samachara
www.samachara.com
‘35 ಎ’: ವಿಚಾರಣೆ ಮುಂದೂಡಿದ ಸುಪ್ರಿಂ ಕೋರ್ಟ್‌; ಈ ವಿಧಿಯಲ್ಲಿ ಅಂತಹದ್ದೇನಿದೆ? 
ದೇಶ

‘35 ಎ’: ವಿಚಾರಣೆ ಮುಂದೂಡಿದ ಸುಪ್ರಿಂ ಕೋರ್ಟ್‌; ಈ ವಿಧಿಯಲ್ಲಿ ಅಂತಹದ್ದೇನಿದೆ? 

ಇಡೀ ರಾಷ್ಟ್ರ ಕಾತರದಿಂದ ನೋಡುತ್ತಿದ್ದ ‘35 ಎ’ ವಿಧಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್‌ ಮುಂದೂಡಿದೆ. ಯಾವ ತೀರ್ಪನ್ನು ನೀಡಿದರೂ ಕೂಡ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯಿದೆ. ಹಾಗಾದರೆ ಈ ವಿಧಿಯಲ್ಲಿ ಅಂತಹದ್ದೇನಿದೆ?

ಕಣಿವೆ ರಾಜ್ಯ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ‘35 ಎ’ ವಿಧಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್‌ ಆಗಸ್ಟ್‌ 27ಕ್ಕೆ ಮುಂದೂಡಿದೆ. 35 ಎ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಡೆಸಬೇಕಿತ್ತು. ಆದರೆ ಚಂದ್ರಚೂಡ್‌ ಗೈರು ಹಾಜರಾಗಿರುವ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.

ದೆಹಲಿ ಮೂಲದ ಬಲಪಂಥೀಯ ಸ್ವಯಂ ಸೇವಾ ಸಂಸ್ಥೆ ‘ವಿ ದಿ ಸಿಟಿಜನ್ಸ್’ 2004ರಲ್ಲಿ 35 ಎ ವಿಧಿಯನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತ್ತು. 35 ಎ ವಿಧಿಯು ಭಾರತೀಯ ಪ್ರಜೆಗಳ ಮಧ್ಯೆ ತಾರತಮ್ಯವನ್ನು ನಡೆಸುತ್ತಿದೆ ಎಂದು ಸಂಸ್ಥೆ ದೂರಿತ್ತು.

ಸಂವಿಧಾನದ 35 ಎ ವಿಧಿಯನ್ನು ಕುರಿತಾದ ಪರ ವಿರೋಧ ಇಂದು ನಿನ್ನೆಯದೇನಲ್ಲ. 2002ರಲ್ಲೇ 35 ಎ ಕುರಿತಾದ ತೀರ್ಪು ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, 35 ಎ ಕಾರಣದಿಂದ ಮಹಿಳೆಯರ ಹಕ್ಕುಗಳಿಗೆ ಯಾವುದೇ ಚ್ಯುತಿ ಬರುವುದಿಲ್ಲ ಎಂದಿತ್ತು. ಅಂದಿನಿಂದಲೂ ಕೂಡ ಪರ ವಿರೋಧಗಳು ವ್ಯಕ್ತವಾಗಿದ್ದವು.

‘ವಿ ದಿ ಸಿಟಿಜನ್ಸ್‌’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುವ ಮಾಹಿತಿಯ ಬೆನ್ನಲ್ಲೇ, ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಕಾಶ್ಮೀರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಕಾಶ್ಮೀರದ ಪ್ರತ್ಯೇಕತಾವಾದಿಗಳು ‘35 ಎ ವಿಧಿಯನ್ನು ಉಳಿಸಿಕೊಳ್ಳಬೇಕು’ ಎಂದು ಕರೆ ನೀಡಿದ್ದ ಬಂದ್‌ಗೆ ಎಲ್ಲಾ ಪಕ್ಷ, ಸಂಘಟನೆ, ಸಂಸ್ಥೆ, ವ್ಯಕ್ತಿಗಳು ತಮ್ಮ ಸಿದ್ಧಾಂತಗಳನ್ನು ಬದಿಗೊತ್ತಿ ಬೆಂಬಲ ಸೂಚಿಸಿದ್ದರು. ಸೋಮವಾರ ತೀರ್ಪು ಹೊರಬೀಳುವ ನಿರೀಕ್ಷೆಯಲ್ಲಿ ಕಾಶ್ಮೀರದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ ತೀರ್ಪು ಮುಂದೂಡಿರುವ ಕಾರಣ ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ.

