samachara
www.samachara.com
ಸೋಮನಾಥ್‌ ಚಟರ್ಜಿ: ‘ಔಟ್‌ಸ್ಟಾಂಡಿಂಗ್‌ ಪಾರ್ಲಿಮೆಂಟೇರಿಯನ್‌’ ನಡೆದು ಬಂದ ದಾರಿ...
ದೇಶ

ಸೋಮನಾಥ್‌ ಚಟರ್ಜಿ: ‘ಔಟ್‌ಸ್ಟಾಂಡಿಂಗ್‌ ಪಾರ್ಲಿಮೆಂಟೇರಿಯನ್‌’ ನಡೆದು ಬಂದ ದಾರಿ...

ದಶಕಗಳ ಕಾಲ ಸಿಪಿಐ(ಎಂ)ನ ನಾಯಕತ್ವವನ್ನು ವಹಿಸಿದ್ದ ಚಟರ್ಜಿ, 2004ರಲ್ಲಿ ಲೋಕಸಭೆಯ ಸ್ಪೀಕರ್‌ ಆಗಿದ್ದವರು. ಪಕ್ಷವು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಸ್ಪೀಕರ್‌ ಸ್ಥಾನದಿಂದ ಕೆಳಗಿಳಿಯಿರಿ ಎಂದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮಾಜಿ ಲೋಕಸಭಾ ಸಭಾಧ್ಯಕ್ಷ ಸೋಮನಾಥ್‌ ಚಟರ್ಜಿ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೂಲತಃ ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಭಾಗವಾಗಿದ್ದರೂ ಕೂಡ ಎಲ್ಲಾ ಸಂಸದರ ಪ್ರೀತಿ ಗಳಿಸಿದ್ದ ಸೋಮನಾಥ್‌ ಚಟರ್ಜಿಯವರ ಸಾವಿಗೆ ದೇಶದ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

ಆಗಲೇ 89ರ ಪ್ರಾಯವನ್ನು ತಲುಪಿದ್ದ ಸೋಮನಾಥ್‌ ಚಟರ್ಜಿಯವರ ಅರೋಗ್ಯದಲ್ಲಿ ಕಳೆದ 2 ತಿಂಗಳಿಂದಲೇ ಏರುಪೇರು ಉಂಟಾಗಿತ್ತು. ತೀವ್ರ ಹೃದಯಾಘಾತಕ್ಕೆ ಒಳಗಾದ ಚಟರ್ಜಿಯವರನ್ನು ಕೊಲ್ಕತ್ತಾದ ಮಿಂಟೋ ಪಾರ್ಕ್‌ ಬಳಿಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆಯ ವೇಳೆಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗ ಚಟರ್ಜಿಯವರಿಗೆ ಕೃತಕ ಆಮ್ಲಜನಕ ನೀಡುವ ಮೂಲಕ ಬದುಕುಳಿಸುವ ಪ್ರಯತ್ನಕ್ಕೆ ವೈದ್ಯರು ಮುಂದಾಗಿದ್ದರು. ಅದಾಗ್ಯೂ ಕೂಡ ಸೋಮವಾರ ಬೆಳಗ್ಗೆ 8:10ರ ವೇಳೆಗೆ ಸೋಮನಾಥ್‌ ಚಟರ್ಜಿ ಸಾವನ್ನಪ್ಪಿದ್ದಾರೆ.

ರಾಜಕೀಯ ವಲಯದಲ್ಲಿ ‘ಸೋಮನಾಥ್‌ ದಾ' ಎಂದೇ ಕರೆಸಿಕೊಳ್ಳುತ್ತಿದ್ದ ಸೋಮನಾಥ್‌ ಚಟರ್ಜಿ ಜನಿಸಿದ್ದು ಅಸ್ಸಾಮ್‌ನ ತೇಜ್‌ಪುರದಲ್ಲಿ. 1929ರಲ್ಲಿ ಜನಿಸಿದ ಸೋಮನಾಥ್‌ ಚಟರ್ಜಿಯವರ ತಂದೆ ನಿರ್ಮಲ ಚಂದ್ರ ಚಟರ್ಜಿ ವಕೀಲಿ ವೃತ್ತಿಯಲ್ಲಿದ್ದವರು. ಅಖಿಲ ಭಾರತೀಯ ಹಿಂದೂ ಮಹಾಸಭಾ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ನಿರ್ಮಲ ಚಂದ್ರ ಚಟರ್ಜಿ, ತಾವೇ ಸ್ಥಾಪಿಸಿದ ಸಂಘಟನೆಯ ಅಧ್ಯಕತೆಯನ್ನೂ ವಹಿಸಿಕೊಂಡಿದ್ದರು.

