ಕೇರಳದಲ್ಲಿ ತಗ್ಗಿದ ಮಳೆ; ಪ್ರವಾಹದಿಂದ ಸತ್ತವರ ಸಂಖ್ಯೆ 370ಕ್ಕೆ ಏರಿಕೆ
ದೇಶ

ಕೇರಳದಲ್ಲಿ ತಗ್ಗಿದ ಮಳೆ; ಪ್ರವಾಹದಿಂದ ಸತ್ತವರ ಸಂಖ್ಯೆ 370ಕ್ಕೆ ಏರಿಕೆ

ಇದುವರೆಗೂ ಬೆಂಬಿಡದೆ ಸುರಿದು ಕೇರಳಿಗರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದ ಮಳೆ ಈಗ ತನ್ನ ರೌದ್ರತೆಯನ್ನು ಕಳೆದುಕೊಂಡಿದೆ. ಆದಾಗ್ಯೂ ಕೂಡ ಕೆಲವೆಡೆ ಜನ ನೆರೆ ಮಧ್ಯೆ ಪರಿತಪಿಸುತ್ತಿದ್ದಾರೆ.

ಇದುವರೆಗೂ ಎಡೆಬಿಡದೆ ಸುರಿದು ಕೇರಳಿಗರ ಬದುಕನ್ನು ಕಂಗೆಡಸಿದ ಮಳೆ ಈಗ ಕೊಂಚ ಬಿಡುವು ಕೊಟ್ಟಿದೆ. ಕೇರಳದ ಬಹುಪಾಲು ಪ್ರದೇಶದಲ್ಲಿ ಸೋಮವಾರದಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈವರೆಗೂ ಘೋಷಿಸಿದ್ದ ರೆಡ್‌ ಅಲರ್ಟ್‌ಅನ್ನು ಹಿಂಪಡೆಯಲಾಗಿದ್ದು, ಕೇರಳಿಗರು ಸ್ವಲ್ಪ ನಿಟ್ಟುಸಿರಿಟ್ಟಿದ್ದಾರೆ.

ಇಡುಕ್ಕಿ ಮತ್ತು ಮುಲ್ಲ ಪೆರಿಯಾರ್‌ ಜಲಾಶಯಗಳ ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಜಲಾಶಯದಲ್ಲಿನ ನೀರಿನ ಮಟ್ಟವೂ ಕೂಡ ಕಡಿಮೆಯಾಗಿದೆ. ಈ ಮುಂಚೆ ಇಡುಕ್ಕಿ ಜಲಾಶಯದ 5 ಗೇಟ್‌ಗಳನ್ನು ತೆಗೆದು ನೀರು ಹರಿಸಲಾಗಿತ್ತು. ಈಗ 2 ಗೇಟ್‌ಗಳನ್ನು ಮುಚ್ಚಲಾಗಿದೆ. ಎರ್ನಾಕುಲಂ ಮತ್ತು ತ್ರಿಶೂರ್‌ ಭಾಗಗಳಿಂದ ಈ ಜಾಲಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಇಳಿಕೆ ಆಗಿರುವುದರಿಂದ ಜಲಾಶಯಗಳ ಹೊರ ಹರಿವೂ ಕೂಡ ಕಡಿಮೆಯಾಗಿದೆ.

ಕಳೆದ 10 ದಿನಗಳಿಂದ ರಕ್ಷಣಾ ಪಡೆಗಳು ಕೇರಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದು ಈವೆರೆಗೂ ಲಕ್ಷಾಂತರ ಜನರನ್ನು ಸಂರಕ್ಷಿಸಿವೆ. ಆಗಸ್ಟ್‌ 8ರಂದು ಪ್ರವಾಹ ಹೆಚ್ಚಾದ ದಿನದಿಂದ ಈವರೆಗೂ ಸತ್ತವರ ಸಂಖ್ಯೆ 370ಕ್ಕೆ ಏರಿಕೆಯಾಗಿದೆ. ಶನಿವಾರ ಒಂದೇ ದಿನ 33 ಜನ ಮೃತಪಟ್ಟಿದ್ದು, ಭಾನುವಾರ ಕೂಡ ಇಬ್ಬರು ಅಸುನೀಗಿದ್ದಾರೆ.

ಶನಿವಾರ ರಾತ್ರಿ ಪಂದನಾದ್‌ ಪ್ರದೇಶದ ಚೆಂಗನೂರ್‌ ಬಳಿ 6 ಜನರನ್ನು ಹೊತ್ತು ಬರುತ್ತಿದ್ದ ರಕ್ಷಣಾ ಬೋಟ್‌ ಕಾಣೆಯಾಗಿದೆ. ಈವೆರಗೂ ಬೋಟ್‌ ಮತ್ತು ಅದರಲ್ಲಿ ಜನ ಪತ್ತೆಯಾಗಿಲ್ಲ.