ಸ್ತಬ್ಧಗೊಂಡಿದ್ದ ಕಾಶ್ಮೀರ.
ಸ್ತಬ್ಧಗೊಂಡಿದ್ದ ಕಾಶ್ಮೀರ.
/indiatoday

35 ಎ ವಿಧಿ ಜಾರಿಗೆ ಬಂದಿದ್ದು ಯಾವಾಗ?:

ಆರ್ಟಿಕಲ್‌ 35 ಎ ಮೂಲ 1920ರ ದಶಕದಲ್ಲೇ ದೊರೆಯುತ್ತದೆ. ‘ಕಾಶ್ಮೀರ ರಾಜ್ಯ ಕಾಶ್ಮೀರಿಗಳಿಗೆ ಮಾತ್ರ’ ಎಂಬ ಚಳವಳಿಯನ್ನು ಕಾಶ್ಮೀರಿ ಪಂಡಿತ ಸಮುದಾಯ ಸ್ವತಂತ್ರ ಪೂರ್ವದಲ್ಲೇ ಪ್ರಾರಂಭಿಸಿತ್ತು. ಈಗ 35 ಎ ಅಡಿಯಲ್ಲಿ ಕಾಶ್ಮೀರಿಗಳಿಗೆ ದೊರೆಯುವ ಹಲವು ಸವಲತ್ತುಗಳು ಆಗಲೇ ದೊರೆತಿದ್ದವು. ಭಾರತ ಬ್ರಿಟಿಷ್‌ ಆಳ್ವಿಕೆಯಿಂದ ಮುಕ್ತವಾಗಿ ಸ್ವತಂತ್ರ ಪಡೆದ ನಂತರ ಕಾಶ್ಮೀರದ ರಾಜ ಹರಿಸಿಂಗ್‌ ಜತೆ ಹಲವಾರು ಚರ್ಚೆಗಳಾಗಿ, ಕಾಶ್ಮೀರಿಗಳಿಗೆ ಭಾರತದ ಪೌರತ್ವವನ್ನು ನೀಡಲು ಒಪ್ಪಿಗೆ ದೊರೆಯಿತು. ಆದರೆ ಕಾಶ್ಮೀರಕ್ಕೆ ಅಗತ್ಯವಿರುವ ಕಾನೂನುಗಳನ್ನು ಕಾಶ್ಮೀರದ ರಾಜ್ಯ ಸರಕಾರವೇ ರಚಿಸಿಕೊಳ್ಳುವಂತಾಯಿತು.

1956ರ ನವೆಂಬರ್‌ 17ರಂದು ರಾಜ್ಯ ಮಟ್ಟದ ಸಂವಿಧಾನವನ್ನು ಅಂಗೀಕರಿಸಿಕೊಂಡ ಕಾಶ್ಮೀರ, ಭಾರತಕ್ಕೆ ಸೇರಿದ ರಾಜ್ಯವಾದರೂ ಕೂಡ ಸ್ವಾಯತ್ತವಾಗಿ ಉಳಿಯುತು. ತನ್ನ ಕಾನೂನುಗಳನ್ನು ಕಾಶ್ಮೀರ ತಾನೇ ರಚಿಸಿಕೊಳ್ಳುವ ಅಧಿಕಾರವನ್ನು ಪಡೆಯಿತು. ಕಾಶ್ಮೀರ ರಾಜ್ಯಕ್ಕೆ ಮಾತ್ರ ಈ ವಿಶೇಷ ಪ್ರಾತಿನಿಧ್ಯವನ್ನು ನೀಡಿದ್ದು ಭಾರತೀಯ ಸಂವಿಧಾನದ 370ನೇ ವಿಧಿ. ಆರ್ಟಿಕಲ್‌ 35 ಎ ಕೂಡ ಅಸ್ತಿತ್ವಕ್ಕೆ ಬಂದಿದ್ದು ಈ ಸಂದರ್ಭದಲ್ಲೇ.

