ಮುಗಿಯದ ಅಸ್ಸಾಂ ಪೌರತ್ವ ಗೊಂದಲ; ಹೆಡೆ ಬಿಚ್ಚುತ್ತಿದೆ ‘ಧರ್ಮ ರಾಜಕಾರಣ’
ದೇಶ

ಮುಗಿಯದ ಅಸ್ಸಾಂ ಪೌರತ್ವ ಗೊಂದಲ; ಹೆಡೆ ಬಿಚ್ಚುತ್ತಿದೆ ‘ಧರ್ಮ ರಾಜಕಾರಣ’

ದೇಶದಲ್ಲಿ ಗಂಭೀರ ‘ಮಾನವೀಯ ಬಿಕ್ಕಟ್ಟು’ ಸೃಷ್ಟಿಯಾಗಿದ್ದರೂ ಕೇಂದ್ರ ಸರಕಾರ ಇನ್ನೂ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಇದೇ ಕಾಲವಕಾಶವನ್ನು ಬಿಜೆಪಿ ಪಕ್ಷದ ಕಾಲಾಳುಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಅಸ್ಸಾಂನಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)’ ಕರಡು ಪಟ್ಟಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪಟ್ಟಿಯಲ್ಲಿ 40,07,707 ಜನರ ಹೆಸರು ನಾಪತ್ತೆಯಾಗಿದ್ದು, ಇವರೆಲ್ಲಾ ನಿರಾಶ್ರಿತರಾಗುವ ಆತಂಕ ಎದುರಾಗಿದೆ. ಇದು ವಿರೋಧ ಪಕ್ಷಗಳನ್ನು ಕೆರಳಿಸಿದೆ. ಪರಿಣಾಮ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ.

ಅಸ್ಸಾಂನ ಜನರ ಹಲವು ವರ್ಷದ ಬೇಡಿಕೆಯನ್ನು ಮನ್ನಿಸಿ ಕೇಂದ್ರ ಸರಕಾರ ಸೋಮವಾರ ಎನ್‌ಆರ್‌ಸಿ ಕರಡು ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಸುಮಾರು 40 ಲಕ್ಷ ಜನರ ಹೆಸರಿರಲಿಲ್ಲ. ಇವರೆಲ್ಲಾ ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರು ಎಂಬ ಪರೋಕ್ಷ ವಾದವನ್ನು ಕೇಂದ್ರ ಸರಕಾರ ಮಂಡಿಸುತ್ತಿದೆ. ಇದಾದ ಬೆನ್ನಿಗೆ ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಕೀಯ ಕಾರಣಗಳಿಗಾಗಿ ಮೋದಿ ಸರಕಾರ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಲು ಹೊರಟಿದೆ ಎಂದಿದ್ದಾರೆ. “ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕಾಗಿ ಭಾರತಕ್ಕೆ ಬದಲಾವಣೆ ಬೇಕಿದೆ. ಮತ್ತು 2019ರಲ್ಲಿ ಈ ದೇಶದ ಜನರ ಉದ್ಧಾರಕ್ಕಾಗಿ ಬದಲಾವಣೆ ಬರಲೇಬೇಕಾಗಿದೆ,” ಎಂದವರು ಹೇಳಿದ್ದಾರೆ.

ಜತೆಗೆ ಸಂಸತ್‌ ಭವನದ ಹೊರಗೆ ಟಿಎಂಸಿ ನೇತೃತ್ವದಲ್ಲಿ 7 ಪಕ್ಷಗಳ ಸಂಸದರು ಮಂಗಳವಾರ ಮತ್ತು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. “ಈ ಒಡೆದು ಆಳುವ ನೀತಿಯನ್ನು ಕೈ ಬಿಡಿ” ಮತ್ತು “ತಮ್ಮ ಸ್ವಂತ ದೇಶದಲ್ಲಿ ಯಾಕೆ ಭಾರತೀಯರು ನಿರಾಶ್ರಿತರಾಗಬೇಕು?” ಎಂಬ ಭಿತ್ತಿಪತ್ರಗಳನ್ನು ಸಂಸದರು ಪ್ರದರ್ಶಿಸಿದ್ದಾರೆ. ವಿಪಕ್ಷಗಳ ಈ ನಡೆಯನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ “ಅಕ್ರಮ ವಲಸಿಗರ ವಿರುದ್ಧ ನಮ್ಮ ಪಕ್ಷ ಮಾತ್ರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ತೋರಿದೆ. ಬಾಂಗ್ಲಾದೇಶದಿಂದ ಬಂದ ವಲಸಿಗರಿಗೆ ಭಾರತದಲ್ಲಿ ಜಾಗವಿಲ್ಲ,” ಎಂದು ಅಕ್ಷರಶಃ ಗುಡುಗಿದ್ದಾರೆ.

