samachara
www.samachara.com
ಕೇರಳದ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’: 700 ಕೋಟಿ ಯುಎಇ ನೆರವಿಗೆ ಅಡ್ಡಿಯಾದ  ನೀತಿ
ದೇಶ

ಕೇರಳದ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’: 700 ಕೋಟಿ ಯುಎಇ ನೆರವಿಗೆ ಅಡ್ಡಿಯಾದ ನೀತಿ

ಶತಮಾನದ ಭೀಕರ ಪ್ರವಾಹಕ್ಕೆ ನಲುಗಿದ ಕೇರಳಕ್ಕೆ ಭಾರತದ ಮಿತ್ರ ರಾಷ್ಟ್ರ ಯುಎಇ ಬರೋಬ್ಬರಿ 700 ಕೋಟಿ ರೂಪಾಯಿಗಳ ನೆರವು ನೀಡಲು ಮುಂದೆ ಬಂದಿತ್ತು. ಆದರೆ ಇದನ್ನು ಸ್ವೀಕರಿಸಲು ಭಾರತದ ನೀತಿ ಅಡ್ಡಿಯಾಗಿದೆ.

‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬ ನುಡಿಗಟ್ಟು ವಿಕೋಪ ಪೀಡಿತ ಕೆರಳಕ್ಕೆ ಸರಿಯಾಗಿ ಒಪ್ಪುತ್ತದೆ. ಶತಮಾನದ ಭೀಕರ ಪ್ರವಾಹಕ್ಕೆ ನಲುಗಿದ ಕೇರಳಕ್ಕೆ ಭಾರತದ ಮಿತ್ರ ರಾಷ್ಟ್ರ ಯುಎಇ ಬರೋಬ್ಬರಿ 700 ಕೋಟಿ ರೂಪಾಯಿಗಳ ನೆರವು ನೀಡಲು ಮುಂದೆ ಬಂದಿತ್ತು. ಆದರೆ ಇದನ್ನು ಸ್ವೀಕರಿಸಲು ಭಾರತದ ನೀತಿ ಅಡ್ಡಿಯಾಗಿದೆ. ಇದರಿಂದ ಕೇರಳ ಸರಕಾರವೀಗ ಕೈ ಕೈ ಹಿಚುಕಿಕೊಳ್ಳಬೇಕಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, “ಇಂದು ಬೆಳಿಗ್ಗೆ ಕೇರಳಕ್ಕೆ ಸಹಾಯ ನೀಡುವುದಾಗಿ ಅಬುಧಾಬಿಯ ರಾಜ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಯಾನ್‌ ನಮ್ಮ ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದ್ದಾರೆ ಮತ್ತು ಇದನ್ನು ಎಂ.ಎ. ಯೂಸುಫ್‌ ಅಲಿ ನನ್ನ ಗಮನಕ್ಕೆ ತಂದರು (ಲೂಲೂ ಗ್ರೂಪ್‌ ಮಾಲಿಕ)” ಎಂದಿದ್ದರು. ಯುಎಇ 700 ಕೋಟಿಗಳ ನೆರವಿಗೆ ಸಿದ್ಧವಿರುವುದಾಗಿಯೂ ಅವರು ಮಾಹಿತಿ ನೀಡಿದ್ದರು.

ಈ ಬೆಳವಣಿಗೆ ಕೇಂದ್ರ ಸರಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಮೊದಲಿಗೆ ಕೇರಳಕ್ಕೆ ಕೇವಲ 100 ಕೋಟಿ ರುಪಾಯಿ ಪರಿಹಾರ ಘೋಷಣೆ ಮಾಡಿದ್ದ ಕೇಂದ್ರ ಸರಕಾರ ಬಳಿಕ ವೈಮಾನಿಕ ಸಮೀಕ್ಷೆಯ ನಂತರ ಪ್ರಧಾನಿ ನರೇಂದ್ರ ಮೋದಿ ಪರಿಹಾರದ ಮೊತ್ತವನ್ನು 500 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದರು. ವಿದೇಶಿ ಸರಕಾರ 700 ಕೋಟಿ ರೂಪಾಯಿ ನೀಡಲು ಮುಂದಾಗಿರುವಾಗ ಭಾರತ ಸರಕಾರ ಕೇವಲ 500 ಕೋಟಿ ರೂಪಾಯಿ ನೀಡಿದ್ದು ಟ್ರೋಲ್‌ಗೆ ಒಳಗಾಗಿತ್ತು.

ಅದೇನೇ ಇರಲಿ, ನಮ್ಮ ಜನರ ಬದುಕು ಕಟ್ಟಿಕೊಳ್ಳಲು ವಿದೇಶದಿಂದ ದೊಡ್ಡ ಮೊತ್ತದ ನೆರವು ಸಿಕ್ಕಿತು ಎಂದು ಸ್ವಲ್ಪ ನಿರಾಳರಾಗಿದ್ದರು ಕೇರಳ ಸಿಎಂ. ಇದಾದ ಬೆನ್ನಿಗೆ ಮಾಲ್ಡೀವ್ಸ್‌ ಕೂಡ 50,000 ಡಾಲರ್‌ ನೆರವು ಘೋಷಿಸಿತ್ತು. ಆದರೆ ಈಗ ಇವೆಲ್ಲಾ ಕೇವಲ ಘೋಷಣೆಗಳಲ್ಲೇ ಉಳಿದು ಬಿಡಲಿದೆ. ಇದಕ್ಕೆ ಕಾರಣ ಭಾರತದ ಸಾಂಪ್ರದಾಯಿಕ ನೀತಿ.

