತೆ ಅದೆಷ್ಟೋ ಅಲೆಮಾರಿಗಳು ಇಂದಿಗೂ ಊರಿಂದ ಊರಿಗೆ ಟೆಂಟ್‌ಗಳನ್ನು ಹಾಕಿಕೊಂಡು ಅಲೆದಾಡುತ್ತಿದ್ದಾರೆ. ಸರಕಾರದ ನಿರ್ಬಂಧಗಳಿಂದ ಅದೆಷ್ಟೋ ಆದಿವಾಸಿಗಳು ಇಂದಿಗೂ ಗುಡಿಸಲುಗಳಲ್ಲಿದ್ದಾರೆ. ನಿರಾಶ್ರಿತರಾಗಿ ಚಳಿ, ಮಳೆ, ಗಾಳಿಗೆ ಸಾವಿರಾರು ಮಂದಿ ನಿರ್ಗತಿಕರು ದೇಶದಲ್ಲಿ ಸಾಯುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಸುಂದರವಾದ ಕನಸೊಂದನ್ನು ವಿಶಾಲ ಎದೆಯ ಪ್ರಧಾನಿ ಮೋದಿ ಕಂಡಿದ್ದಾರೆ. ಅಂದಹಾಗೆ ಮೋದಿ ದೇಶದ ಜನಕ್ಕೆ ಹೀಗೆ ಬಣ್ಣಬಣ್ಣದ ಕನಸುಗಳ ಪಿಕ್ಚರ್‌ ತೋರಿಸುತ್ತಿರುವುದು ಇದೇ ಮೊದಲೇನಲ್ಲ!