ಅಮಿತ್ ಶಾ ಈ ಹೇಳಿಕೆ ವಿರೋಧ ಪಕ್ಷಗಳನ್ನು ಕೆರಳಿಸಿದ್ದು, ಟಿಎಂಸಿ ಮತ್ತು ಕಾಂಗ್ರೆಸ್ ಸಂಸದರ ಗದ್ದಲಕ್ಕೆ ಇಂದಿನ ರಾಜ್ಯಸಭೆಯ ಕಲಾಪ ಬಲಿಯಾಗಿದೆ.

ವಿಶ್ವಸಂಸ್ಥೆ ಎಂಟ್ರಿ

ದೇಶದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಎನ್‌ಆರ್‌ಸಿ ಅಂತಿಮ ಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದೂ ಅದಕ್ಕೂ ಮೊದಲು ಈ ಪಟ್ಟಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಅಂತಿಮ ಪಟ್ಟಿ ಹಲವರನ್ನು ಅದರಲ್ಲೂ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಮುದಾಯದವರನ್ನು ನಿರಾಶ್ರಿತರನ್ನಾಗಿ ಮಾಡುವ ಆತಂಕವಿದೆ ಎಂದು ಈ ಸಂಸ್ಥೆಗಳು ಹೇಳಿವೆ.

“ಅಸ್ಸಾಂ ತನ್ನ ಜನಾಂಗೀಯ ಗುರುತನ್ನು ಕಾಪಾಡಿಕೊಳ್ಳಲು ದೀರ್ಘಕಾಲ ಪ್ರಯತ್ನಪಟ್ಟಿದೆ. ಲಕ್ಷಾಂತರ ಜನರನ್ನು ಈ ಕಾರಣಕ್ಕೆ ನಿರಾಶ್ರಿತರನ್ನಾಗಿ ಮಾಡುವುದು ಇದಕ್ಕೆ ಉತ್ತರವಲ್ಲ,” ಎಂದು ಹ್ಯೂಮನ್‌ ರೈಟ್ಸ್‌ ವಾಚ್‌ನ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.

ಇನ್ನು ವಿಶ್ವಸಂಸ್ಥೆ ಪರವಾಗಿ ಪ್ರತಿಕ್ರಿಯೆ ನೀಡಿರುವ ‘ಯುನೈಟೆಡ್‌ ನೇಷನ್ಸ್‌ ಹೈ ಕಮಿಷನರ್‌ ಫಾರ್‌ ರೆಫುಜೀಸ್‌ (ಯುಎನ್‌ಎಚ್‌ಸಿಆರ್‌)’ ನ ವಿಲಿಯಂ ಸ್ಪಿಂಡ್ಲೆರ್‌, “ನೋಂದಣಿ ಪ್ರಕ್ರಿಯೆ ಬಗ್ಗೆ ಸಂಸ್ಥೆ ಗಮನ ಹರಿಸಿದ್ದು, ಒಟ್ಟಾರೆ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡುತ್ತಿದ್ದೇವೆ,” ಎಂದಿದ್ದಾರೆ. ಮೇಲ್ಮನವಿ ಮತ್ತು ಪೌರತ್ವವನ್ನು ನಿರೂಪಿಸಲು ಸಾಕಷ್ಟು ಕಾಲವಕಾಶ ನೀಡಿದ ನಂತರವೂ ಪೌರತ್ವವನ್ನು ಸಾಬೀತುಪಡಿಸಲಾಗದವರನ್ನು ಗಡಿಪಾರು ಮಾಡದಂತೆ ಭಾರತ ಸರಕಾರವನ್ನು ಅವರು ಕೋರಿಕೊಂಡಿದ್ದಾರೆ.

ಎನ್‌ಆರ್‌ಸಿ ನಮ್ಮದೇ ಕೂಸು: ತರುಣ್‌ ಗೊಗೋಯಿ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ತರುಣ್‌ ಗೊಗೋಯಿ ಸಂದರ್ಶನ ನೀಡಿದ್ದು, ಅವರು ಅಭಿಪ್ರಾಯಗಳು ಕುತೂಹಲಕಾರಿಯಾಗಿವೆ. ಸಂದರ್ಶನದಲ್ಲಿ ಸ್ಪಷ್ಟವಾಗಿ ಅವರು, “ಎನ್ಆರ್‌ಸಿ ನಮ್ಮದೇ ಪಕ್ಷದ ಕೂಸು” ಎಂದಿದ್ದಾರೆ. ಆದರೆ ಇದರ ಅನುಷ್ಠಾನದಲ್ಲಿ ಸರಕಾರ ಎಡವಿದೆ ಎಂದು ದೂರಿದ್ದಾರೆ. ಅಲ್ಲದೆ ಈ ಮಗುವಿಗೆ ಹಿಂದೂ, ಮುಸ್ಲಿ, ಕ್ರಿಶ್ಚಿಯನ್‌ ಎಂಬ ಹಣೆಪಟ್ಟಿ ತೊಡಿಸಬೇಡಿ ಎಂದವರು ಮನವಿ ಮಾಡಿಕೊಂಡಿದ್ದಾರೆ.