ಏನು ಹೇಳುತ್ತದೆ ಆರ್ಟಿಕಲ್‌ 35 ಎ?:

ಆರ್ಟಿಕಲ್‌ 35 ಎ ಹೇಳುವಂತೆ, ಭಾರತ ಸರಕಾರ ಜಾರಿಗೆ ತರುವ ಕಾಯ್ದೆ ತಿದ್ದುಪಡಿಗಳು ಕಾಶ್ಮೀರಕ್ಕೆ ಸಂಬಂಧಿಸುವುದಿಲ್ಲ. ಕಾಶ್ಮೀರದ ಶಾಶ್ವತ ನಿವಾಸಿಗಳ ಹಕ್ಕುಗಳು ಮತ್ತು ಕಾನೂನುಗಳನ್ನು ರಕ್ಷಿಸುವ ಸಲುವಾಗಿ ಈ ವಿಧಿಯನ್ನು ಸೇರಿಸಲಾಗಿದೆ. ಈ ವಿಧಿಯ ಪ್ರಕಾರ ಮೂಲ ಕಾಶ್ಮೀರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಕೂಡ ರಾಜ್ಯಗಳಲ್ಲಿ ಸ್ಥಿರಾಸ್ತಿಯನ್ನು ಗಳಿಸುವ ಹಕ್ಕಿಲ್ಲ. ಹೊರ ರಾಜ್ಯಗಳಿಂದ ಬಂದವರ್ಯಾರೂ ಕೂಡ ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತಿಲ್ಲ.

ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ. ಜತೆಗೆ ರಾಜ್ಯ ಸರಕಾರದ ಹುದ್ದೆಗಳಲ್ಲೂ ಕೂಡ ಹೊರ ರಾಜ್ಯದವರಿಗೆ ಜಾಗವಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸವ ಅವಕಾಶವೂ ಇಲ್ಲ. ಇವೆಲ್ಲಾ ಸೌಲಭ್ಯಗಳೂ ಕೂಡ ಕಾಶ್ಮೀರದ ಶಾಶ್ವತ ನಿವಾಸಿಗಳಿಗೆ ಮಾತ್ರ.

ಯಾರು ಕಾಶ್ಮೀರದ ಶಾಶ್ವತ ನಿವಾಸಿಗಳು?:

ಕಾಶ್ಮೀರ ರಾಜ್ಯ ತನಗೆಂದೇ ಪ್ರತ್ಯೇಕ ರಾಜ್ಯ ಸಂವಿಧಾನ ರಚಿಸಿಕೊಳ್ಳುವ ಮುಂಚೆ ಯಾರ್ಯಾರು ಕಾಶ್ಮೀರದಲ್ಲಿ ವಾಸವಿದ್ದರೋ ಅವರನ್ನೆಲ್ಲಾ ಕಾಶ್ಮೀರದ ಶಾಶ್ವತ ನಿವಾಸಿಗಳು ಎಂದು ಕರೆದಿದೆ. ಆದರೆ ಸಂವಿಧಾನ ಜಾರಿಯಾಗುವ ವೇಳೆಗೆ ನಿವಾಸಿಗಳು ಕಾಶ್ಮೀರದಲ್ಲಿ ವಾಸಿಸಲು ಪ್ರಾರಂಭಿಸಿ 10 ವರ್ಷ ಕಳೆದಿರಬೇಕಿತ್ತು ಮತ್ತು ರಾಜ್ಯದಲ್ಲಿ ಕಾನೂನು ಬದ್ಧವಾಗಿ ಸ್ಥಿರಾಸ್ತಿಯನ್ನು ಹೊಂದಿರಬೇಕಿತ್ತು. ಅಂದು ಈ ಅರ್ಹತೆಯನ್ನು ಹೊಂದಿದ್ದವರ ಕುಟುಂಬಗಳ ಸದಸ್ಯರು ಇಂದು ಕಾಶ್ಮೀರದ ಶಾಶ್ವತ ನಿವಾಸಿಗಳಾಗಿದ್ದಾರೆ. ಇವರಿಗೆ ‘ಪರ್ಮನೆಂಟ್‌ ರೆಸಿಡೆಂಟ್‌ ಸರ್ಟಿಫಿಕೇಟ್‌’ (ಪಿಆರ್‌ಸಿ) ನೀಡಲಾಗಿದೆ. ಇವರನ್ನು ಮತ್ತು ಇವರ ಮುಂದಿನ ತಲೆಮಾರುಗಳನ್ನು ಬಿಟ್ಟು ಇನ್ಯಾರೂ ಕೂಡ ಕಾಶ್ಮೀರದ ಶಾಶ್ವತ ನಿವಾಸಿಗಳಾಗಲು ಸಾಧ್ಯವಿಲ್ಲ.

