ಕೇಂದ್ರ- ಕೊಲಿಜಿಯಂ ಸಂಘರ್ಷ ಅಂತ್ಯ: ಸುಪ್ರಿಂ ಕೋರ್ಟ್‌ಗೆ ನ್ಯಾ. ಕೆ. ಎಂ. ಜೋಸೆಫ್‌ ಪದೋನ್ನತಿ
ದೇಶ

ಕೇಂದ್ರ- ಕೊಲಿಜಿಯಂ ಸಂಘರ್ಷ ಅಂತ್ಯ: ಸುಪ್ರಿಂ ಕೋರ್ಟ್‌ಗೆ ನ್ಯಾ. ಕೆ. ಎಂ. ಜೋಸೆಫ್‌ ಪದೋನ್ನತಿ

ಕೆ. ಎಂ. ಜೋಸೆಫ್‌ ಉತ್ತರಾಖಂಡ್‌ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿದ್ದ ವೇಳೆ ಸರಕಾರವನ್ನು ವಜಾ ಮಾಡಿ ರಾ‍‍‍‍ಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿದ್ದ ಕೇಂದ್ರ ಸರಕಾರದ ತೀರ್ಮಾನವನ್ನು ರದ್ದುಗೊಳಿಸಿದ್ದರು. 

ಕೇಂದ್ರ ಸರಕಾರ ಮತ್ತು ಕೊಲಿಜಿಯಂ ನಡುವೆ ನಡೆಯುತ್ತಿದ್ದ ಬಹುದಿನಗಳ ಸಂಘರ್ಷಕ್ಕೆ ಕೊನೆಗೂ ವಿರಾಮ ಬಿದ್ದಿದೆ. ಉತ್ತರಾಖಂಡ್‌ ಮುಖ್ಯನ್ಯಾಯಮೂರ್ತಿ ಕೆ. ಎಂ. ಜೋಸೆಫ್‌ರನ್ನು ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡುವಂತೆ ಕೊಲಿಜಿಯಂ ನೀಡಿದ್ದ ಶಿಫಾರಸ್ಸಿಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.

ಇದರ ಜತೆಗೆ ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಒರಿಸ್ಸಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿನೀತ್‌ ಶರಣ್‌ ಅವರಿಗೂ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.

ಇದು ಸುದೀರ್ಘ ಸಂಘರ್ಷ:

ಇದೇ ವರ್ಷದ ಜನವರಿ 10ರಂದು ನ್ಯಾ. ಕೆ. ಎಂ. ಜೋಸೆಫ್‌ ಹೆಸರನ್ನು ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಹಿರಿಯ ವಕೀಲೆ ಇಂದು ಮಲ್ಹೋತ್ರಾ ಹೆಸರಿನ ಜತೆ ಜೋಸೆಫ್‌ ಹೆಸರನ್ನೂ ಶಿಫಾರಸ್ಸು ಮಾಡಲಾಗಿತ್ತು. ಆದರೆ ಜೋಸೆಫ್‌ ಹೆಸರನ್ನು ಹಿಂದಕ್ಕೆ ಕಳುಹಿಸಿದ ಕೇಂದ್ರ ಸರಕಾರ ಇಂದು ಮಲ್ಹೋತ್ರಾರನ್ನು ಮಾತ್ರ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಒಪ್ಪಿಕೊಂಡಿತ್ತು.

ಏಪ್ರಿಲ್‌ 26ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಕಾನೂನು ಸಚಿವ ರವಿಂಶಕರ್‌ ಪ್ರಸಾದ್‌, ಕೆ. ಎಂ. ಜೋಸೆಫ್‌ರ ಹಿರಿತನದ ಶ್ರೇಣಿಯನ್ನು ಪ್ರಶ್ನಿಸಿದ್ದರು. ಜತೆಗೆ ಸುಪ್ರಿಂ ಕೋರ್ಟ್‌ನಲ್ಲಿ ಈಗಾಗಲೇ ಕೇರಳ ಹೈಕೋರ್ಟ್‌ನ ಪ್ರತಿನಿಧಿಗಳಿದ್ದಾರೆ. ಬೇರೆ ಹೈಕೋರ್ಟ್‌ನ ಪ್ರತಿನಿಧಿಗಳಿಲ್ಲ. ಪ್ರಾದೇಶಿಕ ಪ್ರಾತಿನಿಧ್ಯ ಒತ್ತು ನೀಡುವುದು ಒಳಿತು ಎಂದು ಹೇಳಿ ಕೆ. ಎಂ. ಜೋಸೆಫ್‌ ಹೆಸರನ್ನು ಮರುಪರಿಶೀಲನೆ ಮಾಡುವಂತೆ ತಿಳಿಸಿದ್ದರು.