ಬಿಟ್ಟುಹೋಗಿರುವ 40 ಲಕ್ಷ ಜನರಲ್ಲಿ ಎಲ್ಲರೂ ವಿದೇಶಿಯರಲ್ಲ. ಇಲ್ಲಿಯವರೆಗಿನ ದಾಖಲೆಗಳ ಪ್ರಕಾರ ಕೇವಲ 2.48 ಲಕ್ಷ ಮಾತ್ರ ‘ಡಿ’ವೋಟರ್‌ಗಳಿದ್ದರು ಎಂಬ ವಿಚಾರದ ಬಗ್ಗೆ ಗಮನ ಸೆಳೆದಿದ್ದಾರೆ. ಅಂದರೆ ಇವರೆಲ್ಲಾ ಅನುಮಾನಾಸ್ಪದ ಮತದಾರರಾಗಿದ್ದರು.

ಇವರಿಗೆ ಮುಂದೆಯೂ ಮತದಾನದ ಹಕ್ಕು ಇರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸುವ ಅವಕಾಶ ಮುಂದೆಯೂ ಇರುವುದಾಗಿ ಆಯೋಗ ತಿಳಿಸಿದೆ. ಇನ್ನು ಸೋ ಕಾಲ್ಡ್‌ ವಲಸಿಗರನ್ನು ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸುತ್ತೇವೆ ಎಂದು ಕೇಂದ್ರ ಸರಕಾರವೇನೂ ಹೇಳಿಲ್ಲ. ಈ ಬಗ್ಗೆ ಬಾಂಗ್ಲಾದೇಶ ಸರಕಾರದ ಜತೆಯೂ ಯಾವುದೇ ಮಾತುಕತೆಗಳು ನಡೆದಿಲ್ಲ. ಭಾರತೀಯ ಪೌರರಲ್ಲದವರ ಬಗ್ಗೆ ಸುಪ್ರೀಂ ಕೋರ್ಟ್‌ ಜತೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ಹೇಳಿದೆ.

ಸುಪ್ರೀಂ ಕೋರ್ಟ್‌ ಈ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದು, ಪಟ್ಟಿಯಲ್ಲಿ ಹೆಸರಿಲ್ಲದವರ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸರಕಾರಕ್ಕೆ ಸೂಚನೆ ನೀಡಿದೆ.

ಹೆಡೆಬಿಚ್ಚುತ್ತಿರುವ ‘ಧರ್ಮ ರಾಜಕಾರಣ’

ಕಾನೂನಾತ್ಮಕವಾಗಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೆ, ನಿಧಾನವಾಗಿ ಇದನ್ನು ಹಿಂದೂ ಮುಸ್ಲಿಂ ಧರ್ಮಗಳ ನಡುವಿನ ವಿಚಾರ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಧರ್ಮ ರಾಜಕಾರಣದ ಬೇಳೆ ನಿಧಾನವಾಗಿ ಬೇಯಲು ಆರಂಭಿಸಿದೆ.

ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅಕ್ರಮ ಬಾಂಗ್ಲಾ ವಲಸಿಗರು ಮತ್ತು ರೋಹಿಂಗ್ಯಾಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ ನೀಡಿದರೆ ಇಲ್ಲಿಯೂ ಎನ್‌ಆರ್‌ಸಿ ರಚಿಸುವುದಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಓಲೈಕೆ ರಾಜಕಾರಣಕ್ಕೆ ಇಳಿದಿದ್ದಾರೆ.

ಹೀಗೆ ದೇಶದಲ್ಲಿ ಗಂಭೀರ ‘ಮಾನವೀಯ ಬಿಕ್ಕಟ್ಟು’ ಸೃಷ್ಟಿಯಾಗಿದ್ದರೂ ಕೇಂದ್ರ ಸರಕಾರ ಇನ್ನೂ ಸ್ಪಷ್ಟ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಇದೇ ಕಾಲವಕಾಶವನ್ನು ಬಿಜೆಪಿ ಪಕ್ಷದ ಕಾಲಾಳುಗಳು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಮುಸ್ಲಿಂ ವಿರೋಧಿ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಳಗಿನ ಈ ಫೇಸ್‌ಬುಕ್ ಸ್ಟೇಟಸ್‌ ಅದಕ್ಕೊಂದು ಸಣ್ಣ ಉದಾಹರಣೆ ಅಷ್ಟೇ.