1948ರಲ್ಲಿ ದೇಶದ ಪ್ರಧಾನಿಯಾಗಿದ್ದ ಜವಹಾರ್‌ಲಾಲ್‌ ನೆಹರು ಭಾರತೀಯ ಕಮ್ಯುನಿಸ್ಟ್‌ ಪಕ್ಷವನ್ನು ನಿಷೇಧಿಸಿ ಪಕ್ಷದ ನಾಯಕರನ್ನು ಬಂಧಿಸಿದಾಗ, ನಿರ್ಮಲಚಂದ್ರ ಚಟರ್ಜಿ ‘ಆಲ್‌ ಇಂಡಿಯ ಸಿವಿಲ್‌ ಲಿಬರ್ಟಿಸ್ ಯುನಿಯನ್‌’ ಎಂಬ ಸಂಘಟನೆಯನ್ನು ಕಟ್ಟಿ ಬಂಧಿತರ ಬಿಡುಗಡೆಗಾಗಿ ಒತ್ತಾಯಿಸಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಗಳಿದ್ದರೂ ಕೂಡ ಜ್ಯೋತಿ ಬಸುರವರಿಗೆ ಹತ್ತಿರವಾಗಿದ್ದರು. ಸೋಮನಾಥ್‌ ಚಟರ್ಜಿಯವರ ತಾಯಿ ಬೀನಾಪಾಣಿ ದೇವಿ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಮನೆಯಲ್ಲಿ ಜನಿಸಿದ ಸೋಮನಾಥ್‌ ಚಟರ್ಜಿಯವರ ಬಹುಪಾಲು ವಿದ್ಯಾಭ್ಯಾಸ ಕೊಲ್ಕತ್ತಾದಲ್ಲಿಯೇ ನೆರವೇರಿತು. 1952ರಲ್ಲಿ ಬಿಎ ಪದವಿಧರರಾದ ಸೋಮನಾಥ್‌ ಚಟರ್ಜಿ, 1957ರಲ್ಲಿ ಎಂಎ ಪದವಿ ಪಡೆದರು. ಲಂಡನ್‌ನಲ್ಲಿ ಕಾನೂನು ಶಿಕ್ಷಣ ಪಡೆದ ಚಟರ್ಜಿ, ಕೊಲ್ಕತ್ತಾದ ಹೈಕೋರ್ಟ್‌ನಲ್ಲಿ ವಕೀಲಿಕೆಯನ್ನು ಅಭ್ಯಾಸಿಸುತ್ತಿದ್ದರು. ಈ ಮಧ್ಯೆ 1950ರಲ್ಲಿ ರೇಣು ಚಟರ್ಜಿಯವರನ್ನು ವಿವಾಹವಾದರು. ಸೋಮನಾಥ್‌ ಚಟರ್ಜಿಗೆ ಒಬ್ಬ ಗಂಡು ಹಾಗೂ 3 ಜನ ಹೆಣ್ಣು ಮಕ್ಕಳಿದ್ದಾರೆ.

ವಕೀಲಿಕೆಯ ಜತೆಯೇ ಸೋಮನಾಥ್‌ ಚಟರ್ಜಿ 1968ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದ)ದ ಸದಸ್ಯತ್ವ ಸ್ವೀಕರಿಸಿದರು. ಸೋಮನಾಥ್‌ ಚಟರ್ಜಿ ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದು 1971ರಲ್ಲಿ. ನೇರವಾಗಿ ಸಿಪಿಐ(ಎಂ) ಪಕ್ಷದಿಂದ ಚಟರ್ಜಿ ಚುನಾವಣೆಗೆ ನಿಲ್ಲದಿದ್ದರೂ ಕೂಡ ಪಕ್ಷದ ಬೆಂಬಲ ದೊರೆತಿತ್ತು. ಮೊದಲ ಚುನಾವಣೆಯಲ್ಲೇ ಗೆಲುವು ದಾಖಲಿಸಿದ ಚಟರ್ಜಿ ಸತತ 9 ಬಾರಿ ಗೆದ್ದು ಲೋಕ ಸಭೆಯನ್ನು ಪ್ರವೇಶಿಸಿದ್ದರು.