ಆದರೆ ಆಳದಲ್ಲಿ ಕೆ.ಎಂ.ಜೋಸೆಫ್‌ ಉತ್ತರಾಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೇಳೆ ಉತ್ತರಾಖಂಡ್‌ ಸರಕಾರವನ್ನು ವಜಾ ಮಾಡಿ ರಾ‍‍‍‍ಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿದ್ದ ಕೇಂದ್ರ ಸರಕಾರದ ತೀರ್ಮಾನವನ್ನು ರದ್ದುಗೊಳಿಸಿದ್ದರು. ಇದಕ್ಕೆ ಸೇಡು ತೀರಿಸಲು ಕೇಂದ್ರ ಸರಕಾರ ಅವರ ನೇಮಕವನ್ನು ತಡೆ ಹಿಡಿಯುತ್ತಿದೆ ಎಂಬ ಸುದ್ದಿಗಳು ಓಡಾಡುತ್ತಿದ್ದವು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆ. ಎಂ. ಜೋಸೆಫ್‌ ನೇಮಕಕ್ಕೆ ಕೇಂದ್ರ ಸರಕಾರ ಅಡ್ಡಗಾಲು ಹಾಕಿದ್ದು ಸುಪ್ರಿಂ ಕೋರ್ಟ್‌ನಲ್ಲಿ ದೊಡ್ಡಮಟ್ಟದ ಕೋಲಾಹಲವನ್ನೇ ಸೃಷ್ಟಿಸಿತ್ತು. ಸದ್ಯ ನಿವೃತ್ತರಾಗಿರುವ ಜೆ. ಚೆಲಮೇಶ್ವರ್‌, ಕೊಲಿಜಿಯಂನ ಇತರ ಸದಸ್ಯರಾದ ಕುರಿಯನ್‌ ಜೋಸೆಫ್, ರಂಜನ್‌ ಗೊಗೋಯಿ ಮತ್ತು ಮದನ್‌ ಬಿ ಲೋಕೂರ್‌ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಎಲ್ಲಾ ನ್ಯಾಯಾಮೂರ್ತಿಗಳಿಗೂ ಪ್ರತ್ಯೇಕ ಪತ್ರಗಳನ್ನು ಬರೆದು ಪೂರ್ಣ ನ್ಯಾಯಾಲಯದಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಕೋರಿಕೊಂಡಿದ್ದರು. ಮತ್ತು ನ್ಯಾಯಾಲಯದ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.

ನಂತರ ಜುಲೈ 16ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಅಲಹಾಬಾದ್‌ ಹೈಕೋರ್ಟ್‌ ಮೂಲದ ವಿನೀತ್‌ ಶರಣ್‌ ಮತ್ತು ಕೊಲ್ಕತ್ತಾ ಹೈಕೋರ್ಟ್‌ ಮೂಲದ ಇಂದಿರಾ ಬ್ಯಾನರ್ಜಿ ಅವರ ಹೆಸರಿನ ಜತೆಗೆ ಕೆ. ಎಂ. ಜೋಸೆಫ್‌ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಈ ಮೂಲಕ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಾಗಿತ್ತು. ಇದೀಗ ಕೊಲಿಜಿಯಂ ಶಿಫಾರಸ್ಸನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದ್ದು. ಕೆ.ಎಂ.ಜೋಸೆಫ್‌ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗಲಿದ್ದಾರೆ.

ಕೊಲಿಜಿಯಂನ ಇತರ ಶಿಫಾರಸ್ಸುಗಳಿಗೂ ಒಪ್ಪಿಗೆ:

ಇದೇ ವೇಳೆ ಮೇ 16ರಂದು ದೆಹಲಿ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ರನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಶಿಫಾರಸ್ಸಿಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಕೇರಳ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿಯನ್ನು ಅದೇ ಕೋರ್ಟ್‌ಗೆ ಖಾಯಂ ನೇಮಕ ಮಾಡಿಕೊಳ್ಳುವುದು, ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಎಸ್‌. ಝವೇರಿ ಅವರನ್ನು ಒರಿಸ್ಸಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಆರ್‌. ಶಾರನ್ನು ಪಾಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿಕೊಳ್ಳಲು ಕೇಂದ್ರ ಒಪ್ಪಿಕೊಂಡಿದೆ.

ಕೊಲಿಜಿಯಂನ ನೂತನ ಶಿಫಾರಸ್ಸಿನ ಪ್ರಕಾರ ಹಾಲಿ ಪಾಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್‌ ದೆಹಲಿ ಹೈಕೋರ್ಟ್‌ಗೆ ವರ್ಗವಾಗಲಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅನಿರುದ್ಧ ಬೋಸ್‌ ಜಾರ್ಖಂಡ್‌ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.