ವಿರೋಧವೇಕೆ?:

ಕಾನೂನು ದೃಷ್ಠಿಯಿಂದ ಹಲವಾರು ವೈರುಧ್ಯಗಳನ್ನು ಹೊಂದಿರುವ 35 ಎ ವಿಧಿ, ಭಾರತದ ಸಂವಿಧಾನ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನೂ ಕೂಡ ಉಲ್ಲಂಘಿಸುತ್ತದೆ. ಕಾಯ್ದೆಯ ಪ್ರಕಾರ ಕಾಶ್ಮೀರದ ಮಹಿಳೆ ಪಿಆರ್‌ಸಿ ಇಲ್ಲದ ಹೊರರಾಜ್ಯದ ಪುರುಷನನ್ನು ಮದುವೆಯಾದರೆ ಆಸ್ತಿಯ ಹಕ್ಕುಗಳು ಲಭಿಸುವುದಿಲ್ಲ. ಆಕೆಯ ಮಕ್ಕಳು ಕೂಡ ಪಿಆರ್‌ಸಿಯಿಂದ ವಂಚಿತರಾಗುತ್ತಾರೆ.

ಇದು ಒಂಡೆದೆಯಾದರೆ ತಲತಲಾಂತರದಿಂದ ಕಾಶ್ಮೀರದಲ್ಲಿ ವಾಸಿಸುತ್ತಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನ ಯಾವ ಹಕ್ಕುಗಳೂ ದೊರೆಯದೇ ಪರಿತಪಿಸುತ್ತಿದ್ದಾರೆ. ರಾಜ್ಯ ಪ್ರತ್ಯೇಕ ಸಂವಿಧಾನವನ್ನು ಹೊಂದಿದ ಸಂದರ್ಭದಲ್ಲಿ ಈ ವರ್ಗಗಳ ಬಳಿ ಸ್ವಂತ ಭೂಮಿ ಇರದಿದ್ದುದ್ದೇ ಮೂಲಭೂತ ಹಕ್ಕುಗಳಿಂದ ವಂಚಿತವಾಗಲು ಕಾರಣ.

1957ರ ಕಾಲಘಟ್ಟದಲ್ಲಿ ವಾಲ್ಮೀಕಿ ಜನಾಂಗದವರನ್ನು ಸಫಾಯ್‌ ಕರ್ಮಚಾರಿಗಳಾಗಿ ಕಾರ್ಯ ನಿರ್ವಹಿಸಲು ರಾಜ್ಯಕ್ಕೆ ಕರೆತಂದು ಅವರಿಗೆ ಪಿಆರ್‌ಸಿ ನೀಡಲಾಗಿತ್ತು. ಆದರೆ ಮುಂದಿನ ತಲೆಮಾರು ಇದೇ ಕೆಲಸವನ್ನು ಮುಂದುವರೆಸಿದರೆ ಮಾತ್ರವೇ ಕಾಶ್ಮೀರದಲ್ಲಿ ಜೀವಿಸಲು ಸಾಧ್ಯ ಎಂದೂ ಕೂಡ ಹೇಳಲಾಗಿತ್ತು. ಕಾರಣವಾಗಿ ವಾಲ್ಮೀಕಿ ಜನಾಂಗ ರಾಜ್ಯಕ್ಕೆ ಬಂದು 6 ದಶಕ ಕಳೆದರೂ ಕೂಡ ಮಲ ಹೊರುವ ಅಮಾನವೀಯ ಕಸುಬನ್ನೇ ಮುಂದುವರೆಸಬೇಕಿದೆ. ಈ ಕಸುಬನ್ನು ಬಿಟ್ಟು ಬೇರೆ ಉದ್ಯೋಗ ನಡೆಸಿದರೆ ಅವರ ಪಿಆರ್‌ಸಿ ರದ್ದಾಗುತ್ತದೆ.