ತಮ್ಮ ರಾಜಕೀಯ ಜೀವನದಲ್ಲಿ ಚಟರ್ಜಿ ಸೋತದ್ದು ಒಂದೇ ಬಾರಿ. 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾಧವಪುರದಿಂದ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿಗೆ ಎದುರಾಳಿಯಾಗಿ ನಿಂತ ಚಟರ್ಜಿ, ಉತ್ತಮ ಮತಗಳನ್ನು ಪಡೆದರಾದರೂ ಕೂಡ ಗೆಲವು ಸಾಧಿಸಲು ವಿಫಲರಾದರು. ಈ ವೇಳೆಗಾಗಲೇ ಮಾರ್ಕ್ಸ್‌ವಾದಿ ನಾಯಕ ಜ್ಯೋತಿ ಬಸುರವರೊಂದಿಗೆ ಆಪ್ತ ಸಂಬಂಧವನ್ನೂ ಕೂಡ ಗಳಿಸಿಕೊಂಡಿದ್ದರು.

ಅತ್ಯುತ್ತಮ ವಾಗ್ಮಿಯಾಗಿದ್ದ ಸೋಮನಾಥ್‌ ಚಟರ್ಜಿ 1989ರ ವೇಳೆಗೆ ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಜವಾಬ್ದಾರಿಯನ್ನು ಹೊತ್ತು ನಾಯಕನ ಸ್ಥಾನದಲ್ಲಿ ಕುಳಿತರು. 2004ರವರೆಗೂ ತಾವೇ ಪಕ್ಷದ ನಾಯಕಾಗಿದ್ದರು. 1996ರ ಅವಧಿಯಲ್ಲಿ ‘ಔಟ್‌ಸ್ಟಾಂಡಿಂಗ್‌ ಪಾರ್ಲಿಮೆಂಟೇರಿಯನ್‌’ ಎಂಬ ಪ್ರಶಸ್ತಿ ಚಟರ್ಜಿಯವರ ಮುಡಿಗೇರಿತ್ತು. 2004ರಲ್ಲಿ ನಡೆದ 14ನೇ ಲೋಕಸಭಾ ಚುನಾವಣೆಯಲ್ಲಿ ಬೋಲ್ಪುರದಿಂದ ಸ್ಪರ್ಧಿಸಿ ಗೆದ್ದ ಸೋಮನಾಥ್‌ ಚಟರ್ಜಿ ಲೋಕ ಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 2006ರ ಅವಧಿಯಲ್ಲಿ ದಿನದ 24 ಗಂಟೆಗಳ ಕಾಲ ಪ್ರಸಾರವಾಗುವ ಲೋಕ ಸಭಾ ಟಿವಿಯನ್ನು ಅನಾವರಣಗೊಳಿಸಿದ್ದರು. ಲೋಕ ಸಭೆಯೊಳಗೆ ಹಲವಾರು ಸುಧಾರಣೆಗಳನ್ನು ತಂದಿದ್ದರು.

2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎಗೆ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ( ಮಾರ್ಕ್ಸ್‌ವಾದ) ತಾನು ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಸೋಮನಾಥ್‌ ಚಟರ್ಜಿ ಕೂಡ ಇದೇ ಪಕ್ಷದಿಂದ ಚುನಾವಣೆಯಲ್ಲಿ ನಿಂತು ಗೆದ್ದವರು. ಆದರೆ ಪಕ್ಷ ಬೆಂಬಲವನ್ನು ಹಿಂತೆಗೆದುಕೊಂಡಾಗ ಸೋಮನಾಥ್‌ ಚಟರ್ಜಿ ತಾವು ಸ್ಪೀಕರ್‌ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದರು. ಸ್ಪೀಕರ್‌ ಅಗಿ ಕಾರ್ಯ ನಿರ್ವಹಿಸುತ್ತಿರುವ ನಾನು ಯಾವ ಒಂದು ಪಕ್ಷಕ್ಕೆ ಸೀಮಿತನಾದ ವ್ಯಕ್ತಿ ಅಲ್ಲ ಎಂದು ಸೋಮನಾಥ್‌ ಚಟರ್ಜಿ ವಾದಿಸಿದ್ದರು.

ಚಟರ್ಜಿಯವರ ನಿಲುವು ಸರಿಯಾದದ್ದೇ ಅಗಿತ್ತು. ಅದರೆ ಪಕ್ಷದ ಕಾನೂನುಗಳ ವಿಚಾರಕ್ಕೆ ಬಂದಾಗ, ಅವನ್ನು ದಿಕ್ಕರಿಸುವಂತಿತ್ತು. ಆದ ಕಾರಣ ಸೋಮನಾಥ್‌ ಚಟರ್ಜಿಯವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ತಮ್ಮ ಬದುಕಿನ ಬಹುಭಾಗವನ್ನು ಕಮ್ಯುನಿಸ್ಟ್‌ ಪಕ್ಷದ ನಿಷ್ಠಾವಂತ ಸದಸ್ಯರಾಗಿ ಸವೆಸಿ, ದೀರ್ಘ ಕಾಲ ಪಕ್ಷದ ನಾಯಕತ್ವ ವಹಿಸಿದ್ದರೂ ಕೂಡ ಪಕ್ಷದಿಂದ ಹೊರಗೆ ಬರಬೇಕಾಯಿತು. ಹೀಗೆ ಪಕ್ಷದಿಂದ ಉಚ್ಛಾಟನೆಗೊಂಡ ದಿನವನ್ನು ‘ತನ್ನ ಜೀವನದಲ್ಲಿ ಮರೆಯಲಾಗದ ಅತೀ ನೋವಿನ ದಿನ’ ಎಂದೂ ಕೂಡ ಸೋಮನಾಥ್‌ ಚಟರ್ಜಿ ತಮ್ಮ ನೋವನ್ನು ತೋಡಿಕೊಂಡಿದ್ದರು.

ಪಕ್ಷದಿಂದ ಹೊರಬಂದು, 2009ರಲ್ಲಿ ಸಭಾಧ್ಯಕ್ಷರಾಗಿ ತಮ್ಮ ಅವಧಿಯನ್ನು ಪೂರೈಸಿದ ನಂತರ ಸೋಮನಾಥ್‌ ಚಟರ್ಜಿ ರಾಜಕೀಯದಲ್ಲಿ ಸಕ್ರಿಯರಾಗಿ ಉಳಿಯಲಿಲ್ಲ. ಲೋಕಸಭೆಯ ಸುದೀರ್ಘ ಅನುಭವವನ್ನು ಒಟ್ಟುಗೂಡಿಸಿ ‘ಕೀಪಿಂಗ್‌ ಎ ಫೈಥ್‌ : ಮೊಮೋರಿಸ್‌ ಆಫ್‌ ಪಾರ್ಲಿಮೆಂಟೇರಿಯನ್‌’ ಎಂಬ ಕೃತಿಯನ್ನು ಬರೆದು 2010ರಲ್ಲಿ ಪ್ರಕಟಿಸಿದರು. ತದನಂತರ ಸೋಮನಾಥ್‌ ಚಟರ್ಜಿ ಹೆಸರು ಕೇಳಿಬಂದದ್ದೇ ಅಪರೂಪವಾಗಿತ್ತು. 2013ರಲ್ಲಿ ಭಾರತ ನಿರ್ಮಾಣ ಪ್ರಶಸ್ತಿಗಳ ಸಾಲಿನಲ್ಲಿ ಬರುವ ‘ಲೀವಿಂಗ್‌ ಲೆಜೆಂಡ್‌’ ಪ್ರಶಸ್ತಿ ಸೋಮನಾಥ್‌ ಚಟರ್ಜಿಯವರ ಮುಡಿಗೇರಿತ್ತು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸುದೀರ್ಘ ಕಾಲದ ರಾಜಕಾರಣ ನಡೆಸಿದ ಸೋಮನಾಥ್‌ ಚಟರ್ಜಿ ಈಗ ಇಡೀ ಬಂಧು ಬಳಗವನ್ನು ಅಗಲಿದ್ದಾರೆ. ಈ ಸಮಯದಲ್ಲಿ ಅವರಿಗೊಂದು ಶ್ರದ್ಧಾಂಜಲಿ ಅರ್ಪಿಸುವ ನೆಪದಲ್ಲಿ ನಡೆದು ಬಂದ ಹಾದಿಯ ಪುಟ್ಟ ಮೆಲುಕು ಇದು.