ಏನಿದು ಭಾರತದ ನೀತಿ?

2004ರ ಭೀಕರ ಸುನಾಮಿ ಘಟನಾವಳಿಯ ನಂತರ ಪ್ರಾಕೃತಿಕ ವಿಕೋಪಗಳಿಗೆ ವಿದೇಶಿ ನೆರವನ್ನು ಪಡೆದುಕೊಳ್ಳುವ ಪರಿಪಾಠವನ್ನು ಭಾರತ ನಿಲ್ಲಿಸಿ ಬಿಟ್ಟಿತು. ಇದರ ಹಿಂದೆ ಇದ್ದ ಉದ್ದೇಶ ಇಷ್ಟೇ. ಭಾರತಕ್ಕೆ ವಿಕೋಪ ತಡೆದುಕೊಳ್ಳುವ ಮತ್ತು ಅದರ ನಂತರದ ಪರಿಹಾರ ಕಾರ್ಯಗಳನ್ನು ನಡೆಸುವ ಸ್ವಂತ ಶಕ್ತಿ ಮತ್ತು ಸಾಮರ್ಥ್ಯ ಇದೆ ಎಂಬುದನ್ನು ತೋರಿಸಿಕೊಳ್ಳುವುದಾಗಿತ್ತು. ಮತ್ತು ಇದನ್ನು ಭಾರತ ಋಜುವಾತುಗೊಳಿಸುತ್ತಲೂ ಬಂದಿದೆ. ಎಷ್ಟೇ ದೊಡ್ಡ ಭೂಕಂಪ, ನೆರೆ ಸಂಭವಿಸಿದಾಗಲೂ ತನ್ನ ನೀತಿಗೆ ಕಟ್ಟು ಬಿದ್ದು ಯಾವುದೇ ನೆರವನ್ನು ಭಾರತ ಸ್ವೀಕರಿಸಿಲ್ಲ.

2013ರ ಉತ್ತರಾಖಂಡ್‌ ಭೀಕರ ವಿಕೋಪದ ಸಂದರ್ಭದಲ್ಲಿ ರಷ್ಯಾ ನೀಡಿದ್ದ ನೆರವನ್ನೂ ಭಾರತ ತಿರಸ್ಕರಿಸಿತ್ತು. ಈ ಸಂದರ್ಭ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ವಕ್ತಾರ ಸೈಯದ್‌ ಅಕ್ಬರುದ್ದೀನ್‌, “ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನಾವು ತುರ್ತು ಅವಶ್ಯಕತೆಗಳಿಗೆ ಪ್ರತಿಕ್ರಿಯಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬ ಸಾಮಾನ್ಯ ನೀತಿಯನ್ನು ಪಾಲಿಸುತ್ತಾ ಬಂದಿದ್ದೇವೆ,” ಎಂದಿದ್ದರು. ಈ ಹಿಂದೆಯೂ ಅಷ್ಟೇ ವಿಶೇಷ ಸಂದರ್ಭಗಳಲ್ಲಿ ಮಾತ್ರ ನಾವು ವಿದೇಶಿ ನೆರವನ್ನು ಪಡೆದುಕೊಂಡಿದ್ದೇವೆ ಎಂದು ವಿವರಿಸಿದ್ದರು. ಈ ನೀತಿ ಇಂದಿಗೂ ಮುಂದುವರಿದಿದ್ದು ಇದು ಕೇರಳದ ಪಾಲಿಗೆ ಋಣಾತ್ಮಕವಾಗಿ ಪರಿಣಮಿಸಿದೆ.

ಆದರೆ ಆಗಸ್ಟ್‌ 17ರಂದು ಟ್ಟೀಟ್‌ ಮಾಡಿದ್ದ ಯುಎಇ ಪಿಎಂ ಕೇರಳಕ್ಕೆ ನೆರವು ನೀಡುವಂತೆ ಮಲಯಾಳಂ, ಇಂಗ್ಲೀಷ್‌ ಮತ್ತು ಅರೇಬಿಕ್‌ನಲ್ಲಿ ಕೋರಿಕೊಂಡಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದವನ್ನೂ ತಿಳಿಸಿದ್ದರು. ಒಂದೊಮ್ಮೆ ನೆರವಿನ ರೂಪದಲ್ಲಿ ಯುಎಇನಲ್ಲಿ 700 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದ್ದೇ ಆದಲ್ಲಿ ಭಾರತ ಅದನ್ನು ಸ್ವೀಕರಿಸಬಹುದಾಗಿದೆ. ಅಲ್ಲಿನ ಸರಕಾರದ ಅಧಿಕೃತ ಹಣವನ್ನು ಸ್ವೀಕರಿಸಲು ಮಾತ್ರ ಅವಕಾಶ ಇರುವುದಿಲ್ಲ.

ಹೀಗಾಗಿ ಕೇರಳಕ್ಕೀಗ ಯುಎಇಯ 700 ಕೋಟಿ ರೂಪಾಯಿಯ ಆಸೆ ಬಿಟ್ಟು ಅಲ್ಲಿ ನೆಲೆಸಿರುವ ಅಸಂಖ್ಯಾತ ಮಲಯಾಳಿಗಳು ಮತ್ತು ಎನ್‌ಆರ್‌ಐಗಳಿಂದ ನಿಧಿ ಸಂಗ್ರಹಿಸುವುದಷ್ಟೇ ಅಂತಿಮ ಪರಿಹಾರವಾಗಿದೆ.