ಆಸ್ತಿಯ ಹಕ್ಕು ನಿರಾಕರಿಸಿರುವ ಕಾರಣ ಹೊರರಾಜ್ಯದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹೊರ ರಾಜ್ಯದಿಂದ ವೈದ್ಯರುಗಳು ಬಂದು ನೆಲೆಸುತ್ತಿಲ್ಲ. ರಾಜ್ಯದಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾಶ್ಮೀರದ ವಿದ್ಯಾರ್ಥಿಗಳನ್ನು ಬಿಟ್ಟಾರೆ ಬೇರ್ಯಾರೂ ಕೂಡ ಇಲ್ಲ. ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು ಭಾರತದ ಪೌರತ್ವ ಪಡೆದಿದ್ದರೂ ಕೂಡ ಪಿಆರ್‌ಸಿ ಇಲ್ಲದ ಕಾರಣ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೊರ ರಾಜ್ಯದವರ ಮೇಲೆ ತಾರತಮ್ಯ ಎಸಗಲೂ ಕೂಡ 35 ಎ ವಿಧಿ ರಾಜಮಾರ್ಗವಾಗಿ ಪರಿಗಣಿಸಿದೆ ಎಂಬ ವಿರೋಧಗಳಿವೆ.

ಕಾಶ್ಮೀರದ ರಾಜಕಾರಣಿಗಳು, ಹಲವು ವಿದ್ವಾಂಸರು, ಚಿಂತಕರು ಈ ವಿಧಿಯನ್ನು ಬೆಂಬಲಿಸುತ್ತಾರೆ. ಜತೆಗೆ ಇವರೆಲ್ಲರೂ ಪಿಆರ್‌ಸಿಯನ್ನು ಪಡೆದವರೇ ಆಗಿದ್ದಾರೆ. ಪಿಆರ್‌ಸಿ ಪಡೆದವರು 35 ಎ ವಿಧಿಯ ಪರವಾಗಿ ನಿಂತರೆ , ಪಡೆಯದವರು ಈ ವಿಧಿಯನ್ನು ವಿರೋಧಿಸುತ್ತಿದ್ದಾರೆ. ಕಾಶ್ಮೀರವಲ್ಲದೇ 371(ಎ) ವಿಧಿಯ ಅಡಿಯಲ್ಲಿ ನಾಗಲ್ಯಾಂಡ್‌, 371(ಜಿ) ವಿಧಿಯ ಅಡಿಯಲ್ಲಿ ಮಿಝೋರಾಮ್‌ ರಾಜ್ಯಗಳು ವಿಶೇಷ ಸ್ಥಾನಮಾನವನ್ನು ಹೊಂದಿವೆ. ಇತಿಹಾಸದ ಕಾರಣದಿಂದಾಗಿಯೇ ಈ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಆದರೆ ಈ ರಾಜ್ಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದೇ ಕೇವಲ ಕಾಶ್ಮೀರದ 35 ಎ ಬಗ್ಗೆ ಮಾತ್ರ ಮಾತನಾಡುವುದೇಕೆ ಎಂಬುದು ಪರವಾಗಿ ಮಾತನಾಡುವವರ ವಾದ.

35 ಎ ವಿಧಿಯ ಕುರಿತು ಪರ ಅಥವಾ ವಿರೋಧ ಯಾವ ತೀರ್ಪು ಹೊರಬಿದ್ದರೂ ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳು ದಟ್ಟವಾಗಿವೆ. ಸಶಸ್ತ್ರ ಹೋರಾಟಗಳೂ ಆರಂಭವಾಗುವ ಸನ್ನಿವೇಶ ಕಾಶ್ಮೀರದಲ್ಲಿದೆ. ಈಗಾಗಲೇ 35 ಎ ಪರವಾಗಿ ಎರಡು ದಿನಗಳ ಕಾಲ್‌ ಬಂದ್‌ ನಡೆಸಿರುವ ಸಂಘಟನೆ, ಪಕ್ಷಗಳು 35 ಎ ರದ್ದಾದರೆ ಹಿಂಸಾಚಾರ ಭುಗಿಲೇಳುವ ಎಚ್ಚರಿಕೆ ನೀಡಿವೆ. ವಿಧಿಯ ಕುರಿತಾದ ವಿರೋಧಗಳೂ ಕುಡ ಗಟ್ಟಿಯಾಗಿಯೇ ಇವೆ. ಮುಂದಿನ ದಿನಗಳಲ್ಲಿ ಹಿಂಸಾಚಾರಗಳು ನಡೆಯುತ್ತವೋ ಇಲ್ಲವೋ ಎನ್ನುವುದು ಸುಪ್ರಿಂ ಕೋರ್ಟ್‌ ನೀಡುವ ತೀರ್ಪಿನ ಮೇಲೆ ನಿಂತಿವೆ.