ಅಲುವಾ, ಅಂಗಮಾಲಿ, ಚೆಂಗನೂರ್‌, ಪಂಡಾಲಂ, ತಿರುವಲ್ಲ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಜನರು ಪ್ರವಾಹದ ಮಧ್ಯೆ ಅನ್ನಾಹಾರ ಇಲ್ಲದೇ ಪರಿತಪಿಸುತ್ತಿದ್ದಾರೆ. ರಕ್ಷಣಾ ತಂಡಗಳು ಶನಿವಾರದವರೆಗೂ ಕೂಡ ಈ ಪ್ರದೇಶಗಳನ್ನು ತಲುಪಲಾಗಿರಲಿಲ್ಲ. ಭಾನುವಾರ ಕಳೆಯುವುದರೊಳಗೆ ಎಲ್ಲಾ ಜನರನ್ನು ರಕ್ಷಿಸುವ ವಿಶ್ವಾಸದಲ್ಲಿವೆ ರಕ್ಷಣಾ ಪಡೆಗಳು.

ಪಂಪಾ ನದಿಯ ದಂಡೆಯಲ್ಲಿರುವ ಚೆಂಗನೂರ್‌ನಲ್ಲಿ ಸಾವಿರಾರು ಜನ ನೆರೆಯ ಮಧ್ಯೆ ಸಿಲುಕಿದ್ದು, ರಕ್ಷಣಾ ಪಡೆಗಳು ಈ ಜನರ ಸ್ಥಳಾಂತರಕ್ಕೆ ಯತ್ನಿಸುತ್ತಿವೆ. ಅಲಪ್ಪುಳ ಜಿಲ್ಲೆಯಲ್ಲಿ ನೆರೆ ಹೆಚ್ಚಾದಾಗ ತಿರುವನಂತಪುರಂನ ಕೆಲವು ಮೀನುಗಾರರು ಜನರನ್ನು ರಕ್ಷಿಸಲೆಂದು ತಮ್ಮ ದೋಣಿಗಳ ಸಮೇತ ಅಲಪ್ಪುಳಕ್ಕೆ ಬಂದಿದ್ದರು. ಹಲವಾರು ಜನರನ್ನೂ ಕೂಡ ರಕ್ಷಿಸಿದ್ದರು. ಈಗ ಅವರೇ ನೆರೆಯ ಮಧ್ಯೆ ಸಿಲುಕಿ ಪರಿತಪಿಸುತ್ತಿದ್ದಾರೆ. ‘ನಾವು ಜನರನ್ನು ರಕ್ಷಿಸಿದೆವು. ಈಗ ನಮ್ಮನ್ನೇ ಯಾರೂ ಕೂಡ ರಕ್ಷಿಸಲು ಮುಂದಾಗುತ್ತಿಲ್ಲ,’ ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಈವರೆಗೂ ಮಹಾಮಳೆ ಮತ್ತು ಭೂ ಕುಸಿತ ಕೇರಳದ 40,000 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿನ ಬೆಳೆಯನ್ನು ನಾಶಪಡಿಸಿದೆ. 1,000ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ. 26,000 ಮನೆಗಳು ಜಖಂಗೊಂಡಿವೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಕೇರಳದ 134 ಸೇತುವೆಗಳು ಮತ್ತು 16,000 ಕಿಲೋಮೀಟರ್‌ನಷ್ಟು ರಸ್ತೆ ಸಂಪೂರ್ಣವಾಗಿ ಹಾಳಗಿದೆ. ಒಟ್ಟಾರೆ 21,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಮಹಾಮಳೆ ತಂದೊಡ್ಡಿದೆ.

ನೆರೆ ಪೀಡಿತ ಕೇರಳಕ್ಕೆ ಭರಪೂರ ಸ್ಪಂದನೆ ಹರಿದು ಬರುತ್ತಿದ್ದು, ದೇಶ, ವಿದೇಶಗಳಿಂದ ಜನ ಸಹಾಯ ಹಸ್ತ ಚಾಚುತ್ತಿದ್ದಾರೆ. ಈಗ ಮಳೆಯ ರೌದ್ರಾವತಾರ ಕಡಿಮೆಯಾಗಿರುವ ಕಾರಣ ಕೇರಳದಲ್ಲಿ ಬಸ್‌ ಸಂಚಾರ ಪ್ರಾರಂಭಗೊಂಡಿದೆ. ಜತೆಗೆ ವಿಮಾನಗಳ ಹಾರಾಟವನ್ನೂ ಕೂಡ ಹೆಚ್ಚುಗೊಳಿಸಲು ಸರಕಾರ ತೀರ್ಮಾನಿಸಿದೆ. ಆದರೆ, ನೆರೆ ಸೃಷ್ಟಿಸಿರುವ ಅನಾಹುತದಿಂದ ಕೇರಳ ಯಥಾಸ್ಥಿತಿಗೆ ಬರಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಿದೆ.