ಮಾಲ್‌ಗಳಿಗೆ ಕಾಲಿಡುವ ಮುನ್ನ ಎಚ್ಚರ: ನಿಷೇಧಿತ ಕುಲಾಂತರಿ ಆಹಾರ ಪದಾರ್ಥಗಳು ಮಾರಾಟಕ್ಕಿವೆ...
ದೇಶ

ಮಾಲ್‌ಗಳಿಗೆ ಕಾಲಿಡುವ ಮುನ್ನ ಎಚ್ಚರ: ನಿಷೇಧಿತ ಕುಲಾಂತರಿ ಆಹಾರ ಪದಾರ್ಥಗಳು ಮಾರಾಟಕ್ಕಿವೆ...

ಭಾರತದಲ್ಲಿ ಕುಲಾಂತರಿ ತಳಿಗಳ ಆಹಾರ ಪದಾರ್ಥಗಳ ಮಾರಾಟದ ಮೇಲೆ ನಿಷೇಧವಿದ್ದರೂ ಕೂಡ, ವಿದೇಶದಿಂದ ಅಮದಾದ ಜಿಎಮ್‌ ಪದಾರ್ಥಗಳು ಗ್ರಾಹಕರ ಕೈಸೇರುತ್ತಿವೆ. ಈ ಕುರಿತು ಕ್ರಮ ಕೈಗೊಳ್ಳದ ಎಫ್‌ಎಸ್‌ಎಸ್‌ಎಐ ವಿರುದ್ಧ ಧ್ವನಿ ಎದ್ದಿದೆ. 

ಭಾರತದಲ್ಲಿ ಕುಲಾಂತರಿ ತಳಿಯ ಅಹಾರ ಪದಾರ್ಥಗಳ ಮಾರಾಟಕ್ಕೆ ನಿಷೇಧವಿದ್ದರೂ ಕೂಡ ಮಾರುಕಟ್ಟೆಗಳಲ್ಲಿ ಪ್ಯಾಕೇಜ್ಡ್‌ ರೂಪದಲ್ಲಿ ಬಳಕೆದಾರರ ಕೈಸೇರುತ್ತಿವೆ. ಹೊರದೇಶಗಳ ಪ್ಯಾಕೇಜ್ಡ್‌ ಜಿಎಮ್‌ ಆಹಾರ ಪದಾರ್ಥಗಳು ಸೂಪರ್‌ ಮಾರ್ಕೆಟ್‌ಗಳಲ್ಲಿ ರಾರಾಜಿಸುತ್ತಿವೆ. 

ಜುಲೈ ತಿಂಗಳ ಕೊನೆಯ ವಾರದಲ್ಲಿ ಮಾರುಕಟ್ಟೆಯಲ್ಲಿರುವ ಕುಲಾಂತರಿ ಅಂಶಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳ ಬಗ್ಗೆ ದೆಹಲಿ ಮೂಲದ ‘ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್‌ಮೆಂಟ್‌’ (ಸಿಎಸ್‌ಇ) ಸಂಶೋಧನೆ ನಡೆಸಿತ್ತು. ಈ ಸಂಶೋಧನೆಯ ಪ್ರಕಾರ ಭಾರತದ ಸೂಪರ್‌ ಮಾರ್ಕೆಟ್‌ಗಳಲ್ಲಿ ಮಾರಾಟಗೊಳ್ಳುತ್ತಿರುವ ಮೂರು ಪ್ಯಾಕ್‌ ಮಾಡಲಾದ ಅಹಾರ ಪದಾರ್ಥಗಳ ಪೈಕಿ 1ರಲ್ಲಿ ಕುಲಾಂತರಿ ತಳಿಯ ಅಂಶ ಕಂಡು ಬಂದಿತ್ತು.

ಸಿಎಸ್‌ಇ ಸಂಸ್ಥೆ ದೆಹಲಿ, ಗುಜರಾತ್‌ ಮತ್ತು ಪಂಜಾಬ್‌ನ ಮಾರುಕಟ್ಟೆಗಳಲ್ಲಿನ 65 ಪ್ಯಾಕೇಜ್ಡ್‌ ಆಹಾರ ಪದಾರ್ಥಗಳನ್ನು ಈ ಸಂಶೋಧನೆಗಾಗಿ ಬಳಸಿಕೊಂಡಿತ್ತು. ಈ ಆಹಾರ ಪದಾರ್ಥಗಳಲ್ಲಿ 30 ಭಾರತದವು ಮತ್ತು 35 ಆಹಾರ ಪದಾರ್ಥಗಳು ವಿದೇಶಗಳಿಂದ ಅಮದಾಗಿದ್ದವು. ಹೀಗೆ ವಿದೇಶಗಳಿಂದ ಅಮದು ಮಾಡಿಕೊಂಡ 35 ಆಹಾರ ಪದಾರ್ಥಗಳ ಪೈಕಿ 21ರಲ್ಲಿ ಕುಲಾಂತರಿ ಅಂಶ ಇರುವುದನ್ನು ಸಂಶೋಧನೆ ಸಾಬೀತು ಪಡಿಸಿತ್ತು.

ಮಕ್ಕಳ ತಿನಿಸುಗಳು, ಖಾದ್ಯ ತೈಲ, ಮೆಕ್ಕೆಜೋಳ, ಪಾಪ್‌ ಕಾರ್ನ್‌, ಧಾನ್ಯಗಳು, ಕುರುಕಲು ತಿಂಡಿಗಳಲ್ಲಿ ಕುಲಾಂತರಿ ಅಂಶ ಇರುವುದು ಸ್ಪಷ್ಟವಾಗಿತ್ತು. ಈ ಆಹಾರ ಪದಾರ್ಥಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳುತ್ತಿರುವುದು ಉತ್ತಮ ಬ್ರಾಂಡ್‌ ನೇಮ್‌ ಇಲ್ಲದ ವ್ಯಕ್ತಿಗಳು. ಜತೆಗೆ 21 ಪದಾರ್ಥಗಳ ಪೈಕಿ 13 ಪದಾರ್ಥಗಳ ಮೇಲೆ ಕುಲಾಂತರಿ ಅಂಶಗಳನ್ನು ಒಳಗೊಂಡಿರುವ ಮಾಹಿತಿಯನ್ನೂ ಕೂಡ ನಮೂದಿಸಿರಲಿಲ್ಲ. ಕುಲಾಂತರಿ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪದಾರ್ಥಗಳು ಅಮೆರಿಕಾದಿಂದ ರಫ್ತಾಗಿರುವಂತವು.

2006ರ ಫುಡ್‌ ಸೇಫ್ಟಿ ಅಂಡ್‌ ಸ್ಟಾಂಡರ್ಡ್ಸ್ ಆಕ್ಟ್‌ನ 22ನೇ ಸೆಕ್ಷನ್‌ ಹೇಳುವಂತೆ ಭಾರತದಲ್ಲಿ ಕುಲಾಂತರಿ ಆಹಾರ ಪದಾರ್ಥಗಳ ಉತ್ಪಾದನೆ, ವಿತರಣೆ, ಮಾರಾಟ ಅಥವಾ ಅಮದು ಮಾಡಿಕೊಳ್ಳುವಂತಿಲ್ಲ. ಆದ್ಯಾಗೂ ಕೂಡ ಭಾರತದ ಮಾರುಕಟ್ಟೆಗಳಲ್ಲಿ ತರಹಾವೇರಿ ಕುಲಾಂತರಿ ಆಹಾರ ಪದಾರ್ಥಗಳು ಮಾರಾಟಗೊಳ್ಳುತ್ತಿವೆ. ಇದಕ್ಕೆ ರಾಜ್ಯದ ಮಾಲ್‌ಗಳೂ ಹೊರತಾಗಿಲ್ಲ. ‘ಸಮಾಚಾರ’ ಈ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಿಲ್ಲ. ಆದರೆ ಲಭ್ಯ ಮಾಹಿತಿಗಳ ಪ್ರಕಾರ, ಮಾಲ್‌ಗಳು ದೇಶದಾದ್ಯಂತ ಒಂದೇ ಮಾದರಿಯ ಪದಾರ್ಥಗಳನ್ನು ಮಾರುತ್ತಿವೆ. ಹೀಗಾಗಿ, ಪಂಜಾಬ್‌ ಮಾಲ್‌ಗೆ ಬರುವ ಆಹಾರ ಪದಾರ್ಥಗಳೇ ಬೆಂಗಳೂರಿನ ಮಾಲ್‌ಗಳಿಗೂ ಆಮದಾಗುತ್ತಿದೆ.

ಹಲವಾರು ಸಾಮಾಜಿಕ ಕಾರ್ಯಕರ್ತರು ಫುಡ್‌ ಸೇಫ್ಟಿ ಅಂಡ್‌ ಸ್ಟಾಂಡರ್ಡ್ಸ್‌ ಅಥಾರಿಟಿ ಆಫ್‌ ಇಂಡಿಯಾ (ಎಫ್‌ಎಸ್‌ಎಸ್‌ಎಐ) ದೆಹಲಿ ಅಧಿಕಾರಿಗಳ ಜತೆ ಆಗಸ್ಟ್‌ 7ರಂದು ಮಾತುಕತೆ ನಡೆಸಿದ್ದಾರೆ. ಆದರೆ ಅಧಿಕಾರಿಗಳ ಕಡೆಯಿಂದ ಸಮಾಧಾನಕರ ಉತ್ತರ ದೊರೆತಿಲ್ಲ. ಮಾರುಕಟ್ಟೆಯಲ್ಲಿ ಅದಾಗಲೇ ಅಸ್ತಿತ್ವ ಸ್ಥಾಪಿಸಿರುವ ನಿಷೇಧಿತ ಕುಲಾಂತರಿ ತಳಿಗಳನ್ನು ತಡೆಹಿಡಿಯುವುದರ ಬಗ್ಗೆ ಹಾರಿಕೆ ಉತ್ತರ ನೀಡಿದ್ದು, ಕುಲಾಂತರಿ ತಳಿಗಳಿಂದ ಮಾನವನ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಈಗ ‘ಇಂಡಿಯಾ ಫಾರ್‌ ಸೇಫ್‌ ಫುಡ್‌’ ಎಂಬ ವೇದಿಕೆಯ ಮೂಲಕ ಎಲ್ಲಾ ರಾಜ್ಯಗಳಲ್ಲಿನ ಎಫ್‌ಎಸ್‌ಎಸ್‌ಎಐ ಭೇಟಿ ನೀಡಲು ಸಾಮಾಜಿಕ ಹೋರಾಟಗಾರರು ನಿರ್ಧರಿಸಿದ್ದಾರೆ.

‘ಇಂಡಿಯಾ ಫಾರ್‌ ಸೇಫ್‌ ಫುಡ್‌’ ಕಾರ್ಯಕರ್ತರು ಮತ್ತು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯ ನಿರ್ವಾಹಕರ ನಡುವಿನ ಮಾತುಕತೆಯ ದೃಶ್ಯಾವಳಿ ಇಲ್ಲಿದೆ:

ಈ ಕುರಿತು ಸಮಾಚಾರದ ಜತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಮೇಶ್‌ ಚೀಮಾಚನಹಳ್ಳಿ, “ಕುಲಾಂತರಿ ಆಹಾರ ಪದಾರ್ಥಗಳು ಭಾರತದ ಮಾರುಕಟ್ಟೆಗಳಲ್ಲಿ ಅದಾಗಲೇ ಕಾಣಿಸಿಕೊಂಡಿವೆ. ಈ ಆಹಾರ ಪದಾರ್ಥಗಳು ಬೆಳೆಯುವ ರೈತನ ಮಣ್ಣಿಗೂ ಮತ್ತು ಬಳಸುವವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಜಿಎಮ್‌ ಅಹಾರ ಪದಾರ್ಥಗಳ ಆರೋಗ್ಯಕ್ಕೆ ಹಾನಿಕರ ಎಂದು ಹಲವಾರು ಸಂಶೋಧನೆಗಳು ತಿಳಿಸಿದ್ದರೂ ಕೂಡ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಈ ಕುರಿತು ಯಾವುದೇ ವರದಿಗಳಿಲ್ಲ ಎಂದಿದ್ದಾರೆ,” ಎಂದು ದೂರಿದರು.

ಇದೇ ತಿಂಗಳ 13ರ ಸೋಮವಾರದಂದು ಹಲವಾರು ರಾಜ್ಯಗಳಲ್ಲಿ ಎಫ್‌ಎಸ್‌ಎಸ್‌ಎಐ ಕಛೇರಿಯಲ್ಲಿನ ಅಧಿಕಾರಿಗಳಿಗೆ ಪತ್ರ ನೀಡುವುದರ ಮೂಲಕ ವಿರೋಧವನ್ನು ವ್ಯಕ್ತಪಡಿಸಲಿದ್ದಾರೆ. ಬೆಂಗಳೂರು ನಗರದಲ್ಲಿನ ಎಫ್‌ಎಸ್‌ಎಸ್‌ಎಐ ಕಚೇರಿಗೂ ಕೂಡ ಇದೇ ದಿನದಂದೇ ಸಾಮಜಿಕ ಕಾರ್ಯಕರ್ತರು ‘ಇಂಡಿಯಾ ಫಾರ್‌ ಸೇಫ್‌ ಫುಡ್‌’ ವೇದಿಕೆಯ ಹೆಸರಿನಲ್ಲಿ ಭೇಟಿ ನೀಡಲು ತೀರ್ಮಾನಿಸಿದ್ದಾರೆ.